Tag: ಫ್ಲೈ ಓವರ್

  • ಶೀಘ್ರವೇ ಬೆಂಗಳೂರು-ನೆಲಮಂಗಲ ಫ್ಲೈಓವರ್ ಓಪನ್..!

    ಶೀಘ್ರವೇ ಬೆಂಗಳೂರು-ನೆಲಮಂಗಲ ಫ್ಲೈಓವರ್ ಓಪನ್..!

    ಬೆಂಗಳೂರು: ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿದ್ದ ಪ್ರಯಾಣಿಕರಿಗೆ ಗುಡ್‍ನ್ಯೂಸ್ ಸಿಕ್ಕಿದೆ. ಪೀಣ್ಯ ಫ್ಲೈಓವರ್ ರಿಪೇರಿ ಕಾರ್ಯ ಅಂತಿಮ ಹಂತದಲ್ಲಿದೆ. ಇನ್ನೊಂದು ವಾರದಲ್ಲಿ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.

    ಡಿಸೆಂಬರ್ ಕೊನೆಯ ವಾರದ ವೇಳೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿನ ನೆಲಮಂಗಲ-ಗೊರಗುಂಟೆಪಾಳ್ಯ ಫ್ಲೈಓವರ್‍ನ 102-103ನೇ ಪಿಲ್ಲರ್ ನಡುವಿನ ಸ್ಲಾಬ್‍ಗಳಲ್ಲಿ ಸೆಗ್ಮೆಂಟ್ ಜಾಯಿಂಟ್ ಸಮಸ್ಯೆ ಕಂಡುಬಂದಿತ್ತು. ಅದನ್ನ ಸರಿಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫ್ಲೈಓವರ್‍ನ ಸಂಚಾರವನ್ನ ನಿರ್ಬಂಧ ಮಾಡಿತ್ತು. ಪ್ರಾರಂಭದಲ್ಲಿ ಒಂದೇ ವಾರಕ್ಕೆ ದುರಸ್ಥಿ ಕಾರ್ಯ ಮುಗಿಸುವುದಾಗಿ ಹೇಳಿದ್ದ ಅಧಿಕಾರಿಗಳು ತಿಂಗಳಾದರೂ ರಿಪೇರಿ ಕಾರ್ಯ ಮುಗಿಸಿರಲಿಲ್ಲ. ಆದರೆ ಸದ್ಯ ಈಗ ಸಂಪೂರ್ಣ ರಿಪೇರಿ ಕಾರ್ಯ ಮುಗಿದಿದ್ದು, ತಾಂತ್ರಿಕ ದೋಷ ಇದ್ದ ಪಿಲ್ಲರ್ ಗಳಿಗೆ ಸಪೋರ್ಟಿವ್ ಲಿಂಕ್ ಅಳವಡಿಸಿದ್ದಾರೆ.

    ಫೈನಲ್ ಆಗಿ ದೆಹಲಿ ಎಂಜಿನಿಯರ್‍ಗಳ ತಂಡ ಫ್ಲೈಓವರ್ ದುರಸ್ತಿ ಕಾರ್ಯ ಪರಿಶೀಲನೆ ಮಾಡಿ ಓಕೆ ಮಾಡೋದೊಂದೆ ಬಾಕಿ. ಈ ವಾರವೇ ದೆಹಲಿ ಇಂಜಿನಿಯರ್ಸ್ ಪರಿಶೀಲನೆ ನಡೆಸಿ ಸಂಚಾರಕ್ಕೆ ಓಕೆ ಅಂದ್ರೆ, ಮುಂದಿನ ಬುಧವಾರ ಅಥವಾ ಗುರುವಾರದಿಂದ ಸಂಚಾರಕ್ಕೆ ಅವಕಾಶ ದೊರೆಯುವ ಸಾಧ್ಯತೆ ಇದೆ. ಇದನ್ನೂ ಓದಿ: ಸಿಎಂ ಇಬ್ರಾಹಿಂ ಜೆಡಿಎಸ್‍ಗೆ ಬಂದರೆ ಸ್ವಾಗತ: ಹೆಚ್‍ಡಿಕೆ

