Tag: ಫುಡ್ ಕಿಟ್

  • 5 ಸಾವಿರ ಕೊರೊನಾ ಸೇನಾನಿಗಳಿಗೆ ಗೌರವ- ಸಿದ್ದರಾಮಯ್ಯರಿಂದ ದಿನಸಿ ಕಿಟ್ ವಿತರಣೆ

    5 ಸಾವಿರ ಕೊರೊನಾ ಸೇನಾನಿಗಳಿಗೆ ಗೌರವ- ಸಿದ್ದರಾಮಯ್ಯರಿಂದ ದಿನಸಿ ಕಿಟ್ ವಿತರಣೆ

    ಕೋಲಾರ: ಕೊರೊನಾ ವಿರುದ್ಧ ಹೋರಾಡುತ್ತಿರುವ ಸುಮಾರು 5 ಸಾವಿರ ಜನ ವಾರಿಯರ್ಸ್‍ಗೆ ದಿನಸಿ ಕಿಟ್ ಜೊತೆಗೆ ಮಡಿಲು ತುಂಬಿ ಗೌರವಿಸುವ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

    ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊಮ್ಮನಹಳ್ಳಿಯಲ್ಲಿ ಮಾಲೂರು ಶಾಸಕ ನಂಜೇಗೌಡ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಗಲಿರುಳು ದುಡಿಯುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ದಿನಸಿ ಕಿಟ್ ವಿತರಿಸಿದರು. ಅಲ್ಲದೆ ಶಾಸಕರ ಕುಟುಂಬಸ್ಥರು ಅರಿಶಿನ ಕುಂಕುಮ ನೀಡಿ ಮಡಿಲು ತುಂಬಿದರು.

    ಮಾಲೂರು ತಾಲೂಕಿನ 5 ಸಾವಿರ ಅಂಗನವಾಡಿ, ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ನೌಕರರು, ಪೌರಕಾರ್ಮಿಕರರಿಗೆ ಗೌರವ ಸಲ್ಲಿಸಲಾಯಿತು. ಬಂದಿದ್ದ ಮಹಿಳೆಯರಿಗೆ ಸೀರೆ, ಅರಿಶಿನ-ಕುಂಕುಮ ಜೊತೆಗೆ ಆಹಾರ ಕಿಟ್‍ನ್ನು ನೀಡಲಾಯಿತು.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ಘೋಷಣೆ ಮಾಡಿರುವ ಪ್ಯಾಕೇಜ್ ಒಂದು ಎಕರೆಗೆ ಒಂದು ಬಾರಿ ಔಷಧ ಹೊಡೆಯಲು ಸಾಕಾಗುವುದಿಲ್ಲ. ಸಂಪ್ರದಾಯ ವೃತ್ತಿ ಮಾಡುವವರ ಸಭೆ ಕರೆಸಿದ್ದು ಎಲ್ಲ ಕರ ಕುಶಲ ಕಾರ್ಮಿಕರೊಂದಿಗೆ ಸಭೆ ಮಾಡಿ ಅಭಿಪ್ರಾಯ ಪಡೆದುಕೊಂಡಿದ್ದೆ. ಅದರಂತೆ ಸವಿತ ಸಮಾಜ, ಅಟೋ, ಟ್ಯಾಕ್ಸಿ, ಮಡಿವಾಳ ಸಮಾಜ, ನೇಕಾರರಿಗೆ 5 ಸಾವಿರ ಕೊಡುವುದು ಸರಿ. ಆದರೆ ಸಾಕಷ್ಟು ಜನರನ್ನು ಪ್ಯಾಕೇಜ್ ನಿಂದ ಕೈ ಬಿಟ್ಟಿದ್ದಾರೆ, ಅವರಿಗೂ ಕೂಡ ಆರ್ಥಿಕ ಸಹಾಯ ಮಾಡಬೇಕೆಂದು ಆಗ್ರಹಿಸಿದರು.

    ಮಾಲೂರು ಶಾಸಕ ನಂಜೇಗೌಡ ಮಾತನಾಡಿ, ನಮ್ಮ ಕುಟುಂಬ ವರ್ಗದವರೆಲ್ಲರೂ ಸೇರಿ ಕೊರೊನಾ ವಿರುದ್ಧ ಹೋರಾಡಲು ಶ್ರಮಿಸುತ್ತಿರುವ 5 ಸಾವಿರ ಮಂದಿಗೆ ಮಾಜಿ ಸಿಎಂ ಸಿದ್ದು ಅವರಿಂದ ಸೀರೆ, ಅರಿಶಿನ-ಕುಂಕುಮ, ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಅವರನ್ನ ಕರೆಸಿ ತಾಲೂಕಿನ 56 ಸಾವಿರ ಕುಟುಂಬಗಳಿಗೆ ದಿನಸಿ, ತರಕಾರಿ ವಿತರಣೆ ಮಾಡಿದ್ದೆವು. ಮುಂದೆಯೂ ತಾಲೂಕಿನಲ್ಲಿ ಇದೆ ರೀತಿ ಸೇವೆ ಮುಂದುವರೆಯಲಿದೆ ಎಂದರು.

    3 ಗಂಟೆ ಸುಮಾರಿಗೆ ಅನೇಕಲ್ ಸೇರಿದಂತೆ ಜಿಲ್ಲೆಯ ಹಲವೆಡೆ ನಷ್ಟಕ್ಕೊಳಗಾದ ಬೆಳೆಗಳನ್ನು ವೀಕ್ಷಣೆ ಮಾಡಿ ಕೊಮ್ಮನಹಳ್ಳಿಗೆ ಆಗಮಿಸಿದ್ದರು. ಕೊಮ್ಮನಹಳ್ಳಿ ಚನ್ನಬೈರವೇಶ್ವರ ದೇವಾಲಯದಲ್ಲಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಹೋರಗಿನಿಂದಲೇ ಕೈ ಮುಗಿದು ಸಿದ್ದರಾಮಯ್ಯ ವಾಪಸ್ ಆದರು. ಇದೆ ವೇಳೆ ಶಾಸಕ ಬೈರತಿ ಸುರೇಶ್, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ವಿ.ಆರ್.ಸುದರ್ಶನ್ ಕೂಡ ದೇವಸ್ಥಾನದ ಮುಂಭಾಗದಲ್ಲಿ ಕೈ ಮುಗಿದು ವಾಪಸ್ ಆದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಎಡವಟ್ಟು ಮಾಡಿದ್ದಾರೆ.

  • ಅನಾಮಧೇಯ ವ್ಯಕ್ತಿಗಳಿಂದ ಫುಡ್ ಕಿಟ್ ವಿತರಣೆ- ಗ್ರಾಮಸ್ಥರಲ್ಲಿ ಆತಂಕ

    ಅನಾಮಧೇಯ ವ್ಯಕ್ತಿಗಳಿಂದ ಫುಡ್ ಕಿಟ್ ವಿತರಣೆ- ಗ್ರಾಮಸ್ಥರಲ್ಲಿ ಆತಂಕ

    ಗದಗ: ಕೊರೊನಾ ಲಾಕ್‍ಡೌನ್ ವೇಳೆ ಅನ್ಯಕೋಮಿನ ಅನಾಮಧೇಯ ವ್ಯಕ್ತಿಗಳು ದಿನಸಿ ಕಿಟ್ ವಿತರಿಸಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದಲ್ಲಿ ನಡೆದಿದೆ.

    ಗುರುವಾರ ರಾತ್ರಿ 3 ಜನರ ಯುವಕರು, ಗ್ರಾಮದ ಹತ್ತಾರು ಮನೆಗಳಿಗೆ ಅಕ್ಕಿ, ಗೋಧಿ, ಬೆಳೆ, ಸಕ್ಕರೆ, ಎಣ್ಣೆ ಪ್ಯಾಕೆಟ್ ಹೀಗೆ ಅನೇಕ ವಸ್ತುವಿನ ದಿನಸಿ ಕಿಟ್ ವಿತರಿಸಿದ್ದಾರೆ. ನಮಗೆ ಬೇಡ ಅಂದರೂ ಕೊಟ್ಟು ಹೋಗಿದ್ದಾರೆ ಎಂದು ಸ್ಥಳೀಯ ಅಜ್ಜಿಯರಿಬ್ಬರು ಹೇಳುತ್ತಿದ್ದಾರೆ. ಇವರು ವಯಸ್ಸಾದವರು ಹಾಗೂ ಹೆಚ್ಚು ಮಕ್ಕಳಿದ್ದ ಮನೆಯೇ ಟಾರ್ಗೆಟ್ ಮಾಡಿ ಕೇವಲ ಬೆರಳೆಣಿಕೆಯಷ್ಟು ಮನೆಗಳಿಗೆ ಮಾತ್ರ ಹಂಚಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

    ತಾಲೂಕಾಡಳಿತ ಅನುಮತಿ ಇಲ್ಲದೇ ಯಾರು ಎಲ್ಲಿಂದ ಬಂದರು ಏನು ಎಂಬುದನ್ನು ತಿಳಿಸದೇ ಕಿಟ್ ನೀಡಿ ಪರಾರಿಯಾಗಿದ್ದಾರೆ. ಇದು ಈ ಸಂದರ್ಭದಲ್ಲಿ ಗ್ರಾಮದ ಜನರಲ್ಲಿ ಮತ್ತಷ್ಟು ಆತಂಕ ಹುಟ್ಟಿಸಿದೆ. ಸುದ್ದಿ ತಿಳಿದು ಸ್ಥಳಕ್ಕೆ ಗದಗ ಎಸ್.ಪಿ ಯತೀಶ್ ಎನ್, ರೋಣ ತಹಶೀಲ್ದಾರ್ ಜಕ್ಕನಗೌಡ ತಾಲೂಕ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅನುಮಾನಸ್ಪದ ವ್ಯಕ್ತಿಗಳು ಗುರುತು ಸಿಕ್ಕಿದ್ದು, ಈ ಕುರಿತು ಪೊಲೀಸರ ತನಿಖೆ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ.