Tag: ಫ್ರೀ ಬಸ್ ಟಿಕೆಟ್

  • ಸರ್ಕಾರಿ ಬಸ್ಸಿನಲ್ಲಿ ನಾರಿಯರ ತೀರ್ಥಯಾತ್ರೆ- ಕುಕ್ಕೆ, ಧರ್ಮಸ್ಥಳ ಕ್ಷೇತ್ರದಲ್ಲಿ ಮಹಿಳಾ ಜನಸಾಗರ

    ಸರ್ಕಾರಿ ಬಸ್ಸಿನಲ್ಲಿ ನಾರಿಯರ ತೀರ್ಥಯಾತ್ರೆ- ಕುಕ್ಕೆ, ಧರ್ಮಸ್ಥಳ ಕ್ಷೇತ್ರದಲ್ಲಿ ಮಹಿಳಾ ಜನಸಾಗರ

    ಮಂಗಳೂರು: ರಾಜ್ಯ ಸರ್ಕಾರದ ಉಚಿತ ಬಸ್ ಪ್ರಯಾಣ ಯೋಜನೆಯಿಂದ ಮಹಿಳೆಯರಿಗೆ ದೇವರ ದರ್ಶನ ಪಡೆಯೋ ಭಾಗ್ಯ ಸಿಕ್ಕಿದಂತಾಗಿದೆ. ಉಚಿತ ಪ್ರಯಾಣ ಜಾರಿಗೆ ಬಂದ ಮೊದಲ ವೀಕೆಂಡ್ ಆದ ಶನಿವಾರ ಕರಾವಳಿಯ ತೀರ್ಥ ಕ್ಷೇತ್ರಗಳಿಗೆ ಮಹಿಳೆಯರ ದಂಡೇ ಹರಿದು ಬಂದಿದೆ. ಸರ್ಕಾರಿ ಬಸ್ ಫುಲ್ ರಶ್ ಆಗುತ್ತಿದ್ದು, ಕರಾವಳಿಯ ಪುಣ್ಯಕ್ಷೇತ್ರಗಳಲ್ಲಿ ಮಹಿಳೆಯರೇ ತುಂಬಿಕೊಂಡಿದ್ದಾರೆ.

    ಕಳೆದ ಭಾನುವಾರ ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಫ್ರೀ ಯೋಜನೆ ಜಾರಿಗೆ ಬಂದಿತ್ತು. ಅದರ ನಂತರದ ವೀಕೆಂಡ್ ಇಂದು ಆಗಿರೋ ಕಾರಣ ಉಚಿತ ಬಸ್ ನಲ್ಲಿ ವೀಕೆಂಡ್ ರಜೆಯೊಂದಿಗೆ ಕರಾವಳಿಯ ತೀರ್ಥ ಕ್ಷೇತ್ರಗಳಿಗೆ ಮಹಿಳೆಯರು ಬಂದಿದ್ದಾರೆ. ಉತ್ತರ ಕರ್ನಾಟಕದಿಂದ ಗುಳೇ ಹೊರಟಂತೆ ಎಲ್ಲಾ ಮಹಿಳೆಯರು ಮಕ್ಕಳು ಮರಿಗಳ ಜೊತೆ ತೀರ್ಥಕ್ಷೇತ್ರ ದರ್ಶನ ಮಾಡ್ತಾ ಇದ್ದಾರೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ಜನರೆಲ್ಲ ಕರಾವಳಿಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಕ್ಷೇತ್ರಗಳಲ್ಲಿ ಭಾರೀ ಭಕ್ತರ ಸಂಖ್ಯೆ ಏರ್ಪಟ್ಟಿದ್ದು ಜನಸಾಗರವೇ ಹರಿದು ಬರುತ್ತಿದೆ. ಮಹಿಳೆಯರು ಗುಂಪು ಗುಂಪಾಗಿ ಬಂದು ಸೇರುತ್ತಿದ್ದು, ಕೆಎಸ್‍ಆರ್‍ಟಿಸಿ ಬಸ್‍ಗಳೆಲ್ಲ ಫುಲ್ ರಶ್ ಆಗಿದೆ.

    ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಉಚಿತ ಪ್ರಯಾಣದ ಯೋಜನೆ ಜಾರಿಯಾದ ದಿನದಿಂದಲೇ ಹಳ್ಳಿಗಾಡಿನ ಜನರು ಸರ್ಕಾರಿ ಬಸ್ ಹತ್ತತೊಡಗಿದ್ದಾರೆ. ಹಬ್ಬಳ್ಳಿ, ಧಾರವಾಡ, ಗದಗ, ಚಿತ್ರದುರ್ಗ, ಬೀದರ್, ಬಿಜಾಪುರ ಹಾಗೂ ಬಾಗಲಕೋಟೆ ಸೇರಿದಂತೆ ಬೆಂಗಳೂರು, ಕೋಲಾರ ಹಾಗೂ ತುಮಕೂರುನ ಮಹಿಳೆಯರು ಕರಾವಳಿಯ ತೀರ್ಥಕ್ಷೇತ್ರಕ್ಕೆ ಬಂದಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸರಕಾರಿ ಬಸ್ಸುಗಳಲ್ಲಿ ಮಹಿಳೆಯರು ಬರುತ್ತಿದ್ದು ದೇವಸ್ಥಾನ ಪರಿಸರದಲ್ಲಿ ಮಹಿಳಾ ಮಣಿಯರ ದಂಡೇ ಸೇರುತ್ತಿದೆ. ಬಸ್ ಫ್ರೀ ಆಗಿದ್ದರಿಂದ ಒಂದು ಬಾರಿಯೂ ಈ ದೇವಸ್ಥಾನಗಳನ್ನು ನೋಡದವರು ದೇವರ ದರ್ಶನ ಪಡೆದು ಸರ್ಕಾರ ದೇವರನ್ನು ನೋಡುವ ಭಾಗ್ಯ ಕರುಣಿಸಿದೆ ಎಂದಿದ್ದಾರೆ.

    ಧರ್ಮಸ್ಥಳಕ್ಕೆ ಬಂದು ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಬಸ್ಸುಗಳಲ್ಲೂ ಕಾಲಿಡುವುದಕ್ಕೂ ಸಾಧ್ಯವಾಗದ ಸ್ಥಿತಿಯಿದೆ. ದೂರದ ಜಿಲ್ಲೆಗಳಿಂದ ಕರಾವಳಿಯ ತೀರ್ಥ ಕ್ಷೇತ್ರಗಳಿಗೆ ಬರುವುದಕ್ಕೆ ಸಾಮಾನ್ಯವಾಗಿ ಸಾವಿರಾರು ರೂಪಾಯಿ ಬೇಕಿದ್ದರೆ, ಈಗ ಉಚಿತ ಪ್ರಯಾಣ ಯೋಜನೆಯಿಂದ ಹಳ್ಳಿ ಮಹಿಳೆಯರು ಮಕ್ಕಳು, ಇಡೀ ಕುಟುಂಬವನ್ನು ಕಟ್ಟಿಕೊಂಡು ದೇವರ ದರ್ಶನಕ್ಕೆ ಬಂದಿದ್ದಾರೆ. ಇಂತಹ ಯೋಜನೆ ಕೊಟ್ಟ ಸರ್ಕಾರಕ್ಕೆ ಮಹಿಳೆಯರು ಜೈ ಎಂದಿದ್ದಾರೆ. ಇದನ್ನೂ ಓದಿ: ಅಕ್ಕಿ ಮಾರಾಟಕ್ಕೆ ಕೇಂದ್ರ ನಿರ್ಬಂಧ ಹೇರಿರುವ ಬಗ್ಗೆ ತೇಜಸ್ವಿ ಸೂರ್ಯ ಸ್ಪಷ್ಟೀಕರಣ

    ಮಾಮೂಲಿಯಾಗಿ ಜೂನ್ ತಿಂಗಳಲ್ಲಿ ಕರಾವಳಿಯ ತೀರ್ಥ ಕ್ಷೇತ್ರಗಳಲ್ಲಿ ಹೆಚ್ಚಿನ ಭಕ್ತರು ಇರೋದಿಲ್ಲ. ಆದರೆ ಈ ಬಾರಿ ಜೂನ್ ತಿಂಗಳಲ್ಲೇ ಫ್ರೀ ಬಸ್ ಯೋಜನೆ ಜಾರಿಯಾಗಿರೋದ್ರಿಂದ ಎಲ್ಲಾ ದೇವಸ್ಥಾನಗಳಲ್ಲೂ ಫುಲ್ ರಶ್ ಆಗಿದೆ. ಜನರ ದಟ್ಟಣೆಯಿಂದಾಗಿ ಕರಾವಳಿಯ ದೇವಸ್ಥಾನಗಳಲ್ಲಿ ಮಹಿಳೆಯರೇ ತುಂಬಿಕೊಂಡಿದ್ದಾರೆ. ಪ್ರವಾಸಿ ತಾಣ, ದೇವಸ್ಥಾನ ಪರಿಸರದಲ್ಲಿ ವ್ಯಾಪಾರವೂ ಜೋರಾಗಿದೆ. ಒಟ್ಟಿನಲ್ಲಿ ಉಚಿತ ಬಸ್ ಯೋಜನೆ ಎಲ್ಲರಿಗೂ ಸಹಕಾರಿಯಾದಂತಿದೆ.

     

  • ಇಂದು ಐತಿಹಾಸಿಕ ಕ್ಷಣಕ್ಕೆ ಕರ್ನಾಟಕ ಸಾಕ್ಷಿ- ಬಸ್‍ನಲ್ಲಿ ಸಿಎಂ 4  ಕಿ.ಮೀ ಸಂಚಾರ

    ಇಂದು ಐತಿಹಾಸಿಕ ಕ್ಷಣಕ್ಕೆ ಕರ್ನಾಟಕ ಸಾಕ್ಷಿ- ಬಸ್‍ನಲ್ಲಿ ಸಿಎಂ 4 ಕಿ.ಮೀ ಸಂಚಾರ

    ಬೆಂಗಳೂರು: ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ (Free Bus Ticket For Women) ಪ್ರಯಾಣ ಮಾಡೋ ದಿನ ಬಂದೇ ಬಿಡ್ತು. ಇತ್ತ ಸಿಎಂ ಸಿದ್ದರಾಮಯ್ಯ ಕೂಡ ಮಹಿಳೆಯರನ್ನು ಫ್ರೀ ಬಸ್ ಹತ್ತಿಸೋಕೆ ಸಜ್ಜಾಗಿದ್ದಾರೆ.

    ಹೌದು. ಇಂದಿನಿಂದ ರಾಜ್ಯಾದ್ಯಂತ ಮಹಿಳಾ ಮಣಿಗಳಿಗೆ ಬಸ್ ಟಿಕೆಟ್ ಫ್ರೀ. ಎಲ್ಲಿ ಬೇಕಾದ್ರೂ ಸಂಚಾರ ಮಾಡಬಹುದಾಗಿದೆ. ಹೀಗಾಗಿ ಬಸ್ ಏರೋಕೆ ಮಹಿಳೆಯರು ತುದಿಗಾಲಲ್ಲಿ ನಿಂತಿದ್ದಾರೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಪೈಕಿ ಮೊದಲ ಯೋಜನೆಯಾದ ಮಹಿಳೆಯರಿಗೆ ಉಚಿತವಾಗಿ ಸಂಚರಿಸಲು ಅವಕಾಶ ನೀಡುವ ಶಕ್ತಿ ಯೋಜನೆಗೆ ಇಂದು ಬೆಳಗ್ಗೆ 11 ಗಂಟೆಗೆ ಚಾಲನೆ ಸಿಗಲಿದೆ. ಸ್ಮಾರ್ಟ್‍ಕಾರ್ಡ್, ಲೋಗೋ ಅನಾವರಣ ಆಗಲಿದೆ.

    ಈ ಕಾರ್ಯಕ್ರಮವನ್ನು ಹಬ್ಬದಂತೆ ನಿರ್ವಹಿಸಲು ಸರ್ಕಾರ ಸಕಲ ಸಿದ್ಧತೆ ನಡೆಸಿದೆ. ಸ್ವತಃ ಸಿದ್ದರಾಮಯ್ಯನವರೇ ಸಿಎಂ ಸಿದ್ದರಾಮಯ್ಯ ಮೊದಲ ಶೂನ್ಯ ಟಿಕೆಟ್ ವಿತರಣೆ ಮಾಡಲಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮಹಿಳೆಯರಿಗೆ ಬಸ್ ಫ್ರೀ- ನಗರದಾದ್ಯಂತ 2,000 ಹೋಮ್‍ಗಾರ್ಡ್ಸ್ ನಿಯೋಜನೆ

    ವಿಧಾನಸೌಧದಲ್ಲಿ ಶಜ್ತಿ ಯೋಜನೆಗೆ ಚಾಲನೆ ಕೊಟ್ಟ ನಂತರ ಮುಖ್ಯಮಂತ್ರಿ ಮತ್ತು ಟೀಂ ಬಿಎಂಟಿಸಿ ಬಸ್‍ನಲ್ಲಿ ಮೆಜೆಸ್ಟಿಕ್‍ಗೆ ಪ್ರಯಾಣ ಬೆಳೆಸಲಿದ್ದಾರೆ. ಮೆಜೆಸ್ಟಿಕ್‍ನ ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ದೂರದ ಊರುಗಳಿಗೆ ತೆರಳುವ ಬಸ್‍ಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಮೆಜೆಸ್ಟಿಕ್‍ನಿಂದ ವಿಧಾನಸೌಧಕ್ಕೆ ರಿಟರ್ನ್ ಬರಲಿದ್ದಾರೆ.

    ಒಟ್ಟನಲ್ಲಿ ಇಂದು ಕರ್ನಾಟಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದು, ಫ್ರೀ ಬಸ್ ಪ್ರಯಾಣಕ್ಕೆ ನಾರಿಯರು ಉತ್ಸುಕರಾಗಿದ್ದಾರೆ.

  • ಶಕ್ತಿ ಯೋಜನೆಗೆ ಭಾನುವಾರ ಚಾಲನೆ- ಬಸ್ ಕಂಡಕ್ಟರ್ ಆಗಲಿದ್ದಾರೆ ಸಿದ್ದರಾಮಯ್ಯ

    ಶಕ್ತಿ ಯೋಜನೆಗೆ ಭಾನುವಾರ ಚಾಲನೆ- ಬಸ್ ಕಂಡಕ್ಟರ್ ಆಗಲಿದ್ದಾರೆ ಸಿದ್ದರಾಮಯ್ಯ

    ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಶಕ್ತಿ ಯೋಜನೆ (Shakthi Yojane) ಗೆ ಸಿಎಂ ಸಿದ್ದರಾಮಯ್ಯ (Siddaramaiah) ಭಾನುವಾರ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ವಹಿಸಲಿದ್ದಾರೆ. ಕೇವಲ ಸಿದ್ದರಾಮಯ್ಯ ಸರ್ಕಾರದ ಮಂತ್ರಿಮಂಡಲದವರು ಮಾತ್ರವಲ್ಲ, ಡಿ.ವಿ.ಸದಾನಂದಗೌಡ (DV Sadananda Gowda), ತೇಜಸ್ವಿಸೂರ್ಯ ಸೇರಿದಂತೆ ಬಿಜೆಪಿ (BJP) ಸಂಸದರಿಗೂ ಆಹ್ವಾನ ನೀಡಲಾಗಿದೆ.

    ನಾಳೆಯ ಶಕ್ತಿ ಯೋಜನೆ ಕಾರ್ಯಕ್ರಮವನ್ನು ಹಬ್ಬದಂತೆ ಆಚರಿಸಲು ಸರ್ಕಾರ ಸಿದ್ದತೆ ಮಾಡಿದೆ. ಬಸ್‍ನಲ್ಲಿ ಸಿದ್ದರಾಮಯ್ಯ ನಾಲ್ಕು ಕಿಲೋಮೀಟರ್‍ವರೆಗೂ ರೌಂಡ್ಸ್ ಹಾಕಲಿದ್ದು, ಬಿಎಂಟಿಸಿಯ ಬಿಎ-6 ಬಸ್‍ನಲ್ಲಿ ಸಂಚರಿಸಲಿದ್ದಾರೆ. ನಾಲ್ಕು ಸಾರಿಗೆ ನಿಗಮಗಳ ಎಂಟು ಬಸ್‍ಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ. ಒಂದು ನಿಗಮದಿಂದ ಎರಡು ಬಸ್‍ಗಳಿಗೆ ವಿಧಾನಸೌಧ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸಿಎಂ ಹಾಗೂ ಮಂತ್ರಿಮಂಡಲ ವಿಧಾನಸೌಧ ಟು ವಿಧಾನಸೌಧಕ್ಕೆ ಬಸ್‍ನಲ್ಲಿ ಸಂಚಾರಿಸಲಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್‌ ಸಂಸ್ಥೆಗಳಿಗೆ ಸರ್ಕಾರ ಮಂಜೂರು ಮಾಡಿದ್ದ ಭೂಮಿ ವಾಪಸ್‌ ಪಡೆಯುತ್ತೇವೆ: ದಿನೇಶ್‌ ಗುಂಡೂರಾವ್‌

    ವಿಧಾನಸೌಧ-ಎಂಎಸ್ ಬಿಲ್ಡಿಂಗ್-ಮೈಸೂರು ಬ್ಯಾಂಕ್ ಸರ್ಕಲ್-ಮೆಜೆಸ್ಟಿಕ್- ವಿಧಾನಸೌಧಕ್ಕೆ ಬಸ್ ಸಂಚರಿಸಲಿದೆ. ಪ್ರಥಮ ಫ್ರೀ ಟಿಕೆಟ್ ಸಿಎಂ ಸಿದ್ದರಾಮಯ್ಯ ವಿತರಿಸಲಿದ್ದಾರೆ. ಶಕ್ತಿ ಯೋಜನೆ ಚಾಲನೆ ಸಂದರ್ಭದಲ್ಲಿ ಮಾಡೆಲ್ ಶಕ್ತಿ ಸ್ಮಾರ್ಟ್ ಕಾರ್ಡ್ ಪರಿಚಯಿಸಲು ಪ್ಲಾನ್ ಮಾಡಲಾಗಿದೆ. ಮಾಡೆಲ್ ಶಕ್ತಿ ಸ್ಮಾರ್ಟ್ ಕಾರ್ಡ್ (Smart Card) ನಲ್ಲಿ ಶಕ್ತಿ ಯೋಜನೆ ಅಂತಾ ಹೆಸರು, ಲೋಗೋ, ಮಹಿಳೆಯ ಹೆಸರು, ವಿಳಾಸ, ಬಾರ್ ಕೋಡ್ ಇರುತ್ತದೆ. ಈ ಸಂದರ್ಭದಲ್ಲಿ ಶಕ್ತಿ ಲೋಗೋ, ಲಾಂಚನ ಅನಾವರಣ ಮಾಡಲಿದ್ದಾರೆ.

    ಉಚಿತ ಟಿಕೆಟ್ (Free Bus Ticket For Women) ಜೊತೆಗೆ ಮಹಿಳೆಯರಿಗೆ ಗುಲಾಬಿ (Rose) ಹೂವು ಕೊಡಬಹುದು. ಸಿಎಂ ಕೂಡ ಖುದ್ದು ಬೆಂಗಳೂರಿನಲ್ಲಿ ಮಹಿಳೆಯರಿಗೆ ಟಿಕೆಟ್ ವಿತರಿಸಿದರೆ ಜಿಲ್ಲೆಗಳಲ್ಲಿಯೂ ಸಚಿವರುಗಳು, ಶಾಸಕರು ಟಿಕೆಟ್ ವಿತರಿಸುವ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಜೊತೆಗೆ ಮಹಿಳೆಯರಿಗೆ ಗುಲಾಬಿ ಹೂವು ನೀಡಲಿದ್ದಾರೆ. ಜಿಲ್ಲಾ ಕೇಂದ್ರದ ಬಸ್ ನಿಲ್ದಾಣದ ಸಮಾರಂಭಕ್ಕೆ ಒಂದು ಲಕ್ಷ, ತಾಲೂಕು ಕೇಂದ್ರಕ್ಕೆ 25 ಸಾವಿರ ವೆಚ್ಚ ಮಾಡೋಕೆ ಅನುಮೋದನೆ ಮಾಡಲಿದ್ದಾರೆ.

  • ಬಸ್‍ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ- ಆಟೋ ಚಾಲಕರಿಗೆ ಹೆಚ್ಚಾಯ್ತು ಆತಂಕ

    ಬಸ್‍ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ- ಆಟೋ ಚಾಲಕರಿಗೆ ಹೆಚ್ಚಾಯ್ತು ಆತಂಕ

    ತುಮಕೂರು: ಮಹಿಳೆಯರಿಗೆನೋ ರಾಜ್ಯ ಸರ್ಕಾರ ಉಚಿತ ಬಸ್ ಪ್ರಯಾಣ ಭಾಗ್ಯ ಕರುಣಿಸಿ “ಶಕ್ತಿ” ತುಂಬಿದೆ. ಆದರೆ ನಗರ ಪ್ರದೇಶದಲ್ಲಿ ಹೆಚ್ಚಾಗಿ ಮಹಿಳೆಯರ ಪ್ರಯಾಣವನ್ನೇ ನಂಬಿ ಬದುಕ್ತಿದ್ದ ಆಟೋ ಚಾಲಕರು (Auto Drivers) ನಿಶ್ಯಕ್ತರಾಗುವ ಆತಂಕದಲ್ಲಿದ್ದಾರೆ.

    ಹೌದು. ಜೂನ್ 11ರಿಂದ ರಾಜ್ಯ ಎಲ್ಲಾ ಮಹಿಳೆಯರು ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ಜಿಲ್ಲೆಯಿಂದ ಜಿಲ್ಲೆಗೆ, ನಗರ ವ್ಯಾಪ್ತಿ ಎಲ್ಲಿಬೇಕಾದರೂ ಓಡಾಟ ಮಾಡಬಹುದು. ಈ ಉಚಿತ ಭಾಗ್ಯದಿಂದ ಮಹಿಳೆಯರಿಗೆ “ಶಕ್ತಿ” ತುಂಬಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಆದರೆ ಇದರ ಎಫೆಕ್ಟ್ ಒಂದೊಂದೇ ವಲಯದ ಮೇಲೆ ಬೀಳುವ ಲಕ್ಷಣ ಗೋಚರಿಸುತ್ತಿದೆ.

    ನಗರ ಪ್ರದೇಶದಲ್ಲಿ ಮಹಿಳಾ ಪ್ರಯಾಣಿಕರನ್ನೇ ಹೆಚ್ಚು ಅವಲಂಬಿಸಿದ ಆಟೋ ಚಾಲಕರಲ್ಲಿ ಆತಂಕ ಶುರುವಾಗಿದೆ. ನಗರ ಪ್ರದೇಶದಲ್ಲಿನ ಮಹಿಳೆಯರು 5-8 ಕಿ.ಮಿ. ದೂರ ಆಟೋ ದಲ್ಲೇ ಪ್ರಯಾಣಿಸುತಿದ್ದರು. ತುಮಕೂರು ನಗರ ಅಂತರಸನಹಳ್ಳಿ ಮಾರುಕಟ್ಟೆ, ರೇಲ್ವೆ ನಿಲ್ದಾ, ಹೆಗ್ಗೆರೆ, ಸಿದ್ದಗಂಗಾ ಮಠ ಹೀಗೆ ಬಹುತೇಕ ಸಿಟಿ ವ್ಯಾಪ್ತಿಯಲ್ಲಿ ಆಟೋವನ್ನೇ ಅವಲಂಬಿಸಿದ್ರು. ಈ ಮಾರ್ಗವಾಗಿ ಸಂಚರಿಸುವ ಮಹಿಳಾ ಪ್ರಯಾಣಿಕರು (Free Bus Ticket For Women) ಆಟೋ ಚಾಲಕರ ಆದಾಯದ ಮೂಲವಾಗಿದ್ರು. ಇನ್ಮೇಲೆ ಈ ಆದಾಯದ ಮೂಲ ಕಳೆದುಕೊಳ್ಳುವ ಆತಂಕದಲ್ಲಿ ಆಟೋ ಚಾಲಕರಿದ್ದಾರೆ. ಇದನ್ನೂ ಓದಿ: ಬಿಪಿಎಲ್‌, ಎಪಿಎಲ್‌, ಅಂತ್ಯೋದಯ ಕಾರ್ಡ್‌ ಹೊಂದಿದ ಯಜಮಾನಿಗೆ ಮಾತ್ರ 2 ಸಾವಿರ ರೂ.

    ನಗರದಿಂದ ಸಿದ್ದಗಂಗಾ ಮಠಕ್ಕೆ ಹೋಗಲು ಆಟೋ ಪ್ರಯಾಣಕ್ಕೆ 150 ದರ ನಿಗದಿ ಇದೆ. ಈಗ ಬಸ್ ಫ್ರಿ ಇರೊದ್ರಿಂದ ಎಲ್ಲರೂ ಬಸ್ಸಲ್ಲೇ ಪ್ರಯಾಣ ಬೆಳೆಸಲಿದ್ದಾರೆ. ತುಮಕೂರು ನಗರದಿಂದ ಕ್ಯಾತಸಂದ್ರ, ಬಸ್ ನಿಲ್ದಾಣದಿಂದ ಹನುಮಂತಪುರ, ಹೀಗೆ ಬೇರೆ ಮಾರ್ಗದಲ್ಲಿ ಸೀಟ್ ಆಟೋಗಳು ಇದೆ. ಸೀಟ್ ಲೆಕ್ಕದಲ್ಲಿ 10-20 ರೂ ಕೊಟ್ಟು ಮಹಿಳೆಯರು ಪ್ರಯಾಣಿಸುತಿದ್ದರು. ಈಗ ಎಲ್ಲಾ ಮಾರ್ಗದಲ್ಲೂ ಬಸ್‍ಗಳ ಓಡಾಟ ಇದ್ದು ಮಹಿಳೆಯರು ಶುಲ್ಕ ರಹಿತವಾಗಿ ಪ್ರಯಾಣ ಮಾಡಲಿದ್ದಾರೆ. ಹಾಗಾಗಿ ಆಟೋದವರ ಆದಾಯ ತಗ್ಗಲಿದೆ. ಆಟೋ ಮಾರಿ ಕೂಲಿ ಕೆಲಸಕ್ಕೆ ಹೋಗಬೇಕಾಗುತ್ತದೆ ಅನ್ನುವ ಭಯ ಶುರುವಾಗಿದೆ.

    ಸರ್ಕಾರ ಕೊಟ್ಟ ಐದು ಗ್ಯಾರಂಟಿಯಲ್ಲಿ ಉಚಿತ ಬಸ್ ಪ್ರಯಾಣ ಅತ್ಯಂತ ಅಪಾಯಕಾರಿ. ಸಿ.ಎಂ. ಸಿದ್ದರಾಮಯ್ಯ ಈ ಯೋಜನೆ ಕೈ ಬಿಟ್ಟರೆ ನಾವು ಬದುಕಬಹುದು. ಇಲ್ಲಾ ಅಂದರೆ ನಮ್ಮ ಬದುಕು ಮೂರಾಬಟ್ಟೆಯಾಗಲಿದೆ ಎಂದು ಆಟೋ ಚಾಲಕರು ಅಳಲು ತೋಡಿಕೊಂಡಿದ್ದಾರೆ.