Tag: ಫಾಸ್ಟ್ಯಾಗ್

  • PublicTV Explainer: ಫಾಸ್ಟ್ಯಾಗ್ 3,000 ರೂ. ವಾರ್ಷಿಕ ಪಾಸ್‌ – ನಿಮಗೆ ಲಾಭನಾ, ನಷ್ಟನಾ?

    PublicTV Explainer: ಫಾಸ್ಟ್ಯಾಗ್ 3,000 ರೂ. ವಾರ್ಷಿಕ ಪಾಸ್‌ – ನಿಮಗೆ ಲಾಭನಾ, ನಷ್ಟನಾ?

    – ಎಲ್ಲಾ ಟೋಲ್ ಪ್ಲಾಜಾಗಳು ವಾರ್ಷಿಕ ಪಾಸ್ ಅಡಿ ಬರುತ್ತವೆಯೇ?
    – ಈಗಾಗಲೇ ಫಾಸ್ಟ್ಯಾಗ್ ಇರುವವರು ಏನು ಮಾಡಬೇಕು?

    ಭಾರತ ಸರ್ಕಾರವು ಖಾಸಗಿ ವಾಹನಗಳಿಗಾಗಿ ಹೊಸ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಅನ್ನು ಪರಿಚಯಿಸಿದೆ. 3000 ರೂ. ಕೊಟ್ಟರೆ ಒಂದು ವರ್ಷದ ಅವಧಿಗೆ ನಿಮ್ಮ ಫಾಸ್ಟ್ಯಾಗ್ ಮಾನ್ಯವಾಗಿರುತ್ತದೆ. ಖಾಸಗಿ ವಾಹನ ಮಾಲೀಕರಿಗೆ ವೆಚ್ಚವನ್ನು ಕಡಿಮೆ ಮಾಡುವುದು, ಹೆದ್ದಾರಿಗಳಲ್ಲಿನ ದಟ್ಟಣೆಗಳನ್ನು ಕಡಿಮೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ. ವಾಹನ ಮಾಲೀಕರಿಗೆ ಸಾಮಾನ್ಯವಾಗಿ ಫಾಸ್ಟ್ಯಾಗ್ ಬಗ್ಗೆ ತಿಳಿದೇ ಇರುತ್ತದೆ. ಆದರೆ, ಕೇಂದ್ರದ ವಾರ್ಷಿಕ ಪಾಸ್ ಪರಿಕಲ್ಪನೆ ಏನು? ಅದರಿಂದಾಗುವ ಪ್ರಯೋಜನವೇನು? ವಾರ್ಷಿಕ ಪಾಸ್‌ಗೆ ಇರುವ ನಿಯಮಗಳೇನು? ಮೊದಲಾದ ಪ್ರಶ್ನೆಗಳಿಗೆ ಪೂರ್ಣ ವಿವರ ಇಲ್ಲಿದೆ.

    ಫಾಸ್ಟ್ಯಾಗ್ ಎಂದರೇನು?
    ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರಿಗೆ ಟೋಲ್ ಶುಲ್ಕ ಪಾವತಿ ತ್ರಾಸದಾಯಕವಾಗಿತ್ತು. ಈ ಪ್ರಕ್ರಿಯೆಯಿಂದ ಟ್ರಾಫಿಕ್ ಜಾಮ್ ಕೂಡ ಹೆಚ್ಚಾಗುತ್ತಿತ್ತು. ಇದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಸೌಲಭ್ಯವೊಂದನ್ನು ಪರಿಚಯಿಸಿತು. ಅದೇ ‘ಫಾಸ್ಟ್ಯಾಗ್’ ಸೌಲಭ್ಯ. ಇದು ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯ. ಇದನ್ನು ಕಾರು ಮುಂಭಾಗದ ಗಾಜಿಗೆ ಅಂಟಿಸಲಾಗುತ್ತದೆ. ನಗದು ರಹಿತ ಮತ್ತು ತ್ವರಿತವಾಗಿ ಟೋಲ್ ಶುಲ್ಕ ಪಾವತಿಸಲು ಇದು ಸಹಕಾರಿಯಾಯಿತು. ಟೋಲ್‌ನಲ್ಲಿ ಹೆಚ್ಚಿನ ಸಮಯ ನಿಂತು ಹಣ ಪಾವತಿಸುವ ಕಿರಿಕಿರಿ ತಪ್ಪಿದಂತಾಯಿತು. ಇದನ್ನೂ ಓದಿ: ಜನರಿಗೆ ಗುಡ್ ನ್ಯೂಸ್ – 3 ಸಾವಿರಕ್ಕೆ ವಾರ್ಷಿಕ ಟೋಲ್‌ ಪಾಸ್‌!

