Tag: ಫೇಸ್ ಶೀಲ್ಡ್

  • ಗದಗ ಕೋವಿಡ್ ಕೇರ್ ಸೆಂಟರ್ ನಲ್ಲಿ ನೀರಿಗಾಗಿ ಪರದಾಟ

    ಗದಗ ಕೋವಿಡ್ ಕೇರ್ ಸೆಂಟರ್ ನಲ್ಲಿ ನೀರಿಗಾಗಿ ಪರದಾಟ

    – ಎಲ್ಲೆಂದರಲ್ಲಿ ಮಾಸ್ಕ್, ಫೇಸ್‍ಮಾಸ್ಕ್

    ಗದಗ: ರಾಜ್ಯಾದ್ಯಂತ ಕೊರೊನಾದ 2ನೇ ಅಲೆ ತಾಂಡವಾಡ್ತಿದೆ. ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸಿಗದೆ ಅದೆಷ್ಟೋ ಜನ ಸಾವನ್ನಪ್ಪುತ್ತಿದ್ದಾರೆ. ಇದೆಲ್ಲದರ ನಡುವೆ ನಗರದ ಜಿಮ್ಸ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ನಲ್ಲಿರೋ ರೋಗಿಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

    ಗದಗ ಜಿಲ್ಲೆಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಪರಿಣಾಮ ಆಸ್ಪತ್ರೆಗೆ ವ್ಹೀಲ್ ಚೇರ್ ನಲ್ಲಿ ಶುದ್ಧ ಕುಡಿಯುವ ನೀರನ್ನು ಅಲ್ಲಿನ ಸಿಬ್ಬಂದಿ ಪೂರೈಸುತ್ತಿದ್ದಾರೆ. ಹಾಗಾಗಿ ಕೋವಿಡ್ ಸೆಂಟರ್ ನಲ್ಲಿ ಒಂದು ವಾಟರ್ ಫಿಲ್ಟರ್ ಇಲ್ಲದಂತಹ ಸ್ಥಿತಿಯನ್ನು ಕಂಡು ರೋಗಿಗಳ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ವಾಟರ್ ಫಿಲ್ಟರ್ ಇಲ್ಲದ್ದಕ್ಕೆ ವ್ಹೀಲ್ ಚೇರ್ ಮೇಲೆ ನೀರಿನ ಕ್ಯಾನ್ ಇಟ್ಟು ಅದನ್ನು ಸಿಬ್ಬಂದಿ ತಳ್ಳಿಕೊಂಡು ನೀರು ತರುವ ದೃಶ್ಯ ಮೂಲ ಸೌಲಭ್ಯಗಳ ಕೊರತೆಯನ್ನು ಪ್ರದರ್ಶಿಸುತ್ತಿದೆ. ಜಿಲ್ಲಾಸ್ಪತ್ರೆ ಹೊರವಲಯದಲ್ಲಿರೋ ಶುದ್ಧ ನೀರಿನ ಘಟಕದಿಂದ ಸಿಬ್ಬಂದಿ ನೀರು ತರಲಾಗುತ್ತಿದ್ದು, ಸಿಬ್ಬಂದಿ ನೀರು ತರದೇ ಇದ್ದ ಸಂದರ್ಭದಲ್ಲಿ ರೋಗಿಗಳ ಸಂಬಂಧಿಕರು ಹೋಗಿ ನೀರು ತರಬೇಕಾದ ಅನಿವಾರ್ಯ ಸ್ಥಿತಿ ಬಂದಿದೆ.

    ಇದರಿಂದ ಇತರೆ ರೋಗಿಗಳು ಹಾಗೂ ಸಂಬಂಧಿಕರಲ್ಲಿ ಆತಂಕ ಶುರುವಾಗಿದೆ. 350 ಕೋವಿಡ್ ಬೆಡ್ ಹೊಂದಿದ್ದರು ಸಹ ಒಂದೇ ಒಂದು ಫಿಲ್ಟರ್ ಇಲ್ಲದೇ ಕೋವಿಡ್ ಕೇರ್ ಇರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ರೋಗಿಗಳಿಗೆ, ವೈದ್ಯರಿಗೆ ಕುಡಿಯಲು ನೀರು ಪೂರೈಸದ ಜಿಮ್ಸ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೋಗಿಗಳು, ಸೋಂಕಿತರು ಹಿಡಿ ಶಾಪ ಹಾಕುತ್ತಿದ್ದಾರೆ.

    ಡಂಪಿಂಗ್ ಯಾರ್ಡ್:
    ನಗರದ ಜಿಮ್ಸ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ಆವರಣ ಇತ್ತೀಚಿಗೆ ಡಂಪಿಂಗ್ ಯಾರ್ಡ್ ಆಗಿದೆ. ಜಿಮ್ಸ್ ಆಸ್ಪತ್ರೆಯ ಬಳಿ ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್ ಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗಿದ್ದಾರೆ. ಬಳಕೆ ಮಾಡಿದ ಸರ್ಜಿಕಲ್ ಕ್ಯಾಪ್, ಮಾಸ್ಕ್ ಗಳನ್ನು ಮೆಡಿಕಲ್ ವೇಸ್ಟ್ ಸ್ಟೋರ್ ನಲ್ಲಿ ಹಾಕಬೇಕು. ಆದರೆ ಇಲ್ಲಿ ಮೆಡಿಕಲ್ ವೆಸ್ಟ್ ಸ್ಟೋರ್ ಇದ್ರೂ ಸಹ ಸೋಂಕಿತರು ಹಾಗೂ ವೈದ್ಯಕೀಯ ಸಿಬ್ಬಂದಿ ಬಳಸಿರೋ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿ ನಿರ್ಲಕ್ಷ್ಯ ತೋರಲಾಗಿದೆ. ಹೀಗಾಗಿ ಬಿಸಾಡಿರುವ ವೈದ್ಯಕೀಯ ವೇಸ್ಟ್ ಗಳಿಂದಲೂ ಸ್ಥಳೀಯರಿಗೆ ಸೋಂಕು ಹರಡುವ ಆತಂಕ ಎದುರಾಗಿದೆ. ಇದರಿಂದ ಆಸ್ಪತ್ರೆಗೆ ಬಂದ ಇರತೆ ರೋಗಿಗಳಲ್ಲಿ ಭಯ ಶುರುವಾಗಿದೆ.

  • ಸೋಮನಾಥ ದೇವಸ್ಥಾನದ ಬ್ರಹ್ಮಕಲಶೋತ್ಸವ – ಸ್ವಯಂಸೇವಕರಿಗೆ ಫೇಸ್ ಶೀಲ್ಡ್ ವಿತರಿಸಿದ ಯು.ಟಿ.ಫರೀದ್ ಫೌಂಡೇಶನ್

    ಸೋಮನಾಥ ದೇವಸ್ಥಾನದ ಬ್ರಹ್ಮಕಲಶೋತ್ಸವ – ಸ್ವಯಂಸೇವಕರಿಗೆ ಫೇಸ್ ಶೀಲ್ಡ್ ವಿತರಿಸಿದ ಯು.ಟಿ.ಫರೀದ್ ಫೌಂಡೇಶನ್

    ಮಂಗಳೂರು: ಉಳ್ಳಾಲ ಕಡಲ ತಡಿಯಲ್ಲಿರುವ ಸೋಮೇಶ್ವರದ ಇತಿಹಾಸ ಪ್ರಸಿದ್ಧ ಶ್ರೀ ಸೋಮನಾಥ ದೇವಸ್ಥಾನವು ಬ್ರಹ್ಮಕಲಶಕ್ಕೆ ಸಜ್ಜುಗೊಂಡಿದೆ. ದೇವಸ್ಥಾನದ ಸ್ವಯಂಸೇವಕರ ಆರೋಗ್ಯದ ಹಿತದೃಷ್ಟಿಯಿಂದ ದಿವಂಗತ ಯು.ಟಿ.ಫರೀದ್ ಫೌಂಡೇಶನ್ ಸುಮಾರು 300 ಫೇಸ್ ಶೀಲ್ಡ್ ನ್ನು ವಿತರಿಸಿ ಸೌಹಾರ್ಧತೆ ಮೆರೆದಿದೆ. ಬ್ರಹ್ಮಕಲಶವು ಸಾರ್ವಜನಿಕ ಕಾರ್ಯಕ್ರಮವನ್ನು ಬದಿಗೊತ್ತಿ ನಿಯಮಿತವಾಗಿ ಸಾಮಾಜಿಕ ಅಂತರದೊಂದಿಗೆ ಸರಳವಾಗಿ ನೆರವೇರಲಿದೆ.

    ಕಾರು ಅಪಘಾತಕ್ಕೊಳಗಾಗಿ ಬೆಂಗಳೂರು ನಿವಾಸದಲ್ಲಿರುವ ಮಂಗಳೂರು ಶಾಸಕರಾದ ಯು.ಟಿ.ಖಾದರ್ ಅವರ ಅನುಪಸ್ಥಿತಿಯಲ್ಲಿ ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಫೇಸ್ ಶೀಲ್ಡ್ ವಿತರಿಸಿದರು.

    ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಅಡ್ವೋಕೇಟ್ ರವೀಂದ್ರನಾಥ ರೈ, ಕಮಿಟಿ ಸದಸ್ಯರಾದ ಚಂದ್ರಶೇಖರ ಹೊಳ್ಳ, ರಾಮದಾಸ್, ಜಗದೀಶ್ ಉಚ್ಚಿಲ್ ಮೊದಲಾದವರು ಸ್ವೀಕರಿಸಿದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ತಾ.ಪಂ. ಅಧ್ಯಕ್ಷರಾದ ಮಹಮ್ಮದ್ ಮೋನು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜಾ, ಮಹಿಳಾ ಘಟಕದ ಅಧ್ಯಕ್ಷೆ ದೇವಿಕಾ ಪೂಜಾರಿ, ಯುವಕಾಂಗ್ರೆಸ್ ನ ದೀಪಕ್ ಪಿಲಾರ್, ಕಾಂಗ್ರೆಸ್ ಮುಖಂಡರಾದ ಪುರುಷೋತ್ತಮ ಶೆಟ್ಟಿ, ಸದಾಶಿವ ಉಳ್ಳಾಲ್, ಕಿಶೋರ್ ಶೆಟ್ಟಿ, ಪುರುಷೋತ್ತಮ ಅಂಚನ್, ರಾಜೇಂದ್ರ ಉಳಿಯ, ಪದ್ಮನಾಭ ಕೊಣಾಜೆ, ಸುರೇಶ್ ಭಟ್ನಾಗರ್, ವಿಶಾಲ್ ಕೊಲ್ಯ, ರಾಮ ಸೋಮೇಶ್ವರ, ಅಚ್ಯುತ ಗಟ್ಟಿ, ಚಾಂದಿನಿ ಕೋಟೆಕಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಇಂಟರ್ ಲಾಕ್, ಮೆಟ್ಟಿಲು ಉದ್ಘಾಟನೆ: ದೇವಸ್ಥಾನ ವಠಾರದಲ್ಲಿ ಇಂಟರ್ ಲಾಕ್ ಹಾಗೂ ಮೆಟ್ಟಿಲು ನಿರ್ಮಾಣಕ್ಕೆ ದೇವಸ್ಥಾನ ಸಮಿತಿಯು ಶಾಸಕರಾದ ಯು.ಟಿ.ಖಾದರ್ ಅವರಲ್ಲಿ ಮನವಿ ಮಾಡಿತ್ತು. ಸೂಕ್ತವಾಗಿ ಸ್ಪಂದಿಸಿದ ಯು.ಟಿ.ಖಾದರ್ ತಮ್ಮ ಶಾಸಕ ನಿಧಿಯಿಂದ ಇಂಟರ್ ಲಾಕ್ ಹಾಗೂ ಮೆಟ್ಟಿಲು ನಿರ್ಮಿಸಿಕೊಟ್ಟಿದ್ದು, ಅದರ ಉದ್ಘಾಟನೆಯು ಈ ಸಂದರ್ಭದಲ್ಲಿ ನಡೆಯಿತು.

  • ‘ಮಹಾ’ ಪೊಲೀಸರಿಗೆ 25 ಸಾವಿರ ಫೇಸ್‍ಶೀಲ್ಡ್ ನೀಡಿದ ನಟ ಸೋನು ಸೂದ್

    ‘ಮಹಾ’ ಪೊಲೀಸರಿಗೆ 25 ಸಾವಿರ ಫೇಸ್‍ಶೀಲ್ಡ್ ನೀಡಿದ ನಟ ಸೋನು ಸೂದ್

    ಮುಂಬೈ: ಕೊರೊನಾ ಮಹಾಮಾರಿ ದೇಶವನ್ನು ಒಕ್ಕರಿಸಿದ ಬಳಿಕ ದಿನಬೆಳಗಾದರೆ ಸಾಕು ಅನೇಕ ಮಾನವೀಯ ಕಾರ್ಯಗಳು ಬೆಳಕಿಗೆ ಬರುತ್ತಲೇ ಇವೆ. ಅಂತೆಯೇ ಬಾಲಿವುಡ್ ನಟ ಸೋನು ಸೂದ್ ಕೂಡ ಲಾಕ್‍ಡೌನ್ ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೇ ಕೊರೊನಾ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದ ನಟ ಇದೀಗ ಮಹಾರಾಷ್ಟ್ರ ಪೊಲೀಸರ ಸಹಾಯಕ್ಕೆ ನಿಂತಿದ್ದಾರೆ.

    ಹೌದು. ಮಹಾರಾಷ್ಟ್ರ ಪೊಲೀಸರಿಗೆ ಸುಮಾರು 25 ಸಾವಿರ ಫೇಸ್ ಶೀಲ್ಡ್ ನೀಡುವ ಮೂಲಕ ಸೋನು ಸೂದ್ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಈ ಸಂಬಂಧ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‍ಮುಖ್ ಅವರು ಟ್ವೀಟ್ ಮಾಡಿದ್ದು, ನಮ್ಮ ಪೊಲೀಸರಿಗೆ 25 ಸಾವಿರ ಫೇಸ್ ಶೀಲ್ಡ್ ನೀಡಿದ ನಟ ಸೊನು ಸೂದ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಬರೆದುಕೊಂಡು ಜೊತೆಗಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸಿಲುಕಿದ್ದ ನೂರಾರು ಕನ್ನಡಿಗರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ ಸೋನು ಸೂದ್

    ಈ ಹಿಂದೆ ರಾಷ್ಟ್ರವ್ಯಾಪಿ ಲಾಕ್‍ಡೌನ್‍ನಿಂದಾಗಿ ಮೃತ ಮತ್ತು ಗಾಯಗೊಂಡಿರುವ ವಲಸೆ ಕಾರ್ಮಿಕರ 400ಕ್ಕೂ ಹೆಚ್ಚು ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಾಗಿ ನಟ ಸೋನು ಸೂದ್ ಘೋಷಣೆ ಮಾಡಿದ್ದರು. ಈ ಸಂಬಂಧ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ಅಧಿಕಾರಿಗಳನ್ನು ಸಂಪರ್ಕಿಸಿ ಅವರೊಂದಿಗೆ ಮಾತುಕತೆ ಕೂಡ ನಡೆಸಿದ್ದರು. ಅಲ್ಲದೆ ಕೊರೊನಾದಿಂದ ಮೃತ ವಲಸಿಗರ ಸಂಬಂಧಿತ ಮಾಹಿತಿ, ವಿಳಾಸ ಮತ್ತು ಬ್ಯಾಂಕ್ ವಿವರಗಳನ್ನು ಪಡೆದುಕೊಂಡಿದ್ದರು. ಇದನ್ನೂ ಓದಿ: 400ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳಿಗೆ ಸೋನು ಸೂದ್ ಆರ್ಥಿಕ ನೆರವು

    ಮೃತ ಅಥವಾ ಗಾಯಗೊಂಡಿರುವ ವಲಸಿಗರ ಕುಟುಂಬಗಳಿಗೆ ಸುರಕ್ಷಿತ ಭವಿಷ್ಯವನ್ನು ಹೊಂದಲು ನಾನು ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇನೆ. ಅವರನ್ನು ಬೆಂಬಲಿಸುವುದು ನನ್ನ ವೈಯಕ್ತಿಕ ಜವಬ್ದಾರಿ ಎಂದು ನಾನು ಭಾವಿಸುತ್ತೇನೆ ಅಂತ ಸೋನು ಸೂದ್ ಹೇಳಿದ್ದರು.

  • ಫೇಸ್ ಶೀಲ್ಡ್ ತೆಗೆದು ಕೊರೊನಾ ರೋಗಿಯ ಜೀವ ಉಳಿಸಿದ ವೈದ್ಯ

    ಫೇಸ್ ಶೀಲ್ಡ್ ತೆಗೆದು ಕೊರೊನಾ ರೋಗಿಯ ಜೀವ ಉಳಿಸಿದ ವೈದ್ಯ

    – ಏಮ್ಸ್ ವೈದ್ಯ 14 ದಿನ ಕ್ವಾರಂಟೈನ್
    – ತಮ್ಮ ಜೀವವನ್ನ ಪಣಕ್ಕಿಟ್ಟು ರೋಗಿ ಪ್ರಾಣ ಉಳಿಸಿದ ಡಾಕ್ಟರ್

    ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ರೋಗಿಗಳ ಜೀವ ಉಳಿಸಲು ವೈದ್ಯರು ಹಗಲಿರುಳು ಎನ್ನದೇ ಕರ್ತವ್ಯ ನಿಷ್ಠ ಮೆರೆಯುತ್ತಿದ್ದಾರೆ. ಇದೀಗ ಏಮ್ಸ್ ವೈದ್ಯರೊಬ್ಬರು ತಮ್ಮ ರಕ್ಷಣೆಗೆ ಹಾಕಿಕೊಂಡಿದ್ದ ಫೇಸ್ ಶೀಲ್ಡ್ ತೆಗೆದು ಕೋವಿಡ್-19 ರೋಗಿಯ ಜೀವ ಉಳಿಸುವ ಮೂಲಕ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ಘಟನೆ ನಡೆದಿದೆ.

    ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವೈದ್ಯ ಝಹೀದ್ ಅಬ್ದುಲ್ ಮಜೀದ್ ತಮ್ಮ ಫೇಸ್ ಶೀಲ್ಡ್ ತೆಗೆದು ಕೊರೊನಾ ರೋಗಿಯ ಜೀವ ಉಳಿಸಿದ್ದಾರೆ. ಕೊರೊನಾ ಸೋಂಕು ದೃಢಪಟ್ಟಿದ್ದ ರೋಗಿಯನ್ನು ಏಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ರೋಗಿಯ ಸ್ಥಿತಿ ಗಂಭೀರವಾದ ಕಾರಣ ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲು ನಿಗದಿಪಡಿಸಿದ್ದ ಸೆಂಟರ್‌ಗೆ ಸ್ಥಳಾಂತರಿಸಬೇಕಿತ್ತು. ಹೀಗಾಗಿ ರಾತ್ರಿ ಡಾ.ಮಜೀದ್ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಲಾಗಿದೆ.

    ಮಾಹಿತಿ ತಿಳಿದು ತಕ್ಷಣ ಡಾ.ಮಜೀದ್ ತಮ್ಮ ರಂಜಾನ್ ಉಪವಾಸವನ್ನು ಬ್ರೇಕ್ ಮಾಡಿ ರೋಗಿಗೆ ಚಿಕಿತ್ಸೆ ನೀಡಲು ಮುಂದಾದರು. ಈ ವೇಳೆ ಡಾ. ಮಜೀದ್ ಅಂಬ್ಯುಲೆನ್ಸ್‌ನಲ್ಲಿ ರೋಗಿಯನ್ನು ಮಲಗಿಸಿ ಆಕ್ಸಿಜನ್ ಅವಳಡಿಸಬೇಕಿತ್ತು. ಆದರೆ ರಾತ್ರಿ ಕತ್ತಲಾಗಿದ್ದ ಕಾರಣ ಸರಿಯಾಗಿ ಕಾಣುತ್ತಿರಲಿಲ್ಲ. ಅಲ್ಲದೇ ಫೇಸ್ ಶೀಲ್ಡ್‌ನಿಂದ ಸರಿಯಾಗಿ ಕಾಣುತ್ತಿರಲಿಲ್ಲ. ತಡ ಮಾಡಿದರೆ ರೋಗಿಗೆ ಅಪಾಯವಾಗುವ ಸಾಧ್ಯತೆ ಇತ್ತು. ಹೀಗಾಗಿ ಡಾ.ಮಜೀದ್ ತಕ್ಷಣ ತಾವು ಧರಿಸಿದ್ದ ಫೇಸ್ ಶೀಲ್ಡ್ ಆಕ್ಸಿಜನ್ ಅಳವಡಿಸಿದ್ದಾರೆ.

    ರೋಗಿಯನ್ನು ಸುರಕ್ಷಿತವಾಗಿ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾನು ಧರಿಸಿದ್ದ ಫೇಸ್ ಶೀಲ್ಡ್ ಚಿಕಿತ್ಸೆ ನೀಡಲು ಸರಿಯಾಗಿ ಕಾಣಿಸುತ್ತಿರಲಿಲ್ಲ. ಇತ್ತ ರೋಗಿಯ ಸ್ಥಿತಿ ಗಂಭೀರವಾಗಿತ್ತು. ಸ್ವಲ್ಪ ತಡ ಮಾಡಿದ್ದರೂ ರೋಗಿ ಸಾಯುವ ಸಾಧ್ಯತೆ ಇತ್ತು. ಹೀಗಾಗಿ ರೋಗಿಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಫೇಸ್ ಶೀಲ್ಡ್ ತೆಗೆದು ಚಿಕಿತ್ಸೆ ನೀಡಿದೆ ಎಂದು ಡಾ.ಮಜೀದ್ ಹೇಳಿದರು.

    ಹೀಗಾಗಿ ಡಾ.ಮಜೀದ್ ಅವರಿಗೆ ಕೊರೊನಾ ಹಬ್ಬಿರುವ ಶಂಕೆ ಮೇರೆಗೆ ಅವರನ್ನು 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿದೆ ಎಂದು ಏಮ್ಸ್ ಆಸ್ಪತ್ರೆಯ ಕಾರ್ಯದರ್ಶಿ ತಿಳಿಸಿದ್ದಾರೆ. ರೋಗಿಯ ಜೀವವನ್ನು ಉಳಿಸಿದ್ದಕ್ಕೆ ಡಾ. ಮಜೀದ್ ಅವರ ಧೈರ್ಯವನ್ನು ಏಮ್ಸ್ ವೈದ್ಯರ ತಂಡವು ಶ್ಲಾಘಿಸಿದೆ.

    ನನ್ನ ಕೊರೊನಾ ಪರೀಕ್ಷಾ ವರದಿಗಾಗಿ ನಾನು ಕಾಯುತ್ತಿದ್ದೇನೆ. ವರದಿಯಲ್ಲಿ ನೆಗೆಟಿವ್ ಬಂದರೆ ನಾನು ಮತ್ತೆ ಕೆಲಸಕ್ಕೆ ಸೇರುತ್ತೇನೆ. ಇಲ್ಲದಿದ್ದರೆ ನಾನು 14 ದಿನಗಳ ಕಾಲ ಕ್ವಾಂಟೈನ್‍ನಲ್ಲಿ ಇರುತ್ತೇನೆ ಎಂದು ವೈದ್ಯರು ಹೇಳಿದರು.

  • ಕೊರೊನಾದಿಂದ ರಕ್ಷಣೆ – ಶಿಶುಗಳಿಗಾಗಿ ಸ್ಪೆಷಲ್ ಫೇಸ್ ಶೀಲ್ಡ್

    ಕೊರೊನಾದಿಂದ ರಕ್ಷಣೆ – ಶಿಶುಗಳಿಗಾಗಿ ಸ್ಪೆಷಲ್ ಫೇಸ್ ಶೀಲ್ಡ್

    ಬ್ಯಾಂಕಾಕ್: ಥೈಲ್ಯಾಂಡ್‍ನಲ್ಲಿ ಕೊರೊನಾ ವೈರಸ್‍ನಿಂದ ನವಜಾತ ಶಿಶುಗಳನ್ನು ರಕ್ಷಿಸಲು ಹೊಸ ಪ್ಲಾನ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಹುಟ್ಟಿದ ಶಿಶುಗಳಿಗೆ ಸ್ಪೆಷಲ್ ಫೇಸ್ ಶೀಲ್ಡ್ ಹಾಕುವ ಮೂಲಕ ಮಕ್ಕಳಿಗೆ ವೈರಸ್ ಹರಡುವುದನ್ನು ತಡೆಗಟ್ಟಲು ಆಸ್ಪತ್ರೆ ಸಿಬ್ಬಂದಿ ಮುಂದಾಗಿದ್ದಾರೆ.

    ಬ್ಯಾಂಕಾಕ್‍ನ ಪ್ರರಮ್ 9 ಆಸ್ಪತ್ರೆಯಲ್ಲಿ ಈ ಕ್ರಮವನ್ನು ಜಾರಿಗೆ ತರಲಾಗಿದೆ. ಹೀಗಾಗಿ ಆಸ್ಪತ್ರೆಯ ಹೆರಿಗೆ ವಾರ್ಡಿನಲ್ಲಿರುವ ಶಿಶುಗಳ ಮುಖಕ್ಕೆ ಶೀಲ್ಡ್ ಹಾಕಿ ಕೊರೊನಾ ಸೋಂಕು ತಗುಲದಂತೆ ನಿಗಾವಹಿಸಲಾಗಿದೆ.

    ಈವರೆಗೆ ಥೈಲ್ಯಾಂಡ್‍ನಲ್ಲಿ 2,473 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದೆ. ಅವರಲ್ಲಿ 33 ಮಂದಿ ಸಾವನ್ನಪ್ಪಿದ್ದು, 1,013 ಮಂದಿ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

    ಶುಕ್ರವಾರ ಒಂದೇ ದಿನ ಥೈಲ್ಯಾಂಡ್‍ನಲ್ಲಿ 50 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಈ 50 ಸೋಂಕಿತರಲ್ಲಿ 27 ಮಂದಿ ಹಳೆಯ ಸೋಂಕಿತ ರೋಗಿಗಳ ಸಂಪರ್ಕದಲ್ಲಿ ಇದ್ದವರಾಗಿದ್ದು, 8 ಮಂದಿಗೆ ಸೋಂಕು ಹೇಗೆ ತಗುಲಿತು ಎಂಬ ಮಾಹಿತಿ ಇರದ ಹಿನ್ನೆಲೆ ತನಿಖೆ ನಡೆಸಲಾಗುತ್ತಿದೆ.

    ವಿಶ್ವಾದ್ಯಂತ ಬರೋಬ್ಬರಿ 17,00,951 ಮಂದಿಗೆ ಕೊರೊನಾ ತಗುಲಿದ್ದು, ಈವರೆಗೆ 1,02,789 ಮಂದಿ ಸಾವನ್ನಪ್ಪಿದ್ದಾರೆ, ಅಲ್ಲದೆ 3,76,796 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.