Tag: ಫಾಫ್ ಡು ಪ್ಲೆಸಿಸ್

  • RCBಯನ್ನು ಹುರಿದು ಮುಕ್ಕಿದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    RCBಯನ್ನು ಹುರಿದು ಮುಕ್ಕಿದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    ನವದೆಹಲಿ: ಫಿಲ್ ಸಾಲ್ಟ್ ಸಿಕ್ಸರ್‌, ಬೌಂಡರಿ ಬ್ಯಾಟಿಂಗ್‌ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ (DelhiCapitals) ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ (RCB) 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 181 ರನ್‌ ಗಳಿಸಿತು. 182 ರನ್‌ ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 16.4 ಓವರ್‌ಗಳಲ್ಲೇ 187ರನ್‌ ಸಿಡಿಸಿ ನಿರಾಯಾಸವಾಗಿ ಗೆಲುವು ಸಾಧಿಸಿತು. ಇದನ್ನೂ ಓದಿ: IPLನಲ್ಲಿ 7 ಸಾವಿರ ರನ್‌ ಸಿಡಿಸಿ ದಾಖಲೆ ಬರೆದ ರನ್‌ ಮಿಷಿನ್‌ ಕೊಹ್ಲಿ

    ಗೆಲುವಿಗೆ 182 ರನ್‌ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ಶುರು ಮಾಡಿತು.‌ ಆರಂಭಿಕನಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ (Phil Salt) ಆರ್‌ಸಿಬಿ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ದಂಡಿಸಿದರು. ಇದರಿಂದ ಆರ್‌ಸಿಬಿ ನೀಡಿದ ಬೃಹತ್‌ ಮೊತ್ತದ ಗುರಿಯನ್ನು ಡೆಲ್ಲಿ ನಿರಾಯಾಸವಾಗಿ ತಲುಪಿತು. ಡೇವಿಡ್‌ ವಾರ್ನರ್‌ (David Warner) 22 ರನ್‌ (14 ಎಸೆತ, 3 ಬೌಂಡರಿ, 1 ಸಿಕ್ಸರ್)‌, ಮಿಚೆಲ್‌ ಮಾರ್ಷ್‌ (Mitchell Marsh) 26 ರನ್‌ (17 ಎಸೆತ, 3 ಬೌಂಡರಿ, 1 ಸಿಕ್ಸರ್‌) ಗಳಿಸಿ ಔಟಾದರು.

    ಆರ್‌ಸಿಬಿ ಬೌಲರ್‌ಗಳನ್ನ ಚೆಂಡಾಡಿದ ಫಿಲ್ ಸಾಲ್ಟ್ 45 ಎಸೆತಗಳಲ್ಲಿ ಸ್ಫೋಟಕ 87 ರನ್‌ (8 ಬೌಂಡರಿ, 6 ಸಿಕ್ಸರ್‌) ಚಚ್ಚಿದರು. ಕೊನೆಯಲ್ಲಿ ರಿಲೀ ರೋಸೌವ್ 22 ಎಸೆತಗಳಲ್ಲಿ 35 ರನ್‌ (3 ಸಿಕ್ಸರ್‌, 1 ಬೌಂಡರಿ), ಅಕ್ಷರ್‌ ಪಟೇಲ್‌ 3 ಎಸೆತಗಳಲ್ಲಿ 8 ರನ್‌ ಗಳಿಸಿ ಅಜೇಯರಾಗುಳಿದರು.

    ಆರ್‌ಸಿಬಿ ಪರ ಜೋಶ್ ಹ್ಯಾಜಲ್ವುಡ್, ಕರ್ಣ್ ಶರ್ಮಾ ಹಾಗೂ ಹರ್ಷಲ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಮಕಾಡೆ ಮಲಗಿದ ಮುಂಬೈ, ಚೆನ್ನೈಗೆ 6 ವಿಕೆಟ್‌ಗಳ ಜಯ – CSK ಪ್ಲೆ ಆಫ್‌ಗೆ ಇನ್ನೆರಡೇ ಹೆಜ್ಜೆ ಬಾಕಿ

    ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ ವಿಕೆಟ್‌ ಕಳೆದುಕೊಂಡ ಹೊರತಾಗಿಯೂ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಯಿತು. 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು 182 ರನ್‌ಗಳ ಗುರಿಯನ್ನು ನೀಡಿತು.

    ಆರ್‌ಸಿಬಿ ಪರ ಆರಂಭಿಕರಾಗಿ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಹಾಗೂ ವಿರಾಟ್ ಕೊಹ್ಲಿ (Virat Kohli) ಕಣಕ್ಕಿಳಿದರು. ಡುಪ್ಲೆಸಿಸ್ 32 ಎಸೆತಗಳಲ್ಲಿ 45 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 46 ಎಸೆತಗಳಲ್ಲಿ 55 ರನ್ ಬಾರಿಸಿದರು. ಇನ್ನುಳಿದಂತೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ಗೋಲ್ಡನ್ ಡಕ್ಔಟ್ ಆದರೆ, ದಿನೇಶ್ ಕಾರ್ತಿಕ್ 9 ಎಸೆತಗಳಲ್ಲಿ 11 ರನ್ ಗಳಿಸಿ ಮತ್ತೆ ಪರದಾಡಿದರು. ಇದರಿಂದ ಆರ್‌ಸಿಬಿ 150ರನ್‌ಗಳ ಗಡಿ ದಾಟುವುದು ಕಷ್ಟವಾಗಿತ್ತು.

    ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹಿಪಾಲ್ ಲೊಮ್ರೊರ್ (Mahipal Lomror) ಈ ಬಾರಿಯ ಇದೇ ಮೊದಲ ಬಾರಿಗೆ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಆಸರೆಯಾಗುವಂತಹ ಇನ್ನಿಂಗ್ಸ್ ಆಡಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹಿಪಾಲ್ ಲೊಮ್ರೊರ್ 29 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಹಿತ ಅಜೇಯ 54 ರನ್ ಗಳಿಸಿದರು. ಅನುಜ್ ರಾವತ್ 3 ಎಸೆತಗಳಲ್ಲಿ ಅಜೇಯ 8 ರನ್ ಗಳಿಸಿದರು.

    ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಚೆಲ್ ಮಾರ್ಷ್ ಎರಡು ವಿಕೆಟ್ ಪಡೆದರೆ, ಖಲೀಲ್ ಅಹ್ಮದ್ ಹಾಗೂ ಮುಕೇಶ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು.

  • ತವರಿನಲ್ಲಿ ಸೇಡು ತೀರಿಸಿಕೊಳ್ಳಲು RCB ಕಾತರ – ಆದ್ರೆ KGF ಬಿಟ್ರೆ ಬ್ಯಾಟಿಂಗ್‌ನದ್ದೇ ಚಿಂತೆ

    ತವರಿನಲ್ಲಿ ಸೇಡು ತೀರಿಸಿಕೊಳ್ಳಲು RCB ಕಾತರ – ಆದ್ರೆ KGF ಬಿಟ್ರೆ ಬ್ಯಾಟಿಂಗ್‌ನದ್ದೇ ಚಿಂತೆ

    ಬೆಂಗಳೂರು: ಕಳೆದ ಬಾರಿ ಈಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್‌ (KKR) ವಿರುದ್ಧ 81 ರನ್‌ಗಳಿಂದ ಹೀನಾಯವಾಗಿ ಸೋತಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಇಂದು (ಏ.26) ತವರಿನಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾತರವಾಗಿದೆ.

    31 ಪಂದ್ಯಗಳಲ್ಲಿ ಮುಖಾಮುಖಿಯಾಗಿರುವ ಇತ್ತಂಡಗಳ ಪೈಕಿ ಆರ್‌ಸಿಬಿ 14 ರಲ್ಲಿ ಗೆಲುವು ಸಾಧಿಸಿದ್ದರೆ, ಕೆಕೆಆರ್‌ 17 ಪಂದ್ಯಗಳಲ್ಲಿ ಜಯಗಳಿಸಿದೆ. 2023ರ ಆವೃತ್ತಿಯಲ್ಲಿ 7 ಪಂದ್ಯಗಳನ್ನಾಡಿರುವ ಆರ್‌ಸಿಬಿ 4 ರಲ್ಲಿ ಗೆದ್ದು, 8 ಅಂಕಗಳೊಂದಿಗೆ ಪ್ಲೆ ಆಫ್‌ ಕನಸು ಜೀವಂತವಿರಿಸಿಕೊಂಡಿದೆ. ಆದರೆ 7 ಪಂದ್ಯಗಳಲ್ಲಿ ಕೇವಲ 2 ಪಂದ್ಯ ಗೆದ್ದು 4 ಅಂಕ ಗಳಿಸಿರುವ ಕೆಕೆಆರ್‌ ಪ್ಲೆ ಆಫ್‌ ಹಾದಿ ಕಠಿಣವಾಗಿಸಿಕೊಂಡಿದೆ. ಉಳಿದ 7 ಪಂದ್ಯಗಳಲ್ಲಿ ಕನಿಷ್ಠ 6 ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಇದನ್ನೂ ಓದಿ: IPL 2023: ಶಾರ್ದೂಲ್‌ ಬೆಂಕಿ ಬ್ಯಾಟಿಂಗ್‌, ವರುಣ್ ಮಿಂಚಿನ ಬೌಲಿಂಗ್‌ – RCBಗೆ ಹೀನಾಯ ಸೋಲು

    KGF ಬಿಟ್ರೆ ಬ್ಯಾಟಿಂಗ್‌ನದ್ದೇ ಚಿಂತೆ:
    ಆರ್‌ಸಿಬಿ ತಂಡ 7 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ 200ಕ್ಕೂ ಹೆಚ್ಚು ರನ್‌ ಗಳಿಸಿದೆ. ಅದರಲ್ಲೂ ಸಿಎಸ್‌ಕೆ (CSK) ವಿರುದ್ಧ ನಡೆದ ಪಂದ್ಯದಲ್ಲಿ ಚೇಸಿಂಗ್‌ನಲ್ಲಿ 218 ರನ್‌ ಸಿಡಿಸಿದ್ದು ವಿಶೇಷ. ಆದ್ರೆ ಆರ್‌ಸಿಬಿ ಪ್ರತಿ ಇನ್ನಿಂಗ್ಸ್‌ನಲ್ಲೂ KGF (ವಿರಾಟ್‌ ಕೊಹ್ಲಿ (Virat Kohli), ಗ್ಲೇನ್‌ ಮ್ಯಾಕ್ಸ್‌ವೆಲ್‌ ಹಾಗೂ ಫಾಫ್‌ ಡು ಪ್ಲೆಸಿಸ್‌) (Faf du Plessis) ಬ್ಯಾಟಿಂಗ್‌ ಆಧಾರ ಸ್ತಂಭವಾಗಿದ್ದಾರೆ. ಈ ಮೂವರನ್ನ ಬಿಟ್ಟರೆ, ಮಧ್ಯಮ ಕ್ರಮಾಂಕದಲ್ಲಿ ಸಂಪೂರ್ಣ ಬ್ಯಾಟಿಂಗ್‌ ವೈಫಲ್ಯ ಎದುರಿಸಬೇಕಾಗಿದೆ. ಕಳೆದ ಸೀಜನ್‌ನಲ್ಲಿ ಆರ್‌ಸಿಬಿ ಪರ ಅಬ್ಬರಿಸಿ ಟೀಂ ಇಂಡಿಯಾ ಟಿ20 ವಿಶ್ವಕಪ್‌ ತಂಡದಲ್ಲಿ ಚಾನ್ಸ್‌ ಗಿಟ್ಟಿಸಿಕೊಂಡಿದ್ದ ದಿನೇಶ್‌ ಕಾರ್ತಿಕ್‌ ಕಳಪೆ ಫಾರ್ಮ್‌ನಿಂದ ಟೀಕೆಗೆ ಗುರಿಯಾಗಿದ್ದಾರೆ.

    ಇನ್ನೂ ಪ್ರತಿ ಪಂದ್ಯದಲ್ಲೂ ಆರಂಭಿಕರ ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿರುವ ಕೆಕೆಆರ್‌ ಉತ್ತಮ ಸ್ಕೋರ್‌ ಗಳಿಸುತ್ತಿದೆಯಾದರೂ ಪಂದ್ಯ ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ. ಹಾಗಾಗಿ ಈ ಪಂದ್ಯ ಇತ್ತಂಡಗಳಿಗೂ ನಿರ್ಣಾಯಕವಾಗಿದ್ದು, ಜಯ ಯಾರ ಪಾಲಿಕೆ ಒಲಿಯಲಿದೆ ಎಂಬುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಬಿಜೆಪಿ ಸಂಸದ, WFI ಅಧ್ಯಕ್ಷನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ – ಪ್ರತಿಭಟನೆಗೆ ರಾಜಕೀಯ ಪಕ್ಷಗಳನ್ನು ಕರೆದ ಕುಸ್ತಿಪಟುಗಳು

    ಈಡನ್‌ ಗಾರ್ಡನ್‌ ಅಂಗಳದಲ್ಲಿ ಕಳೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 204‌ ರನ್‌ ಗಳಿಸಿತ್ತು. 205 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ಕಳಪೆ ಬ್ಯಾಟಿಂಗ್‌ನಿಂದ 17.4 ಓವರ್‌ಗಳಲ್ಲೇ 123 ರನ್‌ಗಳಿಗೆ ಸರ್ವಪತನ ಕಂಡಿತ್ತು.

  • ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

    ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

    ಬೆಂಗಳೂರು: ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell) ಹಾಗೂ ಫಾಫ್‌ ಡು ಪ್ಲೆಸಿಸ್‌‌ (Faf du Plessis) ಭರ್ಜರಿ ಬ್ಯಾಟಿಂಗ್‌ ಹಾಗೂ ಹರ್ಷಲ್‌ ಪಟೇಲ್‌ ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ಆರ್‌ಸಿಬಿ (RCB) ತವರಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿದೆ.

    ಕೊನೆಯ ಓವರ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ 20 ರನ್‌ಗಳ ಅಗತ್ಯವಿತ್ತು. ಈ ವೇಳೆ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಅಶ್ವಿನ್‌ 2ನೇ ಎಸೆತದಲ್ಲಿ 2 ರನ್‌ ತೆಗೆದುಕೊಂಡರು. 3ನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಸಿಡಿಸಿದಾಗ ಇನ್ನೇನು ಪಂದ್ಯ ಗೆದ್ದೇ ಬಿಟ್ಟಿತ್ತು ಎನ್ನುವಷ್ಟು ಆರ್‌ಸಿಬಿ ಫ್ಯಾನ್ಸ್‌ ಆತಂಕಗೊಂಡಿದ್ದರು. ಆದ್ರೆ ಅಶ್ವಿನ್‌ 4ನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಲು ಯತ್ನಿಸಿ ಕ್ಯಾಚ್‌ ನೀಡಿ ರಾಜಸ್ಥಾನ್‌ ತಂಡಕ್ಕೆ ನಿರಾಸೆ ಮೂಡಿಸಿದರು. 5ನೇ ಎಸೆತದಲ್ಲಿ ಧ್ರುವ್‌ ಜುರೆಲ್‌ 1 ರನ್‌ ಕದ್ದರೆ, 6ನೇ ಎಸೆತದಲ್ಲಿ ಅಬ್ದುಲ್‌ ಬಶಿತ್‌ 1 ರನ್‌ ಗಳಿಸಿದರು.

    ತವರಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ (Royal Challengers Bangalore) 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿತ್ತು. 190 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕ ಜೋಸ್‌ ಬಟ್ಲರ್‌ ಎರಡೇ ಎಸೆತಗಳಲ್ಲಿ ವಿಕೆಟ್‌ ಒಪ್ಪಿಸಿದರು. ಬಳಿಕ 2ನೇ ವಿಕೆಟ್‌ಗೆ ಜೊತೆಯಾದ ಯಶಸ್ವಿ ಜೈಸ್ವಾಲ್‌ (Yashasvi Jaiswal) ಹಾಗೂ ದೇವದತ್‌ ಪಡಿಕಲ್‌ (Devdutt Padikkal) ಭರ್ಜರಿ ಬ್ಯಾಟಿಂಗ್‌ ಮಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. 66 ಎಸೆತಗಳಲ್ಲಿ ಈ ಜೋಡಿ 98 ರನ್‌ ಕಲೆಹಾಕಿತ್ತು. ಇದರಿಂದ ತಂಡದಲ್ಲಿ ಮತ್ತೆ ಗೆಲುವಿನ ನಗೆ ಚಿಮ್ಮಿತ್ತು. ಪಡಿಕಲ್‌ 54 ರನ್‌ (34 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಗಳಿಸಿ ಔಟಾಗುತ್ತಿದ್ದಂತೆ, ಯಶಸ್ವಿ ಜೈಸ್ವಾಲ್‌ 47 ರನ್‌ (37 ಎಸೆತ, 5 ಬೌಂಡರಿ, 2 ಸಿಕ್ಸರ್‌) ಬಾರಿಸಿ ವಿಕೆಟ್‌ ಒಪ್ಪಿಸಿದರು.

    ನಂತರ 15‌ ಎಸೆತಗಳಲ್ಲಿ 22 ರನ್‌ ಗಳಿಸಿದ್ದ ನಾಯಕ ಸಂಜು ಸ್ಯಾಮ್ಸನ್‌ (Sanju Samson) ಆಕ್ರಮಣಕಾರಿ ಬ್ಯಾಟಿಂಗ್‌ ಆರಂಭಿಸುತ್ತಿದ್ದಂತೆ ಕ್ಯಾಚ್‌ ನೀಡಿ ಔಟಾದರು. ಈ ಬೆನ್ನಲ್ಲೇ ಶಿಮ್ರಾನ್‌ ಹೆಟ್ಮೇಯರ್‌ ವಿಕೆಟ್‌ ಕೈಚೆಲ್ಲಿದರು. ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ರವಿಚಂದ್ರನ್‌ ಅಶ್ವಿನ್‌ 6 ಎಸೆತಗಳಲ್ಲಿ 12 ರನ್‌ ಗಳಿಸಿ ಔಟಾದರೆ, ಧ್ರುವ್‌ ಜುರೆಲ್‌ 16 ಎಸೆತಗಳಲ್ಲಿ 34 ರನ್‌ (2 ಸಿಕ್ಸರ್‌, 2 ಬೌಂಡರಿ) ಸಿಡಿಸಿ ಅಜೇಯರಾಗುಳಿದರು.

    ಆರ್‌ಸಿಬಿ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಹರ್ಷಲ್‌ ಪಟೇಲ್‌ ಪ್ರಮುಖ ಮೂರು ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಸಿರಾಜ್‌, ಡೇವಿಡ್‌ ವಿಲ್ಲಿ ತಲಾ ಒಂದೊಂದು ವಿಕೆಟ್‌ ಪಡೆದರು.

    ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ ಮೊದಲ ಎಸೆತದಲ್ಲೇ ಟ್ರೆಂಟ್‌ ಬೋಲ್ಟ್‌ ಬೌಲಿಂಗ್‌ ದಾಳಿಗೆ ಔಟಾದರು, ಈ ಬೆನ್ನಲ್ಲೇ ಶಹಬಾಜ್‌ ಅಹ್ಮದ್‌ ಕೂಡ 2 ರನ್‌ ಗಳಿಸಿ ಔಟಾದರು. ಇದರಿಂದ ಆರಂಭದಲ್ಲೇ ಆರ್‌ಸಿಬಿಗೆ ಸಂಕಷ್ಟ ಎದುರಾಗಿತ್ತು.

    ಬಳಿಕ ಒಂದಾದ ಫಾಫ್‌ ಡು ಪ್ಲೆಸಿಸ್‌ ಹಾಗೂ ಸಿಕ್ಸರ್‌ ವೀರ ಗ್ಲೇನ್‌ ಮ್ಯಾಕ್ಸ್‌ವೆಲ್‌ ರಾಜಸ್ಥಾನ್‌ ಬೌಲರ್‌ಗಳನ್ನ ಚೆಂಡಾಡಿದರು. 3ನೇ ವಿಕೆಟ್‌ಗೆ ಈ ಜೋಡಿ 66 ಎಸೆತಗಳಲ್ಲಿ ಬರೋಬ್ಬರಿ 127 ರನ್‌ ಸಿಡಿಸಿತ್ತು. ಈ ವೇಳೆ ಡುಪ್ಲೆಸಿಸ್‌ 39 ಎಸೆತಗಳಲ್ಲಿ 62 ರನ್‌ (8 ಬೌಂಡರಿ, 2 ಸಿಕ್ಸರ್)‌ ಸಿಡಿಸಿದರೆ, ಮ್ಯಾಕ್ಸ್‌ವೆಲ್‌ 77 ರನ್‌ (44 ಎಸೆತ, 4 ಸಿಕ್ಸರ್‌, 6 ಬೌಂಡರಿ) ಚಚ್ಚಿದರು.

    ಈ ಜೋಡಿ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ರನ್‌ ವೇಗ ಕಡಿಮೆಯಾಗುವ ಜೊತೆಗೆ ಒಂದೊಂದೇ ವಿಕೆಟ್‌ ಪತನಗೊಂಡಿತು. ಮಹಿಪಾಲ್‌ ಲೊಮ್ರೋರ್‌ 8 ರನ್‌, ದಿನೇಶ್‌ ಕಾರ್ತಿಕ್‌ 16 ರನ್‌, ವಾನಿಂದು ಹಸರಂಗ 6 ರನ್‌ ಗಳಿಸಿದರೆ, ಸುಯಶ್‌ ಪ್ರಭುದೇಸಾಯ್‌ ಹಾಗೂ ವಿಜಯ್‌ಕುಮಾರ್‌ ವೈಶಾಕ್‌ ಶೂನ್ಯ ಸುತ್ತಿದರು. ಮೊಹಮ್ಮದ್‌ ಸಿರಾಜ್‌ 1 ರನ್‌ ಹಾಗೂ ಡೇವಿಡ್ ವಿಲ್ಲಿ 4 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ರಾಜಸ್ಥಾನ್‌ ರಾಯಲ್ಸ್‌ ಪರ ಟ್ರೆಂಟ್‌ ಬೋಲ್ಟ್‌ ಹಾಗೂ ಸಂದೀಪ್‌ ಶರ್ಮಾ ತಲಾ 2 ವಿಕೆಟ್‌ ಕಿತ್ತರೆ, ರವಿಚಂದ್ರನ್‌ ಅಶ್ವಿನ್‌, ಯಜುವೇಂದ್ರ ಚಹಾಲ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

  • `ನಮ್ಮ ಹಸಿರು ಭೂಮಿಗಾಗಿʼ – ಪರಿಸರ ಕಾಳಜಿ ಸಂದೇಶ ಕೊಟ್ಟ RCB

    `ನಮ್ಮ ಹಸಿರು ಭೂಮಿಗಾಗಿʼ – ಪರಿಸರ ಕಾಳಜಿ ಸಂದೇಶ ಕೊಟ್ಟ RCB

    ಬೆಂಗಳೂರು: ಫಾಫ್ ಡು ಪ್ಲೆಸಿಸ್ (Faf du Plessis) ನಾಯಕತ್ವದ ಆರ್‌ಸಿಬಿ (RCB) ತನ್ನ 7ನೇ ಪಂದ್ಯದಲ್ಲಿ ರಾಜಸ್ಥಾನ್ (Rajasthan Royals) ರಾಯಲ್ಸ್ ವಿರುದ್ಧ ತವರಿನಲ್ಲಿ ಸೆಣಸಲಿದೆ.