    ಹಣ ಪಾವತಿ ಹೇಗೆ?
    ವಾಹನ ಮುಂಭಾಗದ ಗಾಜಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಆಧಾರಿತ ಫಾಸ್ಟ್ಯಾಗ್ ಅಂಟಿಸಲಾಗುತ್ತದೆ. ರೇಡಿಯೋ ಫ್ರೀಕ್ವೆನ್ಸಿ ಮೂಲಕ ಈ ಟ್ಯಾಗ್ ಸ್ಕ್ಯಾನ್ ಆಗಲಿದೆ. ಬಳಿಕ ನಿಮ್ಮ ಖಾತೆಯಿಂದ ಹಣ ಕಡಿತವಾಗಲಿದೆ. ಇದಕ್ಕೆ ನಿಮ್ಮ ಖಾತೆಯಲ್ಲಿ ಮುಂಗಡ ಹಣ ಇರಬೇಕು. ಎಲ್ಲಾ ಪ್ರಮುಖ ಬ್ಯಾಂಕ್‌ಗಳಲ್ಲಿ ಈ ಫಾಸ್ಟಾö್ಯಗ್ ಸೌಲಭ್ಯ ನೀಡಲಾಗುತ್ತಿದೆ. ಫಾಸ್ಟ್ಯಾಗನ್ನು ವಾಹನದ ನೋಂದಣಿ ಸಂಖ್ಯೆಗೆ ಜೋಡಿಸಲಾಗಿರುತ್ತದೆ. ಜೊತೆಗೆ ಇದನ್ನು ಗ್ರಾಹಕರ ಉಳಿತಾಯ ಖಾತೆಗೆ ಲಿಂಕ್ ಮಾಡಲಾಗುತ್ತದೆ. ಟ್ಯಾಗ್ ರೀಡ್ ಮಾಡುವ ಮೂಲಕ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ.

    ಫಾಸ್ಟ್ಯಾಗ್ ಹೇಗೆ ಕೆಲಸ ಮಾಡುತ್ತೆ?
    ಟೋಲ್ ಪ್ಲಾಜಾದೊಳಗೆ ಸೆನ್ಸಾರ್ ಸ್ಥಾಪಿಸಲಾಗಿರುತ್ತದೆ. ವಾಹನವು ಟೋಲ್ ಪ್ಲಾಜಾದೊಳಗೆ ಬಂದಾಗ, ಆ ಸೆನ್ಸಾರ್ ವಾಹನದ ವಿಂಡ್‌ಸ್ಕ್ರೀನ್‌ನಲ್ಲಿ ಅಂಟಿಸಿರುವ ಫಾಸ್ಟ್ಯಾಗ್ ಅನ್ನು ಟ್ರ್ಯಾಕ್ ಮಾಡುತ್ತದೆ. ನಿಮ್ಮ ಖಾತೆಯಿಂದ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಇದಕ್ಕಾಗಿ ನೀವು ಮುಂಚಿತವಾಗಿಯೇ ನಿಮ್ಮ ಪ್ರಿಪೇಯ್ಡ್ ಫಾಸ್ಟ್ಯಾಗ್ ಖಾತೆಯಲ್ಲಿ ಹಣ ಜಮೆ ಮಾಡಿರಬೇಕು.

    ಯಾವ್ಯಾವ ಬ್ಯಾಂಕ್‌ಗಳಲ್ಲಿ ಫಾಸ್ಟ್ಯಾಗ್ ಸಿಗುತ್ತೆ?
    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಫೆಡರಲ್ ಬ್ಯಾಂಕ್, ಐಸಿಐಸಿಐ, ಹೆಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಯೆಸ್ ಬ್ಯಾಂಕ್, ಪಂಜಾಬ್ & ಮಹಾರಾಷ್ಟ್ರ ಬ್ಯಾಂಕ್ ಸಹಕಾರಿ ಬ್ಯಾಂಕ್, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಾರತ್ವತ್ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ 3 ಸಾವಿರಕ್ಕೆ ವಾರ್ಷಿಕ, 30 ಸಾವಿರಕ್ಕೆ ಜೀವಿತಾವಧಿ ಟೋಲ್‌ ಪಾಸ್‌

    ವಾರ್ಷಿಕ ಪಾಸ್ ಯಾವಾಗಿನಿಂದ ಜಾರಿ?
    ಆಗಸ್ಟ್ 15ರಿಂದ ಜಾರಿಗೆ ಬರುತ್ತದೆ.

    ಯಾವ ವಾಹನಗಳಿಗೆ ಪಾಸ್ ಸಿಗುತ್ತೆ?
    ಇದನ್ನು ವಾಣಿಜ್ಯ ಉದ್ದೇಶಕ್ಕಲ್ಲದ ವಾಹನಗಳಿಗೆ ಮಾತ್ರ ವಿತರಿಸಲಾಗುವುದು. ಕಾರು, ಜೀಪ್, ವ್ಯಾನ್‌ಗಳು ಪಾಸ್ ಪಡೆದುಕೊಳ್ಳಬಹುದು.

    ನಿಯಮ ಏನು?
    ಫಾಸ್ಟ್ಯಾಗ್ ಆಧಾರಿತ ಪಾಸ್‌ಗಳು ಒಂದು ವರ್ಷ ಅವಧಿ ಅಥವಾ 200 ಟ್ರಿಪ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.

    ಫಾಸ್ಟ್ಯಾಗ್ ವಾರ್ಷಿಕ ಪಾಸ್ ಯೋಜನೆ ಎಂದರೇನು?
    ಫಾಸ್ಟ್ಟ್ಯಾಗ್ ಎನ್ನುವುದು ರಾಷ್ಟ್ರೀಯ ಪಾವತಿ ನಿಗಮ (NPCI) ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ವಹಿಸುವ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದೆ. ಫಾಸ್ಟ್ಯಾಗ್ ಸ್ಟಿಕ್ಕರ್ ಅನ್ನು ಸಾಮಾನ್ಯವಾಗಿ ಕಾರಿನ ವಿಂಡ್‌ಸ್ಕ್ರೀನ್‌ನಲ್ಲಿ ಅಂಟಿಸಲಾಗುತ್ತದೆ. ಇದನ್ನು 2014 ರಲ್ಲಿ ಪೈಲಟ್ ಯೋಜನೆಯಾಗಿ ಪ್ರಾರಂಭಿಸಲಾಯಿತು. 2021 ರಲ್ಲಿ ದೇಶದ ಪ್ರತಿಯೊಂದು ಟೋಲ್ ಪ್ಲಾಜಾದಲ್ಲಿ ಕಡ್ಡಾಯಗೊಳಿಸಲಾಯಿತು.

    ಈ ವಾರ್ಷಿಕ ಪಾಸ್ ಪಡೆದು ದೇಶದ ಯಾವುದೇ ಹೆದ್ದಾರಿಯಲ್ಲಿ ಮುಕ್ತವಾಗಿ ಸಂಚರಿಸಬಹುದು. ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಎಕ್ಸ್ಪ್ರೆಸ್‌ವೇ (NE) ಶುಲ್ಕ ಪ್ಲಾಜಾಗಳಲ್ಲಿ ನಿರ್ದಿಷ್ಟ ಅವಧಿಗೆ ಪ್ರತಿ ಟ್ರಿಪ್‌ಗೆ ಬಳಕೆದಾರ ಶುಲ್ಕವಿಲ್ಲದೆ ಖಾಸಗಿ ಕಾರು, ಜೀಪ್ ಅಥವಾ ವ್ಯಾನ್ ಅನ್ನು ಉಚಿತವಾಗಿ ಸಾಗಿಸಬಹುದು. ಇದನ್ನೂ ಓದಿ: FASTag ಬ್ಯಾಲೆನ್ಸ್‌ ಇಲ್ಲದೇ ಇದ್ರೆ ದುಪ್ಪಟ್ಟು ದಂಡ: ಇಂದಿನಿಂದ ಏನೇನು ಬದಲಾವಣೆ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ವಾರ್ಷಿಕ ಪಾಸ್ 200 ಟ್ರಿಪ್‌ಗಳನ್ನು ಪೂರ್ಣಗೊಳಿಸಿದ ನಂತರ ಅಥವಾ ಒಂದು ವರ್ಷದ ಅವಧಿ ಮುಗಿದ ನಂತರ ಅದು ಸ್ವಯಂಚಾಲಿತವಾಗಿ ನಿಯಮಿತ FASTagಗೆ ಮರಳುತ್ತದೆ. ಒಂದು ವರ್ಷದ ಅವಧಿ ಮುಗಿಯದಿದ್ದರೂ, 200 ಟ್ರಿಪ್‌ಗಳನ್ನು ಪೂರ್ಣಗೊಳಿಸಿದರೆ ಬಳಕೆದಾರ ಪಾಸ್‌ನ್ನು ಮತ್ತೆ ಖರೀದಿಸಬೇಕಾಗುತ್ತದೆ.

    delhi ncr toll plaza

    ಪಾಸನ್ನು ಬೇರೆಯವರು ಉಪಯೋಗಿಸಬಹುದೇ?
    ಪಾಸ್ ಅನ್ನು ಬೇರೆಯವರಿಗೆ ವರ್ಗಾಯಿಸುವಂತಿಲ್ಲ. FASTag ಅಂಟಿಸಿದ ಮತ್ತು ನೋಂದಾಯಿಸಿದ ವಾಹನಕ್ಕೆ ಮಾತ್ರ ಇದು ಮಾನ್ಯವಾಗಿರುತ್ತದೆ.

    ಟ್ರಿಪ್ ಲೆಕ್ಕಾಚಾರ ಹೇಗೆ?
    ಒಂದು ಟೋಲ್ ಪ್ಲಾಜಾವನ್ನು ದಾಟಿದರೆ ಅದನ್ನು ಒಂದು ಟ್ರಿಪ್ ಎಂದು ಪರಿಗಣಿಸಲಾಗುತ್ತದೆ. ಹೋದ ಮಾರ್ಗದಲ್ಲೇ ಮತ್ತೆ ವಾಪಸ್ ಬರುವುದಾದರೆ ಎರಡು ಟ್ರಿಪ್‌ಗಳಾಗಿ ಕೌಂಟ್ ಮಾಡಲಾಗುತ್ತದೆ.

    ಪಾಸ್‌ನಿಂದ ನಿಮಗೆ ಲಾಭನಾ?
    ನೀವು ನಿಯಮಿತ ಪ್ರಯಾಣಿಕರಾಗಿದ್ದರೆ, ಮಾಸಿಕ ಟೋಲ್ ಪಾಸ್‌ಗೆ 340 ರೂ. (ಅದು ಕೂಡ ಕೇವಲ ಒಂದು ಟೋಲ್ ಪ್ಲಾಜಾಗೆ.) ಪಾವತಿಸುತ್ತೀರಿ. 12 ತಿಂಗಳಲ್ಲಿ, ನೀವು 4,080 ರೂ. ಪಾವತಿಸಬೇಕಾಗುತ್ತದೆ. ಆದರೆ, ನೀವು ವಾರ್ಷಿಕ ಪಾಸ್ ಅನ್ನು ತೆಗೆದುಕೊಂಡರೆ, ನೀವು 3,000 ರೂ. ಮಾತ್ರ ಪಾವತಿಸಬೇಕಾಗುತ್ತದೆ. ಇದರಿಂದ ಉಳಿತಾಯವೂ ಸಾಧ್ಯವಾಗುತ್ತದೆ.

    FASTag ವಾರ್ಷಿಕ ಪಾಸ್ ಕಡ್ಡಾಯವೇ?
    ಇಲ್ಲ, ವಾರ್ಷಿಕ ಪಾಸ್ ಕಡ್ಡಾಯವಲ್ಲ. ಪಾಸ್ ಪಡೆಯದ ಬಳಕೆದಾರರು ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಸಿ ಪ್ರಯಾಣಿಸಬಹುದು.

    ಪಾಸ್ ಪಡೆಯೋದು ಹೇಗೆ?
    ಹೊಸ ಪಾಸ್ ಪಡೆಯುವ ಅಥವಾ ನವೀಕರಿಸುವ ಸೌಲಭ್ಯವು ಶೀಘ್ರದಲ್ಲಿ ರಾಜ್‌ಮಾರ್ಗ್ ಯಾತ್ರಾ ಆ್ಯಪ್‌ನಲ್ಲಿ ಲಭ್ಯವಾಗಲಿದೆ. ಇದರೊಂದಿಗೆ ಎನ್‌ಹೆಚ್‌ಎಐ ಮತ್ತು ಎಂಒಆರ್‌ಟಿಹೆಚ್ ಅಂತರ್ಜಾಲ ಪುಟಗಳಲ್ಲೂ ಲಭ್ಯ.

    ಈಗಾಗಲೇ FASTag ಇರುವವರು ಏನು ಮಾಡಬೇಕು?
    ಈಗಾಗಲೇ FASTag ಹೊಂದಿರುವವರು ಹೊಸ ಪಾಸನ್ನು ಖರೀದಿಸುವ ಅಗತ್ಯವಿಲ್ಲ. ವಾರ್ಷಿಕ ಪಾಸ್ ಅನ್ನು ಅಸ್ತಿತ್ವದಲ್ಲಿರುವ FASTagನಲ್ಲಿ ಸಕ್ರಿಯಗೊಳಿಸಬಹುದು.

    ಎಲ್ಲಾ ಟೋಲ್ ಪ್ಲಾಜಾಗಳು ಪಾಸ್ ಅಡಿಯಲ್ಲಿ ಬರುತ್ತವೆಯೇ?
    ಇಲ್ಲ, ಇದು ರಾಷ್ಟ್ರೀಯ ಹೆದ್ದಾರಿ ಮತ್ತು ರಾಷ್ಟ್ರೀಯ ಎಕ್ಸ್ಪ್ರೆಸ್‌ವೇ ಶುಲ್ಕ ಪ್ಲಾಜಾಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ರಾಜ್ಯ ಸರ್ಕಾರಗಳು ಅಥವಾ ಸ್ಥಳೀಯ ಸಂಸ್ಥೆಗಳು ನಿರ್ವಹಿಸುವ ಎಕ್ಸ್‌ಪ್ರೆಸ್‌ವೇಗಳು, ರಾಜ್ಯ ಹೆದ್ದಾರಿಗಳಿಗೆ ಪಾಸ್ ಅನ್ವಯಿಸುವುದಿಲ್ಲ.

    ಪ್ರಯೋಜನ ಏನು?
    * 60 ಕಿಮೀ ವ್ಯಾಪ್ತಿಯಲ್ಲಿನ ಟೋಲ್ ಪ್ಲಾಜಾಗಳು ಮತ್ತು ಟೋಲ್ ಪಾವತಿ ಸರಳೀಕರಣ.
    * ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯ ತಗ್ಗಲಿದೆ.
    * ಒತ್ತಡ ಮತ್ತು ಟೋಲ್ ಸಿಬ್ಬಂದಿ ಜೊತೆಗಿನ ಅನಗತ್ಯ ವಿವಾದ ತಪ್ಪಿಸಬಹುದು.
    * ವಾರ್ಷಿಕ ಪಾಸ್ ಮೂಲಕ ಸಂಚಾರ ಇನ್ನಷ್ಟು ವೇಗ ಪಡೆಯಲಿದೆ.
    * ಆರಾಮದಾಯಕ ಅನುಭವ ಖಾಸಗಿ ವಾಹನ ಮಾಲೀಕರದ್ದಾಗುತ್ತದೆ.

