Tag: ಫೋನ್ ಕರೆ

  • ರೇಣುಕಾಚಾರ್ಯಗೆ ಕೊಲೆ ಬೆದರಿಕೆ – ಸಿಟಿ ರವಿ, ಯತ್ನಾಳ್‍ರನ್ನು ಬಿಡಲ್ಲ

    ರೇಣುಕಾಚಾರ್ಯಗೆ ಕೊಲೆ ಬೆದರಿಕೆ – ಸಿಟಿ ರವಿ, ಯತ್ನಾಳ್‍ರನ್ನು ಬಿಡಲ್ಲ

    ಬೆಂಗಳೂರು: ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯಗೆ ಅಪರಿಚಿತ ವ್ಯಕ್ತಿಯೊಬ್ಬ ಫೋನ್ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

    ಇಂದು ಬೆಳಗ್ಗೆಯಿಂದ ಅಪರಿಚಿತ ನಂಬರ್‌ನಿಂದ ಪದೇ ಪದೇ ಕರೆ ಬರ್ತಿತ್ತು. ಸಂಜೆ ವೇಳೆಗೆ ಕಾಲ್ ರಿಸಿವ್ ಮಾಡಿದ ಶಾಸಕ ರೇಣುಕಾಚಾರ್ಯಗೆ ವ್ಯಕ್ತಿಯು ಏಕಾಏಕಿ ಅವಾಚ್ಯ ಪದಗಳಿಂದ ನಿಂದಿಸಲು ಶುರು ಮಾಡಿದ್ದಾನೆ. ನಾಲ್ಕೈದು ದಿನಗಳಲ್ಲಿ ನಿನ್ನ ಮತ್ತು ನಿನ್ನ ಮಗನನ್ನು ಕೊಲೆ ಮಾಡುತ್ತೇವೆ ಅಂತಾ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ

    ಹಿಜಾಬ್, ಮುಸ್ಲಿಂ ವ್ಯಾಪಾರಿಗಳ ನಿಷೇಧ, ಹಲಾಲ್ ಕಟ್ ವಿಚಾರವಾಗಿ ಮುಸ್ಲಿಂ ಸಮುದಾಯದ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದೀರಿ. ಇಷ್ಟು ದಿನ ಇಲ್ಲದ ಈ ವಿಚಾರಗಳು ನೀವು ಬಂದ ಮೇಲೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮ ಬಿಜೆಪಿ ನಾಯಕರ ಕಥೆ ಏನಾಗಲಿದೆ ನೋಡ್ತಿರಿ ಎಂದಿದ್ದಾನೆ.  ಇದನ್ನೂ ಓದಿ: ಆರ್.ಎನ್ ನಾಯಕ ಕೊಲೆ ಕೇಸ್ – ಭೂಗತಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿ

    ನೀನ್ನೊಬ್ಬನನ್ನೇ ಅಲ್ಲ ಸಿ ಟಿ ರವಿ, ಯತ್ನಾಳ್ ಅವರನ್ನು ಸಹ ಬಿಡಲ್ಲ ಅಂತ ಬಿಜೆಪಿ ನಾಯಕರನ್ನು ಅವಾಚ್ಯ ಪದಗಳಿಂದ ಬೈದಿದ್ದಾನೆ. ಸದ್ಯ ಈ ಸಂಬಂಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರ ಪ್ರಾಥಮಿಕ ಮಾಹಿತಿಯಲ್ಲಿ ಇಂಟರ್ನೆಟ್ ಕಾಲ್ ಬಳಸಿ ಮಾತಾಡಿರುವುದು ತಿಳಿದಿದೆ.

  • ಜಾಹೀರಾತಿನಲ್ಲಿ ಸಹಾಯವಾಣಿ ನಂಬರ್ ತಪ್ಪಾಗಿದ್ದಕ್ಕೆ ಮಹಿಳೆಗೆ ಎಡಬಿಡದೇ ಬಂತು 4,500 ಫೋನ್‌ ಕಾಲ್‌!

    ಜಾಹೀರಾತಿನಲ್ಲಿ ಸಹಾಯವಾಣಿ ನಂಬರ್ ತಪ್ಪಾಗಿದ್ದಕ್ಕೆ ಮಹಿಳೆಗೆ ಎಡಬಿಡದೇ ಬಂತು 4,500 ಫೋನ್‌ ಕಾಲ್‌!

    ಡಬ್ಲಿನ್: ಉತ್ತರ ಐರ್ಲೆಂಡ್ (ಎನ್‌ಐ) ಸರ್ಕಾರಿ ಅಧಿಕಾರಿಗಳ ಯಡವಟ್ಟಿನಿಂದಾಗಿ ಮಹಿಳೆಯೊಬ್ಬರಿಗೆ ಎಡಬಿಡದೇ 4,500 ಕರೆಗಳು ಬಂದಿರುವ ಘಟನೆ ನಡೆದಿದೆ.

    ಸರ್ಕಾರಿ ಯೋಜನೆಯೊಂದರ ಪ್ರಚಾರಕ್ಕಾಗಿ ಜಾಹೀರಾತು ನೀಡಲಾಗಿತ್ತು. ಮಾಹಿತಿಗೆ ಸಹಾಯವಾಣಿ ನಂಬರ್ ಹಾಕುವಾಗ ಒಂದು ಸಂಖ್ಯೆ ತಪ್ಪಾಗಿದೆ. ಪರಿಣಾಮವಾಗಿ ಮಹಿಳೆಯೊಬ್ಬರ ಫೋನ್‌ಗೆ 4,500 ಕ್ಕೂ ಹೆಚ್ಚು ಕರೆಗಳು ಬಂದಿದ್ದು, ದಿಗ್ಭ್ರಮೆಗೊಳಗಾಗಿದ್ದಾರೆ. ಬಿಡುವಿಲ್ಲದೇ ಬಂದ ಕರೆಗಳು ಮಹಿಳೆಗೆ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ಅಖಿಲೇಶ್ ಯಾದವ್‍ಗೆ ಕೊರೊನಾ ನೆಗೆಟಿವ್ – ಪತ್ನಿ, ಮಗಳಿಗೆ ಪಾಸಿಟಿವ್

