Tag: ಫಾಸ್ಟ್ ಟ್ಯಾಗ್

  • ಜನರಿಗೆ ಗುಡ್ ನ್ಯೂಸ್ – 3 ಸಾವಿರಕ್ಕೆ ವಾರ್ಷಿಕ ಟೋಲ್‌ ಪಾಸ್‌!

    ಜನರಿಗೆ ಗುಡ್ ನ್ಯೂಸ್ – 3 ಸಾವಿರಕ್ಕೆ ವಾರ್ಷಿಕ ಟೋಲ್‌ ಪಾಸ್‌!

    – ಟೋಲ್ ಕಿರಿಕ್‌ಗೆ ಬ್ರೇಕ್ ಹಾಕಲು ಜಾರಿ
    – ಆಗಸ್ಟ್ 15 ರಿಂದ ಜಾರಿ ಎಂದ ಗಡ್ಕರಿ

    ನವದೆಹಲಿ: ಟೋಲ್ (Toll) ಕಿರಿ ಕಿರಿಗೆ ಬ್ರೇಕ್ ಹಾಕಲು ಫಾಸ್ಟ್ ಟ್ಯಾಗ್ (FASTag) ಆಧಾರಿತ ಪಾಸ್‌ ಅನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

    3 ಸಾವಿರ ರೂಪಾಯಿಗೆ ವಾರ್ಷಿಕ ಟೋಲ್‌ ಪಾಸ್‌ (Toll Pass) ನೀಡಲು ಸರ್ಕಾರ ಮುಂದಾಗಿದ್ದು, ಆಗಸ್ಟ್ 15 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹೆದ್ದಾರಿ ಖಾತೆಯ ಸಚಿವ ನಿತಿನ್‌ ಗಡ್ಕರಿ (Nitin Gadkari) ಘೋಷಿಸಿದ್ದಾರೆ.

    ನಿತಿನ್‌ ಗಡ್ಕರಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಫಾಸ್ಟ್‌ ಟ್ಯಾಗ್‌ ಆಧರಿತ ವಾರ್ಷಿಕ ಪಾಸ್‌ ಬಗ್ಗೆ ವಿವರವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ

    ಗಡ್ಕರಿ ಹೇಳಿದ್ದೇನು?
    ನಾವು 3 ಸಾವಿರ ರೂ.ಗೆ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿದ್ದು ಆಗಸ್ಟ್ 15, 2025 ರಿಂದ ಜಾರಿಗೆ ಬರುತ್ತದೆ. ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್‌ಗಳವರೆಗೆ ಮಾನ್ಯವಾಗಿರುತ್ತದೆ. ಇದನ್ನೂ ಓದಿ: ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್‌ ಹಾಕುತ್ತಾ?

    ಈ ಪಾಸ್ ಅನ್ನು ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ನವೀಕರಣಕ್ಕಾಗಿ ಮೀಸಲಾದ ಲಿಂಕ್ ಅನ್ನು ಶೀಘ್ರದಲ್ಲೇ ರಾಜ್‌ಮಾರ್ಗ್ ಯಾತ್ರಾ ಅಪ್ಲಿಕೇಶನ್‌ನಲ್ಲಿ ಹಾಗೂ NHAI ಮತ್ತು MoRTH ನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.

    ಈ ಪಾಸ್‌ನಿಂದ 60 ಕಿ.ಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆಗಳು ಪರಿಹಾರವಾಗಲಿದೆ. ಟೋಲ್‌ಗಳಲ್ಲಿ ಕಾಯುವ ಸಮಯ ಮತ್ತು ದಟ್ಟಣೆ ಕಡಿಮೆ ಯಾಗಲಿದೆ.

    ಟೋಲ್ ಪ್ಲಾಜಾಗಳಲ್ಲಿ ವಿವಾದಗಳು ಕಡಿಮೆಯಾಗಲಿದ್ದು ಲಕ್ಷಾಂತರ ಖಾಸಗಿ ವಾಹನ ಮಾಲೀಕರಿಗೆ ಸುಗಮ ಪ್ರಯಾಣದ ಅನುಭವವನ್ನು ವಾರ್ಷಿಕ ಪಾಸ್ ನೀಡಲಿದೆ.

  • ದಶಪಥ ಹೆದ್ದಾರಿ ಟೋಲ್‍ನಲ್ಲಿ ತಾಂತ್ರಿಕ ಸಮಸ್ಯೆ, ಫಾಸ್ಟ್ ಟ್ಯಾಗ್ ನಲ್ಲಿ ಪದೇ ಪದೆ ಹಣ ಕಡಿತ

    ದಶಪಥ ಹೆದ್ದಾರಿ ಟೋಲ್‍ನಲ್ಲಿ ತಾಂತ್ರಿಕ ಸಮಸ್ಯೆ, ಫಾಸ್ಟ್ ಟ್ಯಾಗ್ ನಲ್ಲಿ ಪದೇ ಪದೆ ಹಣ ಕಡಿತ

    ರಾಮನಗರ: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ (Bengaluru-Mysuru expressway) ಉದ್ಘಾಟನೆ ಆದಾಗಿನಿಂದ ಒಂದಲ್ಲ ಒಂದು ಸಮಸ್ಯೆಯಿಂದ ಸುದ್ದಿಯಾಗುತ್ತಿದೆ. ಈಗ ತಾಂತ್ರಿಕ ಸಮಸ್ಯೆಯಿಂದ ಟೋಲ್ ಪ್ಲಾಜಾದಲ್ಲಿ ವಾಹನ ಸವಾರರ ಫಾಸ್ಟ್ ಟ್ಯಾಗ್‍ನಿಂದ ಪದೇ ಪದೇ ಹಣ (Money) ಕಡಿತಗೊಂಡು ಮತ್ತೆ ಸುದ್ದಿಯಾಗಿದೆ.

