Tag: ಫುಡ್ ಬಾಕ್ಸ್

  • ಫುಡ್ ಬಾಕ್ಸ್‌ನಲ್ಲಿ ಗಾಂಜಾ ಸಾಗಿಸಿ ಪೊಲೀಸರನ್ನೇ ಯಾಮಾರಿಸಿದ ಡೆಲಿವರಿ ಬಾಯ್

    ಫುಡ್ ಬಾಕ್ಸ್‌ನಲ್ಲಿ ಗಾಂಜಾ ಸಾಗಿಸಿ ಪೊಲೀಸರನ್ನೇ ಯಾಮಾರಿಸಿದ ಡೆಲಿವರಿ ಬಾಯ್

    – ಲಾಕ್‍ಡೌನ್‍ನಲ್ಲಿ ಜಾಸ್ತಿ ಕೆಲಸ ಇಲ್ಲವೆಂದು ಗಾಂಜಾ ಮಾರಲು ಆರಂಭಿಸಿದ
    – ಫುಡ್ ಕೊಡುವ ನೆಪದಲ್ಲಿ ಗ್ರಾಹಕರಿಗೆ ಗಾಂಜಾ ಡೆಲಿವರಿ

    ಚೆನ್ನೈ: ಕೊರೊನಾ ವೈರಸ್ ಭೀತಿಗೆ ಆನ್‍ಲೈನ್‍ನಲ್ಲಿ ಹೆಚ್ಚು ಮಂದಿ ಫುಡ್ ಆರ್ಡರ್ ಮಾಡುವುದನ್ನ ನಿಲ್ಲಿಸಿದ್ದಾರೆ. ಹೀಗಾಗಿ ಕೆಲಸ ಕಡಿಮೆ ಆಯ್ತು ಎಂದು ಡೆಲಿವರಿ ಬಾಯ್‍ಯೋರ್ವ ಫುಡ್ ಬಾಕ್ಸ್‌ನಲ್ಲಿ ಗಾಂಜಾ ಸಾಗಾಟ ಮಾಡಿ, ಗ್ರಾಹಕರ ಮನೆಗೆ ಡೆಲಿವರಿ ನೀಡಿ ಪೊಲೀಸರ ಅತಿಥಿಯಾಗಿದ್ದಾನೆ.

    ತಮಿಳುನಾಡಿನ ಪೆರುಂಗುಡಿಯ ನಿವಾಸಿ ಗುಣಶೇಖರನ್(25) ಗಾಂಜಾ ಡೆಲಿವರಿ ಮಾಡಿದ ಆರೋಪಿ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಅಗತ್ಯ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂದಿಗೆ ಮಾತ್ರ ಓಡಾಡಲು ಅವಕಾಶ ನೀಡಲಾಗಿದೆ. ಆನ್‍ಲೈನ್ ಫುಡ್ ಡೆಲಿವರಿ ಕೊಡುವ ಸೇವೆಯನ್ನು ಅಗತ್ಯ ಸೇವೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಫುಡ್ ಡೆಲಿವರಿ ಬಾಯ್ಸ್ ಡೆಲಿವರಿ ನೀಡಲು ಓಡಾಡಬಹುದಾಗಿದೆ. ಆದರೆ ಇದನ್ನೇ ಲಾಭವಾಗಿ ಪಡೆದ ಡೆಲಿವರಿ ಬಾಯ್ ಗುಣಶೇಖರನ್, ಹೇಗೋ ಆನ್‍ಲೈನ್ ಫುಡ್ ಆರ್ಡರ್ ಮಾಡುವವರು ಕಡಿಮೆ, ಹೆಚ್ಚು ಕೆಲಸ ಇಲ್ಲ ಎಂದು ಫುಡ್ ಬಾಕ್ಸ್‌ನಲ್ಲಿ ಗ್ರಾಹಕರಿಗೆ ಗಾಂಜಾ ಮಾರಾಟ ಮಾಡುವ ಕೆಲಸಕ್ಕೆ ಕೈಹಾಕಿದ.

    ಡೆಲಿವರಿ ಬಾಯ್ ಬಳಿ ಇರುವ ಫುಡ್ ಬಾಕ್ಸ್‌ನಲ್ಲಿ ಆಹಾರ ಇರುತ್ತೆ ಎಂದು ಪೊಲೀಸರು ಕೂಡ ಸುಮ್ಮನೆ ಆತನನ್ನು ಹೋಗಲು ಬಿಡುತ್ತಿದ್ದರು. ಹೀಗಾಗಿ ಹಲವು ದಿನಗಳಿಂದ ಈತ ಗಾಂಜಾ ಬೇಕು ಎಂದು ಕರೆ ಮಾಡುವ ಗ್ರಾಹಕರ ಮನೆ ಬಾಗಿಲಿಗೆ ಅದನ್ನು ಡೆಲಿವರಿ ನೀಡುತ್ತಿದ್ದನು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಡೆಲಿವರಿ ಬಾಯ್ ಅನ್ನು ಬಂಧಿಸಿದ್ದು, ಆತನ ಬಳಿ ಇದ್ದ 20 ಚಿಕ್ಕ ಚಿಕ್ಕ ಗಾಂಜಾ ಪ್ಯಾಕೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ಈ ಹಿಂದೆ ಡೆಲಿವರಿ ಬಾಯ್ ಓರ್ವ ಅಕ್ರಮವಾಗಿ ಫುಡ್ ಡೆಲಿವರಿ ಕೊಡುವ ನೆಪದಲ್ಲಿ ಗ್ರಾಹಕರಿಗೆ ಮದ್ಯ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆತನಿಗೆ ಗಾಂಜಾ ಹೇಗೆ ಸಿಗುತ್ತಿತ್ತು? ಗ್ರಾಹಕರು ಹೇಗೆ ಆತನನ್ನು ಸಂಪರ್ಕಿಸುತ್ತಿದ್ದರು? ಆತನ ಜೊತೆ ಮತ್ತೆ ಯಾರ‍್ಯಾರು ಇದ್ದಾರೆ ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.