Tag: ಫಾಸ್ಟ್ಯಾಗ್‌ ವಾರ್ಷಿಕ ಪಾಸ್

  • ಆ.15 ರಿಂದ ಸಿಗುತ್ತೆ ಫಾಸ್ಟ್ಯಾಗ್‌ ವಾರ್ಷಿಕ ಪಾಸ್‌

    ಆ.15 ರಿಂದ ಸಿಗುತ್ತೆ ಫಾಸ್ಟ್ಯಾಗ್‌ ವಾರ್ಷಿಕ ಪಾಸ್‌

    – 3,000 ರೂ.ಗೆ ಒಂದು ವರ್ಷ or 200 ಸಲ ಸಂಚಾರಕ್ಕೆ ಅವಕಾಶ

    ನವದೆಹಲಿ: 3,000 ರೂ. ಪಾವತಿಸಿ ದೇಶದ ಯಾವುದೇ ಟೋಲ್‌ಗಳಲ್ಲಿ ಒಂದು ವರ್ಷ ಅಥವಾ 200 ಟ್ರಿಪ್‌ಗೆ ಅನುಮತಿಸುವ ವಾರ್ಷಿಕ ಫಾಸ್ಟ್ಯಾಗ್‌ ಪಾಸ್‌ (FASTag Annual Pass) ಆ.15ರಿಂದ ಲಭಿಸಲಿದೆ.

    ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಫಾಸ್ಟ್‌ಟ್ಯಾಗ್‌ಗಳಿಗಾಗಿ ಹೊಸ ವಾರ್ಷಿಕ ಪಾಸ್ ಅನ್ನು ಜೂನ್‌ ತಿಂಗಳಲ್ಲಿ ಘೋಷಿಸಿತ್ತು. ಪಾಸ್‌ಗಳ ವಿತರಣಾ ಕಾರ್ಯಕ್ಕೆ ಆ.15ರಂದು ಚಾಲನೆ ಸಿಗಲಿದೆ. ಈ ಪಾಸ್‌ ಇದ್ದವರು, ಖಾಸಗಿ ಕಾರುಗಳು/ಜೀಪ್‌ಗಳು/ವ್ಯಾನ್‌ಗಳನ್ನು ಗೊತ್ತುಪಡಿಸಿದ ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಮೋಟಾರುಮಾರ್ಗ (NE) ಶುಲ್ಕ ಪ್ಲಾಜಾಗಳಲ್ಲಿ ಒಂದು ವರ್ಷ ಅಥವಾ 200 ಟ್ರಿಪ್‌ ಹೋಗಬಹುದು. ಪ್ರತಿ ಬಾರಿ ಟೋಲ್‌ ಶುಲ್ಕ ಕೊಡುವುದು ತಪ್ಪುತ್ತದೆ. ಇದನ್ನೂ ಓದಿ: FAStag ವ್ಯವಹಾರ – ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ವಾರ್ಷಿಕ ಪಾಸ್ ಆ.15 ರಿಂದ ಜಾರಿಗೆ ಬರಲಿದ್ದು, ಟೋಲ್ ಬೂತ್‌ಗಳಲ್ಲಿ ಕಾಯುವ ಸಮಯ, ದಟ್ಟಣೆ ಮತ್ತು ಸಂಘರ್ಷಗಳನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದರ ಪರಿಣಾಮವಾಗಿ ಲಕ್ಷಾಂತರ ಖಾಸಗಿ ಕಾರು ಮಾಲೀಕರಿಗೆ ಅನುಕೂಲಕರ ಪ್ರಯಾಣದ ಅನುಭವ ಸಿಗುತ್ತದೆ.

    ಬಳಕೆದಾರರು ತಮ್ಮ ಫಾಸ್ಟ್‌ಟ್ಯಾಗ್‌ಗಳನ್ನು 3,000 ರೂ.ಗಳಿಗೆ ನವೀಕರಿಸುವ ಮೂಲಕ ಮಾನ್ಯತೆಯ ಅವಧಿ ಮುಗಿಯುವವರೆಗೆ ಯಾವುದೇ ರಾಷ್ಟ್ರೀಯ ಹೆದ್ದಾರಿಯನ್ನು ಬಳಸಬಹುದು. ಈ ಪಾಸ್‌ಗಳ ಮಾನ್ಯತೆಯ ಅವಧಿ ಮುಗಿದಾಗ, ಬಳಕೆದಾರರು ಪ್ರಸ್ತುತ ಫಾಸ್ಟ್ಯಾಗ್ ವ್ಯವಸ್ಥೆಯಂತೆ ಅವುಗಳನ್ನು ರೀಚಾರ್ಜ್ ಮಾಡಬಹುದು.‌ ಇದನ್ನೂ ಓದಿ: PublicTV Explainer: ಫಾಸ್ಟ್ಯಾಗ್ 3,000 ರೂ. ವಾರ್ಷಿಕ ಪಾಸ್‌ – ನಿಮಗೆ ಲಾಭನಾ, ನಷ್ಟನಾ?

    ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಮೋಟಾರ್‌ವೇ (NE) ಶುಲ್ಕ ಪ್ಲಾಜಾಗಳಲ್ಲಿ ಮಾತ್ರ ಪ್ರವೇಶಿಸಬಹುದು. ಮೋಟಾರು ಮಾರ್ಗಗಳು, ರಾಜ್ಯ ಹೆದ್ದಾರಿಗಳು (SH) ಮತ್ತು ರಾಜ್ಯ ಸರ್ಕಾರಗಳು ಅಥವಾ ಸ್ಥಳೀಯ ಅಧಿಕಾರಿಗಳು ನಿಯಂತ್ರಿಸುವ ಇತರ ಸ್ಥಳಗಳು ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿನ ಶುಲ್ಕ ಪ್ಲಾಜಾಗಳಲ್ಲಿ ಇದು ಸಾಮಾನ್ಯ ಫಾಸ್ಟ್ಯಾಗ್‌ನಂತೆ ಕಾರ್ಯನಿರ್ವಹಿಸುತ್ತದೆ.

  • PublicTV Explainer: ಫಾಸ್ಟ್ಯಾಗ್ 3,000 ರೂ. ವಾರ್ಷಿಕ ಪಾಸ್‌ – ನಿಮಗೆ ಲಾಭನಾ, ನಷ್ಟನಾ?

    PublicTV Explainer: ಫಾಸ್ಟ್ಯಾಗ್ 3,000 ರೂ. ವಾರ್ಷಿಕ ಪಾಸ್‌ – ನಿಮಗೆ ಲಾಭನಾ, ನಷ್ಟನಾ?

    – ಎಲ್ಲಾ ಟೋಲ್ ಪ್ಲಾಜಾಗಳು ವಾರ್ಷಿಕ ಪಾಸ್ ಅಡಿ ಬರುತ್ತವೆಯೇ?
    – ಈಗಾಗಲೇ ಫಾಸ್ಟ್ಯಾಗ್ ಇರುವವರು ಏನು ಮಾಡಬೇಕು?

    ಭಾರತ ಸರ್ಕಾರವು ಖಾಸಗಿ ವಾಹನಗಳಿಗಾಗಿ ಹೊಸ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಅನ್ನು ಪರಿಚಯಿಸಿದೆ. 3000 ರೂ. ಕೊಟ್ಟರೆ ಒಂದು ವರ್ಷದ ಅವಧಿಗೆ ನಿಮ್ಮ ಫಾಸ್ಟ್ಯಾಗ್ ಮಾನ್ಯವಾಗಿರುತ್ತದೆ. ಖಾಸಗಿ ವಾಹನ ಮಾಲೀಕರಿಗೆ ವೆಚ್ಚವನ್ನು ಕಡಿಮೆ ಮಾಡುವುದು, ಹೆದ್ದಾರಿಗಳಲ್ಲಿನ ದಟ್ಟಣೆಗಳನ್ನು ಕಡಿಮೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ. ವಾಹನ ಮಾಲೀಕರಿಗೆ ಸಾಮಾನ್ಯವಾಗಿ ಫಾಸ್ಟ್ಯಾಗ್ ಬಗ್ಗೆ ತಿಳಿದೇ ಇರುತ್ತದೆ. ಆದರೆ, ಕೇಂದ್ರದ ವಾರ್ಷಿಕ ಪಾಸ್ ಪರಿಕಲ್ಪನೆ ಏನು? ಅದರಿಂದಾಗುವ ಪ್ರಯೋಜನವೇನು? ವಾರ್ಷಿಕ ಪಾಸ್‌ಗೆ ಇರುವ ನಿಯಮಗಳೇನು? ಮೊದಲಾದ ಪ್ರಶ್ನೆಗಳಿಗೆ ಪೂರ್ಣ ವಿವರ ಇಲ್ಲಿದೆ.

    ಫಾಸ್ಟ್ಯಾಗ್ ಎಂದರೇನು?
    ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರಿಗೆ ಟೋಲ್ ಶುಲ್ಕ ಪಾವತಿ ತ್ರಾಸದಾಯಕವಾಗಿತ್ತು. ಈ ಪ್ರಕ್ರಿಯೆಯಿಂದ ಟ್ರಾಫಿಕ್ ಜಾಮ್ ಕೂಡ ಹೆಚ್ಚಾಗುತ್ತಿತ್ತು. ಇದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಸೌಲಭ್ಯವೊಂದನ್ನು ಪರಿಚಯಿಸಿತು. ಅದೇ ‘ಫಾಸ್ಟ್ಯಾಗ್’ ಸೌಲಭ್ಯ. ಇದು ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯ. ಇದನ್ನು ಕಾರು ಮುಂಭಾಗದ ಗಾಜಿಗೆ ಅಂಟಿಸಲಾಗುತ್ತದೆ. ನಗದು ರಹಿತ ಮತ್ತು ತ್ವರಿತವಾಗಿ ಟೋಲ್ ಶುಲ್ಕ ಪಾವತಿಸಲು ಇದು ಸಹಕಾರಿಯಾಯಿತು. ಟೋಲ್‌ನಲ್ಲಿ ಹೆಚ್ಚಿನ ಸಮಯ ನಿಂತು ಹಣ ಪಾವತಿಸುವ ಕಿರಿಕಿರಿ ತಪ್ಪಿದಂತಾಯಿತು. ಇದನ್ನೂ ಓದಿ: ಜನರಿಗೆ ಗುಡ್ ನ್ಯೂಸ್ – 3 ಸಾವಿರಕ್ಕೆ ವಾರ್ಷಿಕ ಟೋಲ್‌ ಪಾಸ್‌!

    ಹಣ ಪಾವತಿ ಹೇಗೆ?
    ವಾಹನ ಮುಂಭಾಗದ ಗಾಜಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಆಧಾರಿತ ಫಾಸ್ಟ್ಯಾಗ್ ಅಂಟಿಸಲಾಗುತ್ತದೆ. ರೇಡಿಯೋ ಫ್ರೀಕ್ವೆನ್ಸಿ ಮೂಲಕ ಈ ಟ್ಯಾಗ್ ಸ್ಕ್ಯಾನ್ ಆಗಲಿದೆ. ಬಳಿಕ ನಿಮ್ಮ ಖಾತೆಯಿಂದ ಹಣ ಕಡಿತವಾಗಲಿದೆ. ಇದಕ್ಕೆ ನಿಮ್ಮ ಖಾತೆಯಲ್ಲಿ ಮುಂಗಡ ಹಣ ಇರಬೇಕು. ಎಲ್ಲಾ ಪ್ರಮುಖ ಬ್ಯಾಂಕ್‌ಗಳಲ್ಲಿ ಈ ಫಾಸ್ಟಾö್ಯಗ್ ಸೌಲಭ್ಯ ನೀಡಲಾಗುತ್ತಿದೆ. ಫಾಸ್ಟ್ಯಾಗನ್ನು ವಾಹನದ ನೋಂದಣಿ ಸಂಖ್ಯೆಗೆ ಜೋಡಿಸಲಾಗಿರುತ್ತದೆ. ಜೊತೆಗೆ ಇದನ್ನು ಗ್ರಾಹಕರ ಉಳಿತಾಯ ಖಾತೆಗೆ ಲಿಂಕ್ ಮಾಡಲಾಗುತ್ತದೆ. ಟ್ಯಾಗ್ ರೀಡ್ ಮಾಡುವ ಮೂಲಕ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ.

    ಫಾಸ್ಟ್ಯಾಗ್ ಹೇಗೆ ಕೆಲಸ ಮಾಡುತ್ತೆ?
    ಟೋಲ್ ಪ್ಲಾಜಾದೊಳಗೆ ಸೆನ್ಸಾರ್ ಸ್ಥಾಪಿಸಲಾಗಿರುತ್ತದೆ. ವಾಹನವು ಟೋಲ್ ಪ್ಲಾಜಾದೊಳಗೆ ಬಂದಾಗ, ಆ ಸೆನ್ಸಾರ್ ವಾಹನದ ವಿಂಡ್‌ಸ್ಕ್ರೀನ್‌ನಲ್ಲಿ ಅಂಟಿಸಿರುವ ಫಾಸ್ಟ್ಯಾಗ್ ಅನ್ನು ಟ್ರ್ಯಾಕ್ ಮಾಡುತ್ತದೆ. ನಿಮ್ಮ ಖಾತೆಯಿಂದ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಇದಕ್ಕಾಗಿ ನೀವು ಮುಂಚಿತವಾಗಿಯೇ ನಿಮ್ಮ ಪ್ರಿಪೇಯ್ಡ್ ಫಾಸ್ಟ್ಯಾಗ್ ಖಾತೆಯಲ್ಲಿ ಹಣ ಜಮೆ ಮಾಡಿರಬೇಕು.