    ಗೊರಗುಂಟೆಪಾಳ್ಯ-ನಾಗಸಂದ್ರದ 4 ಕಿಲೋಮೀಟರ್ ದೂರದ ಫ್ಲೈಓವರ್ ಬಂದ್ ಆಗಿದ್ದ ಕಾರಣ ವಾಹನ ಸವಾರರು ಪ್ರತಿನಿತ್ಯ ಟ್ರಾಫಿಕ್, ಆಕ್ಸಿಡಂಟ್ ಸೇರಿದಂತೆ ಒಂದಲ್ಲೊಂದು ತೊಂದರೆಗೆ ಒಳಾಗಾಗುತ್ತಲೇ ಇದ್ದರು. ಈ ಎಲ್ಲಾ ಸಮಸ್ಯೆಗಳಿಂದ ಬೇಸತ್ತಿದ್ದ ಶಾಸಕ ಮಂಜುನಾಥ್, ಪಶ್ಚಿಮ ವಿಭಾಗದ ಡಿಸಿಪಿ ಕುಲ್ದಿಪ್ ಜೈನ್ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಇನ್ನು ಫ್ಲೈಓವರ್ ನಲ್ಲಿ ಇನ್ನೊಂದು ವಾರದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಸಿಗುವ ನಿರೀಕ್ಷೆ ನಡುವೆ, ಇಂದು ವಿಕೇಂಡ್ ಹಿನ್ನೆಲೆ, ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಗೊರಗುಂಟೆಪಾಳ್ಯದಿಂದ ನೆಲಮಂಗಲ ಟೋಲ್ ವರೆಗೂ ವಾಹನಗಳು ಸಾಲುಗಟ್ಟಿ ನಿಂತು ಸ್ಲೋ ಮೂವಿಂಗ್ ನಲ್ಲೇ ಸಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಒಟ್ಟಾರೆ ಒಂದೇ ವಾರದಲ್ಲಿ ರಿಪೇರಿ ಕೆಲಸ ಮುಗಿಸುವ ಭರವಸೆ ನೀಡಿ ತಿಂಗಳಾದರು ಕೆಲಸ ಮುಗಿಸದ ಅಧಿಕಾರಿಗಳು, ಸದ್ಯ ಇನ್ನೊಂದು ವಾರದಲ್ಲಿ ಫ್ಲೈಓವರ್ ಓಪನ್ ಮಾಡೋ ಸುಳಿವು ನೀಡಿದ್ದಾರೆ. ಈ ಬಾರಿಯಾದರೂ ಅಧಿಕಾರಿಗಳ ಮಾತು ಸತ್ಯವಾದರೆ, ಈ ಭಾಗದಲ್ಲಿ ಸಂಚಾರಿಸುವ ವಾಹನ ಸವಾರರು ನೆಮ್ಮದಿಯಿಂದ ಓಡಾಡಲಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿನೇ ಹಿಜಬ್ ಹಾಕಿದ್ದಾರೆ: ಸಿಎಂ ಇಬ್ರಾಹಿಂ

  • ನೆಲಮಂಗಲ, ಬೆಂಗಳೂರು ಫ್ಲೈಓವರ್‌ಗೆ ಮುಕ್ತಿ ಯಾವಾಗ?

    ನೆಲಮಂಗಲ, ಬೆಂಗಳೂರು ಫ್ಲೈಓವರ್‌ಗೆ ಮುಕ್ತಿ ಯಾವಾಗ?

    ನೆಲಮಂಗಲ: ಬೆಂಗಳೂರು ನೆಲಮಂಗಲ ಮಾರ್ಗದ ಎಲಿವೇಟೆಡ್ ಫ್ಲೈಓವರ್ ದುರಸ್ತಿ ಕಾರ್ಯ ಪ್ರಾರಂಭ ಮಾಡಿ 37 ದಿನ ಕಳೆದರೂ, ಇನ್ನೂ ಸಂಚಾರಕ್ಕೆ ಅನುವು ಮಾಡಿಕೊಟ್ಟಿಲ್ಲ. ಈಗಾಗಲೇ ಫ್ಲೈ ಓವರ್ ಪರಿಶೀಲನೆಗೆ ದೆಹಲಿ ಇಂಜಿನಿಯರ್ಸ್‍ಗಳು ಭೇಟಿ ನೀಡಿದ್ದು, ಅವರು ಒಪ್ಪಿಗೆ ನೀಡಿದರೆ ಮಾತ್ರ ಸಂಚಾರಕ್ಕೆ ಅನುಮತಿ ಸಿಗಲಿದೆ.

    ಪಿಲ್ಲರ್ 102 ಮತ್ತು 103ರಲ್ಲಿ ಕಾಣಿಸಿಕೊಂಡ ಸಮಸ್ಯೆಯನ್ನು ಬಗೆಹರಿಸಿದರೂ ಕೂಡ ಸಂಚಾರಕ್ಕೆ ಅನುಮತಿ ನೀಡಲು ಬುಧವಾರದಿಂದ ದೆಹಲಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಜ್ಞ ಇಂಜಿನಿಯರ್‍ಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಇಂಜಿನಿಯರ್‌ಗಳು ತಾಂತ್ರಿಕ ದೋಷ ಇದ್ದ ಪಿಲ್ಲರ್‌ಗಳಿಗೆ ಸಪೋರ್ಟ್ ಲಿಂಕ್ ಅಳವಡಿಸಿ ಪರಿಶೀಲನೆ ನಡೆಸಿದ್ದು, ದೆಹಲಿ ತಜ್ಞರು ಸಂಚಾರಕ್ಕೆ ಒಪ್ಪಿಗೆ ನೀಡಿದರಷ್ಟೇ ಅವಕಾಶ. ಇಲ್ಲದಿದ್ದರೆ ಎರಡರಿಂದ ಮೂರು ಪಿಲ್ಲರ್ ಬದಲಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ನಕಲಿ ಸಮಾಜವಾದ: ಅಖಿಲೇಶ್‌ ಯಾದವ್‌ ಪಕ್ಷದ ವಿರುದ್ಧ ಮೋದಿ ವಾಗ್ದಾಳಿ