    ಕೋವಿಡ್ ನಂತರ ಆರ್ಥಿಕ ಚೇತರಿಕೆ ಉದ್ದೇಶದಿಂದಾಗಿ ಸ್ಪೆಂಡ್ ಲೋಕಲ್ ಕಾರ್ಡ್ ಯೋಜನೆಯನ್ನು ಎನ್‌ಐ ರೂಪಿಸಿತ್ತು. ಸಣ್ಣಪುಟ್ಟ ವ್ಯಾಪಾರಗಳಿಗೆ ಹಣ ವಿನಿಯೋಗಿಸಲು ಅರ್ಹರಿಗೆ ಸ್ಪೆಂಡ್ ಲೋಕಲ್ ಪ್ರೀಪೇಯ್ಡ್ ಕಾರ್ಡ್ ನೀಡುವ ಯೋಜನೆ ಇದಾಗಿದೆ. ಈ ಯೋಜನೆ ಸದುಪಯೋಗಪಡಿಸಿಕೊಳ್ಳಲೆಂದು ಜಾಹೀರಾತು ನೀಡಿ ಸಹಾಯವಾಣಿ ನಂಬರ್ ಹಾಕಲಾಗಿತ್ತು. ಸಹಾಯವಾಣಿಯ ಒಂದು ಸಂಖ್ಯೆ ತಪ್ಪಾಗಿ ಮಹಿಳೆಯ ನಂಬರ್ ನಮೂದಾಗಿದೆ. ಸಹಾಯವಾಣಿ ಎಂದು ತಿಳಿದ ಸಾವಿರಾರು ಜನರು ಆ ನಂಬರ್‌ಗೆ ಕರೆ ಮಾಡಿದ್ದಾರೆ.

    ನಿರಂತರವಾಗಿ ಬಂದ ಕರೆಗಳಿಂದ ಮಹಿಳೆ ಆತಂಕಕ್ಕೆ ಒಳಗಾಗಿದ್ದಾರೆ. ಏನು ನಡಿಯುತ್ತಿದೆ ಎಂಬುದು ತಿಳಿಯದೇ ಮಹಿಳೆ, ಕೊನೆಗೆ ಕರೆ ಮಾಡಿದ ವ್ಯಕ್ತಿಯೊಬ್ಬರಲ್ಲಿ ವಿಚಾರಿಸಿದ್ದಾರೆ. ಆ ವ್ಯಕ್ತಿ ತಮಗೆ ಬಂದಿರುವ ಮೇಲ್ ಅನ್ನು ಮಹಿಳೆಗೆ ಫಾರ್‌ವರ್ಡ್ ಮಾಡಿದಾಗ ವಿಷಯ ಗೊತ್ತಾಗಿದೆ. ಇದನ್ನೂ ಓದಿ: ಓಮಿಕ್ರಾನ್‌ ಬಗ್ಗೆ ಸಿಕ್ತು ಗುಡ್‌ ನ್ಯೂಸ್‌ – ಪ್ರಾಥಮಿಕ ಅಧ್ಯಯನ ವರದಿಗಳು ಬಹಿರಂಗ

    ಅಧಿಕಾರಿಗಳ ಮಾಡಿದ ಯಡವಟ್ಟಿನಿಂದಾಗಿ ಮಹಿಳೆಗೆ ಕಿರಿಕಿರಿ ಎನಿಸಿದೆ. ಸಾಕಷ್ಟು ಕರೆಗಳನ್ನು ಸ್ವೀಕರಿಸಿದ ಮಹಿಳೆಗೆ ನಂತರದಲ್ಲಿ ಸ್ಪೆಂಡ್ ಲೋಕಲ್ ಸ್ಕೀಮ್‌ನ ನಂಬರ್ ಹಾಗೂ ತನ್ನ ಫೋನ್ ನಂಬರ್‌ನಲ್ಲಿ ಕೇವಲ ಒಂದು ಅಂಕಿ ಮಾತ್ರ ವ್ಯತ್ಯಾಸವಿರುವುದು ಗೊತ್ತಾಗಿದೆ.

    ತಾವು ಮಾಡಿದ ಪ್ರಮಾದಕ್ಕಾಗಿ ಅಧಿಕಾರಿಗಳು ಮಹಿಳೆ ಬಳಿ ಕ್ಷಮೆಯಾಚಿಸಿದ್ದಾರೆ.

  • ನನ್ನ ಫೋನ್​​ಗಳನ್ನು ಕದ್ದಾಲಿಕೆ ಮಾಡಲಾಗಿದೆ: ರಾಹುಲ್ ಗಾಂಧಿ

    ನನ್ನ ಫೋನ್​​ಗಳನ್ನು ಕದ್ದಾಲಿಕೆ ಮಾಡಲಾಗಿದೆ: ರಾಹುಲ್ ಗಾಂಧಿ

    ನವದೆಹಲಿ: ನನ್ನ ಎಲ್ಲಾ ಫೋನ್‍ಗಳನ್ನು ಕದ್ದಾಲಿಕೆ ಮಾಡಲಾಗಿದೆ. ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಗೆ ಒತ್ತಾಯಿಸಿದ್ದು, ಇದನ್ನು ಸರ್ಕಾರ ತಿರಸ್ಕರಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

