Tag: ಫೋನ್ ಕದ್ದಾಲಿಕೆ

  • ಕಳ್ಳಗಿವಿ ಕೇಸ್ ತನಿಖೆ ಚುರುಕು- ಸಿಬಿಐ ಬಳಿ ಸ್ಫೋಟಕ ಸತ್ಯ ಬಿಚ್ಚಿಟ್ಟ ಅಲೋಕ್ ಕುಮಾರ್?

    ಕಳ್ಳಗಿವಿ ಕೇಸ್ ತನಿಖೆ ಚುರುಕು- ಸಿಬಿಐ ಬಳಿ ಸ್ಫೋಟಕ ಸತ್ಯ ಬಿಚ್ಚಿಟ್ಟ ಅಲೋಕ್ ಕುಮಾರ್?

    ಬೆಂಗಳೂರು: ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತಷ್ಟು ಚುರುಕುಗೊಳಿಸಿದ್ದು, ಪ್ರಕರಣದಲ್ಲಿ ಹೊಸ ಹೊಸ ಟ್ವಿಸ್ಟ್ ಲಭಿಸುತ್ತಿದೆ. ಗುರುವಾರ ಇಡೀ ದಿನ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದ ಸಿಬಿಐ ಅಧಿಕಾರಿಗಳಿಗೆ ಸ್ಫೋಟಕ ಅಂಶಗಳು ಲಭ್ಯವಾಗಿದೆ ಎಂಬ ಮಾಹಿತಿ ಲಭಿಸಿದೆ.

    ಇಡೀ ದಿನ ಸಿಬಿಐ ಅಧಿಕಾರಿಗಳು ಅಲೋಕ್ ಕುಮಾರ್ ಅವರನ್ನು ಪ್ರಶ್ನಿಸಿದ್ದು, ಈ ಸಂದರ್ಭದಲ್ಲಿ ಪ್ರಕರಣದ ಹಲವಾರು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಪ್ರಕರಣ ಕೆಲ ಸತ್ಯಾಂಶಗಳನ್ನು ಅಲೋಕ್ ಕುಮಾರ್ ತಿಳಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಅವರಿಗೆ ಸಿಬಿಐ ಅಧಿಕಾರಿಗಳು, ಕೆಳಗಿನ ಅಧಿಕಾರಿಗಳಿಗೆ ಟ್ಯಾಪಿಂಗ್‍ಗೆ ಸೂಚಿಸಿದ್ದೀರಿ, ಯಾವ ಉದ್ದೇಶದಿಂದ ನೀವು ಫೋನ್ ಮಾಡಿದ್ದು ಎಂದು ಪ್ರಶ್ನಿಸಿದ್ದು, ಈ ಪ್ರಶ್ನೆಗಳಿಗೆ ಉತ್ತರಿಸಿರುವ ಅಲೋಕ್ ಕುಮಾರ್ ಅಚ್ಚರಿ ಮೂಡಿಸುವಂತಹ ಸತ್ಯಾಂಶಗಳನ್ನು ಬಿಚ್ಚಿಟ್ಟಿದ್ದಾರೆ.

    ಅಲೋಕ್‍ಕುಮಾರ್ ಹೇಳಿದ್ದೇನು?
    ಫೋನ್ ಟ್ಯಾಪಿಂಗ್ ಬಗ್ಗೆ ಅಲೋಕ್ ಕುಮಾರ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಕೆಲ ಅಧಿಕಾರಿಗಳಿಗೆ ಗುಟ್ಟುಬಿಟ್ಟು ಕೊಟ್ಟಿದ್ದು, ಇದರ ಹಿಂದಿನ ಉದ್ದೇಶವನ್ನು ಸಿಬಿಐ ಅಧಿಕಾರಿಗಳು ಪ್ರಶ್ನಿಸಿದ್ದರು. ಸಿಬಿಐ ಕೇಳಿದ ಪ್ರಶ್ನೆಗೆ ಸತ್ಯ ಬಿಚ್ಚಿಟ್ಟ ಅಲೋಕ್‍ಕುಮಾರ್ ಅವರು, ‘ದೊಡ್ಡವರ’ ಸೂಚನೆಯಂತೆ ಕೆಲವರ ಫೋನ್ ಟ್ಯಾಪಿಂಗ್ ನಡೆದಿದೆ. ಅವರು ಕೊಟ್ಟ ನಂಬರ್ ಗಳು ಟ್ಯಾಪಿಂಗ್ ಆಗಿದೆ ಎಂದು ತಿಳಿಸಿದ್ದಾರೆ.

    ಸಿಬಿಐ ಅಧಿಕಾರಿಗಳ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿರುವ ಅಲೋಕ್ ಕುಮಾರ್ ಅವರು, ಫೋನ್ ಟ್ಯಾಪಿಂಗ್‍ಗೆ ಸೂಚನೆ ಕೊಟ್ಟಿದ್ದು ‘ದೊಡ್ಡವರೇ’, ಅವರ ಸೂಚನೆಯಂತೆ ಕೊಟ್ಟ ಫೋನ್ ನಂಬರ್ ಗಳನ್ನು ಫೋನ್ ಟ್ಯಾಪ್ ಮಾಡಿ ಕೆಳ ಅಧಿಕಾರಿಗಳಿಗೆ ತಲುಪಿಸಲಾಗಿದೆ. ನನಗೆ ವಾಟ್ಸಾಪ್‍ನಲ್ಲಿ ಸಂದೇಶ ನೀಡುತ್ತಿದ್ದರು. ಅದರಂತೆ ನಾನು ಮಾಡಿದ್ದೇನೆ. ಈ ಕುರಿತ ಎಲ್ಲಾ ಮಾಹಿತಿಯನ್ನು ನಾನು ಸ್ಟೇಟ್‍ಮೆಂಟ್ ನೀಡುವಾಗ ಹೇಳುತ್ತೇನೆ ಎಂದಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ.

    ಸದ್ಯ ಅಲೋಕ್ ಕುಮಾರ್ ಬಿಚ್ಚಿಟ್ಟಿರುವ ಈ ಮಾಹಿತಿಯ ಅನ್ವಯ ಅವರು ಹೇಳಿರುವ ‘ದೊಡ್ಡವರು’ ಯಾರು ಎಂಬ ಪ್ರಶ್ನೆ ಉದ್ಭವಿಸಿದ್ದು, ಫೋನ್ ಟ್ಯಾಪ್ ಮಾಡಲು ಸೂಚನೆ ನೀಡಿದ್ದು, ಡಿಜಿಪಿ ಅವರ ಅಥವಾ ಮಾಜಿ ಗೃಹ ಸಚಿವರಾ, ಮಾಜಿ ಉಪ ಮುಖ್ಯಮಂತ್ರಿಗಳಾ ಅಥವಾ ಮಾಜಿ ಮುಖ್ಯಮಂತ್ರಿಗಳಾ ಎಂಬ ಹಲವು ಅನುಮಾನಗಳು ಹುಟ್ಟಿಕೊಂಡಿದೆ. ಪ್ರಕರಣದ ತನಿಖೆ ಚುರುಕುಗೊಂಡಿರುವುದರಿಂದ ಕಳ್ಳಗಿವಿ ಪ್ರಕರಣ ‘ದೊಡ್ಡವರಿಗೂ’ ಉರುಳಾಗುತ್ತಾ? ವಾಟ್ಸಾಪ್ ಮೂಲಕ ಸಂದೇಶ ರವಾನೆಯಾಗಿರುವುದರಿಂದ ಸಿಬಿಐ ವಾಟ್ಸಾಪ್ ಕೂಡ ಪರಿಶೀಲನೆ ನಡೆಸುತ್ತಾ? ಮುಂದಿನ ವಿಚಾರಣೆಯಲ್ಲಿ ದೊಡ್ಡವರಿಗೂ ಸಂಕಷ್ಟ ಎದುರಾಗಲಿದೆಯಾ ಎಂಬ ಹಲವು ಪ್ರಶ್ನೆಗಳು ಮೂಡಿದೆ.

    ಪ್ರಮುಖವಾಗಿ ‘ದೊಡ್ಡವರು’ ನೀಡಿರುವ ಸೂಚನೆ ಮೇರೆಗೆ ರಾಜಕಾರಣಿಗಳು, ಪೊಲೀಸರು ಹಾಗೂ ಮಠಾಧೀಶರ ಫೋನ್ ಕೂಡ ಟ್ಯಾಪಿಂಗ್ ಮಾಡಲಾಗಿದ್ದು, ಆದಿಚುಂಚನಗಿರಿ ಸ್ವಾಮೀಜಿ ಅವರ ಫೋನ್ ಕೂಡ ಟ್ಯಾಪ್ ಆಗಿರುವ ಮಾಹಿತಿ ವಿಚಾರಣೆ ವೇಳೆ ಲಭಿಸಿದೆ. ಈ ಮಾಹಿತಿಯನ್ನು ಪೊಲೀಸರು ಕೇಂದ್ರ ಗೃಹ ಸಚಿವಾಲಯಕ್ಕೂ ನೀಡಿದ್ದಾರೆ ಎನ್ನಲಾಗಿದ್ದು, ಸ್ಯಾಂಡಲ್ ಸ್ಮಗ್ಲಿಂಗ್ ಸೇರಿದಂತೆ 20ಕ್ಕೂ ಹೆಚ್ಚು ಕೇಸಲ್ಲಿ ಭಾಗಿಯಾಗಿರುವ ವ್ಯಕ್ತಿಯ ಸಹಾಯ ಪಡೆಯಲಾಗಿತ್ತು. ಸ್ಯಾಂಡಲ್ ಸ್ಮಗ್ಲಿಂಗ್ ಕಳ್ಳನ ಗ್ಯಾಂಗ್ ಪತ್ತೆ ಹಚ್ಚುವ ನೆಪದಲ್ಲೇ ಟ್ಯಾಪಿಂಗ್ ನಡೆಸಲಾಗಿದೆ. ಶ್ರೀಗಳ ಫೋನ್ ಜೊತೆಗೆ ಮತ್ತಿಬ್ಬರ ಮೇಲೂ ಪೊಲೀಸರು ನಿಗಾ ವಹಿಸಿದ್ದರು. ನಿರ್ಮಲಾನಂದ ಶ್ರೀ ಜೊತೆ ಆಪ್ತರಾದ ಲಿಂಗೇಶ್, ರಮೇಶ್ ಅವರ ನಂಬರ್ ಗಳನ್ನು ಸರಿ ಸುಮಾರು 3 ತಿಂಗಳ ಕಾಲ ಟ್ಯಾಪ್ ಮಾಡಲಾಗಿತ್ತು ಎನ್ನಲಾಗಿದೆ.

  • ಅಲೋಕ್‍ ಕುಮಾರ್ ಈಗ್ಲೂ ದಕ್ಷ ಅಧಿಕಾರಿ – ಸಿಬಿಐ ದಾಳಿಗೂ ನನಗೂ ಸಂಬಂಧವಿಲ್ಲ: ಎಚ್‍ಡಿಕೆ

    ಅಲೋಕ್‍ ಕುಮಾರ್ ಈಗ್ಲೂ ದಕ್ಷ ಅಧಿಕಾರಿ – ಸಿಬಿಐ ದಾಳಿಗೂ ನನಗೂ ಸಂಬಂಧವಿಲ್ಲ: ಎಚ್‍ಡಿಕೆ

    ಬೆಂಗಳೂರು: ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ನಿವಾಸದಲ್ಲಿ ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ ಕುರಿತ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ, ಸಿಬಿಐ ದಾಳಿಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

    ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಫೋನ್ ಕದ್ದಾಲಿಕೆ ಕುರಿತ ವಿಚಾರಣೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಎಚ್‍ಡಿಕೆ, ಯಾರ ಮನೆ ಮೇಲಾದರೂ ದಾಳಿ ನಡೆಯಲಿ. ನನ್ನನ್ನು ಯಾಕೆ ಕೇಳುತ್ತೀರಿ. ಅದಕ್ಕೂ ನನಗೂ ಏನು ಸಂಬಂಧ? ಎಲ್ಲರ ಅವಧಿಯಲ್ಲೂ ಫೋನ್ ಟ್ಯಾಪಿಂಗ್ ನಡೆದಿದೆ. ಯಾರ ಯಾರ ಅವಧಿಯಲ್ಲಿ ಹೇಗೆ ನಡೆಸಿದ್ದಾರೆ ಎಂದು ತನಿಖೆ ನಡೆಸುತ್ತಿದ್ದಾರೆ. ಅದಕ್ಕೆ ನಾನು ಏಕೆ ತಲೆ ಕೆಡಿಸಿಕೊಳ್ಳಲಿ ಎಂದರು.

    ಈಗಲೂ ನಾನು ಹೇಳುತ್ತಿದ್ದೇನೆ. ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರು ದಕ್ಷ ಅಧಿಕಾರಿಯಾಗಿದ್ದಾರೆ. ಪ್ರಕರಣದಲ್ಲಿ ನನ್ನ ಮನೆಗೂ ವಿಚಾರಣೆಗೆ ಬಂದರೆ ಬರಲಿ. ದೇಶದ ಕಾನೂನು ವ್ಯವಸ್ಥೆಯ ಅಡಿ ಯಾರನ್ನು ಬೇಕಾದರು ತನಿಖೆ ಮಾಡಬಹುದು. ಇದಕ್ಕೆ ಗಾಬರಿ ಪಡುವ ಅಗತ್ಯವಿಲ್ಲ ಎಂದರು.

    ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆಯ್ಕೆ ಕುರಿತು ಇಂದು ಜೆಡಿಎಸ್ ಕಚೇರಿಯಲ್ಲಿ ಸಭೆ ನಡೆಸಿದರು. ಜೆಡಿಎಸ್ ವರಿಷ್ಠರಾದ ದೇವೇಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 15 ಕ್ಷೇತ್ರಗಳ ಅಭ್ಯರ್ಥಿ ಬಗ್ಗೆ ನಿರ್ಧಾರವಾಗಲಿದೆ. ಈಗಾಗಲೇ ಎಲ್ಲಾ ಕ್ಷೇತ್ರಗಳ ಮುಖಂಡರ ಸಭೆ ಮಾಡಿ ಅಭ್ಯರ್ಥಿಗಳನ್ನ ಕುಮಾರಸ್ವಾಮಿ ಫೈನಲ್ ಮಾಡಿದ್ದು, ಇಂದಿನ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಮಂಡಿಸಿ ಚರ್ಚೆ ಮಾಡಿ ಅಂತಿಮವಾಗಿ ಅಭ್ಯರ್ಥಿ ಗಳನ್ನ ಘೋಷಣೆ ಮಾಡಲಾಗುತ್ತೆ ಎಂಬ ಮಾಹಿತಿ ಲಭಿಸಿದೆ.

  • ಫೋನ್ ಟ್ಯಾಪಿಂಗ್ ಪ್ರಕರಣ- ಅಲೋಕ್ ಕುಮಾರ್‌ಗೆ ಸಿಬಿಐ ಡ್ರಿಲ್

    ಫೋನ್ ಟ್ಯಾಪಿಂಗ್ ಪ್ರಕರಣ- ಅಲೋಕ್ ಕುಮಾರ್‌ಗೆ ಸಿಬಿಐ ಡ್ರಿಲ್

    ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಎಡಿಜಿಪಿ ಕೆಎಸ್‌ಆರ್‌ಪಿ ಅಲೋಕ್ ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ಸತತ 1 ಗಂಟೆಯಿಂದ ವಿಚಾರಣೆ ನಡೆಸುತ್ತಿದ್ದಾರೆ.

    ಅಲೋಕ್ ಕುಮಾರ್ ನಿವಾಸದಲ್ಲೇ ಸತತ 1 ಗಂಟೆಯಿಂದ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬೆಳ್ಳಂಬೆಳಗ್ಗೆ ಮನೆಗೆ ಭೇಟಿ ಕೊಟ್ಟು ಅಲೋಕ್ ಕುಮಾರ್ ಅವರಿಗೆ ಸಿಬಿಐ ಶಾಕ್ ಕೊಟ್ಟಿದ್ದಾರೆ. ಅಲೋಕ್ ಅವರು ಬೆಂಗಳೂರು ಕಮೀಷನರ್ ಆಗಿದ್ದಾಗ ಫೋನ್ ಕದ್ದಾಲಿಕೆ ಪ್ರಕರಣ ನಡೆದಿದ್ದು, ಅಲೋಕ್ ಅವರ ಮನೆಯಲ್ಲೇ ಕದ್ದಾಲಿಕೆ ನಡೆದಿದೆ. ಎಲ್ಲಾ ಮಾಹಿತಿಯನ್ನು ಅವರು ಪೆನ್‍ಡ್ರೈವ್‍ನಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಅವರಿಗೆ ಈ ಬಗ್ಗೆ ಮೊದಲೇ ಗೊತ್ತಿತ್ತು ಎಂಬ ಆರೋಪವಿದೆ. ಆದ್ದರಿಂದ ಈ ಬಗ್ಗೆ ತನಿಖೆ ಕೈಗೊಂಡಿರುವ ಸಿಬಿಐ ಅಧಿಕಾರಿಗಳು ಅಲೋಕ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಈ ರೀತಿ ಫೋನ್ ಕದ್ದಾಲಿಕೆ ನಡೆದಿದೆ. ಇದರಲ್ಲಿ ಅನೇಕ ಐಎಎಸ್, ಐಪಿಎಸ್ ಹಾಗೂ ಇತರೆ ಹಿರಿಯ ಅಧಿಕಾರಿಗಳ ಹೆಸರು ಕೂಡ ಕೇಳಿಬಂದಿತ್ತು. ಅಲ್ಲದೆ ಅಲೋಕ್ ಕುಮಾರ್ ಅವರು ಕಮೀಷನರ್ ಹುದ್ದೆಯಿಂದ ಕೆಳಗಿಳಿದ ಬಳಿಕ ಕಚೇರಿಯಿಂದ ಸುಮಾರು 30 ಜಿಬಿಯಷ್ಟು ಆಡಿಯೋ ಕ್ಲಿಪ್ಪಿಂಗ್ಸ್ ಇದ್ದ ಆಡಿಯೋವನ್ನು ಅವರು ತೆಗೆದುಕೊಂಡು ಹೋಗಿದ್ದರು ಎಂಬ ಆರೋಪ ಕೂಡ ಇದೆ.

