Tag: ಫ್ರೀ ಕಾಶ್ಮೀರ

  • ‘ಫ್ರೀ ಕಾಶ್ಮೀರ’ ಫಲಕ ಹಿಡಿದಿದ್ದು ಹೇಗೆ ದೇಶದ್ರೋಹ ಆಗುತ್ತೆ: ಸಿದ್ದರಾಮಯ್ಯ ಪ್ರಶ್ನೆ

    ‘ಫ್ರೀ ಕಾಶ್ಮೀರ’ ಫಲಕ ಹಿಡಿದಿದ್ದು ಹೇಗೆ ದೇಶದ್ರೋಹ ಆಗುತ್ತೆ: ಸಿದ್ದರಾಮಯ್ಯ ಪ್ರಶ್ನೆ

    ಬೆಂಗಳೂರು: ಮೈಸೂರಿನಲ್ಲಿ ಫ್ರೀ ಕಾಶ್ಮೀರ ಎಂದು ಫಲಕ ಹಿಡಿದಿದ್ದು ಹೇಗೆ ದೇಶದ್ರೋಹ ಆಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

    ಈಗಲೂ ಕಾಶ್ಮೀರದಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ, ಹಲವು ನಾಯಕರನ್ನು ಗೃಹಬಂಧನದಲ್ಲಿ ಇಡಲಾಗಿದೆ, ಅಘೋಷಿತ ತುರ್ತುಪರಿಸ್ಥಿತಿ ಹೇರಿ ಜನರ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿದೆ. ಹಾಗಾಗಿ ಕಾಶ್ಮೀರಿಗರಿಗೆ ಬದುಕಲು ಬಿಡಿ ಎಂದು ಹುಡುಗಿಯೊಬ್ಬಳು ‘ಫ್ರೀ ಕಾಶ್ಮೀರ’ ಎಂಬ ಫಲಕ ಹಿಡಿದು ನಿಂತಿದ್ದಳು. ಇದು ಹೇಗೆ ದೇಶದ್ರೋಹ ಆಗುತ್ತೆ? ‘ಫ್ರೀ ಕಾಶ್ಮೀರ’ ಫಲಕ ಹಿಡಿದಿದ್ದ ನಳಿನ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘ ಹೊರಡಿಸಿರುವ ಆದೇಶ ಅಸಂವಿಧಾನಿಕ. ನಳಿನಿ ಪರವಾಗಿ ವಕಾಲತ್ತು ವಹಿಸಲು ಅರ್ಜಿ ಸಲ್ಲಿಸಿರುವ ವಕೀಲರ ನಿರ್ಧಾರವನ್ನು ಸ್ವಾಗತಿಸುತ್ತೇನೆ ಜೊತೆಗೆ ಆ ಹೆಣ್ಣುಮಗುವಿಗೆ ಶೀಘ್ರ ನ್ಯಾಯ ಸಿಗಲಿ ಎಂದು ಆಶಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ನಳಿನಿ ಪರವಾಗಿ ಏಕೆ ವಕಾಲತ್ತು ವಹಿಸಬಾರದು? ಎಂದು ಮೈಸೂರು ಜಿಲ್ಲಾ ವಕೀಲರ ಸಂಘದ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿದ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರಾದ ಮಂಜುಳಾ ಮಾನಸ ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಹಲ್ಲೆಗೆ ಯತ್ನಿಸಿದವರ ಮೇಲೆ ಅಗತ್ಯ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇನೆ. ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವ ಹೆಸರಿನಲ್ಲಿ ನಮ್ಮದೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದ ಕೂಲಿ ಕಾರ್ಮಿಕರ ಗುಡಿಸಲುಗಳನ್ನು ನೆಲಸಮ ಮಾಡಲಾಗುತ್ತಿದೆ. ಈ ಸರ್ಕಾರಕ್ಕೇನಾದರೂ ಮಾನವೀಯತೆ ಇದೆಯೇ? ಅಷ್ಟು ಸ್ಪಷ್ಟವಾಗಿ ಉತ್ತರ ಕರ್ನಾಟಕದ ಭಾಷೆ ಮಾತನಾಡುವ ಅವರು ಬಾಂಗ್ಲಾ ಪ್ರಜೆಗಳಾಗಿರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

  • ‘ಫ್ರೀ ಕಾಶ್ಮೀರ’ ಪ್ಲೇ ಕಾರ್ಡ್ ಪ್ರದರ್ಶನ ಕೇಸ್- ವಕಾಲತ್ತಿಗೆ ವಕೀಲರ ಸಹಿ ದುರ್ಬಳಕೆ ಆರೋಪ

    ‘ಫ್ರೀ ಕಾಶ್ಮೀರ’ ಪ್ಲೇ ಕಾರ್ಡ್ ಪ್ರದರ್ಶನ ಕೇಸ್- ವಕಾಲತ್ತಿಗೆ ವಕೀಲರ ಸಹಿ ದುರ್ಬಳಕೆ ಆರೋಪ

    ಮೈಸೂರು: ಮಾನಸಗಂಗೋತ್ರಿ ‘ಫ್ರೀ ಕಾಶ್ಮೀರ’ ಪ್ಲೇ ಕಾರ್ಡ್ ಪ್ರದರ್ಶನ ಪ್ರಕರಣದಲ್ಲಿ ಆರೋಪಿ ಪರ ವಕಾಲತ್ತಿನಿಂದ ಇಬ್ಬರು ಮೈಸೂರು ವಕೀಲರು ಹಿಂದೆ ಸರಿದಿದ್ದು, ವಕಾಲತ್ತು ಅರ್ಜಿ ದುರ್ಬಳಕೆ ಮಾಡಲಾಗಿದೆ ಎಂದು ಮೈಸೂರು ವಕೀಲರ ಸಂಘಕ್ಕೆ ದೂರು ನೀಡಿದ್ದಾರೆ.

    ವಕೀಲರಾದ ಶ್ರೀಕೃಷ್ಣ ಹಾಗೂ ನಾಗರಾಜು ಅವರು ದೂರು ನೀಡಿದ್ದಾರೆ. ನಿನ್ನೆ ಮೈಸೂರು ಜಿಲ್ಲಾ ನ್ಯಾಯಾಲಯದ ವಕೀಲರಿಂದ ವಕಾಲತ್ತು ಸಲ್ಲಿಕೆ ಆಗಿತ್ತು. ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಕಾಲತ್ತು ಸ್ವೀಕರಿಸಿದ್ದರು. ಆದರೆ, ವಕೀಲರಿಗೆ ವಕಾಲತ್ತಿನ ವಿಚಾರವೇ ತಿಳಿಸದೆ ಸಹಿ ಪಡೆಯಲಾಗಿದೆ ಎಂದು ಈ ಇಬ್ಬರು ವಕೀಲರು ಆರೋಪಿಸಿದ್ದಾರೆ.

    ‘ಫ್ರೀ ಕಾಶ್ಮೀರ’ ನಾಮಫಲಕ ಪ್ರದರ್ಶನ ಪ್ರಕರಣದ ಆರೋಪಿಗಳ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘ ನಿರ್ಣಯ ಕೈಗೊಂಡಿದೆ. ಸಂಘದ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ. ಕೆಲವರು ನಮ್ಮ ಸಹಿ ಪಡೆದು ಅದನ್ನು ದುರುಪಯೋಗಪಡಿಸಿಕೊಂಡು ದುರ್ಬಳಕೆ ಮಾಡಿದ್ದಾರೆ. ಸಂಘದ ನಿರ್ಣಯಕ್ಕೆ ಬದ್ಧರಾಗಿ ವಕಾಲತ್ತಿನಿಂದ ಹಿಂದೆ ಸರಿಯುತ್ತೇವೆ ಎಂದು ಈ ಇಬ್ಬರು ವಕೀಲರು ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆನಂದಕುಮಾರ್ ಗೆ ಪತ್ರ ಬರೆದಿದ್ದಾರೆ. ಈ ಪತ್ರದ ಜೊತೆ ವಕಾಲತ್ತು ವಾಪಸ್ಸು ಪಡೆಯುವ ಅರ್ಜಿಯನ್ನು ಲಗತ್ತಿಸಿದ್ದಾರೆ.

    ಮೈಸೂರು ಜಿಲ್ಲಾ ನ್ಯಾಯಾಲಯದ ಯುವ ವಕೀಲರು ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಪ್ರಕರಣದಲ್ಲಿ ಆರೋಪಿಗಳ ಪರ ವಕಾಲತ್ತು ವಹಿಸಬೇಡಿ. ಈ ಹಿಂದೆ ಸಹ ಇಂತಹ ಪ್ರಕರಣಗಳಲ್ಲಿ ಆರೋಪಿಗಳ ಪರ ಜಿಲ್ಲಾ ನ್ಯಾಯಾಲಯದ ವಕೀಲರು ವಕಾಲತ್ತು ವಹಿಸಿಲ್ಲ. ಶಂಕಿತ ಉಗ್ರರಾದ ಫಹಾದ್ ಮತ್ತು ಅಲಿ ಪ್ರಕರಣದಲ್ಲೂ ವಕಾಲತ್ತು ವಹಿಸಿಲ್ಲ. ಹೀಗಾಗಿ ಈ ಬಾರಿಯೂ ಇದೇ ದಿಟ್ಟ ನಿರ್ಣಯ ಕೈಗೊಳ್ಳಿ. ಈ ಮೂಲಕ ಸಂಘದ ಗೌರವ ಕಾಪಾಡಿ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಗೆ ಮನವಿ ಸಲ್ಲಿಸಿದ್ದರು.

  • ಬೆಂಗ್ಳೂರಲ್ಲಿ ಫ್ರೀ ಕಾಶ್ಮೀರ ಕೂಗು – ಚರ್ಚ್ ಸ್ಟ್ರೀಟ್ ಗೋಡೆಗಳಲ್ಲಿ ಸಿಎಎ ವಿರೋಧಿ ಬರಹಗಳು!

    ಬೆಂಗ್ಳೂರಲ್ಲಿ ಫ್ರೀ ಕಾಶ್ಮೀರ ಕೂಗು – ಚರ್ಚ್ ಸ್ಟ್ರೀಟ್ ಗೋಡೆಗಳಲ್ಲಿ ಸಿಎಎ ವಿರೋಧಿ ಬರಹಗಳು!

    ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ಬಳಿಕ ಇದೀಗ ಸಿಲಿಕಾನ್ ಸಿಟಿಯಲ್ಲಿ ಕೂಡ ಫ್ರೀ ಕಾಶ್ಮೀರ ಕೂಗು ಎದ್ದಿದೆ.

    ಹೌದು. ನಗರದ ಚರ್ಚ್ ಸ್ಟ್ರೀಟ್ ರಸ್ತೆಯ ಗೋಡೆಗಳು ಮತ್ತು ಅಂಗಡಿ ಶೆಟರ್ ಗಳಲ್ಲಿ ಫ್ರೀ ಕಾಶ್ಮೀರ ಬರಹಗಳನ್ನು ಬರೆಯಲಾಗಿದೆ. ಅಲ್ಲದೆ ನೋ ಸಿಎಎ, ನೋ ಎನ್‍ಆರ್‍ಸಿ, ನೊ ಎನ್‍ಪಿಎ, ಬಿಜೆಪಿ ಈಸ್ ಕ್ಯಾನ್ಸರ್, ಮೋದಿ ಫ್ಯಾಸಿಸ್ಟ್ ಹೀಗೆ ಸಾಲು ಸಾಲು ಬರಹಗಳನ್ನು ಬರೆಯಲಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

    ಮೋದಿ ಹಾಗೂ ಆರ್ ಎಸ್‍ಎಸ್ ಖಂಡಿಸಿ ಸಹ ಸಾಕಷ್ಟು ಬರಹಗಳನ್ನ ಬರೆಯಲಾಗಿತ್ತು. ಇಡೀ ರಸ್ತೆ ಹಾಗೂ ಶೆಟರ್‍ಗಳು ಮೋದಿ ವಿರೋಧಿ ಬರಹಗಳಿಂದ ಕೂಡಿ ಹೋಗಿತ್ತು. ಇದರ ಜೊತೆಗೆ ಫ್ರೀ ಕಾಶ್ಮೀರ ಅಂತ ಸಹ ಬರೆಯಲಾಗಿದ್ದು, ಮತ್ತಷ್ಟು ವಿವಾದ ಪಡೆದುಕೊಳ್ಳುವಂತೆ ಮಾಡಲಾಗಿತ್ತು.

    ಸಿಸಿಟಿವಿಯಲ್ಲಿ ಸೆರೆ:
    ಬೆಳಗ್ಗಿನ ಜಾವ 3.8ರ ಸುಮಾರಿಗೆ ಬಂದ ಇಬ್ಬರು ಸ್ಕೂಟರ್ ನಿಲ್ಲಿಸಿ ಸ್ಪ್ರೇ ಬಳಸಿ, ಬರಹಗಳನ್ನ ಬರೆದಿದ್ದಾರೆ. ಇವರು ಬರೆಯೋ ಬರಹಗಳು ಎದುರುಗಿದ್ದ ಬಿಲ್ಡಿಂಗ್‍ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಲವೇ ನಿಮಿಷಗಳಲ್ಲಿ ಬರಹಗಳನ್ನ ಬರೆದು ಹೋಗಿದ್ದಾರೆ. ಯಾವಾಗ ಈ ವಿಚಾರ ವರದಿಯಾಯಿತೋ, ತಕ್ಷಣವೇ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಅಲ್ಲದೆ ಒಂದಷ್ಟು ಸಿಸಿಟಿವಿ ವಿಡಿಯೋಗಳನ್ನ ಸಂಗ್ರಹಿಸಿ ದೂರು ದಾಖಲಿಸಿಕೊಂಡು, ಆರೋಪಿಗಳಿಗಾಗಿ ಹುಡುಕಾಟ ನಡೆಸಲು ಆರಂಭಿಸಿದರು. ಇದನ್ನೂ ಓದಿ: ಮೈಸೂರು ವಿವಿ ಕ್ಯಾಂಪಸ್‍ನಲ್ಲೂ ಪ್ರತ್ಯೇಕ ಕಾಶ್ಮೀರ ಕೂಗು

    ಈ ಮಧ್ಯೆ ಕಬ್ಬನ್ ಪಾರ್ಕ್ ಪೊಲೀಸರು ಮೋದಿ ವಿರೋಧಿ ಬರಹಗಳಿಗೆ ಪೈಂಟ್ ಹಾಕಿಸಿದರು. ಇದೇ ವೇಳೆ ಚರ್ಚ್‍ಸ್ಟ್ರೀಟ್‍ಗೆ ಬಂದ ಕೆಲ ಹಿಂದೂಪರ ಸಂಘಟನೆಯ ಕಾರ್ಯಕರ್ತರು, ಘೋಷಣೆ ಕೂಗಿದರು. ಮೋದಿ ಪರ ಹಾಗೂ ಭಾರತ್ ಮಾತೆಗೆ ಜೈಕಾರ ಕೂಗಿ, ಸಿಎಎ ವಿರೋಧಿ ಬರಹಗಳಿಗೆ ಇವರು ಸಹ ಪೈಂಟ್ ಬಳಿಯೋ ಕೆಲಸ ಮಾಡಿದರು. ಸಿಎಎ ವಿರೊಧಿ ಬರಹ ಬರೆದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗಿದರು. ನಂತರ ವಿ ಸಪೋರ್ಟ್ ಸಿಎಎ ಅಂತ ಹಿಂದೂ ಸಂಘಟನೆ ಕಾರ್ಯಕರ್ತರು ಬರೆದರು. ಕೊನೆಗೆ ಇದ್ಯಾವುದು ಬೇಡ ಅಂತ ಕಬ್ಬನ್‍ಪಾರ್ಕ್ ಪೊಲೀಸರು, ಸಿಎಎ ಪರ ಹಾಗೂ ವಿರೋಧದ ಬರಹಗಳಿಗೆ ಕೂಡ ಪೈಂಟ್ ಬಳಿಯೋ ಕೆಲಸ ಮಾಡಿದರು. ಇದನ್ನೂ ಓದಿ: ವಿವಾದಿತ ಪೋಸ್ಟರ್ ಹಿಡಿದಿದ್ದ ಮೈಸೂರು ಯುವತಿ ನಾಪತ್ತೆ

    ಸದ್ಯ ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಫ್ರೀ ಕಾಶ್ಮೀರ ಪೋಸ್ಟರ್ – ವಿಡಿಯೋ ಮೂಲಕ ಕ್ಷಮೆಯಾಚಿಸಿ ಸ್ಪಷ್ಟನೆ ನೀಡಿದ ಯುವತಿ

  • ವಿವಾದಿತ ಪೋಸ್ಟರ್ ಹಿಡಿದಿದ್ದ ಮೈಸೂರು ಯುವತಿ ನಾಪತ್ತೆ

    ವಿವಾದಿತ ಪೋಸ್ಟರ್ ಹಿಡಿದಿದ್ದ ಮೈಸೂರು ಯುವತಿ ನಾಪತ್ತೆ

    ಮೈಸೂರು: ಮೈಸೂರು ವಿವಿಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ಫ್ರೀ ಕಾಶ್ಮೀರ ಪೋಸ್ಟರ್ ಹಿಡಿದ ಯುವತಿ ನಾಪತ್ತೆಯಾಗಿದ್ದಾಳೆ.

    ಮೈಸೂರು ಜಯಲಕ್ಷೀಪುರಂ ಪೊಲೀಸರಿಂದ ಯುವತಿಗಾಗಿ ಹುಡುಕಾಟ ನಡೆಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರಿಸಿಕೊಂಡಿರುವ ತಮಿಳುನಾಡಿನ ಮೂಲದ ಯುವತಿ ನಳಿನಿ ಬಾಲಕುಮಾರ್, ತಮ್ಮ ಫೇಸ್‍ಬುಕ್ ಅಕೌಂಟ್ ಡಿಲಿಟ್ ಮಾಡಿ ಪೋನ್ ನಂಬರ್ ಸ್ವಿಚ್ ಆಫ್ ಮಾಡಿದ್ದಾಳೆ.

    ಮೈಸೂರಿನ ತಮ್ಮ ಮನೆಯಲ್ಲೂ ನಳಿನಿ ಬಾಲಕುಮಾರ್ ಇಲ್ಲ. ಈ ನಡುವೆ ಪ್ರಕರಣದ ಆರೋಪಿಯಾಗಿ ಯುವತಿಯನ್ನು ಎಫ್.ಐ.ಆರ್ ನಲ್ಲಿ ದಾಖಲಿಸಿಕೊಳ್ಳುವ ಬಗ್ಗೆ ಪೊಲೀಸರ ಚಿಂತನೆ ನಡೆಸಿದ್ದಾರೆ. ಸದ್ಯ ಸಂಶೋಧನಾ ಸಂಘದ ಅಧ್ಯಕ್ಷ ಮರಿದೇವಯ್ಯ ಮಾತ್ರ ಪ್ರಕರಣದಲ್ಲಿ ಎ1 ಆರೋಪಿಯಾಗಿ ಸೇರಿಸಿದ್ದಾರೆ. ಮರಿದೇವಯ್ಯ ಹಾಗೂ ಇತರರು ಎಂದು ಎಫ್.ಐ.ಆರ್ ದಾಖಲಾಗಿದೆ.

    ಇತರರ ಸಾಲಿನಲ್ಲಿ ನಳಿನಿ ಬಾಲಕುಮಾರ್ ಹೆಸರು ದಾಖಲಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಗುರುವಾರ ಇಡೀ ದಿನ ತನಿಖೆಯಲ್ಲಿ ಯುವತಿ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು, ನಳಿನಿ ಬಾಲಕುಮಾರ್ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿದ್ದಾರೆ.

  • ಮೈಸೂರು ವಿವಿ ಕ್ಯಾಂಪಸ್‍ನಲ್ಲೂ ಪ್ರತ್ಯೇಕ ಕಾಶ್ಮೀರ ಕೂಗು

    ಮೈಸೂರು ವಿವಿ ಕ್ಯಾಂಪಸ್‍ನಲ್ಲೂ ಪ್ರತ್ಯೇಕ ಕಾಶ್ಮೀರ ಕೂಗು

    ಮೈಸೂರು: ಇಲ್ಲಿನ ವಿಶ್ವವಿದ್ಯಾನಿಲಯ ಮತ್ತೊಂದು ಜೆಎನ್‍ಯು ಆಗಲಿದೆಯಾ? ಇಂತಹದೊಂದು ಪ್ರಶ್ನೆ ಈಗ ಕಾಡುತ್ತಿದೆ. ಕಾರಣ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ಮೈಸೂರು ವಿವಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನಾ ಮೆರವಣಿಗೆ ವೇಳೆ ಫ್ರೀ ಕಾಶ್ಮೀರ್ ಪೋಸ್ಟರ್ ಗಳು ರಾರಾಜಿಸಿವೆ.

    ಜೆಎನ್‍ಯುನಲ್ಲಿ ನಡೆದ ಹಲ್ಲೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಕಾಶ್ಮೀರ ಪ್ರತ್ಯೇಕತೆ ಬಗ್ಗೆ ವಿದ್ಯಾರ್ಥಿಗಳು ದನಿ ಎತ್ತಿದ್ದಾರೆ. ಪ್ರತಿಭಟನೆಯ ಮೂಲ ಉದ್ದೇಶ ಬಿಟ್ಟು ಫ್ರೀ ಕಾಶ್ಮೀರ್ ಬಗ್ಗೆ ವಿದ್ಯಾರ್ಥಿಗಳಿಂದ ಪೋಸ್ಟರ್ ಪ್ರದರ್ಶನದ ಹಿಂದೆ ಯಾರ ಕೈವಾಡವಿದೆ ಎಂಬ ಪ್ರಶ್ನೆ ಎದುರಾಗಿದೆ. ಮೈಸೂರು ವಿವಿಯ ವಿದ್ಯಾರ್ಥಿಗಳು ಜೆಎನ್‍ಯು ಮಾದರಿ ಅನುಸರಿಸುವುದಕ್ಕೆ ಮುಂದಾಗಿದ್ದಾರಾ ಎಂಬ ಪ್ರಶ್ನೆ ಕೂಡ ಮೂಡಿಸಿದೆ.

    ಜೆಎನ್‍ಯು ವಿವಿಯ ವಿದ್ಯಾರ್ಥಿಗಳ ಮೇಲಿನ ಖಂಡಿಸಿ ಎಬಿವಿಪಿ ವಿರುದ್ಧ ಪಂಜಿನ ಮೆರವಣಿಗೆ ನಡೆಸಲಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿಗಳ ಒಕ್ಕೂಟ, ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ ಬಹುಜನ ವಿದ್ಯಾರ್ಥಿ ಸಂಘದಿಂದ ಈ ಪ್ರತಿಭಟನಾ ಮೆರವಣಿಗೆ ನಡೆದಿತ್ತು. ಎಬಿವಿಪಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

    ಮೈಸೂರು ವಿವಿ ಮಾನಸಗಂಗೋತ್ರಿಯ ಕ್ಲಾಕ್ ಟವರ್ ಬಳಿಯಿಂದ ಕುವೆಂಪು ಪ್ರತಿಮೆವರೆಗೆ ಪಂಜಿನ ಮೆರವಣಿಗೆ ನಡೆಯಿತು. ವಿವಿಗೆ ನುಗ್ಗಿ ದಾಂಧಲೆ ನಡೆಸಲಾಗಿದೆ. ಜೆಎನ್‍ಯು ವಿದ್ಯಾರ್ಥಿಗಳಲ್ಲದೇ ಉಪಧ್ಯಾಯರ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದರು. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಈ ಕೂಗಿನ ನಡುವೆ ಫ್ರೀ ಕಾಶ್ಮೀರ ಪೋಸ್ಟರ್ ಗಳನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪ್ರದರ್ಶಿಸಿರೋದು ಈಗ ಚರ್ಚೆಗೆ ಗ್ರಾಸವಾಗಿದೆ.