    ಮಂಡ್ಯ ಮೂಲದ ತ್ಯಾಗರಾಜ್ ಎಂಬವರು ಕಾರಿನಲ್ಲಿ ಒಮ್ಮೆ ಕಣಮಿಣಕಿ ಟೋಲ್ ಪ್ಲಾಜಾ (Kaniminike toll plaza) ಪ್ರವೇಶ ಮಾಡಿದಾಗ ಫಾಸ್ಟ್ ಟ್ಯಾಗ್ ಮೂಲಕ 135 ರೂ. ಕಡಿತವಾಗಿದೆ. ಸಂಜೆ ವೇಳೆಗೆ ಕಾರು ಟೋಲ್ ಬಳಿ ಸಂಚಾರ ಮಾಡದಿದ್ದರೂ ಮತ್ತೆ ಹಣ ಕಡಿತವಾಗಿದೆ. ಒಂದಲ್ಲ ಎರಡಲ್ಲ ಮೂರ್ನಾಲ್ಕು ಬಾರಿ 135 ರೂ.ನಂತೆ ಹಣ ಕಡಿತವಾಗಿದೆ. ನಿತ್ಯವೂ ಇದೇ ರೀತಿಯ ತಾಂತ್ರಿಕ ಸಮಸ್ಯೆಯಿಂದ ಟೋಲ್ ಸಿಬ್ಬಂದಿ ಹಾಗೂ ವಾಹನ ಸವಾರರು ಗಲಾಟೆ ನಡೆಸುವ ಪರಿಸ್ಥಿತಿ ಎದುರಾಗಿದೆ ಎಂದು ವಾಹನ ಸವಾರರು ದೂರಿದ್ದಾರೆ. ಇದನ್ನೂ ಓದಿ: Congress Candidate List- ಯಾವ್ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್?

    ಟೋಲ್‍ನಲ್ಲಿ ಕೆಲವು ವಾಹನಗಳ ಫಾಸ್ಟ್ ಟ್ಯಾಗ್ ಸ್ಕ್ಯಾನ್ ಆಗುವುದರಲ್ಲಿ ತೊಂದರೆ ಆಗುತ್ತಿದೆ. ಮತ್ತೊಂದೆಡೆ ಪದೇ ಪದೇ ಹಣ ಕಡಿತವಾಗುತ್ತಿದೆ. ದಶಪಥ ಹೆದ್ದಾರಿಯಲ್ಲಿನ ಕಣಮಿಣಕಿ ಹಾಗೂ ಶೇಷಗಿರಿಹಳ್ಳಿ (Sheshagiri Halli) ಬಳಿ ಇರುವ ಎರಡು ಟೋಲ್ ಪ್ಲಾಜಾಗಳಲ್ಲಿ ಈ ಸಮಸ್ಯೆ ಉಂಟಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ ಸಂವಿಧಾನಬಾಹಿರ: ಶರದ್ ಪವಾರ್

  • ಫಾಸ್ಟ್ ಟ್ಯಾಗ್ ಕಿರಿಕ್ – ಟೋಲ್ ಸಿಬ್ಬಂದಿ, ಚಾಲಕನ ನಡುವೆ ಕಲಹ

    ಫಾಸ್ಟ್ ಟ್ಯಾಗ್ ಕಿರಿಕ್ – ಟೋಲ್ ಸಿಬ್ಬಂದಿ, ಚಾಲಕನ ನಡುವೆ ಕಲಹ

    – ಸಿಬ್ಬಂದಿಯಿಂದ ಹಲ್ಲೆ ಆರೋಪ

    ಬೆಂಗಳೂರು/ನೆಲಮಂಗಲ: ಕಾರಿನಲ್ಲಿ ಆರೋಗ್ಯ ಏರುಪೇರಾಗಿದ್ದ ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಕಾರು ಚಾಲಕನೊಂದಿಗೆ ಟೋಲ್ ಸಿಬ್ಬಂದಿ ಗೂಂಡಾಗಿರಿ ಮಾಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿಯ ಟೋಲ್ ಬಳಿ ಈ ಘಟನೆ ನಡೆದಿದ್ದು, ಫಾಸ್ಟ್ ಟ್ಯಾಗ್ ಇಲ್ಲ ಹಣ ಕಟ್ಟುವೆ ತುರ್ತಾಗಿ ಆಸ್ಪತ್ರೆಗೆ ತೆರಳಬೇಕಿದೆ ಎಂದ, ಕಾರು ಚಾಲಕನಿಗೆ ಟೋಲ್ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂದು ಹೆಸರುಘಟ್ಟ ನಿವಾಸಿ ಕಾರು ಚಾಲಕ ರೋಹಿತ್ ಆರೋಪಿಸಿದ್ದಾರೆ.

    ನೆಲಮಂಗಲ ಕುಣಿಗಲ್ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಟೋಲ್ ಇದಾಗಿದ್ದು, ವೃದ್ಧೆಗೆ ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದಾಗ ಕನಿಷ್ಠ ಪಕ್ಷ ಮಾನವೀಯತೆ ತೋರದೆ ಟೋಲ್ ಸಿಬ್ಬಂದಿಯಿಂದ ಹಲ್ಲೆ ಹಾಗೂ ನಿಂದನೆ ಆರೋಪದ ಘಟನೆ ಖಂಡಿಸಿ ಸ್ಥಳೀಯರು ಟೋಲ್ ಮುತ್ತಿಗೆ ಹಾಕಿ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡರು.

    ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಫಾಸ್ಟ್ ಟ್ಯಾಗ್ ಜಾರಿಗೆ ಬಂದಾಗಿನಿಂದ ಒಂದಲ್ಲ ಒಂದು ಪ್ರತಿನಿತ್ಯ ಗಲಾಟೆಗಳು ನಡೆಯುತ್ತಲೇ ಇದೆ. ಫಾಸ್ಟ್ ಟ್ಯಾಗ್ ಜಾರಿಗೆ ಬಂದಿರುವುದು ನಿಜ ಆದರೆ ಕೆಲವೊಮ್ಮೆ ನಿಯಮಗಳಿಗಿಂತ ಮಾನವೀಯತೆ ಮುಖ್ಯವಾಗಿರಬೇಕೆಂಬುದನ್ನು ಟೋಲ್ ಸಿಬ್ಬಂದಿ ಅರಿಯಬೇಕಿದೆ ಎಂದು ವಾಹನ ಸವಾರರು ಮನವಿ ಮಾಡಿಕೊಂಡಿದ್ದಾರೆ.

  • ಗಮನಿಸಿ, ಫಾಸ್ಟ್‌ಟ್ಯಾಗ್‌ ಕಡ್ಡಾಯ – ಇಲ್ಲದೇ ಹೋದರೆ 2 ಪಟ್ಟು ಟೋಲ್‌

    ಗಮನಿಸಿ, ಫಾಸ್ಟ್‌ಟ್ಯಾಗ್‌ ಕಡ್ಡಾಯ – ಇಲ್ಲದೇ ಹೋದರೆ 2 ಪಟ್ಟು ಟೋಲ್‌

    ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂದು ಮಧ್ಯರಾತ್ರಿಯಿಂದ ಫಾಸ್ಟ್‌ಟ್ಯಾಗ್‌ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಫಾಸ್ಟ್ ಟ್ಯಾಗ್ ಇಲ್ಲದೇ ಹೋದರೆ ಟೋಲ್‍ಗಳಲ್ಲಿ ಟೋಲ್ ಮೊತ್ತದ 2 ಪಟ್ಟು ಟೋಲ್ ಕಟ್ಟಬೇಕಾಗುತ್ತದೆ.

    ಹೌದು. ಈಗಾಗಲೇ ಫಾಸ್ಟ್‌ ಟ್ಯಾಗ್‌ ಕಡ್ಡಾಯಗೊಳಿಸುವ ದಿನಾಂಕವನ್ನು ಹಲವು ಬಾರಿ ಮುಂದೂಡಿಕೆ ಮಾಡಲಾಗಿದ್ದು. ಇನ್ನು ಮುಂದೆ ಯಾವುದೇ ಕಾರಣಕ್ಕೂ ದಿನಾಂಕವನ್ನು ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಖಡಕ್‌ ಆಗಿ ಹೇಳಿದ್ದಾರೆ.

    ಈ ಮೊದಲು ಜನವರಿ 1 ರಿಂದ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿತ್ತು. ಆದರೆ ಕೆಲ ವಾಹನ ಮಾಲೀಕರು ಫಾಸ್ಟ್‌ ಟ್ಯಾಗ್‌ ಅಳವಡಿಕೆ ಮಾಡದ ಕಾರಣ ಡೆಡ್‌ಲೈನ್‌ ದಿನಾಂಕ ಫೆ.15ಕ್ಕೆ ಮುಂದೂಡಲಾಗಿತ್ತು.

    ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದ್ದು, 2017ಕ್ಕಿಂತ ಹಿಂದಿನ ಹಾಗೂ ನಂತರದ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯ ಮಾಡಲಾಗಿದೆ.

    2017ರ ಡಿಸೆಂಬರ್‌ 1 ರಿಂದ ಮಾರಾಟವಾಗುವ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯ ಮಾಡಲಾಗಿತ್ತು. 2017ಕ್ಕಿಂತ ಮೊದಲು ಮಾರಾಟವಾಗಿದ್ದ ವಾಹನಗಳಿಗೆ ವಿನಾಯಿತಿ ನೀಡಲಾಗಿತ್ತು. ಬಳಿಕ ಈ ವಿನಾಯಿತಿಯನ್ನುತೆಗೆದ ಸರ್ಕಾರ ಎಲ್ಲ 4 ಚಕ್ರದ ವಾಹನಗಳು ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್‌ ಅಳವಡಿಸಿರಬೇಕೆಂದು ಸೂಚಿಸಿತ್ತು. ಇದನ್ನೂ ಓದಿ: ಮುಂದಿನ 2 ವರ್ಷದಲ್ಲಿ ಟೋಲ್‌ ಪ್ಲಾಜಾಗಳಿಂದ ಮುಕ್ತವಾಗಲಿದೆ ಭಾರತ

    ಏಪ್ರಿಲ್‌ 2021 ರಿಂದ ಥರ್ಡ್‌ ಪಾರ್ಟಿ ವಿಮೆ ಮಾಡಿಸಬೇಕಿದ್ದರೂ ಫಾಸ್ಟ್‌ಟ್ಯಾಗ್‌ ಕಡ್ಡಾಯ. ಇದರ ಜೊತೆ ಹಳೆ ವಾಹನಗಳ ಫಿಟ್‌ನೆಸ್ ಸರ್ಟಿಫಿಕೇಟ್ ನವೀಕರಣಕ್ಕೂ ಫಾಸ್ಟ್‌ ಟ್ಯಾಗ್‌ ಅಳವಡಿಸಿರಬೇಕು.

    ಫಾಸ್ಟ್‌ಟ್ಯಾಗ್‌ ಇದ್ದರೆ ವಾಹನಗಳು ಸರಾಗವಾಗಿ ಟೋಲ್‌ ಪ್ಲಾಜಾಗಳಲ್ಲಿ ಸಂಚರಿಸುತ್ತದೆ. ಸಮಯ ಮತ್ತು ಇಂಧನ ಉಳಿತಾಯವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. 2019ರ ಅಕ್ಟೋಬರ್ 1 ರಿಂದ ರಾಷ್ಟ್ರೀಯ ಪರ್ಮಿಟ್ ಹೊಂದಿರುವ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.

    ಫಾಸ್ಟ್‌ ಟ್ಯಾಗ್‌ ಕಡ್ಡಾಯ ಮಾಡಿರುವ ಕಾರಣ ಟೋಲ್‌ ಸಂಗ್ರಹ ಈಗ ಹೆಚ್ಚಾಗುತ್ತಿದೆ. 2019ರಲ್ಲಿ ಒಂದು ದಿನದಲ್ಲಿ 70 ಕೋಟಿ ರೂ. ಸಂಗ್ರಹವಾಗಿದ್ದರೆ 2020ರಲ್ಲಿ ಇದು 92 ಕೋಟಿ ರೂಗಳಿಗೆ ಏರಿಕೆಯಾಗಿದೆ.

  • ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ: ನಿತಿನ್ ಗಡ್ಕರಿ

    ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ: ನಿತಿನ್ ಗಡ್ಕರಿ

    ನವದೆಹಲಿ: ಜನವರಿ 1ರಿಂದ ದೇಶದ ಎಲ್ಲ 4 ಚಕ್ರ ಮೇಲ್ಪಟ್ಟ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

    ಪ್ರಸ್ತುತ ದಿನಗಳಲ್ಲಿ ಫಾಸ್ಟ್ ಟ್ಯಾಗ್ ಉಪಯುಕ್ತವಾಗಿದ್ದು, ವಾಹನಗಳನ್ನು ಎಲ್ಲ ಟೋಲ್ ಪ್ಲಾಜಾಗಳಲ್ಲಿ ನಿಲ್ಲಿಸುವ ಅಗತ್ಯವಿಲ್ಲ. ಇದರಿಂದ ಸಮಯ ಹಾಗೂ ಇಂಧನ ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸಹ ಈ ಕುರಿತು ಆದೇಶ ಹೊರಡಿಸಿತ್ತು. ಹಳೆ ವಾಹನ ಸೇರಿ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಎಂದು ತಿಳಿಸಿತ್ತು. ಇದನ್ನೂ ಓದಿ: ಮುಂದಿನ 2 ವರ್ಷದಲ್ಲಿ ಟೋಲ್‌ ಪ್ಲಾಜಾಗಳಿಂದ ಮುಕ್ತವಾಗಲಿದೆ ಭಾರತ

    ನವೆಂಬರ್ 2020ರಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸುತ್ತೋಲೆ ಹೊರಡಿಸಿ, ಫಾಸ್ಟ್ ಟ್ಯಾಗ್ ಮೂಲಕ ಡಿಜಿಟಲ್ ಹಾಗೂ ಐಟಿ ತಂತ್ರಜ್ಞಾನ ಆಧರಿತ ಶುಲ್ಕ ಪಾವತಿಯನ್ನು ಉತ್ತೇಜಿಸಲಾಗುವುದು. ಜನವರಿ 1, 2021ರಿಂದ ಹಳೆ ವಾಹನಗಳು ಸೇರಿ ಎಂ ಹಾಗೂ ಎನ್ ಮಾದರಿಯ ಎಲ್ಲ ವಾಹನಗಳಿಗೆ ಕಡ್ಡಾಯವಾಗಿದೆ ಎಂದು ತಿಳಿಸಿದೆ.

    ಡಿಸೆಂಬರ್ 1,2017ರಿಂದ ಇತ್ತೀಚಿನ ನಾಲ್ಕು ಚಕ್ರದ ವಾಹನಗಳ ನೋಂದಣಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ವಾಹನ ಉತ್ಪಾದನೆ ಕಂಪನಿಗಳು ಅಥವಾ ಡೀಲರ್ ಗಳು ಫಾಸ್ಟ್ ಟ್ಯಾಗ್ ಕಡ್ಡಾಯವಾಗಿ ನೀಡಬೇಕು. ಅಲ್ಲದೆ ಫಿಟ್ನೆಸ್ ಸರ್ಟಿಫಿಕೇಟ್ ನವೀಕರಿಸಬೇಕಾದರೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯವಾಗಿದೆ. ನ್ಯಾಷನಲ್ ಪರ್ಮಿಟ್ ವಾಹನಗಳಿಗೆ ಅಕ್ಟೋಬರ್ 1, 2019ರಿಂದಲೇ ಕಡ್ಡಾಯಗೊಳಿಸಲಾಗಿದೆ ಎಂದು ಸಾರಿಗೆ ಸಚಿವಾಲಯ ಸ್ಪಷ್ಟಪಡಿಸಿದೆ.

  • ಮುಂದಿನ 2 ವರ್ಷದಲ್ಲಿ ಟೋಲ್‌ ಪ್ಲಾಜಾಗಳಿಂದ ಮುಕ್ತವಾಗಲಿದೆ ಭಾರತ

    ಮುಂದಿನ 2 ವರ್ಷದಲ್ಲಿ ಟೋಲ್‌ ಪ್ಲಾಜಾಗಳಿಂದ ಮುಕ್ತವಾಗಲಿದೆ ಭಾರತ

    – ಜಾರಿಯಾಗಲಿದೆ ಜಿಪಿಎಸ್‌ ಆಧಾರಿತ ವ್ಯವಸ್ಥೆ
    – ರಷ್ಯಾ ಸರ್ಕಾರದ ಸಹಾಯದಿಂದ ಜಾರಿ

    ನವದೆಹಲಿ: ಮುಂದಿನ 2 ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ ಪ್ಲಾಜಾಗಳು ಇರುವುದಿಲ್ಲ ಎಂದು ಕೇಂದ್ರ ಸಾರಿಗೆ ಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

    ಹೌದು. ಸದ್ಯ ಈಗ ಕೆಲ ಕಿಲೋ ಮೀಟರ್‌ ಅಂತರದಲ್ಲಿ ಟೋಲ್‌ ಪ್ಲಾಜಾಗಳು ಇವೆ. ದುಡ್ಡಿನ ಮೂಲಕ ಪಾವತಿ ತಪ್ಪಿಸಲು ಫಾಸ್ಟ್‌ ಟ್ಯಾಗ್‌ ಬಂದಿದೆ. ಆದರೂ ವಾಹನಗಳು ಸರದಿಯಲ್ಲಿ ನಿಲ್ಲುವುದು ನಿಂತಿಲ್ಲ. ಆದರೆ ಇನ್ನು ಮುಂದೆ ವಾಹನಗಳು ಟೋಲ್‌ಗಳಲ್ಲಿ ನಿಲ್ಲದೇ ಸರಗವಾಗಿ ಸಂಚರಿಸುವ ವ್ಯವಸ್ಥೆ ಜಾರಿಯ ಬಗ್ಗೆ ಗಡ್ಕರಿ ಸುಳಿವು ನೀಡಿದ್ದಾರೆ.

    ಅಸೋಚಾಮ್ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಿಪಿಎಸ್‌ ಆಧಾರಿತ ಟೋಲ್‌ ವ್ಯವ್ಯಸ್ಥೆ ಜಾರಿ ಮಾಡುವ ಸಂಬಂಧ ಸಿದ್ಧತೆ ನಡೆಸುತ್ತಿದೆ. ಈ ವ್ಯವಸ್ಥೆ ಜಾರಿಯಾದರೆ ಟೋಲ್‌ ಹಣ ನೇರವಾಗಿ ಬ್ಯಾಂಕ್‌ ಖಾತೆಯಿಂದ ಜಮೆಯಾಗುತ್ತದೆ ಎಂದು ವಿವರಿಸಿದರು.

    ಜಿಪಿಎಸ್‌ ವ್ಯವಸ್ಥೆ ಜಾರಿ ಸಂಬಂಧ ನಾವು ಈಗಾಗಲೇ ಜಿಪಿಎಸ್‌ ಆಧಾರಿತ ವ್ಯವಸ್ಥೆ ಜಾರಿ ಸಂಬಂಧ ರೂಪುರೇಷೆಯನ್ನು ಅಂತಿಮಗೊಳಿಸಲಾಗಿದೆ. ರಷ್ಯಾ ಸರ್ಕಾರದ ಸಹಾಯದೊಂದಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.

    ಇತ್ತೀಚಿನ ಹೊಸ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳು ಜಿಪಿಎಸ್ ಒಳಗೊಂಡಿರುತ್ತವೆ. ಹಳೆಯ ವಾಹನಗಳಿಗೂ ಜಿಪಿಎಸ್ ಅಳವಡಿಸುವ ಬಗ್ಗೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಮುಂದಿನ ಎರಡು ವರ್ಷದಲ್ಲಿ ಭಾರತದಲ್ಲಿ ಟೋಲ್ ಬೂತ್ ರಹಿತ ಹೆದ್ದಾರಿಗಳು ಇರಲಿದೆ. ವಾಹನಗಳನ್ನು ಜಿಪಿಎಸ್‌ ವ್ಯವಸ್ಥೆ ಮೂಲಕ ಟ್ರ್ಯಾಕ್ ಮಾಡಲಾಗುವುದು. ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಬಾಕಿ ಟೋಲ್ ಹಣ ಪಾವತಿಯಾಗಲಿದೆ ಎಂದರು.

    ಈ ವ್ಯವಸ್ಥೆ ಜಾರಿಯಾದರೆ ಐದು ವರ್ಷದಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದಾಯ 1.34 ಲಕ್ಷ ಕೋಟಿಗೆ ಏರಿಕೆ ಆಗಲಿದೆ. ಈ ಹಣಕಾಸು ವರ್ಷದಲ್ಲಿ 34 ಸಾವಿರ ಕೋಟಿ ರೂ. ಆದಾಯ ಬರುವ ನಿರೀಕ್ಷೆಯಿದೆ ಎಂದು ಹೇಳಿದರು.

    ಫಾಸ್ಟ್‌ ಟ್ಯಾಗ್‌ ಕಡ್ಡಾಯ ಮಾಡಿರುವ ಕಾರಣ ಟೋಲ್‌ ಸಂಗ್ರಹ ಹೆಚ್ಚಾಗುತ್ತಿದೆ. ಕಳೆದ ವರ್ಷ ಒಂದು ದಿನದಲ್ಲಿ 70 ಕೋಟಿ ರೂ. ಸಂಗ್ರಹವಾಗಿದ್ದರೆ ಈ ವರ್ಷ ಇದು 92 ಕೋಟಿ ರೂಗಳಿಗೆ ಏರಿಕೆಯಾಗಿದೆ.

    2020ರ ಜನವರಿ 1ರಿಂದ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್‌ ಟ್ಯಾಗ್‌ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದೆ. ಇದನ್ನೂ ಓದಿ: ಜನವರಿ 1ರಿಂದ 4 ಚಕ್ರದ ವಾಹನಗಳಿಗೆ ಫಾಸ್ಟ್‌ ಟ್ಯಾಗ್‌ ಕಡ್ಡಾಯ. ಫಾಸ್ಟ್‌ ಟ್ಯಾಗ್‌ನಲ್ಲಿ ಹಣ ಹೇಗೆ ಪಾವತಿಯಾಗುತ್ತದೆ?

  • ಟೋಲ್ ಸಿಬ್ಬಂದಿಯ ಮೇಲೆ ಪುಂಡರಿಂದ ಹಲ್ಲೆ

    ಟೋಲ್ ಸಿಬ್ಬಂದಿಯ ಮೇಲೆ ಪುಂಡರಿಂದ ಹಲ್ಲೆ

    ನೆಲಮಂಗಲ: ಆರು ಮಂದಿ ಪುಂಡರು ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಜಾಸ್ ಟೋಲ್ ಗೇಟ್ ನಲ್ಲಿ ನಡೆದಿದೆ.

    ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಸದರೇ ಡಬಲ್ ಹಣವನ್ನು ಟೋಲ್ ನಲ್ಲಿ ಪಾವತಿಸಬೇಕು. ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳದ ಲಾರಿಯಲ್ಲಿ ಬಂದ ಯುವಕರಿಗೆ ಸಿಬ್ಬಂದಿ ಡಬಲ್ ಹಣವನ್ನು ಪಾವತಿಸುವಂತೆ ಸೂಚಿಸಿದ್ದಾರೆ. ಇದರಿಂದ ಕೋಪಗೊಂಡ ಪುಂಡರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ನಾಗಪುರದ ಮೂಲದ ಟೋಲ್ ಸಿಸ್ಟಮ್ ಎಂಜಿನೀಯರ್ ಹಾಗೂ ಇನ್ನೋರ್ವ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಟೋಲ್ ಪ್ಲಾಜಾ ದಲ್ಲಿ ಹೊರ ರಾಜ್ಯದ ಯುವಕರು ಕೆಲಸ ಮಾಡುತ್ತಿದ್ದು, ಸ್ಥಳೀಯ ಸವಾರರ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಲು ಐದು ದಿನ ಬಾಕಿ

    ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಲು ಐದು ದಿನ ಬಾಕಿ

    ಬೆಂಗಳೂರು: ಫಾಸ್ಟ್ ಟ್ಯಾಗ್ ಅಳವಡಿಸಲು ಕೇವಲ ಐದೇ ದಿನ ಬಾಕಿಯಿದೆ.

    ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಸಂಚರಿಸುವ ಶೇ. 60ರಷ್ಟು ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿದ್ದು, ಅಂತಿಮ ಗಡುವಿಗೆ  ಬಾಕಿ ಉಳಿದ ಐದು ದಿನಗಳಲ್ಲಿ ಶೇ.25ರಷ್ಟು ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳುವುದು ಬಾಕಿಯಿದೆ.

    ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಅಳವಡಿಕೆ ನೀಡಿದ್ದ ಗಡುವು ವಿಸ್ತರಣೆ ಐದು ದಿನಗಳಲ್ಲಿ (ಜ.15) ಮುಕ್ತಾಯವಾಗಲಿದೆ. ಈ ಅವಧಿಯಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳದಿದ್ದರೆ ಕ್ಯಾಶ್ ಲೈನ್ ನಲ್ಲಿ ಮಾತ್ರ ಸಂಚರಿಸಬೇಕು.

    ರಾಜ್ಯದಲ್ಲಿ ಫಾಸ್ಟ್ ಟ್ಯಾಗ್‍ಗೆ ಬೇಡಿಕೆ ಕಡಿಮೆಯಾಗಿದೆ. ಟೋಲ್ ಪ್ಲಾಜಾಗಳಲ್ಲಿ ತೆರೆದಿರುವ ಫಾಸ್ಟ್ ಟ್ಯಾಗ್ ಸೆಂಟರ್ ಗಳು, ಬ್ಯಾಂಕ್‍ಗಳು, ಆನ್‍ಲೈನ್ ಮಾರ್ಕೆಟ್‍ನಲ್ಲಿ ಫಾಸ್ಟ್ ಟ್ಯಾಗ್ ಗೆ ಬೇಡಿಕೆ ಇಳಿಮುಖವಾಗಿದೆ. ಡಿಸೆಂಬರ್ 15ರ ವೇಳೆಗೆ ರಾಜ್ಯದಲ್ಲಿ ಶೇ.40ರಷ್ಟಿದ್ದ ಫಾಸ್ಟ್ ಟ್ಯಾಗ್ ಅಳವಡಿಕೆ ಪ್ರಮಾಣ ಕಳೆದ 25 ದಿನಗಳಲ್ಲಿ ಶೇ. 20ರಷ್ಟು ಹೆಚ್ಚಾಗಿದೆ. ಅಂದರೆ ಇವರೆಗೆ ರಾಜ್ಯದಲ್ಲಿ ಒಟ್ಟು ಶೇ.60ರಷ್ಟು ಫಾಸ್ಟ್ ಟ್ಯಾಗ್ ಅಳವಡಿಕೆಯಾಗಿದೆ.

    ವಾಹನಗಳಿಗೆ ಫಾಸ್ಟ್ ಟ್ಯಾಗ್ ಸ್ಟಿಕರ್ ಅಳವಡಿಕೆ ನಿರೀಕ್ಷಿತ ಮಟ್ಟಕ್ಕೆ ಮುಟ್ಟಿಲ್ಲ. ಆದರೂ ಇನ್ನೈದು ದಿನಗಳಲ್ಲಿ ಫಾಸ್ಟ್ ಟ್ಯಾಗ್ ವಾಹನಗಳ ಸಂಖ್ಯೆ ಶೇ.80ಕ್ಕೆ ಏರಿಕೆಯಾಗಲಿದೆ ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳ ಸಂಚಾರಕ್ಕೆ ಟೋಲ್ ಪ್ಲಾಜಾಗಳಲ್ಲಿ ಒಂದು ಪಥ ಮೀಸಲಿಡಲು ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿದೆ.

