Tag: ಫಲಾನುಭವಿಗಳು

  • ಸರ್ಕಾರದ ವಿವಿಧ ಯೋಜನೆ – ರಾಜ್ಯಪಾಲರಿಂದ ಫಲಾನುಭವಿಗಳೊಂದಿಗೆ ಸಂವಾದ

    ಸರ್ಕಾರದ ವಿವಿಧ ಯೋಜನೆ – ರಾಜ್ಯಪಾಲರಿಂದ ಫಲಾನುಭವಿಗಳೊಂದಿಗೆ ಸಂವಾದ

    ಮಡಿಕೇರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಕ್ರವಾರ ಸಂವಾದ ನಡೆಸಿದರು.

    ನಗರದ ಹೋಟೆಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಅವರು ಸ್ವಾಗತಿಸಿ, ಸರ್ಕಾರದ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಫಲಾನುಭವಿ ಮಲ್ಲಮ್ಮ ಅವರು ಹೂ ವ್ಯಾಪಾರ ಮಾಡುತ್ತಿದ್ದು, ನಗರಸಭೆ ವತಿಯಿಂದ 2.70 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟಿರುವುದರಿಂದ ಬದುಕು ಕಟ್ಟಿಕೊಳ್ಳಲು ತುಂಬಾ ಅನುಕೂಲವಾಗಿದೆ ಎಂದು ಹೇಳಿದರು.

    ಆ್ಯರಿಸ್ ಅವರು ಮಾತನಾಡಿ, ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯಡಿ ನಗರಸಭೆ ವತಿಯಿಂದ 10 ಸಾವಿರ ರೂ. ಸಹಾಯಧನ ಕಲ್ಪಿಸಿದ್ದರು, ಇದನ್ನು ಪಾವತಿಸಿದ ನಂತರ 20 ಸಾವಿರ ರೂ. ಸಹಾಯಧನ ಕಲ್ಪಿಸಿದರು. 20 ಸಾವಿರ ರೂ. ಪಾವತಿಸಿದ ನಂತರ 50 ಸಾವಿರ ರೂ. ಮಂಜೂರಾಗಿದೆ. ಪಾಸ್ಟ್ ಫುಡ್ ಸ್ವ-ಉದ್ಯೋಗ ಕೈಗೊಳ್ಳಲಾಗಿದೆ ಎಂದು ಹೇಳಿದರು.

    ಪಿ.ಕೆ ರಂಗಪ್ಪ ಮಾತನಾಡಿ, ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ನಾನು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶದಿಂದ ಉನ್ನತ ಶಿಕ್ಷಣ ಕೊಡಿಸಿದೆ. ಮಗಳು ಕೇಂದ್ರ ನಾಗರಿಕ ಸೇವೆ ತರಬೇತಿ ಪಡೆಯುತ್ತಿದ್ದಾಳೆ. ಇದಕ್ಕಾಗಿ ನಗರಸಭೆಯಿಂದ 1.5 ಲಕ್ಷ ರೂ. ಪ್ರೋತ್ಸಾಹಧನ ಕಲ್ಪಿಸಿದ್ದಾರೆ. ಮಗಳು ಮತ್ತು ಮಗ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ರಾಜ್ಯಪಾಲರ ಭೇಟಿ

    ನಂಜುಂಡ ಅವರು ಮಾತನಾಡಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಗುರುತಿನ ಚೀಟಿ ದೊರೆತಿದೆ. ಪಾರ್ಶ್ವವಾಯು, ಮಧುಮೇಹ, ರಕ್ತದೊತ್ತಡ ಮತ್ತಿತರ ಕಾಯಿಲೆಗಳಿದ್ದು, ಗುರುತಿನ ಚೀಟಿ ನೀಡಿರುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ತಪಾಸಣೆ ಮಾಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.