    ಸಂಸತ್ತಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಂಭಾವ್ಯ ಗುರಿ ಅಲ್ಲ. ನನ್ನ ಫೋನ್ ಟ್ಯಾಪ್ ಮಾಡಲಾಗಿದೆ, ಈ ಫೋನ್ ಮಾತ್ರವಲ್ಲ, ನನ್ನ ಎಲ್ಲಾ ಫೋನ್‍ಗಳನ್ನು ಟ್ಯಾಪ್ ಮಾಡಲಾಗಿದೆ ಎಂದಿದ್ದಾರೆ. ಸಂಸತ್ ನಲ್ಲಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಪೆಗಾಸಸ್ ಕಣ್ಗಾವಲು ಪ್ರಶ್ನಿಸಿ ಪ್ರತಿಭಟನೆ ನಡೆಸಿವೆ. ಸ್ರೇಲಿ ಕಂಪನಿ ಎನ್‍ಎಸ್‍ಒನ ಸ್ಪೈವೇರ್ ಪೆಗಾಸಸ್‍ನ ಸೋರಿಕೆಯಾದ ಡೇಟಾಬೇಸ್‍ನಲ್ಲಿ ರಾಹುಲ್ ಗಾಂಧಿ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ, ಇದನ್ನು ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ. ಪ್ರತಿಪಕ್ಷದ ನಾಯಕರು, ಇಬ್ಬರು ಕೇಂದ್ರ ಸಚಿವರು, ಉದ್ಯಮಿ ಅನಿಲ್ ಅಂಬಾನಿ, ಮಾಜಿ ಸಿಬಿಐ ಮುಖ್ಯಸ್ಥ, ವೈರಾಲಜಿಸ್ಟ್ ಮತ್ತು 40 ಪತ್ರಕರ್ತರು ಭಾರತದ 300ಫೋನ್‍ಗಳ ಮೇಲೆ ಕಣ್ಗಾವಲು ಇರಿಸಿರುವ ಪಟ್ಟಿಯಲ್ಲಿದ್ದಾರೆ. ಎಲ್ಲಾ ಫೋನ್‍ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ದೃಢೀಕರಿಸಿಲ್ಲ ಎಂದಿದ್ದಾರೆ.

    ನನ್ನ ಸಂಭಾಷಣೆಗಳನ್ನು ಕದ್ದಾಲಿಕೆ ಮಾಡಲಾಗಿದೆ ಎಂದು ಭದ್ರತಾ ಸಿಬ್ಬಂದಿ ಹೇಳಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ನನ್ನ ಫೋನ್ ಅನ್ನು ಟ್ಯಾಪ್ ಮಾಡುವ ಐಬಿ (ಇಂಟೆಲಿಜೆನ್ಸ್ ಬ್ಯೂರೋ) ಜನರಿಂದ ನನಗೆ ಫೋನ್ ಕರೆಗಳು ಬರುತ್ತವೆ. ಅವರು ನಿಮ್ಮ ಫೋನ್ ಅನ್ನು ಟ್ಯಾಪ್ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ನಾನು ಹೇಳುವುದನ್ನು ವಿವರಿಸಬೇಕೆಂದು ನನ್ನ ಭದ್ರತಾ ಸಿಬ್ಬಂದಿಗೆ ಹೇಳಲಾಗಿದೆ. ನನ್ನ ಸ್ನೇಹಿತರಿಗೆ ಕೂಡಾ ಫೋನ್‍ಗಳನ್ನು ಟ್ಯಾಪ್ ಮಾಡಿದ್ದಾರೆ ಎಂದು ತಿಳಿಸುವ ಕರೆಗಳನ್ನು ಬಂದಿವೆ. ನಾನು ಹೆದರುವುದಿಲ್ಲ. ನಾನು ಭಯಭೀತರಾಗುವುದಿಲ್ಲ. ಈ ದೇಶದಲ್ಲಿ, ನೀವು ಭ್ರಷ್ಟರಾಗಿದ್ದರೆ ಮತ್ತು ಕಳ್ಳರಾಗಿದ್ದರೆ ನೀವು ಭಯಪಡುತ್ತೀರಿ. ಇಲ್ಲದಿದ್ದರೆ ನೀವು ಭಯಪಡಬೇಕಾಗಿಲ್ಲ ಎಂದು ಹೇಳಿದರು.

    ಕಣ್ಗಾವಲು ಆರೋಪವನ್ನು ಸರ್ಕಾರ ನಿರಾಕರಿಸಿದೆ ಮತ್ತು ಸಂಭಾವ್ಯ ಗುರಿಗಳ ದೈನಂದಿನ ಬಹಿರಂಗಪಡಿಸುವಿಕೆಯ ನಡುವೆ ಯಾವುದೇ ಪಾತ್ರವನ್ನು ನಿರಾಕರಿಸಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸಂಸ್ಥೆಗಳ ವಿರುದ್ಧ ಗೃಹ ಸಚಿವ ಅಮಿತ್ ಶಾ ಈ ಶಸ್ತ್ರಾಸ್ತ್ರವನ್ನು (ಪೆಗಾಸಸ್) ಬಳಸುತ್ತಿದ್ದಾರೆ ರಾಹುಲ್ ಆರೋಪಿಸಿದರು. ಸರ್ಕಾರ ಇದಕ್ಕೆ ಹಣ ಪಾವತಿಸಿಲ್ಲವೇ? ಎಂಬದು ಪ್ರಮುಖ ಪ್ರಶ್ನೆ, ನೀವು ಪೆಗಾಸಸ್ ಖರೀದಿಸಬಹುದೇ? ನಾನು ಪೆಗಾಸಸ್ ಖರೀದಿಸಬಹುದೇ? ಒಂದು ಸರ್ಕಾರ ಮಾತ್ರ ಪೆಗಾಸಸ್ ಖರೀದಿಸಬಹುದು. ಪ್ರಧಾನ ಮಂತ್ರಿಯ ಸಹಿ, ಅಥವಾ ಕನಿಷ್ಠ ಗೃಹ ಸಚಿವರ ಸಹಿ ಇದಕ್ಕಾಗಿ ಬೇಕಾಗುತ್ತದೆ. ರಾಷ್ಟ್ರದ ಮಿಲಿಟರಿ ಪೆಗಾಸಸ್ ಅನ್ನು ಖರೀದಿಸಲು ಸಾಧ್ಯವಿಲ್ಲ ಎಂದು  ಹೇಳಿದರು.

    ಮುಂಗಾರು ಅಧಿವೇಶನದಲ್ಲಿ ಪೆಗಾಸಸ್ ವರದಿಗಳನ್ನು ತೀಕ್ಷವಾಗಿ ಪ್ರಶ್ನಿಸಲು ಕಾಂಗ್ರೆಸ್ ನಿರ್ಧರಿಸಿದೆ. ಹಾಗಾಗಿ ಸೋಮವಾರ ಆರಂಭವಾದ ಅಧಿವೇಶನದಲ್ಲಿ ಕಾಂಗ್ರೆಸ್ ಈ ವಿಷಯವನ್ನೆತ್ತಿ ಸರ್ಕಾರವನ್ನು ಪ್ರಶ್ನಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ

  • ಬೆಳ್ಳಂಬೆಳಗ್ಗೆ ಸಿಎಂಗೆ ಅಚ್ಚರಿ – ಯಡಿಯೂರಪ್ಪಗೆ ಜೈ ಅಂದ ಪ್ರಧಾನಿ ಮೋದಿ

    ಬೆಳ್ಳಂಬೆಳಗ್ಗೆ ಸಿಎಂಗೆ ಅಚ್ಚರಿ – ಯಡಿಯೂರಪ್ಪಗೆ ಜೈ ಅಂದ ಪ್ರಧಾನಿ ಮೋದಿ

    ಬೆಂಗಳೂರು: ಬರೋಬ್ಬರಿ ನಾಲ್ಕು ತಿಂಗಳ ನಂತರ ಸಿಎಂ ಯಡಿಯೂರಪ್ಪ ಮೇಲೆ ದೆಹಲಿ ನಾಯಕರಿಗೆ ಪ್ರೀತಿ ಹುಟ್ಟಿದೆ. ಯಡಿಯೂರಪ್ಪ ಕುರಿತು ತಾತ್ಸಾರದಿಂದಿದ್ದ ಪ್ರಧಾನಿ ಮೋದಿಯವರು ಕೊನೆಗೂ ಯಡಿಯೂರಪ್ಪಗೆ ಜೈ ಎನ್ನುವ ಸಂದರ್ಭ ಬಂದೇಬಿಡ್ತು. ಉಪಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೇ ಕೇಂದ್ರದ ನಾಯಕರು ಯಡಿಯೂರಪ್ಪಗೆ ಬಹುಪರಾಕ್ ಹಾಡುತ್ತಿದ್ದಾರೆ.

    ಇವತ್ತು ಬೆಳ್ಳಂಬೆಳಗ್ಗೆ ಸಿಎಂ ಯಡಿಯೂರಪ್ಪಗೆ ಅಚ್ಚರಿಯೊಂದು ಕಾದಿತ್ತು. ಇವತ್ತು ಬೆಳಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರು ಯಡಿಯೂರಪ್ಪಗೆ ದೂರವಾಣಿ ಕರೆ ಮಾಡಿದ್ರು. ಹತ್ತು ನಿಮಿಷಗಳಿಗೂ ಹೆಚ್ಚು ಕಾಲ ಪ್ರಧಾನಿಗಳು ಯಡಿಯೂರಪ್ಪ ಜೊತೆ ಫೋನಿನಲ್ಲಿ ಮಾತುಕತೆ ನಡೆಸಿದ್ರು. ಮೊದಲಿಗೆ ಉಪಚುನಾವಣೆಯಲ್ಲಿ ಸಿಕ್ಕಿದ ಭರ್ಜರಿ ಗೆಲುವಿಗೆ ಪ್ರಧಾನಿಗಳು ಸಿಎಂ ಯಡಿಯೂರಪ್ಪಗೆ ತುಂಬು ಹೃದಯದ ಅಭಿನಂದನೆ ತಿಳಿಸಿದ್ರು.

    ಪ್ರಧಾನಿಗಳು ಯಡಿಯೂರಪ್ಪಗೆ ಉಪಚುನಾವಣೆ ಗೆಲುವಿಗೆ ಮತ್ತೊಮ್ಮೆ ಅಭಿನಂದನೆ ತಿಳಿಸಿದ್ರು. ಬಳಿಕ ಕುಶಲೋಪರಿ ವಿಚಾರಿಸಿ ಆಡಳಿತ, ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತು ಆರಂಭಿಸಿದರು. ರಾಜ್ಯ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಸಿಎಂಗೆ ಭರವಸೆ ಪ್ರಧಾನಿ ಮೋದಿ ಭರವಸೆ ಕೊಟ್ಟಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಈ ವೇಳೆ ಉಪಚುನಾವಣೆ ಬಂದಾಗ ಮೊದಲೇ ಕರೆ ಮಾಡಿ ಅಭಿನಂದನೆ ಹೇಳಲು ನಾನಾ ಕೆಲಸ ಕಾರ್ಯಗಳ ಒತ್ತಡಗಳಿದ್ದವು ಎಂದು ಸಿಎಂಗೆ ಪ್ರಧಾನಿಯವರು ಸ್ಪಷ್ಟನೆ ಕೊಟ್ರು. ಜೊತೆಗೆ ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ತೆರಿಗೆಯ ಪಾಲು ಕೊಡುವ ಬಗ್ಗೆಯೂ ಮಹತ್ವದ ಮಾತುಕತೆ ನಡೆಸಿದರು. ಆದಷ್ಟು ಬೇಗ ರಾಜ್ಯದ ಜಿಎಸ್ಟಿ ಪಾಲು ಕೊಡುವುದಾಗಿ ಭರವಸೆ ಕೊಟ್ಟು, ಸಿಎಂ ಅವರಿಂದ ರಾಜ್ಯದ ತೆರಿಗೆ ಸಂಗ್ರಹ, ಅಭಿವೃದ್ಧಿ ಕುರಿತು ಪ್ರಧಾನಿಗಳು ಮಾಹಿತಿ ಪಡೆದರು. ಇನ್ನು ಸಿಎಬಿ ಮತ್ತು ಎನ್‍ಆರ್‍ಸಿ ಜಾರಿ ಬಗ್ಗೆಯೂ ಸಿಎಂ ಜೊತೆ ಚರ್ಚೆ ನಡೆಸಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಮಾಹಿತಿ ಪಡೆದರು. ಕೊನೆಯಲ್ಲಿ ಮತ್ತೊಮ್ಮೆ ಸಿಎಂಗೆ ಅಭಿನಂದನೆ ತಿಳಿಸಿ ಪ್ರಧಾನಿ ಮೋದಿಯವರು ಕರೆ ಕಡಿತ ಮಾಡಿದರು. ಇದನ್ನೂ ಓದಿ: ಮೈತ್ರಿ ಸರ್ಕಾರದ ಸ್ಟ್ರಾಟಜಿ ಅನುಸರಿಸಲು ಯಡಿಯೂರಪ್ಪ ಆಲೋಚನೆ