  • ಮೇ 1 ರಿಂದ ಜಿಪಿಎಸ್ ಆಧಾರಿತ ಟೋಲ್ ಇಲ್ಲ – ಹೆದ್ದಾರಿ ಸಚಿವಾಲಯ ಸ್ಪಷ್ಟನೆ

    ಮೇ 1 ರಿಂದ ಜಿಪಿಎಸ್ ಆಧಾರಿತ ಟೋಲ್ ಇಲ್ಲ – ಹೆದ್ದಾರಿ ಸಚಿವಾಲಯ ಸ್ಪಷ್ಟನೆ

    ನವದೆಹಲಿ: ಜಿಪಿಎಸ್ ಆಧಾರಿತ ಟೋಲ್ (Satellite-based Tolling) ವ್ಯವಸ್ಥೆಯ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಸ್ಪಷ್ಟನೆ ನೀಡಿದ್ದು, ಸದ್ಯ ಚಾಲ್ತಿಯಲ್ಲಿರುವ ಫಾಸ್ಟ್ಯಾಗ್‌ (FASTag) ಟೋಲ್ ವ್ಯವಸ್ಥೆಯೇ ಮುಂದುವರೆಯಲಿದೆ.

    ಮೇ 1ರಿಂದ ಜಿಪಿಎಸ್ ಆಧಾರಿತ ಫಾಸ್ಟ್ಯಾಗ್‌ ಟೋಲ್ ಇರಲಿದೆ ಎಂಬ ಸುದ್ದಿಯು ಹರಿದಾಡಿತ್ತು. ಈ ವರದಿಯನ್ನು ತಳ್ಳಿ ಹಾಕಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು, ಈ ರೀತಿಯ ಯಾವುದೇ ಚಿಂತನೆ ಇಲ್ಲ. ಸದ್ಯ ಫಾಸ್ಟ್ಯಾಗ್‌ ಟೋಲ್ ವ್ಯವಸ್ಥೆಯೇ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ನಿನ್ ಜೊತೆ ಮಲ್ಕೋಬೇಕು ಬಾ – ಟೀಂ ಇಂಡಿಯಾ ಮಾಜಿ ಆಟಗಾರ ಬಂಗಾರ್‌ ಪುತ್ರಿಗೆ ಕ್ರಿಕೆಟಿಗರಿಂದ ಲೈಂಗಿಕ ಕಿರುಕುಳ

    ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ ಬಗ್ಗೆ ಸಲಹೆಗಳು ಬಂದಿವೆ. ಆದರೆ ಅದನ್ನು ಜಾರಿಗೆ ತರುತ್ತಿಲ್ಲ. ಕೆಲವು ಕಡೆ ಪ್ರಯೋಗಿಕವಾಗಿ ಎನ್‌ಪಿಆರ್ ಫಾಸ್ಟ್ಯಾಗ್‌ (NPR FASTag) ಆಳವಡಿಕೆಗೆ ಚಿಂತನೆ ಮಾಡಲಾಗುತ್ತಿದೆ. ನಂಬರ್ ಪ್ಲೇಟ್ ಆಧಾರಿತ ಫಾಸ್ಟ್ಯಾಗ್‌ ಇದಾಗಿದ್ದು, ಇದರ ಸಾಧಕ ಭಾದಕಗಳನ್ನ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎನ್ನುವ ಮೂಲಕ ವರದಿಯನ್ನು ತಳ್ಳಿಹಾಕಿದೆ.

  • ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

    ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

    ನವದೆಹಲಿ: ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) ಟೋಲ್ ಪ್ಲಾಜಾಗಳನ್ನು (Toll Plaza) ನೋಡುತ್ತವೆ. ಅಲ್ಲಿ ಟೋಲ್ (Toll) ಪಾವತಿಗಾಗಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಇದರಿಂದ ವಾಹನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಕಿರಿಕಿರಿ ಆಗುವುದುಂಟು. ಆದರೆ ಭವಿಷ್ಯದಲ್ಲಿ ಈ ಟೋಲ್ ಪ್ಲಾಜಾಗಳಿಂದ ಕಿರಿಕಿರಿ ಆಗುವುದೇ ಇಲ್ಲ.

