Tag: ಫೋನ್ ಸಂಭಾಷಣೆ

  • ‘ಯಶಸ್ಸಿನಲ್ಲಿ ನನ್ನ ಪ್ರಯತ್ನ ಕಮ್ಮಿ ಭಗವಂತನ ಯತ್ನ ಜಾಸ್ತಿ ಎಂದಿದ್ದ ಅಣ್ಣಾವ್ರು’

    ‘ಯಶಸ್ಸಿನಲ್ಲಿ ನನ್ನ ಪ್ರಯತ್ನ ಕಮ್ಮಿ ಭಗವಂತನ ಯತ್ನ ಜಾಸ್ತಿ ಎಂದಿದ್ದ ಅಣ್ಣಾವ್ರು’

    – ಅಪ್ಪಾಜಿ ಫೋನ್ ಸಂಭಾಷಣೆ ವಿಡಿಯೋ ಹಂಚಿಕೊಂಡ ರಾಘಣ್ಣ

    ಬೆಂಗಳೂರು: ನನ್ನ ಯಶಸ್ಸಿನಲ್ಲಿ ನನ್ನ ಪ್ರಯತ್ನ ಕಮ್ಮಿ ಭಗವಂತನ ಯತ್ನ ಜಾಸ್ತಿ ಎಂದು ಹೇಳಿದ್ದ ಡಾ. ರಾಜ್‍ಕುಮಾರ್ ಅವರ ಫೋನ್ ಸಂಭಾಷಣೆಯನ್ನು ಹಿರಿಯ ನಟ ರಾಘವೇಂದ್ರ ರಾಜ್‍ಕುಮಾರ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ವರನಟ ಡಾ.ರಾಜ್‍ಕುಮಾರ್ ಅವರನ್ನು ಕನ್ನಡ ಚಿತ್ರರಂಗದ ಕಲಶ ಎಂದೇ ಕರೆಯಲಾಗುತ್ತದೆ. ಅಭಿಮಾನಿಗಳನ್ನೇ ದೇವರು ಎಂದು ಕರೆಯುತ್ತಿದ್ದ ಮುತ್ತುರಾಜ್ ಕನ್ನಡ ಚಿತ್ರರಸಿಕರ ಹೃದಯದಲ್ಲಿ ಎಂದಿಗೂ ಜೀವಂತ. ಈಗ ಅಣ್ಣಾವ್ರು ಯಾವುದೋ ವ್ಯಕ್ತಿಯ ಜೊತೆ ಫೋನ್ ಸಂಭಾಷಣೆಯಲ್ಲಿ ತೊಡಗಿರುವ ವಿಡಿಯೋವನ್ನು ರಾಘಣ್ಣ ಅವರು ಶೇರ್ ಮಾಡಿದ್ದಾರೆ.

    ಸುಮಾರು 2 ನಿಮಿಷ 20 ಸೆಕೆಂಡ್ ಇರುವ ವಿಡಿಯೋದಲ್ಲಿ ಅಣ್ಣಾವ್ರು ಫೋನಿನಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರ ತಂದೆಯ ಬಗ್ಗೆ ಮತ್ತು ಅವರ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿರುವ ರಾಘಣ್ಣ ಅಪ್ಪಾಜಿಯ ಅಪರೂಪದ ಫೋನ್ ಸಂಭಾಷಣೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ವಿಡಿಯೋದಲ್ಲಿ ಮಾತನಾಡಿರುವ ರಾಜ್‍ಕುಮಾರ್ ಅವರು, ಇಂದು ನಾನು ಈ ಮಟ್ಟಕ್ಕೆ ಬರಲು ನಮ್ಮ ತಂದೆಯವರು ಕಲಿಸಿಕೊಟ್ಟ ಶಿಸ್ತೇ ಕಾರಣ. ಅವರು ಯಾವಗಲೂ ನನ್ನನ್ನು ಹೆದುರಿಸುತ್ತಿದ್ದರು. ನನ್ನ ಗುಣ, ಮಾತು, ನಡವಳಿಕೆಯನ್ನು ಗಮನಿಸಿ ಇದನ್ನು ತಿದ್ದಿಕೋ ಎಂದು ಹೇಳುತ್ತಿದ್ದರು. ಜೊತೆಗೆ ನಿಮ್ಮನ್ನು ಓದಿಸಲು ನನ್ನ ಕೈಲಿ ಆಗಲಿಲ್ಲ. ಆದ್ದರಿಂದ ಹೆದುರಿಸುತ್ತೇನೆ. ನನ್ನ ಮಾತಿನ ಪರಿಣಾಮವನ್ನು ನೀನು ಮುಂದೆ ನೋಡುತ್ತೀಯಾ ಎಂದು ಹೇಳಿದ್ದರು ಎಂದು ಅಣ್ಣಾವ್ರು ತಮ್ಮ ಅಪ್ಪನ ಬಗ್ಗೆ ಮಾತನಾಡಿದ್ದಾರೆ.

    ಜೊತೆಗೆ ನನ್ನ ಯಶಸ್ಸು ನನಗೆ ತಾನಾಗಿಯೇ ಬಂದ ಫಲ ಎಂದು ಹೇಳಬಹುದು. ನನ್ನ ಯಶಸ್ಸಿನಲ್ಲಿ ನನ್ನ ಪ್ರಯತ್ನ ಕಮ್ಮಿ ಭಗವಂತನ ಯತ್ನ ಜಾಸ್ತಿ. ಈ ಭಗವಂತನನ್ನು ಎಲ್ಲಿ ನೋಡಲು ಸಾಧ್ಯ? ಅದಕ್ಕೆ ನಾನು ಈ ಹಿಂದೆ ನನಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಾಗ ಲಕ್ಷಾಂತರ ಜನರ ಮುಂದೆ ಹೇಳಿದ್ದೆ. ಏನೆಂದರೆ ನಾನು ದೇವರನ್ನು ನೋಡಿದ್ದೇನೆ. ಆ ದೇವರು ಯಾರೆಂದರೆ ಅಭಿಮಾನಿಗಳೇ ನನ್ನ ದೇವರು ಎಂದು ಹೇಳಿದ್ದನ್ನು ರಾಜ್‍ಕುಮಾರ್ ಅವರು ಸಂಭಾಷಣೆ ವೇಳೆ ನೆನಪಿಸಿಕೊಂಡಿದ್ದಾರೆ.

    ರಾಜ್‍ಕುಮಾರ್ ಅವರು ಗುಬ್ಬಿ ವೀರಣ್ಣ ಕಂಪನಿಯಲ್ಲಿ ನಾಟಕ ಮಾಡುತ್ತಿದ್ದರು. ಈ ವೇಳೆ 1954ರಲ್ಲಿ ಬೇಡರ ಕಣ್ಣಪ್ಪ ಎಂಬ ಸಿನಿಮಾ ಮಾಡಿ ಚಿತ್ರರಂಗಕ್ಕೆ ಪಾದಾರ್ಪಾಣೆ ಮಾಡಿದ್ದರು. ಇದಾದ ನಂತರ ರಾಜ್ ಹಿಂತಿರುಗಿ ನೋಡಲೇ ಇಲ್ಲ. ಅಣ್ಣಾವ್ರು ತನ್ನ ವೃತ್ತಿ ಜೀವನದಲ್ಲಿ ಸುಮಾರು 210 ಸಿನಿಮಾಗಳನ್ನು ಮಾಡಿದ್ದಾರೆ. ಜೊತೆಗೆ ಹಲವಾರು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಗೆದ್ದು, ಕನ್ನಡಿಗರ ಹೃದಯದಲ್ಲಿ ಇಂದಿಗೂ ರಾರಾಜಿಸುತ್ತಿದ್ದಾರೆ.

  • ನಾನು ಎಲ್ಲೂ ಹೆಚ್‌ಡಿಡಿ ಹೆಸರನ್ನು ಪ್ರಸ್ತಾಪಿಸಿಲ್ಲ- ಫೋನ್ ಮಾತುಕತೆ ಕುರಿತು ಬಿಎಸ್‌ವೈ ಯೂಟರ್ನ್

    ನಾನು ಎಲ್ಲೂ ಹೆಚ್‌ಡಿಡಿ ಹೆಸರನ್ನು ಪ್ರಸ್ತಾಪಿಸಿಲ್ಲ- ಫೋನ್ ಮಾತುಕತೆ ಕುರಿತು ಬಿಎಸ್‌ವೈ ಯೂಟರ್ನ್

    ಬೆಂಗಳೂರು: ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಜೊತೆಗಿನ ಫೋನ್ ಮಾತುಕತೆ ನಿಜ ಎಂದು ಒಪ್ಪಿಕೊಂಡಿದ್ದ ಸಿಎಂ ಯಡಿಯೂರಪ್ಪ ಈಗ ಉಲ್ಟಾ ಹೊಡೆದಿದ್ದಾರೆ. ಎಚ್‌ಡಿಡಿ ಅವರು ಫೋನ್ ಮಾಡಿದ್ದರು ಅನ್ನೋ ವಿಷಯದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಮಾಜಿ ಪ್ರಧಾನಿ ದೇವೇಗೌಡರು ಫೋನ್ ಕರೆ ಮಾಡಿ ಅಭಯ ತಿಳಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದರು. ದೇವೇಗೌಡರ ಜೊತೆಗಿನ ಫೋನ್ ಮಾತುಕತೆ ವಿಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ. ಅವರು ಮಾಜಿ ಪ್ರಧಾನಿಯಾಗಿದ್ದವರು. ಅವರಿಗೆ ಯಾವುದು ಸರಿ ಯಾವುದು ತಪ್ಪು ಅಂತ ತೀರ್ಮಾನ ಮಾಡೋ ಶಕ್ತಿ ಇದೆ. ನಾನು ದೇವೇಗೌಡರ ಹೆಸರನ್ನು ಯಾವುದೇ ಸಂದರ್ಭದಲ್ಲಿ ಪ್ರಸ್ತಾಪ ಮಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ:ಬಿಎಸ್‌ವೈಗೆ ಹೆಚ್‌ಡಿಡಿ ಫೋನ್ ಕಾಲ್-ಮತ್ತೆ ಮೈತ್ರಿಗೆ ಗೌಡರು ಕೊಟ್ರಾ ಆಫರ್!

    ದೇವೇಗೌಡರ ಜೊತೆ ಫೋನ್‌ನಲ್ಲಿ ಮಾತುಕತೆ ನಡೆಸಿದ್ದೇನೆ ಎಂದು ಸಿಎಂ ಹೇಳಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಈ ಮಾತು ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹಾಮೈತ್ರಿಯ ಮುನ್ಸೂಚನೆ ನೀಡಿದೆ. ದೇವೇಗೌಡರು ಯಡಿಯೂರಪ್ಪ ಅವರಿಗೆ ಮೈತ್ರಿ ಆಫರ್ ನೀಡಿದ್ದಾರೆ. ಇದಕ್ಕೆ ಸಿಎಂ ಯಡಿಯೂರಪ್ಪ ಕೂಡ ಒಪ್ಪಿಗೆ ಕೊಟ್ಟಿದ್ದಾರೆ ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಹೆಚ್‌ಡಿ ಕುಮಾರಸ್ವಾಮಿ ವಿದೇಶದಲ್ಲಿದ್ದಾಗಲೇ ಮಹಾಮೈತ್ರಿಯ ಮಾತುಕತೆ ನಡೀತಾ? ಇತ್ತ ಬಿಜೆಪಿ ಹೈಕಮಾಂಡ್‌ನ ಒಪ್ಪಿಗೆ ಇಲ್ಲದೇ ಇಬ್ಬರ ನಡುವಿನ ಮಾತುಕತೆ ಹೇಗೆ ಸಾಧ್ಯ ಎಂದು ಎರಡೂ ಪಕ್ಷಗಳಲ್ಲೂ ಚರ್ಚೆ ಶುರುವಾಗಿದೆ.

    ವಿರೋಧ ಪಕ್ಷದಲ್ಲಿದ್ದಾಗ ಅಪ್ಪ-ಮಕ್ಕಳನ್ನು ರಾಜಕೀಯವಾಗಿ ಮುಗಿಸೋದೇ ನನ್ನ ಗುರಿ ಅಂತಿದ್ದ ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ಸಾಫ್ಟ್ ಕಾರ್ನರ್ ಬೆಳೆಸಿಕೊಂಡಿದ್ದಾರೆ. ಇತ್ತ ಜೆಡಿಎಸ್ ವರಿಷ್ಠರಾದ ದೇವೇಗೌಡರೇ ಯಡಿಯೂರಪ್ಪ ಅವರಿಗೆ ಫೋನ್ ಮಾಡಿ ಮೈತ್ರಿ ಆಫರ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಮತ್ತೆ ಮಹಾಮೈತ್ರಿ ಅಸ್ತಿತ್ವಕ್ಕೆ ಬರುತ್ತಾ ಅನ್ನೋ ಚರ್ಚೆ ಶುರುವಾಗಿವೆ.

    ಮಾಜಿ ಸಿಎಂ ಕುಮಾರಸ್ವಾಮಿ ಅವರ ಸರ್ಕಾರ ಬೀಳಿಸಲ್ಲ ಎಂಬ ಮಾತು ಈಗಾಗಲೇ ರಾಜ್ಯ ರಾಜಕೀಯದಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ. ಯಡಿಯೂರಪ್ಪನವರ ಬಗ್ಗೆ ಕುಮಾರಸ್ವಾಮಿ ಅವರ ಸಾಫ್ಟ್ ಕಾರ್ನರ್ ತೋರಿರುವುದರಿಂದ ರಾಜ್ಯದಲ್ಲಿ ಹೊಸ ಬೆಳವಣಿಗೆ ನಡೆಯುತ್ತೆ ಅನ್ನೋ ಮಾತುಗಳು ಕಳೆದೊಂದು ವಾರದಿಂದ ಜೋರಾಗಿಯೇ ಸದ್ದು ಮಾಡುತ್ತಿದೆ.