    ಬಹಳ ಕಾಲದ ನಂತರ ಪ್ರಧಾನಿ ಮೋದಿಯವರು ಹೀಗೆ ಯಡಿಯೂರಪ್ಪಗೆ ಕರೆ ಮಾಡಿದ್ದಾರೆ. ಇದರಿಂದ ಯಡಿಯೂರಪ್ಪರ ಹುಮ್ಮಸ್ಸು ಇನ್ನಷ್ಟು ಇಮ್ಮಡಿಸಿದೆ. ಉಪಚುನಾವಣೆ ಫಲಿತಾಂಶದ ಬಳಿಕ ಮೋದಿಯವರು ಟ್ವೀಟ್ ಮಾಡುವ ಮೂಲಕ ಯಡಿಯೂರಪ್ಪಗೆ ಅಭಿನಂದನೆ ಹೇಳಿದ್ದರು. ಮೊನ್ನೆ ಸಂಸತ್ ನಲ್ಲಿ ನಡೆದ ಸಂಸದರ ಸಭೆಯಲ್ಲೂ ಯಡಿಯೂರಪ್ಪ ಪರ ಚಪ್ಪಾಳೆ ತಟ್ಟಿಸಿ ಬಹುಪರಾಕ್ ಅಂದಿದ್ದರು. ಬದಲಾದ ಸನ್ನಿವೇಶ ನೋಡುತ್ತಿದ್ದರೆ ಸಧ್ಯಕ್ಕೆ ಸಿಎಂ ಯಡಿಯೂರಪ್ಪರ ಸ್ಥಾನ, ನಾಯಕತ್ವ ಅಬಾಧಿತ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ.

     

  • ಕಮಲ ಬಿಟ್ಟು ಕೈ ಸೇರಲಿದ್ದಾರಾ ಕತ್ತಿ? – ಸಿದ್ದರಾಮಯ್ಯ ಜೊತೆ ಚರ್ಚೆ

    ಕಮಲ ಬಿಟ್ಟು ಕೈ ಸೇರಲಿದ್ದಾರಾ ಕತ್ತಿ? – ಸಿದ್ದರಾಮಯ್ಯ ಜೊತೆ ಚರ್ಚೆ

    ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ್ದ ಬೆನ್ನಲ್ಲೇ ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರು ಬುಧವಾರ ರಾತ್ರಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಕರೆ ಮಾಡಿ ಮಾತನಾಡಿದ್ದಾರೆ. ಕತ್ತಿಯವರ ಈ ನಡೆ ಸದ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

    ಸಚಿವ ಸಂಪುಟ ರಚನೆಯಾದ ಬೆನ್ನಲ್ಲೆ ಬಿಜೆಪಿ ವಲಯದಲ್ಲಿ ಸಚಿವ ಸ್ಥಾನ ಸಿಗದ ನಾಯಕರು ಬಂಡಾಯ ಎದ್ದಿದ್ದಾರೆ. ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ತಿಪ್ಪಾರೆಡ್ಡಿ ಸೇರಿ ಇತರೇ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಉಮೇಶ್ ಕತ್ತಿ ಅವರು ಸಿದ್ದರಾಮಯ್ಯ ಅವರ ಜೊತೆ ಫೋನಿನಲ್ಲಿ ಮಾತನಾಡಿರುವುದು ಸಾಕಷ್ಟು ಪ್ರಶ್ನೆ ಹುಟ್ಟು ಹಾಕಿದೆ.

    ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಉಮೇಶ್ ಕತ್ತಿ ಅವರು ಬಿಜೆಪಿ ನಾಯಕರ ಮೇಲೆ ಒತ್ತಡ ತರಲು ಸಿದ್ದರಾಮಯ್ಯ ಜೊತೆಗೆ ಮಾತನಾಡಿದರಾ? ಅವರನ್ನು ಭೇಟಿ ಮಾಡಲು ಹೋಗುತ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಮೂಲಗಳ ಪ್ರಕಾರ ಕರೆಯಲ್ಲಿ ಉಮೇಶ್ ಕತ್ತಿಯವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ಬಾದಾಮಿಯಿಂದ ಮರಳಿದ ಬಳಿಕ ಅವರನ್ನು ಕಚೇರಿಯಲ್ಲಿ ಭೇಟಿ ಆಗುತ್ತಾರೆ ಎನ್ನಲಾಗಿತ್ತು.

    ಆದರೆ ಈ ಬಗ್ಗೆ ಉಮೇಶ್ ಕತ್ತಿ ಪಬ್ಲಿಕ್ ಟಿವಿ ಜೊತೆ ಕರೆಯಲ್ಲಿ ಮಾತನಾಡಿ, ನಾನು ಸಿದ್ದರಾಮಯ್ಯ ಫೋನಿನಲ್ಲಿ ಮಾತನಾಡಿದ್ದು ನಿಜ, ಸಚಿವ ಸ್ಥಾನದ ಬಗ್ಗೆ ತಿಳಿದು ಅವರು ಕರೆ ಮಾಡಿದ್ದರು. ನಾನು, ಸಿದ್ದರಾಮಯ್ಯ, ಬಸವರಾಜ ಹೊರಟ್ಟಿ ಎಲ್ಲಾ ಬಹಳ ವರ್ಷದಿಂದ ಸ್ನೇಹಿತರು, ಆದ್ದರಿಂದ ಮಾತನಾಡಿದ್ದೇವೆ ಅಷ್ಟೇ. ನಾನು ಬಿಜೆಪಿ ಬಿಟ್ಟು ಹೋಗಲ್ಲ ಎಂದು ಹೇಳಿದ್ದಾರೆ.