    ಈ ಕುರಿತು ಮಾತನಾಡಿರುವ ಕೇಂದ್ರ ನಿತಿನ್ ಗಡ್ಕರಿ (Nitin Gadkari), ಶೀಘ್ರದಲ್ಲೇ ಸ್ವಯಂಚಾಲಿತವಾಗಿ ವಾಹನ ಸಂಖ್ಯೆಗಳನ್ನು ಗುರುತಿಸುವ ವ್ಯವಸ್ಥೆ ಅಳವಡಿಸಲಾಗುವುದು. ಸ್ವಯಂ ಚಾಲಿತವಾಗಿ ವಾಹನ ಸಂಖ್ಯೆಗಳನ್ನು ಗುರುತಿಸಲು ಕೇಂದ್ರ ಸರ್ಕಾರ ಈಗಾಗಲೇ ಪ್ರಾಯೋಗಿಕ ಯೋಜನೆಗಳನ್ನು ನಡೆಸುತ್ತಿದೆ. ಇದು ವಾಹನ ಮಾಲೀಕರ ಬ್ಯಾಂಕ್ ಖಾತೆಗಳಿಂದ (Bank Account) ಶುಲ್ಕವನ್ನು ಖಡಿತಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ: ಆರಗ ಜ್ಞಾನೇಂದ್ರ

    ಫಾಸ್ಟ್ಯಾಗ್‌ಗಳನ್ನು (FASTags) ಪರಿಚಯಿಸಿದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(NHAI) ಟೋಲ್ ಆದಾಯವು ವರ್ಷಕ್ಕೆ 15 ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ಅದಕ್ಕಾಗಿ ಈಗ ಆಟೋ ಮೊಬೈಲ್ ನಂಬರ್‌ಪ್ಲೇಟ್(ಸ್ವಯಂಚಾಲಿನ ನಂಬರ್‌ಪ್ಲೇಟ್ ರೀಡರ್ ಕ್ಯಾಮೆರಾ) (Automatic Number Plate Reader Cameras) ತ್ರಜ್ಞಾನವನ್ನು ಪರಿಚಯಿಸಲಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೇಜಾವರ ಶ್ರೀಗಳ ಎದೆ ಮೇಲೆ ಕಾಲಿಟ್ಟು ಸೊಪ್ಪು ತಿಂದ ಆಡು

    2018-19ರಲ್ಲಿ ಟೋಲ್ ಪ್ಲಾಜಾಗಳಲ್ಲಿ (Toll Plaza) ವಾಹನಗಳು ಕಾಯುತ್ತಿದ್ದ ಸಮಯ ಸರಿಸುಮಾರು 8 ನಿಮಿಷಗಳಿತ್ತು. 2020 ರಿಂದ 2022ರ ಅವಧಿಯಲ್ಲಿ ಫಾಸ್ಟ್ಯಾಗ್‌ಗಳನ್ನು ಪರಿಚಯಿಸಿದ ನಂತರ ವಾಹನಗಳ ಸರಾಸರಿ ಸಮಯವು 47 ಸೆಕೆಂಡುಗಳಿಗೆ ಇಳಿಕೆಯಾಯಿತು. ಹೀಗಿದ್ದೂ ಕೆಲವು ನಗರಗಳಲ್ಲಿ ಸಂದಿಗ್ಧ ಸಮಯಗಳಲ್ಲಿ ಹೆಚ್ಚಿನ ವಿಳಂಬವಾಗುತ್ತಿವೆ. ಅದಕ್ಕಾಗಿ ಸಂಪೂರ್ಣ ಬದಲಿ ವ್ಯವಸ್ಥೆ ಕಲ್ಪಿಸಲು ಸ್ವಯಂಚಾಲಿನ ಟೋಲ್ ಸಂಗ್ರಹಿಸುವ ವಿಧಾನವನ್ನು ಪರಿಚಯಿಸಲಾಗುತ್ತಿದೆ ಎಂದಿದ್ದಾರೆ.

    ಸರ್ಕಾರ ಒಟ್ಟು ಎರಡು ರೀತಿಯ ಆಯ್ಕೆಗಳನ್ನು ಎದುರುನೋಡುತ್ತಿದೆ. ಮೊದಲಿಗೆ ಟೋಲ್ ಅನ್ನು ನೇರವಾಗಿ ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸುವುದು, 2ನೇ ಅಯ್ಕೆಯಾಗಿ ಕಾರಿನಲ್ಲಿ ಜಿಪಿಎಸ್ ಅಳವಡಿಸಿ ಉಪಗ್ರಹ ಆಧಾರಿತವಾಗಿ ಟೋಲ್ ಸಂಗ್ರಹ ಮಾಡುವ ವಿಧಾನವನ್ನು ಎದುರು ನೋಡುತ್ತಿದೆ. ಉಪಗ್ರಹ ವಿಧಾನ ಅನುಸರಿಸಿದರೆ ಫಾಸ್ಟ್ಯಾಗ್‌ ಬದಲಾಗಿ ಜಿಪಿಎಸ್ ಅಳವಡಿಸಬೇಕಾಗುತ್ತದೆ. ಯಾವ ಆಯ್ಕೆಯನ್ನು ಈಗಲೇ ಅಂತಿಮಗೊಳಿಸಿಲ್ಲ. ಆದರೆ ಟೋಲ್ ಪ್ಲಾಜಾಗಳಿಂದ ಮುಕ್ತಿ ನೀಡುವುದು ಖಚಿತ. ಸ್ವಯಂ ಚಾಲಿತ ಟೋಲ್ ಸಂಗ್ರಹಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟೋಲ್‍ಗಳಲ್ಲಿ 10 ಸೆಕೆಂಡ್ ಮಾತ್ರ ವೇಟಿಂಗ್

