Tag: ಫ್ಲೆಕ್ಸ್

  • ಮೈಸೂರಿನಲ್ಲಿ ಕಾನೂನು ಉಲ್ಲಂಘಿಸಿದ ಕಾಂಗ್ರೆಸ್..!

    ಮೈಸೂರಿನಲ್ಲಿ ಕಾನೂನು ಉಲ್ಲಂಘಿಸಿದ ಕಾಂಗ್ರೆಸ್..!

    ಮೈಸೂರು: ಫ್ಲೆಕ್ಸ್ ಮುಕ್ತ ನಗರಿ ಎಂದು ಕರೆಯಲ್ಪಡುವ ಮೈಸೂರಿನಲ್ಲಿ ಕಾಂಗ್ರೆಸ್ ಕಚೇರಿಯ ಸುತ್ತಮುತ್ತ ನಾಯಕರ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ಈ ಮೂಲಕ ರಸ್ತೆ ಬದಿಗಳಲ್ಲಿ ಫ್ಲೆಕ್ಸ್ ಹಾಕಬಾರದು ಎಂಬ ಕಾನೂನನ್ನು ಕಾಂಗ್ರೆಸ್ ಉಲ್ಲಂಘಿಸಿದೆ.

    ಇದರಿಂದ ಕಾನೂನು ಸಾಮಾನ್ಯ ಪ್ರಜೆಗಳಿಗೆ ಮಾತ್ರ ಅನ್ವಯ ಆಗುತ್ತಾ, ರಾಜಕೀಯ ನಾಯಕರಿಗೆ ಅದು ಅನ್ವಯವಾಗಲ್ವ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಏಕೆಂದರೆ ಮೈತ್ರಿ ಸರಕಾರದ ಭಾಗವಾಗಿರೋ ಕಾಂಗ್ರೆಸ್ ಫ್ಲೆಕ್ಸ್ ಮುಕ್ತ ನಗರಿಯೆಂಬ ಕಾನೂನು ತನಗೆ ಅನ್ವಯವಾಗಲ್ಲ ಅನ್ನೋ ರೀತಿ ನಡೆದುಕೊಂಡಿದೆ.

    ಜಿಲ್ಲೆಯ ರೈಲ್ವೆ ನಿಲ್ದಾಣದ ಬಳಿ ಇರುವ ಕಾಂಗ್ರೆಸ್ ಕಚೇರಿಯ ಸುತ್ತಮುತ್ತ ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ಈ ಮೂಲಕ ಫ್ಲೆಕ್ಸ್ ಮುಕ್ತ ನಗರ ಎಂಬ ಕಾನೂನಿಗೆ ಕಾಂಗ್ರೆಸ್ ಕಿಂಚಿತ್ತು ಕಿಮ್ಮತ್ತು ಕೊಟ್ಟಿಲ್ಲ ಎಂದಂತೆ ಕಾಣಿಸುತ್ತಿದೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರ ಸನ್ಮಾನ ಕಾರ್ಯಕ್ರಮದ ನಿಮಿತ್ತ ರಾಶಿ ರಾಶಿ ಫ್ಲೆಕ್ಸ್ ಗಳನ್ನು ಮೈಸೂರಿನ ದಾಸಪ್ಪ ವೃತ್ತದಿಂದ ರೈಲ್ವೆ ನಿಲ್ದಾಣ ವೃತ್ತದವರೆಗೂ ಅಳವಡಿಸಲಾಗಿದೆ. ಇದರಿಂದ ರಸ್ತೆ ಬದಿಗಳಲ್ಲಿ ಫ್ಲೆಕ್ಸ್ ಹಾಕಬಾರದು ಎಂಬ ಕಾನೂನನ್ನು ಕಾಂಗ್ರೆಸ್ ಮರೆತಿದೆಯಾ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇಷ್ಟೆಲ್ಲ ಆದರೂ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಫ್ಲೆಕ್ಸ್ ಗಳನ್ನು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಈ ಮೂಲಕ ಆಳುವವರಿಗೊಂದು ನೀತಿ, ಜನ ಸಾಮಾನ್ಯರಿಗೊಂದು ನೀತಿಯನ್ನು ಪಾಲಿಕೆ ಅಧಿಕಾರಿಗಳು ಅನುಸರಿಸುತ್ತಿದ್ದಾರೆ ಅಂತ ಸ್ಥಳೀಯರು ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫ್ಲೆಕ್ಸ್ ತೆರವು ಮಾಡದಿದ್ರೆ ಅಮಾನತು ಶಿಕ್ಷೆ: ಅಧಿಕಾರಿಗಳಿಗೆ ಬಿಬಿಎಂಪಿ ಮೇಯರ್ ಎಚ್ಚರಿಕೆ

    ಫ್ಲೆಕ್ಸ್ ತೆರವು ಮಾಡದಿದ್ರೆ ಅಮಾನತು ಶಿಕ್ಷೆ: ಅಧಿಕಾರಿಗಳಿಗೆ ಬಿಬಿಎಂಪಿ ಮೇಯರ್ ಎಚ್ಚರಿಕೆ

    ಬೆಂಗಳೂರು: ನಗರದಲ್ಲಿಂದು ಬೆಳ್ಳಂಬೆಳಗ್ಗೆಯೇ ಮೇಯರ್ ಸಂಪತ್ ರಾಜ್ ರವರು ಫ್ಲೆಕ್ಸ್ ಹಾಗೂ ಭಿತ್ತಿಪತ್ರ ತೆರವು ಕಾರ್ಯಾಚರಣೆಯನ್ನು ಬಿರುಸಿನಿಂದ ಕೈಗೊಂಡಿದ್ದಾರೆ.