    ನಿನ್ನೆ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಕರೆ ಮಾಡಿದ್ದರು. ನಾನು ಯಾರ ವೈರಿನೂ ಅಲ್ಲ, ಮಿತ್ರನೂ ಅಲ್ಲ. ನಾನು ಬಿಜೆಪಿಯವನು, ಬಿಜೆಪಿಯಲ್ಲೇ ಇರುತ್ತೇನೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ಸಿನಲ್ಲೇ ಇರಲಿ. 20 ವರ್ಷಗಳಿಂದ ನಾವಿಬ್ಬರು ಸ್ನೇಹಿತರು. ಜನತಾ ದಳದಲ್ಲಿ ಇದ್ದಾಗ ಇಬ್ಬರೂ ಸೇರಿ ಕೆಲಸ ಮಾಡಿದ್ದೇವೆ. ಸ್ನೇಹಿತರಾಗಿದ್ದರಿಂದ ನಿನ್ನೆ ಸಿದ್ದರಾಮಯ್ಯ ಅವರು ನನಗೆ ಫೋನ್ ಮಾಡಿದ್ದರು. ಸಚಿವ ಸ್ಥಾನದ ಬಗ್ಗೆ ಕೇಳಿದರು, ಆಗ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದೆ ಅಷ್ಟೇ. ಬಿಡುವಿದ್ದರೆ ಇಬ್ಬರು ಭೇಟಿಯಾಗುತ್ತೇವೆ. ಹಾಗಂತಾ ನಾನು ಬಿಜೆಪಿ ಬಿಟ್ಟು ಹೋಗಲ್ಲ. ಇಲ್ಲೇ ಇರುತ್ತೇನೆ. ಮಾಧ್ಯಮಗಳಲ್ಲಿ ಬೇಕಾದ ಹಾಗೆ ಸುದ್ದಿ ಬರುತ್ತಿದೆ ನಾನು ನೋಡುತ್ತಿದ್ದೇನೆ. ಆದರೆ ನಾನು ಬಿಜೆಪಿ ಬಿಡಲ್ಲ. ಈಗ ಕೇವಲ 17 ಮಂದಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದೆ. ಉಳಿದ ಸ್ಥಾನಗಳೂ ಇನ್ನೂ ನಿರ್ಧಾರವಾಗಿಲ್ಲ, ನೋಡೋಣ ಎಂದು ಸ್ಪಷ್ಟಪಡಿಸಿದರು.

  • 8 ದಿನದೊಳಗೆ ಕೊಲೆ ಮಾಡ್ತೀನಿ- ಮಹದಾಯಿ ಹೋರಾಟಗಾರನಿಗೆ ಬೆದರಿಕೆ ಕರೆ

    8 ದಿನದೊಳಗೆ ಕೊಲೆ ಮಾಡ್ತೀನಿ- ಮಹದಾಯಿ ಹೋರಾಟಗಾರನಿಗೆ ಬೆದರಿಕೆ ಕರೆ

    ಧಾರವಾಡ: ಮಹದಾಯಿ ಹೋರಾಟಗಾರ ಹಾಗೂ ರೈತ ಸೇನಾ ಸಂಘಟನೆಯ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರಿಗೆ ಅನಾಮಧೇಯ ವ್ಯಕ್ತಿಯೋರ್ವ ಫೋನ್ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ.

    ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದ ಸೊಬರದಮಠ ಅವರು ನರಗುಂದದಲ್ಲಿ ಕಳೆದ ಐದು ವರ್ಷಗಳಿಂದ ಮಹದಾಯಿ ಹೋರಾಟ ಮಾಡುತ್ತಿದ್ದಾರೆ. ಆದರೆ ಶುಕ್ರವಾರ ರಾತ್ರಿ ವ್ಯಕ್ತಿಯೋರ್ವ ಅವರಿಗೆ ಮೊಬೈಲ್ ಕರೆ ಮಾಡಿ 8 ದಿನದೊಳಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

    ಈ ಸಂಬಂಧ ಪ್ರತಿಕಾ ಪ್ರಕಟನೆ ನೀಡಿರುವ ವೀರೇಶ ಸೊಬರದಮಠ, ಫೋನ್ ಮಾಡಿದ ವ್ಯಕ್ತಿಯನ್ನು ನೀನು ಯಾರು ಪ್ರಶ್ನಿಸಿದೆ. ಆದರೆ ಅವನು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಫೋನ್ ಕಟ್ ಮಾಡಿದ ಎಂದು ತಿಳಿಸಿದ್ದಾರೆ.

    ಈ ಕುರಿತು ವೀರೇಶ ಸೊಬರದಮಠ ಅವರು ನವಲಗುಂದ ಠಾಣೆಗೆ ದೂರು ನೀಡಿದ್ದಾರೆ. ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯ ನಂಬರ್ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

  • 1.5 ಕೋಟಿ ರೂ. ಡೀಲಿಂಗ್ – ಶೃತಿ ಹರಿಹರನ್ ಸ್ಪಷ್ಟನೆ

    1.5 ಕೋಟಿ ರೂ. ಡೀಲಿಂಗ್ – ಶೃತಿ ಹರಿಹರನ್ ಸ್ಪಷ್ಟನೆ

    ಬೆಂಗಳೂರು: ನನ್ನ ಆಪ್ತರು ಯಾರು, ಯಾರಿಗೂ ಕರೆ ಮಾಡಿಲ್ಲ. ನನ್ನ ಆತ್ಮೀಯ ಗೆಳೆಯ ರಾಮ್ ಕರೆ ಮಾಡಿ, ದುಡ್ಡಿಗೆ ಡಿಮ್ಯಾಂಡ್ ಮಾಡಿಲ್ಲ ಎಂದು ನಟಿ ಶೃತಿ ಹರಿಹರನ್ ಸ್ಪಷ್ಟನೆ ನೀಡಿದ್ದಾರೆ.

    ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್ ಅವರಿಗೆ ಅನಾಮಿಕರೊಬ್ಬ ಕರೆ ಮಾಡಿರುವ ವಿಚಾರವಾಗಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಶೃತಿ ಹರಿಹರನ್, ಇದು ಸುಳ್ಳು ಆರೋಪ. ನಮ್ಮ ಅಪ್ಪ, ಅಮ್ಮ, ಅಜ್ಜಿ, ತಾತ ಹಾಗೂ ಸಂಬಂಧಿಕರನ್ನು ನಾನು ಕರೆದುಕೊಂಡು ಬಂದಿಲ್ಲ. ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಕುಟುಂಬದವರ ಅಥವಾ ಸ್ನೇಹಿತರ ಸಹಾಯ ಪಡೆಯುವುದಿಲ್ಲ. ಅಷ್ಟೇ ಅಲ್ಲದೆ ನನ್ನ ಆಪ್ತ ರಾಮ್ ಈ ವಿಚಾರದಲ್ಲಿ ತಲೆ ಹಾಕಿಲ್ಲ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಶೃತಿ ಪರ ಬ್ಯಾಟ್ ಬೀಸಿ ಈಗ ಉಲ್ಟಾ ಹೊಡೆದ ನಟ ಪ್ರಕಾಶ್ ರೈ

    ಆಗಿದ್ದೇನು?:
    ಮೀ ಟೂ ಆರೋಪ ಮಾಡಿದ ಮರುದಿನವೇ ಅನಾಮಿಕರೊಬ್ಬರು ನಟ ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್ ಅವರಿಗೆ ಕರೆ ಮಾಡಿದ್ದಾನೆ. ನಾನು ಶೃತಿ ಹರಿಹರನ್ ಆಪ್ತ ಎಂದು ಹೇಳಿಕೊಂಡ ವ್ಯಕ್ತಿ, ಆರೋಪವನ್ನು ಮುಚ್ಚಿಹಾಕಲು ಹಾಗೂ ಸಂಧಾನ ಮಾಡಿಕೊಳ್ಳಲು ನಮಗೆ 1.5 ಕೋಟಿ ರೂ. ನೀಡಬೇಕು ಅಂತಾ ಬೇಡಿಕೆ ಇಟ್ಟಿದ್ದಾನೆ ಎಂದು ಶಿವಾರ್ಜುನ್ ತಿಳಿಸಿದ್ದರು. ಇದನ್ನು ಓದಿ: ಚೇತನ್ ಫೈರ್ ಸಂಸ್ಥೆಯಿಂದ ಪ್ರಿಯಾಂಕ ಉಪೇಂದ್ರ ಎಕ್ಸಿಟ್!

    ಕರೆ ಮಾಡಿದ ವ್ಯಕ್ತಿ ಯಾವುದೇ ಪರಿಚಯ ಹೇಳಿಕೊಳ್ಳದೇ ಮಾತಿಗೆ ಇಳಿದಿದ್ದಾನೆ. ತಮ್ಮ ಬೇಡಿಕೆ ತಿಳಿಸುತ್ತಿದ್ದಂತೆ ಫೋನ್ ಕಟ್ ಮಾಡಿದ್ದ. ಇಬ್ಬರ ಆರೋಪ ಪ್ರತ್ಯಾರೋಪದ ಲಾಭ ಪಡೆಯಲು ಮೂರನೇ ವ್ಯಕ್ತಿ ಈ ರೀತಿ ಕರೆ ಮಾಡಿರಬಹುದಾ ಎನ್ನುವ ಶಂಕೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರ್ಜುನ್ ಸರ್ಜಾ- ಶೃತಿ ಹರಿಹರನ್ ಸಂಧಾನಕ್ಕೆ 1.5 ಕೋಟಿ ರೂ. ಬೇಡಿಕೆ!

    ಅರ್ಜುನ್ ಸರ್ಜಾ- ಶೃತಿ ಹರಿಹರನ್ ಸಂಧಾನಕ್ಕೆ 1.5 ಕೋಟಿ ರೂ. ಬೇಡಿಕೆ!

    – ಬೇಳೆ ಬೇಯಿಸಿಕೊಳ್ಳಲು ಮುಂದಾದ ಮೂರನೇ ವ್ಯಕ್ತಿ
    – ಅರ್ಜುನ್ ಸರ್ಜಾ ಮ್ಯಾನೇಜರ್ ಗೆ ಕರೆ ಮಾಡಿ ಬೇಡಿಕೆ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಭಾರೀ ಚರ್ಚೆಗೆ ಕಾರವಾಗಿದ್ದ ಶೃತಿ ಹರಿಹರನ್ ಮೀಟೂ ಆರೋಪ ಹೊಸ ತಿರುವುದು ಪಡೆದುಕೊಂಡಿದೆ. ಸಂಧಾನ ನೆಪದಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ 1.5 ಕೋಟಿ ರೂ. ಬೇಡಿಕೆ ಇಟ್ಟಿದ್ದಾನೆ.

    ಮೀ ಟೂ ಆರೋಪ ಮಾಡಿದ ಮರುದಿನವೇ ಅನಾಮಿಕರೊಬ್ಬರು ನಟ ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್ ಅವರಿಗೆ ಕರೆ ಮಾಡಿದ್ದಾನೆ. ನಾನು ಶೃತಿ ಹರಿಹರನ್ ಆಪ್ತ ಎಂದು ಹೇಳಿಕೊಂಡ ವ್ಯಕ್ತಿ, ಆರೋಪವನ್ನು ಮುಚ್ಚಿಹಾಕಲು ಹಾಗೂ ಸಂಧಾನ ಮಾಡಿಕೊಳ್ಳಲು ನಮಗೆ 1.5 ಕೋಟಿ ರೂ. ನೀಡಬೇಕು ಅಂತಾ ಬೇಡಿಕೆ ಇಟ್ಟಿದ್ದಾನೆ ಎಂದು ಶಿವಾರ್ಜುನ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಕರೆ ಮಾಡಿದ ವ್ಯಕ್ತಿ ಯಾವುದೇ ಪರಿಚಯ ಹೇಳಿಕೊಳ್ಳದೆ, ಮಾತಿಗೆ ಇಳಿದಿದ್ದಾನೆ. ತಮ್ಮ ಬೇಡಿಕೆ ತಿಳಿಸುತ್ತಿದ್ದಂತೆ ಫೋನ್ ಕಟ್ ಮಾಡಿದ್ದಾನೆ. ಇಬ್ಬರ ಆರೋಪ ಪ್ರತ್ಯಾರೋಪದ ಲಾಭ ಪಡೆಯಲು ಮೂರನೇ ವ್ಯಕ್ತಿ ಈ ರೀತಿ ಕರೆ ಮಾಡಿರಬಹುದಾ ಎನ್ನುವ ಶಂಕೆ ವ್ಯಕ್ತವಾಗಿದೆ. ಇದನ್ನು ಓದಿ: ಶೃತಿ ಪರ ಬ್ಯಾಟ್ ಬೀಸಿ ಈಗ ಉಲ್ಟಾ ಹೊಡೆದ ನಟ ಪ್ರಕಾಶ್ ರೈ

    ಏನಿದು ಪ್ರಕರಣ?:
    ಮ್ಯಾಗಜಿನ್‍ವೊಂದರ ಸಂದರ್ಶನದ ವೇಳೆ ನಟ ಅರ್ಜುನ್ ವಿರುದ್ಧ ಆರೋಪ ಮಾಡಿದ ಶೃತಿ ಹರಿಹರನ್, ವಿಸ್ಮಯ ಚಿತ್ರೀಕರಣದ ವೇಳೆ ತನ್ನ ಮೇಲಾದ ಲೈಂಗಿಕ ಕಿರುಕುಳವಾದ ಅನುಭವವನ್ನು ಹೇಳಿಕೊಂಡಿದ್ದರು. ಕಳೆದ ವರ್ಷ `ವಿಸ್ಮಯ’ ಚಿತ್ರದಲ್ಲಿ ನಾನು ಅರ್ಜುನ್ ಸರ್ಜಾ ಅವರ ಹೆಂಡತಿಯಾಗಿ ನಟಿಸುತ್ತಿದ್ದೆ, ಅದರ ಪ್ರ್ಯಾಕ್ಟೀಸ್ ಮಾಡುತ್ತಿದ್ದೆವು. ಆಗ ಸರ್ಜಾ “ಇನ್ನೊಂಚೂರು ಹೀಗೆ ಪ್ರಾಕ್ಟೀಸ್ ಮಾಡಬಹುದಲ್ವಾ?” ಅಂತ ಹೇಳಿ ಅವರು ನನ್ನನ್ನು ಜೋರಾಗಿ ತಬ್ಬಿಕೊಂಡರು. ಅವರ ಆ ಅಪ್ಪುಗೆಯಿಂದ ಒಮ್ಮೆಲೆ ನಾನು ತಬ್ಬಿಬ್ಬಾಗಿದ್ದು, ಆ ವರ್ತನೆ ತುಂಬಾನೇ ಅಸಹ್ಯವಾಗಿತ್ತು. ಇದರಿಂದ ನನಗೆ ಇರಿಸು ಮುರುಸು ಉಂಟಾಗಿದ್ದು, ಕೂಡಲೇ ನಿರ್ದೇಶಕರ ಬಳಿ ತೆರಳಿ “ಇನ್ನು ಮುಂದೆ ನಾನು ರಿಹರ್ಸಲ್ ಗೆ ಬರಲ್ಲ, ಬರೀ ಶೂಟಿಂಗ್ ಗಷ್ಟೇ ಕರೆಯಿರಿ” ಅಂತ ಹೇಳಿ ಬಂದುಬಿಟ್ಟೆ. ಆ ಬಳಿಕ ನಾನು ಬರೀ ಶೂಟಿಂಗ್ ಗೆ ಮಾತ್ರ ಹೋಗಿ ಬರುತ್ತಿದ್ದೆ ಅಂತ ಶೃತಿ ಹೇಳಿದ್ದರು. ಇದನ್ನು ಓದಿ: ಚೇತನ್ ಫೈರ್ ಸಂಸ್ಥೆಯಿಂದ ಪ್ರಿಯಾಂಕ ಉಪೇಂದ್ರ ಎಕ್ಸಿಟ್!

    ನಟಿ ಶೃತಿ ಹರಿಹರನ್ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದ್ದು, ಸಾಂಡಲ್‍ವುಡ್ ಹಿರಿಯ ಕಲಾವಿದರು ಅರ್ಜುನ್ ಸರ್ಜಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇತ್ತ ನಟ ಚೇತನ್ ಶೃತಿ ಹರಿಹರನ್ ಬೆಂಬಲಕ್ಕೆ ನಿಂತು ಕನ್ನಡ ಚಿತ್ರರಂಗದ ವಾಣಿಜ್ಯ ಮಂಡಳಿ ಕೆಂಗಣ್ಣಿಗೆ ಗುರಿಯಾಗಿದ್ದರು. ಅಷ್ಟೇ ಅಲ್ಲದೆ ಚೇತನ್ ವಿರುದ್ಧ ಧ್ರುವಾ ಸರ್ಜಾ ಕೂಡ ಕಿಡಿಕಾರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv