Tag: ಫೋನ್ ಕದ್ದಾಲಿಕೆ

  • ಬಿಎಸ್‍ವೈ ಮನೆಗೆ ನಾನು ಹೋಗಿದ್ದು ಏಕೆ – ಕಾರ್ಯಕರ್ತರಿಗೆ ಕಾರಣ ತಿಳಿಸಿದ ಜಿಟಿಡಿ

    ಬಿಎಸ್‍ವೈ ಮನೆಗೆ ನಾನು ಹೋಗಿದ್ದು ಏಕೆ – ಕಾರ್ಯಕರ್ತರಿಗೆ ಕಾರಣ ತಿಳಿಸಿದ ಜಿಟಿಡಿ

    ಮೈಸೂರು: ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಇತ್ತೀಚೆಗೆ ಬಿಜೆಪಿ ನಾಯಕರೊಂದಿಗೆ ಬೆರೆಯುತ್ತಿರುವ ಬೆನ್ನಲ್ಲೇ ಸೋಮವಾರ ರಾತ್ರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮನೆಗೆ ಭೇಟಿ ನೀಡಿದ್ದು ತೀವ್ರ ಕುತೂಹಲ ಕೆರಳಿಸಿತ್ತು. ಈ ಕುರಿತು ಜಿ.ಟಿ.ದೇವೇಗೌಡ ಅವರೇ ಸ್ಪಷ್ಟಪಡಿಸಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಮೈಮುಲ್)ದ ಚುನಾವಣೆ ನಡೆದಿತ್ತು. ಇದಕ್ಕೆ ನನ್ನ ಆಪ್ತ ಸಿದ್ದೇಗೌಡ ಸ್ಪರ್ಧಿಸುತ್ತಿದ್ದ. ಅಲ್ಲದೆ, ಅಧ್ಯಕ್ಷ ಸ್ಥಾನಕ್ಕೆ ಸಿಎಂ ಬಿಎಸ್‍ವೈ ತಂಗಿ ಮಗ ಸಹ ಸ್ಪರ್ಧೆ ಮಾಡಿದ್ದರು. ಈ ವಿಚಾರ ಮಾತನಾಡಲು ಬಿಎಸ್‍ವೈ ಅವರ ಮನೆಗೆ ಹೋಗಿದ್ದೆ ಎಂದು ತಿಳಿಸಿದರು.

    ಯಡಿಯೂರಪ್ಪ ಅವರ ತಂಗಿ ಮಗ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಸೂಚಿಸುವಂತೆ ಮನವಿ ಮಾಡಲು ಅವರ ಮನೆಗೆ ತೆರಳಿದ್ದೆ. ಅವರು ನನ್ನನ್ನು ಪ್ರೀತಿಯಿಂದ ಮಾತನಾಡಿಸಿ, ಮನವಿ ಆಲಿಸಿದರು. ನಿಮ್ಮ ತಂಗಿ ಮಗನಿಗೆ ನೀವೆ ಹೇಳಿ ನಾಮಪತ್ರ ವಾಪಾಸ್ ತಗಿಸಿ ಅಂತ ಮನವಿ ಮಾಡಿಕೊಂಡಿದ್ದೆ. ಅದಕ್ಕೆ ಪ್ರತಿಯಾಗಿ ಅವರು ವಿಜಯೇಂದ್ರ ಅವರಿಗೆ ತಿಳಿಸಿ ಬಿಎಸ್‍ವೈ ತಂಗಿ ಮಗ ಅಶೋಕ್ ನಾಮಪತ್ರ ವಾಪಸ್ ಪಡೆಯುವಂತೆ ಸೂಚಿಸಿದರು ಎಂದು ಹೇಳಿದರು.

    ಇಂದು ಸಿಎಂ ತಂಗಿ ಮಗ ನಾಮಪತ್ರ ವಾಪಸ್ ಪಡೆದರು. ನಮ್ಮ ಮನವಿಗೆ ಸ್ಪಂದಿಸಿದ ಯಡಿಯೂರಪ್ಪನವರಿಗೆ ಧನ್ಯವಾದಗಳು. ನಾನು ಇದೊಂದೆ ವಿಚಾರಕ್ಕೆ ಸಿಎಂ ಮನೆಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಕೆಲ ನಾಯಕರು ಅಲ್ಲೇ ಇದ್ದರು. ಈ ವಿಚಾರ ಹೊರತು ಪಡಿಸಿ ಬೇರೆನೂ ರಾಜಕೀಯ ಮಾತಾಡಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಬಿಎಸ್‍ವೈ ತಂಗಿ ಮಗ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಮೈಮುಲ್)ದ ಅಧ್ಯಕ್ಷರಾಗಿ ಜಿಟಿಡಿ ಆಪ್ತ ಸಿದ್ದೇಗೌಡ ಆಯ್ಕೆಯಾದ ಸಿದ್ದೇಗೌಡರಿಗೆ ಜಿ.ಟಿ.ದೇವೇಗೌಡ ಅವರು ಅಭಿನಂದನೆ ಸಲ್ಲಿಸಿದರು.