    ಫಲಾನುಭವಿ ಯಶೋಧ ಮಾತನಾಡಿ, 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡೆ. ಆ ಸಂದರ್ಭದಲ್ಲಿ ಪರಿಹಾರ ಕೇಂದ್ರದಲ್ಲಿ ಇದ್ದೆ. ಸರ್ಕಾರ ವಾಸಕ್ಕೆ ಕರ್ಣಂಗೇರಿಯಲ್ಲಿ ಮನೆ ಕಲ್ಪಿಸಿದ್ದು, ಬದುಕು ದೂಡಲು ಸಹಕಾರಿಯಾಗಿದೆ ಎಂದು ಸ್ಮರಿಸಿದರು. ಇದನ್ನೂ ಓದಿ: ಭಾರೀ ಮಳೆಗೆ ಪಂಜ-ಉಳ್ಯ ಜಲಾವೃತ – ಆತಂಕದಲ್ಲಿ ಕೃಷಿಕರು

    ಚಿರಾಗ್ ಅವರು ಮಾತನಾಡಿ, ಎಂಬಿಬಿಎಸ್ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಹಿಂದುಳಿದ ವರ್ಗಗಳ ಇಲಾಖೆಯಿಂದ ಶಿಷ್ಯವೇತನ ದೊರೆಯುತ್ತಿರುವುದರಿಂದ ವೈದ್ಯಕೀಯ ಶಿಕ್ಷಣ ಪಡೆಯಲು ಅನುಕೂಲವಾಗಿದೆ ಎಂದು ಹೇಳಿದರು.

    ಹೆಚ್.ಎಸ್ ಮೋಹನ್ ಮಾತನಾಡಿ, ಪೈಂಟಿಂಗ್ ಕೆಲಸ ಮಾಡುತ್ತಿದ್ದು, ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ಲಭ್ಯವಾಗಿರುವುದರಿಂದ ಶಿಷ್ಯವೇತನ ದೊರೆತಿದೆ ಎಂದು ಹೇಳಿದರು. ಧರಣಿ ಮಾತನಾಡಿ, ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹಧನ ದೊರೆತಿದೆ ಎಂದರು. ಶರತ್ ಕುಮಾರ್ ಮಾತನಾಡಿ, ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಭಿತ್ತನೆ ಬೀಜ ಹಾಗೂ ಇತರೆ ಕೃಷಿಗಾಗಿ 9 ಕಂತಿನಲ್ಲಿ 18 ಸಾವಿರ ರೂ. ಪಾವತಿ ಆಗಿರುವುದರಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.

    ಮೀನಾ ಕುಮಾರಿ ಮಾತನಾಡಿ, ಸಂಪಾಜೆಯಲ್ಲಿ ಸಂಜೀವಿನಿ ಒಕ್ಟೂಟದ ಬಿಪಿಎಲ್ ಕುಟುಂಬದ ಸದಸ್ಯರಿಗೆ 10 ಸಾವಿರ ರೂ. ಸಹಾಯಧನ ಕಲ್ಪಿಸಲಾಗುತ್ತದೆ ಎಂದರು. ಸ್ವ-ಸಹಾಯ ಗುಂಪಿನಲ್ಲಿ 58 ಮಂದಿ ಸದಸ್ಯರಿದ್ದು, ಸರ್ಕಾರದಿಂದ ಒಂದಲ್ಲ ಒಂದು ಸೌಲಭ್ಯಗಳು ದೊರೆಯುತ್ತಿವೆ ಎಂದರು.

    ನವೀನ್ ಅವರು ಮಾತನಾಡಿ, ಪ್ರವಾಸೋದ್ಯಮ ಇಲಾಖೆಯಿಂದ 3 ಲಕ್ಷ ರೂ. ಸಹಾಯಧನದಡಿ ಟ್ಯಾಕ್ಸಿ ದೊರೆತಿದ್ದು, ಇದರಿಂದ ಜೀವನ ಸಾಗಿಸಲು ಸಹಕಾರಿಯಾಗಿದೆ ಎಂದರು. ಮೋಹನ್ ಕುಮಾರ್ ಅವರು, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಲವು ಸೌಲಭ್ಯಗಳು ದೊರೆಯುತ್ತಿದೆ ಎಂದರು. ರಶ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸ್ವ-ಉದ್ಯೋಗ ಕೈಗೊಳ್ಳಲು 69 ಸಾವಿರ ರೂ. ಸಹಾಯಧನ ದೊರೆತಿದೆ ಎಂದು ಸಂತಸಪಟ್ಟರು. ಉದ್ಯೋಗಿನಿ ಯೋಜನೆಯಡಿ ಸ್ವ-ಉದ್ಯೋಗ ಕೈಗೊಳ್ಳಲು ಸಹಾಯಧನ ದೊರೆತಿದೆ ಎಂದರು.

