Tag: ಬಂಗಾರಪೇಟೆ

  • ರಾತ್ರೋ ರಾತ್ರಿ ಲೇಔಟ್‍ನಲ್ಲಿ ಗುಡಿಸಲು ನಿರ್ಮಾಣ

    ರಾತ್ರೋ ರಾತ್ರಿ ಲೇಔಟ್‍ನಲ್ಲಿ ಗುಡಿಸಲು ನಿರ್ಮಾಣ

    ಕೋಲಾರ: ನಿವೇಶನ ರಹಿತರಿಗೆ ಭೂ ಮಂಜೂರು ಮಾಡದ ಹಿನ್ನೆಲೆ ರಾತ್ರೋರಾತ್ರಿ ಖಾಸಗಿ ಲೇಔಟ್‍ನಲ್ಲಿರುವ ಸರ್ಕಾರಿ ಜಮೀನಿನಲ್ಲಿ ದಲಿತರು ಗುಡಿಸಲು ನಿರ್ಮಾಣ ಮಾಡಿದ್ದಾರೆ. ಸರ್ಕಾರಿ ಜಮೀನಿನಲ್ಲಿ ರಾತ್ರೋ ರಾತ್ರಿ ಗುಡಿಸಲುಗಳ ನಿರ್ಮಾ ಮಾಡಿಕೊಂಡಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಹೊರವಲಯದ ಆನಂದಗಿರಿ ಬಳಿ ಇರುವ ಹನುಮಂತಪುರ ಸರ್ವೇ ನಂ. 22 ರಲ್ಲಿ ವಿ.ಆರ್.ವೆಂಚರ್ಸ್ ಎಂಬ ಖಾಸಗಿ ಲೇಔಟ್ ನಲ್ಲಿ ಗುಡಿಸಲುಗಳು ನಿರ್ಮಾಣ ಮಾಡಲಾಗಿದೆ.

    ಸರ್ವೆ ನಂ.22 ರಲ್ಲಿರುವ 1 ಎಕರೆ 20 ಗುಂಟೆ ಸರ್ಕಾರಿ ಗೋಮಾಳದಲ್ಲಿ ನಿವೇಶನ ರಹಿತರು ಹಾಗೂ ದಲಿತರಿಗೆ ನಿವೇಶನ ನೀಡುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದ್ರೆ ಅಲ್ಲೆ ಪಕ್ಕದಲ್ಲೆ 120 ಎಕರೆಯಲ್ಲಿ ನಿರ್ಮಾಣ ವಿ.ಅರ್.ವೆಂಚರ್ಸ್ ಖಾಸಗಿ ಲೇಔಟ್ ಅಭಿವೃದ್ದಿ ಮಾಡಿದ್ದು, ಹತ್ತಾರು ಪರಿಶಿಷ್ಟ ಜಾತಿ, ಪಂಗಡದವರು ರಾತ್ರೋ ರಾತ್ರಿ ಗಿಡಿಸಲುಗಳನ್ನ ನಿರ್ಮಾಣ ಮಾಡಿದ್ದಾರೆ.

    ಹುಣಸನಹಳ್ಳಿ, ಹನುಮಂತಪುರ ಗ್ರಾಮದ ಹತ್ತಾರು ದಲಿತ ಕುಟುಂಬಗಳು, ನಿವೇಶನ ರಹಿತರು ಗುಡಿಸಲುಗಳನ್ನ ನಿರ್ಮಾಣ ಮಾಡಿದ್ದಾರೆ. ಇನ್ನೂ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಹಾಗೂ ತಹಶೀಲ್ದಾರ್ ದಯಾನಂದ್ ಭೇಟಿ ನೀಡಿ ನಿವೇಶನ ರಹಿತರ ಮನವೊಲಿಸುವ ಕಾರ್ಯ ನಡೆಸಿದ್ರು, ಅಲ್ಲದೆ ಸರ್ಕಾರಿ ಜಮೀನು ಉಳಿಸಿಕೊಳ್ಳುವ ಭರವಸೆ ನೀಡಿದ್ದಾರೆ.

  • ಮುಂದಿನ ನಾಲ್ಕು ತಿಂಗಳಲ್ಲಿ ನೀಗಲಿದೆ ಬಯಲುಸೀಮೆ ಕೋಲಾರ ಜನರ ದಾಹ

    ಮುಂದಿನ ನಾಲ್ಕು ತಿಂಗಳಲ್ಲಿ ನೀಗಲಿದೆ ಬಯಲುಸೀಮೆ ಕೋಲಾರ ಜನರ ದಾಹ

    -ಯರಗೋಳ್ ಯೋಜನೆ ಮೂಲಕ 4 ನಗರಗಳಿಗೆ ಕುಡಿಯುವ ನೀರು

    ಕೋಲಾರ: ಮುಂದಿನ ನಾಲ್ಕು ತಿಂಗಳಲ್ಲಿ ಬಯಲುಸೀಮೆ ಕೋಲಾರ ಜನರ ದಾಹ ನೀಗಲಿದೆ. ಯರಗೋಳ್ ಯೋಜನೆ ಮೂಲಕ 4 ನಗರಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ.

    ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಗ್ರಾಮದಲ್ಲಿ ಬೃಹದಾಕಾರವಾಗಿ ಆಣೆಕಟ್ಟು ತಲೆ ಎತ್ತಿದೆ. ಕೋಲಾರ ಸೇರಿದಂತೆ ಮೂರು ತಾಲೂಕುಗಳಿಗೆ ಕುಡಿಯುವ ನೀರು ಒದಗಿಸಲು 2008 ರಲ್ಲಿ ಯರಗೋಳ್ ಯೋಜನೆ ಆರಂಭವಾಗಿತ್ತು.

    ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಪಟ್ಟಣಗಳಿಗೆ ಹಾಗೂ 45 ಇನ್ನಿತರ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲು ಅಂದಿನ ಮುಖ್ಯಮಂತ್ರಿ ಧರಂಸಿಂಗ್ ಸರ್ಕಾರದಿಂದ 240 ಕೋಟಿ ವೆಚ್ಚದ ಡ್ಯಾಂ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕಿತ್ತು. ನಂತರ 2010 ರಿಂದ ಕಾಮಗಾರಿ ನಡೆದು ಸುದೀರ್ಘವಾದ ಸಮಯ ತೆಗೆದುಕೊಂಡು ಈಗ ಮುಕ್ತಾಯದ ಹಂತಕ್ಕೆ ಬಂದಿದೆ. ಇದು ಇನ್ನೂ ನಾಲ್ಕು ತಿಂಗಳಲ್ಲಿ ಪೂರ್ತಿಯಾಗಲಿದ್ದು, ಕನಸಿನ ಯೋಜನೆ ಸಕಾರಗೊಳ್ಳಲಿದೆ.

    ಸುಮಾರು 240 ಕೋಟಿಗಳ ಬೃಹತ್ ವೆಚ್ಚದ ಡ್ಯಾಂ ನಿರ್ಮಾಣ ಮಾಡಿದರೂ ಸಹ ನೀರು ನಮಗೆ ಲಭ್ಯವಾಗಬಹುದೇ ಎಂಬ ಜಿಜ್ನಾಸೆ ಸಾರ್ವಜನಿಕರಲ್ಲಿ ಕಾಡುತ್ತಿದೆ. ಏಕೆಂದರೆ ಕೋಲಾರ ಜಿಲ್ಲೆಯಲ್ಲಿ ಮಳೆ ವಾಡಿಕೆಯಂತೆ ಸುರಿಯುವುದಿಲ್ಲ. ಇದು ಕಳೆದ ಎರಡು ದಶಕಗಳಿಂದ ಸಾಬೀತಾಗಿದೆ. ಆದರೂ ಸಹ ಛಲ ಬಿಡದೆ ಇಲ್ಲಿ ಅಣೆಕಟ್ಟು ನಿರ್ಮಾಣವೇನೋ ಈಗ ಸಂಪೂರ್ಣವಾಗಿದೆ. ಶೇಕಡ 90ರಷ್ಟು ನಿರ್ಮಾಣ ಕಾಮಗಾರಿ ಮುಗಿದು, ಜನವರಿ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ.

    ಈಗ ಡ್ಯಾಂ ಬಹುತೇಕ ನಿರ್ಮಾಣ ಮುಕ್ತಾಯ ಹಂತಕ್ಕೆ ಬಂದಿದೆ. ಕಾಮಗಾರಿಯಲ್ಲಿ ಈಗ ವಿದ್ಯುತ್ ವೈರಿಂಗ್ ಮತ್ತು ಮೋಟಾರ್‍ಗಳ ಅಳವಡಿಕೆ ಒಂದೇ ಬಾಕಿ ಇದೆ. ಉತ್ತಮ ಮಳೆ ಬಂದು ಇಲ್ಲಿ ನೀರು ಸಂಗ್ರಹವಾದರೆ ಅರ್ಧ ಟಿಎಂಸಿ ನೀರು ಸಂಗ್ರಹವಾಗಲಿದೆ. ಅದೇನೇ ಇರಲಿ ಡ್ಯಾಂ ನಿರ್ಮಾಣ ಸಂಪೂರ್ಣವಾಗಿರೋದು ಈಗ ಕೋಲಾರದ ಜನತೆಗೆ ಸಂತಸಕ್ಕೆ ಕಾರಣವಾಗಿದೆ.

    ಹಲವು ದಶಕಗಳಿಂದ ಬರಪೀಡಿತ ಜಿಲ್ಲೆಯಾಗಿರುವ ಕೋಲಾರ ಜಿಲ್ಲೆಗೆ ಸದ್ಯ ಎತ್ತಿನಹೊಳೆಯಿಂದಲೂ ಸಹ ನೀರು ಬರುತ್ತಿದ್ದು, ಇದರ ಜೊತೆಗೆ ಯರ್‍ಗೋಳ್ ಡ್ಯಾಂ ನಿಂದಲೂ ನೀರು ಹರಿದು ಬರಲಿದೆ.

  • ಮದ್ಯದ ಮತ್ತಿನಲ್ಲಿ 50 ವರ್ಷದ ಮಹಿಳೆಯ ರೇಪ್‍ಗೆ ಯತ್ನಿಸಿದ ಯುವಕ

    ಮದ್ಯದ ಮತ್ತಿನಲ್ಲಿ 50 ವರ್ಷದ ಮಹಿಳೆಯ ರೇಪ್‍ಗೆ ಯತ್ನಿಸಿದ ಯುವಕ

    ಕೋಲಾರ: ಮದ್ಯದ ಮತ್ತಿನಲ್ಲಿ ಯುವಕನೊಬ್ಬ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ.

    ಬೂದಿಕೋಟೆ ಗ್ರಾಮದ ಮುನಿರಾಜು (25) ಅತ್ಯಾಚಾರಕ್ಕೆ ಯತ್ನಿಸಿದ್ದ ಯುವಕ. ಅದೇ ಗ್ರಾಮದ ರುಕ್ಮಿಣಿಯಮ್ಮ (50) ಮುನಿರಾಜುನಿಂದ ಹಲ್ಲೆಗೊಳಗಾದ ಮಹಿಳೆ. ಭಾನುವಾರ ಸಂಜೆ ಗ್ರಾಮದ ಬಳಿಯ ಜಮೀನಿನಲ್ಲಿ ಘಟನೆ ನಡೆದಿದೆ.

    ಕೂಲಿ ಕೆಲಸ ಮಾಡುತ್ತಿದ್ದ ಆರೋಪಿ ಮುನಿರಾಜು ಭಾನುವಾರ ಕೆಲಸಕ್ಕೆ ರಜೆ ಇದ್ದಿದ್ದರಿಂದ ಮದ್ಯ ಸೇವಿಸಿ ಗ್ರಾಮದಿಂದ ಸ್ವಲ್ಪ ದೂರ ಬಂದಿದ್ದ. ಈ ವೇಳೆ ಕುರಿ ಮೇಯಿಸುತ್ತಿದ್ದ ರುಕ್ಮಿಣಿಯಮ್ಮ ಅವರನ್ನು ನೋಡಿದ್ದಾನೆ. ಸುತ್ತಮುತ್ತ ಯಾರು ಇಲ್ಲದಿರುವುದನ್ನು ಗಮನಿಸಿ, ರುಕ್ಮಿಣಿಯಮ್ಮ ಅವರ ಮುಖಕ್ಕೆ ಹೊಡೆದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಮುನಿರಾಜುನಿಂದ ತಪ್ಪಿಸಿಕೊಂಡ ರುಕ್ಮಿಣಿಯಮ್ಮ ಗ್ರಾಮಕ್ಕೆ ಹೋಗಿ ಸಂಬಂಧಿಕರಿಗೆ ಘಟನೆಯನ್ನು ತಿಳಿಸಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ಬಂದ ರುಕ್ಮಿಣಿಯಮ್ಮ ಅವರ ಸಂಬಂಧಿಕರು ಹಾಗೂ ಗ್ರಾಮಸ್ಥರು ಮುನಿರಾಜುಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ, ಆರೋಪಿಯನ್ನು ಒಪ್ಪಿಸಿದ್ದಾರೆ.

    ಈ ಸಂಬಂಧ ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮುನಿರಾಜುನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ರುಕ್ಮಿಣಿಯಮ್ಮ ಅವರನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • 13 ವರ್ಷದ ಬಾಲಕಿಯನ್ನ ಮೂರು ತಿಂಗಳ ಗರ್ಭಿಣಿಯನ್ನಾಗಿಸಿದ 45ರ ಕಾಮುಕ

    13 ವರ್ಷದ ಬಾಲಕಿಯನ್ನ ಮೂರು ತಿಂಗಳ ಗರ್ಭಿಣಿಯನ್ನಾಗಿಸಿದ 45ರ ಕಾಮುಕ

    ಕೋಲಾರ: 45 ವರ್ಷದ ಕಾಮುಕನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸೆಗಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    45 ವರ್ಷದ ಗೋವಿಂದಪ್ಪ ಅತ್ಯಾಚಾರಗೈದ ಆರೋಪಿ. ಬಾಲಕಿಯ ಮೇಲೆ ಮೂರು ತಿಂಗಳ ಹಿಂದೆಯೇ ಅತ್ಯಾಚಾರ ನಡೆದಿದೆ. ಆದರೆ ಮನೆಯಲ್ಲಿ ಯಾರಿಗಾದ್ರೂ ಅತ್ಯಾಚಾರದ ವಿಷಯ ತಿಳಿಸಿದ್ರೆ ನಿನ್ನನ್ನು ಹಾಗು ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಶುಕ್ರವಾರ ಅನಾರೋಗ್ಯವೆಂದು ಪೋಷಕರು ಬಾಲಕಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ರು.

    ಬಾಲಕಿಯನ್ನು ತಪಾಸಣೆ ನಡೆಸಿದಾಗ ಆಕೆ ಮೂರು ತಿಂಗಳು ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ರಾತ್ರಿಯೇ ಬಾಲಕಿಯ ಪೋಷಕರು ಠಾಣೆಯಲ್ಲಿ ದೂರು ದಾಖಲಿಸಿದ್ರೂ, ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ನಾವು ದಲಿತರೆಂದು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗ್ತಿದೆ ಎಂದು ಬಾಲಕಿಯ ಪೋಷಕರು ಆರೋಪಿಸುತ್ತಿದ್ದಾರೆ.

  • ಕೋಲಾರ ಜಿಲ್ಲೆಯ ವಿಶೇಷತೆ ಏನು? ಅಖಾಡದಲ್ಲಿ ಯಾರಿದ್ದಾರೆ?

    ಕೋಲಾರ ಜಿಲ್ಲೆಯ ವಿಶೇಷತೆ ಏನು? ಅಖಾಡದಲ್ಲಿ ಯಾರಿದ್ದಾರೆ?

    ಕೋಲಾರ: ಹೆಸರು ಕೇಳಿದ ತಕ್ಷಣ ನೆನಪಾಗುವುದು ಚಿನ್ನದ ಗಣಿಗಳು. ಈ ಚಿನ್ನದ ಗಣಿಗಾರಿಕೆಗೆ ಕೋಲಾರ ಜಿಲ್ಲೆ ಪ್ರಸಿದ್ಧವಾಗಿದ್ದು, ಈ ಹಿಂದೆ ಕೋಲಾರವನ್ನು ಕುವಲಾಲಪುರ ಎಂದು ಕರೆಯುತ್ತಿದ್ದರು.