    ಈ ಪಂದ್ಯದಲ್ಲಿ ಆರ್​ಸಿಬಿ ಆಟಗಾರರು ತಮ್ಮ ಕೆಂಪು ಮತ್ತು ಕಪ್ಪು ಮಿಶ್ರಿತ ಜೆರ್ಸಿ ಬದಲಿಗೆ ಹಸಿರು ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2011ರ ಐಪಿಎಲ್​ನಿಂದ ಆರ್​ಸಿಬಿ ಒಂದು ಪಂದ್ಯದಲ್ಲಿ ಗ್ರೀನ್ ಜೆರ್ಸಿ (Green Jersey) ತೊಟ್ಟು ಪಂದ್ಯವನ್ನಾಡಲು ಆರಂಭಿಸಿತು. ಅಂದಿನಿಂದ ಆರ್​ಸಿಬಿ ಪ್ರತಿ ವರ್ಷ ಐಪಿಎಲ್‌ನಲ್ಲಿ (IPL 2023) ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಆಡುತ್ತಿದೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 31 ರನ್‌ ಕೊಟ್ಟ ಅರ್ಜುನ್‌ ತೆಂಡೂಲ್ಕರ್‌; ಹರ್ಷ ತಂದ ಅರ್ಷ್‌ದೀಪ್‌ – ಪಂಜಾಬ್‌ಗೆ 13 ರನ್‌ಗಳ ಜಯ

    16ನೇ ಆವೃತ್ತಿಯಲ್ಲಿ 7ನೇ ಪಂದ್ಯವಾಡುತ್ತಿರುವ ಆರ್‌ಸಿಬಿ ತವರಿನಲ್ಲೇ ಪಿಂಕ್ ಆರ್ಮಿ ವಿರುದ್ಧ ಹಸಿರು ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರಣದಿಂದ ಆರ್‌ಸಿಬಿ ತಂಡ ಈ ವಿಭಿನ್ನ ಹಾದಿ ಹಿಡಿದಿದೆ. ʻನಮ್ಮ ಹಸಿರು ಭೂಮಿಗಾಗಿʼ ಎಂಬ ಸಂಕಲ್ಪದೊಂದಿಗೆ ʻವಿಶೇಷ ಪಂದ್ಯಕ್ಕೆ ವೇದಿಕೆ ಸಿದ್ಧವಾಗುತ್ತಿದ್ದಂತೆ, ನಮ್ಮ ಪರಿಸರಕ್ಕಾಗಿ ಪ್ರತಿಜ್ಞೆ ತೆಗೆದುಕೊಳ್ಳೋಣʼ, ʻಮುಂದಿನ ಪೀಳಿಗೆಗಾಗಿ ಹಸಿರು ಪರಿಸರ ಉಳಿಸೋಣʼ ಎಂದು ಅಭಿಮಾನಿಗಳಿಗೆ ಕರೆ ನೀಡಿದೆ.

    ಈಗಾಗಲೇ 6 ಪಂದ್ಯಗಳನ್ನಾಡಿರುವ ಆರ್‌ಸಿಬಿ 3 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ 6ನೇ ಸ್ಥಾನದಲ್ಲಿದೆ. ಭಾನುವಾರ ಪಿಂಕ್‌ ಆರ್ಮಿ ವಿರುದ್ಧ ಗೆದ್ದರೆ ಪಾಯಿಂಟ್ಸ್‌ ಟೇಬಲ್‌ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಲಿದೆ. ಇದನ್ನೂ ಓದಿ: 7 ಸಾವಿರ ರನ್‌ ಪೂರೈಸಿದ ರಾಹುಲ್‌ – ಕೊಹ್ಲಿ, ರೋಹಿತ್‌ ಸೇರಿ ಹಲವರ ದಾಖಲೆ ಉಡೀಸ್‌

    ಗೆಲುವಿಗಿಂತ ಸೋಲೆ ಹೆಚ್ಚು: 2011ರ ಆವೃತ್ತಿಯಿಂದ ಆರ್‌ಸಿಬಿ ಋತುವಿನ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ಧರಿಸಿ ಆಡಲು ಆರಂಭಿಸಿತು. 2011ರಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ 2012, 2013, 2014ರಲ್ಲಿ ಸೋಲು ಕಂಡಿತು. 2015ರಲ್ಲಿ ಯಾವುದೇ ಫಲಿತಾಂಶವಿಲ್ಲದೇ ಪಂದ್ಯ ರದ್ದಾಯಿತು. 2016ರಲ್ಲಿ ಗೆಲುವು ಸಾಧಿಸಿತ್ತು. ನಂತರ 2017, 2018, 2019, 2020ರಲ್ಲಿ ಸೋತಿತ್ತು. 2021 ನೀಲಿ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದರೂ ಸೋಲು ಕಂಡಿತ್ತು. 2023ರ ಆವೃತ್ತಿಯಲ್ಲಿ ಫಲಿತಾಂಶ ಏನಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.

  • ಲೀಗ್‌ ಹಂತದಲ್ಲೇ ಹಲವು ಸಮಸ್ಯೆ – ಈ ಸಲ ಕಪ್‌ ಗೆಲ್ಲುತ್ತಾ RCB?

    ಲೀಗ್‌ ಹಂತದಲ್ಲೇ ಹಲವು ಸಮಸ್ಯೆ – ಈ ಸಲ ಕಪ್‌ ಗೆಲ್ಲುತ್ತಾ RCB?

    ಬೆಂಗಳೂರು: ಪ್ರತಿಬಾರಿ ಐಪಿಎಲ್‌ ಟೂರ್ನಿ (IPL 2023) ಆರಂಭವಾಗುತ್ತಿದ್ದಂತೆ ʻಈ ಸಲ ಕಪ್‌ ನಮ್ದೆʼ ಅಂತಾ ಉತ್ಸಾಹದೊಂದಿಗೆ ಕಣಕ್ಕಿಳಿಯುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡಕ್ಕೆ ಈ ಬಾರಿ ಹಲವು ಸಮಸ್ಯೆಗಳು ಎದುರಾಗಿವೆ.

    ಈ ಆವೃತ್ತಿಯಲ್ಲಿ ಫಾಫ್‌ ಡು ಪ್ಲೆಸಿಸ್‌ (Faf du Plessis) ನಾಯಕತ್ವದ ಆರ್‌ಸಿಬಿ ತಂಡ 6 ಪಂದ್ಯಗಳ ಪೈಕಿ 3 ರಲ್ಲಿ ಜಯ ಸಾಧಿಸಿ, 6 ಅಂಕಗಳೊಂದಿಗೆ 5ನೇ ಸ್ಥಾನ ಪಡೆದುಕೊಂಡಿದೆ. ಈ ಟೂರ್ನಿಯಲ್ಲಿ ಆರ್‌ಸಿಬಿಗೆ ಇನ್ನೂ 8 ಪಂದ್ಯಗಳು ಬಾಕಿ ಇವೆ. ಈ 8 ಪಂದ್ಯಗಳ ಪೈಕಿ 5ರಲ್ಲಿ ಗೆದ್ದರೆ ಪ್ಲೇ ಆಫ್‌ ಕನಸು ಬಹುತೇಕ ಜೀವಂತವಾಗಲಿದೆ. ಈ ನಿಟ್ಟಿನಲ್ಲಿ ಫಾಫ್‌ ಡು ಪ್ಲೆಸಿಸ್‌ ನಾಯಕತ್ವದ ಆರ್‌ಸಿಬಿ ಕಠಿಣ ಹೋರಾಟ ನಡೆಸಲಿದೆ. ಈ ನಡುವೆ ಆರ್‌ಸಿಬಿಗೆ ಗಾಯಾಳುಗಳದ್ದೇ ಸಮಸ್ಯೆ ಹೆಚ್ಚಾಗಿದೆ.

    ಕಳೆದ ಬಾರಿ ಪ್ಲೇ ಆಫ್‌ ಪಂದ್ಯದಲ್ಲಿ ಒಂದು ಶತಕ ಹಾಗೂ ಅರ್ಧಶತಕ ಗಳಿಸಿದ್ದ ರಜತ್ ಪಾಟಿದಾರ್‌ ಈ ಬಾರಿ ಒಂದೇ ಒಂದು ಪಂದ್ಯವಾಡದೆ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಜೋಶ್‌ ಹೇಝಲ್‌ವುಡ್‌ ತಂಡದಲ್ಲಿದ್ದರೂ ಸಂಪೂರ್ಣ ಫಿಟ್‌ ಇಲ್ಲದ ಕಾರಣ ಆಯ್ಕೆಗೆ ಲಭ್ಯರಾಗುತ್ತಿಲ್ಲ. ಇನ್ನೂ ಬೆಂಗಳೂರಿನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ನಡೆದ ಮೊದಲ ಪಂದ್ಯದಲ್ಲೇ ಫೀಲ್ಡಿಂಗ್ ವೇಳೆ ಭುಜದ ಗಾಯಕ್ಕೆ ತುತ್ತಾದ ಇಂಗ್ಲೆಂಡ್‌ ವೇಗಿ ರೀಸ್‌ ಟಾಪ್ಲೀ ಟೂರ್ನಿಯಿಂದ ಈಗಾಗಲೇ ಹೊರ ಬಿದ್ದಿದ್ದಾರೆ. ಇದೀಗ ನಾಯಕ ಫಾಫ್‌ ಡು ಪ್ಲೆಸಿಸ್‌ಗೂ ಗಾಯದ ಭೀತಿ ಎದುರಾಗಿದೆ.

    ಕಳೆದ ಆವೃತ್ತಿಯಂತೆ ಈ ಬಾರಿಯೂ ಆರ್‌ಸಿಬಿ ತಂಡದ ಪರ ಇನಿಂಗ್ಸ್ ಆರಂಭಿಸುತ್ತಿರುವ ವಿರಾಟ್‌ ಕೊಹ್ಲಿ (Virat Kohli) ಹಾಗೂ ಫಾಫ್‌ ಡು ಪ್ಲೆಸಿಸ್ (Faf du Plessis) ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಈ ಇಬ್ಬರೂ ಆಡಿದ 6 ಪಂದ್ಯಗಳಿಂದ ಮುರಿಯದ ಮೊದಲ ವಿಕೆಟ್‌ಗೆ 473 ರನ್‌ಗಳ ಜೊತೆಯಾಟ ಆಡಿದ್ದಾರೆ. ಪ್ಲೆಸಿಸ್‌ 4 ಅರ್ಧಶತಕಗಳೊಂದಿಗೆ 343 ರನ್‌ ಗಳಿಸಿ ಆರೆಂಜ್‌ ಕ್ಯಾಪ್‌ ಹೊಂದಿದ್ದರೆ, ವಿರಾಟ್‌ ಕೊಹ್ಲಿ 6 ಇನಿಂಗ್ಸ್‌ಗಳಿಂದ 4 ಅರ್ಧಶತಕಗಳೊಂದಿಗೆ 279 ರನ್‌ಗಳನ್ನು ಗಳಿಸಿ 3ನೇ ಸ್ಥಾನದಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಡೇವಿಡ್‌ ವಾರ್ನರ್‌ 6 ಪಂದ್ಯಗಳಿಂದ 285 ರನ್‌ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.

    ಆರ್‌ಸಿಬಿ ತಂಡಕ್ಕೆ ಇದೀಗ ಗಾಯಾಳುಗಳೊಂದಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳ ಸಮಸ್ಯೆಯೂ ಎದುರಾಗಿದೆ. ಆರಂಭಿಕರಾದ ವಿರಾಟ್‌ ಕೊಹ್ಲಿ ಹಾಗೂ ಡುಪ್ಲೆಸಿಸ್‌ ಅಬ್ಬರಿಸಿದ್ದು ಬಿಟ್ಟರೆ, ಮಧ್ಯಮ ಕ್ರಮಾಂಕದಲ್ಲಿ ಬಂದ ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell), ದಿನೇಶ್‌ ಕಾರ್ತಿಕ್‌, ಮಹಿಪಾಲ್‌ ಲೋಮ್ರೋರ್‌ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮ್ಯಾನ್‌ಗಳು ವಿಫಲರಾಗಿದ್ದಾರೆ. ಗ್ಲೇನ್‌ ಮ್ಯಾಕ್ಸ್‌ವೆಲ್‌ ಲಖನೌ ಸೂಪರ್‌ ಜೈಂಟ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧದ ಪಂದ್ಯಗಳಲ್ಲಿ ಕ್ರಮವಾಗಿ 59 ರನ್‌ ಹಾಗೂ 76 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಫ್ಲಾಪ್‌ ಪ್ರದರ್ಶನ ನೀಡಿದ್ದಾರೆ. ಗುರುವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ ನಡೆದ ಪಂದ್ಯದಲ್ಲೂ ಒಂದೇ ಎಸೆತದಲ್ಲಿ ಡಕೌಟ್‌ ಆಗಿದ್ದಾರೆ. ಇದರಿಂದ ಆರ್‌ಸಿಬಿ ಮುಂದಿನ ಪಂದ್ಯಗಳಲ್ಲಿ ಆರಂಭಿಕರು ಔಟಾದರೂ ಅಧಿಕ ರನ್‌ ಗಳಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕಿದೆ.

  • ಕೊಹ್ಲಿ ಮತ್ತೆ ನಾಯಕನಾಗಲು ಇದೇ ಕಾರಣ – ನೋವಿನಲ್ಲೂ RCB ತಂಡಕ್ಕಾಗಿ ಅಬ್ಬರಿಸಿದ ಡುಪ್ಲೆಸಿಸ್‌

    ಕೊಹ್ಲಿ ಮತ್ತೆ ನಾಯಕನಾಗಲು ಇದೇ ಕಾರಣ – ನೋವಿನಲ್ಲೂ RCB ತಂಡಕ್ಕಾಗಿ ಅಬ್ಬರಿಸಿದ ಡುಪ್ಲೆಸಿಸ್‌

    ಮೊಹಾಲಿ: ಇಲ್ಲಿನ ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ಗುರುವಾರ ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ ನಡೆದ ಪಂದ್ಯದಲ್ಲಿ ಮತ್ತೆ ಆರ್‌ಸಿಬಿ (Royal Challengers Bangalore) ನಾಯಕನಾಗಿ ಕಣಕ್ಕಿಳಿದ ವಿರಾಟ್‌ ಕೊಹ್ಲಿ (Virat Kohli) ಅರ್ಧಶತಕ ಸಿಡಿಸಿ ಮಿಂಚಿದರು.

    2022ರ ಐಪಿಎಲ್‌ ಟೂರ್ನಿ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದ ನಾಯಕತ್ವ ತೊರೆದಿದ್ದ ವಿರಾಟ್‌ ಮತ್ತೆ ನಾಯಕನಾಗಿ ಕಣಕ್ಕಿಳಿದಿದ್ದು, ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಿತ್ತು. ಈ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದಿಂದಲೂ ನಾಯಕ ಶಿಖರ್‌ ಧವನ್‌ ಆಟದಿಂದ ಹೊರಗುಳಿದಿದ್ದರು. ಇದನ್ನೂ ಓದಿ: ಕ್ಯಾಪ್ಟನ್‌ ಕೊಹ್ಲಿ, ಡುಪ್ಲೆಸಿಸ್‌ ಶತಕದಾಟಕ್ಕೆ ಪಂಜಾಬ್‌ ಪಂಚರ್‌ – RCBಗೆ 24 ರನ್‌ಗಳ ಭರ್ಜರಿ ಜಯ

    ಹೌದು. ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಶಿಖರ್ ಧವನ್ ಹಾಗೂ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಇಬ್ಬರೂ ಗಾಯದ ಸಮಸ್ಯೆಗೊಳಗಾಗಿದ್ದರು. ಶಿಖರ್ ಧವನ್ ಸಂಪೂರ್ಣ ಪಂದ್ಯದಿಂದ ಹೊರಗುಳಿದಿದ್ದರೆ, ಫಾಫ್ ಡು ಪ್ಲೆಸಿಸ್, ವಿಜಯ್ ಕುಮಾರ್ ವೈಶಾಖ್ ಬದಲಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು ಬ್ಯಾಟ್‌ ಬೀಸಿದರು. ಫೀಲ್ಡಿಂಗ್‌ನಲ್ಲಿ ಹೊರಗುಳಿದು ವಿಶ್ರಾಂತಿ ತೆಗೆದುಕೊಂಡರು.

    ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದ ಡುಪ್ಲೆಸಿಸ್‌ ಮಧ್ಯದಲ್ಲಿ ಹೊಟ್ಟೆಗೆ ಬ್ಯಾಂಡೇಜ್‌ ಕಟ್ಟಿಸಿಕೊಂಡೇ ಕಣದಲ್ಲಿ ಅಬ್ಬರಿಸಿದ್ದರು. ಗುರುವಾರ ಗಾಯದ ಸಮಸ್ಯೆ ಇದ್ದರೂ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಾಣಿಸಿಕೊಂಡ ಡು ಪ್ಲೆಸಿಸ್‌ 150 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ 56 ಎಸೆತಗಳಲ್ಲಿ 84 ರನ್‌ ಗಳಿಸಿ, ತಂಡ ಬೃಹತ್‌ ಮೊತ್ತ ಗಳಿಸಲು ಕಾರಣರಾದರು. ಫಾಫ್‌ ಡು ಪ್ಲೆಸಿಸ್‌ ಫೀಲ್ಡಿಂಗ್‌ನಲ್ಲಿ ಹೊರಗುಳಿಯಬೇಕಿದ್ದ ಕಾರಣ ವಿರಾಟ್‌ ಕೊಹ್ಲಿ ನಾಯಕತ್ವ ವಹಿಸಿಕೊಂಡಿದ್ದರು.

    ಈ ಕುರಿತು ಮಾತನಾಡಿದ್ದ ವಿರಾಟ್‌ ಕೊಹ್ಲಿ ಟಾಸ್‌ ಮುಗಿದ ಬಳಿಕ ಡುಪ್ಲೆಸಿಸ್ ಗಾಯಕ್ಕೊಳಗಾಗಿರುವ ವಿಷಯ ಬಿಚ್ಚಿಟ್ಟಿದ್ದರು. ಅವರು ಫೀಲ್ಡಿಂಗ್‌ ಮಾಡಲಾಗದ ಕಾರಣ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ನಾವು ಮೊದಲು ಬ್ಯಾಟಿಂಗ್‌ ಮಾಡಬೇಕೆಂದು ಬಯಸಿದ್ದೆವು. ಅದೇ ನಮಗೆ ಸಿಕ್ಕಿದೆ ಎಂದು ಹೇಳಿದ್ದರು. ಇದನ್ನೂ ಓದಿ: RCBvsCSK ರಣರೋಚಕ ಪಂದ್ಯದಲ್ಲಿ ಎರಡೆರಡು ದಾಖಲೆ ಉಡೀಸ್‌

    ಪಂಜಾಬ್ ಕಿಂಗ್ಸ್ ತಂಡದ ನಾಯಕ ಸ್ಯಾಮ್ ಕರ್ರನ್ (SamCurran) ಸಹ ಮಾತನಾಡಿದ್ದು, ಕಳೆದ ಪಂದ್ಯದಂತೆ ಈ ಪಂದ್ಯದಲ್ಲಿಯೂ ಮೊದಲು ಬೌಲಿಂಗ್ ಮಾಡುವ ಆಯ್ಕೆ ಉತ್ತಮ ಎನಿಸಿತ್ತು ಎಂದಿದ್ದರು. ಜೊತೆಗೆ ಶಿಖರ್‌ ಧವನ್ ಈ ದಿನ ಕಣಕ್ಕಿಳಿಯುತ್ತಿಲ್ಲ ಎಂಬುದನ್ನೂ ಅವರು ಖಚಿತಪಡಿಸಿದ್ದರು.

    ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತ್ತು. 175 ರನ್‌ಗಳ ಗುರಿ ಬೆನ್ನತ್ತಿದ್ದ ಪಂಜಾಬ್‌ ಕಿಂಗ್ಸ್‌ 18.2 ಓವರ್‌ಗಳಲ್ಲೇ 150 ರನ್‌ಗಳಿಗೆ ಸರ್ವಪತನ ಕಂಡು, ಆರ್‌ಸಿಬಿ ಎದುರು ಮಂಡಿಯೂರಿತು.

  • RCB ನಾಯಕಿಯಾಗಿ ಸ್ಮೃತಿ ಮಂದಾನ ಆಯ್ಕೆ – ಕೊಹ್ಲಿ ವಿಶೇಷ ಸಂದೇಶ ಏನು?

    RCB ನಾಯಕಿಯಾಗಿ ಸ್ಮೃತಿ ಮಂದಾನ ಆಯ್ಕೆ – ಕೊಹ್ಲಿ ವಿಶೇಷ ಸಂದೇಶ ಏನು?

    ಮುಂಬೈ: ಭಾರತೀಯ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂದಾನ (Smriti Mandhana) ಡಬ್ಲ್ಯೂಪಿಎಲ್ 2023ರ (WPL 2023) ಉದ್ಘಾಟನಾ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಈ ವಿಚಾರವನ್ನು ದೃಢಪಡಿಸಿದೆ. ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಹಾಲಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ (Faf du Plessis) ಸಹ ವಿಶೇಷ ಸಂದೇಶ ನೀಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯಂತ ವಿಶೇಷವಾದ ಆರ್‌ಸಿಬಿ ತಂಡವನ್ನು ಮುನ್ನಡೆಸುವ ಮತ್ತೊಂದು ಸಂಖ್ಯೆ 18ರ ಸಮಯ ಇದಾಗಿದೆ ಎಂದು ಹೇಳಲಾಗಿದೆ. ಏಕೆಂದರೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಮೃತಿ ಮಂದಾನ ಅವರ ಜೆರ್ಸಿ ಸಂಖ್ಯೆ ನಂ.18 ಆಗಿದೆ.

    ಕೊಹ್ಲಿ ಹೇಳಿದ್ದೇನು?
    ವೀಡಿಯೋ ಮೂಲಕ ವಿಶೇಷ ಸಂದೇಶ ನೀಡಿರುವ ವಿರಾಟ್ ಕೊಹ್ಲಿ, ಸ್ಮೃತಿ ನಿಮಗೆ ಅತ್ತುತ್ತಮವಾಗಿ ಅಭಿಮಾನಿಗಳ ಬೆಂಬಲವಿದೆ. ಉತ್ತಮವಾಗಿ ಆಡಿ ಎಂದಿದ್ದಾರೆ. ಫಾಫ್ ಡು ಪ್ಲೆಸಿಸ್, ಆರ್‌ಸಿಬಿಯನ್ನು ಮುನ್ನಡೆಸುವ ಎಲ್ಲಾ ಗುಣಲಕ್ಷಣಗಳನ್ನು ನಮ್ಮ ಮಹಿಳಾ ನಾಯಕಿ ಸ್ಮೃತಿ ಹೊಂದಿದ್ದಾರೆ. ಈ ಬಗ್ಗೆ ನನಗೆ ತುಂಬಾ ವಿಶ್ವಾಸವಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

    ಆರ್‌ಸಿಬಿ ನಾಯಕತ್ವ ಪಡೆದ ನಂತರ ಮಂದಾನ ಫ್ರಾಂಚೈಸಿಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನಗೆ ಈ ಅದ್ಭುತ ಅವಕಾಶ ನೀಡಿದ ಆರ್‌ಸಿಬಿ ತಂಡಕ್ಕೆ ಧನ್ಯವಾದ. ಆರ್‌ಸಿಬಿಯನ್ನು ಯಶಸ್ಸಿನತ್ತ ಮುನ್ನಡೆಸಲು ಶೇ.100 ರಷ್ಟು ಶ್ರಮವಹಿಸುತ್ತೇನೆ ಎಂದು ಹೇಳಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆರ್‌ಸಿಬಿ ಏಕೆ ಕಪ್ ಗೆದ್ದಿಲ್ಲ? – ಕೊಹ್ಲಿ ವಿರುದ್ಧ ಸೆಹ್ವಾಗ್ ಮಹತ್ವದ ಹೇಳಿಕೆ

