Tag: ಫ್ರೀ ಬಸ್ ಪಾಸ್
-

ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ – ರಾಮಲಿಂಗಾರೆಡ್ಡಿ ಭರವಸೆ
ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free Bus Service) ಅನುಷ್ಠಾನಕ್ಕೆ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಜೂನ್ 1 ರಂದು ಮುಖ್ಯಮಂತ್ರಿಗಳು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ನೂತನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ.
ಸಾರಿಗೆ ಇಲಾಖೆ ಅಧಿಕಾರಿಗಳು ಮೂರ್ನಾಲ್ಕು ಆಯ್ಕೆಗಳನ್ನ ಕೊಟ್ಟಿದ್ದಾರೆ. ಎಲ್ಲಾ ಮಹಿಳೆಯರಿಗೆ ಉಚಿತ ಎನ್ನುವುದು ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಾಗಿತ್ತು. ನಾಳೆ ಸಚಿವ ಸಂಪುಟದಲ್ಲಿ ಸಾರಿಗೆ ಇಲಾಖೆ ವರದಿ ಕೊಡುತ್ತೇವೆ. ಉಚಿತ ಬಸ್ ಪ್ರಯಾಣ ಗ್ಯಾರಂಟಿ ಜಾರಿಗೆ ಬರೋದ್ರಲ್ಲಿ ಅನುಮಾನವೇ ಇಲ್ಲ ಎಂದು ತಿಳಿಸಿದ್ದಾರೆ.
ಮಂಗಳವಾರ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ನಿಗಮದ ಪ್ರಯಾಣಿಕರ ಸಂಖ್ಯೆ, ಬಸ್‌ಗಳ ಸಂಖ್ಯೆ ವಾರ್ಷಿಕ ಆದಾಯದ ಬಗ್ಗೆ ಸಮಗ್ರ ಮಾಹಿತಿ ಪಡೆದರು.
ಮಹಿಳೆಯರಿಗೆ ಉಚಿತ ಬಸ್ ಸೇವೆ ವಿಚಾರ ಕುರಿತು ಮಾತನಾಡುವಾಗ, ಪ್ರತಿ ವರ್ಷ ಅಂದಾಜು 3,200 ಕೋಟಿ ರೂ. ಖರ್ಚು ಬೇಕಾಗುತ್ತದೆ. ಸಾರಿಗೆ 4 ನಿಗಮ ನಷ್ಟದಲ್ಲಿವೆ. ಹಾಗಾಗಿ ಸರ್ಕಾರ ಸಹಾಯಧನ ನೀಡಿದರೆ ಯೋಜನೆ ಜಾರಿಗೆ ಅನುಕೂಲವಾಗುತ್ತದೆ. ಕೊರೊನಾ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿತ್ತು. ಅದನ್ನು ಸರಿದೂಗಿಸಲು ನಿಗಮದ ಕೆಲವು ಆಸ್ತಿಗಳನ್ನು ಅಡವಿಟ್ಟು ಸಾಲ ಪಡೆಯಲಾಗಿದೆ. ಈಗಾಗಲೇ ಹಲವು ನಿಗಮಗಳಿಂದ ಸಾವಿರಾರು ಕೋಟಿ ಹಣ ಬರಬೇಕಿದೆ ಎಂದರು. ಇದೇ ವೇಳೆ ಬಸ್‌ಗಳ ಮಾಹಿತಿ ಕೊಟ್ಟ ಅಧಿಕಾರಿಗಳು ಸಾಮಾನ್ಯ ಬಸ್‌ಗಳಲ್ಲಿ ಉಚಿತ ಬಸ್ ಸೇವೆ ಕಲ್ಪಿಸಿದರೆ ಆರ್ಥಿಕ ಹೊರೆಯಾಗಲಿದೆ ಎಂದು ಸಚಿವರಿಗೆ ಮನವರಿಕೆ ಮಾಡಿದರು.
ಬಳಿಕ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ನಮ್ಮ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ 240 ಘಟಕಗಳಿದ್ದು, 21,574 ವಾಹನಗಳನ್ನ ಒಳಗೊಂಡಿದೆ. 4 ನಿಗಮಗಳಿಂದ ಒಟ್ಟು 82.51 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇದರೊಂದಿಗೆ ಈ ವರ್ಷ 4,500ಕ್ಕೂ ಹೆಚ್ಚು ಬಸ್‌ಗಳು ಸೇರ್ಪಡೆಯಾಗುತ್ತಿವೆ. ಇನ್ನಷ್ಟು ಹೊಸ ಬಸ್‌ಗಳು ಬರಬೇಕಿದೆ. ಇದರಿಂದ ಪ್ರತಿದಿನ 82.51 ಲಕ್ಷ ಪ್ರಯಾಣಿಕರು ಓಡಾಡಬಹುದು ಎಂದು ಮಾಹಿತಿ ನೀಡಿದ್ದಾರೆ.
ಪ್ರತಿ ವರ್ಷ ನಾಲ್ಕು ನಿಗಮ ಸೇರಿ 8,946 ಕೋಟಿ ಆದಾಯ ಬರುತ್ತದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಸರ್ಕಾರದ ಜೊತೆ ಮತ್ತೊಂದು ಸಭೆ ಇದೆ. ಅಲ್ಲಿ ಸಿಎಂ ಜೊತೆಗೆ ಗ್ಯಾರಂಟಿಗಳ ಬಗ್ಗೆ ಚರ್ಚಿಸಲಾಗುತ್ತದೆ. ಸಿಎಂ ಸಹ ಉಚಿತ ಬಸ್ ಸೇವೆ ಕಲ್ಪಿಸುವ ಬಗ್ಗೆ ಮಾತನಾಡಿದ್ದಾರೆ ಎಂದು ವಿವರಿಸಿದರು.
ಬಿಪಿಎಲ್, ಎಪಿಎಲ್ ಅಂತಾ ಪ್ರಣಾಳಿಕೆಯಲ್ಲಿ ಹೇಳಿಲ್ಲ. ಎಲ್ಲಾ ಮಹಿಳೆಯರಿಗೆ ಕೊಡ್ತೇವೆ. ಜೂನ್ 1 ರಂದು ಸಿಎಂ ಘೋಷಣೆ ಮಾಡ್ತಾರೆ. ಬಿಜೆಪಿಯವರಿಗೆ ಹೋರಾಟ ಮಾಡೋಕೆ ಅವಕಾಶನೇ ಕೊಡಲ್ಲ ಎಂದು ಹೇಳಿದರು.
-

ಬೆಂಗಳೂರಿನ ಕಟ್ಟಡ ಕಾರ್ಮಿಕರಿಗೆ ಬಿಎಂಟಿಸಿಯಿಂದ ಉಚಿತ ಬಸ್ ಪಾಸ್
ಬೆಂಗಳೂರು: ಸಿಲಿಕಾನ್ ಸಿಟಿಯ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಲು ಮುಂದಾಗಿದೆ. ಕೂಲಿ ಕಾರ್ಮಿಕರು ಒಂದು ಕಡೆಯಿಂದ ಮತ್ತೊಂದು ಕಡೆ ಕೆಲಸಕ್ಕೆ ಹೋಗಬೇಕು ಎಂದರೆ ಕೈಯಲ್ಲಿ ಹಣವಿರುವುದಿಲ್ಲ. ಹಾಗಾಗಿ ಬಿಎಂಟಿಸಿ, ಕೂಲಿ ಕಾರ್ಮಿಕರಿಗೆ ಸಂಕ್ರಾಂತಿ ಗಿಫ್ಟ್ ಕೊಟ್ಟಿದೆ.
ಕೂಲಿ ಕಾರ್ಮಿಕರಿಗೆ ವಾರಕ್ಕೊಮ್ಮೆ ಸಂಬಳ ಕೊಡ್ತಾರೆ ಕೊಡುವ ಹಣವೆಲ್ಲ ಮಾರನೇ ದಿನವೇ ಜೇಬಲ್ಲಿ ಖಾಲಿ ಆಗುತ್ತದೆ. ತಿಂಗಳಪೂರ್ತಿ ಬಸ್ಸಿನಲ್ಲಿ ಓಡಾಡಲು ತೊಂದರೆ ಆಗುತ್ತಿತ್ತು. ಹಾಗಾಗಿ ಕಟ್ಟಡ ಕಾರ್ಮಿಕ ಇಲಾಖೆ, ಬಿಎಂಟಿಸಿ ಸೇರಿ ಕಾರ್ಮಿಕರಿಗೆ ಒಂದು ವರ್ಷಕ್ಕೆ ಫ್ರೀ ಬಸ್ ಪಾಸ್ ನೀಡುತ್ತಿದೆ.

ಕಾರ್ಮಿಕ ಇಲಾಖೆಯಲ್ಲಿ ರಿಜಿಸ್ಟರ್ ಆಗಿರುವ ಕಾರ್ಮಿಕರಿಗೆ ಈ ಉಚಿತ ಬಿಎಂಟಿಸಿ ಬಸ್ ಪಾಸ್ ದೊರೆಯಲಿದೆ. ಈ ಪಾಸ್ಸಿನ ಹೆಸರು ಸಹಾಯಹಸ್ತ ಪಾಸ್ ಎಲ್ಲ ಟಿಟಿಎಂಟಿಸಿಗಳಲ್ಲಿ ವಿತರಿಸಲಾಗುತ್ತಿದೆ. ಈ ಪಾಸ್ ಪಡೆಯಲು ಎರಡು ಫೋಟೋ ಹಾಗೂ ಕಾರ್ಮಿಕ ಇಲಾಖೆ ನೀಡಿರುವ ಐಡಿ ಕಾರ್ಡ್ ಇದ್ದರೆ ಬಿಎಂಟಿಸಿ ಫ್ರೀ ಪಾಸ್ ಕಾರ್ಮಿಕರ ಕೈ ಸೇರಲಿದೆ.
ಈ ಪಾಸ್ ಕೈಯಲ್ಲಿದ್ದರೆ ಬೆಂಗಳೂರಿನ ಯಾವುದೇ ಜಾಗಕ್ಕಾದ್ರು, ಯಾವ ಟೈಮಿಗೆ ಬೇಕಾದ್ರೂ ಬಿಎಂಟಿಸಿ ಬಸ್ಸಿನಲ್ಲಿ ಸಂಚಾರ ಮಾಡಬಹುದು. ಪಾಸಿನ ಅವಧಿ ಒಂದು ವರ್ಷವಿದ್ದು, ದಿನದ 24 ಗಂಟೆ ಸಂಚಾರ ಮಾಡಬಹುದು. ಒಟ್ಟು 72 ಸಾವಿರ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಲಿದ್ದಾರೆ.