    ಶನಿವಾರದಿಂದ ಫ್ಲೆಕ್ಸ್ ಹಾಗೂ ಭಿತ್ತಿಪತ್ರ ತೆರವುಗೊಳಿಸುವ ಕಾರ್ಯಾಚರಣೆಯ ಅಭಿಯಾನಕ್ಕೆ ಮೇಯರ್ ರವರು ಚಾಲನೆ ನೀಡಿದ್ದರು. ಇಂದು ಬೆಳ್ಳಂಬೆಳಗ್ಗಿನಿಂದಲೇ ಕಾರ್ಯಪ್ರವೃತರಾದ ಅವರು ಹಲಸೂರು ಮೆಟ್ರೋ ನಿಲ್ದಾಣ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಜೀವನ್‍ಭೀಮಾ ನಗರ ವಾರ್ಡ್ ಮತ್ತು ಹೊಯ್ಸಳನಗರ ವಾರ್ಡಿನ ಅಧಿಕಾರಿಗಳ ವಿರುದ್ಧ ಗರಂ ಆಗಿ, ಸ್ಥಳದಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಜೀವನ್‍ಭೀಮಾ ನಗರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆದ ಪ್ರಸನ್ನರವರನ್ನು ತರಾಟೆಗೆ ತೆಗೆದುಕೊಂಡ ಅವರು, ಈಗಾಗಲೇ ಎಲ್ಲಾ ನಾಮಫಲಕಗಳನ್ನು ಶೇಕಡ 60ರಷ್ಟು ಕನ್ನಡದಲ್ಲೇ ನಮೂದಿಸಬೇಕು ಎಂಬ ನಿಯಮವನ್ನು ರೂಪಿಸಿದ್ದರೂ, ಇದರು ಕುರಿತು ನೀವು ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈಗಾಗಲೇ ಫ್ಲೆಕ್ಸ್ ಹಾಗೂ ಭಿತ್ತಿಪತ್ರಗಳನ್ನು ತೆಗೆಯುವಂತೆ ಸೂಚನೆ ನೀಡಿದ್ದರೂ ನೀವು ಪಾಲಿಸಿಲ್ಲ. ಇನ್ನುಮುಂದೆ ಸರಿಯಾಗಿ ಕೆಲಸ ನಿರ್ವಹಿಸದೇ ಇರುವುದು ಕಂಡುಬಂದಲ್ಲಿ ಅಮಾನತು ಮಾಡಲಾಗುವುದು ಎಂದು ಸ್ಥಳದಲ್ಲೇ ಎಚ್ಚರಿಸಿದರು.

    ಈ ವೇಳೆ ರಸ್ತೆಯಲ್ಲಿ ಸಿಕ್ಕ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುತ್ತಿದ್ದ ವ್ಯಾಪಾರಿಗೆ ಬುದ್ಧಿಮಾತನ್ನು ಹೇಳಿ, ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಧ್ವಜ ಮಾರದಂತೆ ಸೂಚನೆ ನೀಡಿದ್ದು, ಕೇವಲ ಬಟ್ಟೆಯಲ್ಲಿ ತಯಾರಿಸಿದ ಧ್ವಜಗಳನ್ನ ಮಾತ್ರ ಮಾರಾಟ ಮಾಡುವಂತೆ ಸೂಚಿಸಿದರು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳು ಧ್ವಜಗಳನ್ನು ಕಿತ್ತುಕೊಳ್ಳಲು ಮುಂದಾದಾಗ, ಹೋಗಲಿ ಈ ಸಾರಿ ಬಿಡಿ, ಮತ್ತೊಮ್ಮೆ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವುದು ಕಂಡುಬಂದಲ್ಲಿ ಕ್ರಮತೆಗೆದುಕೊಳ್ಳಿ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಫ್ಲೆಕ್ಸ್ ತೆರವು ಕಾರ್ಯಾಚರಣೆಗಿಳಿದ ಮೇಯರ್

    ಫ್ಲೆಕ್ಸ್ ತೆರವು ಕಾರ್ಯಾಚರಣೆಗಿಳಿದ ಮೇಯರ್

    ಬೆಂಗಳೂರು: ನಿನ್ನೆ ಭಿತ್ತಿ ಪತ್ರ ತೆರವು ಮತ್ತು ಗೋಡೆ ಬರಹ ಅಳಿಸುವ ಅಭಿಯಾನಕ್ಕೆ ಚಾಲನೆ ನೀಡಿದ್ದ ಮೇಯರ್, ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಫ್ಲೆಕ್ಸ್, ಭಿತ್ತಿಪತ್ರಗಳನ್ನು ತೆರವುಗೊಳಿಸಲು ಹಲಸೂರು ಮೆಟ್ರೋ ನಿಲ್ದಾಣ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

    60% ಕನ್ನಡದಲ್ಲೇ ಮಾಹಿತಿಗಳನ್ನು ನಮೂದಿಸಬೇಕು ಎಂಬ ನಿಯಮವಿದ್ದರೂ ಪಾಲನೆ ಮಾಡಿಲ್ಲ. ಫ್ಲೆಕ್ಸ್, ಭಿತ್ತಿಪತ್ರಗಳನ್ನ ತೆಗೆಯುವಂತೆ ಈಗಾಗಲೇ ಸೂಚನೆ ನೀಡಿದ್ದರೂ ಪಾಲಿಸಿಲ್ಲ. ಸರಿಯಾಗಿ ಕೆಲಸ ಮಾಡದಿದ್ದರೆ ಕೆಲಸದಿಂದ ಹೊರಹಾಕಬೇಕಾಗುತ್ತದೆ ಎಂದು ಜೀವನ್ ಭಿಮ್ ನಗರ ವಾರ್ಡ್ ಎಇಇ ಪ್ರಸನ್ನ ಮತ್ತು ಹೊಯ್ಸಳನಗರ ವಾರ್ಡ್ ಅಧಿಕಾರಿಗಳಿಗೆ ಮೇಯರ್ ಸಂಪತ್ ರಾಜ್ ತರಾಟೆ ತೆಗೆದುಕೊಂಡಿದ್ದಾರೆ. ಇದನ್ನು ಓದಿ: ಗಮನಿಸಿ, ಬೆಂಗ್ಳೂರಲ್ಲಿ ಫ್ಲೆಕ್ಸ್ ಹಾಕಿದ್ರೆ ಜೈಲು ಶಿಕ್ಷೆ! – ಬಿಬಿಎಂಪಿ ಪ್ರಕಟಣೆಯಲ್ಲಿ ಏನಿದೆ?

