Tag: ಫಿಜಿಯೋಥೆರಪಿಸ್ಟ್

  • ಚಿಕಿತ್ಸೆಗೆ ಹೋಗಿ ಫಿಜಿಯೋಥೆರಪಿಸ್ಟ್ ಜೊತೆಯೇ ಮದ್ವೆಯಾದ್ರಾ ಪ್ರಭುದೇವ..?

    ಚಿಕಿತ್ಸೆಗೆ ಹೋಗಿ ಫಿಜಿಯೋಥೆರಪಿಸ್ಟ್ ಜೊತೆಯೇ ಮದ್ವೆಯಾದ್ರಾ ಪ್ರಭುದೇವ..?

    ಮುಂಬೈ: ನಟ ಮತ್ತು ನಿರ್ದೇಶಕ ಪ್ರಭುದೇವ ಅವರ ಮದುವೆಯ ಸುದ್ದಿ ಮತ್ತೆ ಸದ್ದು ಮಾಡುತ್ತಿದೆ. ಪ್ರಭುದೇವ ಅವರು ಫಿಜಿಯೋಥೆರಪಿಸ್ಟ್ ಒಬ್ಬರನ್ನು ಸೆಪ್ಟೆಂಬರ್ ನಲ್ಲೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

    ಮುಂಬೈನ ತಮ್ಮ ನಿವಾಸದಲ್ಲೇ ಬಿಹಾರ್ ಮೂಲದ ಫಿಜಿಯೋಥೆರಪಿಸ್ಟ್ ಅನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಭುದೇವ ಮದುವೆಯಾಗಿದ್ದಾರೆ. ಸದ್ಯ ಪ್ರಭುದೇವ ಮತ್ತವರ ಪತ್ನಿ ಚೆನ್ನೈನ ನಿವಾದಲ್ಲಿ ವಾಸ ಮಾಡುತ್ತಿದ್ದು, ತಮ್ಮ ಮದುವೆ ವಿಚಾರವನ್ನು ಗೌಪ್ಯವಾಗಿ ಇಟ್ಟಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

    ಮಾಹಿತಿಗಳ ಪ್ರಕಾರ ಪ್ರಭುದೇವ ಬೆನ್ನು ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳಲು ಫಿಜಿಯೋಥೆರಪಿಸ್ಟ್ ಬಳಿ ಹೋಗಿದ್ದು, ಈ ವೇಳೆ ಇಬ್ಬರಿಗೂ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಪರಸ್ಪರ ಒಪ್ಪಿ ಕೆಲ ಕಾಲ ಡೇಟ್ ಮಾಡಿದ್ದಾರೆ. ನಂತರ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಭುದೇವ ಅವರ ನಿವಾಸದಲ್ಲೇ ಮದುವೆಯಾಗಿದ್ದಾರೆ. ಆದರೆ ಈ ಬಗ್ಗೆ ಪ್ರಭುದೇವ ಅವರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

    ಇತ್ತೀಚೆಗೆ ಪ್ರಭುದೇವ ಅವರು ಎರಡನೇ ಮದುವೆಯಾಗಲಿದ್ದಾರೆ. ಅವರು ಒಬ್ಬರ ಜೊತೆ ಹಲವಾರು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಸುದ್ದಿ ಸುಳ್ಳು ಅವರು ಈಗಾಗಲೇ ಮದುವೆಯೇ ಆಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ ನವದಂಪತಿ ಕುಟುಂಬ ಸಮೇತ ಚೆನ್ನೈನ ಪ್ರಭದೇವ ಅವರು ಮನೆಯಲ್ಲಿ ವಾಸವಿದ್ದಾರೆ ಎಂದು ಹೇಳಲಾಗಿದೆ.

    ಮದುವೆ ವಿಚಾರದಲ್ಲಿ ಪ್ರಭುದೇವ ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ, ಅವರು 1995ರಲ್ಲಿ ರಾಮಲತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳು ಕೂಡ ಇದ್ದರು. ಆದರೆ 2008ರಲ್ಲಿ ಓರ್ವ ಮಗ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದ. ಆ ನಂತರ ರಾಮಲತಾ ಮತ್ತು ಪ್ರಭುದೇವ ಅವರ ನಡುವೆ ನಟಿ ನಯನತಾರ ವಿಚಾರವಾಗಿ ಜಗಳವಾಗಿ, ಈ ಜೋಡಿ 2011ರಲ್ಲಿ ವಿಚ್ಛೇದನ ಪಡೆದುಕೊಂಡಿತ್ತು.

    ರಾಮಲತಾ ಅವರಿಗೆ ವಿಚ್ಛೇದನ ನೀಡಿದ ಬಳಿಕ ನಟಿ ನಯನತಾರ ಜೊತೆ ಪ್ರಭುದೇವ ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ಈ ನಡುವೆ ನಯನತಾರ ನಿರ್ದೇಶಕ ವಿಘ್ನೇಶ್ ಜೊತೆ ಡೇಟ್ ಮಾಡುತ್ತಿದ್ದರು. ಆ ನಂತರ 2012ರಲ್ಲಿ ಈ ಜೋಡಿ ಬೇರ್ಪಟ್ಟಿತ್ತು. ಬಳಿಕ ಪ್ರಭುದೇವ ಬಾಲಿವುಡ್‍ನಲ್ಲಿ ಹೆಸರು ಮಾಡಬೇಕೆಂದು ಮುಂಬೈಗೆ ಹಾರಿದರು. ನಯನತಾರ ಸಿನಿಮಾ ನಟನೆಯಲ್ಲಿ ನಿರತರಾಗಿದ್ದರು. ಈಗ ಮತ್ತೆ ಪ್ರಭುದೇವ ಮದುವೆ ಸುದ್ದಿ ಮುನ್ನಲೆಗೆ ಬಂದಿದೆ.