    ಆರ್‌ಸಿಬಿ ಏಕೆ ಕಪ್ ಗೆದ್ದಿಲ್ಲ? – ಕೊಹ್ಲಿ ವಿರುದ್ಧ ಸೆಹ್ವಾಗ್ ಮಹತ್ವದ ಹೇಳಿಕೆ

    ಮುಂಬೈ: 2022ರ 15ನೇ ಆವೃತ್ತಿ ಐಪಿಎಲ್‌ನಲ್ಲಿ ಮುಂಬೈ ಗೆಲುವಿನ ಕೃಪೆಯಿಂದ ಪ್ಲೇ-ಆಫ್ ತಲುಪಿ, ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯ ಆಡುತ್ತಿದೆ.

    ಆದರೆ ಇದುವರೆಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ನಡೆದ ಪಂದ್ಯಗಳಲ್ಲಿ ಫೈನಲ್ಸ್‌ ವರೆಗೆ ತಲುಪಿದರೂ ಒಂದು ಆವೃತ್ತಿಯಲ್ಲೂ ಆರ್‌ಸಿಬಿ ಏಕೆ ಕಪ್ ಗೆದ್ದಿಲ್ಲ? ಎಂಬುದನ್ನು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಗುರುತಿಸಿದ್ದಾರೆ. ಇದನ್ನೂ ಓದಿ: ಗುಜರಾತ್‌ನ್ನು ಫೈನಲ್‍ಗೇರಿಸಿ ರಾಜಸ್ಥಾನ್ ಫ್ರಾಂಚೈಸ್‍ಗೆ Sorry ಕೇಳಿದ ಮಿಲ್ಲರ್

    sehwag

    ಈ ಕುರಿತು ಮಾತನಾಡಿರುವ ಸೆಹ್ವಾಗ್, ನೂತನ ನಾಯಕನಾಗಿರುವ ಫಾಫ್ ಡು ಪ್ಲೆಸಿಸ್ ಹಾಗೂ ಕೋಚ್ ಸಂಜಯ್ ಬಂಗಾರ್ ಅವರನ್ನು ಅಭಿನಂದಿಸಿದ್ದಾರೆ. ಅಲ್ಲದೆ ಈ ಹಿಂದೆ ನಾಯಕತ್ವ ವಹಿಸಿದ್ದ ವಿರಾಟ್ ಕೊಹ್ಲಿ ಕೆಲ ಆಟಗಾರರನ್ನು ಕೈಬಿಡುತ್ತಿದ್ದರು. ಇದರಿಂದ ತಂಡದ ಸಮತೋಲನ ಅಡ್ಡಿಪಡಿಸುವ ಜೊತೆಗೆ ಆಟಗಾರರ ಆತ್ಮವಿಶ್ವಾಸವನ್ನೂ ಕುಗ್ಗಿಸುತ್ತಿತ್ತು ಎಂದು ಹೇಳಿದ್ದಾರೆ.

    RCB

    2-3 ತಂಡಗಳಲ್ಲಿ ಯಾವುದೇ ಪ್ರದರ್ಶನವಿಲ್ಲದ ಮಾತ್ರಕ್ಕೆ ಆಟಗಾರರನ್ನು ಡ್ರಾಪ್ ಮಾಡುವ ವಿರಾಟ್ ಹೇಗೆ ಯೋಚಿಸುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಆದರೆ ಮುಖ್ಯ ಕೋಚ್ ಸಂಜಯ್ ಬಂಗಾರ್ ಹಾಗೂ ಹೊಸ ನಾಯಕನ ಆಗಮನವು ಆರ್‌ಸಿಬಿ ತಂಡದ ಆಲೋಚನೆಗಳನ್ನು ಬದಲಾಯಿಸಿದೆ. ಇವರಿಬ್ಬರು ತಂಡವನ್ನು ಸ್ಥಿರವಾಗಿ ಉಳಿಸಿಕೊಂಡಿದ್ದಾರೆ. ಯಾವುದೇ ಪ್ರದರ್ಶನವಿಲ್ಲದ ಆಟಗಾರರನ್ನು ಬದಲಾವಣೆ ಮಾಡಿದ್ದಾರೆಂದು ನಾನು ಭಾವಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಎಲಿಮಿನೇಟರ್ ಪಂದ್ಯ – ಆರ್‌ಸಿಬಿಗೆ ಲಕ್ನೋ ಸವಾಲು

    IPL 2022 RCB VS SRH 14

    ಫಾಫ್ ಡು ಪ್ಲೆಸಿಸ್ ಅವರನ್ನು ಆರ್‌ಸಿಬಿ ನಾಯಕರನ್ನಾಗಿ ಮಾಡಿದ್ದು ಮ್ಯಾನೇಜ್‌ಮೆಂಟ್ ಮಾಡಿದ ನಿರ್ಧಾರ. ಒಂದು ವೇಳೆ ಭಾರತದ ಕ್ರಿಕೆಟಿಗನನ್ನೇ ನಾಯಕನನ್ನಾಗಿ ಮಾಡಿದ್ದರೆ ಕೊಹ್ಲಿಯ ಸಲಹೆಯನ್ನೇ ಒಪ್ಪಿಕೊಳ್ಳಬೇಕಾದ ಒತ್ತಡಕ್ಕೆ ಒಳಗಾಗುತ್ತಿದ್ದರೇನೋ? ಹಾಗಾಗಿ ಡು ಪ್ಲೆಸಿಸ್ ನಾಯಕನಾಗಿ ಬದಲಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

  • ಕೆಂಪಿದ್ದ ಟ್ವಿಟ್ಟರ್ ಖಾತೆಯ ಪ್ರೊಫೈಲ್ ಚಿತ್ರವನ್ನು ಕಡುನೀಲಿ ಬಣ್ಣಕ್ಕೆ ಬದಲಾಯಿಸಿಕೊಂಡ ಆರ್‌ಸಿಬಿ

    ಕೆಂಪಿದ್ದ ಟ್ವಿಟ್ಟರ್ ಖಾತೆಯ ಪ್ರೊಫೈಲ್ ಚಿತ್ರವನ್ನು ಕಡುನೀಲಿ ಬಣ್ಣಕ್ಕೆ ಬದಲಾಯಿಸಿಕೊಂಡ ಆರ್‌ಸಿಬಿ

    ಮುಂಬೈ: ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೇರುವ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ತಂಡದ ಭವಿಷ್ಯ ಇಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ನಿರ್ಧಾರವಾಗಲಿದೆ.

    ಆರ್‌ಸಿಬಿ ಈಗಾಗಲೇ ತನ್ನ ಚರಣದ 14 ಪಂದ್ಯಗಳನ್ನು ಆಡಿ 8 ಜಯ, 6 ಸೋಲುಗಳನ್ನು ಅನುಭವಿಸಿದ್ದು ಪಾಯಿಂಟ್ಸ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಆದರೆ ತಂಡದ ರನ್-ರೇಟ್ ತೀರಾ ಕಡಿಮೆ ಇದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ರನ್-ರೇಟ್ ಉತ್ತಮವಾಗಿದೆ. ಒಂದು ವೇಳೆ ಇಂದು ನಡೆಯುವ ಡೆಲ್ಲಿ ಮತ್ತು ಮುಂಬೈ ಪಂದ್ಯದಲ್ಲಿ ರೋಹಿತ್ ಬಳಗವು ಸೋತರೆ ಡೆಲ್ಲಿ ತಂಡವು ರನ್ ರೆಟ್ ಆಧಾರದ ಮೇಲೆ ಪ್ಲೇ ಆಫ್‌ಗೇರಲಿದೆ. ಇದನ್ನೂ ಓದಿ: ಡೆಲ್ಲಿ ವಿರುದ್ಧದ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಐಪಿಎಲ್‍ಗೆ ಪದಾರ್ಪಣೆ?

    ಈಗಾಗಲೇ ತಮ್ಮ ತಂಡದ ಭವಿಷ್ಯ ಮುಂಬೈ ಕೈಯಲ್ಲಿರುವ ಹಿನ್ನೆಲೆ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಮುಂಬೈ ಇಂಡಿಯನ್ಸ್ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ಅಲ್ಲದೆ ಆರ್‌ಸಿಬಿಯು ಮುಂಬೈ ತಂಡವನ್ನು ಮತ್ತಷ್ಟು ಬೆಂಬಲಿಸಲು ತಮ್ಮ ಸಾಮಾಜಿಕ ಜಾಲತಾಣದ ಪ್ರೊಫೈಲ್ ಚಿತ್ರವನ್ನು ಮುಂಬೈ ತಂಡದ ಜೆರ್ಸಿಯ ಬಣ್ಣವನ್ನು ಹೋಲುವ ರೀತಿಯ ಬಣ್ಣಕ್ಕೆ ಬದಲಾಯಿಸಿಕೊಂಡಿದೆ. ಇದನ್ನೂ ಓದಿ: ಚೆನ್ನೈಗೆ ಸಿಂಹಸ್ವಪ್ನವಾದ ಅಶ್ವಿನ್ – ಸೋಲಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಹಾಲಿ ಚಾಂಪಿಯನ್

    ಈ ಕುರಿತು ವೀಡಿಯೋವೊಂದರಲ್ಲಿ ಮಾತನಾಡಿದ ಆರ್‌ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ, ನಾವು ಮೇ 21 ರಂದು ನಡೆಯುವ ಮುಂಬೈ ಮತ್ತು ಡೆಲ್ಲಿ ಪಂದ್ಯದಲ್ಲಿ ರೋಹಿತ್ ಬಳಗವನ್ನು ಬೆಂಬಲಿಸುತ್ತೇವೆ. ಕೇವಲ ಇಬ್ಬರಲ್ಲ, ಇನ್ನೂ 25 ಬೆಂಬಲಿಗರು ಸೇರಿ ಚಿಯರ್ ಅಪ್ ಮಾಡುತ್ತೇವೆ ಎಂದರು.

    IPL 2022 RCB VS SRH 5

    ಮುಂಬೈ ಮತ್ತು ಡೆಲ್ಲಿ ನಡುವಿನ ಪಂದ್ಯ ಮುಂಬೈಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದಾದರೆ, ಡೆಲ್ಲಿಗೆ ಪ್ಲೇ ಆಫ್‌ಗೆ ಏರಲು ಕಡೆಯ ಅವಕಾಶವಾಗಿದೆ. ಈ ಪಂದ್ಯದಲ್ಲಿ ಮುಂಬೈ ಗೆದ್ದರೆ, ಆರ್‌ಸಿಬಿ ಪ್ಲೇ ಆಫ್‌ಗೆ ಎಂಟ್ರಿ ಕೊಡಲಿದೆ. ಡೆಲ್ಲಿ ಗೆದ್ದರೆ, ಆರ್‌ಸಿಬಿ ಅದೃಷ್ಟದಾಟದಲ್ಲಿ ಸೋತು ಮನೆ ದಾರಿ ಹಿಡಿಯಬೇಕಾಗಿದೆ. ಹಾಗಾಗಿ ಇಂದಿನ ಪಂದ್ಯ ಮಹತ್ವ ಪಡೆದುಕೊಂಡಿದೆ.

  • ಐಪಿಎಲ್ 2022ರಲ್ಲಿ ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಬೇಕಿತ್ತು: ರವಿಶಾಸ್ತ್ರಿ

    ಐಪಿಎಲ್ 2022ರಲ್ಲಿ ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಬೇಕಿತ್ತು: ರವಿಶಾಸ್ತ್ರಿ

    ಮುಂಬೈ: ಐಪಿಎಲ್ 2022ರಲ್ಲಿ ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಬೇಕಿತ್ತು ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸಿಎಸ್‍ಕೆ ಫಾಫ್ ಡು ಪ್ಲೆಸಿಸ್ ಅವರನ್ನು ಬಿಡಬಾರದಿತ್ತು. ರವೀಂದ್ರ ಜಡೇಜಾ ತಮ್ಮ ಫಾರ್ಮ್‍ನತ್ತ ಗಮನ ಹರಿಸಬೇಕಾಗಿದೆ. ಐಪಿಎಲ್ 2022ರ ಮೊದಲು ಧೋನಿ ಸಿಎಸ್‍ಕೆ ನಾಯಕತ್ವದಿಂದ ಕೆಳಗಿಳಿದಿದ್ದು, ಈ ಋತುವಿನಲ್ಲಿ ಇನ್ನೂ ತಮ್ಮ ಮೊದಲ ಗೆಲುವು ದಾಖಲಿಸದ ರವೀಂದ್ರ ಜಡೇಜಾಗೆ ನಾಯಕತ್ವವನ್ನು ಹಸ್ತಾಂತರಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕಳೆದ ವರ್ಷ ಬೆಂಚ್ ಬಿಸಿ ಮಾಡಿದ ಆಟಗಾರರು ಈ ಬಾರಿ ಮ್ಯಾಚ್ ವಿನ್ನರ್ಸ್‌

    ಪ್ರಸ್ತುತ ಐಪಿಎಲ್ 2022ರಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ತನ್ನ ಆರಂಭಿಕ ನಾಲ್ಕು ಪಂದ್ಯಗಳನ್ನು ಕಳೆದುಕೊಂಡಿದೆ. ಇದು ಫ್ರಾಂಚೈಸಿ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಭವಿಸಿದೆ. ಚೆನ್ನೈ ಟೂರ್ನಿಯಲ್ಲಿ ನಾಲ್ಕು ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಆದರೆ ಈ ಋತುವಿನಲ್ಲಿ ಜಯದ ಲಯ ಕಂಡುಕೊಳ್ಳಲು ಹೆಣಗಾಡುತ್ತಿದೆ ಎಂದರು. ಇದನ್ನೂ ಓದಿ: ರಾಹುಲ್ ಗೋಲ್ಡನ್ ಡಕ್ – ನಿರಾಸೆಗೊಂಡ ಆಥಿಯಾ ಶೆಟ್ಟಿ

    ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ರೂ. 7 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದ ಫಾಫ್ ಡು ಪ್ಲೆಸಿಸ್ ಅವರು ತಮ್ಮ ಸಂಪೂರ್ಣ ಐಪಿಎಲ್ ವೃತ್ತಿಜೀವನವನ್ನು ಸಿಎಸ್‍ಕೆಯೊಂದಿಗೆ ಕಳೆದಿದ್ದರು. ಅವರು ಈ ಹಿಂದೆ ಚೆನ್ನೈನ 2021 ರ ಐಪಿಎಲ್ ವಿಜಯೋತ್ಸವದಲ್ಲಿ 59 ಎಸೆತಗಳಲ್ಲಿ 86 ರನ್ ಗಳಿಸಿ ಪ್ರಮುಖ ಪಾತ್ರ ವಹಿಸಿದ್ದರು. ಕೆಕೆಆರ್ ವಿರುದ್ಧದ ಫೈನಲ್‍ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಸಹ ಅವರು ತಮ್ಮ ಮುಡಿಗೇರಿಸಿಕೊಂಡಿದ್ದರು.

    ರವೀಂದ್ರ ಜಡೇಜಾ ಅವರ ಮೇಲೆ ಯಾವುದೇ ನಾಯಕತ್ವದ ಒತ್ತಡವನ್ನು ಹೇರದೆ ಆಟಗಾರನಾಗಿಯೇ ಆಡಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.