    ರಸ್ತೆಯಲ್ಲಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುತ್ತಿದ್ದವನಿಗೆ ಮೇಯರ್ ಬುದ್ಧಿಮಾತು ಹೇಳಿ ಪ್ಲಾಸ್ಟಿಕ್ ಧ್ವಜ ಮಾರಬೇಡ. ಕೇವಲ ಬಟ್ಟೆಯಲ್ಲಿ ತಯಾರಿಸಿದ ಧ್ವಜಗಳನ್ನ ಮಾತ್ರ ಮಾರಾಟ ಮಾಡು. ಇನ್ಮುಂದೆ ಪ್ಲಾಸ್ಟಿಕ್ ಬಳಸಬೇಡ ಎಂದು ರಸ್ತೆಯಲ್ಲಿ ಧ್ವಜ ಮಾರುತ್ತಿದ್ದವನಿಗೆ ಮೇಯರ್ ಸೂಚನೆ ನೀಡಿದರು. ಈ ವೇಳೆ ಮೇಯರ್ ಧ್ವಜಗಳನ್ನ ಕಿತ್ತುಕೊಳ್ಳಲು ಮುಂದಾದ ಅಧಿಕಾರಿಗಳನ್ನು ತಡೆದು ಹೇ ಬಿಡಿ, ಈ ಸಲ ಬಿಟ್ಟುಬಿಡಿ. ಇನ್ಮುಂದೆ ಮಾರಾಟ ಮಾಡಬೇಡ ಎಂದರು. ಇದನ್ನು ಓದಿ: ಸಿಲಿಕಾನ್ ಸಿಟಿಯಲ್ಲಿ ಫ್ಲೆಕ್ಸ್ ಬ್ಯಾನರ್ ಗೆ ನಿರ್ಬಂಧ- ಮದುವೆ, ಸಭೆ ಸಮಾರಂಭಕ್ಕೂ ತಟ್ಟಿದ ಬಿಸಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸಿಲಿಕಾನ್ ಸಿಟಿಯಲ್ಲಿ ಫ್ಲೆಕ್ಸ್ ಬ್ಯಾನರ್ ಗೆ ನಿರ್ಬಂಧ- ಮದುವೆ, ಸಭೆ ಸಮಾರಂಭಕ್ಕೂ ತಟ್ಟಿದ ಬಿಸಿ

    ಸಿಲಿಕಾನ್ ಸಿಟಿಯಲ್ಲಿ ಫ್ಲೆಕ್ಸ್ ಬ್ಯಾನರ್ ಗೆ ನಿರ್ಬಂಧ- ಮದುವೆ, ಸಭೆ ಸಮಾರಂಭಕ್ಕೂ ತಟ್ಟಿದ ಬಿಸಿ

    – ಶಾಂಪಿಂಗ್ ಮಾಲ್, ದೇವಸ್ಥಾನಕ್ಕೂ ನಿರ್ಬಂಧ

    ಬೆಂಗಳೂರು: ಫ್ಲೆಕ್ಸ್, ಬ್ಯಾನರ್, ಪೋಸ್ಟರ್ ನಿಷೇಧ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಮಾತ್ರವಲ್ಲ, ಕಾರ್ಯಕ್ರಮಗಳಲ್ಲೂ ಬಳಸದಂತೆ ಹೈಕೋರ್ಟ್ ಖಡಕ್ ಎಚ್ಚರಿಕೆಯನ್ನು ನೀಡಿದೆ.

    ಫ್ಲೆಕ್ಸ್ ನಿಷೇಧದ ಬಿಸಿ ಈಗ ಮದುವೆ, ಸಭೆ ಮತ್ತು ಸಮಾರಂಭಕ್ಕೂ ತಟ್ಟಿದೆ. ಯಾವುದೇ ಕಾರ್ಯಕ್ರಮಗಳಲ್ಲೂ, ದೇವಸ್ಥಾನ, ಹೋಟೆಲ್ ಮತ್ತು ಮಾಲ್‍ಗಳಲ್ಲೂ ಜಾಹೀರಾತು, ಫ್ಲೆಕ್ಸ್ ಗಳನ್ನು ಹಾಕುವಂತಿಲ್ಲ ಎಂದು ಸಾರ್ವಜನಿಕರಿಗೆ ಮತ್ತು ಸಂಘಟನೆಗಳಿಗೆ ಪಾಲಿಕೆ ಸೂಚಿಸಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಪರಮೇಶ್ವರ್ ಗೆ ಶುಭಕೋರಿ ಬ್ಯಾನರ್- ಬೆಂಬಲಿಗರ ವಿರುದ್ಧ ಎಫ್‍ಐಆರ್

    ಫೆಕ್ಸ್ ನಿಷೇಧ ಕುರಿತಂತೆ ಬೆಂಗಳೂರು ನಗರದಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಲಾಗಿದ್ದು, ಅದರಂತೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ಮಹಾಪೌರರು ಹಾಗೂ ಆಯುಕ್ತರು ಸೂಚಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಬೆಂಗ್ಳೂರಿನಲ್ಲಿ ಭಿತ್ತಿ ಪತ್ರ ಅಂಟಿಸಿದರೆ 1 ಲಕ್ಷ ದಂಡ!

    ಎಲ್ಲೆಲ್ಲಿ ಹಾಕಬಾರದು ಫ್ಲೆಕ್ಸ್!
    1) ಮದುವೆ ಕಾರ್ಯಕ್ರಮಗಳಲ್ಲಿ
    2) ಮದುವೆ ಸಭಾಂಗಣದ ಒಳಗೆ
    3) ಒಳಾಂಗಣ ಸಭೆಗಳ ಬ್ಯಾಕ್ ಡ್ರಾಪ್ ಗಳಲ್ಲಿ
    4) ನಗರದ ಮಾಲ್ ಗಳಲ್ಲಿ
    5) ದೇವಸ್ಥಾನ ಕಾರ್ಯಕ್ರಮ ಗಳಲ್ಲಿ
    6) ಬಸ್ ಶೆಲ್ಟರ್ ಗಳಲ್ಲಿ
    7) ಸ್ಕೈ ವಾಕ್ ಗಳಲ್ಲಿ
    8) ಯಾವುದೇ ಸಭೆಗಳಲ್ಲಿ/ ಖಾಸಗಿ ಹೋಟೆಲ್ ಸಭಾಂಗಣದಲ್ಲಿ
    9) ಶಾಪಿಂಗ್ ಮಾಲ್

    ಇನ್ನಿತ್ತರೆ ಯಾವುದೇ ಸ್ಥಳಗಳಲ್ಲಿ ಕಡ್ಡಾಯವಾಗಿ ನಿಷೇಧಿಸಿದೆ. ಅದರಂತೆ ಜಾಗೃತಿ ಮೂಡಿಸುವ ಹಾಗೂ ಶಿಸ್ತು ಕ್ರಮವಹಿಸುವ ಬಗ್ಗೆ ಮಹಾಪೌರರು ಹಾಗೂ ಆಯುಕ್ತರು ಸೂಚಿಸಿದ್ದಾರೆ.

    ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಗಳ ಹಾವಳಿ ಹೆಚ್ಚಾಗಿತ್ತು. ಇದರಿಂದ ಫ್ಲೆಕ್ಸ್, ಬ್ಯಾನರ್ ಮತ್ತು ಪೋಸ್ಟರ್ ಗಳನ್ನು ತಕ್ಷಣ ತೆರವು ಮಾಡುವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಬಿಬಿಎಂಪಿ ಅವರು ತಕ್ಷಣ ನಗರದಲ್ಲಿದ್ದ ಎಲ್ಲ ಫ್ಲೆಕ್ಸ್ ಗಳನ್ನು ತೆರವು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಇನ್ಮುಂದೆ ಬೆಂಗ್ಳೂರಿನಲ್ಲಿ ಭಿತ್ತಿ ಪತ್ರ ಅಂಟಿಸಿದರೆ 1 ಲಕ್ಷ ದಂಡ!

    ಇನ್ಮುಂದೆ ಬೆಂಗ್ಳೂರಿನಲ್ಲಿ ಭಿತ್ತಿ ಪತ್ರ ಅಂಟಿಸಿದರೆ 1 ಲಕ್ಷ ದಂಡ!

    ಬೆಂಗಳೂರು: ಇನ್ಮುಂದೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭಿತ್ತಿ ಪತ್ರವನ್ನು ಅಂಟಿಸಿದರೆ 1 ಲಕ್ಷ ರೂ. ದಂಡ ಮತ್ತು ಕ್ರಿಮಿನಲ್ ಕೇಸ್ ಬೀಳಲಿದೆ.

    ರಾಜಧಾನಿ ಬೆಂಗಳೂರು ನಗರದಲ್ಲಿ ನೈರ್ಮಲ್ಯತೆ ಮತ್ತು ಸೌಂದರ್ಯದ ದೃಷ್ಟಿಯಿಂದ ಫ್ಲೆಕ್ಸ್, ಬ್ಯಾನರ್‍ಗಳ ಮೇಲೆ ಹೈಕೋರ್ಟ್ ಪ್ರಹಾರ ನಡೆಸಿದ ಬಳಿಕ ಬೆಂಗಳೂರು ಮಹಾನಗರ ಪಾಲಿಕೆ ಮತ್ತಷ್ಟು ಎಚ್ಚೆತ್ತುಕೊಂಡಿದೆ.

    2015ರಲ್ಲೇ ಫ್ಲೆಕ್ಸ್, ಬ್ಯಾನರ್‍ಗಳನ್ನ ಪರಿಸರ ಇಲಾಖೆ ಬ್ಯಾನ್ ಮಾಡಿದೆ. ಆದಾಗ್ಯೂ, ಅನಧಿಕೃತವಾಗಿ ಫ್ಲೆಕ್ಸ್, ಭಿತ್ತಿಚಿತ್ರಗಳನ್ನ ಹಾಕಲಾಗ್ತಿದೆ. ಹಾಗಾಗಿ, ಅಂಥವರ ಮೇಲೆ ಕ್ರಮ ಕಠಿಣ ಕ್ರಮ ಕೈಗೊಳ್ಳಲು ಪಾಲಿಕೆ ನಿರ್ಧರಿಸಿದೆ. ಇಂದು ನಡೆದ ಬಿಬಿಎಂಪಿಯಲ್ಲಿ ವಿಶೇಷ ಕೌನ್ಸಿಲ್ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

    ಯಾವೆಲ್ಲ ನಿರ್ಣಯ ಕೈಗೊಳ್ಳಲಾಗಿದೆ?
    ಮರ, ಗೋಡೆಗಳ ಮೇಲೆ ಭಿತ್ತಿಪತ್ರಗಳನ್ನು ಅಂಟಿಸುವಂತಿಲ್ಲ. ಭಿತ್ತಿ ಪತ್ರ ಅಂಟಿಸಿದ್ರೆ 1 ಲಕ್ಷವರೆಗೆ ದಂಡ, ಕ್ರಿಮಿನಲ್ ಕೇಸ್ ದಾಖಲು, ಭಿತ್ತಿಪತ್ರದ ಜೊತೆಗೆ ಎಲೆಕ್ಟ್ರಿಕ್ ಸೀರಿಯಲ್ ಸೆಟ್ ಇದ್ದರೂ ದಂಡ ಹಾಕಲಾಗುತ್ತದೆ.

    ಖಾಸಗಿ ಜಾಗದಲ್ಲಿನ ಹೋರ್ಡಿಂಗ್ಸ್‍ಗಳು ಕಾನೂನಿಗೆ ವಿರುದ್ಧವಾಗಿದ್ದು ಇವುಗಳನ್ನು ಹಾಕಿದವರೇ ಆದಷ್ಟು ಬೇಗ ತೆಗೆಸಬೇಕು. ಮುಂದಿನ 15 ದಿನಗಳಲ್ಲಿ ಹೋರ್ಡಿಂಗ್ಸ್, ಫ್ಲೆಕ್ಸ್ ತೆರವುಗೊಳಿಸದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸುವ ನಿರ್ಧಾರ ಕೈಗೊಳ್ಳಲಾಗಿದೆ.

    ಬೆಂಗಳೂರಿನಲ್ಲಿ ಇರುವ ಯಾವುದೇ ಹೋರ್ಡಿಂಗ್ಸ್ ಅಧಿಕೃತವಲ್ಲ. ಹೋರ್ಡಿಂಗ್ಸ್ ತೆಗೆಸದಿದ್ದರೆ 6 ತಿಂಗಳವರೆಗೆ ಜೈಲು ಅಷ್ಟೇ ಅಲ್ಲದೇ ಮುದ್ರಣಾಕಾರರು, ಪೋಸ್ಟರ್‍ನಲ್ಲಿ ಇರುವವರ ಮೇಲೆ ಕೇಸ್ ಹಾಕಲಾಗುತ್ತದೆ. ಆದರೆ ಬಸ್ ಶೆಲ್ಟರ್‍ನಲ್ಲಿ ಹಾಕಿರುವ ಹೋಲ್ಡಿಂಗ್ಸ್‍ಗೆ ಪಾಲಿಕೆಯಿಂದ ಅನುಮತಿ ಇದೆ.

    https://www.youtube.com/watch?v=3ptmTVS1Cbs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಪರಮೇಶ್ವರ್ ಗೆ ಶುಭಕೋರಿ ಬ್ಯಾನರ್- ಬೆಂಬಲಿಗರ ವಿರುದ್ಧ ಎಫ್‍ಐಆರ್

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಪರಮೇಶ್ವರ್ ಗೆ ಶುಭಕೋರಿ ಬ್ಯಾನರ್- ಬೆಂಬಲಿಗರ ವಿರುದ್ಧ ಎಫ್‍ಐಆರ್

    ಬೆಂಗಳೂರು: ಉಪಮುಖ್ಯಮಂತ್ರಿ ಪರಮೇಶ್ವರ್ ಬೆಂಬಲಿಗರಿಂದ ಫ್ಲೆಕ್ಸ್ ಅಳವಡಿಕೆ ವಿಚಾರವಾಗಿ ಇಂದು ಪಬ್ಲಿಕ್ ಟಿವಿ ವರದಿ ಬಿತ್ತರಿಸಿತ್ತು. ಈ ವರದಿ ಬಳಿಕ ಎಚ್ಚೆತ್ತ ಪರಮೇಶ್ವರ್, ಫ್ಲೆಕ್ಸ್ ಹಾಕಿದ ಬೆಂಬಲಿಗರ ಮೇಲೆ ಎಫ್‍ಐಆರ್ ಹಾಕುವಂತೆ ಸೂಚಿಸಿದ್ದಾರೆ.

    ಪರಮೇಶ್ವರ್ ಹುಟ್ಟುಹಬ್ಬದ ಹಿನ್ನೆಲೆ ಬೆಂಬಲಿಗರು ಶುಭಕೋರಿ ಸಿಎಂ ಗೃಹಕಚೇರಿ ಕೃಷ್ಣಾದ ಎದುರೇ ಬ್ಯಾನರ್, ಫ್ಲೆಕ್ಸ್ ಹಾಕಿದ್ದರು. ಈ ಕುರಿತು ಪಬ್ಲಿಕ್ ಟಿವಿಯಲ್ಲಿ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಪರಮೇಶ್ವರ್, ನನ್ನ ಬೆಂಬಲಿಗರ ಮೇಲೆ ಎಫ್‍ಐಆರ್ ಹಾಕಿ ಅಂತಾ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

    ಬಿಬಿಎಂಪಿ ಸಿಎಂ ಗೃಹಕಚೇರಿ ಕೃಷ್ಣಾ ಎದುರು ರಾರಾಜಿಸುತ್ತಿದ್ದ ಫ್ಲೆಕ್ಸ್ ಗಳನ್ನು ತೆರವುಗೊಳಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಡಿಸಿಎಂ ಪರಮೇಶ್ವರ್ ಗೆ ಹುಟ್ಟುಹಬ್ಬದ ಶುಭ ಕೋರಿ ಫ್ಲೆಕ್ಸ್ ಗಳನ್ನು ಅಳವಡಿಸಿದ್ದರು. ಫ್ಲೆಕ್ಸ್ ಅಳವಡಿಸಿದ್ದ ಸರ್ಕಾರಿ ನೌಕರರ ಸಂಘದವರ ಮೇಲೆ ದೂರು ದಾಖಲಿಸಲು ನಿರ್ಧರಿಸಲಾಗಿದೆ.

    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನಂಘದ ಅಧ್ಯಕ್ಷ ಎಚ್.ಕೆ ರಾಮು, ಹಿರಿಯ ಉಪಾಧ್ಯಕ್ಷ ಕೆಜಿ ಆಂಜಿನಪ್ಪ, ರಾಜ್ಯ ಪರಿಷತ್ ಸದಸ್ಯ ಮಂಜುನಾಥ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದೂರು ದಾಖಲಿಸಲಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಎಇಇ ಜಯಸಿಂಹ ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿದ ಡಾ. ಜಿ. ಪರಮೇಶ್ವರ್, “ಯಾವುದೇ ಕಾರಣಕ್ಕೂ ಯಾವುದೇ ಸಮಾರಂಭಕ್ಕೂ ಫ್ಲೆಕ್ಸ್ ಗಳನ್ನು ಅಳವಡಿಸಿ ನಗರವನ್ನು ಹಾಳು ಮಾಡುವಂತಿಲ್ಲ. ಖಂಡಿತವಾಗಿಯೂ ಇದು ನನ್ನ ಹುಟ್ಟುಹಬ್ಬವಲ್ಲ. ನನ್ನ ಹುಟ್ಟುಹಬ್ಬ ಆಚರಿಸದಂತೆ ನಾನು ನನ್ನ ಹಿತೈಷಿಗಳ ಹತ್ತಿರ ಕೇಳಿಕೊಂಡಿದ್ದೇನೆ. ಎಲ್ಲರು ಫ್ಲೆಕ್ಸ್ ಗಳನ್ನು ಅಳವಡಿಸುವುದನ್ನು ನಿಲ್ಲಿಸಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ನಗರವನ್ನು ಸ್ವಚ್ಛವಾಗಿ ಹಾಗೂ ಸುಂದರವಾಗಿ ಇಡೋಣ” ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಒಂದೆಡೆ ಫ್ಲೆಕ್ಸ್ ತೆರವು, ಮತ್ತೊಂದೆಡೆ ಅಳವಡಿಕೆ- ಸಚಿವರ ಬೆಂಬಲಿಗರಿಗಿಲ್ಲ ಯಾವುದೇ ರೂಲ್ಸ್

    ಒಂದೆಡೆ ಫ್ಲೆಕ್ಸ್ ತೆರವು, ಮತ್ತೊಂದೆಡೆ ಅಳವಡಿಕೆ- ಸಚಿವರ ಬೆಂಬಲಿಗರಿಗಿಲ್ಲ ಯಾವುದೇ ರೂಲ್ಸ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದೂ ಫ್ಲೆಕ್ಸ್ ಇರಕೂಡದು ಅಂತ ಕೋರ್ಟ್ ಖಡಕ್ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಇದೀಗ ಡಿಸಿಎಂ ಪರಮೇಶ್ವರ್ ಅವರ ಹುಟ್ಟುಹಬ್ಬಕ್ಕೆ ಶುಭಕೋರಿರುವ ಫ್ಲೆಕ್ಸ್ ಗಳು ಬೆಂಗಳೂರಿನಲ್ಲಿ ರಾರಾಜಿಸುತ್ತಿವೆ.

    ಬೆಂಗಳೂರನ್ನು ಫ್ಲೆಕ್ಸ್ ಫ್ರೀ ಮಾಡಬೇಕೆಂದು ಸಿಎಂ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ. ಹೈಕೋರ್ಟ್ ಆದೇಶವನ್ನು ಪರಿಣಾಮಕಾರಿಯಾಗಿ ಫಾಲೋ ಮಾಡಬೇಕು ಅಂತ ಡಿಸಿಎಂ ಹೇಳಿದ್ದಾರೆ. ಆದರೆ ವಿಚಿತ್ರ ಅಂದ್ರೆ ಡಿಸಿಎಂ ಪರಮೇಶ್ವರ್ ಅವರದ್ದೇ ಫ್ಲೆಕ್ಸ್ ಗಳು ರಾರಾಜಿಸ್ತಿವೆ.

    ನಗರಾಭಿವೃದ್ಧಿ ಸಚಿವ, ಉಪಮುಖ್ಯಮಂತ್ರಿ ಅವರ ಬೆಂಬಲಿಗರಿಂದಲೇ ರೂಲ್ಸ್ ಬ್ರೇಕ್ ಆಗಿದ್ದು, ಡಾ. ಜಿ ಪರಮೇಶ್ವರ್ ಫಾಲೋವರ್ಸ್‍ನಿಂದ ಹೈಕೋರ್ಟ್ ಆದೇಶಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇಂದು ಡಿಸಿಎಂ ಪರಮೇಶ್ವರ್ ಅವರ ಹುಟ್ಟುಹಬ್ಬವಾಗಿದ್ದು, ರೇಸ್ ಕೋರ್ಸ್ ರಸ್ತೆಯಲ್ಲಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಫ್ಲೆಕ್ಸ್ ಗಳನ್ನು ಆಳವಡಿಸಿದ್ದಾರೆ. ಇದನ್ನೂ ಓದಿ: ಫ್ಲೆಕ್ಸ್ ತೆರವು ವೇಳೆ ಹಲ್ಲೆಗೈದ ನಾಲ್ವರ ಬಂಧನ

    ಕೆಪಿಸಿಸಿ ಕಾರ್ಯದರ್ಶಿ ಪದ್ಮನಾಭ್ ಶುಭಕೋರಿ ಫ್ಲೆಕ್ಸ್ ಗಳನ್ನು ಹಾಕಿದ್ದಾರೆ. ಒಂದೆಡೆ ಪಾಲಿಕೆಯಿಂದ ಫ್ಲೆಕ್ಸ್ ತೆರವು ಕಾರ್ಯಾಚರಣೆ ಮುಂದುವರೆದರೆ, ಮತ್ತೊಂದೆಡೆ ಪರಮೇಶ್ವರ್ ಬೆಂಬಲಿಗರಿಂದ ಫ್ಲೆಕ್ಸ್ ಆಳವಡಿಕೆ ಮಾಡಲಾಗುತ್ತಿದೆ. ಸಿಎಂ ಗೃಹಕಚೇರಿ ಕೃಷ್ಣಾ ಎದುರು ಫ್ಲೆಕ್ಸ್ ಗಳು ರಾರಾಜಿಸುತ್ತಿದೆ. ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಸರ್ಕಾರಿ ನೌಕರರ ಸಂಘದಿಂದ ಫ್ಲೆಕ್ಸ್ ಗಳನ್ನು ಆಳವಡಿಸಿಲಾಗಿದೆ. ಸಿಎಂ ಹಾಗೂ ಪರಮೇಶ್ವರ್ ಫೋಟೋ ಹಾಕಿ ಫ್ಲೆಕ್ಸ್ ಅಳವಡಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಈ ಬಗ್ಗೆ ವರದಿ ಮಾಡಿದ್ದು, ಈ ಬೆನ್ನಲ್ಲೇ ರೇಸ್ ಕೋರ್ಸ್ ರಸ್ತೆಯಲ್ಲಿದ್ದ ಪರಮೇಶ್ವರ್ ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದ ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಫ್ಲೆಕ್ಸ್ ತೆರವು ವೇಳೆ ಹಲ್ಲೆಗೈದ ನಾಲ್ವರ ಬಂಧನ

    ಫ್ಲೆಕ್ಸ್ ತೆರವು ವೇಳೆ ಹಲ್ಲೆಗೈದ ನಾಲ್ವರ ಬಂಧನ

    ಬೆಂಗಳೂರು: ಮಹದೇವಪುರ ವಲಯದ ಟಿನ್ ಫ್ಯಾಕ್ಟರಿ ಬಳಿ ಫ್ಲೆಕ್ಸ್ ಹಾಗೂ ಬ್ಯಾನರ್ ತೆರವು ಮಾಡುತ್ತಿದ್ದ ಬಿಬಿಎಂಪಿ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ಟಿನ್ ಫ್ಯಾಕ್ಟರಿ ಸಮೀಪದ ಉದಯನಗರ ನಿವಾಸಿಗಳಾದ ರಾಜೇಂದ್ರ, ಸಿಮ್ಸನ್, ಕಮಲನಾಥ್, ಸೂರ್ಯ ಬಂಧಿತ ಆರೋಪಿಗಳು. ಹೈಕೋರ್ಟ್ ಆದೇಶದಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಆಯುಕ್ತರು ಎಲ್ಲ ಸಿಬ್ಬಂದಿಗೆ ಅನಧಿಕೃತ ಬ್ಯಾನರ್ ಹಾಗೂ ಫ್ಲೆಕ್ಸ್ ತೆರವು ಮಾಡುವಂತೆ ಆದೇಶ ನೀಡಿದ್ದರು.

    ಗುರುವಾರವೂ ಬಿಬಿಎಂಪಿ ಸಿಬ್ಬಂದಿ ಫ್ಲೆಕ್ಸ್ ಹಾಗೂ ಬ್ಯಾನರ್ ತೆರವು ಕಾರ್ಯ ಮುಂದುವರಿಸಿದ್ದರು. ಟಿನ್ ಫ್ಯಾಕ್ಟರಿ ಬಳಿ ಹಾಕಲಾಗಿದ್ದ ಫ್ಲೆಕ್ಸ್ ಹಾಗೂ ಬ್ಯಾನರ್‍ಗಳನ್ನು ತೆಗೆಯುತ್ತಿದ್ದಾಗ ಆರೋಪಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಹೆಚ್.ಎ.ಎಲ್ ಸಹಾಯಕ ಕಂದಾಯ ಅಧಿಕಾರಿ ಭಟ್ಟಾಚಾರ್ಯ ಅವರ ಮೇಲೆ ಹಲ್ಲೆ ಮಾಡಿ, ಆರೋಪಿಗಳು ಪರಾರಿಯಾಗಿದ್ದರು.

    ಅಧಿಕಾರಿ ಭಟ್ಟಾಚಾರ್ಯ ಅವರು ನಿನ್ನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮೂರ್ತಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳ ಪತ್ತೆ ಬಲೆ ಬೀಸಿದ್ದ ಪೊಲೀಸರಿಗೆ ಇಂದು ನಾಲ್ವರು ಸಿಕ್ಕಿದ್ದು, ಪರಾರಿಯಾಗಿರುವ ಸಂತೋಷ್, ಸರವಣ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಫ್ಲೆಕ್ಸ್ ಹಾಕಿದ್ರೆ ಜೈಲು ಶಿಕ್ಷೆ!

  • ಶಾಸಕ ಬೈರತಿ ಬೆಂಬಲಿಗರಿಂದ ಮತ್ತೆ ಗೂಂಡಾಗಿರಿ – ಫ್ಲೆಕ್ಸ್ ತೆರವು ವೇಳೆ ಬಿಬಿಎಂಪಿ ಸಿಬ್ಬಂದಿಗೆ ಥಳಿತ

    ಶಾಸಕ ಬೈರತಿ ಬೆಂಬಲಿಗರಿಂದ ಮತ್ತೆ ಗೂಂಡಾಗಿರಿ – ಫ್ಲೆಕ್ಸ್ ತೆರವು ವೇಳೆ ಬಿಬಿಎಂಪಿ ಸಿಬ್ಬಂದಿಗೆ ಥಳಿತ

    ಬೆಂಗಳೂರು: ಹೈಕೋರ್ಟ್ ಆದೇಶದ ಅನ್ವಯ ನಗರದ ವಿವಿಧಕಡೆ ಬಿಬಿಎಂಪಿ ಸಿಬ್ಬಂದಿ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಕೆ.ಆರ್ ಪುರಂ ಕಾಂಗ್ರೆಸ್ ಶಾಸಕ ಬೈರತಿ ಬಸವರಾಜ್ ಬೆಂಬಲಿಗರು ಗೂಂಡಾಗಿರಿ ನಡೆಸಿದ್ದಾರೆ.

    ನಗರದ ಪೈ ಲೇಔಟ್ ಬಳಿ ಬಿಬಿಎಂಪಿ ಕಾರ್ಮಿಕರಾದ ಮನು, ವಿಶ್ವ, ಚಂದನ್ ಫ್ಲೆಕ್ಸ್ ತೆರವು ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಶಾಸಕ ಬೈರತಿ ಬೆಂಬಲಿಗ ಸಂತೋಷ್ ರೆಡ್ಡಿ ಹಲ್ಲೆ ನಡೆಸಿದ್ದಾನೆ.

    ನ್ಯಾಯಾಲಯದ ಆದೇಶಕ್ಕೂ ಬೆಲೆ ನೀಡದ ಕಾಂಗ್ರೆಸ್ ಪಕ್ಷದ ಶಾಸಕರ ಪ್ರಭಾವಿ ಬೆಂಬಲಿಗರು ಬಿಬಿಎಂಪಿ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ತೆರವು ಮಾಡದಂತೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋರ್ಟ್ ಆದೇಶವಿದ್ದರೂ ಸಹ ಫ್ಲೆಕ್ಸ್ ತೆರವು ಮಾಡಲು ಸಿಬ್ಬಂದಿ ಹೆದರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಬಿಜೆಪಿ ಮುಖಂಡ ಕಟ್ಟಾ ಸುಬ್ರಮಣ್ಯನಾಯ್ಡು ಮನೆ ಸುತ್ತಮುತ್ತ ಫೆಕ್ಸ್ ಗಳಿದ್ದರೂ ಅದನ್ನು ತೆಗೆದಿಲ್ಲ. ನಗರದ ಸದಾಶಿವನಗರದಲ್ಲಿರುವ ಕಟ್ಟಾ ಸುಬ್ರಮಣ್ಯನಾಯ್ಡು ಮನೆ ಬಳಿ ಇರುವ ಫ್ಲೆಕ್ಸ್ ಗಳನ್ನು ತೆರವು ಮಾಡುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಇದನ್ನೂ ಓದಿ: ಬೆಂಗ್ಳೂರಲ್ಲಿ ಫ್ಲೆಕ್ಸ್ ಹಾಕಿದ್ರೆ ಜೈಲು? ಬಿಬಿಎಂಪಿ ದಿಢೀರ್ ಕಾರ್ಯಾಚರಣೆ ನಡೆಸ್ತಿರೋದು ಯಾಕೆ?  

    https://www.youtube.com/watch?v=QSxzTWxaPjo

  • ಗಮನಿಸಿ, ಬೆಂಗ್ಳೂರಲ್ಲಿ ಫ್ಲೆಕ್ಸ್ ಹಾಕಿದ್ರೆ ಜೈಲು ಶಿಕ್ಷೆ! – ಬಿಬಿಎಂಪಿ ಪ್ರಕಟಣೆಯಲ್ಲಿ ಏನಿದೆ?

    ಗಮನಿಸಿ, ಬೆಂಗ್ಳೂರಲ್ಲಿ ಫ್ಲೆಕ್ಸ್ ಹಾಕಿದ್ರೆ ಜೈಲು ಶಿಕ್ಷೆ! – ಬಿಬಿಎಂಪಿ ಪ್ರಕಟಣೆಯಲ್ಲಿ ಏನಿದೆ?

    ಬೆಂಗಳೂರು: ಇನ್ನು ಮುಂದೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಹಾಕಿದರೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ನಗರದಲ್ಲಿ ಯಾರಾದರೂ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕಿದರೆ ಅವರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲು ಮಾಡಿ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.

    ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳನ್ನು ಹಾಕಿದ್ದು, ಅವುಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ನೀಡಿದ್ದ ಮೌಖಿಕ ಖಡಕ್ ಆದೇಶಕ್ಕೆ ಬಿಬಿಎಂಪಿ ತತ್ತರಿಸಿ ಕೊನೆಗೂ ಎಚ್ಚೆತ್ತುಕೊಂಡಿದೆ.

    ಕೆಲವು ಸಾರ್ವಜನಿಕ ಸಭೆ, ಸಮಾರಂಭಗಳ ವೇಳೆ ಬಾವುಟ, ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ಬಳಕೆ ಮಾಡಲಾಗುತ್ತದೆ. ಹೀಗಾಗಿ ವಿವಿಧ ರಾಜಕೀಯ ಪಕ್ಷಗಳಿಗೂ ಆಯುಕ್ತರು, ಅನಧಿಕೃತವಾಗಿ ಬ್ಯಾನರ್ ಹಾಗೂ ಫ್ಲೆಕ್ಸ್ ಬಳಕೆ ಮಾಡಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿ ನಡೆದುಕೊಂಡರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಪತ್ರದ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಶಿಕ್ಷೆ ಏನು?
    ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976 ಮತ್ತು ಕರ್ನಾಟಕ ಓಪನ್ ಪ್ಲೇಸಸ್ (ಪ್ರಿವೆನ್ಶೆನ್ ಆಫ್ ಡಿಸ್‍ಫಿಗರ್ ಮೆಂಟ್) ಕಾಯ್ದೆ 1981ರ ಅಡಿಯಲ್ಲಿ ಕ್ರಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಹೀಗಾಗಿ ತಪ್ಪಿತಸ್ಥರಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಕೆಲವು ಪ್ರಕರಣದಲ್ಲಿ ಜೈಲು ಶಿಕ್ಷಯ ಜೊತೆಗೆ ದಂಡ ವಿಧಿಸಲಾಗುತ್ತದೆ. ಜಾಹಿರಾತುದಾರರು, ಪ್ರಕಟಣೆಗಾರರು, ಮುದ್ರಣಗಾರರು, ಭಾವಚಿತ್ರವಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

    ಬುಧವಾರ ಹೈಕೋರ್ಟ್ ನಲ್ಲಿ ಏನಾಯ್ತು?
    ಬುಧವಾರ ಬೆಳಗ್ಗೆ ಕಲಾಪಕ್ಕೂ ಮುನ್ನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು ಬಿಬಿಎಂಪಿ ವಕೀಲರ ಮೂಲಕ ಆಯುಕ್ತರಿಗೆ ಮೌಖಿಕವಾಗಿ ಆದೇಶ ಹೊರಡಿಸಿದ್ದರು. ವಕೀಲರು ಫೋನ್ ನರೆ ಮೂಲಕ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರ ಗಮನಕ್ಕೆ ತಂದಿದ್ದರು.

    ಹೈಕೋರ್ಟ್ ಆದೇಶದಿಂದ ಮಂಜುನಾಥ್ ಪ್ರಸಾದ್ ಎಲ್ಲ ಅಧಿಕಾರಿಗಳಿಗೆ ಫೋನ್ ಕರೆ ಮಾಡಿ, ಬ್ಯಾನರ್ ಹಾಗೂ ಫ್ಲೆಕ್ಸ್ ತುರ್ತು ತೆರವುಗೊಳಿಸಿ, ಅವುಗಳ ಫೋಟೋವನ್ನು ವ್ಯಾಟ್ಸಪ್ ಮೂಲಕ ತಮ್ಮ ಮೊಬೈಲಿಗೆ ಕಳುಹಿಸುವಂತೆ ಆದೇಶಿಸಿದ್ದರು. ಅಷ್ಟೇ ಅಲ್ಲದೆ ಮಧ್ಯಾಹ್ನ ಖುದ್ದು ಕೋರ್ಟ್‍ಗೆ ಹಾಜರಾಗಿದ್ದರು. ನಂತರದ ವಿಚಾರಣೆಯಲ್ಲಿ ತೆರವು ಕಾರ್ಯದ ವರದಿಯನ್ನು ಬಿಬಿಎಂಪಿ ಪರ ವಕೀಲ ಕೋರ್ಟ್ ಗೆ ಒಪ್ಪಿಸಿದರು.

    ಬಿಬಿಎಂಪಿ ಎಲ್ಲ ಸಿಬ್ಬಂದಿ ಬುಧವಾರ ಒಂದು ದಿನದ ಎಲ್ಲಾ ಕೆಲಸಗಳನ್ನು ಪಕ್ಕಕ್ಕೆ ಸರಿಸಿ ಕೇವಲ ಬ್ಯಾನರ್ ಹಾಗೂ ಫ್ಲೆಕ್ಸ್ ತೆರವು ಕಾರ್ಯದಲ್ಲಿ ತೊಡಗಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ 5 ಸಾವಿರಕ್ಕೂ ಹೆಚ್ಚು ಅನಧಿಕೃತ ಬ್ಯಾನರ್ ಹಾಗೂ ಫ್ಲೆಕ್ಸ್ ತೆರವು ಮಾಡಿದ್ದರು. ಕೆಲವು ಪ್ರದೇಶಗಳಲ್ಲಿ ತಡರಾತ್ರಿಯವರೆಗೂ ತೆರವು ಕಾರ್ಯ ನಡೆದಿತ್ತು.

    ತಡರಾತ್ರಿವರೆಗೆ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಅವರ ಜನ್ಮದಿನ ಶುಭಾಶಯದ ಕೋರಿ ಹಾಕಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್‍ಗಳನ್ನು ಬಿಡಲಾಗಿತ್ತು.

    ಎಲ್ಲ ವಿಭಾಗದ ಜಂಟಿ ಆಯುಕ್ತರು, ಮುಖ್ಯ ಎಂಜನಿಯರ್‍ಗಳು ಸೇರಿದಂತೆ ಸೂಪರಿಂಟೆಂಡಿಂಗ್, ಕಾರ್ಯಪಾಲಕ ಹಾಗೂ ಸಹಾಯಕ ಕಾರ್ಯಪಾಲಕ ಎಂಜನಿಯರ್‍ಗಳು, ಸಹಾಯಕ ಸಿಬ್ಬಂದಿ, ಗ್ಯಾಂಗ್‍ಮನ್‍ಗಳು ಮತ್ತು ಪೌರಕಾರ್ಮಿಕರು ತೆರವು ಕಾರ್ಯದಲ್ಲಿ ತೊಡಗಿದ್ದರು. ಈ ಕಾರ್ಯಾಚರಣೆಯಲ್ಲಿ ಒಟ್ಟು 2 ಸಾವಿರ ಸಿಬ್ಬಂದಿ ಹಾಗೂ 500 ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.

    ಮುಂದಿನ ನಡೆ:
    ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ನಾಶಮಾಡಬಾರದು ಎಂದು ಕೋರ್ಟ್ ಸೂಚಿಸಿದ್ದು, ತೆರವು ಗೊಳಿಸಿರುವ ಫೋಟೋಗಳನ್ನು ಗುರುವಾರ ನೀಡಬೇಕು ಆದೇಶ ನೀಡಿತ್ತು. ಆಗಸ್ಟ್ 8ರಂದು ಮತ್ತೆ ವಿಚಾರಣೆ ನಡೆಯಲಿದ್ದು, ಕಾರ್ಯಾಚರಣೆಯ ಸಂಪೂರ್ಣ ವರದಿ ನೀಡಲಾಗುವುದು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.