Tag: ಫೈನಾಶಿಯರ್

  • ಫೈನಾನ್ಶಿಯರ್‌ನಿಂದ ಹಿರಿಯ ನಟ ದ್ವಾರಕೀಶ್ ಮೇಲೆ ದರ್ಪ

    ಫೈನಾನ್ಶಿಯರ್‌ನಿಂದ ಹಿರಿಯ ನಟ ದ್ವಾರಕೀಶ್ ಮೇಲೆ ದರ್ಪ

    – ದ್ವಾರಕೀಶ್ ಮನೆಗೆ ನುಗ್ಗಿ ದಾಂಧಲೆ

    ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟ ದಿಗ್ಗಜ ದ್ವಾರಕೀಶ್ ಅವರ ಮನೆಗೆ ನುಗ್ಗಿ ಫೈನಾನ್ಶಿಯರ್, ನಿರ್ಮಾಪಕರೊಬ್ಬರು ನುಗ್ಗಿ ದಾಂಧಲೆ ಮಾಡಿದ ಘಟನೆ ನಡೆದಿದೆ.

    ದ್ವಾರಕೀಶ್ ಅವರು ಆಯುಷ್ಮಾನ್ಬವ ಚಿತ್ರದ ನಿರ್ಮಾಪಕರಾಗಿದ್ದರು. ಹೀಗಾಗಿ ಅವರು ಫೈನಾಶಿಯರ್ ರಮೇಶ್ ಅವರಿಂದ ಹಣ ಪಡೆದಿದ್ದರು. ಆದರೆ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಹಣ ಗಳಿಸುವಲ್ಲಿ ವಿಫಲ ಆಗಿತ್ತು.

    ಫೈನಾನ್ಸ್ ಮಾಡಿದ್ದ ರಮೇಶ್ ಹಣವನ್ನು ವಾಪಸ್ ಕೊಡುವಂತೆ ದುಂಬಾಲು ಬಿದ್ದಿದ್ದರು. ಹೀಗಾಗಿ ಶುಕ್ರವಾರ ಮಧ್ಯಾಹ್ನ ಕೂಡ ರಮೇಶ್ ದ್ವಾರಕೀಶ್ ಮನೆಗೆ ಹೋಗಿ ಹಣವನ್ನು ಕೇಳಿದ್ದರು. ಆಗ ದ್ವಾರಕೀಶ್ ಅವರು, ಹಣದ ಕಷ್ಟದಲ್ಲಿ ಇದ್ದೇನೆ. ಸ್ವಲ್ಪ ಕಾಲಾವಕಾಶ ಕೊಡುವಂತೆ ಮನವಿ ಮಾಡಿದ್ದಾರೆ. ಆದರೆ ಹಣವನ್ನು ಬಿಡುವುದಕ್ಕೆ ಸಾಧ್ಯವಿಲ್ಲ. ನೀವು ಹೇಳಿದ ಗಡುವು ಮುಗಿಯಿತು. ಗಡುವು ಮುಗಿದ ಬಳಿಕವೂ ಹಣವನ್ನು ಬಿಡುವುದಕ್ಕೆ ಆಗುವುದಿಲ್ಲ ಅಂತ ರಮೇಶ್ ಪಟ್ಟು ಹಿಡಿದಿದ್ದರು.

    ರಮೇಶ್ ದ್ವಾರಕೀಶ್ ಅವರ ಮನೆಯಲ್ಲಿ ಗಲಾಟೆ ಇಳಿದಿದ್ದಾರೆ. ಇದರಿಂದ ಕೋಪಗೊಂಡ ದ್ವಾರಕೀಶ್ ಅವರು, ಒಂದೂವರೆ ವರ್ಷ ಆದರೂ ನಿನಗೆ ನಾನು ಹಣ ಕೊಡೋದಿಲ್ಲ ಅಂತ ಹೇಳಿದ್ದಾರೆ. ಈ ವಿಚಾರಕ್ಕೆ ಇಬ್ಬರ ಮಧ್ಯ ಗಲಾಟೆಯಾಗಿದೆ. ಈ ಸಂದರ್ಭದಲ್ಲಿ ನಿರ್ಮಾಪಕ ಜಯಣ್ಣ ಕೂಡ ರಮೇಶ್ ಜೊತೆಯಲ್ಲಿ ಇದ್ದರು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ರಮೇಶ್ ಕೂಡ ಎರಡು ಚಿತ್ರದ ನಿರ್ಮಾಪಕರಾಗಿದ್ದಾರೆ. ಇಷ್ಟೇಲ್ಲಾ ಆದ್ಮೇಲೆ ದ್ವಾರಕೀಶ್ ಎಚ್‍ಎಸ್‍ಆರ್ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಶನಿವಾರ ಸಂಜೆಯವರೆಗೂ ಪೊಲೀಸರು ಯಾವುದೇ ಎಫ್‍ಐಆರ್ ದಾಖಲಿಸಿಕೊಂಡಿಲ್ಲ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ದ್ವಾರಕೀಶ್ ಅವರ ಪುತ್ರ ಯೋಗೀಶ್, ನಾನು ಮನೆಯಲ್ಲಿ ಇಲ್ಲದೆ ಇರುವಾಗ ರಮೇಶ್ ಹಾಗೂ ಜಯಣ್ಣ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ವ್ಯವಹಾರದಲ್ಲಿ ಕಾನೂನು ಪ್ರಕಾರ ನಡೆದುಕೊಳ್ಳದೇ ಮನೆಗೆ ನುಗ್ಗಿದ್ದು ಸರಿಯಲ್ಲ. ಘಟನೆಯಿಂದಾಗಿ ತಂದೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.