Tag: ಫಾಕ್ಸ್‌ಕಾನ್‌

  • ತೆಲಂಗಾಣದಲ್ಲಿ ಐಫೋನ್‌ ಫ್ಯಾಕ್ಟರಿ, ಬೆಂಗಳೂರಿನಲ್ಲಿ ಪ್ರಾಜೆಕ್ಟ್‌ ಎಲಿಫೆಂಟ್‌: ಫಾಕ್ಸ್‌ಕಾನ್‌ ಅಧಿಕೃತ ಘೋಷಣೆ

    ತೆಲಂಗಾಣದಲ್ಲಿ ಐಫೋನ್‌ ಫ್ಯಾಕ್ಟರಿ, ಬೆಂಗಳೂರಿನಲ್ಲಿ ಪ್ರಾಜೆಕ್ಟ್‌ ಎಲಿಫೆಂಟ್‌: ಫಾಕ್ಸ್‌ಕಾನ್‌ ಅಧಿಕೃತ ಘೋಷಣೆ

    ನವದೆಹಲಿ: ಐಫೋನ್‌ ಫ್ಯಾಕ್ಟರಿಯನ್ನು (iPhone Factory) ತೆಲಂಗಾಣದಲ್ಲಿ, ಕರ್ನಾಟಕದಲ್ಲಿ ಪ್ರಾಜೆಕ್ಟ್‌ ಎಲಿಫೆಂಟ್‌ (Project Elephant) ಆರಂಭಿಸಲಾಗುವುದು ಎಂದು ತೈವಾನಿನ ಎಲೆಕ್ಟ್ರಾನಿಕ್ಸ್‌ ದೈತ್ಯ ಕಂಪನಿ ಫಾಕ್ಸ್‌ಕಾನ್‌ (Foxconn) ಅಧಿಕೃತವಾಗಿ ತಿಳಿಸಿದೆ.

    ಫಾಕ್ಸ್‌ಕಾನ್‌ ಫ್ಯಾಕ್ಟರಿ ಸಂಬಂಧ ತೆಲಂಗಾಣ (Telangana) ಮತ್ತು ಕರ್ನಾಟಕದ (Karnataka) ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ತೆಲಂಗಾಣ ಸಿಎಂ ಚಂದ್ರಶೇಖರ ರಾವ್‌ ನಮ್ಮ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ ಎಂದು ಹೇಳಿದ್ದರೆ ಸಿಎಂ ಬಸವರಾಜ ಬೊಮ್ಮಾಯಿ ಕರ್ನಾಟಕದಲ್ಲಿ ಸ್ಥಾಪನೆಯಾಗಲಿದ ಎಂದು ತಿಳಿಸಿದ್ದರು

    ಎರಡು ರಾಜ್ಯಗಳ ಮಧ್ಯೆ ಆರೋಗ್ಯಕರ ಸ್ಪರ್ಧೆ ನಡೆಯುತ್ತಿರುವಾಗಲೇ ಫಾಕ್ಸ್‌ಕಾನ್‌  ಕಳೆದ ವಾರ ನಾವು ಯಾವುದೇ ರಾಜ್ಯದಲ್ಲಿ ಐಫೋನ್‌ ಘಟಕ ಸ್ಥಾಪನೆ ಸಂಬಂಧ ಅಧಿಕೃತ ಸಹಿ ಹಾಕಿಲ್ಲ ಎಂದು ತಿಳಿಸಿತ್ತು. ಇಂದು ಅಧಿಕೃತವಾಗಿ ಫಾಕ್ಸ್‌ಕಾನ್‌ ಕಂಪನಿ ತೆಲಂಗಾಣದಲ್ಲಿ ಐಫೋನ್‌ ಘಟಕ ಸ್ಥಾಪನೆ ಮಾಡುವುದಾಗಿ ತಿಳಿಸಿದೆ. ಕರ್ನಾಟಕದಲ್ಲಿ ʼಪ್ರಾಜೆಕ್ಟ್‌ ಎಲಿಫೆಂಟ್‌ʼ ಹೆಸರಿನಲ್ಲಿ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದೆ.

     

    ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 300 ಎಕರೆ ಪ್ರದೇಶದಲ್ಲಿ ಬರಲಿರುವ ಹೊಸ ಘಟಕವು ಭಾರತದಲ್ಲಿ ಫಾಕ್ಸ್‌ಕಾನ್‌ನ ಅತಿದೊಡ್ಡ ಘಟಕವಾಗಿದೆ ಮತ್ತು ಮುಂದಿನ 10 ವರ್ಷಗಳಲ್ಲಿ 1 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ. ಈ ಘಟಕದಲ್ಲಿ ಇತರೇ ಎಲೆಕ್ಟ್ರಾನಿಕ್ಸ್‌ ವಸ್ತುಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಭಾಗಗಳನ್ನು ತಯಾರಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಕರ್ನಾಟಕದ ಫಾಕ್ಸ್‌ಕಾನ್‌ 5.7 ಸಾವಿರ ಕೋಟಿ ರೂ. ಹೂಡಿಕೆ – 1 ಲಕ್ಷ ಉದ್ಯೋಗ ಸೃಷ್ಟಿ

    ಫಾಕ್ಸ್‌ಕಾನ್‌ ಕಂಪನಿಯು ಈಗಾಗಲೇ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸುತ್ತಿದೆ. ಇದು ತಮಿಳುನಾಡು, ಆಂಧ್ರಪ್ರದೇಶದಲ್ಲಿ ಘಟಕ ತೆರೆದಿದ್ದು ಕರ್ನಾಟಕದ ಕೋಲಾರದ ನರಸಾಪುರ ಮತ್ತು ಬೆಂಗಳೂರಿನ ಪೀಣ್ಯದಲ್ಲಿ ವಿಸ್ಟ್ರಾನ್‌ ಕಂಪನಿ ಐಫೋನ್‌ ತಯಾರಿಸುತ್ತಿದೆ.

  • ರಾಜ್ಯದಲ್ಲಿ ಫಾಕ್ಸ್‌ಕಾನ್‌ 5.7 ಸಾವಿರ ಕೋಟಿ ರೂ. ಹೂಡಿಕೆ – 1 ಲಕ್ಷ ಉದ್ಯೋಗ ಸೃಷ್ಟಿ

    ರಾಜ್ಯದಲ್ಲಿ ಫಾಕ್ಸ್‌ಕಾನ್‌ 5.7 ಸಾವಿರ ಕೋಟಿ ರೂ. ಹೂಡಿಕೆ – 1 ಲಕ್ಷ ಉದ್ಯೋಗ ಸೃಷ್ಟಿ

    ಬೆಂಗಳೂರು: ವಿಶ್ವದ ಮುಂಚೂಣಿಯ ಎಲೆಕ್ಟ್ರಾನಿಕ್ ತಯಾರಿಕಾ ಕಂಪನಿ ಹಾನ್ ಹಾಯ್ ಟೆಕ್ನಾಲಜಿ ಗ್ರೂಪ್ (ಫಾಕ್ಸ್‌ಕಾನ್‌) ಕಂಪನಿಯು ರಾಜ್ಯದಲ್ಲಿ ಗಣನೀಯ ಗಾತ್ರದ ಹೂಡಿಕೆ ಮಾಡಲು ಮುಂದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

    ಇದರಿಂದ ರಾಜ್ಯದಲ್ಲಿ 1 ಲಕ್ಷ ಉದ್ಯೋಗ ಸೃಜನೆಯಾಗುವ ನಿರೀಕ್ಷೆ ಇದ್ದು, ಉದ್ಯಮ ಸ್ಥಾಪನೆಗಾಗಿ ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕುಗಳಲ್ಲಿ 300 ಎಕರೆ ಭೂಮಿ ಗುರುತಿಸಲಾಗಿದೆ.

    ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರವು ಫಾಕ್ಸ್ಕಾನ್‌ಗೆ (Foxconn) ಎಲ್ಲಾ ರೀತಿಯ ಸಹಕಾರ, ಬೆಂಬಲ ನೀಡುವುದಾಗಿ ತಿಳಿಸಿದರು. ಅತ್ಯಾಧುನಿಕ ತಂತ್ರಜ್ಞಾನಗಳ ಪರಿಣತಿಗೆ ಹೆಸರಾದ ಕಂಪೆನಿ ಫಾಕ್ಸ್‌ಕಾನ್‌ ರಾಜ್ಯದಲ್ಲಿ ಹೂಡಿಕೆ ಮಾಡುತ್ತಿರುವುದು ಸಂತಸ ತಂದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ. ಐಟಿಐಗಳನ್ನು ಇತ್ತೀಚೆಗಷ್ಟೇ ಉನ್ನತೀಕರಿಸಿದ್ದು, ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಅಂತೆಯೇ ಜಿ.ಟಿ.ಟಿ.ಸಿ, ಪಾಲಿಟೆಕ್ನಿಕ್‌ ಗಳು ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳು ಅತ್ಯುತ್ತಮ ತಾಂತ್ರಿಕ ಶಿಕ್ಷಣವನ್ನು ನೀಡುವ ಮೂಲಕ ಕೌಶಲ್ಯಯುತ ಮಾನವ ಸಂಪನ್ಮೂಲ ಸೃಜಿಸಲಾಗುತ್ತಿದೆ ಎಂದು ವಿವರಿಸಿದರು.

    ಬೆಂಗಳೂರಿನಲ್ಲಿ ಸುಮಾರು 400 ಸರ್ಕಾರಿ ಹಾಗೂ ಖಾಸಗಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿದ್ದು, ಜಗತ್ತಿನಲ್ಲಿಯೇ ಅತಿ ಹೆಚ್ಚು. ಅಂತೆಯೇ ರಾಜ್ಯವು ಅತ್ಯುತ್ತಮ ಸೆಮಿ-ಕಂಡಕ್ಟರ್‌ ನೀತಿಯನ್ನು ಹೊಂದಿದ್ದು, ಈ ವಲಯದಲ್ಲಿಯೂ ಹೂಡಿಕೆ ಮಾಡುವ ಕುರಿತು ಪರಿಶೀಲಿಸುವಂತೆ ಸಲಹೆ ನೀಡಿದರು.ಇದಲ್ಲದೆ ತಾಂತ್ರಿಕ ತರಬೇತಿ ನೀಡುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಕೈಜೋಡಿಸುವಂತೆ ಸಲಹೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಫಾಕ್ಸ್‌ಕಾನ್‌ ಅಧ್ಯಕ್ಷ ಯಂಗ್‌ ಲಿಯು ರಾಜ್ಯದಲ್ಲಿ ಹೂಡಿಕೆ ಮಾಡುವ ಕುರಿತಾಗಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದರು. ಸೆಮಿಕಂಡಕ್ಟರ್‌ ವಲಯದಲ್ಲಿ ಹೂಡಿಕೆಯ ಕುರಿತು ಪರಿಶೀಲಿಸುವುದಾಗಿ ಅವರು ತಿಳಿಸಿದರು. ಇದನ್ನೂ ಓದಿ: ಚೀನಾದಿಂದ ಬೆಂಗಳೂರಿಗೆ ಶಿಫ್ಟ್ – ಸ್ಥಾಪನೆಯಾಗಲಿದೆ ಐಫೋನ್ ತಯಾರಿಕಾ ಘಟಕ

    ಫಾಕ್ಸ್‌ಕಾನ್‌ ಕಂಪನಿಯು ವಿಶ್ವದ ಅತಿ ದೊಡ್ಡ ಎಲೆಕ್ಟ್ರಾನಿಕ್‌ ತಯಾರಿಕಾ ಕಂಪನಿಯಾಗಿದ್ದು, 2022 ರಲ್ಲಿ 6 ಟ್ರಿಲಿಯನ್‌ ಡಾಲರ್‌ಗೂ ಹೆಚ್ಚು ವಹಿವಾಟು ನಡೆಸಿದೆ. ಜಗತ್ತಿನ ಫಾರ್ಚೂನ್‌ 500 ಕಂಪೆನಿಗಳಲ್ಲಿ 20ನೇ ಸ್ಥಾನದಲ್ಲಿದೆ. ವಿಶ್ವದ 24 ದೇಶಗಳಲ್ಲಿ 173 ಕ್ಯಾಂಪಸ್‌ ಗಳನ್ನು ಹೊಂದಿರುವ ಕಂಪೆನಿಯು ಮುಖ್ಯವಾಗಿ ಸ್ಮಾರ್ಟ್‌ ಫೋನ್‌, ಟಿವಿ ಗಳು, ಗೇಮ್‌ ಕನ್ಸೋಲ್ಸ್‌, ಕ್ಲೌಡ್‌ ಮತ್ತು ನೆಟ್‌ ವರ್ಕಿಂಗ್‌ ಉತ್ಪನ್ನಗಳು, ಕಂಪ್ಯೂಟಿಂಗ್‌ ಉತ್ಪನ್ನಗಳು ಮತ್ತು ಇತರ ಬಿಡಿ ಭಾಗಗಳ ಉತ್ಪಾದನೆಯಲ್ಲಿ ತೊಡಗಿದೆ.

    ಸಭೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ಐಟಿ ಬಿಟಿ, ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಡಾ.ಇ.ವಿ. ರಮಣರೆಡ್ಡಿ, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್ನ್.ಎನ್. ಪ್ರಸಾದ್‌, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್‌, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್‌, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್‌ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

  • ಚೀನಾದಿಂದ ಬೆಂಗಳೂರಿಗೆ ಶಿಫ್ಟ್ – ಸ್ಥಾಪನೆಯಾಗಲಿದೆ ಐಫೋನ್ ತಯಾರಿಕಾ ಘಟಕ, 1 ಲಕ್ಷ ಮಂದಿಗೆ ಉದ್ಯೋಗ

    ಚೀನಾದಿಂದ ಬೆಂಗಳೂರಿಗೆ ಶಿಫ್ಟ್ – ಸ್ಥಾಪನೆಯಾಗಲಿದೆ ಐಫೋನ್ ತಯಾರಿಕಾ ಘಟಕ, 1 ಲಕ್ಷ ಮಂದಿಗೆ ಉದ್ಯೋಗ

    ಬೆಂಗಳೂರು: ಕೋವಿಡ್ ಬಳಿಕ ಚೀನಾ (China) ಹಾಗೂ ಅಮೆರಿಕ (America) ನಡುವೆ ಸಂಘರ್ಷ ಹೆಚ್ಚಾಗಿ, ಇದೀಗ ಆಪಲ್ (Apple) ಕಂಪನಿ ತನ್ನ ತಯಾರಿಕಾ ಘಟಕವನ್ನು ಚೀನಾದಿಂದ ಭಾರತಕ್ಕೆ (India) ಸ್ಥಳಾಂತರಿಸಲು ಮುಂದಾಗುತ್ತಿದೆ. ಆಪಲ್‌ನ ಉತ್ಪನ್ನಗಳನ್ನು ತಯಾರಿಸುವ ಕಂಪನಿಯಾಗಿರುವ ಫಾಕ್ಸ್‌ಕಾನ್‌ನ (Foxconn) ಘಟಕ ಶೀಘ್ರವೇ ಬೆಂಗಳೂರಿನ (Bengaluru) ಸಮೀಪ ಸ್ಥಾಪನೆಯಾಗಲಿದೆ.

    ವರದಿಗಳ ಪ್ರಕಾರ ಆಪಲ್ ಫೋನ್‌ಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಪಾಲುದಾರ ಕಂಪನಿ ಫಾಕ್ಸ್‌ಕಾನ್‌ ಟೆಕ್ನಾಲಜಿ ಗ್ರೂಪ್ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಮಾರು 300 ಎಕರೆ ಪ್ರದೇಶದಲ್ಲಿ ಉತ್ಪಾದನಾ ಘಟಕ ನಿರ್ಮಾಣವಾಗಲಿದೆ. ಇದಕ್ಕಾಗಿ ಕಂಪನಿ ಸುಮಾರು 700 ಮಿಲಿಯನ್ ಡಾಲರ್ (ಸುಮಾರು 5.7 ಸಾವಿರ ಕೋಟಿ ರೂ.) ಹೂಡಿಕೆ ಮಾಡಲು ಯೋಜಿಸಿದೆ.

    ಬೆಂಗಳೂರಿನ ಸಮೀಪ ನಿರ್ಮಾಣವಾಗುತ್ತಿರುವ ಆಪಲ್ ಉತ್ಪಾದನಾ ತಾಣ ಸುಮಾರು 1 ಲಕ್ಷದಷ್ಟು ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಚೀನಾದ ಝೆಂಗ್‌ಝೌದಲ್ಲಿರುವ ಕಂಪನಿಯ ವಿಶಾಲವಾದ ಉತ್ಪಾದನಾ ಘಟಕದಲ್ಲಿ ಸುಮಾರು 2 ಲಕ್ಷ ಉದ್ಯೋಗಿಗಳಿದ್ದಾರೆ. ಬೆಂಗಳೂರಿನಲ್ಲೂ ಉತ್ಪಾದನೆ ಹೆಚ್ಚಳವಾಗುತ್ತಿದ್ದಂತೆ ಉದ್ಯೋಗಿಗಳ ಸಂಖ್ಯೆಯೂ ಹೆಚ್ಚಲಿದೆ ಎನ್ನಲಾಗಿದೆ. ಇದನ್ನೂ ಓದಿ: ಚೀನಾದ ಟಿಕ್‌ಟಾಕ್ ಅನ್ನು 30 ದಿನದೊಳಗೆ ಡಿವೈಸ್‌ಗಳಿಂದ ಡಿಲೀಟ್ ಮಾಡಿ – ಸರ್ಕಾರಿ ನೌಕರರಿಗೆ ಯುಎಸ್ ಸೂಚನೆ

    ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಕರ್ನಾಟಕದಲ್ಲಿ 300 ಎಕರೆ ಪ್ರದೇಶದಲ್ಲಿ ಆಪಲ್ ಫೋನ್ ಉತ್ಪಾದನೆಯ ಕಾರ್ಖಾನೆ ನಿರ್ಮಾಣವಾಗಲಿದೆ. ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರವೇ ಇದು ಸಾಧ್ಯವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದ. ಈ ಘಟಕದಿಂದ ರಾಜ್ಯದಲ್ಲಿ ಹೂಡಿಕೆ ಹಾಗೂ ಸ್ಥಳೀಯರಿಗೆ ಅವಕಾಶ ಒದಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಸೆಡ್ಡು – ಪರ್ಯಾಯ ಆ್ಯಪ್ ರಚಿಸಿದ ಟ್ವಿಟ್ಟರ್ ಸಂಸ್ಥಾಪಕ ಜಾಕ್ ಡಾರ್ಸೆ

    ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ಆಪಲ್ ತಯಾರಿಕಾ ಘಟಕದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಶೀಘ್ರದಲ್ಲೇ ಆಪಲ್ ಫೋನ್‌ಗಳು ನಿರ್ಮಾಣವಾಗಲಿದೆ. ಇದರಿಂದ ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿಯಾಗುವುದಲ್ಲದೇ ಕರ್ನಾಟಕಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ 2025ರ ಹೊತ್ತಿಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ನಮ್ಮ ಕೊಡುಗೆಯನ್ನು ನೀಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.