Tag: ಫೆಸ್ಬುಕ್

  • ಉತ್ತರಪ್ರದೇಶದ ನೂತನ ಸಿಎಂ ವಿರುದ್ಧ ಆಕ್ಷೇಪಾರ್ಹ ಫೋಟೋ: ಯುವಕನ ಬಂಧನ

    ಉತ್ತರಪ್ರದೇಶದ ನೂತನ ಸಿಎಂ ವಿರುದ್ಧ ಆಕ್ಷೇಪಾರ್ಹ ಫೋಟೋ: ಯುವಕನ ಬಂಧನ

    ವಾರಾಣಾಸಿ: ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಕ್ಷೇಪಾರ್ಹ ಫೋಟೋವೊಂದನ್ನು ತನ್ನ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಗಾಝಿಯಾಪುರ ಜಿಲ್ಲೆಯ ಪ್ರೊಫೆಸರ್ಸ್ ಕಾಲೋನಿ ನಿವಾಸಿ ಬಾದ್‍ಶಾಹ್ ಅಬ್ದುಲ್ ರಝಾಕ್(25) ಎಂದು ಗುರುತಿಸಲಾಗಿದ್ದು, ಈತ ಯೋಗಿ ಆದಿತ್ಯನಾಥ್ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಆಕ್ಷೇಪಾರ್ಹ ಫೋಟೋವೊಂದನ್ನು ತನ್ನ ಫೇಕ್ ಅಕೌಂಟಿನಲ್ಲಿ ಅಪ್‍ಲೋಡ್ ಮಾಡಿದ್ದನು. ಈತ ಅಪ್‍ಲೋಡ್ ಮಾಡಿದ್ದ ಕೆಲವೇ ನಿಮಿಷಗಳಲ್ಲಿ ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

    ಇದರ ವಿರುದ್ಧ ಆದಿತ್ಯನಾಥ್ ಸ್ಥಾಪನೆ ಮಾಡಿದ ಹಿಂದೂ ಯುವವಾಹಿನಿ ಅವರು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಜಿಲ್ಲಾಧಿಕಾರಿ ಸಂಜಯ್ ಖಾತ್ರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ರಝಾಕ್ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ರಝಾಕ್ ಕುಟುಂಬಸ್ಥರು, ಗೆಳೆಯರು ಹಾಗೂ ಯುವವಾಹಿನಿ ನಡುವೆ ವಾಗ್ವಾದ ನಡೆಯಿತು. ನಂತ್ರ ಪೊಲೀಸರು ರಝಾಕ್‍ನನ್ನು ಬಂಧಿಸಿದರು. ಬಳಿಕ ಆತನನ್ನು ತನಿಖೆ ನಡೆಸಿದಾಗ ರಝಾಕ್ ತನ್ನ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಇನ್ಸ್ ಪೆಕ್ಟರ್ ಸುರೇಂದ್ರ ಕುಮಾರ್ ಪಾಂಡೆ ತಿಳಿಸಿದ್ದಾರೆ.

    ಘಟನೆಯಿಂದಾಗಿ ಪೊಲೀಸರು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಿದ್ದರು. ಸೋಮವಾರ ಆರೋಪಿ ರಝಾಕ್‍ನನ್ನು ಕೋರ್ಟ್‍ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

    ಉತ್ತರಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಮಾರ್ಚ್19ರಂದು ಕಾನ್ಶಿರಾಮ್ ಸ್ಮøತಿ ಭವನದ ಎದುರು ಪ್ರಮಾಣ ವಚನ ಸ್ವೀಕರಿಸಿದ್ದರು. ಈ ವೇಳೆ ರಾಜ್ಯಪಾಲ ರಾಮ್ ನಾಯ್ಕ್ ಅವರು ಯೋಗಿ ಆದಿತ್ಯನಾಥ್ ಅವರಿಗೆ ಪ್ರಮಾಣ ವಚನ ಬೋಧಿಸಿದ್ದರು.

    ಇದನ್ನೂ ಓದಿ: ಆದಿತ್ಯನಾಥ್ ಅವರನ್ನೇ ಉತ್ತರ ಪ್ರದೇಶದ ಸಿಎಂ ಆಗಿ ಆಯ್ಕೆ ಮಾಡಿದ್ದು ಯಾಕೆ?