ಹಾಸನ: ಮಧ್ಯಾಹ್ನದ ಊಟ ಸೇವಿಸಿದ 35 ಮಂದಿ ಸೈನಿಕರು (Soldiers) ಅಸ್ವಸ್ಥಗೊಂಡಿರುವ ಘಟನೆ ಹಾಸನ (Hassan) ಜಿಲ್ಲೆಯ ಸಕಲೇಶಪುರ (Sakaleshpura) ತಾಲೂಕಿನ ಕುಡುಗರಹಳ್ಳಿಯಲ್ಲಿ ನಡೆದಿದೆ.
ಕುಡುಗರಹಳ್ಳಿ ಬಳಿಯ ಕ್ಯಾಂಪ್‌ನಲ್ಲಿ ಘಟನೆ ನಡೆದಿದ್ದು, ಚಾಲನಾ ತರಬೇತಿಗೆಂದು ಬಂದಿದ್ದ ಸೈನಿಕರು ಕುಡುಗರಹಳ್ಳಿ ಬಳಿ ಕ್ಯಾಂಪ್ ಹಾಕಿದ್ದರು. ಬುಧವಾರ ಮಧ್ಯಾಹ್ನ ಕ್ಯಾಂಪ್‌ನಲ್ಲಿ ತಯಾರಾಗಿದ್ದ ಆಹಾರವನ್ನು ಸೇವಿಸಿದ ಬಳಿಕ ಸೈನಿಕರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಮಿಲಿಟರಿ ವಾಹನಗಳಲ್ಲಿ ಕರೆತಂದು ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಅಣ್ಣನ ಜೊತೆಗೆ ಐಸ್‌ಕ್ರೀಮ್ ತೆಗೆದುಕೊಂಡು ಬರುವಾಗ ಅಪಘಾತ – ಬಾಲಕ ಸಾವು
ಸುದ್ದಿ ತಿಳಿದ ಕೂಡಲೇ ಆಸ್ಪತ್ರೆಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಅಸ್ವಸ್ಥಗೊಂಡಿರುವ ಸೈನಿಕರ ಆರೋಗ್ಯ ವಿಚಾರಿಸಿದ್ದಾರೆ. ಅಸ್ವಸ್ಥಗೊಂಡಿರುವ ಸೈನಿಕರು ಚೇತರಿಸಿಕೊಳ್ಳುತ್ತಿದ್ದು, ಫುಡ್ ಪಾಯ್ಸನ್‌ನಿಂದ ಅಸ್ವಸ್ಥಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಹೆಂಡತಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತಿ
ಶಿವಮೊಗ್ಗ: ಮದುವೆ ಸಮಾರಂಭದಲ್ಲಿ ಆಹಾರ ಸೇವಿಸಿದ್ದ 85ಕ್ಕೂ ಅಧಿಕ ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾದ ಪರಿಣಾಮ ಆಸ್ಪತ್ರೆಗೆ ದಾಖಲಾದ ಘಟನೆ ಶಿವಮೊಗ್ಗದ ಗೆಜ್ಜೇನಹಳ್ಳಿಯಲ್ಲಿ ನಡೆದಿದೆ.
ಶಿವಮೊಗ್ಗದ ಗೆಜ್ಜೇನಹಳ್ಳಿಯಲ್ಲಿ ಶುಕ್ರವಾರ ಮದುವೆ ಸಮಾರಂಭ ನಡೆದಿತ್ತು. ಈ ಸಮಾರಂಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಊಟ ಮಾಡಿದ್ದರು. ಊಟ ಮಾಡಿದ್ದ ಮಕ್ಕಳು ಸೇರಿದಂತೆ ಕೆಲವರಿಗೆ ವಾಂತಿ, ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಅಸ್ವಸ್ಥಗೊಂಡವರನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಸಿಎಂ ಸಚಿವ ಸ್ಥಾನ ಲಾಭಿಗೆ ಅವಕಾಶವಿಲ್ಲ, ಯತ್ನಾಳ್ ಹೇಳಿಕೆ ತಪ್ಪು: ರೇಣುಕಚಾರ್ಯ
ಸದ್ಯ ಎಲ್ಲರಿಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಆಹಾರದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಈ ರೀತಿ ಆಗಿದೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ.ಶ್ರೀಧರ್ ತಿಳಿಸಿದ್ದಾರೆ. ಇದನ್ನೂ ಓದಿ:ಸಾಹುಕಾರ ಪಾಪರ್ ಆಗ್ತಿದ್ದಾರೆ: ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ವಾಗ್ದಾಳಿ
ಚಿಕ್ಕಬಳ್ಳಾಪುರ: ಒಂದೇ ಗ್ರಾಮದ ಐವತ್ತಕ್ಕೂ ಹೆಚ್ಚು ಮಂದಿ ವಾಂತಿ ಹಾಗೂ ಬೇಧಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿಯ ಐವತ್ತಕ್ಕೂ ಹೆಚ್ಚು ಮಂದಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾನುವಾರ ರೆಡ್ಡಿಗೊಲ್ಲವಾರಹಳ್ಳಿಗೆ ಹೊಂದಿಕೊಂಡಿರುವ ಬಯಪ್ಪನಹಳ್ಳಿ ಗ್ರಾಮದ ಗುರುಪ್ರಸಾದ್ ಎಂಬವರ ಮನೆಯಲ್ಲಿ ನಾಮಕರಣ ಮಹೋತ್ಸವ ನಡೆದಿತ್ತು. ಕಾರ್ಯಕ್ರಮ ಮುಗಿದ ನಂತರ ಸಂಜೆ ಉಳಿದಿದ್ದ ಊಟವನ್ನು ರೆಡ್ಡಿಗೊಲ್ಲವಾರಹಳ್ಳಿಯ ಜನ ತೆಗೆದುಕೊಂಡು ಬಂದು ಊಟ ಮಾಡಿದ್ದರು. ಇಂದು ಬೆಳಗ್ಗೆಯಿಂದ ತಡರಾತ್ರಿ ಊಟ ಮಾಡಿದ ಹಲವರಿಗೆ ವಾಂತಿ-ಬೇಧಿ ಆಗಿದ್ದು, ಆಯಾಸದಿಂದ ಎಲ್ಲಂದರಲ್ಲಿ ಕುಸಿದು ಬಿದ್ದಿದ್ದಾರೆ. ಮಾಹಿತಿ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ಆಶಾ ಕಾರ್ಯಕರ್ತೆ ಮಂಜುಳ 108 ಅಂಬುಲೆನ್ಸ್ ಗಳಿಗೆ ಕರೆ ಮಾಡಿ ಕೂಡಲೇ ಅಸ್ವಸ್ಥರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಮಕ್ಕಳು, ವಯಸ್ಕರು, ವೃದ್ಧರು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಮಕರಣ ಮಹೋತ್ಸವದಲ್ಲಿ ಬೆಳಗ್ಗೆ ಊಟ ಮಾಡಿದವರಿಗೆ ಯಾವುದೇ ತೊಂದರೆ ಆಗಿಲ್ಲವಂತೆ. ಕೆಲವರಿಗೆ ಸಣ್ಣ ಪ್ರಮಾಣದ ಹೊಟ್ಟೆ ನೋವು ಕಾಣಿಸಿಕೊಂಡಿತ್ತು ಸರಿ ಹೋಗಿದೆ ಅಂತ ನಾಮಕರಣ ಮಹೋತ್ಸವ ನಡೆಸಿರುವ ಕುಟುಂಬಸ್ಥರು ಆಶಾಕಾರ್ಯಕರ್ತೆಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆ ಊಟ ಮಾಡಿದವರಿಗೆ ಮಾತ್ರ ಈ ರೀತಿ ಆಗಿದ್ದು, ಪುಡ್ ಪಾಯಿಸನ್ ಶಂಕೆ ವ್ಯಕ್ತವಾಗಿದೆ.
ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ.
ವಿದ್ಯಾರ್ಥಿನಿಯರು ಅಸ್ಮಿತಾ ಹಾಸ್ಟೆಲ್ ನಲ್ಲಿ ಸೋಮವಾರ ಮಧ್ಯಾಹ್ನದ ಊಟ ಸೇವಿಸಿದ್ದಾರೆ. ಆ ಬಳಿಕ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರು ಆಗಿದೆ. ಅಲ್ಲದೆ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ಇದರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ.
ಅಸ್ವಸ್ಥಗೊಂಡ ವಿದ್ಯಾರ್ಥಿನಿಯರನ್ನು ಹತ್ತಿರದ ಕಮಲಾಪುರ ಮತ್ತು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಫುಡ್ ಪಾಯ್ಸನ್ ನಿಂದ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವುದೆಂದು ಹೇಳಲಾಗುತ್ತಿದ್ದು, ಫುಡ್ ಪಾಯ್ಸನ್ ಆಗಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಬೆಂಗಳೂರು: ಫುಡ್ ಪಾಯ್ಸನ್ ನಿಂದ ಬಳಲುತ್ತಿದ್ದ ಸಚಿವ ಡಿಕೆಶಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಇಂದು ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ.
ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಡಿಕೆಶಿಯವರಿಗೆ ಚಿಕಿತ್ಸೆ ಮುಂದುವರಿದಿದೆ. ಸದ್ಯ ಡಿಕೆಶಿ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇಂದು ಬೆಳಗ್ಗೆ ಅಥವಾ ಸಂಜೆ ವೇಳೆ ಡಿಸ್ಚಾರ್ಜ್ ಆಗೋ ಸಾಧ್ಯತೆ ಇದೆ. ಮೂರು ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಬೇಕಾಗಿ ವೈದ್ಯರು ಸೂಚನೆ ನೀಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಏನಾಗಿತ್ತು?:
ಕಲಬುರಗಿಯಲ್ಲಿ ಪ್ರವಾಸ ಮುಗಿಸಿದ ಬಳಿಕ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಬೆಂಗಳೂರಿಗೆ ಬಂದ ಬಳಿಕ ತೀವ್ರವಾಗಿ ವಾಂತಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಂದು ನಡೆದಿದ್ದ ಕನಕಪುರ ಕಾರ್ಯಕ್ರಮ ರದ್ದುಗೊಳಿಸಿ, ಕಗ್ಗಲೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆ ಬಳಿಕ ಸಚಿವರಿಗೆ ಕನಕಪುರದ ಸ್ವಗೃಹದಲ್ಲಿ ಐವರು ವೈದ್ಯಾಧಿಕಾರಿಗಳಿಂದ ತಪಾಸಣೆ ನಡೆಸಲಾಗಿತ್ತು.
ಹೈದರಾಬಾದ್ ನಿಂದ ಹೊರಟಿದ್ದ ವಿಮಾನದಲ್ಲಿ ಸ್ಯಾಂಡ್ ವಿಚ್ ತಿಂದ ಪರಿಣಾಮ ಸಚಿವರ ಆರೋಗ್ಯದಲ್ಲಿ ಏರುಪೇರಾಗಿತ್ತು ಎನ್ನಲಾಗಿತ್ತು. ಪರಿಣಾಮ ನಿತ್ರಾಣಗೊಂಡಿರುವ ಶಿವಕುಮಾರ್ ಅವರಿಗೆ ವೈದ್ಯರು ಗ್ಲುಕೋಸ್ ಹಾಕಿ, ಚಿಕಿತ್ಸೆ ನೀಡಿದ್ದರು. ಸದ್ಯ ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ನಾನು ತಪ್ಪು ಮಾಡಿದ್ರೆ ಜೈಲಿಗೆ ಹಾಕಿ, ಗಲ್ಲಿಗೂ ಏರಲು ಸಿದ್ಧ: ಡಿಕೆಶಿ ಗುಡುಗು
ಡಿಕೆಶಿಗೆ ಬಂಧನದ ಭೀತಿ:
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ ಡಿ.ಕೆ.ಶಿವಕುಮಾರ್ ವಿರುದ್ಧ ಕೇಸ್ ದಾಖಲಿಸಿಕೊಂಡಿದೆ. ಸದ್ಯ ಡಿಕೆಶಿಗೆ ಬಂಧನದ ಭೀತಿ ಎದುರಾಗಿದ್ದು, ಹಿರಿಯ ವಕೀಲರ ಜೊತೆ ಕಾನೂನು ಪ್ರಕ್ರಿಯೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಶಿವಕುಮಾರ್ ಜೊತೆಗೆ ಸಚಿನ್ ನಾರಾಯಣ್, ಶರ್ಮ ಟ್ರಾವೆಲ್ಸ್‍ನ ಸುನೀಲ್ ಕುಮಾರ್ ಶರ್ಮ, ದೆಹಲಿಯ ಕರ್ನಾಟಕ ಭವನದ ಸಿಬ್ಬಂದಿ ಆಂಜನೇಯ ಹನುಮಂತಯ್ಯ ಮತ್ತು ರಾಜ್ಯ ಸರಕಾರದ ನಿವೃತ್ತ ಸಿಬ್ಬಂದಿ ರಾಜೇಂದ್ರ ಅವರನ್ನು ಆರೋಪಿಯನ್ನಾಗಿಸಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್‍ನ ಮತ್ತೊಂದು ಎಟಿಎಂ-ಕೆಜಿ ಲೆಕ್ಕದಲ್ಲಿ ಹವಾಲ ಹಣ ರವಾನೆ: ಸಂಬಿತ್ ಪಾತ್ರ
ದೆಹಲಿ ನಿವಾಸದಲ್ಲಿ ಪತ್ತೆಯಾದ 8.5 ಕೋಟಿ ರೂ. ಸಿಕ್ಕ ಹಣದ ಸಂಬಂಧ ಆದಾಯ ತೆರಿಗೆ ಇಲಾಖೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿತ್ತು. ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲ ಹಣದ ವಿವರವನ್ನು ಉಲ್ಲೇಖಿಸಿತ್ತು. ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಐಟಿ ಇಲಾಖೆ ಹಿರಿಯ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲ ಹಣದ ವಿವರವನ್ನು ಉಲ್ಲೇಖಿಸಿದ್ದಾರೆ. ಈ ದೂರಿನಲ್ಲಿ ಹವಾಲ ಹಣದ ಮೂಲಕ ಕೋಟಿ ಕೋಟಿ ಹಣವನ್ನು ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಕಳುಹಿಸಿಕೊಟ್ಟಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗಿದೆ.
ಐಟಿ ದಾಳಿಯಾದ ಬಳಿಕ ಪತ್ತೆಯಾದ ಡೈರಿಯಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಡಿಕೆ ಶಿವಕುಮಾರ್ ಮತ್ತು ಆರೋಪಿಗಳನ್ನು ವಿಚಾರಣೆ ನಡೆಸಿದ್ದರು. ಕೆಜಿ ಎಂಬ ಕೋಡ್ ವರ್ಡ್ ಬಳಸಿ ನಗದು ವ್ಯವಹಾರ ನಡೆಸುತ್ತಿದ್ದಾರೆ ಎನ್ನುವ ಅನುಮಾನದ ಮೇರೆಗೆ ಅಧಿಕಾರಿಗಳು ಆರೋಪಿಗಳಿಗೆ ಪ್ರಶ್ನೆ ಕೇಳಿದ್ದಾರೆ. ಆದರೆ ಈ ಪ್ರಶ್ನೆಗಳಿಗೆ ಆರೋಪಿಗಳಿಂದ ಸರಿಯಾದ ಉತ್ತರ ಸಿಕ್ಕಿರಲಿಲ್ಲ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿತ್ತು. ಈ ಕುರಿತು ಇಂದು ಡಿ.ಕೆ.ಶಿವಕುಮಾರ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಈ ಸಂಬಂಧ ಘಟಾನುಘಟಿ ವಕೀಲರೊಂದಿಗೆ ಸಚಿವರು ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿತ್ತು.
ಉಡುಪಿ: ಶಿರೂರು ಶ್ರೀಗಳು ಕೊನೆಯ ಬಾರಿಗೆ ಮಠದಲ್ಲಿ ಮೊಸರು ಅವಲಕ್ಕಿಯನ್ನು ಸೇವಿಸಿದ್ದರು. ಇದಾದ ಕೆಲ ಸಮಯದ ಬಳಿಕ ಶ್ರೀಗಳು ರಕ್ತದ ವಾಂತಿ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಕೊನೆಯ ಬಾರಿಗೆ ಮೊಸರು ಅವಲಕ್ಕಿ ನೀಡಿದ್ದು ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ವನ ಮಹೋತ್ಸವದಲ್ಲಿ ಭಾಗಿಯಾಗಿದ್ದ ಶ್ರೀಗಳು ಅಲ್ಲಿ ಯಾವುದೇ ಆಹಾರವನ್ನು ಸೇವಿಸಿರಲಿಲ್ಲವಂತೆ. ಸಂಜೆ ಮಠಕ್ಕೆ ಆಗಮಿಸಿದಾಗಲೇ ತಮ್ಮ ನೆಚ್ಚಿನ ಆಹಾರವಾದ ಮೊಸರು ಅವಲಕ್ಕಿ ತಿಂದಿದ್ದರು. ಅವಲಕ್ಕಿ ತಿಂದ ಬಳಿಕವೇ ಶ್ರೀಗಳಿಗೆ ಫುಡ್ ಪಾಯ್ಸನ್ ಆಗಿದೆ ಮಠದ ಮೂಲಗಳು ತಿಳಿಸಿದ್ದವು. ಶ್ರೀಗಳು ರಕ್ತದ ವಾಂತಿ ಮಾಡಿಕೊಳ್ಳುತ್ತಿದ್ದಂತೆ ಭಕ್ತವೃಂದ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿತ್ತು.
ಬಹು ಅಂಗಾಂಗ ವೈಫಲ್ಯದಿಂದ ತೀವ್ರ ಅಸ್ವಸ್ಥರಾಗಿದ್ದ ಶ್ರೀಗಳು ಗುರುವಾರ ಬೆಳಗ್ಗೆ ಹರಿಪಾದ ಸೇರಿದ್ದರು. ಶ್ರೀಗಳ ಸಾವಿನ ಬಳಿಕ ಅವರಿಗೆ ವಿಷಪ್ರಾಶನ ಮಾಡಿಸಲಾಗಿದೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಇದಕ್ಕೆ ಪೂರಕವಾಗಿರುವಂತೆ ಕೆಎಂಸಿ ಆಸ್ಪತ್ರೆಯ ವೈದ್ಯರೂ ದೇಹದಲ್ಲಿ ವಿಷಕಾರಕ ಅಂಶ ಪತ್ತೆಯಾಗಿದೆ ಅಂದಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು. ಸದ್ಯ ಶ್ರೀಗಳ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಶಿರೂರು ಮಠವನ್ನು ಮೂರು ದಿನಗಳ ಕಾಲ ವಶಕ್ಕೆ ಪಡೆದು, ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದ್ದಾರೆ.
ಪೇಜಾವರ ಶ್ರೀಗಳು ಗುರುವಾರ ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಾನು ಈ ಮೊದಲು ಲಾತವ್ಯ ಆಚಾರ್ಯರೊಂದಿಗೆ ಫೋನ್ ನಲ್ಲಿ ಮಾತನಾಡಿ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೆ. ಅವರಿಗೆ ಕೆಟ್ಟದಾದ ಕಂಚಿನ ಪಾತ್ರೆಯಲ್ಲಿ ಫಲಾಹಾರ ನೀಡಲಾಗಿತ್ತು. ಪಾತ್ರೆ ದೋಷದಿಂದ ಶಿರೂರು ಶ್ರೀಗಳು ಸಾವನ್ನಪ್ಪಿರುವ ಸಾಧ್ಯತೆಗಳಿವೆ ಎಂಬ ಶಂಕೆ ವ್ಯಕ್ತಪಡಿಸಿದ್ದರು.
ಚಿಕ್ಕಮಗಳೂರು: ವಸತಿ ಶಾಲೆಯೊಂದರಲ್ಲಿ ತಿಂಡಿ ಸೇವಿಸಿದ 22 ಮಕ್ಕಳು ಅಸ್ವಸ್ಥರಾಗಿರುವ ಘಟನೆ ತರೀಕೆರೆ ಹೊರವಲಯದ ತುಂಗಾಭದ್ರಾ ವಸತಿ ಶಾಲೆಯಲ್ಲಿ ನಡೆದಿದೆ.
ಚಿತ್ರದುರ್ಗ ಸಂಸದ ಬಿಎನ್ ಚಂದ್ರಪ್ಪ ಅವರಿಗೆ ಸೇರಿರುವ ಈ ವಸತಿ ಶಾಲೆಯಲ್ಲಿ ಇಂದು ಬೆಳಗ್ಗೆ ತಿಂಡಿ ಸೇವಿಸಿದ 22 ಮಕ್ಕಳು ಅಸ್ವಸ್ಥರಾಗಿದ್ದಾರೆ. ತಕ್ಷಣ ಅಸ್ವಸ್ಥಗೊಂಡ ಎಲ್ಲ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ.
ಹಾಸ್ಟೆಲ್‍ನಲ್ಲಿ ಬೆಳಗ್ಗೆ ವಿದ್ಯಾರ್ಥಿಗಳಿಗೆ ನೀಡಿದ ಆಹಾರದಿಂದ ಫುಡ್ ಪಾಯ್ಸನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಮಾಹಿತಿ ಪಡೆದಿರುವ ಶಿಕ್ಷಣ ಇಲಾಖೆ ಬಿಇಒ ಶಿವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಕುರಿತು ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಗಾಜನೂರಿನ ಮೊರಾರ್ಜಿ ವಸತಿ ಶಾಲೆಯಲ್ಲಿ 25 ಮಕ್ಕಳು ರಾತ್ರಿ ಊಟದ ನಂತರ ತೀವ್ರ ಅಸ್ವಸ್ಥಗೊಂಡಿದ್ದಾರೆ.
ಊಟದ ನಂತರ ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದು, ತಕ್ಷಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಒಟ್ಟು 25 ಮಕ್ಕಳು ಅಸ್ವಸ್ಥಗೊಂಡಿದ್ದು, ಮೆಗ್ಗಾನ್ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಮೆಗ್ಗಾನ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ಮತ್ತು ಡಿಹೆಚ್‍ಓ ಡಾ.ಹನುಮಂತಪ್ಪ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಧಿಕಾರಿಗಳು ವಸತಿ ಶಾಲೆಯಲ್ಲಿ ರಾತ್ರಿ ಮಕ್ಕಳಿಗೆ ನೀಡಿದ ಆಹಾರದ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳಿಸಿದ್ದಾರೆ.
ಚಿತ್ರದುರ್ಗ: ಹೋಳಿಗೆ ಊಟ ಮಾಡಿದ 138 ಜನರು ಅಸ್ವಸ್ಥಗೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಹಾಯ್ಕಲ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬೋರಯ್ಯ ಎಂಬವರ ಮನೆಯಲ್ಲಿ ಯಲ್ಲಮ್ಮ ದೇವರ ಪೂಜೆಯ ನಂತರ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟ ಸೇವಿಸಿದ ಕೆಲವೇ ಸಮಯದಲ್ಲಿ ನೂರಾರು ಜನರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. 78 ಪುರಷರು, 40 ಜನ ಮಹಿಳೆಯರು ಮತ್ತು 20 ಜನ ಮಕ್ಕಳು ಹೋಳಿಗೆ ಊಟ ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದಾರೆ.
ವಿಷಯ ತಿಳಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಯ್ಕಲ್ ಗ್ರಾಮಕ್ಕೆ ತೆರಳಿದ್ದಾರೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ತಂಡ ಗ್ರಾಮದಲ್ಲಿ ತಾತ್ಕಾಲಿಕ ಕ್ಯಾಂಪ್ ತೆರೆದು ಅಸ್ವಸ್ಥರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಫುಡ್ ಪಾಯ್ಸನ್ ನಿಂದ ಜನರು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 15 ಕ್ಕೂ ಜನರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದಲ್ಲಿ ಮುಂದಿನ ಮೂರು ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ: ಸದಾ ಲವಲವಿಕೆಯಿಂದ ಕಪಿ ಚೇಷ್ಟೇ ಮಾಡ್ತಾ ಗ್ರಾಮಸ್ಥರ ಪ್ರೀತಿಗೆ ಪಾತ್ರವಾಗಿದ್ದ ನೂರಾರು ಕೋತಿಗಳು ಮಂಕು ಬಡಿದಂತೆ ವಿಚಿತ್ರ ಖಾಯಿಲೆಗೆ ಗುರಿಯಾಗಿ ನರಳಾಡುತ್ತಿರುವ ದೃಶ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಗ್ರಾಮದಲ್ಲಿ ಕಾಣುತ್ತದೆ.
ಬುಳ್ಳಹಳ್ಳಿ ಗ್ರಾಮದಲ್ಲಿರುವ ಆಲದ ಮರದಲ್ಲಿ 200 ಕ್ಕೂ ಹೆಚ್ಚು ಕೋತಿಗಳು ಹಲವಾರು ವರ್ಷಗಳಿಂದ ನೆಲೆಯನ್ನ ಕಂಡು ಕೊಂಡು ವಾಸ ಮಾಡುತ್ತಿವೆ. ಹೀಗಾಗಿ ಗ್ರಾಮದ ಜನರೇ ಈ ಕೋತಿಗಳಿಗೆ ಬನ್, ಬಿಸ್ಕೆಟ್, ಬಾಳೆಹಣ್ಣು ಸೇರಿದಂತೆ ತಿಂಡಿ-ತಿನಿಸುಗಳನ್ನು ನೀಡಿ ಚೆನ್ನಾಗಿಯೇ ನೋಡಿಕೊಳ್ತಿದ್ರು. ಆದರೆ ಇತ್ತೀಚಿಗೆ ಕೆಲವು ದಿನಗಳಿಂದ ಕೋತಿಗಳು ವಿಚಿತ್ರ ಕಾಯಿಲೆಗೆ ತುತ್ತಾಗಿವೆ.
ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿರುವ ಕೋತಿಗಳು ಊಟ ತಿಂಡಿ ನೀರು ಬಿಟ್ಟು ವಿಚಿತ್ರವಾಗಿ ವರ್ತನೆ ಮಾಡುತ್ತಿವೆಯಂತೆ. ಮರದಲ್ಲಿ ಕುಳಿತ ಕೋತಿಗಳು ಮಂಕಾಗಿ ಎಲ್ಲಂದರಲ್ಲೆ ತೂಕಡಿಕೆ ಮಾಡುತ್ತಿವೆ. ಅಷ್ಟೆ ಅಲ್ಲದೆ ಮೂರು ದಿನಗಳಿಂದ ನಾಲ್ಕೈದು ಕೋತಿಗಳು ಸಾವನ್ನಪ್ಪಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕೋತಿಗಳಿಗೆ ತಿಂಡಿಯನ್ನ ಕೊಟ್ಟರೂ ತಿನ್ನದೆ ಎಲ್ಲೆಂದರಲ್ಲಿ ಅಸ್ವಸ್ಥಗೊಂಡಂತೆ ಕಾಣುತ್ತಿವೆ. ಇದರಿಂದಾಗಿ ಕೋತಿಗಳಿಗೆ ಮಂಗನ ಕಾಯಿಲೆ ಅಥವಾ ಫುಡ್ ಪಾಯ್ಸನ್ ಆಗಿದೆಯಾ ಎಂದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಕಳೆದ ರಾತ್ರಿ ಕೋತಿಗಳಿಗೆ ಪಶುವೈದ್ಯರು ಚುಚ್ಚುಮದ್ದನ್ನು ನೀಡಿದ್ರು, ಆದ್ರೂ ಕೋತಿಗಳು ವಿಚಿತ್ರವಾಗಿ ವರ್ತನೆಯನ್ನ ಮಾಡುತ್ತಿವೆ. ಹೀಗಾಗಿ ಸಂಬಂಧ ಪಟ್ಟ ವೈದ್ಯರು ಆದಷ್ಟು ಬೇಗ ಕೋತಿಗಳ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.