  • ಫಾಸ್ಟ್ ಟ್ಯಾಗ್‍ನಿಂದ ಆದಾಯ ಸೋರಿಕೆಗೆ ಬಿತ್ತು ಕತ್ತರಿ- ಶೇ.15ರಷ್ಟು ಹೆಚ್ಚಳವಾಯ್ತು ಟೋಲ್ ಸಂಗ್ರಹ

    ಫಾಸ್ಟ್ ಟ್ಯಾಗ್‍ನಿಂದ ಆದಾಯ ಸೋರಿಕೆಗೆ ಬಿತ್ತು ಕತ್ತರಿ- ಶೇ.15ರಷ್ಟು ಹೆಚ್ಚಳವಾಯ್ತು ಟೋಲ್ ಸಂಗ್ರಹ

    ನವದೆಹಲಿ: ಟೋಲ್ ಪಾವತಿಸಲು ಫಾಸ್ಟ್ ಟ್ಯಾಗ್ ಕಡ್ಡಾಯ ಬಳಕೆಯನ್ನು ಕೇಂದ್ರ ಸರ್ಕಾರ ಮುಂದೂಡಿದ್ದರೂ, ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಪ್ರಮಾಣ ಶೇ.15 ರಷ್ಟು ಹೆಚ್ಚಾಗಿದೆ.

    ಮೂಲಗಳ ಮಾಹಿತಿಯ ಅನ್ವಯ ಎನ್‍ಎಚ್‍ಎಐ ಟೋಲ್ ಆದಾಯ 80 ಕೋಟಿ ರೂ. ದಾಟಿದ್ದು, ಇದಕ್ಕೂ ಮುನ್ನ ಸರಾಸರಿ 65 ರಿಂದ 68 ಕೋಟಿ ರೂ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸಂಗ್ರಹವಾಗಿತ್ತು. ಫಾಸ್ಟ್ ಟ್ಯಾಗ್ ಅಳವಡಿಕೆಯಿಂದ ಆದಾಯ ಹೆಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ ಟೋಲ್‍ಗಳಲ್ಲಿ ಸೋರಿಕೆಯಾಗುತ್ತಿದ್ದ ಆದಾಯಕ್ಕೆ ಪೂರ್ಣವಿರಾಮ ಬೀಳುವ ಸಾಧ್ಯತೆಯಿದೆ.

    ಇದುವರೆಗೂ ದೇಶದಲ್ಲಿರುವ 530 ಟೋಲ್ ಪ್ಲಾಜಾಗಳಲ್ಲಿ 40 ರಿಂದ 45 ಪ್ಲಾಜಾಗಳಲ್ಲಿನ ‘ಟೋಲ್ ಟೈಮ್ ಝೀರೋ’ ಟೈಮ್ ದಾಖಲಾಗಿದೆ. ಕಳೆದ ವರ್ಷ 488 ಟೋಲ್ ಪ್ಲಾಜಾ ಗಳಲ್ಲಿ ಸರಾಸರಿ ಕಾಯುವ ಸಮಯ ಭಾನುವಾರ 12 ನಿಮಿಷವಾಗಿತ್ತು. ಉಳಿದಂತೆ ಇತರೇ ದಿನಗಳಲ್ಲಿ ಸರಾಸರಿ 10.04 ನಿಮಿಷ ಬೇಕಾಗಿತ್ತು.

    ಈಗಲೂ ಮಾಹಿತಿಯ ಕೊರತೆಯಿಂದಾಗಿ ವಾಹನಗಳು ಮಾಲೀಕರು ಫಾಸ್ಟ್ ಟ್ಯಾಗ್ ಅಳವಡಿಕೆ ಮಾಡದೇ ಇದ್ದರೂ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಲೇನ್‍ಗಳಿಗೆ ಪ್ರವೇಶ ಮಾಡುತ್ತಿದ್ದರಿಂದ ಕೆಲ ಸಮಸ್ಯೆ ಆಗುತ್ತಿದೆ. ಈ ವೇಳೆ ಡಬಲ್ ಚಾರ್ಜ್ ಪಾವತಿ ಮಾಡಲು ನಿರಾಕರಿಸುತ್ತಿದ್ದಾರೆ. ಅಲ್ಲದೇ ಕೆಲ ಪ್ಲಾಜಾಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಅಂತಹ ಸ್ಥಳಗಳಲ್ಲಿ ವಾಹನ ಸವಾರರು ಸಾಕಷ್ಟು ಬ್ಯಾಲೆನ್ಸ್ ಇದ್ದರೆ ಉಚಿತ ಪ್ರವೇಶ ನೀಡಲಾಗುತ್ತಿದೆ ಎಂದು ಟೋಲ್ ಸಿಬ್ಬಂದಿ ಹೇಳಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ, ದೇಶದ 245 ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ತೃಪ್ತಿದಾಯಕವಾಗಿದ್ದು, ಎಲ್ಲಾ ಪ್ಲಾಜಾಗಳಲ್ಲಿ ನೇರ ನಗದು ಸ್ವೀಕರಿಸುವ ಒಂದು ಲೇನ್ ಮಾತ್ರ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಉಳಿದ 242 ಪ್ಲಾಜಾಗಳಲ್ಲಿ ಶೇ.25 ರಷ್ಟು ಲೇನ್‍ಗಳಲ್ಲಿ ನಗದು ಸ್ವೀಕರಿಸಲಾಗುತ್ತಿದೆ. ಇನ್ನು 40-42 ಪ್ಲಾಜಾಗಳಲ್ಲಿ ನಿರೀಕ್ಷಿತ 25% ರಷ್ಟು ಪ್ರಮಾಣದಲ್ಲಿ ಫಾಸ್ಟ್ ಟ್ಯಾಗ್ ಬಳಕೆ ಸಾಧ್ಯವಾಗಿಲ್ಲ ಎಂಬ ಮಾಹಿತಿ ಲಭಿಸಿದೆ.

  • ಫಾಸ್ಟ್ ಟ್ಯಾಗ್ ಇದ್ದರೂ ತಪ್ಪದ ‘ಕ್ಯೂ’- ಪರ, ವಿರೋಧ ಚರ್ಚೆ

    ಫಾಸ್ಟ್ ಟ್ಯಾಗ್ ಇದ್ದರೂ ತಪ್ಪದ ‘ಕ್ಯೂ’- ಪರ, ವಿರೋಧ ಚರ್ಚೆ

    ಬೆಂಗಳೂರು: ಟೋಲ್‍ಗಳಲ್ಲಿ ವಾಹನ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ್ದು, ವಾಹನ ಸವಾರರಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರೆಯದ ಕಾರಣ ಮೂರು ಬಾರಿ ಕಾಲಾವಕಾಶ ವಿಸ್ತರಣೆ ಮಾಡಿದೆ. ಇದರ ನಡುವೆ ಫಾಸ್ಟ್ ಟ್ಯಾಗ್ ಕಡ್ಡಾಯದ ಪರ, ವಿರೋಧ ಚರ್ಚೆಗಳು ನಡೆಯುತ್ತಿದೆ.

    ದೇಶದ್ಯಾಂತ ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಕಾಯುವಿಕೆ ಕೊನೆಗೊಳಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಪರಿಚಯಿಸಿದ್ದು, ವಾಹನ ಸವಾರರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಬಹುತೇಕ ವಾಹನ ಮಾಲೀಕರು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿಲ್ಲ. ಈ ಹಿನ್ನೆಲೆ ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಅಳವಡಿಕೆಗೆ ನೀಡಿದ್ದ ಗಡುವನ್ನು ಮತ್ತೆ 30 ದಿನಗಳ ಕಾಲ ವಿಸ್ತರಿಸಿದೆ. ಈ ಹಿನ್ನೆಲೆ ವಾಹನ ಸವಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ.

    ಬೆಂಗಳೂರು ತಮಿಳುನಾಡು ರಾಷ್ಟ್ರೀಯ ಹೆದ್ದಾರಿ 7ರ ಅತ್ತಿಬೆಲೆ ಟೋಲ್ ಬಳಿ ಫಾಸ್ಟ್ ಟ್ಯಾಗ್ ಅಳವಡಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾಹನ ಸವಾರರು ಫಾಸ್ಟ್ ಟ್ಯಾಗ್ ಅಳವಡಿಕೆಯಿಂದ ಖುಷಿಯಾಗಿದ್ದಾರೆ. ಆದರೆ ಫಾಸ್ಟ್ ಟ್ಯಾಗ್ ವಿತರಣೆ ವ್ಯವಸ್ಥೆ ಸರಿ ಇಲ್ಲದ ಕಾರಣ ಫಾಸ್ಟ್ ಟ್ಯಾಗ್ ವಿತರಣೆ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಕೆಲ ವಾಹನ ಸವಾರರಿಗೆ ಫಾಸ್ಟ್ ಟ್ಯಾಗ್‍ನ ಅರಿವು ಮೂಡಿಸಬೇಕು ಎಂಬುದು ವಾಹನ ಸವಾರರು ಅಭಿಪ್ರಾಯವಾಗಿದೆ.

    ಫಾಸ್ಟ್ ಟ್ಯಾಗ್ ಅಳವಡಿಕೆ ಹಾಗೂ ಸ್ಕ್ಯಾನಿಂಗ್ ನಲ್ಲಿ ಹಲವು ಲೋಪಗಳಿದ್ದು, ಇದರಿಂದಾಗಿ ಫಾಸ್ಟ್ ಟ್ಯಾಗ್ ಅಳವಡಿಸಿದ್ದರು ಟೋಲ್ ಗಳಲ್ಲಿ ಕಾಯುವಿಕೆ ಮುಂದುವರಿದಿದೆ. ಇದಕ್ಕೆ ಫಾಸ್ಟ್ ಟ್ಯಾಗ್ ವಿತರಿಸುತ್ತಿರುವ ಏಜೆನ್ಸಿಗಳು ಗುಣಮಟ್ಟದ ಟ್ಯಾಗ್ ವಿತರಣೆ ಮಾಡದ ಕಾರಣ ಹಾಗೂ ವಾಹನಗಳಲ್ಲಿ ಸರಿಯಾದ ಸ್ಥಳದಲ್ಲಿ ಟ್ಯಾಗ್ ಅಳವಡಿಸಿದ ಕಾರಣ ಟೋಲ್ ಗೇಟ್ ಗಳಲ್ಲಿ ಸ್ಕ್ಯಾನಿಂಗ್ ನಿಧಾನ ಗತಿಯಲ್ಲಿ ಆಗುತ್ತಿದ್ದು, ಇದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ಎಲ್ಲವೂ ಸರಿಯಾಗಲಿದೆ ಎಂಬುದು ಅತ್ತಿಬೆಲೆ ಟೋಲ್ ಮ್ಯಾನೇಜರ್ ತಿಮ್ಮಯ್ಯನವರ ಅಭಿಪ್ರಾಯ.

    ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ತಿಮ್ಮಯ್ಯ ಅವರು, ಕರ್ನಾಟಕದಲ್ಲಿ ಅತ್ತಿಬೆಲೆ ಟೋಲ್ ಫಾಸ್ಟ್ ಟ್ಯಾಗ್ ವಿತರಣೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು. ಫಾಸ್ಟ್ ಟ್ಯಾಗ್ ಅಳವಡಿಕೆಯಿಂದ ಗಂಟೆಗಟ್ಟಲೆ ಟೋಲ್ ಗಳಲ್ಲಿ ಕಾಯುವುದು ತಪ್ಪಿತೆಂದೂ ಫಾಸ್ಟ್ ಟ್ಯಾಗ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಸ್ಥಳೀಯ ವಾಹನ ಸವಾರರು ಕೆಲವೇ ಮೀಟರ್ ರಸ್ತೆ ಉಪಯೋಗಕ್ಕೆ ದುಡ್ಡು ತರಬೇಕೆ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.