    ಈ ಸಂಬಂಧ ಸ್ವಯಂ ಪೇರಿತವಾಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 72 ಐಟಿ ಆ್ಯಕ್ಟ್, ಸೆಕ್ಷನ್ 26 ಇಂಡಿಯನ್ ಟೆಲಿಗ್ರಾಂ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿತ್ತು. ಈ ಪ್ರರಕಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ಹಸ್ತಾಂತರಿಸಿತ್ತು. ಈ ಬಗ್ಗೆ ಸಿಬಿಐ ಈಗ ತನಿಖೆ ಕೈಗೊಂಡಿದೆ.

  • ಸ್ವಾಮೀಜಿಗಳದ್ದು ಮಾತ್ರವಲ್ಲ, ನನ್ನ ಫೋನ್ ಸಹ ಕದ್ದಾಲಿಕೆಯಾಗಿದೆ – ಶಾಮನೂರು ಶಿವಶಂಕರಪ್ಪ

    ಸ್ವಾಮೀಜಿಗಳದ್ದು ಮಾತ್ರವಲ್ಲ, ನನ್ನ ಫೋನ್ ಸಹ ಕದ್ದಾಲಿಕೆಯಾಗಿದೆ – ಶಾಮನೂರು ಶಿವಶಂಕರಪ್ಪ

    ದಾವಣಗೆರೆ: ಕೇವಲ ಜಗದ್ಗುರುಗಳ ಫೋನ್ ಅಷ್ಟೇ ಅಲ್ಲ ನನ್ನ ಫೋನ್ ಕೂಡ ಕದ್ದಾಲಿಕೆಯಾಗಿದೆ ಎಂದು ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

    ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆದ ಶರನ್ನವರಾತ್ರಿ ಧರ್ಮ ಸಮ್ಮೇಳನದ ಹಂದರಗಂಬ ಪೂಜೆ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಂಭಾಪುರಿ ಜಗದ್ಗುರುಗಳ ಫೋನ್ ಕದ್ದಾಲಿಕೆಯಾಗಿದೆ ಎನ್ನುತ್ತಿದ್ದಾರೆ. ಕೇವಲ ಅವರದ್ದು ಮಾತ್ರವಲ್ಲ ನನ್ನ ಫೋನ್ ಕೂಡ ಕದ್ದಾಲಿಕೆಯಾಗಿದೆ. ಎಲ್ಲರ ಫೋನು ಟ್ಯಾಪ್ ಮಾಡುತ್ತಾರೆ. ಅದರಿಂದ ಏನಾಗುತ್ತದೆ, ಏನೂ ಮಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಅಷ್ಟೇ ಅಲ್ಲದೆ, ನಮ್ಮ ಮನೆ ಮೇಲೆ ಐಟಿ ದಾಳಿ ಕೂಡ ಆಗಿದೆ. ಒಕ್ಕಲಿಗರ ನಿರಂಜನಾನಂದ ಪುರಿ ಸ್ವಾಮೀಜಿಗಳದ್ದು ಸಹ ಫೋನ್ ಟ್ಯಾಪ್ ಆಗಿದೆ. ಎಲ್ಲರ ಫೋನ್ ಕದ್ದಾಲಿಕೆಯಾಗುತ್ತದೆ ಅದೆಲ್ಲ ಸಾಮಾನ್ಯ. ಏನು ಮಾಡಲು ಸಾಧ್ಯ ಎನ್ನುವ ಮೂಲಕ ಅಸಹಾಯಕತೆ ವ್ಯಕ್ತಪಡಿಸಿದರು.

  • ಕಳ್ಳಗಿವಿ ಇಟ್ಟಿಲ್ಲಾಂದ್ರೆ ಕುಮಾರಸ್ವಾಮಿಗ್ಯಾಕೆ ಟೆನ್ಶನ್: ಶೋಭಾ ಕರಂದ್ಲಾಜೆ ಪ್ರಶ್ನೆ

    ಕಳ್ಳಗಿವಿ ಇಟ್ಟಿಲ್ಲಾಂದ್ರೆ ಕುಮಾರಸ್ವಾಮಿಗ್ಯಾಕೆ ಟೆನ್ಶನ್: ಶೋಭಾ ಕರಂದ್ಲಾಜೆ ಪ್ರಶ್ನೆ

    ಉಡುಪಿ: ಫೋನ್ ಕದ್ದಾಲಿಕೆ ಯಾರೇ ಮಾಡಿದ್ದರೂ ತಪ್ಪು. ಸಿಬಿಐ ತನಿಖೆಯಿಂದ ಎಲ್ಲಾ ಸತ್ಯಾಂಶ ಹೊರಬರಲಿದೆ. ತಪ್ಪು ಮಾಡಿಲ್ಲ ಎನ್ನುವುದಾದರೆ ಅಪರಾಧ ಭಾವನೆ ಯಾಕೆ ಮೂಡುತ್ತೆ ಎಂದು ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಏನೂ ಮಾಡಿಲ್ಲ ಅಂದ್ರೆ ಖುಷಿಯಾಗಿರಲಿ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಫೋನ್ ಕದ್ದಾಲಿಕೆ ಬಗ್ಗೆ ತನಿಖೆ ಆಗಬೇಕೆಂಬ ಅಪೇಕ್ಷೆ ಇತ್ತು. ಯಾರು ತಪ್ಪು ಮಾಡಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಒಂದು ವೇಳೆ ಯಾರೂ ತಪ್ಪು ಮಾಡಿಲ್ಲ ಅಂದ್ರೆ ಇಡೀ ರಾಜ್ಯವೇ ಖುಷಿಪಡುತ್ತದೆ ಎಂದರು.

    ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ವರ್ಗಾವಣೆ ದಂಧೆ ವಿಚಾರದಲ್ಲಿ ಭಾಗಿಯಾಗಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನನಗೇನೂ ಗೊತ್ತೇ ಇಲ್ಲ. ನಾನು ನನ್ನದೇ ಕೆಲಸದಲ್ಲಿದ್ದೇನೆ. ನೆರೆ ಪ್ರವಾಸ, ಪಾರ್ಲಿಮೆಂಟ್ ಓಡಾಟದಲ್ಲಿದ್ದೇನೆ. ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ. ನನ್ನ ಫೋನ್ ಕದ್ದಾಲಿಕೆ ಆದರೆ ಸಮಸ್ಯೆಯಿಲ್ಲ. ಯಾಕೆಂದರೆ ಸಮಾಜ ದ್ರೋಹ, ದೇಶ ದ್ರೋಹದ ಕೆಲಸ ನಾನು ಮಾಡಿಲ್ಲ ಎಂದು ಹೇಳಿದರು.

    ರಾಜ್ಯ ಸಚಿವ ಸಂಪುಟ ರಚನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪಟ್ಟಿಯನ್ನು ಸಿಎಂ ಯಡಿಯೂರಪ್ಪನವರು ಹೈಕಮಾಂಡಿಗೆ ಕೊಟ್ಟಿದ್ದಾರೆ. ಯಾರು ಸಚಿವರಾಗುತ್ತಾರೆ, ಆಗಲ್ಲ ಎನ್ನುವ ನಿರ್ಧಾರ ಸಿಎಂ ಮತ್ತು ಹೈಕಮಾಂಡ್ ನಾಯಕರು ಮಾಡುತ್ತಾರೆ. ಮಂಗಳವಾರ ಪ್ರಮಾಣವಚನದೊಳಗೆ ಪಟ್ಟಿ ಬರಲಿದೆ ಎಂದು ತಿಳಿಸಿದರು.

    ಕೇಂದ್ರದಿಂದ ನೆರೆ ಪರಿಹಾರ ಆಧ್ಯಯನ ತಂಡ ಯಾವಾಗ ಬೇಕಾದ್ರು ಬರಬಹುದು ಎಂದ ಅವರು, ಗೃಹ ಸಚಿವರು, ಹಣಕಾಸು ಸಚಿವರು ಈಗಾಗಲೇ ಬಂದು ಹೋಗಿದ್ದಾರೆ. ನಾನು ರಾಜ್ಯ ರಾಜಕಾರಣ ಮಿಸ್ ಮಾಡಿಕೊಳ್ಳುತ್ತಿಲ್ಲ. ಸಂಸದೆಯಾಗಿ ನಾನು ಸಂತೋಷವಾಗಿದ್ದೇನೆ ಎಂದರು.

  • ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ಹಸ್ತಾಂತರ

    ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ಹಸ್ತಾಂತರ

    ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ಹಸ್ತಾಂತರಿಸಿ ಅಧಿಕೃತ ಆದೇಶ ಹೊರಡಿಸಿದೆ.

    ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಸಾಕ್ಷ್ಯಾಧಾರಗಳನ್ನು ಸಿಬಿಐಗೆ ವಹಿಸಬೇಕು. 2018ರ ಆಗಸ್ಟ್ 1ರಿಂದ ಇಲ್ಲಿಯವರೆಗಿನ ಫೋನ್ ಟ್ಯಾಪಿಂಗ್ ವಿವರಗಳನ್ನು ಸಲ್ಲಿಸಬೇಕು. ಆಡಳಿತ ಮತ್ತು ಪ್ರತಿ ಪಕ್ಷಗಳ ನಾಯಕರು, ಅವರ ಸಹವರ್ತಿಗಳು, ಸರ್ಕಾರಿ ನೌಕರರ ಕರೆ ವಿವರಗಳ ಸಲ್ಲಿಸಬೇಕು ಎಂದು ಗೃಹ ಇಲಾಖೆಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

    ಈ ಸಂಬಂಧ ಸ್ವಯಂ ಪೇರಿತವಾಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 72 ಐಟಿ ಆಕ್ಟ್, ಸೆಕ್ಷನ್ 26 ಇಂಡಿಯನ್ ಟೆಲಿಗ್ರಾಂ ಆಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿತ್ತು. ಈಗ ಈ ಪ್ರರಕಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ಹಸ್ತಾಂತರಿಸಿದೆ.

    ರಾಜಕಾರಣಿಗಳು, ರಾಜಕಾರಣಿಗಳ ಸಂಬಂಧಿಕರು, ಸರ್ಕಾರಿ ಅಧಿಕಾರಿಗಳ ಫೋನ್ ಟ್ಯಾಪಿಂಗ್ ಆಗಿರುವ ಬಗ್ಗೆ ದೃಢವಾಗಿದೆ. ಫೋನ್ ಟ್ಯಾಪಿಂಗ್ ಸಂಬಂಧಿಸಿದಂತೆ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸಲು ಸಿದ್ಧವೆಂದು ಸೈಬರ್ ಕ್ರೈಂ ರಾಜ್ಯ ಸರ್ಕಾರಕ್ಕೆ ತಿಳಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • ಡಿಕೆಶಿ ಮನೆಯಲ್ಲೇ ಫೋನ್ ಟ್ಯಾಪಿಂಗ್ ಮಷಿನ್ ಇದೆ- ಯೋಗೇಶ್ವರ್

    ಡಿಕೆಶಿ ಮನೆಯಲ್ಲೇ ಫೋನ್ ಟ್ಯಾಪಿಂಗ್ ಮಷಿನ್ ಇದೆ- ಯೋಗೇಶ್ವರ್

    ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣದ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇದೀಗ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದು, ಡಿಕೆಶಿ ಮನೆಯಲ್ಲೇ ಫೋನ್ ಟ್ಯಾಪಿಂಗ್ ಮಷಿನ್ ಇದೆ ಎಂದು ಆರೋಪಿಸಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನೆಯಲ್ಲೇ ಫೋನ್ ಟ್ಯಾಪಿಂಗ್ ಮಷಿನ್ ಇದೆ, ಕೋಟಿ ಕೋಟಿ ರೂ. ಹಣ ಕೊಟ್ಟು ಇಂತಹದ್ದೊಂದು ಯಂತ್ರವನ್ನು ಡಿಕೆಶಿ ತಂದಿದ್ದಾರೆ. ಎರಡು ವರ್ಷಗಳ ಹಿಂದೆಯೇ ಅವರು ನನ್ನ ಫೋನ್ ಕದ್ದಾಲಿಕೆ ಮಾಡಿದ್ದರು ಎಂದು ಆರೋಪಿಸಿದ್ದಾರೆ.

    ನನ್ನ ಫೋನು ಎರಡು ವರ್ಷಗಳಿಂದ ಕದ್ದಾಲಿಕೆಯಾಗುತ್ತಿದೆ. ಈ ಕುರಿತು ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಮೌಖಿಕವಾಗಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನನ್ನನ್ನು ಟಾರ್ಗೆಟ್ ಮಾಡಿಕೊಂಡು ಫೋನ್ ಕದ್ದಾಲಿಕೆ ಮಾಡಿದ್ದರು. ಇದು ನನಗೂ ಸಹ ತಿಳಿದಿತ್ತು, ಅಲ್ಲದೆ, ಈಗಿನ ತಂತ್ರಜ್ಞಾನ ಯುಗದಲ್ಲಿ ನಮ್ಮ ಫೋನ್ ಕದ್ದಾಲಿಕೆ ಮಾಡುತ್ತಿರುವ ಕುರಿತು ನಾವೇ ಪರಿಶೀಲಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

    ಇದೀಗ ಸಿಬಿಐ ತನಿಖೆ ನಡೆಸಲಾಗುತ್ತಿದೆ, ನಮ್ಮನ್ನು ವಿಚಾರಣೆಗೆ ಕರೆದರೆ ನಾವೂ ಸಹ ಈ ಕುರಿತು ತಿಳಿಸುತ್ತೇವೆ. ಫೋನ್ ಕದ್ದಾಲಿಕೆ ಮಾಡುವುದು ನಮ್ಮ ಮೂಲಭೂತ ಹಕ್ಕನ್ನು ಕಿತ್ತುಕೊಂಡಂತೆ. ಅಲ್ಲದೆ, ಡಿ.ಕೆ.ಶಿವಕುಮಾರ್ ಅವರು ಇಂತಹದ್ದೊಂದು ಡಿವೈಸ್‍ನ್ನು ಇಟ್ಟುಕೊಂಡಿದ್ದಾರೆ. ಅದರ ಮೂಲಕ ಕದ್ದಾಲಿಕೆ ಮಾಡುತ್ತಾರೆ ಎಂಬ ಆರೋಪವೂ ಇದೆ. ಈ ಕುರಿತು ಸಹ ತನಿಖೆಯಾಗಬೇಕು ಎಂದು ತಿಳಿಸಿದ್ದಾರೆ.

    ಕೋಟ್ಯಂತರ ರೂ. ನೀಡಿ ಅಂತಹದ್ದೊಂದು ಡಿವೈಸ್ ತಂದು ಇಟ್ಟುಕೊಂಡಿದ್ದಾರೆ. ಅದರ ಮೂಲಕ ಅವರು ಯಾರ ಫೋನು ಬೇಕಾದರೂ ಕದ್ದಾಲಿಸುತ್ತಾರೆ ಎಂಬ ಮಾಹಿತಿ ಇದೆ. ಹೀಗಾಗಿ ಈ ಕುರಿತು ಪೊಲೀಸ್ ಆಯುಕ್ತರಿಗೆ ದೂರು ನೀಡಿ, ಸೂಕ್ತ ತನಿಖೆಗೆ ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.

  • ಫೋನ್ ಟ್ಯಾಪಿಂಗ್ ಪ್ರಕರಣ ಸಿಬಿಐಗೆ ವಹಿಸುವಂತೆ ನಾನು ಹೇಳಿಲ್ಲ- ಸಿದ್ದರಾಮಯ್ಯ

    ಫೋನ್ ಟ್ಯಾಪಿಂಗ್ ಪ್ರಕರಣ ಸಿಬಿಐಗೆ ವಹಿಸುವಂತೆ ನಾನು ಹೇಳಿಲ್ಲ- ಸಿದ್ದರಾಮಯ್ಯ

    ಬಾಗಲಕೋಟೆ: ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ನಾನು ಹೇಳಿಲ್ಲ. ತನಿಖೆಯಾಗಬೇಕೆಂದು ಮಾತ್ರ ಹೇಳಿದ್ದೆ ಆದರೆ, ಇಂತಹದ್ದೇ ಸಂಸ್ಥೆಗೆ ನೀಡಬೇಕೆಂದು ಹೇಳಿರಲಿಲ್ಲ. ಯಡಿಯೂರಪ್ಪನವರು ಯಾವ ಕಾರಣಕ್ಕೆ ಸುಳ್ಳು ಹೇಳಿದ್ದಾರೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.

    ಜಿಲ್ಲೆಯ ಬಾದಾಮಿ ತಾಲೂಕಿನ ಬೀರನೂರು ಗ್ರಾಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ನನ್ನ ಸಲಹೆ ಮೇರೆಗೆ ಫೋನ್ ಟ್ಯಾಪಿಂಗ್ ವಿಚಾರವನ್ನು ಸಿಬಿಐ ತನಿಖೆಗೆ ವಹಿಸಿದ್ದೇ ಆದಲ್ಲಿ, ಇದೀಗ ನಾನು ಒಂದು ಸಲಹೆ ನೀಡುತ್ತೇನೆ. ಇಡೀ ಆಪರೇಶನ್ ಕಮಲದ ಎಪಿಸೋಡ್ ಸಿಬಿಐ ತನಿಖೆಗೆ ವಹಿಸಲಿ. ವರ್ಗಾವಣೆ ದಂಧೆಗೆ ಯಡಿಯೂರಪ್ಪ ತಮ್ಮ ಮಗನನ್ನೇ ಬಿಟ್ಟಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದ ಸಿದ್ದರಾಮಯ್ಯನವರು, ಈ ಕುರಿತು ಅವರನ್ನೇ ಕೇಳಿ ಎಂದು ಉತ್ತರಿಸಲು ನಿರಾಕರಿಸಿದರು.

    ಪ್ರವಾಹದಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಇನ್ನೂ ಪರಿಹಾರ ಘೋಷಣೆ ಮಾಡಿಲ್ಲ. ಮೋದಿಯವರಿಗೆ ಕಣ್ಣು ಬಾಯಿ ಇಲ್ಲ. ಪ್ರವಾಹ ಪರಿಹಾರ ಘೋಷಣೆ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ವಿರುದ್ಧ ಕೆಂಡಾಮಂಡಲರಾದ ಸಿದ್ದರಾಮಯ್ಯ, ಈ ಹಿಂದೆ 2009ರಲ್ಲಿ ನೆರೆ ಬಂದಾಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇತ್ತು. ಯಡಿಯೂರಪ್ಪ ಸಿಎಂ ಇದ್ರು. ಕೇಂದ್ರದಲ್ಲಿ ಮನಮೋಹನಸಿಂಗ್ ಪ್ರಧಾನಿಯಾಗಿದ್ದರು. ಪ್ರವಾಹವಾದ ಎರಡೇ ದಿನಕ್ಕೆ ಅಂದಿನ ಪ್ರಧಾನಿ ಮನಮೋಹನ ಸಿಂಗ್ ವೈಮಾನಿಕ ಸಮೀಕ್ಷೆ ನಡೆಸಿ 1,609 ಕೋಟಿ ರೂ. ಬಿಡುಗಡೆಗೊಳಿಸಿದ್ದರು ಎಂದು ತಿಳಿಸಿದರು.

    ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾಟಾಚಾರಕ್ಕೆ ಬಂದು ಹೋಗಿದ್ದಾರೆ. ಈವರೆಗೂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಮೋದಿಗೆ ಕಣ್ಣು, ಬಾಯಿ ಇಲ್ಲಾ. ಕಣ್ಣು ಕಾಣಿಸಲ್ಲ ಅನಿಸುತ್ತದೆ. ಪ್ರವಾಹ ಪರಿಸ್ಥಿತಿಯನ್ನು ಬಂದು ನೋಡಬೇಕಾಗಿತ್ತು ಆದರೆ, ನೋಡಿಲ್ಲ. ಕೂಡಲೇ ಕೇಂದ್ರ ಸರ್ಕಾರ ಪರಿಹಾರ ಕಾರ್ಯಗಳಿಗೆ ಮೊದಲು ಐದು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ನಂತರ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ ಬಳಿಕ ಕೇಂದ್ರದ ತಂಡ ಸಮೀಕ್ಷೆ ನಡೆಸಿ ಉಳಿದ ಹಣ ನೀಡಬೇಕೆಂದು ಒತ್ತಾಯಿಸಿದರು. ಪರಿಹಾರ ನಿಧಿಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮುಂದೆ ಬಾಯ್ಬಿಡುತ್ತಿಲ್ಲಾ. ಕೇಂದ್ರ ಸರ್ಕಾರ ರಾಜ್ಯದಿಂದ 25 ಜನ ಸಂಸದರು ಹಾಗೂ 105 ಜನರ ಮಾತು ಕೇಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

  • ವಿರೋಧ ಪಕ್ಷದವರನ್ನು ಹೆದರಿಸುವ ವಾತಾವರಣ ಸೃಷ್ಟಿಯಾಗಿದೆ- ಅನಿತಾ ಕುಮಾರಸ್ವಾಮಿ

    ವಿರೋಧ ಪಕ್ಷದವರನ್ನು ಹೆದರಿಸುವ ವಾತಾವರಣ ಸೃಷ್ಟಿಯಾಗಿದೆ- ಅನಿತಾ ಕುಮಾರಸ್ವಾಮಿ

    ರಾಮನಗರ: ಬಿಜೆಪಿಯವರಿಂದ ವಿರೋಧ ಪಕ್ಷದವರನ್ನು ಹೆದರಿಸಿಡುವಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ರಾಮನಗರ ಶಾಸಕಿ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

    ರಾಮನಗರದ ವಿವಿಧೆಡೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

    ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಹೆಸರನ್ನು ತಳಕು ಹಾಕುತ್ತಿರುವ ಕುರಿತು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಆದರೆ, ಕುಮಾರಸ್ವಾಮಿಯವರು ಯಾವುದೇ ತಪ್ಪು ಮಾಡಿಲ್ಲ. ಇದೀಗ ಸಿಬಿಐಗೆ ತನಿಖೆ ವಹಿಸಿರುವುದರಿಂದ ಪಾರದರ್ಶಕವಾಗಿ ತನಿಖೆ ನಡೆಯಲಿ ಎಂದು ತಿಳಿಸಿದರು.

    ಕುಮಾರಸ್ವಾಮಿಯವರು ಯಾವುದೇ ತಪ್ಪು ಮಾಡಿಲ್ಲ. ಇದಕ್ಕೆಲ್ಲ ಅವರು ಹೆದರುವವರೂ ಅಲ್ಲ, ಹೆದರುವ ಅಗತ್ಯವೂ ಇಲ್ಲ. ಹೋರಾಟದ ಮೂಲಕವೇ ಅವರು ರಾಜಕಾರಣಕ್ಕೆ ಬಂದಿರುವುದು. ಬಿಜೆಪಿಯವರು ವಿರೋಧ ಪಕ್ಷದವರನ್ನು ಹೆದರಿಸಿಡುವಂತಹ ವಾತಾವರಣವನ್ನು ಸೃಷ್ಟಿ ಮಾಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

    ಕುಮಾರಸ್ವಾಮಿಯವರ ವ್ಯಕ್ತಿತ್ವಕ್ಕೆ ಕಳಂಕ ತರುವ ರೀತಿ ಪ್ರಯತ್ನ ಮಾಡುತ್ತಿದ್ದು, ಅವರ ಕೆಲಸ ಎಂದಿಗೂ ಸಫಲವಾಗುವುದಿಲ್ಲ. ನೆರೆ ಪ್ರವಾಹವನ್ನು ಜನರಿಂದ ಮರೆಮಾಚುವ ಉದ್ದೇಶದಿಂದ ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹದಿಂದ ಜನ ತೊಂದರೆಯಲ್ಲಿದ್ದು, 25 ಜನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದರೂ ಅನುದಾನ ಬಿಡುಗಡೆ ಮಾಡಿರುವ ಕುರಿತು ಸಿಎಂ ಹೇಳುತ್ತಿಲ್ಲ. ಪ್ರಧಾನಿ ಮೋದಿಯವರೇ ಪರಿಹಾರದ ಕುರಿತು ಹೇಳಬಹುದಿತ್ತು. ಕೇಂದ್ರ ಸರ್ಕಾರ ನೆರೆ ಪರಿಹಾರದ ಘೋಷಣೆ ಕುರಿತು ಮಾತನಾಡುತ್ತಿಲ್ಲ. ನಮ್ಮ ರಾಜ್ಯದ ಬಗ್ಗೆ ಬೇಜವಬ್ದಾರಿತನ ತೋರುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.

  • ಫೋನ್ ಕದ್ದಾಲಿಕೆ ಪ್ರಕರಣವನ್ನ ಸಿಬಿಐಗೆ ಕೊಡೋ ಅವಶ್ಯಕತೆ ಇರಲಿಲ್ಲ- ಎಂಬಿ ಪಾಟೀಲ್

    ಫೋನ್ ಕದ್ದಾಲಿಕೆ ಪ್ರಕರಣವನ್ನ ಸಿಬಿಐಗೆ ಕೊಡೋ ಅವಶ್ಯಕತೆ ಇರಲಿಲ್ಲ- ಎಂಬಿ ಪಾಟೀಲ್

    – ನನ್ನ ಪಿಎ ಫೋನೂ ಕದ್ದಾಲಿಕೆಯಾದ ಗುಮಾನಿಯಿದೆ

    ವಿಜಯಪುರ: ಈಗಲೂ ನಾನು ನನ್ನ ನಿಲುವಿಗೆ ಬದ್ಧನಿದ್ದೇನೆ. ಫೋನ್ ಕದ್ದಾಲಿಕೆ ಪ್ರಕರಣವನ್ನ ಸಿಬಿಐಗೆ ಕೊಡುವಂತಹ ಅವಶ್ಯಕತೆ ಇರಲಿಲ್ಲ ಎಂದು ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪೊಲೀಸ್ ಇಲಾಖೆಯಲ್ಲೇ ಅನೇಕರು ದಕ್ಷ, ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಎಂ ಎಂ ಕಲಬುರ್ಗಿ ಅವರ ಕೇಸನ್ನ ಸಿಬಿಐಗೆ 5 ವರ್ಷಗಳ ಕಾಲ ಬೇಧಿಸಲು ಅಗಲಿಲ್ಲ. ನಮ್ಮವರು ಗೌರಿ ಲಂಕೇಶ್ ಕೇಸ್ ಬೇಧಿಸಿದರು.ಇಷ್ಟೆಲ್ಲ ನಮ್ಮ ಪೊಲಿಸ್ ಇಲಾಖೆಯಲ್ಲೇ ದಕ್ಷತೆ ಇದ್ದರೂ ಸಿಬಿಐಗೆ ಕೊಟ್ಟಿದ್ದಾರೆ. ಇದರ ಜೊತೆಗೆ ಕೇಂದ್ರ ಸರ್ಕಾರ ಆಪರೇಷನ್ ಕಮಲದ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಫೋನ್ ಕದ್ದಾಲಿಕೆ ಆರೋಪ ಏನಿದೆ. ಅದು ಕೂಡ ಸಿಬಿಐ ತನಿಖೆ ಆಗಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: 34 ಜಿಬಿ ಆಡಿಯೋ ರೆಕಾರ್ಡ್, 6 ಸಾವಿರ ಕರೆ ಕದ್ದಾಲಿಕೆ – ಫೋನ್ ಟ್ಯಾಪಿಂಗ್ ಹೇಗೆ ಮಾಡಲಾಗುತ್ತೆ?

    ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಇದ್ದಾರೆ. ಅವರು ಕೆಪೇಬಲ್ ಇದ್ದಾರೆ. ಒಳ್ಳೇಯವರೂ ಆಗಿದ್ದಾರೆ. ಇಂಥವರು ಇದ್ದರೂ ಸಿಬಿಐಗೆ ಕೊಟ್ಟಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

    ನನ್ನ ಪಿಎ ಫೋನ್ ಕೂಡ ಟ್ಯಾಪ್ ಆಗಿದೆ ಎಂಬ ಗುಮಾನಿ ಇದೆ. ಎಲ್ಲವೂ ತನಿಖೆ ಆಗಲಿ. ಯಾರನ್ನೂ ರಕ್ಷಿಸಲು ಇಲ್ಲಿ ನಾವು ಹೊರಟಿಲ್ಲ. ಐಎಂಎ ಪ್ರಕರಣವನ್ನು ಸಿಬಿಐಗೆ ಕೊಡಲಿ ತಪ್ಪಿಲ್ಲ. ನಮ್ಮವರು ಒಳ್ಳೆಯ ರೀತಿಯಲ್ಲಿ ತನಿಖೆ ಮಾಡುತ್ತಿದ್ದಾರೆ ಎಂದರು.