    ಇದೇ ವೇಳೆ ಫೋನ್ ಕದ್ದಾಲಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ರಾಜ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವುದಿಲ್ಲವೋ ಅಂತವರು ಮಾತ್ರ ಫೋನ್ ಕದ್ದಾಲಿಕೆ ಮಾಡುತ್ತಾರೆ. ನನಗೆ ಯಾರು ಏನು ಮಾಡುತ್ತಾರೆ ಎನ್ನುವುದು ಬೇಕಾಗಿಲ್ಲ. ಅಲ್ಲದೆ ಅವರು ಏನು ಅಂತಾರೆ, ಇವರೇನು ಅಂತಾನೆ ಎನ್ನುವುದನ್ನು ತಿಳಿದುಕೊಳ್ಳುವ ಅವಶ್ಯಕತೆ ನನಗೆ ಇಲ್ಲ. ಪೋನ್ ಕದ್ದಾಲಿಗೆ ಯಾಕೆ ಮಾಡ್ತಿದ್ದಾರೆ ಅಂತ ನನಗೆ ಅರ್ಥವಾಗುತ್ತಿಲ್ಲ. ಎಲ್ಲವನ್ನು ನೇರವಾಗಿ ಮಾತನಾಡುವವನು ನಾನು. ಹೀಗಾಗಿ ಇದಕ್ಕೆ ಹೆದರುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಫೋನ್ ಕದ್ದಾಲಿಕೆ ಕುರಿತು ಸೂಕ್ತ ತನಿಖೆಯಾಗಲಿ, ಹಿಂದೆಯೂ ಈ ಕುರಿತು ತನಿಖೆ ಆಗಿದೆ. ಈಗಲೂ ಸೂಕ್ತ ತನಿಖೆ ಆಗಲಿ. ವಿಶ್ವನಾಥ್ ಆರೋಪ ಹಾಗೂ ಕುಮಾರಸ್ವಾಮಿಯವರು ಮಾಡಿಸಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

    ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಜಿಟಿಡಿ, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಚುನಾವಣೆ ಕಳೆದ ತಿಂಗಳ 9 ರಂದು ನಿಗದಿಯಾಗಿತ್ತು. ಆದರೆ ಚುನಾವಣೆಯಲ್ಲಿ ಗೊಂದಲ ಉಂಟಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲು ಆಗಮಿಸಿದ್ದೆ. ಡೈರಿ ಚುನಾವಣೆ ನಡೆಯದ ಕಾರಣ ಹುದ್ದೆ ಖಾಲಿ ಇದ್ದು, ಪರಿಣಾಮ ರೈತರಿಗೆ ಬಿಡುಗಡೆಯಾಗಬೇಕಾದ ಹಣ ಲಭಿಸುತ್ತಿಲ್ಲ ಎಂದು ಹೇಳಿದ್ದರು.

    ರೈತರ ಸಮಸ್ಯೆಯಿಂದ ನಾನೇ ಬಂದು ಈ ಬಗ್ಗೆ ಸಿಎಂ ಅವರಿಗೆ ಮನವರಿಕೆ ಮಾಡಿದ್ದೇನೆ. ಸಿಎಂ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಬಿಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ಹಿಂದೆಯೇ ಹಲವು ಬಾರಿ ಸ್ಪಷ್ಟ ಪಡಿಸಿದ್ದು, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದರು. ಬಳಿಕ ಮಾತನಾಡಿದ್ದ ಬಿಎಸ್‍ವೈ, ಈ ಭೇಟಿಯಲ್ಲಿ ಯಾವುದೇ ವಿಶೇಷ ಇಲ್ಲ. ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡಲು ಅವರು ಬಂದಿದ್ದರು ಅಷ್ಟೇ ಎಂದು ಸ್ಪಷ್ಟಪಡಿಸಿದ್ದರು.

  • ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಸೇರಿದಂತೆ ನಮ್ಮ ಫೋನ್ ಕದ್ದಾಲಿಕೆ ಮಾಡಿದ್ದರು- ರೇಣುಕಾಚಾರ್ಯ

    ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಸೇರಿದಂತೆ ನಮ್ಮ ಫೋನ್ ಕದ್ದಾಲಿಕೆ ಮಾಡಿದ್ದರು- ರೇಣುಕಾಚಾರ್ಯ

    ದಾವಣಗೆರೆ: ಮೈತ್ರಿ ಸರ್ಕಾರದ ಆಡಳಿತಾವಧಿಯಲ್ಲಿ ನನ್ನ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಿದ್ದರು ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

    ಪ್ರವಾಹ ಸಮಯದಲ್ಲಿ ಸಂತ್ರಸ್ತರ ನೆರವಿಗೆ ಧವಿಸಿದ್ದ ರೇಣುಕಾಚಾರ್ಯ ಅವರು, ಸಣ್ಣ ಪ್ರಮಾಣದ ನೀರಿನಲ್ಲಿ ಹುಟ್ಟು ಹಾಕಿ ಟ್ರೋಲಾಗಿದ್ದರು. ಈ ಸುದ್ದಿ ಬಿತ್ತರಿಸಿದ ಮಾಧ್ಯಮದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಮೈತ್ರಿ ಸರ್ಕಾರದ ಆಡಳಿತಾವಧಿಯಲ್ಲಿ ನನ್ನ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಲಾಗಿತ್ತು ಎಂದು ಬಾಂಬ್ ಸಿಡಿಸಿದ್ದಾರೆ.