    ಸಂವಾದ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಕಾರ್ಯಕ್ರಮಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಉತ್ತಮ ಜೀವನ ಕಟ್ಟಿಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಅವರು ವಸತಿ, ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ, ಪಿಂಚಣಿ, ಪುನರ್ವಸತಿ ಯೋಜನೆ, ಶಿಷ್ಯವೇತನ, ಮುದ್ರಾ ಯೋಜನೆ, ಮುಖ್ಯಮಂತ್ರಿಯವರ ಅಮೃತ ಯೋಜನೆ, ಉನ್ನತ ಶಿಕ್ಷಣದಡಿ ಹೆಚ್ಚು ಅಂಕ ಪಡೆದವರಿಗೆ ಪ್ರೋತ್ಸಾಹಧನ, ಉದ್ಯೋಗಿನಿ ಹೀಗೆ ಸರ್ಕಾರದ ವಿವಿಧ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ಸಂವಾದ ನಡೆಸಿಕೊಟ್ಟರು.

    ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ ಅವರು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಬಲವರ್ಧನ ಕಾರ್ಯಕ್ರಮ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ವಿವಿಧ ಇಲಾಖೆ ಅಧಿಕಾರಿಗಳು ಸಂವಾದದಲ್ಲಿ ಉಪಸ್ಥಿತರಿದ್ದರು.

    Live Tv

  • ನೈಜ ಬಿಪಿಎಲ್ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಿ- ಅಧಿಕಾರಿಗಳಿಗೆ ಕಾಮತ್ ಸೂಚನೆ

    ನೈಜ ಬಿಪಿಎಲ್ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಿ- ಅಧಿಕಾರಿಗಳಿಗೆ ಕಾಮತ್ ಸೂಚನೆ

    ಮಂಗಳೂರು: ನೈಜ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಿ ಎಂದು ಶಾಸಕ ವೇದವ್ಯಾಸ್ ಕಾಮತ್ ಅಧಿಕಾರಿಗಳಿಗೆ ಸೂಚಿಸಿದರು.

    ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಪಟ್ಟಂತೆ ಜಿಲ್ಲೆಯ ಅಧಿಕಾರಿಗಳೊಂದಿಗೆ ಶಾಸಕ ವೇದವ್ಯಾಸ್ ಕಾಮತ್ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕ ಕಾಮತ್, ಆದಾಯ ಪ್ರಮಾಣ ಪತ್ರ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಗಳಿಂದಾಗಿ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕು. ನೈಜ ಬಿಪಿಎಲ್ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು. ಇದನ್ನೂ ಓದಿ: ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ 1.20ಲಕ್ಷ ಉಂಡೆ, ಚಕ್ಕುಲಿ ಸಿದ್ಧ

    ಬಿಪಿಎಲ್ ನಿಂದ ಎಪಿಎಲ್ ಗೆ ಪರಿವರ್ತನೆಯಾದ ಪಡಿತರ ಚೀಟಿದಾರರ ಸಂಬಂಧಿಸಿದ ಗ್ರಾಮ ಲೆಕ್ಕಿಗರಿಗೆ ನೀಡಲು ಸೂಚನೆ ನೀಡಿದರು. ಅವರಿಂದ ಪಡಿತರ ಚೀಟಿದಾರರ ಆದಾಯ ದೃಢೀಕರಣ ಪತ್ರವನ್ನು ಪರಿಷ್ಕರಿಸಿ ಆಹಾರ ಇಲಾಖೆಗೆ ವರದಿ ಸಲ್ಲಿಸುವಂತೆ ಶಾಸಕ ಕಾಮತ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಆಯುಷ್ಮಾನ್ ಭಾರತ್ ಯೋಜನೆ – ಫಲಾನುಭವಿಗಳನ್ನು ನೋಂದಾಯಿಸಲು ಡಿ.26ರಿಂದ 3 ದಿನ ವಿಶೇಷ ಅಭಿಯಾನ

    ಆಯುಷ್ಮಾನ್ ಭಾರತ್ ಯೋಜನೆ – ಫಲಾನುಭವಿಗಳನ್ನು ನೋಂದಾಯಿಸಲು ಡಿ.26ರಿಂದ 3 ದಿನ ವಿಶೇಷ ಅಭಿಯಾನ

    ಶಿವಮೊಗ್ಗ: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಫಲಾನುಭವಿಗಳನ್ನು ನೋಂದಾಯಿಸಲು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಡಿಸೆಂಬರ್ 26 ರಿಂದ 28ರವರೆಗೆ ವಿಶೇಷ ಶಿಬಿರ ಆಯೋಜಿಸಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ಅವರು ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸುವ ಕುರಿತು ಜಿಲ್ಲೆಯ ಎಲ್ಲಾ ಸಾಮಾನ್ಯ ಸೇವಾ ಕೇಂದ್ರದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.