    ಫ್ಲೈಓವರ್ ಮುಚ್ಚಿ ತಿಂಗಳುಗಳು ಕಳೆದಿದೆ. ವಾಹನ ಸವಾರರಂತೂ ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿ ಜೊತೆಗೆ ಟೋಲ್ ಹಣ ಕಟ್ಟಿ ಹೈರಾಣಾಗಿದ್ದಾರೆ. ಇನ್ನೂ ದುರಸ್ತಿಯಲ್ಲಿದ್ದರೂ ಸಹ ಅರ್ಧ ರಸ್ತೆಗೆ ಪೂರ್ತಿ ಟೋಲ್ ಹಣ ಕಟ್ಟಿ ಸಂಚಾರ ಮಾಡುವ ಪರಿಸ್ಥಿತಿ ಇದ್ದು, ಆದಷ್ಟು ಬೇಗ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ವಾಹನ ಸವಾರರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಂಪುಟ ವಿಸ್ತರಣೆಗೆ ಸಿಗುತ್ತಾ ವರಿಷ್ಠರ ಗ್ರೀನ್ ಸಿಗ್ನಲ್- ಯಾರೆಲ್ಲ ಸಚಿವಾಕಾಂಕ್ಷಿಗಳು?

  • ನೆಲಮಂಗಲ ಫ್ಲೈಓವರ್ ದುರಸ್ತಿ ಕಾರ್ಯ ಪೂರ್ಣ – ಒಂದು ವಾರದಲ್ಲಿ ಸಂಚಾರಕ್ಕೆ ಮುಕ್ತ

    ನೆಲಮಂಗಲ ಫ್ಲೈಓವರ್ ದುರಸ್ತಿ ಕಾರ್ಯ ಪೂರ್ಣ – ಒಂದು ವಾರದಲ್ಲಿ ಸಂಚಾರಕ್ಕೆ ಮುಕ್ತ

    ಬೆಂಗಳೂರು: ಕಳೆದ ಇಪ್ಪತ್ತು ದಿನದ ಹಿಂದೆ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ನೆಲಮಂಗಲ, ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯ ಫ್ಲೈ ಓವರ್ ರಸ್ತೆಯು ಇನ್ನೂ ಒಂದು ವಾರದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

    ನಾಗಸಂದ್ರ, ದಾಸರಹಳ್ಳಿಯ ನಡುವಿನ ಫ್ಲೈ ಓವರ್ ರಸ್ತೆಯ ಒಂದು ಪಿಲ್ಲರ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಕೆಲಸವನ್ನು ಆರಂಭ ಮಾಡಲಾಗಿತ್ತು. ಕಾರ್ಯ ಪೂರ್ಣಗೊಂಡಿದ್ದು, ಈ ಫ್ಲೈಓವರ್ ನಲ್ಲಿ ಬರುವ ಎಲ್ಲಾ ಪಿಲ್ಲರ್ ಗಳಲ್ಲಿ ಮುಂದೆ ಯಾವುದೇ ಸಮಸ್ಯೆ ಎದುರಾಗದಂತೆ ಇಂದು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ತಂಡ ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಎಲ್ಲಾ ಕೆಲಸ ಪೂರ್ಣಗೊಂಡಿದ್ದು, ಸುಗಮ ಸಂಚಾರಕ್ಕೆ ಇನ್ನೂ ಒಂದು ವಾರ ಕಾಲಾವಧಿ ಕಾಯಲೇಬೇಕಿದೆ.

    ಫ್ಲೈ ಓವರ್ ಕೆಲಸ ಸಂಪೂಣವಾಗಿ ಮುಗಿದಿದ್ದು, ದೆಹಲಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ತಂಡ ಬಂದು ಪರಿಶೀಲನೆ ನಡೆಸಿದ ನಂತರ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ. ಇನ್ನೂ ಈ ರಸ್ತೆಯನ್ನು ಟೋಲ್ ಕಂಪನಿಯ ನಿರ್ವಹಣೆ ಹಾಗೂ ಬಿಬಿಎಂಪಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಬೆಂಗಳೂರು ಟ್ರಾಫಿಕ್ ಪೊಲೀಸರಿಗೂ ಮಾಹಿತಿಯನ್ನು ರವಾನೆ ಮಾಡಲಾಗಿದೆ. ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

    ನೆಲಮಂಗಲ ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯ ಫ್ಲೈ ಓವರ್ ರಸ್ತೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಇಪ್ಪತ್ತು ದಿನದ ಹಿಂದೆ ಗೊರಗುಂಟೆಪಾಳ್ಯ, ನಾಗಸಂದ್ರ ನಡುವಿನ ಎರಡು ಬದಿಯ ಫ್ಲೈ ಓವರ್ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ – 17ರ ಹುಡುಗ ಅರೆಸ್ಟ್

  • ಮಂದಗತಿಯ ಫ್ಲೈ ಓವರ್ ದುರಸ್ತಿ ಕಾರ್ಯ- ಬೆಂಗಳೂರಿಗರಿಗೆ ತಪ್ಪದ ಕಿರಿಕಿರಿ

    ಮಂದಗತಿಯ ಫ್ಲೈ ಓವರ್ ದುರಸ್ತಿ ಕಾರ್ಯ- ಬೆಂಗಳೂರಿಗರಿಗೆ ತಪ್ಪದ ಕಿರಿಕಿರಿ

    ಬೆಂಗಳೂರು: ತಾಂತ್ರಿಕ ದೋಷ ಹಿನ್ನೆಲೆ ದಾಸರಹಳ್ಳಿಯ ಫ್ಲೈ ಓವರ್ ರಸ್ತೆ ದುರಸ್ತಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಇನ್ನೂ ಒಂದು ವಾರ ನೆಲಮಂಗಲ, ಬೆಂಗಳೂರಿನ ಫ್ಲೈ ಓವರ್ ರಸ್ತೆಯಲ್ಲಿ ಕೆಲಸ ನಡೆಯುವ ಸಾಧ್ಯತೆ ಇದೆ.

    ಇತ್ತೀಚೆಗಷ್ಟೇ ದಾಸರಹಳ್ಳಿಯ ದೀಪಕ್ ಬಸ್ ನಿಲ್ದಾಣದ ಬಳಿಯ ಫ್ಲೈ ಓವರ್ ರಸ್ತೆಯಲ್ಲಿ ರೋಪ್ ಕಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ದುರಸ್ತಿ ಕಾರ್ಯ ಪ್ರಾರಂಭವಾಗಿದೆ. ಇನ್ನೂ ನೆಲಮಂಗಲ – ಬೆಂಗಳೂರು ರಸ್ತೆಯಲ್ಲಿ ಪ್ರತಿನಿತ್ಯ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ದುರಸ್ತಿ ಕಾರ್ಯ ಮಂದಗತಿಯಿಂದ ನಡೆಯುತ್ತಿರುವುದರಿಂದ ಇನ್ನೂ ಒಂದು ವಾರ ವಾಹನ ಸವಾರರು ಟ್ರಾಫಿಕ್ ದಟ್ಟಣೆ ಅನುಭವಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಪೀಣ್ಯ ಫ್ಲೈಓವರ್ ಸಂಚಾರ ಬಂದ್ – ಬದಲಿ ಮಾರ್ಗ ಇಲ್ಲಿದೆ

    ನವಯುಗ ಟೋಲ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಡೆಯುತ್ತಿರುವ ನಿಧಾನಗತಿಯಲ್ಲಿ ನಡೆಯುತ್ತಿರುವ ದುರಸ್ತಿ ಕಾರ್ಯದಿಂದಾಗಿ ವಾಹನ ಸವಾರರು ಹೈರಾಣಾಗಿದ್ದಾರೆ. ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಗೊರಗುಂಟೆಪಾಳ್ಯ ವರೆಗಿನ ಫ್ಲೈ ಓವರ್ ರಸ್ತೆಯಲ್ಲಿರುವ ಎಲ್ಲಾ ಕಂಬಗಳನ್ನು ಇಂಜಿನಿಯರ್‌ಗಳು ಪರಿಶೀಲಿಸುತ್ತಿದ್ದಾರೆ. ಇದರಿಂದಾಗಿ ಇನ್ನೂ ಒಂದು ವಾರ ದುರಸ್ತಿ ಕಾರ್ಯ ತಡವಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ವಾಹನ ಸವಾರರೆ ಎಚ್ಚರಿಕೆಯಿಂದ ಸಾಗಬೇಕಿದೆ. ಇದನ್ನೂ ಓದಿ: ಬಸ್ ಅಪಘಾತದಲ್ಲಿ 22 ಮಂದಿ ಸಾವಿಗೆ ಕಾರಣನಾದ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ

  • ನಿರ್ಮಾಣ ಹಂತದ ಫ್ಲೈ ಓವರ್ ಕುಸಿತ – 3 ಕಾರ್ಮಿಕರು ಗಂಭೀರ

    ನಿರ್ಮಾಣ ಹಂತದ ಫ್ಲೈ ಓವರ್ ಕುಸಿತ – 3 ಕಾರ್ಮಿಕರು ಗಂಭೀರ

    ಚಂಡೀಗಢ: ನಿರ್ಮಾಣ ಹಂತದ ಮೇಲ್ಸೇತುವೆ ಕುಸಿದ ಪರಿಣಾಮ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.

    ಗುರುಗ್ರಾಮ-ದ್ವಾರಕಾ ಎಕ್ಸ್ ಪ್ರೆಸ್ ವೇ ಬಳಿ ನಿರ್ಮಾಣ ಹಂತದ ಮೇಲ್ಸೇತುವೆ ಕುಸಿದುಬಿದ್ದಿದೆ. ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ದೌಲತಾಬಾದ್ ಬಳಿ ಗುರುಗ್ರಾಮ-ದ್ವಾರಕಾ  ಎಕ್ಸ್ ಪ್ರೆಸ್ ವೇ ನಲ್ಲಿ ಇಂದು ಬೆಳಿಗ್ಗೆ 7:30ರ ಸುಮಾರಿಗೆ ನಿರ್ಮಾಣ ಹಂತದ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ. ಪರಿಣಾಮ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಗೊಂಡಿದ್ದ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

    ಕುಸಿತಕ್ಕೆ ಕಾರಣ ತಿಳಿದು ಬಂದಿಲ್ಲ, ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗುವುದು. ಇಲ್ಲಿಯವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಅದು ಸಂಭವಿಸಿದಾಗ ಜಾಗದಲ್ಲಿ ಯಾವುದೇ ಕೆಲಸಗಳು ನಡೆಯುತ್ತಿರಲಿಲ್ಲ ಎಂದು ದ್ವಾರಕಾ ಎಕ್ಸ್‍ಪ್ರೆಸ್‍ವೆ ವೇ ಯೋಜನಾ ನಿರ್ದೇಶಕ ನಿರ್ಮನ್ ಜಂಬುಲ್ಕರ್ ಹೇಳಿದ್ದಾರೆ.

    ಇದು ರಾಷ್ಟ್ರ ರಾಜಧಾನಿ ದೆಹಲಿ ಮತ್ತು ನೆರೆಯ ಗುರುಗ್ರಾಮವನ್ನು ಸಂಪರ್ಕಿಸುವ ಪರ್ಯಾಯ ಮಾರ್ಗವಾಗಿದ್ದು, 27.6 ಕಿ.ಮೀ ಉದ್ದದ ದ್ವಾರಕಾ ಎಕ್ಸ್ ಪ್ರೆಸ್ ವೇ ನಿರ್ಮಾಣಕ್ಕೆ 9,000 ಕೋಟಿ ರೂ. ವೆಚ್ಚವಾಗಲಿದೆ.

  • ಕೊರೊನಾ ವೈರಸ್ ಭೀತಿಯಿಂದ ಉಳಿಯಿತು ನೂರಾರು ಜನರ ಪ್ರಾಣ

    ಕೊರೊನಾ ವೈರಸ್ ಭೀತಿಯಿಂದ ಉಳಿಯಿತು ನೂರಾರು ಜನರ ಪ್ರಾಣ

    ಹಾಸನ: ರಾಜ್ಯಾದ್ಯಂತ ಕೊರೊನಾ ವೈರಸ್ ಆತಂಕ ಉಂಟು ಮಾಡಿದರೆ, ಅದೇ ಕೊರೊನಾ ಆತಂಕ ಇಂದು ನೂರಾರು ಜನರ ಪ್ರಾಣ ಉಳಿಸಿದೆ.

    ಹೌದು. ಹಾಸನ ನಗರದ ಹೊಸ ಬಸ್ ನಿಲ್ದಾಣದಿಂದ, ಎನ್‍ಆರ್ ಸರ್ಕಲ್‍ವರೆಗೆ ಸುಮಾರು 42 ಕೋಟಿ ವೆಚ್ಚದಲ್ಲಿ ನೂತನ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿತ್ತು. ಕಳಪೆ ಕಾಮಗಾರಿಯ ಪರಿಣಾಮ ನಿರ್ಮಾಣ ಹಂತದಲ್ಲಿರುವಾಗಲೇ ಹೊಸ ಬಸ್ ನಿಲ್ದಾಣದ ಬಳಿ ಫ್ಲೈ ಓವರ್ ಕುಸಿದು ಬಿದ್ದಿದೆ.

    ಸಾಮಾನ್ಯ ದಿನಗಳಲ್ಲಿ ಫ್ಲೈ ಓವರ್ ಸಮೀಪವೇ ರಸ್ತೆ ಬದಿ ಹತ್ತಾರು ಕ್ಯಾಂಟೀನ್‍ಗಳಲ್ಲಿ ಆಹಾರ ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ ಉರುಳಿಬಿದ್ದ ಫ್ಲೈ ಓವರ್ ಬಳಿ ಪ್ರತಿದಿನ ಸಾವಿರಾರು ಜನ ಆಹಾರ ಸೇವಿಸುತ್ತಿದ್ದರು. ಆಹಾರ ಸೇವಿಸುವಾಗ ಅಥವಾ ಆಹಾರ ಸೇವಿಸಿದ ನಂತರ ಫ್ಲೈ ಓವರ್ ಕೆಳಗಿನ ನೆರಳಿನಲ್ಲಿ ಜನರು ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕ್ಯಾಂಟೀನ್ ಸಂಪೂರ್ಣ ಮುಚ್ಚುವಂತೆ ಜಿಲ್ಲಾಡಳಿತ ಸೂಚಿಸಿತ್ತು.

    ಸೂಚನೆಯ ಹಿನ್ನೆಲೆಯಲ್ಲಿ ಕ್ಯಾಂಟೀನ್‍ಗಳು ಕ್ಲೋಸ್ ಆಗಿದ್ದರಿಂದ ಫ್ಲೈ ಓವರ್ ಬಳಿ ಯಾವುದೇ ಜನರು ಇರಲಿಲ್ಲ. ಹೀಗಾಗಿ ಇಂದು ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಫ್ಲೈ ಓವರ್ ಕುಸಿತದ ಬಗ್ಗೆ ಆಕ್ರೋಶ ಹೊರಹಾಕಿರುವ ಸಾರ್ವಜನಿಕರು ಇಡೀ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಮುಂದೆ ಇಂತಹ ಅವಘಡ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.

  • ಯಶವಂತಪುರ ಫ್ಲೈ ಓವರ್ ಮೇಲೆ ಸಿಎಂ ಕಾರ್ಯದರ್ಶಿ ಕಾರು ಅಪಘಾತ

    ಯಶವಂತಪುರ ಫ್ಲೈ ಓವರ್ ಮೇಲೆ ಸಿಎಂ ಕಾರ್ಯದರ್ಶಿ ಕಾರು ಅಪಘಾತ

    ಬೆಂಗಳೂರು: ಸಿಎಂ ಬೆಂಗಾವಲು ವಾಹನವನ್ನು ಫಾಲೋ ಮಾಡುತ್ತಿದ್ದ ಕಾರೊಂದು ಅತಿವೇಗವಾಗಿ ಬಂದು ಮತ್ತೊಂದು ಬದಿಯ ರಸ್ತೆಗೆ ನುಗ್ಗಿದ ಘಟನೆ ಯಶವಂತಪುರ ಫ್ಲೈ ಓವರ್ ಮೇಲೆ ನಡೆದಿದೆ.

    ಕಾರ್ಯಕ್ರಮದ ನಿಮಿತ್ತ ಸಿಎಂ ಯಡಿಯೂರಪ್ಪ ಬೆಂಗಳೂರಿನಿಂದ ತುಮಕೂರಿಗೆ ಹೊರಟ್ಟಿದ್ದರು. ಆ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಸೆಲ್ವಕುಮಾರ್ ಅವರು ಕೂಡ ಸಿಎಂ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ ಅವರ ಕಾರು ಬೆಂಗಾವಲು ವಾಹನವನ್ನು ಫಾಲೋ ಮಾಡುತಿತ್ತು.

    ಸಿಎಂ ಬೆಂಗವಾಲು ವಾಹನ ಅತಿವೇಗವಾಗಿ ಹೋಗುವಾಗ ಕಾರ್ಯದರ್ಶಿ ಅವರ ಕಾರು ಚಾಲಕ ಅದೇ ವೇಗವನ್ನು ಪಾಲನೆ ಮಾಡಲು ಹೋಗಿದ್ದಾನೆ. ಆದರೆ ಫ್ಲೈ ಓವರ್ ಮೇಲೆ ಗಾಡಿ ನಿಯಂತ್ರಣಕ್ಕೆ ಸಿಗದೇ ಅಪಘಾತಕ್ಕೆ ಒಳಗಾಗಿದೆ. ಚಾಲಕ ವಿನಯ್‍ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ. ಅಪಘಾತದ ರಭಸಕ್ಕೆ ಮತ್ತೊಂದು ರಸ್ತೆಯಲ್ಲಿ ಬರುತ್ತಿದ್ದ ವಾಹನಗಳಾದ ಕ್ಯಾಂಟರ್ ಮತ್ತು ಆಟೋ ಜಖಂ ಆಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಕೆರೆಯಂತಾದ ರಸ್ತೆ, ಮನೆ – ದಕ್ಷಿಣದಲ್ಲಿ ಇನ್ನೆರೆಡು ದಿನ ಮಳೆ

    ಕೆರೆಯಂತಾದ ರಸ್ತೆ, ಮನೆ – ದಕ್ಷಿಣದಲ್ಲಿ ಇನ್ನೆರೆಡು ದಿನ ಮಳೆ

    ಬೆಂಗಳೂರು: ರಾಜ್ಯಾದ್ಯಂತ ವರುಣನ ಅಬ್ಬರ ಮುಂದುವರಿದಿದೆ. ಗುರುವಾರ ಚುನಾವಣೆ ಮುಗಿಯುತ್ತಿದ್ದಂತೆ ಸಂಜೆ ಹೊತ್ತಿಗೆ ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ ಸುರಿದಿದೆ.

    ಕಳೆದ ದಿನ ಸುರಿದ ಮಳೆಗೆ ಸಿಲಿಕಾನ್ ಸಿಟಿ ಮಂದಿ ತತ್ತರಿಸಿ ಹೋಗಿದ್ದಾರೆ. ವಿಜಯನಗರ, ಮಾಗಡಿರೋಡ್, ಯಶವಂತಪುರ, ಹೆಬ್ಬಾಳ, ಮೆಜೆಸ್ಟಿಕ್, ಕಾರ್ಪೊರೇಷನ್ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿತ್ತು. ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ವಾಹನ ಸವಾರರು ಪರದಾಡಿದ್ದರು. ಜೊತೆಗೆ ಮಳೆಯಿಂದಾಗಿ ಸ್ಟ್ರಾಂಗ್ ರೂಮ್‍ಗೆ ಇವಿಎಂ ಯಂತ್ರಗಳನ್ನು ಸಾಗಿಸಲು ಚುನಾವಣಾ ಅಧಿಕಾರಿಗಳು ಪರದಾಡಿದ್ದರು.

    ನೆಲಮಂಗಲ ಪಟ್ಟಣದಲ್ಲಿ ಬಿರುಗಾಳಿ ಸಹಿತ ಮಳೆಗೆ ಮರ ಬಿದ್ದು ಕಾರು ಜಖಂ ಆಗಿದೆ. ಬಿಹೆಚ್ ರಸ್ತೆಯ ಉಜ್ಜೀವನ್ ಬ್ಯಾಂಕ್ ಮುಂಭಾಗ ಈ ಘಟನೆ ನಡೆದಿದ್ದು, ಮಾರುತಿ ಓಮ್ನಿ ಕಾರಿನ ಮುಂಭಾಗ ಜಖಂ ಆಗಿದೆ. ಇನ್ನೂ ನೆಲಮಂಗಲ ಹೆದ್ದಾರಿ ಫ್ಲೈಓವರ್ ಬಳಿ ಮೇಲಿಂದ ಜಲಪಾತದ ರೀತಿಯಲ್ಲಿ ಮಳೆಯ ನೀರು ಸುರಿಯುತ್ತಿತ್ತು. ಪರಿಣಾಮ ತುಮಕೂರು ಬೆಂಗಳೂರು ಹೆದ್ದಾರಿಯಲ್ಲಿರುವ ನೆಲಮಂಗಲ ಗೊರಗುಂಟೆ ಪಾಳ್ಯದ ಫ್ಲೈಓವರ್ ಮೇಲೆ ಕಿಲೋಮೀಟರ್ ದೂರದವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಬಳಿಕ ಸರ್ವೀಸ್ ರಸ್ತೆಯಲ್ಲಿ ವಾಹನ ಸವಾರರು ಸಂಚಾರ ಮಾಡಿದ್ದರು.

    ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಮಳೆಯಿಂದ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಬಳಿಯ ವಿರಸಂದ್ರ ಸಿಗ್ನಲ್ ಬಳಿ ಸುಮಾರು ನಾಲ್ಕು ಅಡಿಯಷ್ಟು ಮಳೆನೀರು ನಿಂತಿದ್ದು, ವಾಹನ ಸವಾರರು ಪರದಾಡಿದ್ದರು. ಬೊಮ್ಮನಹಳ್ಳಿ ವ್ಯಾಪ್ತಿಯ ಬೇಗೂರಿನ ವಾರ್ಡಿನ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಮನೆಗಳಿಗೆ ನುಗ್ಗಿದ ಮಳೆಯ ನೀರನ್ನು ನಿವಾಸಿಗಳು ಹೊರ ಹಾಕಿದ್ದಾರೆ. ಇತ್ತ ಬಿಬಿಎಂಪಿ ಅಧಿಕಾರಿಗಳಿಗೆ ಹಾಗೂ ಕಾರ್ಪೊರೇಟರ್  ಗೆ ವಿಷಯ ತಿಳಿಸಿದರೂ ಸ್ಥಳಕ್ಕೆ ಅಧಿಕಾರಿಗಳು ಬರಲಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

    ಚಾಮರಾಜನಗರ, ರಾಮನಗರ, ಮಂಡ್ಯ, ತುಮಕೂರು ಮತ್ತು ಕೋಲಾರದಲ್ಲಿ ಬಿಸಿಲಿನಿಂದ ಕಂಗೆಟ್ಟ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ದಕ್ಷಿಣ ಒಳನಾಡಿನಲ್ಲಿ ಗಾಳಿಯ ಒತ್ತಡ ಕಡಿಮೆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಮಂಡ್ಯ, ಮೈಸೂರು, ರಾಮನಗರ, ಕೋಲಾರ, ಬೆಂಗಳೂರಿನಲ್ಲಿ ಇನ್ನು ಎರಡು ದಿನಗಳ ಕಾಲ ಇದೆ ರೀತಿ ಮಳೆಯಾಗುವ ಸಾಧ್ಯತೆ ಎಂದು ಪ್ರಕೃತಿ ನೈಸರ್ಗಿಕ ವಿಕೋಪ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.

  • ಹೊಸ ವರ್ಷದ ಎಫೆಕ್ಟ್ – ಫ್ಲೈಓವರ್ ಬಂದ್

    ಹೊಸ ವರ್ಷದ ಎಫೆಕ್ಟ್ – ಫ್ಲೈಓವರ್ ಬಂದ್

    ಬೆಂಗಳೂರು: ಹೊಸ ವರ್ಷಕ್ಕೆ ಎಲ್ಲಡೆ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇವತ್ತು ರಾತ್ರಿ 9 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ಬೆಂಗಳೂರಿನ ಫ್ಲೈಓವರ್ ಗಳಲ್ಲಿ ಸಂಚಾರ ರದ್ದು ಮಾಡಲಾಗಿದೆ. ಒಂದು ವೇಳೆ ರದ್ದು ಮಾಡಲಾಗಿರುವ ಫ್ಲೈ ಓವರ್ ಮೇಲೆ ಸಂಚಾರ ಮಾಡಿದರೆ ಕೇಸ್ ಬೀಳಲಿದೆ.

    ಹೊಸ ವರ್ಷಕ್ಕೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಅದರಲ್ಲೂ ಎಂಜಿ ರೋಡ್, ಬ್ರಿಗೇಡ್ ರೋಡ್‍ಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಮಹಿಳೆಯರಿಗೆ ಕಿರುಕುಳ ನೀಡುವವರ ಹಾಗೂ ಶಾಂತಿಭಂಗ ಮಾಡುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಜೊತೆಗೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

    ಎಲ್ಲಿ ವಾಹನ ಸಂಚಾರ ನಿಷೇಧ:
    * ಎಂಜಿ ರೋಡ್ – ಅನಿಲ್ ಕುಂಬ್ಳೆ ಸರ್ಕಲ್‍ನಿಂದ ರೆಸಿಡೆನ್ಸಿ ರೋಡ್ ಜಂಕ್ಷನ್.
    * ಬ್ರಿಗೇಡ್ ರೋಡ್ – ಕಾವೇರಿ ಎಂಪೋರಿಯಂ ಜಂಕ್ಷನ್‍ನಿಂದ ಅಪೇರಾ ಜಂಕ್ಷನ್.
    * ಚರ್ಚ್ ಸ್ಟ್ರೀಟ್ – ಬ್ರಿಗೇಡ್ ರೋಡ್ ಜಂಕ್ಷನ್‍ನಿಂದ ಮ್ಯೂಸಿಯಂ ರೋಡ್ ಜಂಕ್ಷನ್.
    * ಮ್ಯೂಸಿಯಂ ರೋಡ್ – ಎಂಜಿ ರೋಡ್ ಜಂಕ್ಷನ್‍ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ.
    * ಕಾಮರಾಜ ರಸ್ತೆ – ಕಾವೇರಿ ಎಂಪೋರಿಯಂ ಜಂಕ್ಷನ್‍ನಿಂದ ಕಬ್ಬನ್ ಪಾರ್ಕ್ ರೋಡ್ ಜಂಕ್ಷನ್.
    * ರೆಸಿಡೆನ್ಸಿ ಕ್ರಾಸ್ ರೋಡ್ – ರೆಸಿಡೆನ್ಸಿ ರೋಡ್ ಜಂಕ್ಷನ್‍ನಿಂದ ಎಂಜಿ ರೋಡ್ ಜಂಕ್ಷನ್ (ಶಂಕರನಾಗ್ ಥಿಯೇಟರ್).

    ಆದರೆ, ಎಂಜಿ ರೋಡ್ ಮೆಟ್ರೋ ನಿಲ್ದಾಣದಿಂದ ಕಾಡುಗೋಡಿ, ಹೊಸಕೋಟೆ, ಸರ್ಜಾಪುರ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಕೆಂಗೇರಿ ಹೌಸಿಂಗ್ ಬೋರ್ಡ್ ಕ್ವಾರ್ಟರ್ಸ್, ನೆಲಮಂಗಲ, ಆರ್.ಕೆ ಹೆಗಡೆ ನಗರ, ಯಲಹಂಕ ಉಪನಗರ, ಬಾಗಲೂರು ನಗರದ ಹಲವು ಕಡೆ ಬಿಎಂಟಿಸಿ ಬಸ್ ವ್ಯವಸ್ಥೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿರುಕು ಬಿಟ್ಟ ಹೆಬ್ಬಾಳ ಫ್ಲೈ ಓವರ್ – ಭಯದಲ್ಲಿ ಜನರು

    ಬಿರುಕು ಬಿಟ್ಟ ಹೆಬ್ಬಾಳ ಫ್ಲೈ ಓವರ್ – ಭಯದಲ್ಲಿ ಜನರು

    ಬೆಂಗಳೂರು: ಮೂರು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಸಾವಿರಾರು ಜನರು ಓಡಾಡುವ ನಗರದ ಹೆಬ್ಬಾಳದ ಫ್ಲೈ ಓವರ್ ಪಿಲ್ಲರ್ ಕ್ರ್ಯಾಕ್ ಬಿಟ್ಟಿದೆ.

    ಮುಂಬೈ ಫ್ಲೈ ಓವರ್ ಕುಸಿತ ಮಹಾದುರಂತ ಕಣ್ಣೆದುರೇ ಇರುವಾಗ ಹೆಬ್ಬಾಳದ ಫ್ಲೈ ಓವರ್ ಕೂಡ ಬಲಿಗಾಗಿ ಕಾದುಕೂತಿದೆ. ಬಿಡಿಎ ನಿರ್ಮಿಸಿರುವ ಫ್ಲೈ ಓವರ್ ಗೆ ಹತ್ತು ವರ್ಷವಾಗಿದ್ದು, ನಿಯಮದ ಪ್ರಕಾರ ಪ್ರತಿ ವರ್ಷ ಇದರ ಗುಣಮಟ್ಟವನ್ನು ಪರೀಕ್ಷೆ ಮಾಡಬೇಕು. ಆದರೆ ಹತ್ತು ವರ್ಷಗಳಾದರು ಇತ್ತ ಯಾವ ಅಧಿಕಾರಿಗಳು ಗಮನಹರಿಸಿಲ್ಲ. ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

    ಫ್ಲೈ ಓವರ್ ನಿರ್ಮಿಸಿ ನಿರ್ವಹಣೆ ಮರೆತಿರುವ ಬಿಡಿಎ ಎಡವಟ್ಟಿನಿಂದ ಫ್ಲೈ ಓವರ್ ಪಿಲ್ಲರ್ ನಲ್ಲಿ ಬಿರುಕು ಕಾಣಿಸಿಕೊಂಡಿದೆ. ನಿರಂತರ ಮಳೆಯಿಂದಾಗಿ ಯಾವುದೇ ಕ್ಷಣದಲ್ಲಾದರೂ ಫ್ಲೈ ಓವರ್ ಕುಸಿಯುವ ಸಾಧ್ಯತೆ ಇದೆ. ನಿರ್ವಹಣೆ ಕೊರತೆಯಿಂದ ಹಾಗೂ ಭಾರದ ವಾಹನಗಳ ಓಡಾಟದಿಂದ ಅನಾಹುತ ಇದೆ ಎಂದು ಸಂಚಾರ ತಜ್ಞರು ಎಚ್ಚರಿಕೆ ನೀಡಿದ್ದಾರೆ.

    ಸರ್ಕಾರ ಮುಂಜಾಗೃತವಾಗಿ ಈ ಹೆಬ್ಬಾಳ ಫ್ಲೈ ಓವರ್ ನತ್ತ ಗಮನ ಹರಿಸಬೇಕಾಗಿದೆ. ಈಗಾಗಲೇ ಭಯಾನಕ ಕ್ರ್ಯಾಕ್‍ಗಳಾಗಿದ್ದು, ಮಳೆಯಿಂದಾಗಿ ಪಿಲ್ಲರ್ ಕಂಬಿಗಳು ಸಂಪೂರ್ಣ ತುಕ್ಕು ಹಿಡಿಯುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv