Tag: ಫೇಕ್ ನ್ಯೂಸ್

  • ಕಾನೂನು ರಕ್ಷಣೆ ರದ್ದು – ಟ್ವಿಟ್ಟರ್ ವಿರುದ್ಧ ಬಿತ್ತು ಮೊದಲ ಕೇಸ್

    ಕಾನೂನು ರಕ್ಷಣೆ ರದ್ದು – ಟ್ವಿಟ್ಟರ್ ವಿರುದ್ಧ ಬಿತ್ತು ಮೊದಲ ಕೇಸ್

    ನವದೆಹಲಿ: ಕೇಂದ್ರದ ಹೊಸ ಐಟಿ ನಿಯಮಗಳು ಜಾರಿಗೆ ಬಂದ ಬಳಿಕ ಮೊದಲ ಬಾರಿಗೆ ಅಮೆರಿಕದ ಸಾಮಾಜಿಕ ಜಾಲತಾಣ ಕಂಪನಿ ಟ್ವಿಟ್ಟರ್ ವಿರುದ್ಧ ಕೇಸ್ ದಾಖಲಾಗಿದೆ.

    ಜೂನ್ 5ರಂದು ಗಾಜಿಯಾಬಾದ್‍ನಲ್ಲಿ ಮುಸ್ಲಿಂ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿತ್ತು. ಕೋಮು ಭಾವನೆ ಕೆರಳಿಸುವಂತೆ ಪ್ರಚೋದಿಸಿದ ಆರೋಪದ ಅಡಿಯಲ್ಲಿ ಉತ್ತರ ಪ್ರದೇಶ ಪೊಲೀಸರು ಟ್ವಿಟ್ಟರ್ ಸೇರಿದಂತೆ ಕೆಲ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಟ್ವಿಟ್ಟರ್ ಮೇಲೆ ಕೇಸ್ ಬಿದ್ದಿದ್ದು ಹೇಗೆ?
    ಭಾರತದಲ್ಲಿ ಮೇ 25ರಿಂದ ಹೊಸ ಡಿಜಿಟಲ್ ನಿಮಯಗಳು ಜಾರಿಗೆ ಬಂದಿದೆ. ಈ ನಿಯಮಗಳ ಸೂಚನೆಯನ್ನು ಟ್ವಿಟ್ಟರ್ ಪಾಲಿಸಿರಲಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರ ಟ್ವಿಟ್ಟರ್ ಗೆ  ನೋಟಿಸ್ ಜಾರಿ ಮಾಡಿತ್ತು. ನೋಟಿಸ್ ನೀಡಿದ ಬಳಿಕವೂ ನಿಯಮ ಜಾರಿ ಮಾಡದ ಹಿನ್ನೆಲೆಯಲ್ಲಿ ಈಗ ಕೇಸ್ ದಾಖಲಾಗಿದೆ.

    ಟ್ವಿಟ್ಟರ್ ನಿಯಮಗಳನ್ನು ಪಾಲನೇ ಮಾಡದ ಕಾರಣ ಈ ಮೊದಲು ಇದ್ದ ಕಾನೂನು ರಕ್ಷಣೆ ರದ್ದುಗೊಂಡಿದೆ. ಹೀಗಾಗಿ ಯಾವುದೇ ಪ್ರಕಾಶಕರು ಮೇಲೆ ಹೇಗೆ ಭಾರತದ ಕಾನೂನುಗಳ ಅಡಿ ಕ್ರಮಗಳನ್ನು ನಡೆಸಲಾಗುತ್ತದೋ ಅದೇ ರೀತಿಯ ಕ್ರಮಕ್ಕೆ ಟ್ವಿಟ್ಟರ್ ಸಂಸ್ಥೆ ಕೂಡ ಹೊರತಲ್ಲ ಎಂದು ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಗಳು ತಿಳಿಸಿವೆ. ಇದನ್ನೂ ಓದಿ :ಗೂಗಲ್‍ಗೆ 1,948 ಕೋಟಿ ರೂ. ದಂಡ ಹಾಕಿದ ಫ್ರಾನ್ಸ್

    ಭಾರತದಲ್ಲಿ ದೂರು ಬಂದಾಗ ಸಂವಹನ ನಡೆಸಲು ಅಧಿಕಾರಿಯನ್ನು ನೇಮಿಸಬೇಕು ಸರ್ಕಾರ ಸೂಚಿಸಿತ್ತು. ಫೇಸ್‍ಬುಕ್, ಗೂಗಲ್ ಕಂಪನಿಗಳು ಸರ್ಕಾರದ ನಿರ್ಧಾರವನ್ನು ಒಪ್ಪಿ ಪಾಲಿಸುವುದಾಗಿ ಹೇಳಿದ್ದರೆ ಟ್ವಿಟ್ಟರ್ ನೇಮಕ ಮಾಡಿರಲಿಲ್ಲ. ಹೀಗಾಗಿ ಮೊದಲು ಇದ್ದ ಕಾನೂನು ರಕ್ಷಣೆ ರದ್ದುಗೊಂಡಿದೆ.

    ಏನಿದು ಪ್ರಕರಣ?
    ವೃದ್ಧ ಮುಸ್ಲಿಂ ವ್ಯಕ್ತಿ ಅಬ್ದುಲ್ ಸಮದ್ ಎಂಬುವವರ ಮೇಲೆ ಜೂನ್ 5ರಂದು ಗಾಜಿಯಾಬಾದ್‍ನಲ್ಲಿ ಆರು ಮಂದಿಯಿಂದ ಹಲ್ಲೆ ನಡೆದಿದೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಸಮದ್ ಅವರ ಗಡ್ಡವನ್ನು ಕತ್ತರಿಸುವ, ‘ವಂದೇ ಮಾತರಂ’ ಮತ್ತು ‘ಜೈ ಶ್ರೀರಾಮ್’ ಎಂದು ಪಠಿಸುವಂತೆ ಬಲವಂತ ಪಡಿಸುವ ದೃಶ್ಯ ವಿಡಿಯೋದಲ್ಲಿತ್ತು. ಈ ವಿಡಿಯೋ ಕೋಮು ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿದೆ ಎಂದು ಬರೆದು ಜನ ಟ್ವೀಟ್ ಮಾಡಿದ್ದರು.

    ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ತನಿಖೆಗೆ ಇಳಿದಾಗ ಸತ್ಯ ಪ್ರಕಟವಾಗಿತ್ತು. ಈ ಗಲಾಟೆ ಕೋಮು ವಿಚಾರ ನಡೆದ ಗಲಾಟೆಯಲ್ಲ. ಆಮ್ಲೇಟ್ ವಿಚಾರಕ್ಕೆ ಈ ಗಲಾಟೆ ನಡೆದಿತ್ತು. ಅಬ್ದುಲ್ ಸಮದ್ ಮೇಲೆ ಹಲ್ಲೆ ನಡೆಸಿದವರಲ್ಲಿ ಎರಡೂ ಸಮುದಾಯದವರಿದ್ದರು. ಇದರಲ್ಲಿ ಯಾವ ಕೋಮು ಆಯಾಮ ಇಲ್ಲ ಎಂದು ಪೊಲೀಸರು ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು.

    ಯಾರ ಮೇಲೆ ಎಫ್‍ಐಆರ್?
    ಗಾಜಿಯಾಬಾದ್‍ನ ಲೋನಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಪತ್ರಕರ್ತಕರಾದ, ಸಬಾ ನಕ್ವಿ, ರಾಣಾ ಅಯ್ಯುಬ್, ಫ್ಯಾಕ್ಟ್ ಚೆಕ್ ವೆಬ್‍ಸೈಟ್ ಆಲ್ಟ್ ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಜೊತೆಗೆ ಜತೆಗೆ ಆನ್‍ಲೈನ್ ಮಾಧ್ಯಮ ‘ದಿ ವೈರ್’, ಕಾಂಗ್ರೆಸ್ ನಾಯಕರಾದ ಸಲ್ಮಾನ್ ನಿಜಾಮಿ, ಶಮಾ ಮೊಹಮೆದ್ ಮತ್ತು ಮಸ್ಕೂರ್ ಉಸ್ಮಾನಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಉದ್ದೇಶಪೂರ್ವಕವಾಗಿ ಘಟನೆಗೆ ಕೋಮುಬಣ್ಣ ಹಚ್ಚಿದ ಆರೋಪದ ಅಡಿಯಲ್ಲಿ ಕೇಸ್ ದಾಖಲಾಗಿದೆ. ಕೋಮು ಭಾವನೆಯನ್ನು ಕೆರಳಿಸುವ ಟ್ವೀಟ್ ಆಗಿದ್ದರೂ ಅದನ್ನ ಅಳಿಸದ ಕಾರಣ ಟ್ವಿಟ್ಟರ್ ಕಂಪನಿಯನ್ನು ಆರೋಪಿಯನ್ನಾಗಿ ಮಾಡಲಾಗಿದೆ.

    ಅಧಿಕಾರಿ ನೇಮಕ:
    ಭಾರತದಲ್ಲಿ ಮಧ್ಯಂತರ ಮುಖ್ಯ ಅಹವಾಲು ಅಧಿಕಾರಿಯನ್ನು ನೇಮಕ ಮಾಡಿರುವುದಾಗಿ ಟ್ವಿಟ್ಟರ್ ಮಂಗಳವಾರ ಸಂಜೆ ತಿಳಿಸಿತ್ತು. ಕೂ, ಗೂಗಲ್, ಫೇಸ್‍ಬುಕ್ ಕಂಪನಿಗಳು ಭಾರತ ಕಾನೂನುಗಳನ್ನು ಪಾಲಿಸುವುದಾಗಿ ಹೇಳಿದೆ. ಆದರೆ ಭಾರತ ಸರ್ಕಾರ ನೋಟಿಸ್ ಜಾರಿ ಮಾಡಿದ್ದರೂ ಟ್ವಿಟ್ಟರ್ ನಿಯಮಗಳನ್ನು ಪಾಲನೆ ಮಾಡಿರಲಿಲ್ಲ.

  • 3 ಕೆಂಪು ಟಿಕ್ ಮಾರ್ಕ್, ಕೋರ್ಟ್ ಸಮನ್ಸ್ – ದಯವಿಟ್ಟು ಈ ಮೆಸೇಜ್ ಶೇರ್ ಮಾಡಬೇಡಿ

    3 ಕೆಂಪು ಟಿಕ್ ಮಾರ್ಕ್, ಕೋರ್ಟ್ ಸಮನ್ಸ್ – ದಯವಿಟ್ಟು ಈ ಮೆಸೇಜ್ ಶೇರ್ ಮಾಡಬೇಡಿ

    ಬೆಂಗಳೂರು: “ವಾಟ್ಸಪ್, ಫೇಸ್‍ಬುಕ್, ಟ್ವಿಟ್ಟರ್‌ನಲ್ಲಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೋಸ್ಟ್ ಮಾಡಿದರೆ ನಿಮ್ಮ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. 3 ಕೆಂಪು ಟಿಕ್ ಮಾರ್ಕ್ ಇದ್ದಲ್ಲಿ ಸರ್ಕಾರ ನಿಮ್ಮ ವಿರುದ್ಧ ಕ್ರಮ ಕೈಗೊಂಡಿದ್ದು, ಕೋರ್ಟ್ ನಿಮಗೆ ಶೀಘ್ರವೇ ಸಮನ್ಸ್ ಜಾರಿ ಮಾಡಲಿದೆ” ಎಂಬ ಸಂದೇಶ ಇರುವ ಮೆಸೇಜ್‍ಗಳನ್ನು ಶೇರ್ ಮಾಡಬೇಡಿ.

    ಸಾಮಾಜಿಕ ಜಾಲತಾಣ ಮತ್ತು ಮೆಸೇಜಿಂಗ್ ಅಪ್ಲಿಕೇಶನ್ ಗಳಲ್ಲಿ ಫೇಕ್ ನ್ಯೂಸ್, ಮಕ್ಕಳ ಅಶ್ಲೀಲ ವಿಡಿಯೋ/ ಫೋಟೋ ಇತ್ಯಾದಿಗಳಿಗೆ ನಿಯಂತ್ರಣ ಹೇರಲು ಮಾಹಿತಿ ತಂತ್ರಜ್ಞಾನ ಇಲಾಖೆ ಕೆಲ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಐಟಿ ದಿಗ್ಗಜ ಕಂಪನಿಗಳಿಗೆ ನೋಟಿಸ್ ನೀಡಿದ ವಿಚಾರ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಈ ಫೇಕ್ ಮೆಸೇಜ್‍ಗಳು ಹರಿದಾಡುತ್ತಿದೆ. ಈ ಸಂಬಂಧ ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್ ಮಾಡಿ ಇದು ಸುಳ್ಳು ಸುದ್ದಿ ಎಂದು ತಿಳಿಸಿದೆ.

    ಫೇಕ್ ಮೆಸೇಜ್‍ನಲ್ಲಿ ಏನಿದೆ?
    ಎಲ್ಲ ಕರೆಗಳು ರೆಕಾರ್ಡ್ ಆಗುತ್ತದೆ. ವಾಟ್ಸಪ್, ಫೇಸ್‍ಬುಕ್, ಟ್ವಿಟ್ಟರ್ ಅನ್ನು ಸರ್ಕಾರ ನಿಯಂತ್ರಣದಲ್ಲಿದೆ. ಸರ್ಕಾರ, ಪ್ರಧಾನಿ ಮೋದಿ ವಿರುದ್ಧ ಪೋಸ್ಟ್ ಮಾಡಬೇಡಿ. ಒಂದು ವೇಳೆ ಪೋಸ್ಟ್ ಮಾಡಿದರೆ ಪೊಲೀಸರು ನೋಟಿಸ್ ನೀಡಿ ನಿಮ್ಮ ಮೇಲೆ ಸೈಬರ್ ಕ್ರೈಂ ಅಡಿ ಕೇಸ್ ದಾಖಲಿಸುತ್ತಾರೆ. ಇದು ಬಹಳ ಅಪಾಯಕಾರಿ ಎಂದು ಬರೆಯಲಾಗಿದೆ. ಇದನ್ನೂ ಓದಿ : ಕೋವಿಡ್ 19 ವೈರಸ್ ಮಾನವ ಸೃಷ್ಟಿ ಪೋಸ್ಟ್ ಡಿಲೀಟ್ ಮಾಡಲ್ಲ – ಫೇಸ್‍ಬುಕ್

    ಸತ್ಯ ಏನು?
    ಸಾಮಾಜಿಕ ಜಾಲತಾಣದಲ್ಲಿ ಎಲ್ಲ ಪೋಸ್ಟ್ ಗಳನ್ನು ಸರ್ಕಾರ ಗಮನಿಸುವುದಿಲ್ಲ. ವಾಟ್ಸಪ್‍ನಲ್ಲಿ ಇಬ್ಬರ ನಡುವಿನ ಸಂದೇಶಗಳು ಇಬ್ಬರಿಗೆ ಮಾತ್ರ ತಿಳಿದಿರುತ್ತದೆ. ಒಂದು ವೇಳೆ ಪೋಸ್ಟ್ ನಿಂದ ಸಾಮಾಜಕ್ಕೆ ಹಾನಿಯಾಗುವ ಅಂಶ, ಗಲಭೆಗೆ ಪ್ರಚೋದನೆ, ಸುಳ್ಳು ಮಾಹಿತಿಗಳು ಇದ್ದು ಸರ್ಕಾರದ ಗಮನಕ್ಕೆ ಬಂದಲ್ಲಿ ಆಗ ಆ ಪೋಸ್ಟ್ ಮೂಲ ಪತ್ತೆ ಹಚ್ಚಲು ಮುಂದಾಗುತ್ತದೆ. ಈ ಸಂಬಂಧ ಕಂಪನಿಗಳಿಗೆ ಪತ್ರ ಬರೆದು ಈ ಪೋಸ್ಟ್  ಮೊದಲು ಪ್ರಕಟಿಸಿದವರು ಯಾರು ಎಂಬುದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುತ್ತದೆ.

    ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಪೋಸ್ಟ್ ಗಳು ಸುಳ್ಳು, ಗಲಭೆಗೆ ಪ್ರಚೋದನೆ ನೀಡುತ್ತಿದೆ ಎಂದು ಭಾರೀ ಸಂಖ್ಯೆಯಲ್ಲಿ ಜನರೇ ರಿಪೋರ್ಟ್ ಮಾಡಿದ್ದಲ್ಲಿ ಆಗ ಕಂಪನಿಗಳು ಸ್ವಯಂ ಪರಿಶೀಲಿಸಿ ಆ ಪೋಸ್ಟ್ ಗಳನ್ನು ಡಿಲೀಟ್ ಮಾಡುತ್ತವೆ.

  • ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ಬೀದಿ ವ್ಯಾಪಾರಿಗಳ ಮೇಲೆ ಜೆಸಿಬಿ ಘರ್ಜನೆ – ಅಸಲಿ ಸುದ್ದಿ ಏನು?

    ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ಬೀದಿ ವ್ಯಾಪಾರಿಗಳ ಮೇಲೆ ಜೆಸಿಬಿ ಘರ್ಜನೆ – ಅಸಲಿ ಸುದ್ದಿ ಏನು?

    ಬೆಂಗಳೂರು: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಗುಜರಾತಿನ ಅಹಮದಾಬಾದಿನಲ್ಲಿರುವ ಬೀದಿ ಬದಿಯ ವ್ಯಾಪಾರಿಗಳ ತಳ್ಳು ಗಾಡಿಯನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಗುತ್ತಿದೆ ಎನ್ನುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಫೇಸ್‍ಬುಕ್ ಮತ್ತು ವಾಟ್ಸಪ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆದರೆ ಇದೊಂದು ಸುಳ್ಳು ವಿಡಿಯೋ ಆಗಿದ್ದು ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಮಹಾನಗರ ಪಾಲಿಕೆ ರಸ್ತೆ ತೆರವು ಕಾರ್ಯಾಚರಣೆಯ ದೃಶ್ಯಕ್ಕೆ ಸುಳ್ಳು ಮಾಹಿತಿ ನೀಡಿ ವಿಡಿಯೋ ಹರಿ ಬಿಡಲಾಗುತ್ತಿದೆ.

    ಈ ವಿಡಿಯೋವನ್ನು ಒಡಿಶಾದಲ್ಲಿರುವ ವಾಹಿನಿಯೊಂದು 2020ರ ಜನವರಿ 24 ರಂದು ಅಪ್ಲೋಡ್ ಮಾಡಿದೆ. ವಿಶೇಷ ಏನೆಂದರೆ ಉತ್ತರ ಪ್ರದೇಶದಲ್ಲಿ ನಡೆದ ಸಿಎಎ ವಿರೋಧಿ ಹೋರಾಟದ ಸಂದರ್ಭದಲ್ಲೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

    ಈಗ ವಿಡಿಯೋ ಯೂಟ್ಯೂಬ್ ನಲ್ಲಿ ರೋಸ್ ನ್ಯೂಸ್ ಟಿವಿ ಹೆಸರಿನಲ್ಲಿರುವ ಯೂಟ್ಯೂಬ್ ಖಾತೆಯಲ್ಲಿ ಅಪ್ಲೋಡ್ ಆಗಿದೆ. ಈ ವಿಡಿಯೋಗೆ ಟ್ರಂಪ್ ಅಹಮದಾಬಾದಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಬೀದಿ ವ್ಯಾಪಾರಿಗಳನ್ನು ಬಲವಂತವಾಗಿ ತೆರವುಗೊಳಿಸಲಾಗುತ್ತಿದೆ ಎಂದು ಶೀರ್ಷಿಕೆ ನೀಡಲಾಗಿದೆ.

    ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಕೈಗೊಳ್ಳುತ್ತಾರೆ ಎಂಬ ಸುದ್ದಿ ಬರುತ್ತಿದ್ದರೂ ಫೆ.11ರಂದು ಶ್ವೇತಭವನ ಟ್ವೀಟ್ ಮಾಡುವ ಮೂಲಕ ಅಧಿಕೃತವಾಗಿ ಖಚಿತಗೊಂಡಿತ್ತು. ಶ್ವೇತಭವನ ಪ್ರಕಟ ಮಾಡುವ ಮೊದಲೇ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

  • ಗಮನಿಸಿ, ಬೈಕ್ ಸವಾರರು ನೀರಿನಲ್ಲಿ ಕೊಚ್ಚಿ ಹೋದ ವಿಡಿಯೋ ಕೊಡಗಿನದ್ದಲ್ಲ

    ಗಮನಿಸಿ, ಬೈಕ್ ಸವಾರರು ನೀರಿನಲ್ಲಿ ಕೊಚ್ಚಿ ಹೋದ ವಿಡಿಯೋ ಕೊಡಗಿನದ್ದಲ್ಲ

    ಬೆಂಗಳೂರು: “ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊರಂಗಾಲದಲ್ಲಿ ಬೈಕ್ ಸವಾರರಿಬ್ಬರು ಮಣ್ಣಿನ ಸೇತುವೆಯೊಂದಿಗೆ ಕೊಚ್ಚಿ ಹೋಗಿದ್ದಾರೆ. ಸವಾರರ ಮಾಹಿತಿ ಲಭ್ಯವಾಗಿಲ್ಲ” ಎಂಬ ಸಾಲುಗಳೊಂದಿಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣ, ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಆದರೆ ಈ ವಿಡಿಯೋ ಮಡಿಕೇರಿಗೆ ಸಂಬಂಧಿಸಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಈ ವಿಡಿಯೋ ಶೇರ್ ಮಾಡುವುದನ್ನು ನಿಲ್ಲಿಸಿ.

    ಸಾಮಾಜಿಕ ಜಾಲತಾಣ ಮಾತ್ರವಲ್ಲದೇ ಕೆಲ ಸುದ್ದಿ ಮಾಧ್ಯಮಗಳಲ್ಲಿ ಕೂಡ ಈ ವಿಡಿಯೋವನ್ನು ಪ್ರಸಾರ ಮಾಡಿದ್ದು ಕೊಡಗು ಜಿಲ್ಲೆಯ ಕೊರಂಗಾಲದಲ್ಲಿ ಘಟನೆ ನಡೆದಿದೆ ಎಂದು ತಿಳಿಸಲಾಗಿದೆ.

    ವಿಡಿಯೋ ಎಲ್ಲಿಯದ್ದು?
    ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋ ಕಾಂಬೋಡಿಯಾಗೆ ಸೇರಿದ್ದು, ದುರ್ಘಟನೆಯೊಂದರಲ್ಲಿ ಇಬ್ಬರು ಬೈಕ್ ಸವಾರರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ಬೈಕ್ ಸವಾರರು ಕಾಂಬೋಡಿಯಾದ ಸೈನ್ಯಕ್ಕೆ ಸೇರಿದವರು.

    ಸೈನಿಕರಾದ ಕಿನಾಕ್ ಡಾಲಿ ಮತ್ತು ಸಿಕ್ ವಾಂಡಿ ಎಂಬವರು ನದಿಗೆ ಅಡ್ಡಲಾಗಿ ಮಣ್ಣು ಮತ್ತು ಮರದಿಂದ ನಿರ್ಮಿಸಲಾಗಿದ್ದ ಸೇತುವೆಯನ್ನು ಬೈಕಿನಲ್ಲಿ ದಾಟುತ್ತಿದ್ದರು. ಈ ಸಂದರ್ಭದಲ್ಲಿ ಮಣ್ಣಿನ ಸೇತುವೆ ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗಿತ್ತು. ಇಬ್ಬರು ಸೈನಿಕರು ಘಟನೆಯಲ್ಲಿ ನಾಪತ್ತೆಯಾಗಿದ್ದರು. ಈ ವಿಡಿಯೋವನ್ನು 2019 ಜುಲೈ 25 ರಂದು ಯೂಟ್ಯೂಬ್ ನಲ್ಲಿ ಅಪ್‍ಲೋಡ್ ಮಾಡಲಾಗಿದೆ. ಜುಲೈ 24 ರಂದು ಘಟನೆ ನಡೆದಿರುವುದಾಗಿ ಮಾಹಿತಿ ನೀಡಲಾಗಿದೆ.

    ಕರ್ನಾಟಕದ ಕರಾವಳಿ ಸೇರಿದಂತೆ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಹಾಗೂ ಗುಡ್ಡ ಕುಸಿತ ಘಟನೆಗಳು ನಡೆದಿದೆ. ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ಕರೆತರುವ ಕಾರ್ಯವನ್ನು ರಾಜ್ಯ ಆಯಾ ಜಿಲ್ಲಾಡಳಿತಗಳು ಎನ್‍ಡಿಆರ್ ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ನಡೆಸುತ್ತಿವೆ.

    https://www.youtube.com/watch?v=S9z1OcVXNdg&feature=youtu.be

  • ಗಮನಿಸಿ, ಭಾರೀ ಮೊಸಳೆಗಳಿರುವ ವಿಡಿಯೋ ಗುಜರಾತಿನ ನದಿಯದ್ದಲ್ಲ

    ಗಮನಿಸಿ, ಭಾರೀ ಮೊಸಳೆಗಳಿರುವ ವಿಡಿಯೋ ಗುಜರಾತಿನ ನದಿಯದ್ದಲ್ಲ

    ಬೆಂಗಳೂರು: “ಭಾರತದ ಅತ್ಯಂತ ಅಪಾಯಕಾರಿ ನದಿ ವಿಶ್ವಾಮಿತ್ರಿ. ಈ ನದಿಯಲ್ಲಿರುವ ಮೊಸಳೆಗಳು ಹೇಗಿವೆ ನೋಡಿ” ಎಂದು ಸಾಲುಗಳೊಂದಿಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣ, ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಆದರೆ ವಿಡಿಯೋ ಮತ್ತು ಅದರಲ್ಲಿ ಸಂದೇಶಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಈ ವಿಡಿಯೋ ಶೇರ್ ಮಾಡುವುದನ್ನು ನಿಲ್ಲಿಸಿ.

    ಕೆಲ ದಿನಗಳಿಂದ ನದಿಯಲ್ಲಿ ಹರಿದಾಡುತ್ತಿರುವ ಮೊಸಳೆಗಳಿರುವ ವಿಡಿಯೋ ವೈರಲ್ ಆಗುತ್ತಿದೆ. ಹೆಲಿಕಾಪ್ಟರ್ ನಿಂದ ಈ ವಿಡಿಯೋ ತೆಗೆಯಲಾಗಿದೆ. ಈಗ ಗುಜರಾತಿನಲ್ಲಿ ಭಾರೀ ಮಳೆಯಾಗುತ್ತಿರುವ ಸಂದರ್ಭದಲ್ಲೇ ಈ ವಿಡಿಯೋ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ.

    ವಿಡಿಯೋ ಎಲ್ಲಿಯದ್ದು?
    ಅಮೆರಿಕದ ಫ್ಲೋರಿಡಾದಲ್ಲಿರುವ ಎವರ್ ಗ್ಲೇಡ್ಸ್ ಮೊಸಳೆ ಸೇರಿದಂತೆ ಅಳಿವಿನಂಚಿನಲ್ಲಿರುವ ಹಲವಾರು ಸಸ್ತನಿಗಳ ಅವಾಸಸ್ಥಾನವಾಗಿದ್ದು ಪ್ರಸಿದ್ಧವಾಗಿದೆ. ಈ ಪ್ರದೇಶದಲ್ಲಿರುವ ಮೊಸಳೆಗಳಿರುವ ವಿಡಿಯೋವನ್ನು ಹೆಲಿಕಾಪ್ಟರ್ ನಲ್ಲಿ ಶೂಟ್ ಮಾಡಲಾಗಿತ್ತು. ಈ ವಿಡಿಯೋವನ್ನು ಆರ್ ಓಎಫ್‍ಎಫ್‍ಎಸ್ ಒಶಿಯನ್ ಫಿಶಿಂಗ್ ಫಾರ್‍ಕಾಸ್ಟಿಂಗ್ ಸರ್ವಿಸ್ ಹೆಸರಿನ ಯೂ ಟ್ಯೂಬ್ ಖಾತೆ 2018ರ ಮೇ 23 ರಂದು ಅಪ್ಲೋಡ್ ಮಾಡಿದೆ. ಈ ವಿಚಾರವನ್ನು ತಿಳಿಯದ ಜನ ಸಾಮಾಜಿಕ ಜಾಲತಾಣದಲ್ಲಿ ಗುಜರಾತಿನ ನದಿಯಲ್ಲಿ ಕಂಡು ಬಂದ ದೃಶ್ಯ ಎಂದು ಬಿಂಬಿಸುತ್ತಿದ್ದಾರೆ.

    ಗುಜರಾತ್ ಸೇರಿದಂತೆ ಮಹಾರಾಷ್ಟ್ರದಲ್ಲಿ ಈಗ ಭಾರೀ ಮಳೆಯಾಗುತ್ತಿದೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚರಂಡಿಯಲ್ಲಿ 8 ಅಡಿ ಉದ್ದದ ಮೊಸಳೆಯೊಂದು ಕಳೆದ ವಾರ ಪತ್ತೆಯಾಗಿತ್ತು.

    ರತ್ನಗಿರಿಯ ಚಿಪ್ಲುನ್‍ನ ಪ್ರವಾಸಿ ರೆಸಾರ್ಟಿನ ಚರಂಡಿಯಲ್ಲಿ 8 ಅಡಿ ಮೊಸಳೆಯನ್ನು ಕಂಡು ಜನರು ದಂಗಾಗಿ ಹೋಗಿದ್ದರು. ಚರಂಡಿಯಲ್ಲಿ ಸಿಲುಕಿದ್ದ ಮೊಸಳೆಯ ವೈರಲ್ ಆಗುತ್ತಿದೆ. ಈ ಘಟನೆ ಚಿಪ್ಲುನ್‍ನ ದಾದರ್ ನಲ್ಲಿ ನಡೆದಿದ್ದು, ಜನರು ಮೊದಲು ಇದು ಮುಂಬೈನ ಸಬ್ ಅರ್ಬನ್ ದೃಶ್ಯ ಎಂದು ಅನುಮಾನ ವ್ಯಕ್ತಪಡಿಸಿದ್ದರು.

    ರತ್ನಗಿರಿಯಲ್ಲಿ ಜೋರಾಗಿ ಮಳೆ ಆಗಿತ್ತು. ಮಳೆಯಿಂದಾಗಿ ವಶಿಷ್ಠಿ ನದಿಯಿಂದ ಇಲ್ಲಿಗೆ ಬಂದಿರಬಹುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

  • ಫೇಕ್ ನ್ಯೂಸ್ ಹರಡಬೇಡಿ – ಸುಳ್ಳು ಸುದ್ದಿ ಪತ್ತೆ ಹಚ್ಚುವ ಸುಲಭ ವಿಧಾನ ತಿಳಿದುಕೊಳ್ಳಿ

    ಫೇಕ್ ನ್ಯೂಸ್ ಹರಡಬೇಡಿ – ಸುಳ್ಳು ಸುದ್ದಿ ಪತ್ತೆ ಹಚ್ಚುವ ಸುಲಭ ವಿಧಾನ ತಿಳಿದುಕೊಳ್ಳಿ

    ಬೆಂಗಳೂರು: ಸಾಮಾಜಿಕ ಜಾಲತಾಣ, ಮೆಸೆಂಜಿಂಗ್ ಅಪ್ಲಿಕೇಶನ್‍ಗಳಿಂದಾಗಿ ಇಂದು ಬಹಳ ವೇಗವಾಗಿ ಸುದ್ದಿ ಸಿಗುತ್ತಿದೆ. ಎಷ್ಟು ವೇಗ ಅಂದರೆ ಆ ಸುದ್ದಿ ವಾಹಿನಿ/ ಪತ್ರಿಕೆಗಳಲ್ಲಿ ಬರುವ ಮೊದಲೇ ಜನರಿಗೆ ತಿಳಿದಿರುತ್ತದೆ.

    ಜನರಿಗೆ ವೇಗವಾಗಿ ಸುದ್ದಿಗಳು ತಲುಪುತ್ತಿರುವುದರಿಂದ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಾರೆ. ಈ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಸುದ್ದಿಯ ರೂಪದಲ್ಲಿ ಇರುವ ಕಾರಣ ಇದು ನಿಜವಾದ ಸುದ್ದಿ ಎಂದು ಹಲವು ಜನರು ನಂಬಿ ಶೇರ್ ಮಾಡುತ್ತಾರೆ.

    ನಾವು ಶೇರ್ ಮಾಡಿರುವ ಸುದ್ದಿ ಸುಳ್ಳು ಎಂದು ಬಳಕೆದಾರರಿಗೆ ಗೊತ್ತಾಗುವಷ್ಟರಲ್ಲಿ ಹಲವು ಮಂದಿಗೆ ಆ ಸುದ್ದಿ ತಲುಪಿ ಆಗಿರುತ್ತದೆ. ಬರೆಯುವ ಮುನ್ನ ಯೋಚಿಸಿ ಎನ್ನುವಂತೆ ಈಗ ಶೇರ್ ಮಾಡುವ ಮುನ್ನ ಹಲವು ಬಾರಿ ಯೋಚಿಸಬೇಕಾಗುತ್ತದೆ. ಸುಳ್ಳು ಸುದ್ದಿಯನ್ನು ಶೇರ್ ಮಾಡಿದರೆ ವ್ಯಕ್ತಿಗಳು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ನಂಬಿಕೆಯನ್ನು ಉಳಿಸಬೇಕಾದರೆ ನೀವು ಹಲವು ಬಾರಿ ಆ ಪೋಸ್ಟ್ ಅನ್ನು ಚೆಕ್ ಮಾಡಬೇಕಾಗುತ್ತದೆ. ಆ ಪೋಸ್ಟ್ ನಲ್ಲಿರುವ ವಿಚಾರ ಸತ್ಯವೇ? ಸುಳ್ಳೋ ಎನ್ನುವುದಕ್ಕೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಇಲ್ಲಿ ಕೆಲ ಮಾಹಿತಿಗಳನ್ನು ನೀಡಲಾಗಿದ್ದು, ಈ ಮೂಲಕ ನೀವು ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಬಹುದು.

    1. ಹೆಡ್‍ಲೈನ್ ಗಮನಿಸಿ:
    ಸಾಮಾನ್ಯವಾಗಿ ಆಶ್ಚರ್ಯ ಸೂಚಕ ಚಿಹ್ನೆ ಮತ್ತು ಕ್ಯಾಚಿ ಹೆಡ್‍ಲೈನ್‍ಗಳು ಸುಳ್ಳು ಸುದ್ದಿಯಲ್ಲಿರುತ್ತದೆ. ಹೆಡ್‍ಲೈನ್‍ನಲ್ಲಿ ಶಾಕಿಂಗ್ ವಿಚಾರಗಳಿದ್ದರೆ ಆ ಸುದ್ದಿ ವಿಶ್ವಾಸಾರ್ಹತೆಯನ್ನು ನಂಬಲು ಬರುವುದಿಲ್ಲ.

    2. ಮೂಲಗಳನ್ನು ಪರಿಶೀಲಿಸಿ:
    ಮೂಲ ಸುದ್ದಿಯನ್ನು ಸ್ವಲ್ಪ ಬದಲಾಯಿಸಿ ಸುಳ್ಳು ಸುದ್ದಿ ಪ್ರಕಟವಾಗಿರುತ್ತದೆ. ಸಂದೇಹ ಬಂದಾಗ ಮೂಲ ಸುದ್ದಿ ಪ್ರಕಟವಾದ ತಾಣಕ್ಕೆ ಹೋಗಿ ಪರಿಶೀಲಿಸಿಕೊಳ್ಳಿ.

    3. ತನಿಖೆ ಮಾಡಿ:
    ಸುದ್ದಿ ಬಂದ ಕೂಡಲೇ ನಂಬಲು ಹೋಗಬೇಡಿ. ಸುದ್ದಿ ಪ್ರಕಟವಾದ ಮಾಧ್ಯಮವನ್ನು ಯಾವುದು ಎನ್ನುವುದನ್ನು ಗಮನಿಸಿ. ನಿಮಗೆ ತಿಳಿಯದೇ ಇರುವ ಯಾವುದೋ ತಾಣದಿಂದ ಪ್ರಕಟವಾಗಿದ್ದರೆ ಆ ವೆಬ್‍ಸೈಟ್ ‘About’ ವಿಭಾಗಕ್ಕೆ ಹೋಗಿ ತಾಣದ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ.

    4. ಸುದ್ದಿ ವಿನ್ಯಾಸ ಗಮನಿಸಿ:
    ಮಾಧ್ಯಮಗಳಲ್ಲಿ ಪ್ರಕಟವಾಗುವ ಯಾವುದೇ ಸುದ್ದಿಗೆ ಫಾರ್ಮೆಟ್ ಅಂತ ಇರುತ್ತದೆ. ಆದರೆ ಈ ಸುಳ್ಳು ಸುದ್ದಿಗಳಿಗೆ ಯಾವುದೇ ಫಾರ್ಮೆಟ್ ಶೀಟ್ ಇರುವುದಿಲ್ಲ. ಮಾಹಿತಿಗಳು ಅಸ್ಪಷ್ಟವಾಗಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಅಕ್ಷರಗಳು ತಪ್ಪಾಗಿ ಟೈಪ್ ಆಗಿರುತ್ತದೆ.

    5. ಫೋಟೋ ಗಮನಿಸಿ:
    ಸುಳ್ಳು ಸುದ್ದಿಗಳಲ್ಲಿ ಸಾಧಾರಣವಾಗಿ ಫೋಟೋ ಮತ್ತು ವಿಡಿಯೋಗಳನ್ನು ಎಡಿಟ್ ಮಾಡಲಾಗಿರುತ್ತದೆ. ಕೆಲವೊಮ್ಮೆ ಫೋಟೋಗಳು ನೈಜವಾಗಿರುತ್ತದೆ. ಆದರೆ ಸುದ್ದಿ ತಪ್ಪಾಗಿರುತ್ತದೆ. ಹೀಗಾಗಿ ಸುದ್ದಿ ಒದಿದ ಕೂಡಲೇ ತೀರ್ಮಾನಕ್ಕೆ ಬರಬೇಡಿ. ಈ ಫೋಟೋವನ್ನು ಸರ್ಚ್ ಮಾಡಿ ಆ ಫೋಟೋದ ಮೂಲವನ್ನು ಪರಿಶೀಲಿಸಿ.

    6. ದಿನಾಂಕ ಪರಿಶೀಲಿಸಿ:
    ವಿಶ್ವಾಸಾರ್ಹ ವೆಬ್‍ಸೈಟ್‍ಗಳಲ್ಲಿ ಆ ಸುದ್ದಿ ಪ್ರಕಟವಾದ ದಿನಾಂಕ ಇರುತ್ತದೆ. ಆದರೆ ಸುಳ್ಳು ಸುದ್ದಿಗಳ ತಾಣಗಳಲ್ಲಿ ದಿನಾಂಕ ಸಾಮಾನ್ಯವಾಗಿ ಇರುವುದಿಲ್ಲ. ಒಂದು ವೇಳೆ ಇದ್ದರೂ ಯಾವಾಗಲೋ ನಡೆದಿರುವ ಸುದ್ದಿಯನ್ನು ಪ್ರಕಟಿಸಿರುತ್ತದೆ.

    7. ಸಾಕ್ಷ್ಯಗಳನ್ನು ಚೆಕ್ ಮಾಡಿ:
    ಲೇಖನ ಬರೆದವರು ಯಾರು? ಬರೆದ ವ್ಯಕ್ತಿಗೆ ಆ ವಿಚಾರದಲ್ಲಿ ಜ್ಞಾನ ಇದೆಯೋ ಎನ್ನುವುದನ್ನು ತಿಳಿದುಕೊಳ್ಳಿ. ಬರಹದಲ್ಲಿ ಸಾಕ್ಷ್ಯ/ ಉಲ್ಲೇಖಗಳು ಸರಿ ಇಲ್ಲದೇ ಇದ್ದರೆ ಇದು ಸುಳ್ಳು ಸುದ್ದಿ ಎನ್ನುವ ತೀರ್ಮಾನಕ್ಕೆ ಬರಬಹುದು.

    8. ಬೇರೆ ವರದಿ ಓದಿ:
    ಬೇರೆ ಯಾವುದೇ ಸುದ್ದಿ ತಾಣಗಳಲ್ಲಿ ಪ್ರಕಟವಾಗದ ಸುದ್ದಿ ಒಂದು ತಾಣದಲ್ಲಿ ಮಾತ್ರ ಪ್ರಕಟವಾದರೆ ಆ ಸುದ್ದಿ ಸುಳ್ಳು ಸುದ್ದಿಯಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಒಂದೇ ಸುದ್ದಿ ಹಲವು ತಾಣಗಳಲ್ಲಿ ಪ್ರಕಟಗೊಂಡಿದ್ದರೆ ಮಾತ್ರ ಅದು ನಿಜವಾದ ಸುದ್ದಿಯಾಗಿರುತ್ತದೆ.

    9. ಹಾಸ್ಯದ ಸುದ್ದಿಯೇ?
    ಕೆಲವೊಮ್ಮೆ ಹಾಸ್ಯ ಮತ್ತು ವಿಡಂಬನೆಗಾಗಿ ಸುದ್ದಿಯ ರೂಪದಲ್ಲಿ ಸುಳ್ಳು ಸುದ್ದಿಯನ್ನು ಪ್ರಕಟಿಸಲಾಗುತ್ತದೆ. ಹೀಗಾಗಿ ಆ ಸುದ್ದಿ ವಿಡಂಬನೆಗಾಗಿ ಬರೆಯಲಾಗಿದ್ಯಾ ಎನ್ನುವುದನ್ನು ಓದುವಾಗಲೇ ಅರ್ಥೈಸಿಕೊಳ್ಳಬಹುದು.

    10. ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ:
    ಓದುವಾಗಲೇ ಆಲೋಚಿಸಿ, ಆ ಸುದ್ದಿಯ ಸತ್ಯಾಸತ್ಯತೆಯ ಬಗ್ಗೆ ಆಲೋಚನೆ ಮಾಡಿ ನಿರ್ಧಾರಕ್ಕೆ ಬನ್ನಿ. ಮಾಹಿತಿಗಳು ಸ್ಪಷ್ಟವಾಗಿದ್ದರೆ ಮಾತ್ರ ಶೇರ್ ಮಾಡಿ.