Tag: ಫೈರಿಂಗ್

  • ಭೀಮಾತೀರದಲ್ಲಿ ಮತ್ತೆ ಗುಂಡಿನ ಮೊರೆತ – ಪಿಎಸ್‍ಐ ಮೇಲೆ ಫೈರಿಂಗ್ ಮಾಡಿದ ಹಂತಕ ಸಾವು

    ಭೀಮಾತೀರದಲ್ಲಿ ಮತ್ತೆ ಗುಂಡಿನ ಮೊರೆತ – ಪಿಎಸ್‍ಐ ಮೇಲೆ ಫೈರಿಂಗ್ ಮಾಡಿದ ಹಂತಕ ಸಾವು

    ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದ್ದು, ಪೊಲೀಸರ ಗುಂಡೇಟಿಗೆ ಹಂತಕ ಬಲಿಯಾಗಿದ್ದಾನೆ.

    ಚಡಚಣ ಪಿಎಸ್‍ಐ ಗೋಪಾಲ್ ಹಳ್ಳೂರ್ ಅವರ ಮೇಲೆ ಭೀಮಾ ತೀರದ ಹಂತಕ ಧರ್ಮರಾಜ್ ಚಡಚಣ ಫೈರಿಂಗ್ ಮಾಡಿದ್ದಾನೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೊಂಕಣಗಾಂವ್ ಗ್ರಾಮದ ಬಳಿ ಇಂದು ಬೆಳಗ್ಗೆ 5-30 ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ.

    ಹಂತಕ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿದ್ದಾನೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಇಂದು ಬೆಳಗ್ಗೆ ದಾಳಿ ನಡೆಸಿದ್ದರು. ಈ ವೇಳೆ ಹಂತಕನೇ ಪೊಲೀಸರಿಗೆ ಗುಂಡು ಹಾರಿಸಿ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದಾನೆ. ಪೊಲೀಸ್ ಹಾಗೂ ಹಂತಕನ ಮಧ್ಯೆ ಗುಂಡಿನ ಚಕಮಕಿ ನಡೆದಿದೆ.

    ಧರ್ಮರಾಜ್ ಗುಂಡಿನ ದಾಳಿ ನಡೆಸುತ್ತಿದ್ದಂತೆಯೇ ಇದಕ್ಕೆ ಪ್ರತ್ಯುತ್ತರವಾಗಿ ಪಿಎಸ್‍ಐ ಗೋಪಾಲ್ ಹಳ್ಳೂರ್ ಕೂಡ ಧರ್ಮರಾಜ್ ಮೇಲೆ ಗುಂಡು ಹಾರಿಸಿದ್ದಾರೆ. ಸದ್ಯ ಗುಂಡೇಟಿನಿಂದ ಗಾಯಗೊಂಡ ಪಿಎಸ್‍ಐ ಗೋಪಾಲ್ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ನಿನ್ನೆ ಕೊಲೆ ಮಾಡಿದ್ದವನ ಕಾಲಿಗೆ ಇಂದು ಬಿತ್ತು ಗುಂಡೇಟು

    ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ನಿನ್ನೆ ಕೊಲೆ ಮಾಡಿದ್ದವನ ಕಾಲಿಗೆ ಇಂದು ಬಿತ್ತು ಗುಂಡೇಟು

    ಬೆಂಗಳೂರು: ಪೊಲೀಸರ ಮೇಲೆ ಅರೋಪಿ ಹಲ್ಲೆಗೆ ಯತ್ನಿಸಿದ್ದರಿಂದ ಅರೋಪಿ ಕಾಲಿಗೆ ಗುಂಡು ಹಾರಿಸಿರುವ ಘಟನೆ ಇಂದು ಮುಂಜಾನೆ ನಗರದ ಹೊರವಲಯ ಬನ್ನೇರುಘಟ್ಟ ಸಮೀಪದ ಸಕಲವಾರ ರಸ್ತೆಯ ಟಿಲಿಪ್ಸ್ ರೆಸಾರ್ಟ್ ಬಳಿ ಘಟನೆ ನಡೆದಿದೆ.

    ಮಂಜುನಾಥ್ ಪೊಲೀಸರಿಂದ ಗುಂಡೇಟು ತಿಂದ ಆರೋಪಿ. ಶನಿವಾರ ಹಾಡು ಹಗಲೇ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಸಮೀಪದ ತಿರುಮಲ ಪೆಟ್ರೋಲ್ ಬಂಕ್ ಬಳಿ ಚಿಂತಲ ಮಡಿವಾಳ ನಿವಾಸಿ 26 ವರ್ಷದ ಮುನಿರಾಜು ಎಂಬಾತನನ್ನು ಅದೇ ಗ್ರಾಮದ ನಿವಾಸಿ ಮಂಜುನಾಥ್ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು.

    ಇಂದು ಪೊಲೀಸರು ಮಂಜುನಾಥನನ್ನು ಹಿಡಿಯಲು ಮುಂದಾದ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದನು. ಈ ಸಂದರ್ಭದಲ್ಲಿ ಪೊಲೀಸರು ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ. ಇದೀಗ ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಒಂದೇ ತಿಂಗಳ ಅವಧಿಯಲ್ಲಿ ಪೊಲೀಸರಿಂದ ನಡೆದ 2 ನೇ ಶೂಟೌಟ್ ಇದಾಗಿದೆ. ಇದೇ 1ನೇ ತಾರೀಖು ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದ ಬಿಜೆಪಿಯ ಮುಖಂಡ ಹರೀಶ್‍ನನ್ನು ಕೊಲೆ ಮಾಡಿದ್ದ ರಾಜ ಅಲಿಯಾಸ್ ರಾಜೇಶ್‍ನನ್ನು ಶೂಟೌಟ್ ಮಾಡಿದ್ದ ಪೊಲೀಸರು ಇದೀಗ ಇಂದು ಮತ್ತೊಂದು ಪ್ರಕರಣ ಕೊಲೆ ಆರೋಪಿ ಮಂಜ ಅಲಿಯಾಸ್ ಮೆಂಟಲ್ ಮಂಜುನಾಥನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

     

  • ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ- ರೌಡಿಶೀಟರ್ ಕಾಲಿಗೆ ಗುಂಡೇಟು, ಆಸ್ಪತ್ರೆಗೆ ದಾಖಲು

    ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ- ರೌಡಿಶೀಟರ್ ಕಾಲಿಗೆ ಗುಂಡೇಟು, ಆಸ್ಪತ್ರೆಗೆ ದಾಖಲು

    ಬೆಂಗಳೂರು: ನಗರದ ವಿದ್ಯಾರಣ್ಯಪುರದ ರೈನ್ ಬೋ ಲೇಔಟ್‍ನಲ್ಲಿ ರೌಡಿ ಶೀಟರ್ ನಕುಲ್ ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.

    ಕೊಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳಲ್ಲಿ ಬೇಕಾಗಿದ್ದ ನಕುಲ್‍ನನ್ನ ಬಂಧಿಸಲು ಹೋದಾಗ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾದ. ಆಗ ಆತ್ಮರಕ್ಷಣೆಗೆ ಎಸ್‍ಐ ಪುನೀತ್ ನಕುಲ್ ಕಾಲಿಗೆ ಗುಂಡು ಹಾರಿಸಿದ್ದಾರೆ.

    ಆರೋಪಿ ನಕುಲ್ 2016ರ ಫೆಬ್ರವರಿಯಲ್ಲಿ ನಡೆದಿದ್ದ ಗ್ರಾಮಪಂಚಾಯ್ತಿ ಸದಸ್ಯೆ ಗಂಡನ ಕೊಲೆಯ ಪ್ರಮುಖ ಆರೋಪಿ ಆಗಿದ್ದಾನೆ. ಶುಕ್ರವಾರದಂದು ಜೋಸೆಫ್ ಎಂಬಾತನನ್ನು ಹತ್ಯೆ ಮಾಡಲು ಯತ್ನಿಸಿ, ಸಂಜೆ 6 ಗಂಟೆ ಸಮಯದಲ್ಲಿ ಜೋಸೆಫ್ ಮನೆಗೆ ನುಗ್ಗಿ ಗಲಾಟೆ ಕೂಡ ಮಾಡಿದ್ದ.

    ದೂರಿನ ಮೇರೆಗೆ ನಕುಲ್‍ನನ್ನ ಬಂಧಿಸಲು ಹೋದಾಗ ಪೇದೆ ಸಿದ್ದು ಎಂಬವರ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ನಕುಲ್ ಕಾಲಿಗೆ ಗುಂಡು ಹಾರಿಸಿ ಆತನನ್ನ ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ಆರೋಪಿ ನಕುಲ್ ಹಾಗು ಪೇದೆ ಸಿದ್ದು ಅವ್ರನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಕುಡಿದ ಮತ್ತಿನಲ್ಲಿ ಕಾರಿನಲ್ಲೇ ಸಿಇಒ ಪತಿಗೆ ಪತ್ನಿಯಿಂದ ಗುಂಡಿನ ದಾಳಿ

    ಕುಡಿದ ಮತ್ತಿನಲ್ಲಿ ಕಾರಿನಲ್ಲೇ ಸಿಇಒ ಪತಿಗೆ ಪತ್ನಿಯಿಂದ ಗುಂಡಿನ ದಾಳಿ

    ಬೆಂಗಳೂರು: ಕಾರಿನಲ್ಲಿ ಬರುತ್ತಿರುವಾಗ ಸಿಟ್ಟಾದ ಹೆಂಡತಿಯೊಬ್ಬಳು ಗಂಡನ ಮೇಲೆ ಗುಂಡು ಹಾರಿಸಿದ ಘಟನೆ ಹೊಸೂರು ಮುಖ್ಯ ರಸ್ತೆ ಹೆಬ್ಬಗೋಡಿ ಬಳಿ ಶುಕ್ರವಾರ ಸಂಜೆ ನಡೆದಿದೆ.

    ಎಚ್.ಎಸ್‍ಆರ್ ಲೇಔಟ್‍ನಲ್ಲಿರುವ ಕಂಪೆನಿಯೊಂದರ ಸಿಇಒ ಸಾಯಿರಾಂ ಮೇಲೆ ಪತ್ನಿ ಹಂಸ ಗುಂಡು ಹಾರಿಸಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಸಾಯಿರಾಂ ಅವರನ್ನು ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪತ್ನಿ ಹಂಸಳನ್ನು ಈಗ ಬಂಧಿಸಿದ್ದಾರೆ.

    ಏನಿದು ಘಟನೆ:
    ಹೊಸೂರಿನಿಂದ ಬೆಂಗಳೂರಿಗೆ ದಂಪತಿ ಕಾರಿನಲ್ಲಿ ಬರುತ್ತಿದ್ದರು. ಬೆಂಗಳೂರಿನ ಹೊರವಲಯದ ಅತ್ತಿಬೆಲೆ ಸಮೀಪದ ಎಸ್.ಕೆ ಗಾರ್ಡನ್ ರೆಸ್ಟೋರೆಂಟ್‍ನಲ್ಲಿ ಇವರಿಬ್ಬರು ಮದ್ಯ ಸೇವಿಸಿದ್ದರು. ಬಳಿಕ ಅಲ್ಲಿಯೇ ಗಲಾಟೆ ಮಾಡಿಕೊಂಡು ಹೊರಟಿದ್ದಾರೆ. ಗಲಾಟೆ ಜೋರಾದಾಗ ಸಾಯಿರಾಂ ಹಂಸ ಮೇಲೆ ಹೊಡೆದಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ವೀರಸಂದ್ರ ಸಿಗ್ನಲ್‍ನಲ್ಲಿ ಕಾರು ನಿಲ್ಲಿಸಿದ್ದಾಗ ಹೆಂಡತಿ ಗಂಡನ ಮೇಲೆ ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿದ್ದಾಳೆ.

    ಸಿಗ್ನಲ್ ನಲ್ಲಿ ಈ ದೃಶ್ಯವನ್ನು ನೋಡಿದ ಪಕ್ಕದಲ್ಲಿದ್ದವರು ಸಹಾಯಕ್ಕೆ ಬಂದಾಗ ಅವರ ಮೇಲೂ ಗುಂಡಿನ ದಾಳಿ ಮಾಡಲು ಹಂಸ ಮುಂದಾಗಿದ್ದಾಳೆ.  ಅಂಬುಲೆನ್ಸ್ ಬಂದ ಮೇಲೆ ಗಂಡನನ್ನು ಕರೆದೊಯ್ಯದಂತೆ ಪಟ್ಟು ಹಿಡಿದು ಕುಳಿತಿದ್ದಳು. ಕೊನೆಗೆ ಪೊಲೀಸರು ಆಕೆಯನ್ನು ಮನ ಒಲಿಸಿ ಅಂಬುಲೆನ್ಸ್ ನಲ್ಲಿ ಸಾಯಿರಾಂ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈಗ ಸಾಯಿರಾಂ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ಗುಂಡುಗಳು ಹೊಟ್ಟೆಯಲ್ಲಿದ್ದು ಆಪರೇಷನ್ ನಡೆಯುತ್ತಿದೆ.

  • ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ಆರೋಪಿ ಮೇಲೆ ಫೈರಿಂಗ್

    ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ಆರೋಪಿ ಮೇಲೆ ಫೈರಿಂಗ್

    ಕಲಬುರಗಿ: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಕಲಬುರಗಿ ಹೊರವಲಯದ ಭೋಸ್ಗಾ ಕೆರೆ ಬಳಿ ನಡೆದಿದೆ.

    ಘಟನೆಯಿಂದ ಆರೋಪಿ ವಿಕ್ರಂ ಮೂಲಿಮನಿ(24) ಕಾಲಿಗೆ ಗಂಭೀರ ಗಾಯಗಳಾಗಿವೆ. ಕಲಬುರಗಿ ನಗರದಲ್ಲಿ ಇತ್ತೀಚೆಗೆ ಶ್ರೀಕಾಂತ ರೆಡ್ಡಿ ಹಲ್ಲೆ ಸಂಬಂಧ ಮಾರ್ಕೆಟ್ ಸತೀಶನ ಸಹಚರ ರೌಡಿ ವಿಕ್ರಂ ಮೂಲಿಮನಿಯನ್ನು ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರ ಜಪ್ತಿಗಾಗಿ ಇಂದು ಕರೆದುಕೊಂಡು ಹೋಗಿದ್ದರು. ಈ ಸಂಧರ್ಭದಲ್ಲಿ ರೌಡಿ ವಿಕ್ರಂ, ಪೇದೆ ಅಂಬಾದಾಸ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ. ಆಗ ಆತ್ಮ ರಕ್ಷಣೆಗಾಗಿ ಪೊಲೀಸರು ರೌಡಿಯ ಬಲಗಾಲಿಗೆ ಗುಂಡು ಹೊಡೆದಿದ್ದಾರೆ.

    ಸದ್ಯ ಗಾಯಾಳು ವಿಕ್ರಂನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗ್ಳೂರಲ್ಲಿ ಮತ್ತೆ ಪೊಲೀಸರ ಗುಂಡಿನ ಮೊರೆತ – ಆತ್ಮರಕ್ಷಣೆಗಾಗಿ ರೌಡಿ ಶೀಟರ್ ಮೇಲೆ ದಾಳಿ

    ಬೆಂಗ್ಳೂರಲ್ಲಿ ಮತ್ತೆ ಪೊಲೀಸರ ಗುಂಡಿನ ಮೊರೆತ – ಆತ್ಮರಕ್ಷಣೆಗಾಗಿ ರೌಡಿ ಶೀಟರ್ ಮೇಲೆ ದಾಳಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿ ಬಂದಿದೆ. ರೌಡಿಶೀಟರ್ ನಾಗೇಂದ್ರ ಅಲಿಯಾಸ್ ನಾಮನ ಮೇಲೆ ಮಂಗಳವಾರ ರಾತ್ರಿ 9.15ರ ಸುಮಾರಿಗೆ ಪೊಲೀಸರಿಂದ ಫೈರಿಂಗ್ ನಡೆದಿದೆ. ಕೇವಲ ಹದಿನೈದು ದಿನಗಳಲ್ಲೇ ನಾಲ್ಕನೇಯ ಪೊಲೀಸ್ ಫೈರಿಂಗ್ ಇದಾಗಿದೆ.

    ನಾಗೇಂದ್ರ ಅಲಿಯಾಸ್ ನಾಮ ಚಾಮರಾಜಪೇಟೆಯ ರೌಡಿಶೀಟರ್. ಸುಮಾರು ಹದಿನಾಲ್ಕಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಈ ಭಾಗಿಯಾಗಿದ್ದ. ಎರಡು ಬಾರಿ ವಾರಂಟ್ ಜಾರಿಯಾಗಿದ್ರೂ ಪೊಲೀಸರ ಕಣ್ಣು ತಪ್ಪಿಸಿ ಓಡಾಡ್ತಾ ಇದ್ದ ನಾಗೇಂದ್ರ ಈಗ ಪೊಲೀಸ್ ತುಪಾಕಿಯಿಂದ ಸಿಡಿದ ಗುಂಡಿಗೆ ಆರ್.ಆರ್.ನಗರದ ಆಸ್ಪತ್ರೆ ಸೇರಿದ್ದಾನೆ. ಆತ್ಮರಕ್ಷಣೆಗಾಗಿ ಬ್ಯಾಟರಾಯನಪುರ ಇನ್ಸ್ ಪೆಕ್ಟರ್ ಶಿವಸ್ವಾಮಿ ಸಿಡಿಸಿದ ಗುಂಡು ನಾಗೇಂದ್ರನ ಕಾಲಿಗೆ ತಗುಲಿದೆ.

    ರಾತ್ರಿ ಆಗಿದ್ದೇನು?: ನಾಗೇಂದ್ರನ ಇರುವಿಕೆಯ ನಿಖರ ಮಾಹಿತಿ ಮೇರೆಗೆ ಕೆಂಗೇರಿ ಪಕ್ಕದ ಸೊನ್ನೇನಹಳ್ಳಿ ಲಿಂಕ್ ರಸ್ತೆಯ ನಿರ್ಜನ ಪ್ರದೇಶವೊಂದಕ್ಕೆ ಕ್ರೈಂ ಪೇದೆ ನವೀನ್ ಜೊತೆ ದೌಡಾಯಿಸಿದ್ದ ಬ್ಯಾಟರಾಯನಪುರ ಇನ್ಸ್ ಪೆಕ್ಟರ್ ಶಿವಸ್ವಾಮಿ ನಾಗೇಂದ್ರನನ್ನು ಅಟ್ಟಾಡಿಸಿದ್ರು. ಈ ವೇಳೆ ಮಚ್ಚಿನ ಸಹಿತ ನಿರ್ಜನ ಪ್ರದೇಶದಲ್ಲಿದ್ದ ನಾಗೇಂದ್ರ ಇನ್ಸ್ ಪೆಕ್ಟರ್ ಶಿವಸ್ವಾಮಿಯ ಮೇಲೆ ಹಲ್ಲೆಗೆ ಮುಂದಾಗಿದ್ದ. ಗಲಭೆ ವೇಳೆ ಶಿವಸ್ವಾಮಿ ಆತ್ಮರಕ್ಷಣೆಗಾಗಿ ನಾಗೇಂದ್ರನ ಮೇಲೆ ಫೈರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    ಕೊಲೆ, ಸುಲಿಗೆ, ದರೋಡೆ ಸೇರಿದಂತೆ ಸುಮಾರು 14ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಗೇಂದ್ರನ ಮೇಲೆ ಚಾಮರಾಜಪೇಟೆಯಲ್ಲಿ ರೌಡಿಶೀಟ್ ತೆರೆಯಲಾಗಿತ್ತು.

    ಸದ್ಯ ಗಾಯಗೊಂಡಿರುವ ಇನ್ಸ್ ಪೆಕ್ಟರ್ ಶಿವಸ್ವಾಮಿ, ಪೇದೆ ನವೀನ್, ಹಾಗೂ ರೌಡಿಶೀಟರ್ ನಾಗೇಂದ್ರ ಮೂವರೂ ಆರ್.ಆರ್.ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

    ಕಳೆದ ಒಂದು ತಿಂಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ನಾಲ್ಕನೆಯ ಫೈರಿಂಗ್ ಇದಾಗಿದೆ. ಸೋಲದೇವನಹಳ್ಳಿಯಲ್ಲಿ ಕೊಮ್ಮಘಟ್ಟ ಮಂಜ, ರಾಜಗೋಪಾಲ ನಗರದಲ್ಲಿ ಪವನ್, ಹೆಚ್.ಎಲ್.ನಲ್ಲಿ ಶಿವರಾಮರೆಡ್ಡಿ ಮತ್ತು ಈಗ ನಾಗೇಂದ್ರನ ಮೇಲೆ ಫೈರಿಂಗ್ ನಡೆದಿದೆ.