Tag: ಫುಡ್ ಕಿಟ್

  • ಕ್ಷೇತ್ರದ ಪ್ರತಿ ಮನೆಗೆ ಫುಡ್ ಕಿಟ್ ವಿತರಿಸುತ್ತಿರೋ ಶಾಸಕ ಸತೀಶ್ ರೆಡ್ಡಿ

    ಕ್ಷೇತ್ರದ ಪ್ರತಿ ಮನೆಗೆ ಫುಡ್ ಕಿಟ್ ವಿತರಿಸುತ್ತಿರೋ ಶಾಸಕ ಸತೀಶ್ ರೆಡ್ಡಿ

    ಬೊಮ್ಮನಹಳ್ಳಿ(ಆನೇಕಲ್): ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಜನ ಬಡ ಕಾರ್ಮಿಕರು ಒಂದು ಹೊತ್ತಿನ ಊಟಕ್ಕೂ ಪರದಾಟ ನಡೆಸುವಂತಾಗಿದೆ. ಇದನ್ನು ಅರಿತ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಮನೆ ಮನೆಗೆ ತೆರಳಿ ಕ್ಷೇತ್ರದ ಜನರಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನ ವಿತರಣೆ ಮಾಡಿದ್ದಾರೆ.

    ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ 65 ಸಾವಿರ ಬಡ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ವಿತರಿಸುವ ಕಾರ್ಯಕ್ಕೆ ಇಂದು ಹೊಂಗಸಂದ್ರದಲ್ಲಿ ಶಾಸಕ ಸತೀಶ್ ರೆಡ್ಡಿ ಚಾಲನೆ ನೀಡಿ ಆಹಾರ ಸಾಮಗ್ರಿಗಳ ಕಿಟ್ ಗಳನ್ನ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಕ್ಷೇತ್ರದ ವಾರ್ಡುಗಳಲ್ಲಿ ತಲಾ ಏಳು ಸಾವಿರ ಬಡ ಕುಟುಂಬಗಳನ್ನು ಗುರುತಿಸಲಾಗಿದೆ. ಇಂದಿನಿಂದ ಸಂಕಷ್ಟದಲ್ಲಿರುವ ಜನರ ಮನೆ ಬಾಗಿಲಿಗೆ ಆಹಾರ ಧಾನ್ಯ ಕಿಟ್ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

    ಕೊರೊನಾ ನಿಯಂತ್ರಣಕ್ಕೆ ಲಾಕ್‍ಡೌನ್ ಅನಿವಾರ್ಯವಾಗಿದ್ದು, ಇದರಿಂದ ಬಡವರ ಬದುಕು ಕಷ್ಟಕ್ಕೆ ಸಿಲುಕಿದ್ದು, ಶಾಸಕನಾಗಿ ಜನರ ನೆರವಿಗೆ ನಿಲ್ಲುವುದು ನನ್ನ ಕರ್ತವ್ಯ. ಕ್ಷೇತ್ರದ ಜನ ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇನೆ. ಒಂದು ವೇಳೆ ಸರ್ಕಾರ ಲಾಕ್‍ಡೌನ್ ಮುಂದುವರಿಸಲು ತೀರ್ಮಾನಿಸಿದ್ದಲ್ಲಿ ಸರ್ಕಾರವೂ ಜನರ ನೆರವಿಗೆ ನಿಲ್ಲುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

    ಆಹಾರ ಸಾಮಗ್ರಿಗಳ ಕಿಟ್ ಪಡೆದ ಮಹಿಳೆ ರೇಣುಕಾ ಮಾತನಾಡಿ, ನಾನು ಗಾರ್ಮೆಂಟ್ಸ್ ಕಂಪನಿಯಲ್ಲಿ ಪೀಸ್ ವರ್ಕ್ ಕೆಲಸ ಮಾಡುತ್ತಿದ್ದೆ, ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಊಟಕ್ಕೂ ತುಂಬಾ ತೊಂದರೆ ಆಗಿತ್ತು. ಕಿಟ್ ಕೊಡುತ್ತಿರುವುದರಿಂದ ಒಂದಷ್ಟು ದಿನ ದೂಡಬಹುದು ಎಂದು ತಿಳಿಸಿದರು.

  • ಲಾಕ್‍ಡೌನ್ ಸಂಕಷ್ಟ: ಬಡವರಿಗೆ ಸೈನಿಕ, ರೈಲ್ವೇ ಪೊಲೀಸರಿಂದ ಆಹಾರ ಕಿಟ್ ವಿತರಣೆ

    ಲಾಕ್‍ಡೌನ್ ಸಂಕಷ್ಟ: ಬಡವರಿಗೆ ಸೈನಿಕ, ರೈಲ್ವೇ ಪೊಲೀಸರಿಂದ ಆಹಾರ ಕಿಟ್ ವಿತರಣೆ

    ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಕೆಲಸವಿಲ್ಲದೆ ಬಡಜನ ನಿಜಕ್ಕೂ ಸಂಕಷ್ಟದ ಪರಸ್ಥಿತಿಯನ್ನ ಎದುರಿಸುತ್ತಿದ್ದಾರೆ. ಹೀಗಾಗಿ ರಾಯಚೂರಿನಲ್ಲಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನ ಯೋಧ ರಮೇಶ್ ತನ್ನ ಒಂದು ತಿಂಗಳ ಸಂಬಳದಲ್ಲಿ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

    ನಗರದ ಮಂಗಳವಾರಪೇಟೆ ಸ್ಲಂ ನಿವಾಸಿಗಳಿಗೆ ಆಹಾರದ ಕಿಟ್ ನೀಡಿದ್ದಾರೆ. ಕಾಶ್ಮೀರದಿಂದ ರಜೆ ಮೇಲೆ ಬಂದು 10 ದಿನಗಳಾಗಿದ್ದ ಸ್ಲಂ ನಿವಾಸಿಗಳ ಪರಿಸ್ಥಿತಿ ನೋಡಿ ಕೈಲಾದ ಸಹಾಯ ಮಾಡಬೇಕು ಅಂತ ಗೆಳೆಯರ ಸಹಾಯದೊಂದಿಗೆ ಆಹಾರ ಕಿಟ್ ವಿತರಿಸಿದ್ದಾರೆ.

    ರೈಲ್ವೇ ಪೊಲೀಸ್ ಠಾಣೆ ಅಧಿಕಾರಿಗಳು ಸಹ ನಿರಂತರವಾಗಿ ಬಡ ಪ್ರಯಾಣಿಕರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಆಹಾರ ಸಾಮಗ್ರಿಗಳ ಕಿಟ್, ಮಾಸ್ಕ್ ವಿತರಿಸುವುದರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವೈಯಕ್ತಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳುವಂತೆ ತಿಳಿ ಹೇಳುತ್ತಿದ್ದಾರೆ.

    ರೈಲ್ವೆ ಎಡಿಜಿಪಿ ಎಸ್. ಭಾಸ್ಕರ್ ರಾವ್, ಕಲುಬುರಗಿ ರೈಲ್ವೆ ಡಿಎಸ್‍ಪಿ ವೆಂಕನಗೌಡ ಪಾಟೀಲ್ ಕಿಟ್ ವಿತರಣೆ ಮಾಡಿದ್ದಾರೆ. ಸಿಪಿಐ ಎನ್ .ಎಸ್ ಜನಗೌಡ ,ಪಿಎಸ್‍ಐ ಮಹೇಶ್ ಮತ್ತು ರೈಲ್ವೇ ಪೊಲೀಸ್ ಠಾಣೆ ಸಿಬ್ಬಂದಿ ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ.

  • ಕಷ್ಟದಲ್ಲಿದ್ದವರ ಕಣ್ಣೀರು ಒರೆಸಲು ಮುಂದಾದ ನಟಿ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ

    ಕಷ್ಟದಲ್ಲಿದ್ದವರ ಕಣ್ಣೀರು ಒರೆಸಲು ಮುಂದಾದ ನಟಿ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ

    ಮಡಿಕೇರಿ: ಕೊರೊನಾ ಎರಡನೇ ಅಲೆಯಿಂದ ಹಲವಾರು ಮಂದಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಮಧ್ಯೆ ಸ್ಯಾಂಡಲ್‍ವುಡ್ ಕಲಾವಿದರಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕೊಡಗಿನ ಜನರಿಗೆ ಸಹಾಯ ಮಾಡಿದ್ದಾರೆ.

    ಕೊರೊನಾ ಕಾಲದಲ್ಲಿ ಕೆಲವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಮತ್ತೊಂದೆಡೆ ಆಕ್ಸಿಜನ್, ಬೆಡ್ ಇಲ್ಲದೆ ಅನೇಕರು ನಿಧನರಾಗಿದ್ದಾರೆ. ಇಂತಹವರಿಗೆ ಕೊರೊನಾ ವಿರುದ್ಧ ಹೋರಾಡಲು ಸ್ಯಾಂಡಲ್‍ವುಡ್‍ನ ಕೆಲ ಸೆಲಿಬ್ರೆಟಿಗಳು ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಕಳೆದ ವರ್ಷ ಚಂದನವನದ ಹಲವರು ಉದ್ಯೋಗವಿಲ್ಲದವರಿಗೆ ದಿನಸಿ ಕಿಟ್ ನೀಡುವುದು ಹಾಗೂ ಇತರೆ ನೆರವು ನೀಡುವಲ್ಲಿ ಮುಂಚೂಣಿಯಲ್ಲಿದ್ದರು.

    ಹಾಗೆಯೇ ಈ ಬಾರಿ ಕೊಡಗಿನ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕೊರೊನಾ ವಾರಿಯರ್‌ಗಳಂತೆ ಕೆಲಸ ಮಾಡುತ್ತಿದ್ದಾರೆ. ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ‘ಭುವನಂ ಕೋವಿಡ್ ಹೆಲ್ಪ್ 24/7’ ಎಂಬ ಟ್ರಸ್ಟ್ ಆರಂಭಿಸಿ ಸೋಂಕಿತರಿಗೆ ಸಹಾಯ ಮಾಡುವ ಮೂಲಕ ಇಬ್ಬರು ಕೊಡಗಿನ ಸೇವೆಗೆ ಮುಂದಾಗಿದ್ದಾರೆ.

    ಲಾಕ್ ಡೌನ್ ಸಂದರ್ಭದಲ್ಲಿ ಭಾಂದವ ಫೌಂಡೇಷನ್ ಹೆಸರಿನ ಮೂಲಕ ಕೊಡಗಿನ ಜನರ ನೆರವಿಗೆ ನಿಂತಿದ್ದು, ಬಡವರು, ನಿರ್ಗತಿಕರಿಗೆ ಹದಿನೈದು ದಿನಗಳಿಗೆ ಆಗುವಷ್ಟು ಆಹಾರ ಪದಾರ್ಥಗಳ ಕಿಟ್‍ನನ್ನು ವಿತರಣೆ ಮಾಡುತ್ತಿದ್ದಾರೆ. ಎರಡು ವಾರಗಳ ಕಾಲ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲಿರುವ ‘ಭುವನಂ ಫೌಂಡೇಷನ್’ಗೆ ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ನಲ್ಲಿ ಚಾಲನೆ ನೀಡಲಾಯಿತು. ಸ್ಥಳೀಯರಿಗೆ ಮತ್ತು ಹೋಂ ಗಾರ್ಡ್‍ಗಳಿಗೆ ಆಹಾರ ಪದಾರ್ಥಗಳ ಕಿಟ್ ಮತ್ತು ಮಾಸ್ಕ್ ಅನ್ನು ನಟ ಭುವನ್ ಮತ್ತು ಹರ್ಷಿಕಾ ಪೂಣಚ್ಚ ವಿತರಣೆ ಮಾಡಿದ್ದಾರೆ.

    ಈ ಸಂದರ್ಭ ನಗರ ಸಭೆ ಆಯುಕ್ತ ರಾಮದಾಸ್ ಜೊತೆಗಿದ್ದು, ನಗರದಲ್ಲಿ ಆಹಾರ ಪದಾರ್ಥಗಳ ಕಿಟ್ ಬೇಕಾಗಿರುವ ಏರಿಯಾಗಳಿಗೆ ಕರೆದೊಯ್ದು ಕುದ್ದು ನಿಂತು ಆಹಾರ ಪದಾರ್ಥಗಳನ್ನು ವಿತರಣೆ ಮಾಡಿಸಿದರು. ಈ ಸಂದರ್ಭ ಮಾತನಾಡಿದ ಭುವನ್ ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಔಷಧಿ ಕೊಳ್ಳಲು 15, 20 ಕಿಲೋಮೀಟರ್ ಹೋಗಬೇಕಾಗಿದೆ. ಇನ್ನು ಕೋವಿಡ್ ಎಂದ ಕೂಡಲೇ ಯಾರೂ ಆಟೋದವರು ಬರುವುದಿಲ್ಲ. ಹೀಗಾಗಿಯೇ ನಮ್ಮದೇ ತಂಡ ಇಂತಹವರ ನೆರವಿಗೆ ಧಾವಿಸಲಿದೆ. ಅಲ್ಲದೆ ಆಹಾರ ಪದಾರ್ಥಗಳು ಬೇಕಾದಲ್ಲಿ ಒದಗಿಸಲಿದೆ ಎಂದರು.

    ನಟಿ ಹರ್ಷಿಕಾ ಪೂಣಚ್ಚ, ಕೊಡಗಿನಲ್ಲಿ ನೆರೆ ಆಗುತ್ತಿದ್ದಂತೆ ಫೀಡ್ ಕರ್ನಾಟಕ ಆರಂಭಿಸಿದ್ದೇವೆ. ಕೊಡಗಿನ ಜನರಿಗೆ ಔಷಧಿ ಅಗತ್ಯ ಇರುವುದರಿಂದ ಸೇವೆಯನ್ನು ಒದಗಿಸಲಿದ್ದೇವೆ ಎಂದು ಹೇಳಿದ್ದಾರೆ.

  • ಅಜೀಂ ಪ್ರೇಮ್ ಜೀ ಫೌಂಡೇಶನ್‍ನಿಂದ 6 ಸಾವಿರ ಬಡ ಕುಟುಂಬಕ್ಕೆ ಫುಡ್ ಕಿಟ್

    ಅಜೀಂ ಪ್ರೇಮ್ ಜೀ ಫೌಂಡೇಶನ್‍ನಿಂದ 6 ಸಾವಿರ ಬಡ ಕುಟುಂಬಕ್ಕೆ ಫುಡ್ ಕಿಟ್

    – ಕಿಟ್‍ಗಳ ವಿತರಣೆಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಚಾಲನೆ
    – ವಿಜಯಪುರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ

    ಯಾದಗಿರಿ/ವಿಜಯಪುರ: ಯಾದಗಿರಿ ಜಿಲ್ಲೆಯಲ್ಲಿ ಸುಮಾರು 6 ಸಾವಿರ ಬಡಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ಗಳನ್ನು ಅಜೀಂ ಪ್ರೇಮ್ ಜೀ ಫೌಂಡೇಶನ್ ವತಿಯಿಂದ ವಿತರಿಸಲಾಗುತ್ತಿದ್ದು, ಈ ವಿತರಣೆಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಚಾಲನೆ ನೀಡಿದರು.

    ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಫಲಾನುಭವಿಯೊಬ್ಬರಿಗೆ ಫುಡ್‍ಕಿಟ್ ವಿತರಿಸುವ ಮೂಲಕ ಅವರು ಜಿಲ್ಲಾಧಿಕಾರಿಗಳು ಫೌಂಡೇಶನ್‍ನ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊರೊನಾ 2ನೇ ಅಲೆಯ ವಿಪತ್ತಿನ ಸಮಯದಲ್ಲಿ ತೊಂದರೆಗೆ ಒಳಗಾಗಿದ್ದ ಕುಟುಂಬಗಳಿಗೆ ಆಹಾರಧಾನ್ಯಗಳ ಕಿಟ್ ವಿತರಿಸುವ ಮೂಲಕ ಅಜೀಂ ಪ್ರೇಮ್ ಜೀ ಫೌಂಡೇಶನ್ ನೆರವಿನ ಹಸ್ತ ಚಾಚಿದೆ.

    ಯಾದಗಿರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಡಕುಟುಂಬಗಳು ಅತೀವ ಸಂಕಷ್ಟಕ್ಕೆ ಒಳಗಾಗಿವೆ, ಇಂತಹ ಕುಟುಂಬಗಳನ್ನು ಅಜೀಂ ಪ್ರೇಮ್ ಜೀ ಫೌಂಡೇಶನ್ ಸರ್ಕಾರಿ ಶಾಲಾ ಶಿಕ್ಷಕರ ಸಹಾಯದಿಂದ ಗುರುತಿಸಿ ಅವರ ಮನೆ ಬಾಗಿಲಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದೆ.

    ವಿಜಯಪುರದಲ್ಲಿಯೂ ಆಹಾರ ಕಿಟ್ ವಿತರಣೆ:
    ವಿಜಯಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಜೀಂ ಪ್ರೇಮ್ ಜೀ ಫೌಂಡೇಶನ್ ನೀಡಿದ ಆಹಾರ ಕಿಟ್ ವಿತರಣೆ ಮಾಡಿದರು. ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಆಹಾರ ಕಿಟ್ ವಿತರಣೆ ಮಾಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಪುಡ್ ಕಿಟ್ ವಿತರಿಸಿದ ಸಚಿವೆ ಶಶಿಕಲಾ ಜೊಲ್ಲೆ ಒಟ್ಟು 1,752 ಜನರಿಗೆ ಆಹಾರ ಕಿಟ್ ವಿತರಿಸಿದರು.

    10 ಕೆ.ಜಿ ಅಕ್ಕಿ, 5 ಗೋಧಿ ಹಿಟ್ಟು, 1 ಕೆಜಿ ಸಕ್ಕರೆ, ಟೀ ಪುಡಿ, ಖಾರದ ಪುಡಿ, ಗರಂ ಮಸಾಲಾ, ಎಣ್ಣೆ, ಬೇಳೆ ಸೇರಿದಂತೆ 1 ಸಾವಿರ ಬೆಲೆಯ ಆಹಾರ ಕಿಟ್ ಇದಾಗಿದೆ.

  • ಸಿನಿಮಾ ಪೋಷಕ ಕಲಾವಿದರಿಗೆ ಸಬ್ಸಿಡಿ ದರದಲ್ಲಿ ಮನೆ ಹಂಚಿಕೆ: ಡಿಸಿಎಂ

    ಸಿನಿಮಾ ಪೋಷಕ ಕಲಾವಿದರಿಗೆ ಸಬ್ಸಿಡಿ ದರದಲ್ಲಿ ಮನೆ ಹಂಚಿಕೆ: ಡಿಸಿಎಂ

    – ಆದ್ಯತಾ ಗುಂಪಿನಲ್ಲಿ ಕಲಾವಿದರಿಗೂ ಲಸಿಕೆ
    – ವೈಯಕ್ತಿಕವಾಗಿ ಸಹ ಧನ ಸಹಾಯ

    ಬೆಂಗಳೂರು: ಆರ್ಥಿಕವಾಗಿ ಸಂಕಷ್ಟದಲ್ಲಿರುವ ಚಿತ್ರರಂಗದ ಪೋಷಕ ಕಲಾವಿದರಿಗೆ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಗೃಹ ನಿರ್ಮಾಣ ಯೋಜನೆಯಡಿ ಸಬ್ಸಿಡಿ ದರದಲ್ಲಿ ಮನೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.

    ಚಿತ್ರರಂಗದ ಪೋಷಕ ಕಲಾವಿದರಿಗೆ ಭರತ್‍ಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಫುಡ್ ಕಿಟ್ ವಿತರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮನೆ ಅಗತ್ಯ ಇರುವ ಕಲಾವಿದರು ಅರ್ಜಿ ಹಾಕಬಹುದು. ತಕ್ಷಣವೇ ಅಂಥ ಕಲಾವಿದರಿಗೆ ಕಡಿಮೆ ದರದಲ್ಲಿ ಮನೆ ಹಂಚಿಕೆ ಮಾಡಲಾಗುವುದು ಎಂದರು.

    ಇತ್ತೀಚೆಗೆ ಪ್ರಕಟಿಸಲಾದ ಪ್ಯಾಕೇಜ್‍ನಲ್ಲಿ ಕಲಾವಿದರಿಗೆ 3,000 ಕೊಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಅದರಲ್ಲಿ ಚಿತ್ರರಂಗದ ಪೋಷಕ ಕಲಾವಿದರೂ ಸೇರಿದ್ದಾರಾ ಇಲ್ಲವಾ ಎಂಬ ಬಗ್ಗೆ ಗೊಂದಲವಿದೆ. ಚಿತ್ರರಂಗದ ಕಲಾವಿದರಿಗೂ ಆ ಹಣ ಸಿಗುವ ಬಗ್ಗೆ ಕನ್ನಡ ಮತ್ತು ಸಂಸ್ಕೃತ ಇಲಾಖೆ ಕ್ರಮ ವಹಿಸುವ ಕುರಿತು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

    ಪೋಷಕ ಕಲಾವಿದರನ್ನು ಆದ್ಯತೆಯ ಗುಂಪು ಎಂದು ಪರಿಗಣಿಸಿ ಅವರಿಗೂ ವ್ಯಾಕ್ಸಿನೇಷನ್ ನೀಡಲಾಗುವುದು. ಈ ಬಗ್ಗೆ ಕಲಾವಿದರ ಪಟ್ಟಿ ನೀಡುವಂತೆ ಕೇಳಲಾಗಿದೆ. ಅಲ್ಲದೆ ಈ ಫುಡ್ ಕಿಟ್ ಪಡೆಯುತ್ತಿರುವ ಎಲ್ಲ ಕಲಾವಿದರಿಗೆ ವೈಯಕ್ತಿಕವಾಗಿ ತಲಾ 1,000 ರೂ. ಚೆಕ್ ನೀಡುವುದಾಗಿ ಇದೇ ವೇಳೆ ಡಿಸಿಎಂ ಹೇಳಿದರು.

    ಸಾವಿನ ಲೆಕ್ಕ ಮುಚ್ಚಿಡುತ್ತಿಲ್ಲ
    ಸರ್ಕಾರ ಕೋವಿಡ್ ಸಾವಿನ ಲೆಕ್ಕವನ್ನು ಮುಚ್ಚಿಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಅರೋಪ ಅಸತ್ಯದಿಂದ ಕೂಡಿದೆ. ಪ್ರತಿ ಸೋಂಕಿತನ ಬಗ್ಗೆಯೂ ಮಾಹಿತಿ ಇದೆ. ಯಾರಾದರೂ ಸಾವನ್ನಪ್ಪಿದರೆ ಆ ಮಾಹಿತಿಯೂ ವಿವಿಧ ಹಂತಗಳಲ್ಲಿ ದಾಖಲಾಗುತ್ತಿದೆ. ಇದೆಲ್ಲವನ್ನು ಬಹಳ ವ್ಯವಸ್ಥಿತವಾಗಿ ಮಾಡಲಾಗುತ್ತಿದ್ದು, ಸಿದ್ದರಾಮಯ್ಯ ಅವರು ಮಾಡಿರುವ ಆರೋಪದಲ್ಲಿ ಹುರಳಿಲ್ಲ. ಜನರಲ್ಲಿ ಗೊಂದಲ ಉಂಟು ಮಾಡುವುದು ಬೇಡ ಎಂದು ಡಾ.ಅಶ್ವಥ್ ನಾರಾಯಣ್ ತಿಳಿಸಿದರು.

    ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೂ ಲಸಿಕೆ ಅಭಾವ ಇದೆ ಎನ್ನುವುದು ನಿಜ. ಆದರೆ ಸರ್ಕಾರ ಉತ್ಪಾದಕರಿಂದ ಲಸಿಕೆ ಪಡೆದು ಜನರಿಗೆ ನೀಡಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಹಂತ ಹಂತವಾಗಿ ಲಭ್ಯವಾಗುತ್ತಿರುವ ಲಸಿಕೆಯನ್ನು ಆಗಿಂದಾಗ್ಗೆ ಕೊಡಲಾಗುತ್ತಿದೆ. ಆದ್ಯತೆಯ ಮೇರೆಗೆ ಯಾರಿಗೆ ಕೋಡಬೇಕೋ ಅವರಿಗೆ ಕೊಡಲಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಹಿರಿಯ ಕಲಾವಿದರಾದ ಹೊನ್ನವಳ್ಳಿ ಕೃಷ್ಣ, ಮೀಸೆ ಅಂಜನಪ್ಪ, ಉಮೇಶ್ ಹೆಗಡೆ, ಡಿಂಗ್ರಿ ನಾಗರಾಜ್, ಸಿತಾರಾ ಹಾಗೂ ಟ್ರಸ್ಟ್‍ನ ಭರತ್ ಗೌಡ, ನಟರಾದ ಗಣೇಶ್ ರಾವ್ ಕೆಸರ್ಕಾರ್, ಕೆಂಪೇಗೌಡ ಫುಡ್ ಕಿಟ್ ವ್ಯವಸ್ಥೆ ಮಾಡಿದ್ದರು. ಡಿಸಿಎಂ ಅವರು ಸಾಂಕೇತಿಕವಾಗಿ 30 ಕಲಾವಿದರಿಗೆ ಕಿಟ್ ವಿತರಣೆ ಮಾಡಿದ್ದು, ಉಳಿದ 200 ಕಿಟ್‍ಗಳನ್ನು ಕಲಾವಿದರ ಮನೆಗೆ ತಲುಪಿಸಲಾಗುವುದು ಎಂದು ಭರತ್ ಗೌಡ ಮಾಹಿತಿ ನೀಡಿದರು.

  • ದಾವಣಗೆರೆ ಪೊಲೀಸರಿಂದ ರಂಜಾನ್ ಹಬ್ಬಕ್ಕೆ ಫುಡ್ ಕಿಟ್ ವಿತರಣೆ

    ದಾವಣಗೆರೆ ಪೊಲೀಸರಿಂದ ರಂಜಾನ್ ಹಬ್ಬಕ್ಕೆ ಫುಡ್ ಕಿಟ್ ವಿತರಣೆ

    ದಾವಣಗೆರೆ: ರಂಜಾನ್ ಹಬ್ಬಕ್ಕೆ ದಾವಣಗೆರೆ ಪೊಲೀಸರು 50ಕ್ಕೂ ಹೆಚ್ಚು ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ ಮಾಡಿದ್ದಾರೆ.

    ಲಾಕ್‍ಡೌನ್ ನಿಂದ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಜನರಿಗೆ ಒಂದೊತ್ತಿನ ಊಟಕ್ಕೂ ಸಹ ಕಷ್ಟವಾಗುತ್ತದೆ. ರಂಜಾನ್ ಹಬ್ಬ ಬಂದಿದ್ದು, ಕೂಲಿ ಮಾಡುವ ಜನರು ಸಾಕಷ್ಟು ತೊಂದರೆ ಪಡುವಂತಾಗಿದೆ. ಇವರ ಕಷ್ಟವನ್ನು ನೋಡಿದ ದಾವಣಗೆರೆಯ ಅಜಾದ್ ನಗರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಶೈಲಜಾ ತಮ್ಮ ಸ್ವಂತ ಖರ್ಚಿನಲ್ಲಿ 50ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಮಾಡಿದರು.

    ಅಜಾದ್ ನಗರ, ಭಾಷಾ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಕೂಲಿ ಮಾಡಿ ಜೀವನ ನಡೆಸುವ ಜನರೇ ಜಾಸ್ತಿ. ಈಗ ರಂಜಾನ್ ಹಬ್ಬ ಬಂದಿದ್ದರಿಂದ ಕೂಲಿ ಇಲ್ಲದೆ ಹಬ್ಬವನ್ನು ಆಚರಣೆ ಮಾಡಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡ ಪಿಎಸ್‍ಐ ಶೈಲಜಾ ರಂಜಾನ್ ಹಬ್ಬಕ್ಕೆ ಬೇಕಾಗುವ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಿದರು.

    ಪೊಲೀಸ್ ಅಧಿಕಾರಿಗಳ ಮೂಲಕ ಐವತ್ತಕ್ಕೂ ಹೆಚ್ಚು ಜನರಿಗೆ ಕಿಟ್ ವಿತರಣೆ ಮಾಡಿದರು. ಅಜಾದ್ ನಗರ ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶಂಸೆ ವ್ಯಕ್ತವಾಗಿದೆ.

  • ಹುಳುಬಿದ್ದ ಆಹಾರ ಕಿಟ್ ಹಂಚಿಕೆ – ಶಾಸಕ ಶಿವನಗೌಡ ನಾಯಕ್ ಮೇಲೆ ಆರೋಪ

    ಹುಳುಬಿದ್ದ ಆಹಾರ ಕಿಟ್ ಹಂಚಿಕೆ – ಶಾಸಕ ಶಿವನಗೌಡ ನಾಯಕ್ ಮೇಲೆ ಆರೋಪ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದಲ್ಲಿ ಶಾಸಕ ಶಿವನಗೌಡ ನಾಯಕ್ ವಿತರಿಸಿದ ಆಹಾರ ಕಿಟ್‍ನಲ್ಲಿ ಹುಳು, ನುಸಿ ಪತ್ತೆಯಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಲಾಕ್ ಡೌನ್ ಸಂದರ್ಭದಲ್ಲಿ ಹಟ್ಟಿ ಚಿನ್ನದಗಣಿ ಕಂಪನಿ ಬಡವರಿಗೆ ವಿತರಿಸಲು ನೀಡಿದ್ದ ಫುಡ್ ಕಿಟ್‍ಗಳನ್ನ ಹಂಚಲಾಗಿದ್ದು ಇದರಲ್ಲಿ ಹುಳು ಪತ್ತೆಯಾಗಿವೆ.

    ತಹಶೀಲ್ದಾರರ ಮುಖಾಂತರ ಬಡವರಿಗೆ ಹಂಚಿಕೆ ಮಾಡಲು ಕೊಟ್ಡಿದ್ದ 2 ಸಾವಿರ ಫುಡ್ ಕಿಟ್‍ನನ್ನು ಲಾಕ್ ಡೌನ್ ಸಂದರ್ಭದಲ್ಲಿ ವಿತರಿಸದೇ ಶನಿವಾ ಸ್ವತಃ ದೇವದುರ್ಗ ಶಾಸಕ ಶಿವನಗೌಡ ನಾಯಕ್ ವಿತರಿಸಿದ್ದರು. ಶಾಸಕ ಶಿವನಗೌಡ ವಿತರಿಸಿದ ಫುಡ್ ಕಿಟ್‍ಗಳಲ್ಲಿ ಹುಳು, ನುಸಿ ಪತ್ತೆಯಾಗಿದ್ದು, ಧಾನ್ಯಗಳು ಉಂಡೆಯಾಗಿದ್ದು ಬಳಸಲು ಯೋಗ್ಯವಾಗಿಲ್ಲದ್ದಾಗಿದೆ.

    ಹಾಳಾಗಿರುವ ಪದಾರ್ಥಗಳನ್ನು ವಿತರಣೆ ಮಾಡಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಆಹಾರ ಕಿಟ್‍ನ್ನು ಮನೆಗೆ ತಂದು ನೋಡಿದಾಗ ಹಾಳಾದ ಪದಾರ್ಥಗಳನ್ನ ಕಂಡು ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ರೇಷನ್ ಕೊಡುವಂತೆ ಮನವಿ – ಫುಡ್ ಕಿಟ್ ನೀಡೋಕೆ ಹೋದವನನ್ನೇ ಮದ್ವೆಯಾದ್ಳು

    ರೇಷನ್ ಕೊಡುವಂತೆ ಮನವಿ – ಫುಡ್ ಕಿಟ್ ನೀಡೋಕೆ ಹೋದವನನ್ನೇ ಮದ್ವೆಯಾದ್ಳು

    – ಮೂರು ಮದ್ವೆಯಾಗಿದ್ರೂ ಯುವಕನಿಗೆ ಬ್ಲ್ಯಾಕ್‍ಮೇಲ್
    – ಲಾಕ್‍ಡೌನ್ ನಲ್ಲಿ ನಾಲ್ಕನೇ ಮದ್ವೆ

    ಭೋಪಾಲ್: ಲಾಕ್‍ಡೌನ್ ನಲ್ಲಿ ಬಡವರಿಗೆ ಪಡಿತರ ವಿತರಿಸುತ್ತಿದ್ದ ಯುವಕನನ್ನ ಮೋಸದಿಂದ ಮಹಿಳೆಯೊಬ್ಬರು ಮದುವೆಯಾಗಿರುವ ಘಟನೆ ಮಧ್ಯ ಪ್ರದೇಶದ ಭೋಪಾಲ್ ನಗರದ ಜಹಾಂಗೀರಬಾದ್ ನಲ್ಲಿ ನಡೆದಿದೆ.

    ಸಂತ್ರಸ್ತ ಯುವಕ ಲಾಕ್‍ಡೌನ್ ಸಮಯದಲ್ಲಿ ಬಡವರಿಗೆ ಆಹಾರ ವಿತರಣೆ ಮಾಡುತ್ತಿದ್ದನು. ಒಂದು ದಿನ ಯುವಕನಿಗೆ ಕರೆ ಮಾಡಿದ ಮಹಿಳೆ, ತನಗೆ ರೇಷನ್ ನೀಡುವಂತೆ ಮನವಿ ಮಾಡಿಕೊಂಡಿದ್ದಳು. ಫುಡ್ ಕಿಟ್ ತೆಗೆದುಕೊಂಡ ಯುವಕ ಮಹಿಳೆ ಮನೆಗೆ ಹೋಗಿದ್ದನು. ಈ ವೇಳೆ ಮಹಿಳೆ ಆತನ ಜೊತೆ ಕೆಲ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾಳೆ.

    ಅದೇ ಫೋಟೋಗಳನ್ನು ತೋರಿಸಿ ಯುವಕನಿಗೆ ಮಹಿಳೆ ಬ್ಲ್ಯಾಕ್‍ಮೇಲ್ ಮಾಡಿ ತನ್ನನ್ನು ಮದುವೆಯಾಗುವಂತೆ ಒತ್ತಡ ಹಾಕಿದ್ದಾಳೆ. ಮದುವೆಯಾಗದಿದ್ರೆ ಪೊಲೀಸ್ ಠಾಣೆಯಲ್ಲಿ ನಿನ್ನ ವಿರುದ್ಧ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಒತ್ತಡದಲ್ಲಿ ಸಿಲುಕಿದ ಯುವಕ ಆಕೆಯನ್ನ ಮದುವೆಯಾಗಿದ್ದಾನೆ. ಕೆಲ ದಿನಗಳ ನಂತರ ಮಹಿಳೆ ಮೂರು ಮದುವೆಯಾಗಿರುವ ವಿಷಯ ಯುವಕನಿಗೆ ತಿಳಿದಿದೆ.

    ಹಣಕ್ಕಾಗಿ ಮಹಿಳೆ ತನ್ನನ್ನು ಮದುವೆಯಾಗಿರುವ ವಿಷಯ ಸಂತ್ರಸ್ತನಿಗೆ ತಿಳಿದಿದೆ. ಆದ್ರೂ ಯುವಕ ಮರ್ಯಾದೆಗೆ ಹೆದರಿಗೆ ಯುವಕ ಆಕೆಗೆ ಹಣ ನೀಡಿದ್ದಾನೆ. ಮಹಿಳೆ ಹಣ ನೀಡಲು ತನ್ನ ಅಂಗಡಿ ಸಹ ಒತ್ತೆ ಇಟ್ಟಿದ್ದಾನೆ. ಮಹಿಳೆ ಕಿರುಕುಳದಿಂದ ಬೇಸತ್ತ ಯುವಕ ಆಕೆಯಿಂದ ಬಿಡುಗಡೆ ಪಡೆಯಲು ಕಾನೂನು ತಜ್ಞರ ಸಲಹೆ ಪಡೆದುಕೊಂಡಿದ್ದಾನೆ.

    ಡಿಐಜಿ ಮತ್ತು ಪೊಲೀಸರ ಮುಂದೆಯೂ ಯುವಕ ನಡೆದ ಘಟನೆ ವಿವರಿಸಿದ್ದಾನೆ. ಆದ್ರೆ ಯುವಕನ ಬಳಿ ಯಾವುದೇ ದಾಖಲೆಗಳು ಇರದ ಹಿನ್ನೆಲೆ ಪ್ರಕರಣ ದಾಖಲಾಗಿರಲಿಲ್ಲ. ಇದೀಗ ಜಿಲ್ಲಾಧಿಕಾರಿಗಳ ಕಚೇರಿಯ ಸೂಚನೆ ಮೇರೆಗೆ ಮಹಿಳೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬ್ಲಾಕ್‍ಮೇಲ್ ಹಣದಲ್ಲಿ ಪಡಿತರ ವಿತರಿಸಿ ಫೋಟೋಗೆ ಪೋಸ್ ಕೊಟ್ಟ ಬಿಜೆಪಿ ಸಂಸದನ ಪುತ್ರ

    ಬ್ಲಾಕ್‍ಮೇಲ್ ಹಣದಲ್ಲಿ ಪಡಿತರ ವಿತರಿಸಿ ಫೋಟೋಗೆ ಪೋಸ್ ಕೊಟ್ಟ ಬಿಜೆಪಿ ಸಂಸದನ ಪುತ್ರ

    -ಸಂಸದರ ಪುತ್ರನ ಬ್ಲಾಕ್‍ಮೇಲ್ ಆಡಿಯೋ ಔಟ್
    -ವರ್ಗಾವಣೆ ಮಾಡದೇ ಇರಲು ಲಕ್ಷ ಲಕ್ಷ ಬೇಡಿಕೆಯ ಆರೋಪ

    ಕೊಪ್ಪಳ: ಕೊರೊನಾ ಮಹಾಮಾರಿಯಿಂದ ಸಾಕಷ್ಟು ಬಡ ಕುಟುಂಬಗಳು, ಕೂಲಿ ಕಾರ್ಮಿಕರು, ನಿರ್ಗತಿಕರು ತುತ್ತು ಅನ್ನಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತವರ ಸಹಾಯಕ್ಕಾಗಿ ಸಾಕಷ್ಟು ಸಂಘ ಸಂಸ್ಥೆಗಳು, ಸಾರ್ವಜನಿಕರು ಸ್ವಯಪ್ರೇರಿತರಾಗಿ ಮುಂದೆ ಬಂದು ತಮ್ಮ ತಮ್ಮ ಸ್ವಂತ ಖರ್ಚಿನಲ್ಲಿ ಸಹಾಯ ಮಾಡಿ ಬಡವರ ಮತ್ತು ನಿರ್ಗತಿಕರಿಗೆ ಹಸಿವು ನೀಗಿಸಿದ್ದಾರೆ. ಆದರೆ ಕೊಪ್ಪಳ ಸಂಸದರ ಪುತ್ರ ಬಡವರಿಗೆ ಸಹಾಯದ ಹೆಸರಿನಲ್ಲಿ ಅಧಿಕಾರಿಗಳಿಗೆ ಬ್ಲಾಕ್ ಮೇಲ್ ಮಾಡಿ, ಅವರಿಂದ ತೆಗೆದುಕೊಂಡ ಸಾಮಗ್ರಿಗಳನ್ನ ಬಡವರಿಗೆ ಹಂಚಿ ಪೋಸ್ ಗಿಟ್ಟಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ಕೊಪ್ಪಳ ಸಂಸದ ಕರಡಿ ಸಂಗಣ್ಣರವರ ಪುತ್ರ ಅಮರೇಶ್ ಕರಡಿ ಫೋಟೋಗೆ ಪೋಸ್ ಕೊಟ್ಟ ಲೀಡರ್. ರಾಜ್ಯದಲ್ಲಿ ಯಾವಾಗ ಬಿಜೆಪಿ ಸರ್ಕಾರ ಬಂತೋ ಅಂದಿನಿಂದ ಕೊಪ್ಪಳದಲ್ಲಿ ಸಂಸದ ಕರಡಿ ಸಂಗಣ್ಣ ಪುತ್ರ ಅಮರೇಶ್ ಕರಡಿ ಪ್ರಭಾವ ಜೋರಾಗಿಯೇ ನಡೆಯುತ್ತಿದೆ. ಜಿಲ್ಲೆಯಲ್ಲಿ ಅಮರೇಶ್ ಕರಡಿ ತಾವೇ ಜಿಲ್ಲಾ ಉಸ್ತುವಾರಿ ಮಂತ್ರಿ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ.

    ಲಾಕ್‍ಡೌನ್ ವೇಳೆ ಬಡವರಿಗೆ ನೀಡಿದ ಅಹಾರದ ಕಿಟ್ ವಿತರಣೆಯಲ್ಲಿ ಭಾರಿ ಗೋಲ್‍ಮಾಲ್ ಮಾಡಿದ್ದಾರೆ. ಬಡವರಿಗೆ ನೀಡಿದ ದಿನಸಿ ಕಿಟ್ ವಿತರಣೆ ಮಾಡಿದ್ದು, ಜಿಲ್ಲೆಯ ಅಧಿಕಾರಿಗಳ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಂದ ವಸೂಲಿ ಮಾಡಿ ತಮ್ಮ ಫೋಟೋ ಅಂಟಿಸಿಕೊಂಡು ಫೋಸ್ ನೀಡಿದ್ದಾರೆ ಎಂಬ ಆರೋಪಕ್ಕೆ ಪೂರಕ ಎಂಬಂತೆ ಅಮರೇಶ್ ಕರಡಿ ಮಾತನಾಡಿದ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕೊಪ್ಪಳ ಡಿವೈಎಸ್ಪಿ ವೆಂಕಟಪ್ಪ ನಾಯಕ

    ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿ ಲಾಕ್‍ಡೌನ್ ಇದೆ. ನಿಮ್ಮಿಂದ ಟನ್ ಗಟ್ಟಲೆ ಅಕ್ಕಿ ಪೂರೈಸಿ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಕೊಪ್ಪಳ ಡಿವೈಎಸ್ಪಿ, ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಣ ಮತ್ತು ಸಾಮಗ್ರಿಗಳನ್ನು ನೀಡಿದ್ದಾರೆ. ನೀವು ಕೂಡ ನೀಡಬೇಕು ಎಂದು ಆಡಿಯೋದಲ್ಲಿ ಮಾತನಾಡಿದ್ದಾರೆ.

    50 ಟನ್ ಅಕ್ಕಿಯ ಹಣವನ್ನು ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್ ಅವರು ಅಮರೇಶ್ ಕರಡಿಗೆ ನೀಡಿದ್ದಾರೆ. ನಂತರ ಡಿವೈಎಸ್ಪಿಯಾಗಿ ಗಂಗಾವತಿಯಲ್ಲಿ ಮುಂದುವರಿಯಬೇಕು ಅಂದ್ರೆ ಹಣ ನೀಡಬೇಕು ಎನ್ನುವ ಆರೋಪ ಕೇಳಿ ಬಂದಿದೆ. ರಾಜ್ಯ ಸರ್ಕಾರ ಡಿವೈಎಸ್ಪಿ ಗಳ ಮಾಡಿದ ವರ್ಗಾವಣೆ ಯಲ್ಲಿ ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್ ಬಿ.ಪಿ ಹೆಸರು ಪ್ರಕಟಗೊಂಡಿದ್ದು ಇದಕ್ಕೆ ಪುಷ್ಟಿ ನೀಡುವಂತಿದೆ ಎಂಬ ಮಾತು ಈಗ ಪೊಲೀಸ್‌ ವಲಯದಿಂದ ಕೇಳಿಬಂದಿದೆ.

    ಕೊಪ್ಪಳ ಡಿವೈಎಸ್ಪಿ ವೆಂಕಟಪ್ಪ ನಾಯಕ ಕೂಡ ಅವಧಿ ಒಂದು ವರ್ಷ ಮುಗಿದಿದೆ. ಆದರೆ ಕೊಪ್ಪಳ ಸಂಸದರ ಪುತ್ರನ ಜೊತೆ ಉತ್ತಮ ಸಂಬಂಧ ಇರುವ ಕಾರಣಕ್ಕೆ ಅವರು ಕೊಪ್ಪಳ ಡಿವೈಎಸ್ಪಿಯಾಗಿ ಮುಂದುವರಿದಿದ್ದಾರೆ ಎಂದು ಜಿಲ್ಲೆಯಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ವರ್ಗಾವಣೆ ತಡೆಯಲು ಅಮರೇಶ್ ಕರಡಿ ಡಿವೈಎಸ್ಪಿ ಚಂದ್ರಶೇಖರ್ ಬಳಿ 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂಬ ಗಂಭೀರ ಆರೋಪ ಕೂಡ ಕೇಳಿ ಬರುತ್ತಿದೆ.

    ಈಗ ಗಂಗಾವತಿ ಡಿವೈಎಸ್ಪಿ ವರ್ಗಾವಣೆ ಗೊಂಡಿದ್ದು, ಅವರೊಂದಿಗೆ ಲಾಕ್‍ಡೌನ್ ಅವಧಿಯಲ್ಲಿ ಅಕ್ಕಿ ಪೂರೈಸುವಂತೆ ಪೀಡಿಸಿದ ಆಡಿಯೋ ರಿವೀಲ್ ಆಗಿದ್ದು, ಎಲ್ಲರನ್ನ ಅನುಮಾನ ಮೂಡಿಸುವಂತೆ ಮಾಡಿದೆ. ಡಿವೈಎಸ್ಪಿ ಈಗಾಗಲೇ ಒಂದು ವರ್ಷ ಗಂಗಾವತಿಯಲ್ಲಿ ಮುಗಿಸಿದ್ದಾರೆ. ಸರ್ಕಾರ ಆದೇಶ ಒಂದು ವರ್ಷದ ನಂತರ ಅಧಿಕಾರಿಯನ್ನು ವರ್ಗಾವಣೆ ಮಾಡಬಹುದಾಗಿದೆ. ಅಲ್ಲಿಯೇ ಮುಂದುವರಿಯಬೇಕು ಅಂದರೆ ಜನಪ್ರತಿನಿಧಿಗಳ ಮಾತು ಕೇಳಲೇಬೇಕು. ಇಲ್ಲ ಅಂದ್ರೆ ಅವರ ತಮಗೆ ಯಾರು ಅನುಕೂಲ ಆಗುತ್ತಾರೆ ಅವರನ್ನು ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕೊಪ್ಪಳ ಸಂಸದನ ಪುತ್ರನ  ದರ್ಬಾರ್ ಜಾಸ್ತಿಯಾಗಿದೆ ಎನ್ನುವ ಮಾತುಗಳು ಈಗ ಹೆಚ್ಚಾಗಿ ಕೇಳಿ ಬರುತ್ತಿದೆ.

  • ಪಬ್ಲಿಕ್ ಟಿವಿಯಲ್ಲಿ ನೋವು ತೋಡಿಕೊಂಡ ಪದ್ಮಾವತಿಗೆ ಫುಡ್ ಕಿಟ್ ವಿತರಣೆ

    ಪಬ್ಲಿಕ್ ಟಿವಿಯಲ್ಲಿ ನೋವು ತೋಡಿಕೊಂಡ ಪದ್ಮಾವತಿಗೆ ಫುಡ್ ಕಿಟ್ ವಿತರಣೆ

    ಹುಬ್ಬಳ್ಳಿ: ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯ ಕಾರ್ಯಕ್ರಮದಲ್ಲಿ ಶುಕ್ರವಾರ ಹುಬ್ಬಳ್ಳಿಯ ಪದ್ಮಾವತಿಯವರು ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.

    ಆಹಾರವಿಲ್ಲದೇ ಜೀವನ ನಡೆಸುವಂತಾಗಿದೆ ಎಂದು ಪಬ್ಲಿಕ್ ಟಿವಿಯ ಕಾರ್ಯಕ್ರಮದ ಮೂಲಕ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಯುವ ಮುಖಂಡ ದೀಪಕ್ ನಾಯ್ಡು ಅವರು ಪದ್ಮಾವತಿಯವರಿಗೆ ಮನೆಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

    ಹುಬ್ಬಳ್ಳಿಯ ಆನಂದನಗರದಲ್ಲಿರುವ ಪದ್ಮಾವತಿಯವರ ಸ್ವಗೃಹಕ್ಕೆ ಭೇಟಿ ನೀಡಿದ ದೀಪಕ್ ನಾಯ್ಡು ಅವರು, ಅಕ್ಕಿ, ರವಾ, ಅವಲಕ್ಕಿ, ಬೆಳೆ, ಎಣ್ಣೆ, ತೊಗರಿಬೆಳೆ, ಸಕ್ಕರೆ ಚಹಾಪುಡಿ ಇರುವ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಈ ಮೂಲಕ ಮನೆಯ ಮಂತ್ರಾಲಯ ಕಾರ್ಯಕ್ರಮದಲ್ಲಿ ನೋವನ್ನು ತೋಡಿಕೊಂಡ ಮಹಿಳೆಯ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.