    ಈ ಕುರಿತು ಜಿಲ್ಲೆಯ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಹೇಗಾದರು ಮಾಡಿ ಅಧಿಕಾರ ಉಳಿಸಿಕೊಳ್ಳಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರದ್ದು ಸೇರಿದಂತೆ ನನ್ನ ಹಾಗೂ ಹಲವು ನಾಯಕರ ಫೋನ್ ಕದ್ದಾಲಿಕೆ ಮಾಡಿದ್ದರು ಎಂದು ಜೆಡಿಎಸ್‍ನ ಕೆಲವು ನಾಯಕರು ನನಗೆ ತಿಳಿಸಿದ್ದಾರೆ ಎಂದರು.

    ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಿರುವುದನ್ನು ಖಂಡಿಸುತ್ತೇವೆ. ನಾವು ಆಪರೇಷನ್ ಕಮಲ ಮಾಡಿಲ್ಲ, ಬಿಜೆಪಿಯ ಮುಂಚೂಣಿಯಲ್ಲಿ ಹೋರಾಟ ಮಾಡುತ್ತಿದ್ದವರ ಹಾಗೂ ಬಿಜೆಪಿಯ ಪ್ರಮುಖ ಮುಖಂಡರ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಲಾಗಿದೆ. ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ನೆರೆ ಸಂತ್ರಸ್ತರ ವಿಷಯದಲ್ಲಿ ರಾಜಕೀಯ ಮಾಡಬಾರದು. ಈ ಹಿಂದೆಯೂ ಸಹ ಬರ ಎದುರಾದಾಗ ಸಿದ್ದರಾಮಯ್ಯನವರು ಹಾಗೂ ಕುಮಾರಸ್ವಾಮಿಯವರು ರಾಜ್ಯದ ಪ್ರವಾಸ ಮಾಡಿರಲಿಲ್ಲ. ಆದರೆ, ಬಿಎಸ್‍ವೈ ಒಬ್ಬರೇ ಈಡೀ ರಾಜ್ಯವನ್ನು ಸುತ್ತಿ ಬರ ಅಧ್ಯಾಯನ ನಡೆಸಿದ್ದರು ಎಂದು ತಿಳಿಸಿದರು.

    ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಚಿವ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ. ಮಂತ್ರಿ ಸ್ಥಾನ ನೀಡುವುದು, ಬಿಡುವುದು ಹೈ ಕಮಾಂಡ್ ಹಾಗೂ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಸಚಿವ ಸ್ಥಾನದ ಮೇಲಿನ ಆಸೆಯನ್ನು ಪರೋಕ್ಷವಾಗಿ ಹೊರ ಹಾಕಿದರು.

  • ಜಟ್ಟಿ ಬಿದ್ರೂ ಮೀಸೆ ಮಣ್ಣಾಗಿಲ್ಲ ಅಂತಾ ಕಾಂಗ್ರೆಸ್ಸಿನವರು ಜೆಡಿಎಸ್ ಜೊತೆ ಸೇರಿದ್ರು: ಕೆ.ಎಸ್.ಈಶ್ವರಪ್ಪ ವ್ಯಂಗ್ಯ

    ಜಟ್ಟಿ ಬಿದ್ರೂ ಮೀಸೆ ಮಣ್ಣಾಗಿಲ್ಲ ಅಂತಾ ಕಾಂಗ್ರೆಸ್ಸಿನವರು ಜೆಡಿಎಸ್ ಜೊತೆ ಸೇರಿದ್ರು: ಕೆ.ಎಸ್.ಈಶ್ವರಪ್ಪ ವ್ಯಂಗ್ಯ

    ಶಿವಮೊಗ್ಗ: ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಜೆಡಿಎಸ್ ಜೊತೆ ಸೇರಿ ಕಾಂಗ್ರೆಸ್ಸಿನವರು ಸರ್ಕಾರ ರಚಿಸಿ ಈಗ ಬಿಜೆಪಿಯವನ್ನೇ ದೂಷಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ತಿರುಗೇಟು ಕೊಟ್ಟಿದ್ದಾರೆ.

    ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುವುದಿಲ್ಲ. ಸಮ್ಮಿಶ್ರ ಸರ್ಕಾರವೇ ಅಸ್ಥಿರಗೊಂಡು ಬೀಳಲಿದೆ. ಈ ಸರ್ಕಾರ ಪಾಪದ ಕೂಸು. ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಶಾಸಕರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ನಂಬಿಕೆ ಇಲ್ಲ. ಹೀಗಾಗಿ ಬಿಜೆಪಿ ನಾಯಕರ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳದ ಸ್ಥಿತಿಯಲ್ಲಿ ಇದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಸಮನ್ವಯವಿಲ್ಲ. ಇನ್ನು ಸಭೆ ನಡೆಸಿದರೆ ಏನು ಪ್ರಯೋಜನ ಎಂದು ಕಾಲೆಳೆದರು.

    ಫೋನ್ ಕದ್ದಾಲಿಕೆ ಆರೋಪ ಬಂದಿದೆ. ಹಾಗಾದರೆ ಎಚ್.ಡಿ.ಕುಮಾರಸ್ವಾಮಿ ಇದನ್ನು ನಿರಾಕರಿಸುವ ಬದಲು ತನಿಖೆಗೆ ಆದೇಶ ನೀಡಲಿ ಅಥವಾ ಕೇಂದ್ರ ಸರ್ಕಾರ ಇದರ ಬಗ್ಗೆ ತನಿಖೆ ನಡೆಸುವಂತೆ ಪತ್ರ ಬರೆಯಲಿ ಎಂದು ಆಗ್ರಹಿಸಿದ ಅವರು, ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‍ಗೆ ಎಚ್.ಡಿ.ಕುಮಾರಸ್ವಾಮಿ ದೂರು ನೀಡಿದ್ದಾರೆ. ಈ ಕುರಿತು ಯಾರೊಬ್ಬರೂ ಬಾಯಿ ಬಿಡುತ್ತಿಲ್ಲ. ಇಂತಹ ಸಮನ್ವಯ ಸಮಿತಿಯಿಂದ ರಾಜ್ಯದ ಜನತೆಗೆ ಏನೂ ಲಾಭವಾಗಲ್ಲ ಎಂದು ವ್ಯಂಗ್ಯವಾಡಿದರು. ಇದನ್ನು ಓದಿ: ಫೋನ್ ಕದ್ದಾಲಿಕೆ ಯಾಕೆ? ಹೇಗೆ? ಯಾರು ಮಾಡಬಹುದು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫೋನ್ ಕದ್ದಾಲಿಕೆ ಯಾಕೆ? ಹೇಗೆ? ಯಾರು ಮಾಡಬಹುದು?

    ಫೋನ್ ಕದ್ದಾಲಿಕೆ ಯಾಕೆ? ಹೇಗೆ? ಯಾರು ಮಾಡಬಹುದು?

    ರಾಜ್ಯ ರಾಜಕಾರಣದಲ್ಲಿ ಸದ್ಯ ಫೋನ್ ಕದ್ದಾಲಿಕೆ(ಫೋನ್ ಟ್ಯಾಪಿಂಗ್) ಕುರಿತ ಆರೋಪ ಪ್ರತ್ಯಾರೋಪ ಹೆಚ್ಚಾಗಿದ್ದು, ಮೈತ್ರಿ ಸರ್ಕಾರದ ಮೇಲೆ ಬಿಜೆಪಿ ಫೋನ್ ಕದ್ದಾಲಿಕೆ ಕುರಿತ ಗಂಭೀರ ಆರೋಪ ಮಾಡಿದೆ. ಫೋನ್ ಕದ್ದಾಲಿಕೆ ಆರೋಪ ಬರುವುದು ಇದೇ ಮೊದಲೆನಲ್ಲ. ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧವೂ ಫೋನ್ ಕದ್ದಾಲಿಕೆ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇಲ್ಲಿ ಫೋನ್ ಕದ್ದಾಲಿಕೆ ಎಂದರೇನು? ಯಾರು ಮಾಡಬಹುದು? ಹೇಗೆ ಮಾಡುತ್ತಿದ್ದಾರೆ ಎನ್ನುವ ವಿಚಾರವನ್ನು ವಿವರಿಸಲಾಗಿದೆ.

    ಕ್ರಿಮಿನಲ್ ಕೃತ್ಯ ಎಸಗಲಿರುವವರನ್ನು, ಎಸಗಿದವರನ್ನು ಎಲ್ಲೇ ಅಡಗಿದ್ದರೂ ಪತ್ತೆ ಹಚ್ಚಿ ಅವರನ್ನು ಪತ್ತೆ ಹಚ್ಚಲು ಫೋನ್ ಕದ್ದಾಲಿಕೆ ಮಾಡಲಾಗುತ್ತದೆ. ಕಾನೂನಿನ ಅನ್ವಯ ಸರ್ಕಾರದ ಕೆಲವೇ ಇಲಾಖೆಗಳಿಗೆ ಮಾತ್ರ ಫೋನ್ ಕದ್ದಾಲಿಕೆ ಮಾಡಲು ಅವಕಾಶವಿದ್ದು, ಈಗ ಕೆಲವು ಸಮಾಜ ಘಾತುಕ ಶಕ್ತಿಗಳು ಫೋನ್ ಟ್ಯಾಪಿಂಗ್ ಮಾಡಲು ಆರಂಭಿಸಿವೆ. ಇಂದು ರಾಜಕಾರಣಿಗಳು, ಗಣ್ಯ ವ್ಯಕ್ತಿಗಳ ಫೋನ್ ಟ್ಯಾಪಿಂಗ್ ಹೆಚ್ಚಾಗುತ್ತಿದ್ದು, ಅಡಳಿತ ಪಕ್ಷದ ವಿರುದ್ಧ ವಿರೋಧಿ ಪಕ್ಷಗಳು ಫೋನ್ ಕದ್ದಾಲಿಕೆ ಆರೋಪ ಮಾಡುತ್ತಿದೆ.

     

    ಏನಿದು ಫೋನ್ ಪದ್ದಾಲಿಕೆ?
    ವಿಶೇಷ ಎಲೆಕ್ಟ್ರಾನಿಕ್ ಸಾಧನಗಳ ನೆರವಿನಿಂದ ಇಬ್ಬರು ಮಾತನಾಡುತ್ತಿರುವುದನ್ನು ಮೂರನೇಯವರು ಕದ್ದಾಲಿಸುವುದು ಫೋನ್ ಕದ್ದಾಲಿಕೆ. ಫೋನ್ ಕದ್ದಾಲಿಕೆಗೆ ಕಾನೂನಿನಡಿ ಅವಕಾಶವೂ ಇದೆ. ಆದರೆ ಇದಕ್ಕೆ ನಿರ್ದಿಷ್ಟ ರೀತಿ ನೀತಿಗಳಿವೆ. ಅದು ಹೊರತಾಗಿ ಕದ್ದಾಲಿಸಿದರೆ ಅದು ಕಾನೂನಿನ ಅಡಿ ಅಪರಾಧವಾಗುತ್ತದೆ.

    ಆಧುನಿಕ ತಂತ್ರಜ್ಞಾನ ಬೆಳೆದಂತೆ ಫೋನ್ ಕದ್ದಾಲಿಕೆ ಮಾಡಲೆಂದೇ ಹೊಸ ಸಾಧನಗಳು ತಯಾರಾಗಿವೆ. ಅಲ್ಲದೇ ದೇಶ ವಿದೇಶದಿಂದ ಫೋನ್ ಕದ್ದಾಲಿಕೆ ಮಾಡುವ ಸಾಧನಗಳು ಅಕ್ರಮವಾಗಿ ದೇಶದೊಳಗೆ ರವಾನಿಸುವ ಜಾಲವೂ ಹುಟ್ಟಿಕೊಂಡಿದೆ. ತಜ್ಞರ ಪ್ರಕಾರ ಈ ಸಾಧನಗಳು ಸುಮಾರು ಎರಡು ಕಿ.ಮೀ. ದೂರದ ವರೆಗಿನ ವ್ಯಕ್ತಿಗಳ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡುವ ಸಾಮರ್ಥ್ಯ ಹೊಂದಿರುತ್ತವೆ.

    ಯಾರಿಗೆ ಅನುಮತಿ ಇದೆ?
    ಸಮಾಜ ಘಾತುಕ ಶಕ್ತಿಗಳ ಚಲನವಲನ, ಕ್ರಿಮಿನಲ್ ಸಂಚು, ದೇಶದ, ಗಣ್ಯರ ವಿರುದ್ಧ ದಾಳಿಯಂತಹ ಚಟುವಟಿಕೆಗಳನ್ನು ತಡೆಯಲು ಗುಪ್ತಚರ ಸಂಸ್ಥೆಗಳು ಫೋನ್ ಕದ್ದಾಲಿಕೆ ಮಾಡುತ್ತವೆ. ಸಿಬಿಐ, ಗುಪ್ತಚರ ಇಲಾಖೆ, ಕಂದಾಯ ಗುಪ್ತಚರ, ಮಾದಕವಸ್ತು ನಿಯಂತ್ರಣ ದಳ, ಆದಾಯ ತೆರಿಗೆ ಇಲಾಖೆ ಮತ್ತು ಪೋಲಿಸ್ ಇಲಾಖೆ ಕದ್ದಾಲಿಕೆಯನ್ನು ಕಾನೂನಿನ ಅಡಿ ಮಾಡಬಹುದು. ಫೋನ್ ಕದ್ದಾಲಿಸಲು ಉಪಗ್ರಹ ಆಧಾರಿತ ವ್ಯವಸ್ಥೆಗಳು, ಟೆಲಿಫೋನ್ ಎಕ್ಸ್ ಚೇಂಜ್‍ನ ನೆರವಿನೊಂದಿಗೆ ಪ್ರತ್ಯೇಕ ಎಲೆಕ್ಟ್ರಾನಿಕ್ ವ್ಯವಸ್ಥೆಗಳ ಮೂಲಕ ಕದ್ದಾಲಿಕೆ ಮಾಡಲಾಗುತ್ತದೆ.

    ನಿಯಮ ಏನು ಹೇಳುತ್ತೆ: 1885ರ ಇಂಡಿಯನ್ ಟೆಲಿಗ್ರಾಫ್ ಕಾಯ್ದೆ ಸೆಕ್ಷನ್ 5 (2)ರಲ್ಲಿ 419ನೇ ಮತ್ತು 419ಎ ನಿಬಂಧನೆಗಳಲ್ಲಿ ಫೋನ್ ಕರೆಗಳ ಮಾಹಿತಿ ಪಡೆಯುವ, ಕೇಳುವ ಬಗ್ಗೆ ಹೇಳಲಾಗಿದೆ. ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ, ಭದ್ರತೆಗೆ ತೊಂದರೆಯಾಗುವ ವಿಚಾರಗಳಲ್ಲಿ ಫೋನ್ ಕದ್ದಾಲಿಕೆಗೆ ಅವಕಾಶವಿದ್ದು ಕ್ಯಾಬಿನೆಟ್ ಕಾರ್ಯದರ್ಶಿ, ಕಾನೂನು ಕಾರ್ಯದರ್ಶಿ ಈ ಬಗ್ಗೆ ನಿರ್ಧಾರ ಕೈಗೊಂಡು, ಗೃಹ ಇಲಾಖೆಗೆ ಮಾಹಿತಿ ನೀಡಬೇಕು. ಈ ಬಗ್ಗೆ ಗೃಹ ಇಲಾಖೆ 2 ತಿಂಗಳೊಳಗೆ ಪರಿಶೀಲನೆ ನಡೆಸಿ ತೀರ್ಮಾನಿಸಬೇಕು. ಒಂದು ಬಾರಿ ಅನುಮತಿ ನೀಡಿದರೆ ಅದು 6 ತಿಂಗಳ ಅವಧಿಯದ್ದಾಗಿರುತ್ತದೆ. ಹೀಗೆ ಕದ್ದಾಲಿಕೆ ವೇಳೆ ಪಡೆದ ಮಾಹಿತಿಗಳನ್ನು ಬಳಸಿ 2 ತಿಂಗಳೊಳಗೆ ಅವುಗಳನ್ನು ನಾಶಪಡಿಸಬೇಕು. ಇದು ಹೊರತಾಗಿ ಕೋರ್ಟ್ ನಿರ್ದೇಶನದ ಮೇರೆಗೆ ಫೋನ್ ಕದ್ದಾಲಿಕೆಗೆ ಅವಕಾಶವಿದೆ.

