Tag: ಫೈರಿಂಗ್

  • ಗಾಂಜಾ ಸಾಗಾಟ ಮಾಡ್ತಿದ್ದ ವ್ಯಕ್ತಿ ಮೇಲೆ ಫೈರಿಂಗ್- 300 ಕೆಜಿಗೂ ಹೆಚ್ಚು ಗಾಂಜಾ ವಶ

    ಗಾಂಜಾ ಸಾಗಾಟ ಮಾಡ್ತಿದ್ದ ವ್ಯಕ್ತಿ ಮೇಲೆ ಫೈರಿಂಗ್- 300 ಕೆಜಿಗೂ ಹೆಚ್ಚು ಗಾಂಜಾ ವಶ

    ಕಲಬುರಗಿ: ಗಾಂಜಾ ಸಾಗಾಟ ಮಾಡ್ತಿದ್ದ ವ್ಯಕ್ತಿ ಮೇಲೆ ಕಲಬುರಗಿ ರೌಡಿ ನಿಗ್ರಹ ದಳದ ಪೊಲೀಸರು ಫೈರಿಂಗ್ ಮಾಡಿದ್ದು, ಸುಮಾರು 300 ಕೆ.ಜಿಗೂ ಹೆಚ್ಚು ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಕಲಬುರಗಿ ನಗರದ ಹೊರ ವಲಯದಲ್ಲಿರುವ ಸ್ವಾಮಿ ಸಮರ್ಥ ದೇವಾಲಯದ ಬಳಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಅಕ್ರಮವಾಗಿ ಗಾಂಜಾ ಸಾಗಾಟ ಮಾಡ್ತಿದ್ದಾರೆ ಅನ್ನೋ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು ಮುಂದಾಗ ಆರೋಪಿ ಪೋಲಿಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗೆ ರೌಡಿ ನಿಗ್ರಹ ದಳದ ಪಿಎಸ್‍ಐ ವಾಹೀದ್ ಕೋತ್ವಾಲ್ ಅವರು ಫೈರಿಂಗ್ ಮಾಡಿದ್ದಾರೆ.

    ಆರೋಪಿ ಭೀಮು ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ನಿವಾಸಿ. ಇಬ್ಬರು ಹೆಣ್ಣುಮಕ್ಕಳು ಸೇರಿ ನಾಲ್ಕು ಜನ ಎರಡು ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು. ಸುಮಾರು 300 ಕೆಜಿಗೂ ಅಧಿಕ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಆರೋಪಿ ಭೀಮುವನ್ನು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  • ಜೈಲಿನಿಂದ ಹೊರಬಂದು 307 ಕೇಸ್- ಆರೋಪಿ ಕಾಲಿಗೆ ಗುಂಡೇಟು

    ಜೈಲಿನಿಂದ ಹೊರಬಂದು 307 ಕೇಸ್- ಆರೋಪಿ ಕಾಲಿಗೆ ಗುಂಡೇಟು

    ಬೆಂಗಳೂರು: ನಟೋರಿಯಸ್ ರೌಡಿಶೀಟರ್ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

    ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ವೀರಭದ್ರನಗರ ಸಿಗ್ನಲ್ ಬಳಿ ರೌಡಿಶೀಟರ್ ವಿಜಯ್ ಕುಮಾರ್ ಗೊಣ್ಣೆವಿಜಿ ಕಾಲಿಗೆ ಗುಂಡೇಟು ನೀಡಲಾಗಿದೆ.

    ಗೊಣ್ಣೆವಿಜಿ ಕೊಲೆ ಕೊಲೆಯತ್ನ, ಧಮ್ಕಿ, ದರೋಡೆ ಸೇರಿ 18 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತ ಕಳೆದ ಒಂದು ವಾರದ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರಬಂದ ಕೂಡಲೇ 307 ಕೇಸ್ ಮಾಡಿದ್ದ. ಗಿರಿನಗರದಲ್ಲಿ ವ್ಯಕ್ತಿಯೊಬ್ಬರಿಗೆ ಡ್ಯಾಗರ್ ನಿಂದ ಹಲ್ಲೆ ಮಾಡಿದ್ದ.

    ರಾತ್ರಿ ಆರೋಪಿ ವೀರಭದ್ರನಗರ ಬಳಿ ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ಪಿಎಸ್‍ಐ ವಿನಯ್ & ಟೀಂ ಮೇಲೆ ದಾಳಿ ಮಾಡಿದ್ದ. ಈ ವೇಳೆ ಶರಣಾಗುವಂತೆ ಆರೋಪಿ ವಿಜಿಗೆ ಪೊಲೀಸರು ತಿಳಿಸಿದರು. ಸರೆಂಡರ್ ಆಗದೇ ಪೊಲೀಸ್ ಕಾನ್ಸ್ ಟೇಬಲ್ ಎಡಭುಜಕ್ಕೆ ಡ್ಯಾಗರ್ ನಿಂದ ಹಲ್ಲೆ ಮಾಡಿದ.

    ಕಡೆಗೆ ಆತ್ಮರಕ್ಷಣೆಗೆ ಪಿ.ಎಸ್.ಐ ವಿನಯ್ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಾಳು ಪೊಲೀಸ್ ಕಾನ್ಸ್ ಟೇಬಲ್ ಮಧು ಹಾಗೂ ಗುಂಡೇಟು ತಿಂದ ಆರೋಪಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ತಾಯಿ, ಮಗನ ಕೊಲೆ ಪ್ರಕರಣ ಬೇಧಿಸಿದ ಸಾಗರ ಪೊಲೀಸರು- ಆರೋಪಿ ಮೇಲೆ ಫೈರಿಂಗ್

    ತಾಯಿ, ಮಗನ ಕೊಲೆ ಪ್ರಕರಣ ಬೇಧಿಸಿದ ಸಾಗರ ಪೊಲೀಸರು- ಆರೋಪಿ ಮೇಲೆ ಫೈರಿಂಗ್

    ಶಿವಮೊಗ್ಗ: ಜಿಲ್ಲೆಯ ಪೊಲೀಸರ ಗನ್ ಮತ್ತೆ ಸದ್ದು ಮಾಡಿದೆ. ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ಬಲಗಾಲಿಗೆ ಗುಂಡು ಹೊಡೆದಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಹಳೆ ಇಕ್ಕೇರಿ ಸಮೀಪ ನಡೆದಿದೆ.

    ಪೊಲೀಸರ ಗುಂಡೇಟಿಗೆ ಒಳಗಾದ ಆರೋಪಿ ಭರತ್ ಇದೀಗ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಪ್ರಕರಣದ ವಿವರ: ಅ.11 ರಂದು ಸಾಗರ ತಾಲೂಕಿನ ಹಳೆ ಇಕ್ಕೇರಿಯಲ್ಲಿ ತಾಯಿ ಬಂಗಾರಮ್ಮ (60) ಹಾಗೂ ಆಕೆಯ ಪುತ್ರ ಪ್ರವೀಣ್ (35)ನನ್ನು ಮನೆಯಲ್ಲಿ ಮಲಗಿದ್ದ ವೇಳೆಯಲ್ಲಿಯೇ ಕೊಲೆ ಮಾಡಲಾಗಿತ್ತು. ಅಂದು ಮೃತ ಪ್ರವೀಣನ ಪತ್ನಿ ಹಾಗೂ 10 ತಿಂಗಳ ಮಗುವಿನ ಎದುರಿನಲ್ಲಿಯೇ ಇಬ್ಬರನ್ನು ಕೊಲೆ ಮಾಡಲಾಗಿತ್ತು. ಆದರೆ ಕೊಲೆಗೆ ನಿಖರ ಕಾರಣ ಗೊತ್ತಾಗಿರಲಿಲ್ಲ.

    ಘಟನೆ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್ ಹಾಗೂ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದರು. ಆರಂಭದಲ್ಲಿ ಈ ಘಟನೆ ಪೊಲೀಸರಿಗೆ ತಲೆ ನೋವಾಗಿತ್ತು. ಕೊಲೆ ಏಕೆ ನಡೆದಿದೆ ಎಂಬ ಅನುಮಾನ ಕಾಡಲಾರಂಭಿಸಿತ್ತು. ಕೊಲೆಯಾದವರು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು. ಅಷ್ಟೊಂದು ಸ್ಥಿತಿವಂತರಲ್ಲ. ಜೊತೆಗೆ ಕೊಲೆ ಮಾಡಿದ ನಂತರ ಮನೆಯಿಂದ ಯಾವ ವಸ್ತುವನ್ನು ತೆಗೆದುಕೊಂಡು ಹೋಗಿಲ್ಲ. ಅಲ್ಲದೇ ಮನೆಯಲ್ಲಿಯೇ ಇದ್ದ ಹತ್ಯೆಯಾದ ಪ್ರವೀಣನ ಪತ್ನಿ ಹಾಗೂ ಆತನ ಮಗುವನ್ನು ಏನು ಮಾಡಿಲ್ಲ.

    ಕೊಲೆ ಏಕೆ ನಡೆದಿದೆ ಎಂಬುದು ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿತ್ತು. ಈಗಾಗೀ ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜ್ ಅವರು ಪ್ರಕರಣದ ತನಿಖೆ ನಡೆಸಲು ವಿಶೇಷ ಪೊಲೀಸ್ ತಂಡ ರಚಿಸಿದ್ದರು. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಮೊದಲಿಗೆ ಹತ್ಯೆಯಾದ ಪ್ರವೀಣನ ಪತ್ನಿ ಮೇಲೆಯೇ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಈಕೆಗೆ ಏನಾದರೂ ಬೇರೆ ಸಂಬಂಧ ಇದೆಯಾ? ಇದಕ್ಕಾಗಿ ಏನಾದರೂ ಕೊಲೆ ನಡೆದಿದೆಯಾ? ಎಂದು ವಿಚಾರಣೆ ನಡೆಸಿದ್ದರು. ಆದರೆ ಪೊಲೀಸರ ಮೊದಲ ಅನುಮಾನಕ್ಕೆ ತನಿಖೆ ವೇಳೆ ಯಾವುದೇ ಪೂರಕ ಸಾಕ್ಷಿ ಲಭಿಸಿರಲಿಲ್ಲ.

    ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಕೊಲೆ ಬೇರೆಯದ್ದೆ ವಿಷಯ ಇದೆ ಎಂಬ ಮಾಹಿತಿ ದೊರೆಯಿತು. ಕೊಲೆಯಾದ ಪ್ರವೀಣನಿಗೆ ಈ ಹಿಂದೆ ಬೇರೆ ಯುವತಿ ಜೊತೆ ಪ್ರೀತಿ ಇತ್ತು. ಆದರೆ ಪ್ರವೀಣ ಆಕೆಗೆ ಕೈಕೊಟ್ಟು ರೋಹಿಣಿಯನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದ. ಇದಕ್ಕೆ ಮಾಜಿ ಪ್ರೇಯಸಿ ಪ್ರವೀಣನ ವಿರುದ್ಧ ಕೋಪಗೊಂಡಿದ್ದಳು ಎನ್ನಲಾಗಿದೆ. ಈಗಾಗಿ ತನ್ನ ಮತ್ತೊಬ್ಬ ಪ್ರಿಯಕರ ಭರತ್‍ನನ್ನು ಬಳಸಿಕೊಂಡು ಪ್ರವೀಣ ಹಾಗೂ ಆತನ ತಾಯಿ ಬಂಗಾರಮ್ಮ ಇಬ್ಬರನ್ನು ಕೊಲೆ ಮಾಡಿಸಿದ್ದಾಳೆ ಎನ್ನಲಾಗಿದೆ.

    ಈಗಾಗಿ ಆರೋಪಿ ಭರತ್ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆದಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಇಂದು ಆರೋಪಿ ಭರತ್ ನನ್ನು ಮಹಜರ್ ನಡೆಸಲು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಮಹಜರ್ ನಡೆಸಿ ವಾಪಸ್ ಬರುವ ವೇಳೆ ಆರೋಪಿ ಭರತ್ ಮೂತ್ರ ವಿಸರ್ಜನೆ ಮಾಡುವುದಾಗಿ ಪೊಲೀಸರ ಬಳಿ ಹೇಳಿ ಜೀಪಿನಿಂದ ಕೆಳಗಡೆ ಇಳಿದು ಹೋಗಿದ್ದಾನೆ. ಪೊಲೀಸ್ ಕಾನ್ಸ್‍ಟೇಬಲ್ ಒಬ್ಬರು ಸಹ ಈತನನ್ನು ಹಿಂಬಾಲಿಸಿದ್ದರು. ಆರೋಪಿ ಭರತ್ ಪೊಲೀಸರನ್ನು ತಳ್ಳಿ ಹಲ್ಲೆ ಮಾಡಲು ಯತ್ನಿಸಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿಯೇ ಇದ್ದ ಡಿಸಿಆರ್ ಬಿ ಇನ್ಸ್ ಪೆಕ್ಟರ್ ಕುಮಾರ್ ಸ್ವಾಮಿ ಅವರು ಆರೋಪಿ ಭರತ್‍ನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಿಂದ ಗಾಯಗೊಂಡಿರುವ ಆರೋಪಿ ಭರತ್‍ನನ್ನು ಸಾಗರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

  • ಮನೆಯಲ್ಲಿ ಕಳವುಗೈದು ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿಗಳ ಕಾಲಿಗೆ ಫೈರಿಂಗ್

    ಮನೆಯಲ್ಲಿ ಕಳವುಗೈದು ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿಗಳ ಕಾಲಿಗೆ ಫೈರಿಂಗ್

    ಆನೇಕಲ್: ಇಂದು ಬೆಳಂಬೆಳಗ್ಗೆ ಇಬ್ಬರು ಪೊಲೀಸರು ಕೊಲೆ ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ.

    ಸೈಕೋ ಅಲಿಯಾಸ್ ವೇಲು ಮತ್ತು ಬಾಲ ಅಲಿಯಾಸ್ ಬಾಲಕೃಷ್ಣ ಕೊಲೆ ಆರೋಪಿಗಳು. ಇವರು ಒಂದು ವಾರಗಳ ಹಿಂದೆ ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಬಳಿಯ ಒಂಟಿ ಮನೆಯಲ್ಲಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದರು.

    ಮನೆಯಲ್ಲಿದ್ದ ಶ್ವೇತಾ ಎಂಬವರ ಮಾಂಗಲ್ಯ ಸರ ಕಳ್ಳತನ ಮಾಡಿ ನಂತರ ಕೊಲೆ ಮಾಡಿದ್ದರು. ಇದೀಗ ಇಬ್ಬರ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ.

    ಆನೇಕಲ್ ತಾಲೂಕಿನ ಮುತ್ಯಾಲಮಡುವಿನ ಬಳಿ ರಾತ್ರಿ ಆರೋಪಿಗಳು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಹೆಬ್ಬಗೋಡಿ ಇನ್ಸ್‍ಪೆಕ್ಟರ್ ಗೌತಮ್ ಮತ್ತು ಬನ್ನೇರುಘಟ್ಟ ಎಸ್‍ಐ ಗೋವಿಂದ್ ಬಂಧಿಸಲು ಹೋದ ಸಂದರ್ಭದಲ್ಲಿ ಪೊಲಿಸರ ಮೇಲೆಯೇ ಆರೋಪಿಗಳು ಹಲ್ಲೆಗೆ ಮುಂದಾಗಿದ್ದರು. ಚೂಪಾದ ಕತ್ತಿಯಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ನೀಡಿದ್ದಾರೆ.

    ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವೇಲೂ ಅಲಿಯಾಸ್ ಸೈಕೋ ವೇಲೂ ಮತ್ತು ಬಾಲಾಜಿ, ಬೆಂಗಳೂರು ಸುತ್ತಮುತ್ತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

  • ಶಿಕ್ಷಕನಿಗೆ ಗುಂಡೇಟು- ಆರೋಪಿಯನ್ನ ಥಳಿಸಿ ಕೊಂದ ಗ್ರಾಮಸ್ಥರು

    ಶಿಕ್ಷಕನಿಗೆ ಗುಂಡೇಟು- ಆರೋಪಿಯನ್ನ ಥಳಿಸಿ ಕೊಂದ ಗ್ರಾಮಸ್ಥರು

    -ಮನೆಯ ಮುಂದೆ ಕುಳಿತಿದ್ದ ಶಿಕ್ಷಕ
    -ಗ್ರಾಮದಲ್ಲಿ ನೀರವ ಮೌನ

    ಲಕ್ನೋ: ಶಿಕ್ಷಕರೊಬ್ಬರನ್ನ ಗುಂಡಿಕ್ಕಿ ಕೊಂದ ಅಪರಿಚಿತನನ್ನ ಗ್ರಾಮಸ್ಥರು ಥಳಿಸಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಕುಶಿನಗರದ ರಾಂಪುರ ಬಂಗಾರಾ ಗ್ರಾಮದಲ್ಲಿ ನಡೆದಿದೆ.

    ಸುಧೀರ್ ಸಿಂಗ್ ಕೊಲೆಯಾದ ಶಿಕ್ಷಕ. ಇಂದು ಬೆಳಗ್ಗೆ ಶಿಕ್ಷಕ ಸುಧೀರ್ ಸಿಂಗ್ ಮನೆಯ ಮುಂದೆ ಕುಳಿತಿದ್ದರು. ಈ ವೇಳೆ ಗೊರಖ್‍ಪುರ ಮೂಲದ ಓರ್ವ ಸುಧೀರ್ ಸಿಂಗ್ ಅವರ ಮೇಲೆ ಫೈರಿಂಗ್ ಮಾಡಿದ್ದಾನೆ. ಗುಂಡಿನ ಸದ್ದು ಕೇಳಿ ಹೊರ ಬಂದ ಗ್ರಾಮಸ್ಥರು ಆರೋಪಿಯನ್ನ ಹಿಡಿದಿದ್ದಾರೆ.

    ಗುಂಡೇಟು ತಗುಲಿದ ಶಿಕ್ಷಕ ಸುಧೀರ್ ಸಿಂಗ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಕೋಲುಗಳಿಂದ ಆರೋಪಿಯನ್ನ ಥಳಿಸಿದ್ದಾರೆ. ಥಳಿತಕ್ಕೊಳಗಾದ ಆರೋಪಿ ಸಹ ಸಾವನ್ನಪ್ಪಿದ್ದಾನೆ. ಸದ್ಯ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಗ್ರಾಮಸ್ಥರು ಎರಡು ಸಾವುಗಳಿಂದ ಆತಂಕದಲ್ಲಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಎರಡು ಶವಗಳನ್ನ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

    ಶಿಕ್ಷಕ ಸುಧೀರ್ ಸಿಂಗ್ ಮೇಲೆ ಫೈರಿಂಗ್ ಮಾಡಿದ ಗೊರಖ್‍ಪುರ ಮೂಲದ ವ್ಯಕ್ತಿ ಇಂದು ಬೆಳಗ್ಗೆ ರಾಂಪುರ ಬಂಗಾರಾ ಗ್ರಾಮಕ್ಕೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದ್ರೆ ಸುಧೀರ್ ಸಿಂಗ್ ಮೇಲೆ ಏಕೆ ಗುಂಡಿನ ದಾಳಿ ನಡೆಸಿದ್ದ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಗ್ರಾಮಸ್ಥರಿಂದ ಥಳಿತಕ್ಕೊಳಗಾದ ಆರೋಪಿ ಸಹ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಜೋಡಿ ಕೊಲೆ ಮಾಡಿ ಕೋಳಿ ಫಾರಂನಲ್ಲಿ ಅಡಗಿದ್ದ ಹಂತಕರು – ಪೊಲೀಸರಿಂದ ಗುಂಡೇಟು

    ಜೋಡಿ ಕೊಲೆ ಮಾಡಿ ಕೋಳಿ ಫಾರಂನಲ್ಲಿ ಅಡಗಿದ್ದ ಹಂತಕರು – ಪೊಲೀಸರಿಂದ ಗುಂಡೇಟು

    – ಲಾಕ್‍ಡೌನ್ ವೇಳೆ ಊರಿಗೆ ಬಂದು ಹಣಕ್ಕಾಗಿ ಮರ್ಡರ್
    – ಇನ್ಸ್‍ಪೆಕ್ಟರ್ ಮೇಲೆ ಚಾಕುವಿನಿಂದ ದಾಳಿ

    ಹಾಸನ: ಚನ್ನರಾಯಪಟ್ಟಣದ ಆಲಗೊಂಡನಹಳ್ಳಿಯಲ್ಲಿ ವೃದ್ಧ ದಂಪತಿಗಳನ್ನು ಹತ್ಯೆ ಮಾಡಿ ಕೋಳಿ ಫಾರಂನಲ್ಲಿ ಅಡಗಿದ್ದ ಕೊಲೆಗಾರನ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿದ್ದಾರೆ.

    ಆರೋಪಿ ಪ್ರಸಾದ್ ಅಲಿಯಾಸ್ ಗುಂಡನ ಎಡಗಾಲಿನ ಮಂಡಿ ಭಾಗಕ್ಕೆ ಗುಂಡೇಟು ಹೊಡೆಯಲಾಗಿದೆ. ಆಲಗೊಂಡನಹಳ್ಳಿ ಗ್ರಾಮದ ಹೊರವಲಯದ ತೋಟದ ಮನೆಯಲ್ಲಿ ವಾಸವಿದ್ದ ವೃದ್ಧ ದಂಪತಿ ಮುರುಳಿಧರ್ (71), ಉಮಾದೇವಿ (67) ಅವರನ್ನು ಎರಡು ದಿನಗಳ ಹಿಂದೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸದಂತೆ ಈಗ ಇಬ್ಬರನ್ನು ಬಂಧಿಸಲಾಗಿದೆ.

    ಕೋಳಿ ಫಾರಂನಲ್ಲಿ ಆರೋಪಿಗಳು ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಜೊತೆಗೆ ಶರಣಾಗುವಂತೆ ಮನವಿ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಆರೋಪಿಗಳು ಬಂಧಿಸಲು ಮುಂದಾದ ಇನ್ಸ್ ಪೆಕ್ಟರ್ ವಿನಯ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಆಗ ರಕ್ಷಣೆಗಾಗಿ ವಿನಯ್ ಜೊತೆ ಇದ್ದ ಮತ್ತೊಬ್ಬ ಇನ್ಸ್ ಪೆಕ್ಟರ್ ಸಿದ್ದರಾಮೇಶ್ವರ್ ಅವರು ಫೈರಿಂಗ್ ಮಾಡಿದ್ದಾರೆ. ವಿನಯ್ ಅವರ ಎಡಗೈಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಲಾಕ್‍ಡೌನ್ ಸಮಯದಲ್ಲಿ ಊರಿಗೆ ಬಂದಿದ್ದ ಆರೋಪಿಗಳು ದುಡ್ಡಿಗಾಗಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. 80 ಎಕ್ರೆ ಜಮೀನು ಹೊಂದಿದ್ದ ಮುರುಳಿಧರ್ ಅವರಿಗೆ ಮಕ್ಕಳಿರಲಿಲ್ಲ. ಅವರು ಆ ಜಮೀನನ್ನು ಮಾರಿ ಮನೆಯಲ್ಲಿ ದುಡ್ಡು ಇಟ್ಟಿಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಆರೋಪಿಗಳು ದರೋಡೆಗೆ ಯತ್ನಿಸಿದ್ದಾರೆ. ಈ ವೇಳೆ ವೃದ್ಧ ದಂಪತಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿದ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್, ಎರಡು ದಿನಗಳ ಹಿಂದೆ ಜೋಡಿ ಕೊಲೆಯಾಗಿತ್ತು. ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ನಮ್ಮ ಪೊಲೀಸರು ತೆರಳಿದ್ದರು. ಸ್ಥಳಕ್ಕೆ ತೆರಳಿದ ವೇಳೆ ಆರೋಪಿ ಶರಣಾಗುವಂತೆ ಪೊಲೀಸರು ಹೇಳಿದ್ದಾರೆ. ಆದರೆ ಆರೋಪಿ ಶರಣಾಗದೇ ಪೊಲೀಸರ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ನಮ್ಮ ಪೊಲೀಸರು ಫೈರಿಂಗ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಆರೋಪಿ ಮತ್ತು ಸಿಪಿಐ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರ ಆರೋಗ್ಯದಲ್ಲೂ ಚೇತರಿಕೆ ಕಂಡು ಬಂದಿದೆ. ಸರಣಿ ಕೊಲೆಯಾಗುತ್ತಿರುವ ಚನ್ನರಾಯಪಟ್ಟಣ ಸೇರಿ ಎಲ್ಲೆಡೆ ಗಂಭೀರ ಕ್ರಮ ಕೈಗೊಂಡು ನಿಗಾ ವಹಿಸಿದ್ದೇವೆ. ಒಟ್ಟು ಈಗ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದೇವೆ. ಇನ್ನೂ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.

  • ಮಗನ ಮದುವೆ ವೇಳೆ ಗುಂಡಿನ ದಾಳಿ – ರೌಡಿ ಶೀಟರ್ ಫ್ರೋಟ್ ಇರ್ಫಾನ್ ಸ್ಥಿತಿ ಗಂಭೀರ

    ಮಗನ ಮದುವೆ ವೇಳೆ ಗುಂಡಿನ ದಾಳಿ – ರೌಡಿ ಶೀಟರ್ ಫ್ರೋಟ್ ಇರ್ಫಾನ್ ಸ್ಥಿತಿ ಗಂಭೀರ

    – ಬುಲೆಟ್‍ನಲ್ಲಿ ಬಂದ ಮೂವರಿಂದ ಫೈರಿಂಗ್

    ಹುಬ್ಬಳ್ಳಿ: ಚೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು ಜೋರಾಗಿದೆ. ಮೂವರು ಯುವಕರು ಬುಲೆಟ್ ಬೈಕಿನಲ್ಲಿ ಆಗಮಿಸಿ ಮಗನ ಮದುವೆ ಸಂಭ್ರಮದಲ್ಲಿದ್ದ ರೌಡಿ ಶೀಟರ್ ಮೇಲೆ ನಾಲ್ಕು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ.

    ಗುಂಡಿನ ದಾಳಿಯಲ್ಲಿ ಮೂರು ಗುಂಡು ರೌಡಿ ಶೀಟರ್ ಫ್ರೋಟ್ ಇರ್ಫಾನ್‍ಗೆ ತಗುಲಿದ ಪರಿಣಾಮ ರೌಡಿ ಶೀಟರ್ ಸ್ಥಿತಿ ಗಂಭೀರವಾಗಿದೆ. ಧಾರವಾಡದ ರೌಡಿಶೀಟರ್ ಇರ್ಫಾನ್ ಮೇಲೆಯೇ ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಹಳೇ ಹುಬ್ಬಳ್ಳಿಯ ವಿಶಾಲ ನಗರದ ಕಲ್ಯಾಣ ಮಂಟಪದ ಬಳಿ ಘಟನೆ ನಡೆದಿದ್ದು, ಫೈರಿಂಗ್ ಮಾಡುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಧಾರವಾಡದ ಫ್ರೋಟ್ ಇರ್ಫಾನ್ ನಾಲ್ಕು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪರಿಣಾಮ ಇರ್ಪಾನ್ ಮೇಲೆ ರೌಡಿ ಶೀಟರ್ ಕೇಸ್ ದಾಖಲಾಗಿತ್ತು. ಇರ್ಫಾನ್ ಮೇಲೆ ಗುಂಡಿನ ದಾಳಿಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗುತಿತ್ತು, ಇರ್ಫಾನ್ ಇಂದು ತನ್ನ ಮಗನ ಮದುವೆ ನಂತರ ಕಲ್ಯಾಣ ಮಂಟಪದ ಹೊರಗೆ ಬೀಗರಿಗೆ ಬೀಳ್ಕೊಡುಗೆ ನೀಡುತ್ತಿದ್ದ. ಈ ವೇಳೆ ಗುಂಡಿನ ದಾಳಿ ನಡೆದಿದೆ. ಮೂರು ಗುಂಡು ಇರ್ಫಾನ್‍ಗೆ ತಗುಲಿದ್ದು ಇರ್ಫಾನ್ ಸದ್ಯ ಸುಚಿರಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಘಟನೆಯ ನಂತರ ಹಳೇ ಹುಬ್ಬಳ್ಳಿಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇದೀಗ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಳ್ಳಂಬೆಳಗ್ಗೆ ರೌಡಿಶೀಟರ್ ಮೇಲೆ ಖಾಕಿ ಫೈರಿಂಗ್ – ಮಚ್ಚಿನಿಂದ ಕೊಚ್ಚಿ ಕೊಲೆಗೈದವ ತಿಂದ ಗುಂಡೇಟು

    ಬೆಳ್ಳಂಬೆಳಗ್ಗೆ ರೌಡಿಶೀಟರ್ ಮೇಲೆ ಖಾಕಿ ಫೈರಿಂಗ್ – ಮಚ್ಚಿನಿಂದ ಕೊಚ್ಚಿ ಕೊಲೆಗೈದವ ತಿಂದ ಗುಂಡೇಟು

    ಬೆಂಗಳೂರು: ಮೂರು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಅಟ್ಟಾಡಿಸಿಕೊಂಡು ಕೊಲೆ ಮಾಡಿದ್ದ ಆರೋಪಿಯ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

    ರೌಡಿಶೀಟರ್ ಯೂನಿಸ್ ಗುಂಡೇಟು ತಿಂದ ಕೊಲೆ ಆರೋಪಿ. ಕೊಲೆಯಾಗಿದ್ದ ಭಟ್ಟಿ ಅಮ್ಚಾದ್ ಮತ್ತು ಯೂನಿಸ್ ಗ್ಯಾಂಗ್ ನಡುವೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಆಗಾಗ ಕೊಲೆಯತ್ನಗಳು, ಹೊಡೆದಾಟಗಳು ನಡೆಯುತ್ತಿದ್ದವು. ಕಳೆದ ಭಾನುವಾರ ಅಂಗಡಿಯಲ್ಲಿದ್ದ ಭಟ್ಟಿ ಅಮ್ಚಾದ್ ಮೇಲೆ ಯೂನಿಸ್ ಗ್ಯಾಂಗ್‍ನ ಏಳೆಂಟು ಜನ ಏಕಾಏಕಿ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಿ, ಅಟ್ಟಾಡಿಸಿಕೊಂಡು ಹೋಗಿ ನಡುರಸ್ತೆಯಲ್ಲೇ ಬರ್ಬರವಾಗಿ ಕೊಲೆ ಮಾಡಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಡಿ.ಜೆ ಹಳ್ಳಿ ಪೊಲೀಸರು, ಪ್ರಮುಖ ಆರೋಪಿ ಯೂನಿಸ್‍ನನ್ನು ಬಂಧಿಸಿ, ಇಂದು ಮುಂಜಾನೆ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪೇದೆ ಆನಂದ್ ಮೇಲೆ ಆರೋಪಿ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದ. ತಕ್ಷಣ ಎಚ್ಚೆತ್ತ ಡಿ.ಜೆ ಹಳ್ಳಿ ಇನ್ಸ್‌ಪೆಕ್ಟರ್ ಕೇಶವಮೂರ್ತಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ರೌಡಿಶೀಟರ್ ಯೂನಿಸ್ ಕಾಲಿಗೆ ಗುಂಡು ಹೊಡೆದು ಆರೋಪಿಯನ್ನು ಬಂಧಿಸಿದ್ದಾರೆ.

  • ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸರ ಪಿಸ್ತೂಲ್

    ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸರ ಪಿಸ್ತೂಲ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಪಿಸ್ತೂಲ್ ಸದ್ದು ಮಾಡಿದ್ದು, ರೌಡಿಶೀಟರ್‌ಗಳ ಮೇಲೆ ಜಾಲಹಳ್ಳಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

    ಆರೋಪಿಗಳಾದ ವಿಜಯ್ ದಡಿಯಾ ವಿಜಿ ಹಾಗು ಮೋರಿ ಅನಿ ಮೇಲೆ ಜಾಲಹಳ್ಳಿ ಇನ್ಸ್‌ಪೆಕ್ಟರ್‌ಗಳಾದ ಯಶವಂತ್ ಹಾಗೂ ಪಿಎಸ್‍ಐ ಲೇಪಾಕ್ಷಿ ಫೈರಿಂಗ್ ನಡೆಸಿದ್ದಾರೆ. ದಡಿಯಾ ವಿಜಿ ನಂದಿನಿ ಲೇಔಟ್‍ನ ರೌಡಿಶೀಟರ್ ಆಗಿದ್ದು, ಸುಮಾರು 15 ಪ್ರಕರಣದಲ್ಲಿ ಭಾಗಿಯಾಗಿದ್ದನು. ಅಲ್ಲದೆ ಇಬ್ಬರು ಹಲವು ಪ್ರಕರಣದಲ್ಲಿ ಬೇಕಾಗಿದ್ದರು.

    ಕಳೆದ ವಾರ ವಿಜಿ ಹಾಗೂ ಅನಿ ಸರಗಳ್ಳತನ ಮಾಡಿದ್ದರು. ಅಲ್ಲದೆ ಸರಗಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆರೋಪಿಗಳು ಮುಂಜಾನೆ ನಂದಿನಿ ಲೇಔಟ್‍ನ ಕೂಲಿನಗರದಲ್ಲಿ ಅಡಗಿಕೊಂಡಿದ್ದರು. ಹಾಗಾಗಿ ಇನ್ಸ್‌ಪೆಕ್ಟರ್‌ ಯಶವಂತ್ ಅಂಡ್ ಟೀಂ ಆರೋಪಿಗಳ ಬಂಧನಕ್ಕೆ ತೆರಳಿದ್ದರು.

    ಬಂಧನಕ್ಕೆ ತೆರಳಿದ್ದ ವೇಳೆ ಆರೋಪಿಗಳು ಪೊಲೀಸ್ ಸಿಬ್ಬಂದಿ ಶ್ರೀನಿವಾಸ್ ಮೂರ್ತಿ ಮತ್ತು ನರೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್‌ ಯಶವಂತ್ ಮತ್ತು ಪಿಎಸ್ ಐ ಲೇಪಾಕ್ಷಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.

    ಗಾಯಾಳು ಆರೋಪಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ವಾಟ್ಸಪ್ ಸ್ಟೇಟಸ್ ವಿಚಾರದಲ್ಲಿ ಮನಸ್ತಾಪ – ಎರಡು ತಂಡಗಳ ನಡುವೆ ಮಾರಾಮಾರಿ

    ವಾಟ್ಸಪ್ ಸ್ಟೇಟಸ್ ವಿಚಾರದಲ್ಲಿ ಮನಸ್ತಾಪ – ಎರಡು ತಂಡಗಳ ನಡುವೆ ಮಾರಾಮಾರಿ

    ಮಂಗಳೂರು: ಎರಡು ತಂಡಗಳ ನಡುವೆ ಮಾರಾಮಾರಿ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡ ಶೂಟೌಟ್ ನಡೆಸಿದ ಘಟನೆ ಮಂಗಳೂರು ನಗರ ಹೊರವಲಯದ ಉಳ್ಳಾಲದ ಮಕ್ಕಚ್ಚೇರಿ ಕಿಲೇರಿಯಾ ನಗರದಲ್ಲಿ ನಡೆದಿದೆ.

    ಇರ್ಷಾದ್(17) ಗುಂಡೇಟಿನಿಂದ ಗಾಯಗೊಂಡ ಸ್ಥಳೀಯ ನಿವಾಸಿ. ವಾಟ್ಸಪ್ ಸ್ಟೇಟಸ್ ವಿಚಾರದಲ್ಲಿ ಮನಸ್ತಾಪ ಉಂಟಾಗಿದ್ದು, ಈ ಕಾರಣದಿಂದಾಗಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆಯುತ್ತಿತ್ತು.

    ಈ ವೇಳೆ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಏಳು ಮಂದಿ ಸಹಚರರೊಂದಿಗೆ ಆಗಮಿಸಿದ್ದಾನೆ. ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಸುಹೈಲ್ ಕಂದಕ್ ತಂಡದ ಮೇಲೆ 5 ಸುತ್ತು ಫೈರ್ ಮಾಡಿದ್ದಾನೆ. ಸುಹೈಲ್ ಫೈರಿಂಗ್ ಮಾಡುತ್ತಿದ್ದಂತೆ ಸ್ಥಳೀಯರು ಆತನ ಕಾರನ್ನು ಪುಡಿಗಟ್ಟಿದ್ದಾರೆ.

    ಈ ವಿಷಯ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.