    ಆಯುಷ್ಮಾನ್ ಯೋಜನೆಯಡಿ ಪ್ರಸ್ತುತ 4 ಲಕ್ಷ ಜನರನ್ನು ನೋಂದಾಯಿಸಿ ಕಾರ್ಡ್ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 14 ಲಕ್ಷ ಫಲಾನುಭವಿಗಳನ್ನು ಈ ಯೋಜನೆಯಡಿ ನೋಂದಾಯಿಸುವ ಗುರಿಯನ್ನು ಹೊಂದಲಾಗಿದೆ. ಪ್ರಸ್ತುತ 116 ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಈ ಯೋಜನೆಯಡಿ ಫಲಾನುಭವಿಗಳಿಗೆ ಕಾರ್ಡ್ ನೀಡಲಾಗುತ್ತಿದ್ದು, ಇನ್ನೂ 21 ಕೇಂದ್ರಗಳು ಎರಡು ದಿನಗಳಲ್ಲಿ ಸಿದ್ಧಗೊಳ್ಳಲಿವೆ. ಫಲಾನುಭವಿಗಳಿಂದ ನೋಂದಣಿಗೆ ನಿಗದಿಪಡಿಸಿರುವ ಶುಲ್ಕವನ್ನು ಮಾತ್ರ ಪಡೆಯಬೇಕು. ಕಾರ್ಡ್ ನೀಡಲು ಸತಾಯಿಸುತ್ತಿರುವ ಬಗ್ಗೆ ಯಾವುದೇ ದೂರುಗಳು ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಸಂಸದರು ಹೇಳಿದರು.

    ಜಿಲ್ಲೆಯಲ್ಲಿರುವ ಎಲ್ಲಾ 106 ಪ್ರಾಥಮಿಕ ಆರೋಗ್ಯ ಕೇಂದ್ರ, 12 ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಡಿಸೆಂಬರ್ 26, 27 ಮತ್ತು 28ರಂದು ವಿಶೇಷ ನೋಂದಣಿ ಅಭಿಯಾನ ಆಯೋಜಿಸಲಾಗುವುದು. ಮೂರು ದಿನಗಳಲ್ಲಿ ಪ್ರತಿ ಕೇಂದ್ರಗಳಲ್ಲಿ ತಲಾ 500 ಮಂದಿಗೆ ಆರೋಗ್ಯ ಕಾರ್ಡ್ ವಿತರಿಸುವ ಗುರಿ ನಿಗದಿಪಡಿಸಲಾಗಿದೆ. ಪ್ರತಿ ಕೇಂದ್ರದಲ್ಲಿ ಮೂರು ಮಂದಿ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗುವುದು. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ನೋಂದಣಿ ಕಾರ್ಯವನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

    ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅವರು ಮಾತನಾಡಿ, ಜನರು ನೋಂದಣಿಗೆ ಆಗಮಿಸುವ ಮೊದಲೇ ಅವರು ಬರಬೇಕಾದ ಸಮಯವನ್ನು ನಿಗದಿಪಡಿಸಿ ಮಾಹಿತಿ ನೀಡಬೇಕು. ತಾಂತ್ರಿಕ ತೊಂದರೆಗಳು ಎದುರಾಗದಂತೆ ಕ್ರಮ ವಹಿಸಲಾಗುವುದು. ಸ್ಥಳೀಯ ಪಂಚಾಯ್ತಿನಿಂದ ಹೆಚ್ಚುವರಿಯಾಗಿ ಸೇವಾ ಕೇಂದ್ರಗಳಿಗೆ ಡಾಟಾ ಎಂಟ್ರಿ ಆಪರೇಟರ್ ಗಳನ್ನು ನೀಡಲಾಗುವುದು. ಎಲ್ಲಾ ಸೇವಾ ಕೇಂದ್ರಗಳ ಸಿಬ್ಬಂದಿ ಆಂದೋಲನದ ರೀತಿಯಲ್ಲಿ ನೋಂದಣಿ ಕಾರ್ಯವನ್ನು ಮಾಡಬೇಕು. ಮೂರು ದಿನಗಳಲ್ಲಿ 75 ಸಾವಿರ ಫಲಾನುಭವಿಗಳನ್ನು ಯೋಜನೆ ವ್ಯಾಪ್ತಿಗೆ ಸೇರಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

    ಜಿಲ್ಲೆಯಲ್ಲಿ ಈಗಾಗಲೇ ಯೋಜನೆಯಡಿ 24,048 ಫಲಾನುಭವಿಗಳು ಸೌಲಭ್ಯ ಪಡೆದುಕೊಂಡಿದ್ದು, 3.88 ಕೋಟಿ ರೂ. ಪಾವತಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಮಾಹಿತಿ ನೀಡಿದರು. ಈ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ ಉಪಸ್ಥಿತರಿದ್ದರು.

  • ಸಿದ್ದರಾಮಯ್ಯನವರ ಶಾದಿ ಭಾಗ್ಯ  ಕೈ ಬಿಟ್ಟ ದೋಸ್ತಿ ಸರ್ಕಾರ!

    ಸಿದ್ದರಾಮಯ್ಯನವರ ಶಾದಿ ಭಾಗ್ಯ ಕೈ ಬಿಟ್ಟ ದೋಸ್ತಿ ಸರ್ಕಾರ!

    ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೈ ಬಿಟ್ಟಿದೆಯಾ ಎನ್ನುವ ಪ್ರಶ್ನೆ ಹುಟ್ಟುಕೊಂಡಿದೆ.

    ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗೆ ಜಾರಿಗೆ ತಂದಿದ್ದ ಶಾದಿ ಭಾಗ್ಯಕ್ಕೆ ಸಮ್ಮಿಶ್ರ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ. ಸರ್ಕಾರ ಧನ ಸಹಾಯ ಮಾಡುತ್ತದೆ ಎಂದು ಸಾಲಸೋಲ ಮಾಡಿ ಮದುವೆ ಮಾಡಿಕೊಂಡ ಬಡ ಕುಟುಂಬಗಳು ಈಗ ಹಿಡಿಶಾಪ ಹಾಕುತ್ತಿವೆ. ಶಾದಿ ಭಾಗ್ಯ ಯೋಜನೆ ಅಡಿಯಲ್ಲಿ ಮದುವೆಯಾದ ಸುಮಾರು 28,540 ಅರ್ಹ ಫಲಾನುಭವಿಗಳಿಗೆ ಇನ್ನೂ ಧನ ಸಹಾಯ ಸಿಕ್ಕಿಲ್ಲ.

    ಅಲ್ಲದೆ ಶಾದಿಭಾಗ್ಯ ಯೋಜನೆಯ 142 ಕೋಟಿ ರೂ. ಹಣವನ್ನು ಸಮ್ಮಿಶ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಈ ಯೋಜನೆಗೆ ಅತಿ ಹೆಚ್ಚು ಅರ್ಜಿಗಳು ಧಾರವಾಡ ಹಾಗೂ ಹಾವೇರಿ ಜಿಲ್ಲೆಯಿಂದ ಬಂದಿದೆ. ಧಾರವಾಡದಲ್ಲಿ ಸುಮಾರು 2,440 ಅರ್ಜಿಗಳು ಹಾಗೂ ಹಾವೇರಿಯಲ್ಲಿ 2,342 ಅರ್ಜಿಗಳಿಗೆ ಹಣ ನೀಡುವುದು ಬಾಕಿ ಉಳಿದಿವೆ. ಚಾಮರಾಜನಗರ ಅತಿ ಕಡಿಮೆ ಅರ್ಜಿ ಎಂದರೆ 249 ಅರ್ಜಿ ಬಾಕಿ ಉಳಿದಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಾ ಸರ್ಕಾರದ ಹಣ ನಂಬಿ ಮದುವೆಯಾದ ಬಡ ಕುಟುಂಬಗಳಿಗೆ ಇಲ್ಲಿಯವರೆಗೂ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ.

    ಬೆಳಗಾವಿಯಲ್ಲಿ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ಆರ್.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಸಮ್ಮಿಶ್ರ ಸರ್ಕಾರದ ಮಲತಾಯಿ ಧೋರಣೆ ಮಾಹಿತಿ ಹಕ್ಕಿನಲ್ಲಿ ಈ ವಿಷಯವನ್ನು ಬಹಿರಂಗ ಮಾಡಿದ್ದಾರೆ.