    ಟೋಲ್‍ಗಳಲ್ಲಿ 10 ಸೆಕೆಂಡ್ ಮಾತ್ರ ವೇಟಿಂಗ್

    – 100 ಮೀ.ಗೂ ಹೆಚ್ಚು ಸರದಿ ನಿಂತರೆ ಶುಲ್ಕ ಪಾವತಿಸುವಂತಿಲ್ಲ
    – ಫಾಸ್ಟ್ ಟ್ಯಾಗ್ ಅಳವಡಿಸಿರುವ ವಾಹನಗಳಿಗೆ ಮಾತ್ರ ಅನ್ವಯ

    ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನದಟ್ಟಣೆಯ ಸಮಯ ಸೇರಿ ಎಲ್ಲ ಸಮಯದಲ್ಲೂ ಪ್ರತಿ ವಾಹನದ ಟೋಲ್ ಶುಲ್ಕ ಪಾವತಿ ಸಮಯ 10 ಸೆಕೆಂಡ್ ಮೀರದಿರುವುದನ್ನು ಖಾತರಿಪಡಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‍ಎಚ್‍ಎಐ) ತಿಳಿಸಿದೆ.

    ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿರುವ ಪ್ರಾಧಿಕಾರ, ಟೋಲ್ ಶುಲ್ಕ ಪಾವತಿ ಸಮಯ 10 ಸೆಕೆಂಡ್ ಮೀರುವಂತಿಲ್ಲ. ಅಲ್ಲದೆ ಟೋಲ್ ಪ್ಲಾಜಾಗಳಲ್ಲಿ 100 ಮೀಟರ್ ಗಿಂತ ಹೆಚ್ಚು ವಾಹನಗಳ ಸರದಿ ನಿಲ್ಲಲು ಅವಕಾಶವಿಲ್ಲ. ಒಂದು ವೇಳೆ ಯಾವುದಾದರು ಕಾರಣಕ್ಕೆ ಕಾಯುತ್ತಿರುವ ವಾಹನಗಳ ಸರದಿ 100 ಮೀಟರ್ ಗಿಂತ ಹೆಚ್ಚಾದರೆ ಟೋಲ್ ಬೂತ್ ಗಳಲ್ಲಿ ವಾಹನಗಳ ಸರದಿ 100 ಮೀಟರ್ ಒಳಗಿನ ವಾಹನಗಳು ಟೋಲ್ ಪಾವತಿಸದೆ ಸಂಚರಿಸಬಹುದು.

    ಟೋಲ್ ಬೂತ್ ನಲ್ಲಿ ಪ್ರತಿಯೊಂದು ಟೋಲ್ ಮಾರ್ಗದಲ್ಲಿ 100 ಮೀಟರ್ ದೂರದಲ್ಲಿ ಹಳದಿ ಪಟ್ಟಿ ಹಾಕಲಾಗುತ್ತದೆ. ಒಂದು ವೇಳೆ 100 ಮೀಟರ್‍ಗೂ ಅಧಿಕ ಸರದಿ ನಿಂತರೆ ಈ ಹಳದಿ ಪಟ್ಟಿ ಒಳಗಿನ ವಾಹನಗಳು ಟೋಲ್ ಪಾವತಿಸದೇ ಉಚಿತವಾಗಿ ಸಂಚರಿಸಬಹುದಾಗಿದೆ. ಇದು ಫಾಸ್ಟ್ಯಾಗ್ ಅಳವಡಿಸಿಕೊಂಡ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ. ಫಾಸ್ಟ್ಯಾಗ್ ಅಳವಡಿಸದ ವಾಹನಗಳಿಗೆ ವೇಟಿಂಗ್ ಪಿರಿಯಡ್ ನಿಯಮ ಅನ್ವಯವಾಗುವುದಿಲ್ಲ ಎಂದು ಎನ್‍ಎಚ್‍ಎಐ ಸ್ಪಷ್ಟಪಡಿಸಿದೆ.

    2021ರ ಫೆಬ್ರವರಿ ಮಧ್ಯದಿಂದೀಚೆಗೆ ಟೋಲ್ ಪ್ಲಾಜಾಗಳನ್ನು ಎನ್‍ಎಚ್‍ಎಐ ಶೇ.100ರಷ್ಟು ನಗದುರಹಿತ ವಹಿವಾಟನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಎನ್‍ಎಚ್‍ಎಐ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿರುವ ಪ್ರಮಾಣ ಶೇ.96ರಷ್ಟು ಮತ್ತು ಹಲವು ಪ್ಲಾಜಾಗಳಲ್ಲಿ ಶೇ.99ರಷ್ಟಿದೆ. ದೇಶದಲ್ಲಿ ಬೆಳೆಯುತ್ತಿರುವ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ (ಇಟಿಸಿ) ಪ್ರಮಾಣವನ್ನು ಗಮನದಲ್ಲಿರಿಸಿಕೊಂಡು ಹೊಸ ವಿನ್ಯಾಸ ಟೋಲ್ ಫ್ಲಾಜಾಗಳನ್ನು ಹೊಂದಲು ಹಾಗೂ ಮುಂದಿನ ಹತ್ತು ವರ್ಷಗಳ ವಾಹನಗಳ ಅಂದಾಜು ಮಾಡಿ ಟೋಲ್ ಪ್ಲಾಜಾಗಳನ್ನು ನಿರ್ಮಿಸಿ ಪರಿಣಾಮಕಾರಿ ಟೋಲ್ ಸಂಗ್ರಹ ವ್ಯವಸ್ಥೆಗೆ ಒತ್ತು ನೀಡಲಾಗಿದೆ.

  • ವಾಹನ ಸವಾರರಿಗೆ ಶಾಕ್- ಫಾಸ್ಟ್ಯಾಗ್ ಇಲ್ಲದಿದ್ರೆ ಪಾವತಿಸಬೇಕಾಗುತ್ತೆ ಡಬಲ್ ಹಣ

    ವಾಹನ ಸವಾರರಿಗೆ ಶಾಕ್- ಫಾಸ್ಟ್ಯಾಗ್ ಇಲ್ಲದಿದ್ರೆ ಪಾವತಿಸಬೇಕಾಗುತ್ತೆ ಡಬಲ್ ಹಣ

    ನೆಲಮಂಗಲ: ವಾಹನ ಸವಾರರೇ ಎಚ್ಚರ ಎಚ್ಚರ ಬುಧವಾರದಿಂದ ಬೀಳುತ್ತೆ ನಿಮ್ಮ ಜೇಬ್‍ಗೆ ಡಬಲ್ ಕತ್ತರಿ. ನಿಮ್ಮ ಕಾರು ಸೇರಿದಂತೆ ಇನ್ನಿತರ ವಾಹನಕ್ಕೆ ಫಾಸ್ಟ್ಯಾಗ್ ಮಾಡಿಸಿಲ್ಲವೆಂದರೆ ಡಬಲ್ ಹಣವನ್ನು ಪಾವತಿ ಮಾಡಬೇಕಾಗುತ್ತದೆ.

    ಫಾಸ್ಟ್ಯಾಗ್ ವಿಚಾರದಲ್ಲಿ ಕೇಂದ್ರ ಸಾರಿಗೆ ಇಲಾಖೆ ನೀಡಿದ್ದ ಗಡುವು ಇಂದಿಗೆ ಕೊನೆಯಾಗಲಿದೆ. ಆದ್ದರಿಂದ ನಾಳೆಯಿಂದ ಟೋಲ್‍ಗಳಲ್ಲಿ ಒಂದೇ ಗೇಟ್‍ನಲ್ಲಿ ಹಣ ಪಾವತಿಗೆ ಅನುಮತಿ ನೀಡಲಾಗಿದೆ. ಹೀಗಾಗಿ ಉಳಿದ ಎಲ್ಲಾ ಟೋಲ್ ಬೂತ್‍ಗಳಲ್ಲಿ ಫಾಸ್ಟ್ಯಾಗ್ ನಿಯಮ ಕಡ್ಡಾಯವಾಗಿ ಜಾರಿಯಾಗಿದೆ.

    ಇಂದು ಸಂಜೆ ವೇಳೆಗೆ ಹೊಸ ಆದೇಶ ಜಾರಿಗೆ ಬರುವ ಸೂಚನೆ ಕೂಡ ಇದೆ. ನಾಳೆಯಿಂದ ಫಾಸ್ಟ್ಯಾಗ್ ಇಲ್ಲದವರಿಗೆ ಟ್ರಾಫಿಕ್ ಬಿಸಿ ತಟ್ಟಲಿದೆ. ಅಲ್ಲದೇ ಫಾಸ್ಟ್ಯಾಗ್ ಇರುವ ಗೇಟ್ ನಲ್ಲಿ ಫಾಸ್ಟ್ಯಾಗ್ ಇಲ್ಲದ ವಾಹನ ಸಂಚರಿಸಿದರೆ ಡಬಲ್ ಹಣ ಪಾವತಿ ಮಾಡಲೇಬೇಕು ಎಂದು ಈಗಾಗಲೇ ಟೋಲ್ ಕಂಪನಿಗಳು ನಾಮಫಲಕ ಅಳವಡಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲದ ನವಯುಗ ಟೋಲ್‍ನಲ್ಲಿ ಅಧಿಕೃತವಾಗಿ ವಾಹನ ಸವಾರರ ಗಮನಕ್ಕೆ ತರಲು ಎಚ್ಚರಿಕೆಯ ನಾಮಫಲಕವನ್ನ ಅಳವಡಿಕೆ ಮಾಡಲಾಗಿದೆ.