Tag: ಬಂಡಾಯ ಸ್ಪರ್ಧೆ

  • ಮಂಡ್ಯಕ್ಕೆ ಮುಖ್ಯಮಂತ್ರಿ ಆಗಮಿಸುತ್ತಿರುವ ಬೆನ್ನಲ್ಲೆ ಕಾಂಗ್ರೆಸ್ ಮುಖಂಡರ ಬಂಡಾಯದ ಎಚ್ಚರಿಕೆ

    ಮಂಡ್ಯಕ್ಕೆ ಮುಖ್ಯಮಂತ್ರಿ ಆಗಮಿಸುತ್ತಿರುವ ಬೆನ್ನಲ್ಲೆ ಕಾಂಗ್ರೆಸ್ ಮುಖಂಡರ ಬಂಡಾಯದ ಎಚ್ಚರಿಕೆ

    ಮಂಡ್ಯ: ಜೆಡಿಎಸ್ ಭದ್ರಕೋಟೆ ಎಂದೇ ಹೆಸರಾದ ಮಂಡ್ಯ ಜಿಲ್ಲೆಯಲ್ಲಿ ನಡೆಯುವ ಸಾಧನಾ ಸಮಾವೇಶಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಬೆನ್ನಲ್ಲೇ, ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮುಂಬರುವ ಚುನಾವಣೆಯಲ್ಲಿ ಬಂಡಾಯ ಸ್ಪರ್ಧೆಯ ಎಚ್ಚರಿಕೆ ನೀಡುತ್ತಿದ್ದಾರೆ.

    ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ಜೆಡಿಎಸ್‍ನಿಂದ ಅಮಾನತ್ತಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿರುವ ಅವರು ಇಂದು ಶ್ರೀರಂಗಪಟ್ಟಣದಲ್ಲಿ ನಡೆಯುವ ಸಾಧನಾ ಸಮಾವೇಶದಲ್ಲಿ ಬೃಹತ್ ಪ್ರಮಾಣದಲ್ಲಿ ತಮ್ಮ ಬೆಂಬಲಿಗರನ್ನು ಸೇರಿಸಿ ಮುಖ್ಯಮಂತ್ರಿಗಳ ಎದುರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅದರ ಬೆನ್ನಲ್ಲೇ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಸೇರಿದಂತೆ ಹಲವರು ಬಂಡಾಯ ಸ್ಪರ್ಧೆಯ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

    ಶ್ರೀರಂಗಪಟ್ಟಣ ಶಾಸಕ ರಮೇಶ್‍ಬಾಬು ಕಳೆದೆರೆಡು ಅವಧಿಯಿಂದಲೂ ಶಾಸಕರಾಗಿದ್ದಾರೆ. ಅವರು ಬಹುತೇಕ ಎರಡು ಬಾರಿ ಜೆಡಿಎಸ್‍ನಿಂದ ಆಯ್ಕೆಯಾಗಿದ್ದು ಕಾಂಗ್ರೆಸ್‍ನಲ್ಲಿನ ಒಳಜಗಳದಿಂದಾಗಿ. ಈಗ ಸಿಎಂ ಆಗಮನದ ಸಮಯದಲ್ಲೇ ಮತ್ತೆ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್‍ನಲ್ಲಿ ಅಸಮಾಧಾನ ಹೊರಹೊಮ್ಮಿದೆ. ಯಾವುದೇ ಕಾರಣಕ್ಕೂ ಸಾಧನಾ ಸಮಾವೇಶದಲ್ಲಿ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಎಂಬ ರೀತಿಯ ಅರ್ಥ ಬರುವ ಸೂಚನೆ ಮತದಾರರಿಗೆ ತಲುಪಬಾರದು ಎಂಬುದು ಕಾಂಗ್ರೆಸ್ ಮುಖಂಡರ ಆಗ್ರಹವಾಗಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡ್ಯಕ್ಕೆ ಆಗಮಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರು ಬಂಡಾಯ ಸ್ಪರ್ಧೆಯ ಎಚ್ಚರಿಕೆ ನೀಡುತ್ತಿರುವುದು ಪಕ್ಷಕ್ಕೆ ಮುಜುಗರ ತಂದಂತಾಗಿದೆ.