Tag: ಫ್ರಾನ್ಸ

  • ಐಎಎಫ್‍ನ ಮೊದಲ ‘ರಫೇಲ್’ಗೆ ರಾಜನಾಥ್ ಸಿಂಗ್ ಆಯುಧ ಪೂಜೆ

    ಐಎಎಫ್‍ನ ಮೊದಲ ‘ರಫೇಲ್’ಗೆ ರಾಜನಾಥ್ ಸಿಂಗ್ ಆಯುಧ ಪೂಜೆ

    ನವದೆಹಲಿ: ಮೂರು ದಿನದ ಫ್ರಾನ್ಸ್ ಪ್ರವಾಸದಲ್ಲಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಪ್ಯಾರಿಸ್‍ನಲ್ಲಿ ಭಾರತೀಯ ವಾಯು ಪಡೆಯ(ಐಎಎಫ್) ಮೊದಲ ರಫೇಲ್ ಯುದ್ಧ ವಿಮಾನಕ್ಕೆ ಆಯುಧ ಪೂಜೆ ನೆರವೇರಿಸಿ, ಭಾರತಕ್ಕೆ ಹಸ್ತಾಂತರಿಸಿಕೊಳ್ಳಲ್ಲಿದ್ದಾರೆ.

    36 ರಫೇಲ್ ಜೆಟ್ ಯುದ್ಧ ವಿಮಾನಗಳು ಫ್ರಾನ್ಸ್ ನ ಬಂದರು ನಗರಿ ಬೋರ್ಡೆಕ್ಸ್ ನಲ್ಲಿ ತಯಾರಾಗುತ್ತಿದ್ದು, ಅವುಗಳ ಪೈಕಿ ಮೊದಲನೆ ಯುದ್ಧ ವಿಮಾನ ಇಂದು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರವಾಗಲಿದೆ. ಆ ಬಳಿಕ, ರಾಜನಾಥ್ ಸಿಂಗ್ ವಿಜಯದಶಮಿಯ ಶುಭ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳ ಪೂಜೆ ಮಾಡಲಿದ್ದಾರೆ. ನಂತರ ರಫೇಲ್ ಯುದ್ಧ ವಿಮಾನದಲ್ಲಿ ಪ್ಯಾರಿಸ್ ವಾಯುನೆಲೆಯಿಂದ ಮೊದಲ ಹಾರಾಟದ ಅನುಭವ ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಭಾರತ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ. ಸದ್ಯ ಅವುಗಳಲ್ಲಿ ಒಂದು ರಫೇಲ್ ಯುದ್ಧ ವಿಮಾನ ಮಾತ್ರ ಇಂದು ಫ್ರಾನ್ಸ್ ಭಾರತಕ್ಕೆ ಹಸ್ತಾಂತರಿಸಲಿದೆ. ಹಾಗೆಯೇ ಮೊದಲ ಹಂತದಲ್ಲಿ ನೀಡಲಾಗುವ ನಾಲ್ಕು ವಿಮಾನಗಳು 2020ರ ಮೇ ತಿಂಗಳಿನಲ್ಲಿ ಭಾರತೀಯ ವಾಯು ಪಡೆಯನ್ನು ಸೇರಲಿದೆ ಎನ್ನಲಾಗಿದೆ.

    ದಸರಾ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಸಂಸ್ಥಾಪನಾ ದಿನವನ್ನೂ ಆಚರಿಸಲಾಗುತ್ತಿದ್ದು, ಇದೇ ವೇಳೆ ರಾಜನಾಥ್ ಸಿಂಗ್ ಅವರು ಮೊದಲು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಬಳಿಕ ಫ್ರೆಂಚ್ ಸಶಸ್ತ್ರ ಪಡೆಗಳ ಸಚಿವ ಫ್ಲಾರೆನ್ಸ್ ಪಾರ್ಲಿ ಅವರೊಂದಿಗೆ ವಾರ್ಷಿಕ ರಕ್ಷಣಾ ಸಂವಾದವನ್ನು ನಡೆಸಲಿದ್ದಾರೆ.

    ಹಲವು ವರ್ಷದಿಂದ ರಾಜ್‍ನಾಥ್ ಸಿಂಗ್ ಅವರು ದಸರಾ ವೇಳೆ ಶಸ್ತ್ರ ಪೂಜೆ ಮಾಡುವ ಸಂಪ್ರದಾಯ ರೂಢಿಯಲ್ಲಿಟ್ಟುಕೊಂಡು ಬಂದಿದ್ದಾರೆ. ಈ ಹಿಂದೆ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಗೃಹ ಸಚಿವರಾಗಿದ್ದಾಗಲೂ ರಾಜ್‍ನಾಥ್ ಸಿಂಗ್ ಶಸ್ತ್ರ ಪೂಜೆ ನೆರವೇರಿಸಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.