Tag: ಫೈರಿಂಗ್

  • ಪೊಲೀಸರ ಗುಂಡಿಗೆ ಆ್ಯಪಲ್ ಸೇಲ್ಸ್ ಮ್ಯಾನೇಜರ್ ಬಲಿ: ತನಿಖೆಗೆ ಆದೇಶಿಸಿದ ಯುಪಿ ಸರ್ಕಾರ!

    ಪೊಲೀಸರ ಗುಂಡಿಗೆ ಆ್ಯಪಲ್ ಸೇಲ್ಸ್ ಮ್ಯಾನೇಜರ್ ಬಲಿ: ತನಿಖೆಗೆ ಆದೇಶಿಸಿದ ಯುಪಿ ಸರ್ಕಾರ!

    ಲಕ್ನೋ: ಆ್ಯಪಲ್ ಕಂಪೆನಿಯ ಸೇಲ್ಸ್ ಮ್ಯಾನೇಜರ್ ಒಬ್ಬ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಗೋಮತಿ ನಗರ್ ಪ್ರದೇಶದಲ್ಲಿ ನಡೆದಿದೆ.

    ವಿವೇಕ್ ತಿವಾರಿ ಪೊಲೀಸರ ಗುಂಡಿಗೆ ಬಲಿಯಾದ ಆ್ಯಪಲ್ ಕಂಪನಿಯ ಸೇಲ್ಸ್ ಮ್ಯಾನೇಜರ್. ಶುಕ್ರವಾರ ಪೊಲೀಸರು ಕೊಲೆ ಪ್ರಕರಣ ಸಂಬಂಧ ತಿವಾರಿಯನ್ನು ಬಂಧಿಸಲು ಮುಂದಾದಾಗ, ಏಕಾಏಕಿ ಪೊಲೀಸರ ಮೇಲೆಯೇ ತನ್ನ ಕಾರನ್ನು ನುಗ್ಗಿಸಲು ಯತ್ನಿಸಿದ್ದಾನೆ. ಈ ವೇಳೆ ಪ್ರಶಾಂತ್ ಚೌಧರಿ ಎಂಬ ಪೊಲೀಸ್ ಅಧಿಕಾರಿಯು ತಿವಾರಿ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆಗ ಗುಂಡು ಕಾರಿನ ಮುಂಭಾಗದ ಗ್ಲಾಸನ್ನು ಸೀಳಿ ತಿವಾರಿಗೆ ತಗುಲಿದೆ.

    ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ವಿವೇಕ್ ತಿವಾರಿಯನ್ನು ಗೋಮತಿ ನಗರದದ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗಿದೇ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಗೋಮತಿ ಪೊಲೀಸ್ ಠಾಣೆ ಅಧಿಕಾರಿಗಳು, ಪೊಲೀಸರ ದಾಳಿಗೆ ಮೃತಪಟ್ಟ ತಿವಾರಿಯ ವಿರುದ್ಧ ಆತನ ಸಂಬಂಧಿಕರು ಕೊಲೆ ಪ್ರಕರಣದ ದೂರನ್ನು ದಾಖಲಿಸಿದ್ದರು. ಹೀಗಾಗಿ ವಿವೇಕ್ ತಿವಾರಿಯನ್ನು ಬಂಧಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

    ಘಟನೆ ಬಗ್ಗೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಹೋದರ ವಿಷ್ಣು ಶುಕ್ಲ, ಪ್ರಕರಣವನ್ನು ಸಿಬಿಐ ವಹಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಪೊಲೀಸರು ಗುಂಡು ಹಾರಿಸಲು ತಿವಾರಿ ಏನು ಉಗ್ರಗಾಮಿಯೇ ಎಂದು ಪ್ರಶ್ನಿಸಿದ ಅವರು, ಕೂಡಲೇ ನಮ್ಮೆಲ್ಲರ ಮುಖಂಡರಾಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕೇಳಿಕೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಘಟನೆ ಸಂಬಂಧ ಪ್ರಕರಣವನ್ನು ತನಿಖೆಗೆ ಆದೇಶಿಸಿದ್ದು, ಇದರಲ್ಲಿ ಯಾರಾದರೂ ತಪ್ಪು ಎಂದು ತಿಳಿದುಬಂದರೆ ಅವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುತ್ತೇನೆ. ಅಮಾಯಕ ವ್ಯಕ್ತಿಯನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ. ಶೀಘ್ರವೇ ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಘಟನೆ ಸಂಬಂಧ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ, ಕೊಲೆ ಆರೋಪದ ಮೇಲೆ ವಿವೇಕ್ ತಿವಾರಿಯನ್ನು ಬಂಧಿಸಲು ಹೋದಾಗ, ಪೊಲೀಸರ ಮೇಲೆಯೇ ಕಾರನ್ನು ನುಗ್ಗಿಸಲು ಯತ್ನಿಸಿದ್ದಾನೆ. ಅಲ್ಲದೇ ತಿವಾರಿಯು ಅನುಮಾನಾಸ್ಪದ ಚಟುವಟಿಕೆಯಲ್ಲಿ ತೊಡಗಿರುವುದು ಸಹ ತಿಳಿದುಬಂದಿದೆ ಎಂದು ಹೇಳಿದ್ದಾರೆ.

    ಮರಣೋತ್ತರ ವರದಿಯ ಪ್ರಕಾರ ಮೃತ ವಿವೇಕ್ ದೇಹದ ಹಲವು ಭಾಗಗಳಲ್ಲಿ ಗಂಭೀರವಾಗಿ ಗಾಯಗೊಂಡು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೈ ಯುವ ಮುಖಂಡನ ಕೊಲೆ ಆರೋಪಿಗಳ ಮೇಲೆ ಪೊಲೀಸರ ಫೈರಿಂಗ್!

    ಕೈ ಯುವ ಮುಖಂಡನ ಕೊಲೆ ಆರೋಪಿಗಳ ಮೇಲೆ ಪೊಲೀಸರ ಫೈರಿಂಗ್!

    ಬೆಂಗಳೂರು: ಕಾಂಗ್ರೆಸ್ ಯುವ ಅಧ್ಯಕ್ಷನ ಕೊಲೆ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ನಡೆಸಿ ಬಂಧಿಸಿದ್ದಾರೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ದೊಡ್ಡಜಾಲ ಸಮೀಪ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದಾಗ ಈ ಘಟನೆ ನಡೆದಿದೆ.

    ಮನೋಜ್ ಅಲಿಯಾಸ್ ಕೆಂಚ ಮತ್ತು ಮಂಜೇಗೌಡ ಬಂಧಿತ ಆರೋಪಿಗಳು. ಚಿಕ್ಕಚಾಲ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇವರನ್ನು ಖಚಿತ ಮಾಹಿತಿ ಮೇರೆಗೆ ವಿದ್ಯಾರಣ್ಯಪುರ ಹಾಗೂ ಯಲಹಂಕ ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಲು ಮುಂದಾಗಿದ್ದರು. ಈ ವೇಳೆ ಆರೋಪಿಗಳು ತಮ್ಮ ಬಳಿ ಇದ್ದ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾರೆ. ಆತ್ಮರಕ್ಷಣೆಗಾಗಿ ಯಲಹಂಕ ಪೊಲೀಸರು ಇಬ್ಬರು ಆರೋಪಿಗಳ ಮೇಲೆ ಫೈರಿಂಗ್ ನಡೆಸಿದ್ದಾರೆ.

    ಆರೋಪಿ ಮನೋಜ್ ಅಲಿಯಾಸ್ ಕೆಂಚನ ಕಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಅಳ್ಳಾಲಸಂದ್ರದ ಕಾಂಗ್ರೆಸ್ ಯುವ ಅಧ್ಯಕ್ಷ ಅರುಣ್ ಕುಮಾರ್ ನನ್ನು ಕೊಲೆ ಪ್ರಕರಣದಲ್ಲಿ ಆರೋಪಿಗಳ ಹೆಸರು ಕೇಳಿ ಬಂದಿವೆ. ಅರುಣ್ ತಡರಾತ್ರಿ ಸಿನೆಮಾ ನೋಡಿಕೊಂಡು ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ದಾಳಿ ನಡೆಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಘಟನೆ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಯುವ ಕಾಂಗ್ರೆಸ್ ಅಧ್ಯಕ್ಷನ ಬರ್ಬರ ಹತ್ಯೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರುಂಡ ಕತ್ತರಿಸಿ ಪರಾರಿಯಾಗಿದ್ದ ಆರೋಪಿಯ ಮೇಲೆ ಪೊಲೀಸರಿಂದ ಫೈರಿಂಗ್!

    ರುಂಡ ಕತ್ತರಿಸಿ ಪರಾರಿಯಾಗಿದ್ದ ಆರೋಪಿಯ ಮೇಲೆ ಪೊಲೀಸರಿಂದ ಫೈರಿಂಗ್!

    ಕಲಬುರಗಿ: ಯುವಕನ ರುಂಡ ಕತ್ತರಿಸಿ ಪರಾರಿಯಾಗಿದ್ದ ಆರೋಪಿಯ ಮೇಲೆ ಪೊಲೀಸರಿಂದ ಫೈರಿಂಗ್ ನಡೆಸಿರುವ ಘಟನೆ ಕಲಬುರಗಿ ಹೊರವಲಯದ ಆಳಂದ ರಸ್ತೆಯ ಕೆರೆಭೋಸ್ಗಾ ಬಳಿ ನಡೆದಿದೆ.

    ನಾಗರಾಜ್ ಅಲಿಯಾಸ್ ನಾಗಾ (24) ಎಂಬವನ ಮೇಲೆ ಚೌಕ್ ಠಾಣೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಸೆ 11 ರಂದು ಸಿದ್ದೋಜಿ ಎಂಬಾತನನ್ನ ಅಪಹರಿಸಿ ಅಲಗೋಡ್ ಗ್ರಾಮದ ಬಳಿ ನಾಗರಾಜ್ ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದನು. ಬಳಿಕ ರುಂಡವನ್ನು ಕೆರೆಭೋಸ್ಗಾದ ನಿರ್ಜನ ಪ್ರದೇಶದಲ್ಲಿ ಬಿಸಾಕಿದ್ದನು. ಖಚಿತ ಮಾಹಿತಿ ಮೇರೆಗೆ ಚೌಕ್ ಠಾಣೆ ಸಿಪಿಐ ಎಸ್‍ಎಸ್ ಹಿರೇಮಠ್ ನೇತೃತ್ವದಲ್ಲಿ ಬಂಧನಕ್ಕೆ ತೆರಳಿದ್ದರು.

    ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದನು. ಆರೋಪಿಯನ್ನು ಬಂಧಿಸುವಾಗ ಪೊಲೀಸ್ ಪೇದೆಗಳಾದ ಸಿದ್ದರಾಜು ಮತ್ತು ರಮೇಶ್ ಎಂಬವರು ಗಾಯಗೊಂಡಿದ್ದು, ಗಾಯಾಳು ಆರೋಪಿಯನ್ನು ಹಾಗು ಪೇದೆಗಳನ್ನು ಜಿಲ್ಲಾಸ್ಪತ್ರಗೆ ದಾಖಲು ಮಾಡಲಾಗಿದೆ.

    ಆರೋಪಿ ನಾಗರಾಜ್ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದೋಜಿಯನ್ನ ಅಪಹರಿಸಿದ್ದನು ಎಂದು ಹೇಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಹಿರ್ದೆಸೆಯ ನೆಪದಲ್ಲಿ ಜೀಪಿಂದಿಳಿದು ಪೊಲೀಸರ ಮೇಲೆಯೇ ಹಲ್ಲೆ ಮಾಡಿದಾತನ ಮೇಲೆ ಫೈರಿಂಗ್!

    ಬಹಿರ್ದೆಸೆಯ ನೆಪದಲ್ಲಿ ಜೀಪಿಂದಿಳಿದು ಪೊಲೀಸರ ಮೇಲೆಯೇ ಹಲ್ಲೆ ಮಾಡಿದಾತನ ಮೇಲೆ ಫೈರಿಂಗ್!

    ಶಿವಮೊಗ್ಗ: ನಟೋರಿಯಸ್ ರೌಡಿಯೊಬ್ಬ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳಲು ಹೋಗಿ ಗುಂಡೇಟು ತಿಂದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಶಿವಮೊಗ್ಗ ಸಮೀಪ ಹೊಳಲೂರು ಸಮೀಪ ಘಟನೆ ನಡೆದಿದ್ದು, ಸೊನಟಾ ಆಸೀಫ್ ಪೊಲೀಸರಿಂದ ಗುಂಡೇಟು ತಿಂದ ರೌಡಿ ಶೀಟರ್. ಕಳೆದ ವಾರ ಉದ್ಯಮಿಯೊಬ್ಬರ ಸಂಬಂಧಿಯ ಕಿಡ್ನಾಪ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಆಸೀಫ್ ನನ್ನು ಶಿವಮೊಗ್ಗ ಡಿಸಿಬಿ ಇನ್ಸ್ ಪೆಕ್ಟರ್ ಕುಮಾರ್ ಮತ್ತು ತಂಡ ಬೆಂಗಳೂರಿನಲ್ಲಿ ಬಂಧಿಸಿ ಕರೆತಂದಿದ್ದರು.

    ಕಿಡ್ನಾಪ್ ಪ್ರಕರಣದ ಇನ್ನೊಬ್ಬ ಆರೋಪಿ ಅಸ್ಲಾಂ ಎಂಬಾತ ಹೊಳಲೂರಿನಲ್ಲಿ ಇರುತ್ತಾನೆ. ನಾನು ತೋರಿಸುತ್ತೇನೆ ಬನ್ನಿ ಎಂದು ಆಸೀಪ್ ತುಂಗಾ ನಗರ ಪೊಲೀಸರ ಜೊತೆ ಹೊಳಲೂರಿಗೆ ಹೋಗಿದ್ದ. ಹೀಗೆ ಹೋದಾಗ ಬಹಿರ್ದೆಸೆಯ ನೆಪದಲ್ಲಿ ಜೀಪಿಂದ ಇಳಿದವನು ಪೊಲೀಸರಿಗೆ ಹಲ್ಲೆ ಮಾಡಿ, ಕಲ್ಲು ತೂರಿ ಓಡಲು ಯತ್ನಿಸಿದ್ದನು.

    ತುಂಗಾ ನಗರ ಠಾಣೆ ಎಸ್ ಐ ಗಿರೀಶ್ ಎಚ್ಚರಿಕೆ ನೀಡಿದರೂ ಕಿವಿಗೊಡದಾಗ ಪಿಸ್ತೂಲ್ ನಿಂದ ಆಸೀಫ್ ಕಾಲಿಗೆ ಶೂಟ್ ಮಾಡಿದ್ದಾರೆ. ಘಟನೆಯಲ್ಲಿ ತುಂಗಾನಗರ ಠಾಣೆ ಪೇದೆ ಮರ್ದಾನ್ ಹಾಗೂ ಎಸ್ ಐ ಗಿರೀಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಆಸೀಫ್ ಈಗ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

  • ಸಿನಿಮಾ ಸ್ಟೈಲ್‍ನಲ್ಲಿ ದರೋಡೆಕೋರರ ಚೇಸಿಂಗ್ – ಕಾರು ಅಡ್ಡಗಟ್ಟಿ ಪೊಲೀಸರಿಂದ ಫೈರಿಂಗ್

    ಸಿನಿಮಾ ಸ್ಟೈಲ್‍ನಲ್ಲಿ ದರೋಡೆಕೋರರ ಚೇಸಿಂಗ್ – ಕಾರು ಅಡ್ಡಗಟ್ಟಿ ಪೊಲೀಸರಿಂದ ಫೈರಿಂಗ್

    ಮಂಗಳೂರು: ಪೊಲೀಸ್ ಫೈರಿಂಗ್ ನಡೆಸಿ ಕುಖ್ಯಾತ ದರೋಡೆಕೋರರನ್ನು ಬಂಧಿಸಿದ ಘಟನೆ ಬಂಟ್ವಾಳ ತಾಲೂಕಿನ ಮಣಿಹಳ್ಳದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

    ಸದ್ದಾಂ ಮಾರಿಪಳ್ಳ, ಮೌಸೀನ್ ಸುರತ್ಕಲ್ ಹಾಗೂ ಮಹಮ್ಮದ್ ಇರ್ಶಾದ್ ಬೊಳ್ಳಾಯಿ ಬಂಧಿತ ಆರೋಪಿಗಳು. ದರೋಡೆಗೆ ಸಂಚು ಹಿನ್ನೆಲೆಯಲ್ಲಿ ಪೊಲೀಸರು ಬೆಳ್ತಂಗಡಿಯಿಂದ ದರೋಡೆಕೊರರನ್ನು ಬೆನ್ನಟ್ಟಿದ್ದರು. ಕಾರು ನಿಲ್ಲಿಸಲು ಸೂಚಿಸಿದಾಗ ಪೊಲೀಸರ ಮೇಲೆ ಡಿಕ್ಕಿ ಹೊಡೆಯಲು ದರೋಡೆಕೋರರ ತಂಡ ಯತ್ನಿಸಿತ್ತು.

    ದರೋಡೆಕೋರರು ಕೆಂಪು ಕಲರ್ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದರು. ಬಂಟ್ವಾಳದ ಮಣಿಹಳ್ಳ ಜಂಕ್ಷನ್ ನಲ್ಲಿ ಪೊಲೀಸರ ಮೇಲೆ ಹಾಯಲು ಯತ್ನಿಸಿದ್ದಾರೆ. ಆಗ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಪೊಲೀಸ್ ಫೈರಿಂಗ್ ವೇಳೆ ಕಾರು ನಿಲ್ಲಿಸಿ ಇಬ್ಬರು ದರೋಡೆಕೋರರು ಪರಾರಿಯಾಗಿದ್ದಾರೆ.

    ಮನ್ಸೂರ್ ಅಮ್ಮೆಮಾರ್ ಹಾಗೂ ಅಮ್ಮಿ ಕಾರಿನಿಂದಿಳಿದು ಪರಾರಿಯಾಗಿದ್ದು, ಕಾರಿನಲ್ಲಿದ್ದ ತಲವಾರು ಸಹಿತ ಮಾರಕಾಸ್ತ್ರಗಳು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ಹಾಗೂ ಬೆಳ್ತಂಗಡಿ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಈ ಫೈರಿಂಗ್ ನಡೆದಿದೆ.

  • ಮದುವೆಯ ಸಂಭ್ರಮದಲ್ಲಿದ್ದ ವರನ ಎದೆಗೆ ಬಿತ್ತು ಗುಂಡು!

    ಮದುವೆಯ ಸಂಭ್ರಮದಲ್ಲಿದ್ದ ವರನ ಎದೆಗೆ ಬಿತ್ತು ಗುಂಡು!

    ಲಕ್ನೋ: ಮದುವೆಯ ಪೂಜಾ ಕಾರ್ಯದಲ್ಲಿ ತೊಡಗಿದ್ದ ವರನ ಎದೆಗೆ ಗುಂಡು ಹಾರಿಸಿರುವ ಘಟನೆಯೊಂದು ಉತ್ತರ ಪ್ರದೇಶ ರಾಜ್ಯದ ಲಖಿಂಪುರ ಕೆರಿ ಜಿಲ್ಲೆಯ ರಾಮಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.

    ಸುನಿಲ್ ವರ್ಮ ಮೃತಪಟ್ಟ ವರ. ವರ ಸುನಿಲ್ ಅರ್ಚಕರು ಹೇಳಿದಂತೆ ಪೂಜಾಕೈಂಕರ್ಯದಲ್ಲಿ ತೊಡಗಿಕೊಂಡಿದ್ದರು. ವರನ ಸುತ್ತಲೂ ಸಂಬಂಧಿಕರು, ಗೆಳೆಯರು ನೆರೆದು ಮದುವೆ ಶಾಸ್ತ್ರವನ್ನು ನೋಡ್ತಿದ್ದರು. ಸಂಬಂಧಿಕರ ಮಧ್ಯೆದಲ್ಲಿಯೇ ನಿಂತಿದ್ದ ರಾಮಚಂದ್ರ ಎಂಬಾತ ಪ್ಯಾಂಟ್ ಜೇಬಿನಿಂದ ಪಿಸ್ತೂಲ್ ಹೊರ ತೆಗೆದು ನೇರವಾಗಿ ವರನ ಎದೆಗೆ ಗುಂಡು ಹಾರಿಸಿದ್ದಾನೆ.

    ಗುಂಡು ತಗುಲಿದ ಕೂಡಲೇ ಜ್ಞಾನ ತಪ್ಪಿದ ವರನನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸುನಿಲ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪ್ರಕರಣದ ಬಳಿಕ ಆರೋಪಿ ರಾಮಚಂದ್ರ ಪರಾರಿಯಾಗಿದ್ದಾನೆ. ವರನ ಎದೆಗೆ ಗುಂಡು ಹಾರಿಸುವ ಎಲ್ಲ ದೃಶ್ಯಗಳು ಮದುವೆ ವಿಡಿಯೋಗ್ರಾಫರ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ಘಟನೆ ಸಂಬಂಧ ಆರೋಪಿ ರಾಮಚಂದ್ರ ವಿರುದ್ಧ ಐಪಿಸಿ ಸೆಕ್ಷನ್ 302ರ ಪ್ರಕಾರ ದಾಖಲಾಗಿದೆ. ಆರೋಪಿ ರಾಮಚಂದ್ರ ಸಂಭ್ರಮಾಚರಣೆಗಾಗಿ ಗುಂಡು ಹಾರಿಸುವಾಗ ಆಕಸ್ಮಿಕವಾಗಿ ವರನಿಗೆ ತಗುಲಿದೆಯಾ ಅಥವಾ ಉದ್ದೇಶಪೂರ್ವಕವಾಗಿ ಕೊಲ್ಲಲಾಗಿದೆ ಎಂಬುದು ತನಿಖೆಯಲ್ಲಿ ತಿಳಿಯಬೇಕಿದೆ. ಸಂಭ್ರಮಾಚರಣೆಯಲ್ಲಿ ಗುಂಡು ಹಾರಿಸುವುದಕ್ಕೆ ನಿಷೇಧವಿದ್ದು, ಆದ್ರೂ ಕೆಲವರು ಫೈರಿಂಗ್ ಮಾಡ್ತಾರೆ. ತಪ್ಪಿಸ್ಥತರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಅಂತಾ ಎಎಸ್‍ಪಿ ಘನಶ್ಯಾಮ್ ಚೌರಾಶಿ ಹೇಳಿದ್ದಾರೆ.

    ಈ ಸಂಬಂಧ ನೀಮ್‍ಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

     

  • ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದ ರೌಡಿ ಮೇಲೆ ಫೈರಿಂಗ್

    ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದ ರೌಡಿ ಮೇಲೆ ಫೈರಿಂಗ್

    ವಿಜಯಪುರ: ಆತ್ಮರಕ್ಷಣೆಗಾಗಿ ಪೊಲೀಸರು ರೌಡಿ ಶೀಟರ್ ಮೇಲೆ ಫೈರಿಂಗ್ ನಡೆಸಿರುವ ಘಟನೆ ನಗರದ ನವಭಾಗ್ ಪ್ರದೇಶದಲ್ಲಿ ನಡೆದಿದೆ.

    ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ 25 ವರ್ಷದ ಯುನುಸ್ ಅಕ್ಲಾಸ್ ಪಟೇಲ್ ನನ್ನು ಬಂಧಿಸಲು ತೆರಳಿದ್ದ ವೇಳೆ ಆತ ಪೊಲೀಸರ ಮೇಲೆಯೇ ಮಾರಕಾಸ್ತ್ರದಿಂದ ಹಲ್ಲೆ ಮಾಡಲು ಮುಂದಾಗಿದ್ದನು. ಘಟನೆಯಲ್ಲಿ ಪೊಲೀಸ್ ಪೇದೆ ಮಾದನಶೆಟ್ಟಿ ಎಂಬವರಿಗೆ ಗಾಯಗಳಾಗಿವೆ. ಇದೇ ವೇಳೆ ಪೊಲೀಸ್ ಠಾಣಾ ಪಿಎಸೈ ಆರೀಫ್ ಮುಶಾಪುರೆ ಅವರು ತಮ್ಮ ಆತ್ಮರಕ್ಷಣೆಗೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ.


    ಒಂದು ಸುತ್ತು ಗಾಳಿಯಲ್ಲಿ, ಮತ್ತೊಂದು ಮಿಸ್, ಮೂರನೇ ಗುಂಡು ರೌಡಿ ಶೀಟರ್ ಯುನೀಸ್ ಎಡಗಾಲಿಗೆ ತಾಗಿದೆ. ಸದ್ಯ ಗುಂಡೇಟಿನಿಂದ ಗಾಯಗೊಂಡ ಆರೋಪಿ ಯುನೀಸ್ ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಗಾಂಧಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕಲಬುರಗಿಯಲ್ಲಿ ದರೋಡೆಕೋರನ ಮೇಲೆ ಪೊಲೀಸರಿಂದ ಫೈರಿಂಗ್- ಕರಿಚಿರತೆ ಸಹಚರನಿಗೆ ಗುಂಡೇಟು

    ಕಲಬುರಗಿಯಲ್ಲಿ ದರೋಡೆಕೋರನ ಮೇಲೆ ಪೊಲೀಸರಿಂದ ಫೈರಿಂಗ್- ಕರಿಚಿರತೆ ಸಹಚರನಿಗೆ ಗುಂಡೇಟು

    ಕಲಬುರಗಿ: ದರೋಡೆಕೋರನ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ಕಲಬುರಗಿ ಹೊರವಲಯದ ಗ್ರೀನ್‍ಸಿಟಿ ಬಳಿ ನಡೆದಿದೆ.

    ಕುಖ್ಯಾತ ಹಂತಕ ಮಲ್ಲಿಕಾರ್ಜುನ ಕಡಬುರ ಮೇಲೆ ಗುಂಡಿನ ದಾಳಿ ನಡೆದಿದೆ. ಆರೋಪಿ ಮಲ್ಲಿಕಾರ್ಜುನ, ಮೃತ ರೌಡಿಶೀಟರ್ ಕರಿಚಿರತೆ ಸಹಚರ. ದರೋಡೆ ಪ್ರಕರಣವೊಂದರಲ್ಲಿ ಬಂಧಿಸಲು ಪೊಲೀಸರು ಹೋದಾಗ ಹಂತಕ ಪೊಲೀಸ್ ಸಿಬ್ಬಂದಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಹೀಗಾಗಿ ಆತ್ಮರಕ್ಷಣೆಗಾಗಿ ಪಿಎಸ್‍ಐ ಪರಶುರಾಮ ವಾನಜರಕರ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

    ಘಟನೆಯಲ್ಲಿ ಪೇದೆಗಳಾದ ಅನಿಲ್ ಮತ್ತು ವಿಶ್ವನಾಥ್‍ಗೆ ಗಾಯವಾಗಿದ್ದು ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.ಆರೋಪಿಯನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಖ್ಯಾತ ರೌಡಿ ಯಶವಂತನ ಮೇಲೆ ಪೊಲೀಸ್ ಫೈರಿಂಗ್-ಅಕ್ರಮ ಪಿಸ್ತೂಲ್ ಮಾರಾಟ ಜಾಲ ಬೆಳಕಿಗೆ

    ಕುಖ್ಯಾತ ರೌಡಿ ಯಶವಂತನ ಮೇಲೆ ಪೊಲೀಸ್ ಫೈರಿಂಗ್-ಅಕ್ರಮ ಪಿಸ್ತೂಲ್ ಮಾರಾಟ ಜಾಲ ಬೆಳಕಿಗೆ

    ಕಲಬುರಗಿ: ಜಿಲ್ಲೆಯ ಕುಖ್ಯಾತ ರೌಡಿ ಯಶವಂತನ ಮೇಲೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.

    ಕಲಬುರಗಿಯಲ್ಲಿ ಕೆಇಬಿ ಕಾಂಟ್ರಾಕ್ಟರ್ ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದ ರೌಡಿ ಯಶವಂತ, ಕಳೆದ 2 ತಿಂಗಳಿಂದ ತಲೆ ಮರೆಸಿಕೊಂಡು ಓಡಾಡ್ತಿದ್ದ. ಜೊತೆಗೆ ಅಕ್ರಮ ಪಿಸ್ತೂಲ್ ಮಾರಾಟ ದಂಧೆಯಲ್ಲೂ ತೊಡಗಿದ್ದ ಎನ್ನಲಾಗಿದೆ.

    ಈ ಹಿನ್ನೆಲೆಯ ಯಶವಂತ ಕಲಬುರಗಿ ಹೊರವಲಯದ ತಾವರಗೇರಾ ಕ್ರಾಸ್ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ರು. ಈ ವೇಳೆ ಪೊಲೀಸರ ಬ್ಯಾರಿಕೇಡ್ ಮೇಲೆ ವಾಹನ ನುಗ್ಗಿಸಿ ಮುನ್ನುಗ್ಗುವ ದುಸ್ಸಾಹಸ ಮಾಡಿದ. ಈ ಹಂತದಲ್ಲಿ ಪ್ರಾಣ ರಕ್ಷಣೆಯ ಸಲುವಾಗಿ ಪೊಲೀಸರು ಮೊದಲು ಕಾರ್ ಟೈರ್‍ಗೆ ಗುಂಡು ಹಾರಿಸಿದ್ರು.

    ಆಗ ಕಾರ್‍ನಿಂದ ಕೆಳಗಿಳಿದ ರೌಡಿ ಯಶವಂತ ಪೊಲೀಸರತ್ತ ತಿರುಗಿಬಿದ್ದ. ಕೂಡಲೇ ಪೊಲೀಸರು ಯಶವಂತನ ಕಾಲಿಗೆ 2 ಸುತ್ತು ಗುಂಡು ಹಾರಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಗ್ರಾಮೀಣ ಠಾಣೆಯ ಇಬ್ಬರು ಪಿಎಸ್‍ಐಗಳಿಗೂ ಗಾಯಗಳಾಗಿದ್ದು, ಸದ್ಯ ಗಾಯಾಳುಗಳನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  • ದರೋಡೆಕೋರನ ಮೇಲೆ ಪೊಲೀಸರಿಂದ ಫೈರಿಂಗ್ – ಇಬ್ಬರು ಪರಾರಿ

    ದರೋಡೆಕೋರನ ಮೇಲೆ ಪೊಲೀಸರಿಂದ ಫೈರಿಂಗ್ – ಇಬ್ಬರು ಪರಾರಿ

    ಕಲಬುರಗಿ: ದರೋಡೆಕೋರನ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಕಲಬುರಗಿ ಹೊರವಲಯದ ರಿಂಗ್ ರಸ್ತೆಯಲ್ಲಿ ನಡೆದಿದೆ.

    ಕುಖ್ಯಾತ ದರೋಡೆಕೋರ ಇರ್ಫಾನ್ (25) ಮೇಲೆ ಫೈರಿಂಗ್ ನಡೆದಿದೆ. ಪಿಎಸ್‍ಐ ವಾಹಿದ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಇರ್ಫಾನ್ ಕಾಲಿಗೆ ಗುಂಡು ಹೊಕ್ಕಿದ ನಂತರ ಆತನನ್ನು ಬಂಧಿಸಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

    ಬಿದ್ದಾಪುರ ಕ್ರಾಸ್ ಬಳಿ ಕಳೆದ ರಾತ್ರಿ ಮ್ಯಾನೇಜರ್ ನನ್ನು ಅಡ್ಡಗಟ್ಟಿ ಅಮರ್ ವೈನ್ಸ್ ಮಾಲೀಕನ ಬಳಿ ನಗದು ಹಣವನ್ನು ದರೋಡೆ ಮಾಡಿದ್ದರು. ಮೂವರ ದರೋಡೆಕೋರರ ತಂಡ ಬೈಕ್, ಮೊಬೈಲ್ ಗಳನ್ನು ಕಸಿದುಕೊಂಡು ಹೋಗಿದ್ದರು. ಫರಹತ್ತಬಾದ್-ಗ್ರಾಮೀಣ ಠಾಣೆ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಅವರನ್ನು ಬಂಧಿಸಲು ಹೋದಾಗ ಇಟ್ಟಿಗೆ ಮತ್ತು ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಫೈರಿಂಗ್ ನಡೆಸಿದ್ದಾರೆ.

    ಘಟನೆಯಲ್ಲಿ ಪಿಎಸ್‍ಐ ವಾಹಿದ್ ಕೋತ್ವಾಲ್, ಪೇದೆಗಳಾದ ಕೇಶವ ಬಾದ್‍ಶಾಗೆ ಸಣ್ಣಪುಟ್ಟ ಗಾಯವಾಗಿದ್ದು, ಇಬ್ಬರು ದರೋಡೆಕೋರರು ಪರಾರಿಯಾಗಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.