    ಯಾವ್ಯಾವ ಬ್ಯಾಂಕ್‌ಗಳಲ್ಲಿ ಫಾಸ್ಟ್ಯಾಗ್ ಸಿಗುತ್ತೆ?
    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಫೆಡರಲ್ ಬ್ಯಾಂಕ್, ಐಸಿಐಸಿಐ, ಹೆಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಯೆಸ್ ಬ್ಯಾಂಕ್, ಪಂಜಾಬ್ & ಮಹಾರಾಷ್ಟ್ರ ಬ್ಯಾಂಕ್ ಸಹಕಾರಿ ಬ್ಯಾಂಕ್, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಾರತ್ವತ್ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ 3 ಸಾವಿರಕ್ಕೆ ವಾರ್ಷಿಕ, 30 ಸಾವಿರಕ್ಕೆ ಜೀವಿತಾವಧಿ ಟೋಲ್‌ ಪಾಸ್‌

    ವಾರ್ಷಿಕ ಪಾಸ್ ಯಾವಾಗಿನಿಂದ ಜಾರಿ?
    ಆಗಸ್ಟ್ 15ರಿಂದ ಜಾರಿಗೆ ಬರುತ್ತದೆ.

    ಯಾವ ವಾಹನಗಳಿಗೆ ಪಾಸ್ ಸಿಗುತ್ತೆ?
    ಇದನ್ನು ವಾಣಿಜ್ಯ ಉದ್ದೇಶಕ್ಕಲ್ಲದ ವಾಹನಗಳಿಗೆ ಮಾತ್ರ ವಿತರಿಸಲಾಗುವುದು. ಕಾರು, ಜೀಪ್, ವ್ಯಾನ್‌ಗಳು ಪಾಸ್ ಪಡೆದುಕೊಳ್ಳಬಹುದು.

    ನಿಯಮ ಏನು?
    ಫಾಸ್ಟ್ಯಾಗ್ ಆಧಾರಿತ ಪಾಸ್‌ಗಳು ಒಂದು ವರ್ಷ ಅವಧಿ ಅಥವಾ 200 ಟ್ರಿಪ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.

    ಫಾಸ್ಟ್ಯಾಗ್ ವಾರ್ಷಿಕ ಪಾಸ್ ಯೋಜನೆ ಎಂದರೇನು?
    ಫಾಸ್ಟ್ಟ್ಯಾಗ್ ಎನ್ನುವುದು ರಾಷ್ಟ್ರೀಯ ಪಾವತಿ ನಿಗಮ (NPCI) ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ವಹಿಸುವ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದೆ. ಫಾಸ್ಟ್ಯಾಗ್ ಸ್ಟಿಕ್ಕರ್ ಅನ್ನು ಸಾಮಾನ್ಯವಾಗಿ ಕಾರಿನ ವಿಂಡ್‌ಸ್ಕ್ರೀನ್‌ನಲ್ಲಿ ಅಂಟಿಸಲಾಗುತ್ತದೆ. ಇದನ್ನು 2014 ರಲ್ಲಿ ಪೈಲಟ್ ಯೋಜನೆಯಾಗಿ ಪ್ರಾರಂಭಿಸಲಾಯಿತು. 2021 ರಲ್ಲಿ ದೇಶದ ಪ್ರತಿಯೊಂದು ಟೋಲ್ ಪ್ಲಾಜಾದಲ್ಲಿ ಕಡ್ಡಾಯಗೊಳಿಸಲಾಯಿತು.

    ಈ ವಾರ್ಷಿಕ ಪಾಸ್ ಪಡೆದು ದೇಶದ ಯಾವುದೇ ಹೆದ್ದಾರಿಯಲ್ಲಿ ಮುಕ್ತವಾಗಿ ಸಂಚರಿಸಬಹುದು. ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಎಕ್ಸ್ಪ್ರೆಸ್‌ವೇ (NE) ಶುಲ್ಕ ಪ್ಲಾಜಾಗಳಲ್ಲಿ ನಿರ್ದಿಷ್ಟ ಅವಧಿಗೆ ಪ್ರತಿ ಟ್ರಿಪ್‌ಗೆ ಬಳಕೆದಾರ ಶುಲ್ಕವಿಲ್ಲದೆ ಖಾಸಗಿ ಕಾರು, ಜೀಪ್ ಅಥವಾ ವ್ಯಾನ್ ಅನ್ನು ಉಚಿತವಾಗಿ ಸಾಗಿಸಬಹುದು. ಇದನ್ನೂ ಓದಿ: FASTag ಬ್ಯಾಲೆನ್ಸ್‌ ಇಲ್ಲದೇ ಇದ್ರೆ ದುಪ್ಪಟ್ಟು ದಂಡ: ಇಂದಿನಿಂದ ಏನೇನು ಬದಲಾವಣೆ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ವಾರ್ಷಿಕ ಪಾಸ್ 200 ಟ್ರಿಪ್‌ಗಳನ್ನು ಪೂರ್ಣಗೊಳಿಸಿದ ನಂತರ ಅಥವಾ ಒಂದು ವರ್ಷದ ಅವಧಿ ಮುಗಿದ ನಂತರ ಅದು ಸ್ವಯಂಚಾಲಿತವಾಗಿ ನಿಯಮಿತ FASTagಗೆ ಮರಳುತ್ತದೆ. ಒಂದು ವರ್ಷದ ಅವಧಿ ಮುಗಿಯದಿದ್ದರೂ, 200 ಟ್ರಿಪ್‌ಗಳನ್ನು ಪೂರ್ಣಗೊಳಿಸಿದರೆ ಬಳಕೆದಾರ ಪಾಸ್‌ನ್ನು ಮತ್ತೆ ಖರೀದಿಸಬೇಕಾಗುತ್ತದೆ.

    delhi ncr toll plaza

    ಪಾಸನ್ನು ಬೇರೆಯವರು ಉಪಯೋಗಿಸಬಹುದೇ?
    ಪಾಸ್ ಅನ್ನು ಬೇರೆಯವರಿಗೆ ವರ್ಗಾಯಿಸುವಂತಿಲ್ಲ. FASTag ಅಂಟಿಸಿದ ಮತ್ತು ನೋಂದಾಯಿಸಿದ ವಾಹನಕ್ಕೆ ಮಾತ್ರ ಇದು ಮಾನ್ಯವಾಗಿರುತ್ತದೆ.

    ಟ್ರಿಪ್ ಲೆಕ್ಕಾಚಾರ ಹೇಗೆ?
    ಒಂದು ಟೋಲ್ ಪ್ಲಾಜಾವನ್ನು ದಾಟಿದರೆ ಅದನ್ನು ಒಂದು ಟ್ರಿಪ್ ಎಂದು ಪರಿಗಣಿಸಲಾಗುತ್ತದೆ. ಹೋದ ಮಾರ್ಗದಲ್ಲೇ ಮತ್ತೆ ವಾಪಸ್ ಬರುವುದಾದರೆ ಎರಡು ಟ್ರಿಪ್‌ಗಳಾಗಿ ಕೌಂಟ್ ಮಾಡಲಾಗುತ್ತದೆ.

    ಪಾಸ್‌ನಿಂದ ನಿಮಗೆ ಲಾಭನಾ?
    ನೀವು ನಿಯಮಿತ ಪ್ರಯಾಣಿಕರಾಗಿದ್ದರೆ, ಮಾಸಿಕ ಟೋಲ್ ಪಾಸ್‌ಗೆ 340 ರೂ. (ಅದು ಕೂಡ ಕೇವಲ ಒಂದು ಟೋಲ್ ಪ್ಲಾಜಾಗೆ.) ಪಾವತಿಸುತ್ತೀರಿ. 12 ತಿಂಗಳಲ್ಲಿ, ನೀವು 4,080 ರೂ. ಪಾವತಿಸಬೇಕಾಗುತ್ತದೆ. ಆದರೆ, ನೀವು ವಾರ್ಷಿಕ ಪಾಸ್ ಅನ್ನು ತೆಗೆದುಕೊಂಡರೆ, ನೀವು 3,000 ರೂ. ಮಾತ್ರ ಪಾವತಿಸಬೇಕಾಗುತ್ತದೆ. ಇದರಿಂದ ಉಳಿತಾಯವೂ ಸಾಧ್ಯವಾಗುತ್ತದೆ.

    FASTag ವಾರ್ಷಿಕ ಪಾಸ್ ಕಡ್ಡಾಯವೇ?
    ಇಲ್ಲ, ವಾರ್ಷಿಕ ಪಾಸ್ ಕಡ್ಡಾಯವಲ್ಲ. ಪಾಸ್ ಪಡೆಯದ ಬಳಕೆದಾರರು ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಸಿ ಪ್ರಯಾಣಿಸಬಹುದು.

    ಪಾಸ್ ಪಡೆಯೋದು ಹೇಗೆ?
    ಹೊಸ ಪಾಸ್ ಪಡೆಯುವ ಅಥವಾ ನವೀಕರಿಸುವ ಸೌಲಭ್ಯವು ಶೀಘ್ರದಲ್ಲಿ ರಾಜ್‌ಮಾರ್ಗ್ ಯಾತ್ರಾ ಆ್ಯಪ್‌ನಲ್ಲಿ ಲಭ್ಯವಾಗಲಿದೆ. ಇದರೊಂದಿಗೆ ಎನ್‌ಹೆಚ್‌ಎಐ ಮತ್ತು ಎಂಒಆರ್‌ಟಿಹೆಚ್ ಅಂತರ್ಜಾಲ ಪುಟಗಳಲ್ಲೂ ಲಭ್ಯ.

    ಈಗಾಗಲೇ FASTag ಇರುವವರು ಏನು ಮಾಡಬೇಕು?
    ಈಗಾಗಲೇ FASTag ಹೊಂದಿರುವವರು ಹೊಸ ಪಾಸನ್ನು ಖರೀದಿಸುವ ಅಗತ್ಯವಿಲ್ಲ. ವಾರ್ಷಿಕ ಪಾಸ್ ಅನ್ನು ಅಸ್ತಿತ್ವದಲ್ಲಿರುವ FASTagನಲ್ಲಿ ಸಕ್ರಿಯಗೊಳಿಸಬಹುದು.

    ಎಲ್ಲಾ ಟೋಲ್ ಪ್ಲಾಜಾಗಳು ಪಾಸ್ ಅಡಿಯಲ್ಲಿ ಬರುತ್ತವೆಯೇ?
    ಇಲ್ಲ, ಇದು ರಾಷ್ಟ್ರೀಯ ಹೆದ್ದಾರಿ ಮತ್ತು ರಾಷ್ಟ್ರೀಯ ಎಕ್ಸ್ಪ್ರೆಸ್‌ವೇ ಶುಲ್ಕ ಪ್ಲಾಜಾಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ರಾಜ್ಯ ಸರ್ಕಾರಗಳು ಅಥವಾ ಸ್ಥಳೀಯ ಸಂಸ್ಥೆಗಳು ನಿರ್ವಹಿಸುವ ಎಕ್ಸ್‌ಪ್ರೆಸ್‌ವೇಗಳು, ರಾಜ್ಯ ಹೆದ್ದಾರಿಗಳಿಗೆ ಪಾಸ್ ಅನ್ವಯಿಸುವುದಿಲ್ಲ.

    ಪ್ರಯೋಜನ ಏನು?
    * 60 ಕಿಮೀ ವ್ಯಾಪ್ತಿಯಲ್ಲಿನ ಟೋಲ್ ಪ್ಲಾಜಾಗಳು ಮತ್ತು ಟೋಲ್ ಪಾವತಿ ಸರಳೀಕರಣ.
    * ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯ ತಗ್ಗಲಿದೆ.
    * ಒತ್ತಡ ಮತ್ತು ಟೋಲ್ ಸಿಬ್ಬಂದಿ ಜೊತೆಗಿನ ಅನಗತ್ಯ ವಿವಾದ ತಪ್ಪಿಸಬಹುದು.
    * ವಾರ್ಷಿಕ ಪಾಸ್ ಮೂಲಕ ಸಂಚಾರ ಇನ್ನಷ್ಟು ವೇಗ ಪಡೆಯಲಿದೆ.
    * ಆರಾಮದಾಯಕ ಅನುಭವ ಖಾಸಗಿ ವಾಹನ ಮಾಲೀಕರದ್ದಾಗುತ್ತದೆ.