Tag: ಫುಟ್ ಪಾತ್

  • ಫುಟ್ ಪಾತ್ ಮೇಲೆ ನಿಂತಿದ್ದವರ ಮೇಲೆ ಹರಿದ ಲಾರಿ- ಮೂವರು ಸಾವು

    ಫುಟ್ ಪಾತ್ ಮೇಲೆ ನಿಂತಿದ್ದವರ ಮೇಲೆ ಹರಿದ ಲಾರಿ- ಮೂವರು ಸಾವು

    – ಇಬ್ಬರ ಸ್ಥಿತಿ ಚಿಂತಾಜನಕ, ಪಾನ್ ಶಾಪ್ ನಜ್ಜುಗುಜ್ಜು

    ಬಾಗಲಕೋಟೆ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಫುಟ್ ಪಾತ್ ಮೇಲೆ ನಿಂತಿದ್ದವರ ಮೇಲೆ ಹರಿದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ನಡೆದಿದೆ.

    ಕೆರೂರು ಪಟ್ಟಣದ ಲಕ್ಷ್ಮಣ ಹಾದಿಮನಿ (32), ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಮಾನಂದಪ್ಪ ಕರಿ (17) ಹಾಗೂ ಹುಬ್ಬಳ್ಳಿಯ ಪೂಜಾ ಹಳಪೇಟೆ (22) ಮೃತ ದುರ್ದೈವಿಗಳು. ಗದಗ ಜಿಲ್ಲೆ ನರಗುಂದದ ನಿವಾಸಿ ಮಂಜುಳಾ ಜವಳಿ (16) ಹಾಗೂ ಪ್ರಜ್ವಲ್ ಕೋಟಿ (16) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಮತ್ತೋರ್ವ ಗಾಯಾಳು ರಾಜೇಸಾಬ್ ಅಗಸಿಮನಿ ಅವರನ್ನು ಕೆರೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಲಾರಿ ಚಾಲಕ ಹುಬ್ಬಳ್ಳಿಯಿಂದ ಬಾಗಲಕೋಟೆಗೆ ವೇಗವಾಗಿ ಹೊರಟಿದ್ದ. ಆದರೆ ಕೆರೂರು ಪಟ್ಟಣದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಫುಟ್ ಪಾತ್‍ಗೆ ನುಗ್ಗಿದೆ. ಪರಿಣಾಮ ಲಾರಿ ಗುದ್ದಿದ ರಭಸಕ್ಕೆ ಕೆಪಿಟಿಸಿಎಲ್ ವಿದ್ಯುತ್ ಪ್ರಸರಣ ಕೇಂದ್ರದ ಕಂಪೌಂಡ್ ಒಡೆದು ಹೋಗಿದೆ. ಅಷ್ಟೇ ಅಲ್ಲದೆ ಪಾನ್‍ಶಾಪ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

    ಫುಟ್ ಪಾತ್ ಮೇಲೆ ಹಾಗೂ ಪಾನ್‍ಶಾಪ್ ಮುಂದೆ ನಿಂತಿದ್ದ ಕೆಲವರು ತಕ್ಷಣವೇ ಪರಾರಿಯಾಗಿದ್ದಾರೆ. ಆದರೆ ಲಾರಿ ಹರಿದು ಮೂರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ರಾಜೇಸಾಬ್ ಅಗಸಿಮನಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಲಾಗುತ್ತಿದೆ.

    ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕೆರೂರು ಪೊಲೀಸರು ಪರಿಶೀಲನೆ ನಡೆಸಿದರು. ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಆತನಿಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಘಟನೆಗೆ ಚಾಲಕನ ಅಜಾಗರೂಕತೆಯೇ ಕಾರಣ ಎನ್ನಲಾಗಿದೆ.

  • ಫುಟ್‍ಪಾತ್ ಮೇಲೆ ವಾಹನಗಳ ಹಾವಳಿ- ಬೀದಿಗಿಳಿದ ಹಿರಿಯ ನಾಗರಿಕರು

    ಫುಟ್‍ಪಾತ್ ಮೇಲೆ ವಾಹನಗಳ ಹಾವಳಿ- ಬೀದಿಗಿಳಿದ ಹಿರಿಯ ನಾಗರಿಕರು

    ಬೆಂಗಳೂರು: ನಗರದಲ್ಲಿ ಫುಟ್ ಪಾತ್ ಗಳ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಎಲ್ಲರೂ ನೋಡಿದ್ದೀವಿ. ಫುಟ್ ಪಾತ್ ಮೇಲೆ ನಡೆಯೋದಕ್ಕಿಂತ ರೋಡಲ್ಲೇ ನಡೆದು ಹೋಗಬಹುದೇನೋ ಅನ್ನುವ ಮಟ್ಟಿಗೆ ಫುಟ್ ಪಾತ್ ಅನ್ನು ದ್ವಿಚಕ್ರ ವಾಹನ ಸವಾರರು ಆಕ್ರಮಿಸಿಕೊಂಡಿರುತ್ತಾರೆ. ಆದರೆ ಇದನ್ನು ತಡೆಯಲು ವೃದ್ಧರಿಬ್ಬರು ಪಣ ತೊಟ್ಟಿದ್ದಾರೆ.

    ಹೌದು. ನಗರದ ಇಟ್ಟಮಡು ಜಂಕ್ಷನ್ ಬಳಿಯ ಅಕ್ಕಪಕ್ಕದ ಮನೆಯ ವೃದ್ಧರಾದ ಸುಬ್ರಮಣ್ಯಂ ಹಾಗೂ ಉಷಾ ಶ್ರೀಕಂಠನ್, ಪ್ರತಿ ದಿನ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಇಲ್ಲಿನ ಫುಟ್ ಪಾತ್ ಮೇಲೆ ವಾಹನ ಚಾಲನೆಯಿಂದಾಗಿ ವೃದ್ಧರು, ಮಕ್ಕಳು ಮತ್ತು ವಿದ್ಯಾರ್ಥಿಗಳು ಗಾಬರಿ ಒಳಗಾಗುತ್ತಿದ್ದರು. ಹೀಗಾಗಿ ಸವಾರರಿಗೆ ರೂಲ್ಸ್ ಬ್ರೇಕ್ ಮಾಡಿಬೇಡಿ ಎಂದು ಎಂದು ವೃದ್ಧರು ಮನವಿ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

    ಇಬ್ಬರು ವೃದ್ಧರು ಕೈಯಲ್ಲಿ ಒಂದು ಬೋರ್ಡ್ ಹಿಡಿದು, ಫುಟ್ ಪಾತ್ ಮೇಲೆ ಬರೋ ಗಾಡಿ ಸವಾರರಿಗೆ ಬುದ್ಧಿ ಹೇಳುತ್ತಿದ್ದಾರೆ. ಕೆಲವರು ಸರಿ  ಎಂದು ಹೋದರೆ ಇನ್ನೂ ಕೆಲವರು ಇವರನ್ನು ಛೇಡಿಸಿ ಹೋಗುತ್ತಾರೆ. ಅದರೂ ಸುಮಾರು ಮೂರು- ನಾಲ್ಕು ಗಂಟೆಗಳ ಕಾಲ ರಸ್ತೆ ಬದಿಯ ಫುಟ್ ಪಾತ್ ಮೇಲೆ ನಿಂತು ನಿಯಮ ಪಾಲನೆ ಮಾಡುವಂತೆ ಬೈಕ್ ಸವಾರರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

    ಜಾಗೃತಿ ಮೂಡಿಸಲು ಕಾರಣವೇನು?:
    ಒಂದು ದಿನ ಇವರು ತಮ್ಮ ನಾಯಿ ಜೊತೆಗೆ ಫುಟ್ ಪಾತ್ ಮೇಲೆ ವಾಕ್ ಮಾಡುವಾಗ ದ್ವಿಚಕ್ರ ವಾಹನ ಟಚ್ ಆಗಿದೆ. ಸ್ವಲ್ವದರಲ್ಲೇ ಒಂದು ಅನಾಹುತ ತಪ್ಪಿದೆ. ಇದನ್ನು ಇಲ್ಲಿಗೆ ಬಿಡಬಾರದು ಎಂದು ಪೊಲೀಸರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನಾವೇ ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ತೀರ್ಮಾನಿಸಿ “ಟೂ ವೀಲರ್ಸ್ ಪ್ಲೀಸ್ ಯೂಸ್ ರೋಡ್ ನೋ ಫುಟ್ ಪಾತ್ “ಅನ್ನೊ ಬೋರ್ಡ್ ಹಿಡಿದುಕೊಂಡು ಗಂಟೆಗಳ ಕಾಲ ನಿಂತು ವಾಹನ ಸವಾರರಿಗೆ ಬುದ್ಧಿ ಹೇಳುತ್ತಿದ್ದಾರೆ. ಈ ಒಂದು ಘಟನೆಯೇ ವೃದ್ಧರು ಈ ವಯಸ್ಸಿನಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ.

    ಪರದೇಶಕ್ಕೆ ಹೋದಾಗ ನಮ್ಮವರೇ ನಿಯಮ ಪಾಲನೆ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲೇ ಈ ರೀತಿ ಮಾಡಿಲ್ಲ ಎಂದರೆ ಅದು ನಮ್ಮ ದೇಶಕ್ಕೆ ನಾವು ಮಾಡೋ ಅವಮಾನ. ಇನ್ನೂ ಕೆಲ ದಿನಗಳಲ್ಲೇ ನಮ್ಮ ಈ ಫುಟ್ ಪಾತ್ ಅನ್ನು ವೆಹಿಕಲ್ ಫ್ರೀ ಮಾಡುತ್ತೇವೆ ಎಂದು ವೃದ್ಧರು ಭರವಸೆ ನೀಡಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯೂ ಕೈ ಜೋಡಿಸಿದರೆ ಪಾದಚಾರಿಗಳಿಗೆ ಒಳಿತು ಮಾಡಿದಂತಾಗುತ್ತದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.

  • ಫುಟ್‍ ಪಾತಲ್ಲೇ ನಂದಿನಿ ಪಾರ್ಲರ್ ಇಟ್ಟ ಶಾಸಕರ ಪಿಎ

    ಫುಟ್‍ ಪಾತಲ್ಲೇ ನಂದಿನಿ ಪಾರ್ಲರ್ ಇಟ್ಟ ಶಾಸಕರ ಪಿಎ

    ಬೆಂಗಳೂರು: ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಪ್ರತಿನಿಧಿಸುವ ಬೆಂಗಳೂರಿನ ಯಲಹಂಕದಲ್ಲಿ ಫುಟ್‍ ಪಾತ್‍ ನಲ್ಲೇ ಅಂಗಡಿಗಳು ಉದ್ಭವವಾಗಿದೆ.

    ಡೈರಿ ಸರ್ಕಲ್ ಬಳಿಯಿರುವ ಪಾದಾಚಾರಿ ಮಾರ್ಗದಲ್ಲಿ ಶಾಸಕರ ಪಿಎ ಮಲ್ಲಿಕಾರ್ಜುನ್ ನಂದಿನಿ ಮಿಲ್ಕ್ ಪಾರ್ಲರ್ ತೆರೆದಿದ್ದಾರೆ. ಅದೇ ಫುಟ್ ಪಾತ್‍ನಲ್ಲಿ ಶುದ್ಧ ನೀರಿನ ಘಟಕ ಕೂಡ ಸ್ಥಾಪಿಸಿದ್ದಾರೆ. ನಿಯಮಗಳಿಗೆ ವಿರುದ್ಧವಾಗಿಯೇ ಸ್ವತಃ ಶಾಸಕರು ಮತ್ತು ಅಟ್ಟೂರು ವಾರ್ಡ್‍ನ ಕಾರ್ಪೋರೇಟರ್ ನೇತ್ರಾ ಪಲ್ಲವಿ ಅನುಮತಿ ದಯಪಾಲಿಸಿದ್ದಾರೆ.

    ಇವರ ಈ ಆಟದಿಂದಾಗಿ ರಸ್ತೆಯ ಪಕ್ಕದಲ್ಲಿ ಹೋಗೋಕೆ ಜಾಗವಿಲ್ಲದೇ ಜನಸಾಮಾನ್ಯರು ಒದ್ದಾಡುತ್ತಿದ್ದಾರೆ. ಆದರೆ ಘನವೆತ್ತ ಬಿಜೆಪಿ ಕಾರ್ಪೊರೇಟರ್ ಯಾಕ್ ಮೇಡಂ ಈ ರೀತಿ ಅಂದರೆ ಉತ್ತರಿಸೋಕೆ ಸಿದ್ಧರಿಲ್ಲ. ರಸ್ತೆಯಲ್ಲಿ ಓಡಾಡಲು ತುಂಬಾ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಟೆಂಪೋವನ್ನು ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಫುಟ್ ಪಾತ್ ಗೆ ನುಗ್ಗಿತು ಬಿಎಂಟಿಸಿ ಬಸ್!

    ಟೆಂಪೋವನ್ನು ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಫುಟ್ ಪಾತ್ ಗೆ ನುಗ್ಗಿತು ಬಿಎಂಟಿಸಿ ಬಸ್!

    ಬೆಂಗಳೂರು: ಟೆಂಪೋ ಒಂದನ್ನು ಓವರ್ ಟೇಕ್ ಮಾಡುವಾಗ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್ಸೊಂದು ಫುಟ್‍ ಪಾತ್‍ಗೆ ನುಗ್ಗಿದ ಘಟನೆ ಕನಕಪುರ ರಸ್ತೆಯ ಜರಗನಹಳ್ಳಿ ಸ್ಮಶಾನದ ಬಳಿ ನಡೆದಿದೆ.

    ಬಸ್ ಬನಶಂಕರಿಯಿಂದ ಹಾರೋಹಳ್ಳಿಗೆ ತೆರಳುತ್ತಿದ್ದ ವೇಳೆ ಟೆಂಪೋವನ್ನು ಓವರ್ ಟೇಕ್ ಮಾಡುವಾಗ ಈ ಘಟನೆ ಸಂಭವಿಸಿದೆ. ಬಸ್ಸಿನಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಬಸ್ ಚಾಲಕನ ಅತಿಯಾದ ವೇಗವೇ ಘಟನೆಗೆ ಕಾರಣ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ. ಸದ್ಯ ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಹಿಳಾ ವ್ಯಾಪಾರಿಯ ಜಡೆ ಹಿಡಿದು ಎಳೆದಾಡಿ, ಹಣ್ಣುಗಳನ್ನು ನೆಲ್ಲಕ್ಕೆ ಚೆಲ್ಲಿ ಎಎಸ್‍ಐ ದರ್ಪ- ವಿಡಿಯೋ

    ಮಹಿಳಾ ವ್ಯಾಪಾರಿಯ ಜಡೆ ಹಿಡಿದು ಎಳೆದಾಡಿ, ಹಣ್ಣುಗಳನ್ನು ನೆಲ್ಲಕ್ಕೆ ಚೆಲ್ಲಿ ಎಎಸ್‍ಐ ದರ್ಪ- ವಿಡಿಯೋ

    ಬಳ್ಳಾರಿ: ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ದರ್ಪ ದಬ್ಬಾಳಿಕೆಗೆ ಕಡಿವಾಣವೇ ಇಲ್ಲದಂತಾಗಿದೆ ಎನ್ನುವ ಸಾರ್ವಜನಿಕರ ಟೀಕೆ ಪುಷ್ಟಿ ಎನ್ನುವಂತೆ ಬೀದಿ ಬದಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬರ ಜಡೆ ಹಿಡಿದು ಎಳೆದಾಡಿ, ಹಣ್ಣುಗಳನ್ನು ನೆಲಕ್ಕೆ ಚೆಲ್ಲಿ ಮಹಿಳಾ ಎಎಸ್‍ಐಯೊಬ್ಬರು ದರ್ಪ ತೋರಿದ್ದಾರೆ.

    ಸೋಮವಾರ ಬಳ್ಳಾರಿಯ ಬೆಂಗಳೂರು ರಸ್ತೆಯಲ್ಲಿ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬರ ಜೊತೆ ಟ್ರಾಫಿಕ್ ಠಾಣೆಯ ಮಹಿಳಾ ಎಎಸ್‍ಐ ಸುವಾರ್ತಾ ಅವರು ದರ್ಪ ತೋರಿದ್ದಾರೆ.

    ಮಹಿಳಾ ವ್ಯಾಪಾರಿಯು ತಳ್ಳುಗಾಡಿಯಿಟ್ಟು ವ್ಯಾಪಾರ ಮಾಡುತ್ತಿದ್ದ ಪರಿಣಾಮ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತಿತ್ತು. ಈ ಹಿನ್ನೆಲೆಯಲ್ಲಿ ವ್ಯಾಪಾರಿ ಮತ್ತು ಎಎಸ್‍ಐ ನಡುವಿನ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಎಎಸ್‍ಐ ಆಕ್ರೋಶಗೊಂಡು ವ್ಯಾಪಾರಿಯ ಜಡೆ ಹಿಡಿದು ಎಳೆದಾಡಿದ್ದಾರೆ.

    ಮಹಿಳಾ ಎಎಸ್‍ಐ ದರ್ಪವನ್ನು ಸ್ಥಳೀಯರು ಮೊಬೈಲ್ ನಲ್ಲಿ ಚಿತ್ರಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

    https://www.youtube.com/watch?v=kUkTId_IaGY

  • ನಿವೃತ್ತಿ ಸಮಯದಲ್ಲಿ ಬಂದ 20 ಲಕ್ಷ ಹಣ ಕಿತ್ಕೊಂಡು ಅಪ್ಪನನ್ನೇ ಬೀದಿಗೆ ತಳ್ಳಿದ ನಿರ್ದಯಿ ಮಕ್ಕಳು

    ನಿವೃತ್ತಿ ಸಮಯದಲ್ಲಿ ಬಂದ 20 ಲಕ್ಷ ಹಣ ಕಿತ್ಕೊಂಡು ಅಪ್ಪನನ್ನೇ ಬೀದಿಗೆ ತಳ್ಳಿದ ನಿರ್ದಯಿ ಮಕ್ಕಳು

    ತುಮಕೂರು: ನಿವೃತ್ತಿ ಸಂದರ್ಭದಲ್ಲಿ ಬಂದ ಹಣ ಕಿತ್ತುಕೊಂಡು ವೃದ್ಧ ತಂದೆಯನ್ನು ಮಕ್ಕಳು ಬೀದಿಗೆ ತಳ್ಳಿರೋ ಅಮಾನವೀಯ ಘಟನೆ ತುಮಕೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಕೆಎಸ್‍ಆರ್‍ಟಿಸಿ ನಿವೃತ್ತ ನೌಕರರೊಬ್ಬರು ಮಕ್ಕಳಿಂದ ಮನೆ ಮಠ, ಪಿಂಚಣಿ ಹಣ ಎಲ್ಲವನ್ನೂ ಕಳೆದುಕೊಂಡು ಫುಟ್ ಪಾತ್ ನಲ್ಲೇ ಜೀವನ ಕಳೆಯುತ್ತಿದ್ದಾರೆ. ರಾಮಚಂದ್ರಪ್ಪ ಮಕ್ಕಳಿಂದ ದೌರ್ಜನ್ಯಕ್ಕೊಳಗಾಗಿ ಬೀದಿ ಪಾಲಾದವರು.

    ಕಳೆದ ಒಂದು ವಾರದಿಂದ ತುಮಕೂರಿನ ರೇಲ್ವೆ ನಿಲ್ದಾಣದ ಬಳಿಯ ಫುಟ್‍ಪಾತ್ ನಲ್ಲಿ ಮಲಗುತ್ತಿದ್ದಾರೆ. ದಾರಿ ಹೋಕರು, ತರಕಾರಿ ಮಾರುವವರು ಕೊಟ್ಟ ಹಣದಿಂದ ಊಟ ತಿಂಡಿ ಸೇವಿಸುತಿದ್ದಾರೆ. ಮೈಸೂರಿನ ಡಿಪೋ ನಂಬರ್ 2 ರಲ್ಲಿ ನಿರ್ವಾಹಕರಾಗಿ ಕೆಲಸ ಮಾಡಿದ್ದ ಇವರು ಐದು ವರ್ಷದ ಹಿಂದೆ ನಿವೃತ್ತಿ ಹೊಂದಿದ್ದಾರೆ. ಕೆಎಸ್‍ಆರ್‍ಟಿಸಿಯಲ್ಲಿ ಇವರ ದಾಖಲಾತಿ ಸಂಖ್ಯೆ-1926 ಆಗಿರುತ್ತದೆ.

    ನಿವೃತ್ತಿ ಸಂದರ್ಭದಲ್ಲಿ ಬಂದಂತಹ 20 ಲಕ್ಷ ರೂಪಾಯಿ ಹಾಗೂ ಪಿಂಚಣಿ ಹಣ ಬರುವ ದಾಖಲೆ ಎಲ್ಲವನ್ನೂ ಮಕ್ಕಳು ಕಿತ್ತುಕೊಂಡಿದ್ದಾರೆ ಎಂದು ರಾಮಚಂದ್ರಪ್ಪ ಹೇಳುತ್ತಾರೆ. ಮೈಸೂರಿನ ನಜರಾಬಾದ್ ನಿವಾಸಿಯಾದ ರಾಮಚಂದ್ರಪ್ಪ ಇದೀಗ ಕೆಲಸ ಹುಡುಕಿಕೊಂಡು ತುಮಕೂರಿಗೆ ಬಂದಿದ್ದಾರೆ.

    ಇವರು ಮೂಲತಃ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಕಲ್ಲಳ್ಳಿ ಗ್ರಾಮದವರಾಗಿದ್ದು, ಕೆಲಸದ ನಿಮಿತ್ತ ಮೈಸೂರಿಗೆ ಹೋದಾಗ ಮೈಸೂರಿನಲ್ಲೇ ಮನೆ ಕಟ್ಟಿಕೊಂಡು ನೆಲೆಸಿದ್ದರು ಎಂದು ಮಾಹಿತಿ ನೀಡಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. ಆದರೂ ನಾನು ಬೀದಿಗೆ ಬಂದಿದ್ದೇನೆ ಎಂದು ರಾಮಚಂದ್ರಪ್ಪ ತುಂಬಾ ನೋವಿನಿಂದ ಹೇಳಿಕೊಳ್ಳುತ್ತಾರೆ.