    ಪ್ರಮುಖ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕೋಲಾರ ಗಂಗರ ಆಳ್ವಿಕೆಯಲ್ಲಿ ರಾಜಧಾನಿಯಾಗಿತ್ತು. ನಂತರ ಚೋಳರ ಆಳ್ವಿಕೆಗೆ ಒಳಪಟ್ಟಿತ್ತು. 4 ರಿಂದ 19ನೇ ಶತಮಾನದವರೆಗೆ ಕದಂಬ, ಗಂಗ, ಪಲ್ಲವ, ಚೋಳ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಅರಸರು, ಮೈಸೂರಿನ ಅರಸರು, ಪಾಳೇಗಾರರು, ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು. ಗಂಗರ ಕಾಲದಲ್ಲಿ ನಿರ್ಮಾಣವಾದ ಹಲವು ದೇವಾಲಯಗಳು ಇಂದಿಗೂ ಪ್ರಸಿದ್ಧಿ ಪಡೆದಿದೆ. ಮುಖ್ಯವಾಗಿ ಕೋಲಾರ ನಗರದ ಹೃದಯ ಭಾಗದಲ್ಲಿರುವ ಕೋಲಾರಮ್ಮ ದೇವಾಲಯ ಹಾಗೂ ಸೋಮನಾಥ ದೇವಾಲಯ ಪ್ರಮುಖವಾದದ್ದು. ಉಳಿದಂತೆ ಅಂತರಗಂಗೆ ಬೆಟ್ಟ, ಕೋಟಿ ಲಿಂಗ, ಮುಳಬಾಗಿಲು ಅಂಜನೇಯಸ್ವಾಮಿ ದೇವಾಲಯ, ಚಿಕ್ಕ ತಿರುಪತಿ, ಬಂಗಾರ ತಿರುಪತಿ ಸ್ಥಳಗಳು ಪ್ರಮುಖ ಧಾರ್ಮಿಕ ಕ್ಷೇತ್ರಗಳಾಗಿದೆ.

    ರಾಜಕೀಯವಾಗಿ ರಾಜ್ಯಕ್ಕೆ ಮೊದಲ ಸಿಎಂ ಕೆ ಚಂಗಲರಾಯರೆಡ್ಡಿ ಕೋಲಾರದವರು ಎಂಬ ಹೆಗ್ಗಳಿಯೂ ಪಡೆದಿದೆ. ಇನ್ನು 2008ರಲ್ಲಿ ಕೋಲಾರದಿಂದ ಚಿಕ್ಕಬಳ್ಳಾಪುರವನ್ನು ವಿಭಜನೆ ಮಾಡಿ ಸ್ವತಂತ್ರ್ಯ ಜಿಲ್ಲೆಯಾಗಿ ಘೋಷಿಸಲಾಯಿತು. 2011 ರ ಜನಗಣತಿ ಪ್ರಕಾರ ಕೋಲಾರ ಜಿಲ್ಲೆ 1,536,401 ಜನಸಂಖ್ಯೆ ಹೊಂದಿದೆ.

    ಜಿಲ್ಲೆಯ ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು, ಶ್ರೀನಿವಾಸಪುರ, ಮಾಲೂರು, ಕೋಲಾರ ತಾಲೂಕು ಕೇಂದ್ರಗಳಾಗಿವೆ. ಜಿಲ್ಲೆಯಲ್ಲಿ ಕುರುಬ, ಒಕ್ಕಲಿಗ, ಪರಿಶಿಷ್ಟ ಜಾತಿ ಸೇರಿದಂತೆ ಮುಸ್ಲಿಂ ಮತಗಳು ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಡಿಕೆ ರವಿ ಆತ್ಮಹತ್ಯೆ ಪ್ರಕರಣ ಹಾಗೂ ಶಾಶ್ವತ ನೀರಾವರಿ ಯೋಜನೆ ಜಾರಿ ಪ್ರಮುಖ ಚರ್ಚೆಯ ವಿಷಯಗಳಾಗಿದೆ.

    ಕೋಲಾರ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಪ್ರಮುಖ ಕೇಂದ್ರವಾಗಿದ್ದು, ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ವರ್ತೂರ್ ಪ್ರಕಾಶ್ ಜಯಗಳಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು. ಬಳಿಕ ಉಂಟಾದ ರಾಜಕೀಯ ಬೆಳವಣಿಗೆಗಳಲ್ಲಿ ವರ್ತೂರ್ ಪ್ರಕಾಶ್ ಸ್ವತಃ `ನಮ್ಮ ಕಾಂಗ್ರೆಸ್’ ಪಕ್ಷ ಸ್ಥಾಪಿಸಿ ಕಣಕ್ಕೆ ಇಳಿದಿದ್ದಾರೆ.

    ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ನಿಂದ ನಿವೃತ್ತ ಐಎಎಸ್ ಅಧಿಕಾರಿ ಸೈಯದ್ ಜಮೀರ್ ಪಾಷ ಕಣಕ್ಕೆ ಇಳಿದಿದ್ದಾರೆ. ಆದರೆ ಅಭ್ಯರ್ಥಿ ಆಯ್ಕೆಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಸುದರ್ಶನ್ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಜೆಡಿಎಸ್ ನಿಂದ ಕೆ ಶ್ರೀನಿವಾಸ್ ಗೌಡ ಅವರು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಬಿಜೆಪಿ ಯಿಂದ ಓಂ ಶಕ್ತಿ ಚಲಪತಿ ಕಣ್ಣಕ್ಕೆ ಇಳಿದಿದ್ದಾರೆ. 2013 ಚುನಾವಣೆಯಲ್ಲಿ ವರ್ತೂರ್ ಪ್ರಕಾಶ್ 62,957 ಮತ ಹಾಗೂ ಜೆಡಿಎಸ್ ನ ಕೆ ಶ್ರೀನಿವಾಸ ಗೌಡ 50,366 ಮತ ಪಡೆದಿದ್ದರು.

    ಕ್ಷೇತ್ರದಲ್ಲಿ ಈ ಬಾರಿ ಕೋಲಾರ ಜಿಲ್ಲೆಯಲ್ಲಿ ಡಿಸಿ ಆಗಿ ಕಾರ್ಯನಿರ್ವಹಿಸಿದ್ದ ಡಿಕೆ ರವಿ ಅವರ ತಾಯಿ ಗೌರಮ್ಮ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಸದ್ಯ ಕ್ಷೇತ್ರದ ಹಾಲಿ ಶಾಸಕರಾಗಿರುವ ವರ್ತೂರ್ಪ್ರಕಾಶ್ ಅವರಿಗೆ ಜೆಡಿಎಸ್ ನ ಶ್ರೀನಿವಾಸಗೌಡ ಪ್ರಬಲ ಪೈಪೋಟಿ ಜೊತೆಗೆ ಟಾಂಗ್ ನೀಡಲು ಮುಂದಾಗಿದ್ದಾರೆ. ಡಿ.ಕೆ.ರವಿ ತಾಯಿ ಗೌರಮ್ಮ ಅವರು ಪರೀಕ್ಷೆ ಗಿಳಿದಿದ್ದಾರೆ.

    ಬಂಗಾರಪೇಟೆ ಕ್ಷೇತ್ರವು ಬೆಂಗಳೂರು ನಗರ ಸೇರಿದಂತೆ ಇತರೇ ಪ್ರದೇಶಗಳಿಗೆ ಹೊಂದಿರುವ ರೈಲ್ವೇ ಸಂಪರ್ಕದ ಹಿನ್ನೆಲೆ ಹೆಚ್ಚು ಹೆಸರು ಪಡೆದಿದೆ. ಆದರೆ ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾದ್ದ ಬಂಗಾರಪೇಟೆ ಡಿ.ಕೆ.ರವಿ ಅವರ ಸಾವಿನ ಬಳಿಕ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಕ್ಷೇತ್ರದ ಅಭಿವೃದ್ಧಿಯೂ ಪ್ರಮುಖ ಚುನಾವಣಾ ವಿಷಯವಾಗಿದೆ. ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಜಯ ಪಡೆದಿದ್ದ ಎಸ್‍.ಎನ್ ನಾರಾಯಣಸ್ವಾಮಿ 71,570 ಮತ ಪಡೆದಿದ್ದರು. ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಇಎಂ ನಾರಾಯಣಸ್ವಾಮಿ 43,193 ಮತ ಪಡೆದಿದ್ದರು. 2011 ರಲ್ಲಿ ನಡೆದ ಉಪಚುನಾವಣೆಯಲ್ಲಿ ಇಎಂ ನಾರಾಯಣಸ್ವಾಮಿ ಜಯ ಗಳಿಸಿದ್ದರು. ಸದ್ಯ ಈ ಬಾರಿ ಎಂ. ನಾರಾಯಣಸ್ವಾಮಿಗೆ ಟಿಕೇಟ್ ಸಿಗದ ಹಿನ್ನೆಲೆ ಬಿಜೆಪಿ ತೊರೆದು ಜೆಡಿಎಸ್ ಬೆಂಬಲ ಸೂಚಿಸಿದ್ದಾರೆ. ಸಧ್ಯ ಜೆಡಿಎಸ್ ನ ಮಲ್ಲೇಶ್ ಬಾಬು ಹಾಗೂ ಬಿಜೆಪಿ ಬಿ.ಪಿ.ವೆಂಕಟಮುನಿಯಪ್ಪ ನಡುವೆ ಎರಡನೇ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ.

    ಪಕ್ಷಕ್ಕಿಂತ ವ್ಯಕ್ತಿ ಪ್ರತಿಷ್ಠೆಯ ಕಣವಾಗಿರುವ ಶ್ರೀನಿವಾಸಪುರ ಕ್ಷೇತ್ರ ಪ್ರತಿ ಬಾರಿ ಚುನಾವಣೆಯಲ್ಲಿ ಹಾಲಿ ಶಾಸಕರನ್ನು ಸೋಲಿಸಿ ಎದುರಾಳಿ ಅಭ್ಯರ್ಥಿಗೆ ಜಯ ನೀಡುತ್ತ ಬಂದಿದೆ. ಸದ್ಯ ಹಾಲಿ ಶಾಸಕರಾಗಿರುವ ಹಾಗೂ ಆರೋಗ್ಯ ಸಚಿವರಾದ ರಮೇಶ್ ಕುಮಾರ್ ಅವರಿಗೆ ಜೆಡಿಎಸ್ ನ ಜಿ.ಕೆ.ವೆಂಕಟಶಿವಾ ರೆಡ್ಡಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಒಬ್ಬರು ರಮೇಶ್ ಕುಮಾರ್ ಅವರು ಸ್ವಾಮಿ ಎಂದು ಹೆಸರು ಪಡೆದಿದ್ದರೆ, ವೆಂಕಟಶಿವಾ ರೆಡ್ಡಿ ಅವರು ರೆಡ್ಡಿ ಎಂದೇ ಪರಿಚಿತರು.

    ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಪ್ರಮುಖ ಚರ್ಚೆಯ ವಿಷಯವಾಗಿ ಕಾಣುತ್ತಿದೆ. ಕೋಲಾರ ಜಿಲ್ಲೆಯ ಬಹು ವರ್ಷಗಳ ಬೇಡಿಕೆಯಾದ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರುವ ಬದಲಾಗಿ ಕೆಸಿ ವ್ಯಾಲಿ ನೀರು ನೀಡುವ ನಿರ್ಧಾರವು ಪ್ರಮುಖ ವಿಷಯವಾಗಿದೆ. ಕ್ಷೇತ್ರದಲ್ಲಿ ರೆಡ್ಡಿ ಹಾಗೂ ಒಕ್ಕಲಿಗ ಮತಗಳ ಹೆಚ್ಚು ನಿರ್ಣಾಯವಾಗಿದೆ. ಕಳೆದ ಬಾರಿ ರಮೇಶ್ ಕುಮಾರ್ 83,426 ಮತ ಪಡೆದಿದ್ದರೆ, ವೆಂಕಟಶಿವಾ ರೆಡ್ಡಿ 79,533 ಮತ ಪಡೆದಿದ್ದರು. ಇಬ್ಬರೆ ವ್ಯಕ್ತಿಗಳಾದ್ರು ಇಬ್ಬರ ಜಯಕ್ಕೆ ಕೆಲವೆ ಕೆಲ ಮತಗಳ ಅಂತರವಷ್ಟೆ ಕಾಯ್ದುಕೊಂಡೆ ಬಂದಿರುವುದು 40 ವರ್ಷಗಳ ತಾಜಕಾರಣಕ್ಕೆ ಸಾಕ್ಷಿ.

    ಬೆಂಗಳೂರಿಗೆ ಹೊಂದಿಕೊಂಡಿರುವ ಮಾಲೂರು ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಉತ್ತಮ ಬೆಳವಣಿಗೆ ಪಡೆಯುತ್ತಿದೆ. ಸದ್ಯ ಕ್ಷೇತ್ರದಲ್ಲಿ ಜೆಡಿಎಸ್ ನ ಮಂಜುನಾಥ ಗೌಡರು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿರುವ ಕೃಷ್ಣಯ್ಯ ಶೆಟ್ಟಿ ಅವರು ಉಚಿತ ಧಾನ, ಧರ್ಮಗಳ ಹಾಗೂ ಧಾರ್ಮಿಕ ಕಾರ್ಯಗಳ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಕಳೆದ ಬಾರಿ ಮಂಜುನಾಥ್ ಅವರು 57,645 ಮತ ಪಡೆದಿದ್ದಾರೆ, ಕೃಷ್ಣಯ್ಯ ಶೆಟ್ಟಿ ಪಕ್ಷೇತರ ರಾಗಿ ಸ್ಪರ್ಧೆ ಮಾಡಿ 38,876 ಮತ ಪಡೆದು ಸೋಲುಂಡಿದ್ದರು. ಈ ಬಾರಿಯೂ ಇಬ್ಬರ ನಡುವೆ ನಾನೇನೂ ಕಡಿಮೆ ಇಲ್ಲವೆಂಬಂತೆ ಪೈಪೋಟಿ ಕಾಂಗ್ರೇಸ್ ನ ಅಭ್ಯರ್ಥಿ ಕೆ.ವೈ.ನಂಜೇಗೌಡ ಕಣದಲ್ಲಿದ್ದು, ಮೂವರ ನಡುವೆ ತೀವ್ರ ಪೈಪೋಟಿ ಮುಂದುವರಿದಿದೆ.

    ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಬೀಗಿ ಹಿಡಿತ ಹೊಂದಿರುವ ಏಕೈಕ ಕ್ಷೇತ್ರ ಕೆಜಿಎಫ್ ಎಂದರೆ ತಪ್ಪಾಗಲಾರದು. ಸಂಪಂಗಿಗೆ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೆ ಅವರ ತಾಯಿ ರಾಮಕ್ಕ ಗೆಲ್ಲಿಸಿಕೊಂಡ ಬಿಜೆಪಿ ಸಂಪಂಗಿ ಅವರಿಗೆ ಹೆಚ್ಚು ಪ್ರಭಾವ ಹೊಂದಿದ್ದು, ಕಳೆದ ಬಾರಿ ಅವರ ತಾಯಿ ರಾಮಕ್ಕ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಆದರೆ ಈ ಬಾರಿಯೂ ಟಿಕೇಟ್ ಕೈತಪ್ಪಿದ ಬೆನ್ನಲ್ಲೆ ಸಂಪಂಗಿ ಮಗಳು ಆಶ್ವಿನಿ ಎನ್ ಬಿಜೆಪಿ ಯಿಂದ ಸ್ಪರ್ಧೆ ಮಾಡುತ್ತಿದ್ದಾರೆ.

    ಬೆಂಗಳೂರಿಗೆ ಉತ್ತಮ ರೈಲ್ವೇ ಸಂಪರ್ಕ ಹೊಂದಿರುವುದರಿಂದ, ಚಿನ್ನದ ಗಣಿ ಮುಚ್ಚಿದ ನಂತರ ಕ್ಷೇತ್ರ 25 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗಕ್ಕಾಗಿ ರಾಜಧಾನಿಯನ್ನೇ ಮೆಚ್ಚಿಕೊಂಡಿದ್ದಾರೆ. ಅಲ್ಲದೇ ಚುನಾವಣೆಯಲ್ಲಿ ಕೆಜಿಎಫ್ ಗಣಿಗಳ ಪುನರ್ ಆರಂಭವೂ ಚರ್ಚೆಯ ವಿಷಯವಾಗಿದೆ. ಕ್ಷೇತ್ರದ ತಮಿಳು ಭಾಷೆ ಮಾತನಾಡುವ ಮತದಾರರು ಮುಖ್ಯ ಪಾತ್ರವಹಿಸುತ್ತಾರೆ. ಕ್ಷೇತ್ರದಲ್ಲಿ ಹೆಚ್ಚು ಪೈಪೋಟಿ ನೀಡುತ್ತಿರುವ ಜೆಡಿಎಸ್ ಅಭ್ಯರ್ಥಿ ಭಕ್ತವತ್ಸಲಂ ಈ ಬಾರಿಯೂ ಕಣದಲ್ಲಿ ಮುಂದುವರೆದಿದ್ದಾರೆ. ಉಳಿದಂತೆ ಕಾಂಗ್ರೆಸ್ ನಿಂದ ಸಂಸದ ಮುನಿಯಪ್ಪ ಪುತ್ರಿ ರೂಪಕಲಾ ಬಿಜೆಪಿ ಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ, ಆರ್ ಪಿ ಐ ನಿಂದ ಮಾಜಿ ಶಾಸಕ ರಾಜೇಂದ್ರನ್, ಸಿಪಿಎಂ ನಿಂದ ತಂಗರಾಜ್ ಕಣದಲ್ಲಿದ್ದಾರೆ. ಕಳೆದ ಬಾರಿ ಹಾಲಿ ಶಾಸಕಿ ರಾಮಕ್ಕ 55,014 ಮತ ಹಾಗೂ ಜೆಡಿಎಸ್ ನಿಂದ ಭಕ್ತವತ್ಸಲಂ 28,992 ಮತ ಪಡೆದಿದ್ದರು.

    ಚುನಾವಣೆಗೂ ಮುನ್ನವೆ ಕಾಂಗ್ರೇಸ್ ಅಭ್ಯರ್ಥಿ ನಾಮಪತ್ರ ತಿರಸ್ಕಾರ ಆಗುವ ಮೂಲಕ ಕಾಂಗ್ರೇಸ್ ಗೆ ಮರ್ಮಾಗತ ಉಂಟಾಗಿತ್ತು, ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆಯೇ ರಾಜ್ಯ ಗಮನ ಸೆಳೆದಿದ್ದ ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ. ಮೀಸಲು ಕ್ಷೇತ್ರವಾಗಿರುವುದರಿಂದ ಕಳೆದ ಬಾರಿ ಜಯಗಳಿಸಿದ್ದ ಕೊತ್ತೂರು ಮಂಜುನಾಥ್ ನಕಲಿ ಜಾತಿ ಪ್ರಮಾಣ ಪತ್ರ ನೀಡಿರುವ ಆರೋಪದಲ್ಲಿ ಈ ಬಾರಿ ಸ್ಪರ್ಧೆ ಮಾಡುವ ಹಕ್ಕನ್ನೇ ಕಳೆದುಕೊಂಡಿದ್ದಾರೆ.

    ಆರ್ಥಿಕವಾಗಿ ಬಹಳ ಹಿಂದುಳಿದಿರುವ ಈ ಕ್ಷೇತ್ರವೂ ಅಭಿವೃದ್ಧಿಯ ವಿಚಾರದಲ್ಲಿಯೂ ಹಿಂದುಳಿದಿದೆ. ಕ್ಷೇತ್ರದಲ್ಲಿ ರೆಡ್ಡಿ, ಒಕ್ಕಲಿಗ ಮತದಾರರು ಜೊತೆ ಮುಸ್ಲಿಂ ಮತಗಳು ಹೆಚ್ಚು ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಬಾರಿ ಬಿಜೆಪಿಯಿಂದ ಅಮರೇಶ್ ಸ್ಪರ್ಧೆ ನಡೆಸಿದ್ದರೆ, ಜೆಡಿಎಸ್ ನಿಂದ ಸಮೃದ್ದಿ ಮಂಜುನಾಥ್ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಕೋಲಾರ ಎಂಪಿ ಕೆ.ಎಚ್ ಮುನಿಯಪ್ಪ ಅವರ ದ್ವಿತೀಯ ಪುತ್ರಿ ಕೊನೆ ಗಳಿಗೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಯಾಗಲು ರಾಜಕೀಯ ಕುತಂತ್ರವೆ ನಡೆದಿತ್ತು. ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಹಿಂಪಡೆದಿದ್ದರು. 2013 ರ ಚುನಾವಣೆಯಲ್ಲಿ ಮಂಜುನಾಥ್ 73,146 ಮತ ಹಾಗೂ ಜೆಡಿಎಸ್ ಮುನಿ ಆಂಜನಪ್ಪ ಅವರು 39,412 ಮತ ಪಡೆದಿದ್ದರು. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲದ ಕಾರಣ ಸ್ವತಂತ್ರವಾಗಿ ನಾಮಪತ್ರ ಸಲ್ಲಿಸಿರುವ ಪವರ್ ಮಿನಿಸ್ಟರ್ ಡಿಕೆಶಿ ಹಾಗೂ ಪರಮೇಶ್ವರ ಅವರ ಆಪ್ತ ಎಚ್.ವೆಂಕಟೇಶ್ ಗೆ ಕಾಂಗ್ರೆಸ್ ಬೆಂಬಲ ನೀಡಲು ನಿರ್ಧರಿಸಿದೆ.

    ಒಟ್ಟಿನಲ್ಲಿ ಜಿಲ್ಲೆಯ 6 ವಿಧಾನಸಭೆ ಕ್ಷೇತ್ರಗಳ ಪೈಕಿ ಜೆಡಿಎಸ್ ಮೊದಲ ಸ್ಥಾನ 3 ಅಥವಾ 4 ಸ್ಥಾನ, ಕಾಂಗ್ರೇಸ್ ಎರಡನೆ ಸ್ಥಾನ 2 ಅಥವಾ 3 ಹಾಗೂ ಬಿಜೆಪಿ ಮೂರನೆ ಸ್ಥಾನಕ್ಕೆ ಅಂದರೆ 1 ಸ್ಥಾನಕ್ಕೆ ತೃಪ್ತಿ ಪಡಬೇಕಿದೆ. ಈ ಮಧ್ಯೆ ಒಂದು ಪಕ್ಷೇತರ ಅಥವಾ ನಮ್ಮ ಕಾಂಗ್ರೇಸ್ ಗೆದ್ದರೆ ಅಚ್ಚರಿ ಏನಿಲ್ಲ.

  • ಅಕ್ರಮ ಕಟ್ಟಡ ತೆರವು- ಪಿಎಸ್‍ಐ, ಪುರಸಭೆ ಸಿಬ್ಬಂದಿ ಮೇಲೆ ಕಲ್ಲಿನಿಂದ ಹಲ್ಲೆ

    ಅಕ್ರಮ ಕಟ್ಟಡ ತೆರವು- ಪಿಎಸ್‍ಐ, ಪುರಸಭೆ ಸಿಬ್ಬಂದಿ ಮೇಲೆ ಕಲ್ಲಿನಿಂದ ಹಲ್ಲೆ

    ಕೋಲಾರ: ರಸ್ತೆ ಅಗಲೀಕರಣಕ್ಕಾಗಿ ಅಂಗಡಿ ತೆರವುಗೊಳಿಸುವ ವೇಳೆ ಪುರಸಭೆ ಸಿಬ್ಬಂದಿ ಹಾಗೂ ನಿವೃತ್ತ ಪಿಎಸ್‍ಐ ನಡುವೆ ಮಾರಾಮರಿ ನಡೆದಿದ್ದು, ಘಟನೆಯಲ್ಲಿ ಬಂದೋಬಸ್ತ್ ಮಾಡುತ್ತಿದ್ದ ಪಿಎಸ್‍ಐ ಹಾಗೂ ಓರ್ವ ಪೌರ ಕಾರ್ಮಿಕನಿಗೆ ಗಾಯವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಹೊಸ ಬಸ್ ನಿಲ್ದಾಣ ಮುಂಭಾಗದಲ್ಲಿ ನಿವೃತ್ತ ಪಿಎಸ್‍ಐ ರಘುರಾಮ್ ರೆಡ್ಡಿ ಎಂಬವರಿಗೆ ಸೇರಿದ ಅಕ್ರಮ ಕಟ್ಟಡವನ್ನು ತೆರವುಗೊಳಿಸಲು ಪುರಸಭೆ ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ರಘುರಾಮ್ ರೆಡ್ಡಿ ಹಾಗು ಕುಟುಂಬಸ್ಥರು ವಿರೋಧಿಸಿದ್ದಾರೆ. ಪುರಸಭೆ ಸಿಬ್ಬಂದಿ ಮತ್ತು ರಘುರಾಮ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಕಲ್ಲು ತೂರಾಟ ಸಹ ನಡೆದಿದೆ.

    ಕಲ್ಲು ತೂರಾಟದಲ್ಲಿ ಪುರಸಭೆ ಸಿಬ್ಬಂದಿ ಶಿವ ಹಾಗೂ ಬಂಗಾರಪೇಟೆ ಪಿಎಸ್‍ಐ ರವಿಕುಮಾರ್‍ಗೆ ಎಂಬವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಿವೃತ್ತ ಪಿಎಸ್‍ಐ ರಘುರಾಮ ರೆಡ್ಡಿ ಅವರ ಮಕ್ಕಳಾದ ಕಿರಣ್ ಕುಮಾರ್, ವಿಕ್ರಮ್ ಹಾಗು ಸಂಬಂಧಿಗಳಾದ ಸಂಪಂಗಿ ರೆಡ್ಡಿ, ಕೃಷ್ಣಪ್ಪ ಐದು ಜನ ಅರೋಪಿಗಳನ್ನ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ.

    ಮುಂಜಾಗ್ರತೆ ಕ್ರಮವಾಗಿ ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಲಾಗಿದ್ದು, ಬಂಗಾರಪೇಟೆ ಪಟ್ಟಣಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಮಧ್ಯ ವಿವಿಧ ಸಂಘಟನೆಗಳ ಮುಖಂಡರು ಅರೋಪಿಗಳನ್ನ ಬಂಧಿಸುವಂತೆ ಒತ್ತಾಯಿಸಿ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ಮಾಡಿದರು.

    ಸ್ಥಳಕ್ಕೆ ಬಂದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ತಹಶೀಲ್ದಾರ್ ಸತ್ಯಪ್ರಕಾಶ್, ಪಿಎಸ್‍ಐ ರವಿಕುಮಾರ್ ಪ್ರತಿಭಟನಾಕಾರರ ಮನ ಮನವೊಲಿಸಿ, ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿಕೊಂಡ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ಆದರೆ ಪಟ್ಟಣದ ವಿವಿಧ ಸಂಘಟನೆಗಳು ಸೋಮವಾರ ಬಂಗಾರಪೇಟೆ ಬಂದ್‍ಗೆ ಕರೆ ನೀಡಿದ್ದಾರೆ.