    ಒಂದೊಮ್ಮೆ ಫೋನ್ ಕದ್ದಾಲಿಕೆಯಾದರೆ ವ್ಯಕ್ತಿಯ ಖಾಸಗಿ ತನಕ್ಕೆ ಧಕ್ಕೆ ತಂದದ್ದಕ್ಕಾಗಿ ಆತ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಬಹುದು. ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಬಹುದು. ಅಕ್ರಮ ಕದ್ದಾಲಿಕೆ ವಿಚಾರದ ಬಗ್ಗೆ ಭಾರತೀಯ ಟೆಲಿಗ್ರಾಫ್ ಕಾಯ್ದೆಯ ಸೆ26(ಬಿ) ಅಡಿಯಲ್ಲಿ ಕೋರ್ಟ್‍ಗೂ ದೂರು ನೀಡಬಹುದು. ಒಂದು ವೇಳೆ ಕದ್ದಾಲಿಸಿದ್ದು ಸಾಬೀತಾದರೆ ಅಪರಾಧಿಗೆ 3 ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಫೋನ್ ಕದ್ದಾಲಿಕೆ ಸಣ್ಣ ಸಾಕ್ಷಿ ನೀಡಿದ್ರೂ ಕ್ರಮ: ಬಿಎಸ್‍ವೈಗೆ ಸಿಎಂ ಸವಾಲು

    ಫೋನ್ ಕದ್ದಾಲಿಕೆ ಸಣ್ಣ ಸಾಕ್ಷಿ ನೀಡಿದ್ರೂ ಕ್ರಮ: ಬಿಎಸ್‍ವೈಗೆ ಸಿಎಂ ಸವಾಲು

    ರಾಮನಗರ: ರಾಜ್ಯ ಸರ್ಕಾರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎನ್ನುವುದಕ್ಕೆ ಯಡಿಯೂರಪ್ಪನವರು ಯಾವುದೇ ಸಣ್ಣ ಸಾಕ್ಷ್ಯ ನೀಡಿದರೂ ಕೂಡ ನಾನೇ ನೇರ ಕ್ರಮಕೈಗೊಳ್ಳುವುದಾಗಿ ಸಿಎಂ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

    ಜಿಲ್ಲೆಯ ಕೈಲಾಂಚದಲ್ಲಿ ಮಾತನಾಡಿದ ಸಿಎಂ, ಕೇಂದ್ರದಲ್ಲಿ ಅವರದ್ದೇ ಸರ್ಕಾರ ಆಡಳಿತ ನಡೆಸುತ್ತಿದೆ. ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಯಾರ ಯಾರ ಫೋನ್ ಕದ್ದಾಲಿಕೆ ಆಗುತ್ತಿದೆ ಎಂಬುವುದನ್ನು ತನಿಖೆ ನಡೆಸಲು ಅವಕಾಶವಿದ್ದು, ತನಿಖೆ ನಡೆಸಲಿ. ಈ ಹಿಂದೆ ಬಿಜೆಪಿ ಸರ್ಕಾರದ ನಾಯಕರು ತಮ್ಮ ಆಡಳಿತದಲ್ಲಿ ಮಾಡಿದ ಕೆಲಸವನ್ನು ತಲೆಯಲ್ಲಿ ಇಟ್ಟುಕೊಂಡು ಈ ಆರೋಪ ಮಾಡಿರಬೇಕು. ಯಾವುದೇ ಪಕ್ಷದ ಮುಖಂಡರ ಅಥವಾ ವ್ಯಕ್ತಿಯ ಫೋನ್ ಕದ್ದಾಲಿಕೆ ಮಾಡುವ ಚಟವಿಲ್ಲ. ಇಂತಹ ಹವ್ಯಾಸದಲ್ಲಿ ನಾನು ಬೆಳೆದು ಬಂದಿಲ್ಲ. ಈ ಬಗ್ಗೆ ಸಣ್ಣ ಸಾಕ್ಷಿ ತಂದು ಕೊಟ್ಟರು ನಾನೇ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಎಸೆದರು.

    ಇದೇ ವೇಳೆ ಕೊಡಗು ಪ್ರವಾಹದಲ್ಲಿ ಉಂಟಾದ ನಷ್ಟದ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಸರ್ಕಾರ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ವರದಿ ನೀಡಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಈ ಕುರಿತು ಕ್ರಮಕೈಗೊಳ್ಳಲಾಗುತ್ತದೆ. ಕೇವಲ ಕೊಡಗು ಮಾತ್ರವಲ್ಲದೇ ಇತರೇ ಜಿಲ್ಲೆಗಳಲ್ಲಿ ಉಂಟಾದ ನಷ್ಟ ಕುರಿತು ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುತ್ತದೆ. ಇದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.

    ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದ ಬಿಎಸ್‍ವೈ, ಸಮ್ಮಿಶ್ರ ಸರ್ಕಾರ ಎಲ್ಲಿ ಬಿದ್ದು ಹೋಗುತ್ತದೆಯೋ ಎನ್ನುವ ಭೀತಿಯಿಂದ ರಾಜ್ಯಸರ್ಕಾರ ನನ್ನ ಹಾಗೂ ಸಿದ್ದರಾಮಯ್ಯನವರ ಫೋನ್‍ಗಳನ್ನು ಕದ್ದಾಲಿಕೆ ಮಾಡುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದ್ದರು. ಅಲ್ಲದೇ ಕಾಂಗ್ರೆಸ್ಸಿನ ಹಿರಿಯ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ. ಲೋಕಸಭಾ ಚುನಾವಣಾ ವೇಳೆಗೆ ಯಾವ ಯಾವ ನಾಯಕರು ಸೇರುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದ್ದರು.

    ಏನಿದು ಫೋನ್ ಟ್ಯಾಪಿಂಗ್?
    ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಫೋನ್ ಟ್ಯಾಪಿಂಗ್‍ಗೆ ವಿರೋಧದ ನಡುವೆಯೂ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ಅಂದಿನ ಕಾಂಗ್ರಸ್ಸಿನ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಅತ್ಯಾಧುನಿಕ ತಂತ್ರಜ್ಞಾನದ ದೂರವಾಣಿ ಕರೆ ಹಾಗೂ ಸಂಭಾಷಣೆಗಳ ಸಂಪೂರ್ಣ ಮಾಹಿತಿ ನೀಡುವ ಎರಡು ಸಾಧನಗಳನ್ನು ಖರೀದಿ ಮಾಡಲಾಗಿತ್ತು. ಅವುಗಳಲ್ಲಿ ಒಂದನ್ನು ರಾಜ್ಯ ಗುಪ್ತಚರ ಇಲಾಖೆಯಲ್ಲಿ ಇರಿಸಿದ್ದಾರೆ. ಇಂತಿಷ್ಟು ಮೀಟರ್ ಪರಿಧಿಯಲ್ಲಿ ಈ ಸಾಧನವನ್ನು ಅಳವಡಿಸಿ ಅದರಲ್ಲಿ ನಿಗಧಿತ ಫೋನ್ ನಂಬರ್‍ಗಳನ್ನು ಅನ್ನು ನಮೂದಿಸಿದರೆ, ಆ ನಂಬರಿನ ಒಳ ಮತ್ತು ಹೊರ ಕರೆಗಳ ಸಂಭಾಷಣೆಗಳನ್ನು ಯಥಾವತ್ತಾಗಿ ಕೇಳಬಹುದಾಗಿದೆ. ಅಲ್ಲದೇ ಅವುಗಳನ್ನು ಧ್ವನಿಮುದ್ರಿಕೆ ಕೂಡ ಮಾಡಬಹುದಾಗಿದೆ.

    ಮಾಹಿತಿಗಳ ಪ್ರಕಾರ ಕಾಂಗ್ರೆಸ್‍ನ 15 ಶಾಸಕರು ಹಾಗೂ ಒಬ್ಬ ಸಚಿವರು ಸೇರಿದಂತೆ ಇಬ್ಬರು ಜೆಡಿಎಸ್ ಒಬ್ಬರು ಹಾಗೂ ಮೂವರು ಮಾಜಿ ಶಾಸಕರ ಫೋನ್ ಕದ್ದಾಲಿಕೆ ನಡೆದಿದ್ದು, ಸಂಭಾಷಣೆಯಲ್ಲಿ ಸಂಪುಟ ವಿಸ್ತರಣೆ ಗಣೇಶ ಹಬ್ಬಕ್ಕೆ ಮೊದಲು ಆಗದಿದ್ದರೆ, ಲೋಕಸಭಾ ಚುನಾವಣೆಗೂ ಮುನ್ನವೇ ಸರ್ಕಾರಕ್ಕೆ ಆಪತ್ತು ಬರುವ ಸೂಚನೆ ಇದೆ. ಸಾಧ್ಯವಾದರೆ ಬದಲಿ ಸರ್ಕಾರವನ್ನು ರಚನೆ ಮಾಡೋಣ, ಇಲ್ಲವೇ ಹೊಸದಾಗಿ ಚುನಾವಣೆ ಎದುರಿಸುವ ಕುರಿತು ದಾಖಲಾಗಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರ ಬಿದ್ದೋಗುತ್ತೋ ಅನ್ನೋ ಭೀತಿಯಿಂದ ಮುಖಂಡರ ಫೋನ್ ಕದ್ದಾಲಿಕೆ: ಬಿಎಸ್‍ವೈ

    ಸರ್ಕಾರ ಬಿದ್ದೋಗುತ್ತೋ ಅನ್ನೋ ಭೀತಿಯಿಂದ ಮುಖಂಡರ ಫೋನ್ ಕದ್ದಾಲಿಕೆ: ಬಿಎಸ್‍ವೈ

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಎಲ್ಲಿ ಬಿದ್ದು ಹೋಗುತ್ತದೆಯೋ ಎನ್ನುವ ಭೀತಿಯಿಂದ ರಾಜ್ಯಸರ್ಕಾರ ನನ್ನ ಹಾಗೂ ಸಿದ್ದರಾಮಯ್ಯನವರ ಫೋನ್‍ಗಳನ್ನು ಕದ್ದಾಲಿಕೆ ಮಾಡುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು  ಗಂಭೀರವಾಗಿ ಆರೋಪಿಸಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ಸಿನ ಮಾಜಿ ಸಚಿವ ಬಾಬುರಾವ್ ಚಿಂಚನೂರು ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಂಚನಸೂರು ಸೇರ್ಪಡೆಯಿಂದ ಬಿಜೆಪಿ ಆನೆ ಬಲ ಬಂದಂತಾಗಿದೆ. ಇವರಷ್ಟೇ ಅಲ್ಲದೇ ಕಾಂಗ್ರೆಸ್ಸಿನ ಹಿರಿಯ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ. ಲೋಕಸಭಾ ಚುನಾವಣಾ ವೇಳೆಗೆ ಯಾವ ಯಾವ ನಾಯಕರು ಸೇರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ತಿಳಿಸಿದರು.

    ಇದರಿಂದಾಗಿ ಎಲ್ಲಿ ನಮ್ಮ ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತದೆಯೋ ಎಂಬ ಭಯದಿಂದ, ನನ್ನದೂ ಸೇರಿದಂತೆ ಸಿದ್ದರಾಮಯ್ಯ ಹಾಗೂ ಹಲವು ಪ್ರತಿಪಕ್ಷಗಳ ಮುಖಂಡರ ಫೋನ್ ಕರೆಗಳನ್ನು ರಾಜ್ಯ ಸರ್ಕಾರ ಕದ್ದಾಲಿಕೆ ಮಾಡುತ್ತಿದೆ. ಈ ಕುರಿತು ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು. ಹೆಚ್ಚಿನ ರೀತಿಯಲ್ಲಿ ಕದ್ದಾಲಿಕೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದರು.

    ಏನಿದು ಫೋನ್ ಟ್ಯಾಪಿಂಗ್?
    ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಫೋನ್ ಟ್ಯಾಪಿಂಗ್‍ಗೆ ವಿರೋಧದ ನಡುವೆಯೂ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ಅಂದಿನ ಕಾಂಗ್ರೆಸ್ ಸರ್ಕಾರ ಅನುಮತಿ ನೀಡಿತ್ತು. ಹೀಗಾಗಿ ಅತ್ಯಾಧುನಿಕ ತಂತ್ರಜ್ಞಾನದ ದೂರವಾಣಿ ಕರೆ ಹಾಗೂ ಸಂಭಾಷಣೆಗಳ ಸಂಪೂರ್ಣ ಮಾಹಿತಿ ನೀಡುವ ಎರಡು ಸಾಧನಗಳನ್ನು ಖರೀದಿ ಮಾಡಲಾಗಿತ್ತು. ಅವುಗಳಲ್ಲಿ ಒಂದನ್ನು ರಾಜ್ಯ ಗುಪ್ತಚರ ಇಲಾಖೆಯಲ್ಲಿ ಇರಿಸಿದ್ದಾರೆ. ಇಂತಿಷ್ಟು ಮೀಟರ್ ಪರಿಧಿಯಲ್ಲಿ ಈ ಸಾಧನವನ್ನು ಅಳವಡಿಸಿ ಅದರಲ್ಲಿ ನಿಗಧಿತ ಫೋನ್ ನಂಬರ್ ಗಳನ್ನು ನಮೂದಿಸಿದರೆ, ಆ ನಂಬರಿಗೆ ಬರುವ  ಒಳ ಮತ್ತು ಹೊರ ಕರೆಗಳ ಸಂಭಾಷಣೆಗಳನ್ನು ಯಥಾವತ್ತಾಗಿ ಕೇಳಬಹುದಾಗಿದೆ. ಅಲ್ಲದೇ ಅವುಗಳನ್ನು ಧ್ವನಿಮುದ್ರಿಕೆ ಕೂಡ ಮಾಡಬಹುದಾಗಿದೆ.

    ಮಾಹಿತಿಗಳ ಪ್ರಕಾರ ಕಾಂಗ್ರೆಸ್‍ನ 15 ಶಾಸಕರು, ಒಬ್ಬ ಸಚಿವರು ಸೇರಿದಂತೆ ಇಬ್ಬರು ಜೆಡಿಎಸ್ ಹಾಗೂ ಮೂವರು ಮಾಜಿ ಶಾಸಕರ ಫೋನ್ ಕದ್ದಾಲಿಕೆ ನಡೆದಿದೆ. ಸಂಭಾಷಣೆಯಲ್ಲಿ ಸಂಪುಟ ವಿಸ್ತರಣೆ ಗಣೇಶ ಹಬ್ಬಕ್ಕೆ ಮೊದಲು ಆಗದಿದ್ದರೆ, ಲೋಕಸಭಾ ಚುನಾವಣೆಗೂ ಮುನ್ನವೇ ಸರ್ಕಾರಕ್ಕೆ ಆಪತ್ತು ಬರುವ ಸೂಚನೆ ಇದೆ. ಸಾಧ್ಯವಾದರೆ ಬದಲಿ ಸರ್ಕಾರವನ್ನು ರಚನೆ ಮಾಡಿ, ಇಲ್ಲವೇ ಹೊಸದಾಗಿ ಚುನಾವಣೆ ಎದುರಿಸುವ ಕುರಿತ ಮಾಹಿತಿ ದಾಖಲಾಗಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv