Tag: ಫರಿದಾಬಾದ್

  • ಇನ್ಶೂರೆನ್ಸ್‌ ಏಜೆಂಟ್‌ ಕೊಲೆ ಮಾಡಿ ಚರಂಡಿಗೆ ಎಸೆದ ಕೇಸ್;‌ ಯುವತಿ, ಆಕೆಗೆ ನಿಶ್ಚಯವಾಗಿದ್ದ ವರ ಬಂಧನ

    ಇನ್ಶೂರೆನ್ಸ್‌ ಏಜೆಂಟ್‌ ಕೊಲೆ ಮಾಡಿ ಚರಂಡಿಗೆ ಎಸೆದ ಕೇಸ್;‌ ಯುವತಿ, ಆಕೆಗೆ ನಿಶ್ಚಯವಾಗಿದ್ದ ವರ ಬಂಧನ

    ನವದೆಹಲಿ: ಫರಿದಾಬಾದ್‌ನಲ್ಲಿ ವಿಮಾ ಏಜೆಂಟ್‌ನನ್ನು ಕೊಲೆ ಮಾಡಿ ಆತನ ದೇಹವನ್ನು ಚರಂಡಿಗೆ ಎಸೆದ ಆರೋಪದಲ್ಲಿ ಯುವತಿ ಮತ್ತು ಆಕೆಯ ನಿಶ್ಚಿತ ವರನನ್ನು ಬಂಧಿಸಲಾಗಿದೆ.

    ಚಂದರ್‌ ಕೊಲೆಯಾದ ವ್ಯಕ್ತಿ. ಪೊಲೀಸರು ಲಕ್ಷ್ಮಿ (29) ಮತ್ತು ಕೇಶವ್ (26) ಅವರನ್ನು ಬಂಧಿಸಿದರು. ಈತ ನನಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಕಾರಣ ಕೊಲೆ ಮಾಡಿರುವುದಾಗಿ ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ಅಲ್ ಖೈದಾ ಜೊತೆ ಸಂಪರ್ಕ – ಹಲವೆಡೆ ದಾಳಿಗೆ ಸಂಚು ರೂಪಿಸಿದ್ದ ಟೆಕ್ಕಿ ಪುಣೆಯಲ್ಲಿ ಅರೆಸ್ಟ್‌

    ಭಾನುವಾರ ಬೆಳಗ್ಗೆ ಚರಂಡಿಯಲ್ಲಿ ಚಂದರ್ ಅವರ ಶವ ಪತ್ತೆಯಾಗಿತ್ತು. ಸಮೀಪದಲ್ಲಿ ನಿಲ್ಲಿಸಿದ್ದ ಬೈಕ್‌ನ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಶವವನ್ನು ಗುರುತಿಸಲಾಯಿತು. ಫರಿದಾಬಾದ್‌ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಪೂರ್ವ ದೆಹಲಿಯ ವಿನೋದ್ ನಗರದಲ್ಲಿ ಚಂದರ್ ವಾಸಿಸುತ್ತಿದ್ದರು ಎಂದು ಪೊಲೀಸರು ಕಂಡುಕೊಂಡರು. ಅವರ ಕುಟುಂಬವನ್ನು ಸಂಪರ್ಕಿಸಿದರು. ಮೃತದೇಹದ ತಲೆ ಮತ್ತು ಕುತ್ತಿಗೆಯ ಮೇಲೆ ಗಾಯದ ಗುರುತುಗಳಿದ್ದವು. ಚಂದರ್ ಅವರ ಸಹೋದರ ಮದನ್ ಗೋಪಾಲ್ ನೀಡಿದ ದೂರಿನ ನಂತರ, ಕೊಲೆ ಪ್ರಕರಣ ದಾಖಲಿಸಲಾಯಿತು.

    ಚಂದರ್ ಅವರಿಗೆ ಐದು ವರ್ಷಗಳಿಂದ ಪರಿಚಯವಿರುವುದಾಗಿ ಪೊಲೀಸರ ಬಳಿ ಆರೋಪಿ ಲಕ್ಷ್ಮಿ ಹೇಳಿದ್ದಾಳೆ. ಇತ್ತೀಚೆಗೆ ಕೇಶವ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಇದರಿಂದ ಚಂದರ್ ಬೇಸರಗೊಂಡಿದ್ದ. ಅವನು ಲಕ್ಷ್ಮಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಕೇಶವ್ ಅವರನ್ನು ಮದುವೆಯಾಗಬೇಡಿ ಎಂದು ಹೇಳಿದ್ದ. ಈ ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತ ಆಕೆ ಮತ್ತು ಕೇಶವ್ ಇಬ್ಬರೂ ಚಂದರ್‌ನನ್ನು ಕೊಲ್ಲಲು ಯೋಜಿಸಿದ್ದರು ಎಂದು ಪೊಲೀಸ್ ವಕ್ತಾರ ಯಶ್ಪಾಲ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ 49% ವಿದೇಶಿ ನೇರ ಹೂಡಿಕೆಗೆ ಅನುಮೋದನೆ ಸಾಧ್ಯತೆ

    ಅ.25 ರಂದು ಲಕ್ಷ್ಮಿ, ಚಂದರ್‌ನನ್ನು ದೆಹಲಿಯ ಮಿಥಾಪುರಕ್ಕೆ ಕರೆದಳು. ಅಲ್ಲಿಂದ ಆತನ ಜೊತೆ ಬೈಕ್‌ನಲ್ಲಿ ಫರಿದಾಬಾದ್‌ನ ಆತ್ಮದ್‌ಪುರದಲ್ಲಿರುವ ನಿರ್ಜನ ಪ್ರದೇಶಕ್ಕೆ ಹೋದಳು. ಅಲ್ಲಿ, ಕೇಶವ್ ಮತ್ತು ಅವನ ಇಬ್ಬರು ಸ್ನೇಹಿತರು ಚಂದರ್ ಮೇಲೆ ಹಲ್ಲೆ ನಡೆಸಿದರು. ಆತ ಸತ್ತ ನಂತರ ಆರೋಪಿಗಳು ಶವವನ್ನು ಚರಂಡಿಯಲ್ಲಿ ಎಸೆದು ಸ್ಥಳದಿಂದ ಪರಾರಿಯಾಗಿದ್ದರು.

  • ಕೊಲೆಗೂ ಮುಂಚೆ ಸೊಸೆಯ ರೇಪ್ – ಮಗನ ಜೊತೆಗೂಡಿ 10 ಅಡಿ ಗುಂಡಿಯಲ್ಲಿ ಶವ ಹೂತಿಟ್ಟ ಕಿಲಾಡಿ ಮಾವ

    ಕೊಲೆಗೂ ಮುಂಚೆ ಸೊಸೆಯ ರೇಪ್ – ಮಗನ ಜೊತೆಗೂಡಿ 10 ಅಡಿ ಗುಂಡಿಯಲ್ಲಿ ಶವ ಹೂತಿಟ್ಟ ಕಿಲಾಡಿ ಮಾವ

    – ವಿಚಾರಣೆ ವೇಳೆ ಮಗನಿಗೂ ಗೊತ್ತಿರದ ಅತ್ಯಾಚಾರ ವಿಷಯ ಬಾಯ್ಬಿಟ್ಟ ದುಷ್ಟ

    ಚಂಡೀಗಢ: ಸೊಸೆಯನ್ನು ರೇಪ್ ಮಾಡಿ ಆನಂತರ ಕೊಲೆ ಮಾಡಿ, ಬಳಿಕ ಮಗನ ಜೊತೆಗೂಡಿ 10 ಅಡಿ ಆಳದ ಗುಂಡಿಯಲ್ಲಿ ಶವ ಹೂತು ಹಾಕಿರುವ ಘಟನೆಯೊಂದು ಹರಿಯಾಣದ (Haryana) ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ.

    ಮೃತ ಮಹಿಳೆಯನ್ನು ಉತ್ತರ ಪ್ರದೇಶದ (Uttara Pradesh) ಫಿರೋಜಾಬಾದ್ ಜಿಲ್ಲೆಯ ಶಿಕೋಹಾಬಾದ್‌ನ ತನು (24) ಎಂದು ಗುರುತಿಸಲಾಗಿದೆ. 2023ರ ಜುಲೈನಲ್ಲಿ ಹರಿಯಾಣ ಮೂಲದ ವ್ಯಕ್ತಿಯ ಜೊತೆ ಸಂತ್ರಸ್ತೆಯ ವಿವಾಹವಾಗಿತ್ತು. ಆದರೆ ಮದುವೆಯಾದ ಬಳಿಕ ವರದಕ್ಷಿಣೆಗಾಗಿ ಆಕೆಗೆ ತೀವ್ರ ಕಿರುಕುಳ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: 10 ಅಡಿ ಆಳದಲ್ಲಿ ಸೊಸೆಯನ್ನು ಹೂತಿದ್ದ ಪಾಪಿಗಳು – ಓಡಿ ಹೋಗಿದ್ದಾಳೆ ಎಂದು ಕತೆ ಕಟ್ಟಿದ್ದ ಪತಿ ಕುಟುಂಬಸ್ಥರು ಅರೆಸ್ಟ್‌!

    ಕೊಲೆ ನಡೆದಿದ್ದು ಹೇಗೆ?
    ಅಪ್ಪ-ಮಗ ಸೇರಿಕೊಂಡು ಏ.14ರಂದು ಸಂತ್ರಸ್ತ ಯುವತಿಯನ್ನು ಕೊಲ್ಲಲು ಸರಿಯಾಗಿ ಪ್ಲ್ಯಾನ್‌ ಮಾಡಿದ್ದರು. ಈ ಪ್ಲ್ಯಾನ್‌ನ್ನು ಸರಿಯಾಗಿ ಕಾರ್ಯರೂಪಕ್ಕೆ ತರಲು ಮಗ ತನ್ನ ಅಮ್ಮನನ್ನು ಉತ್ತರ ಪ್ರದೇಶದ ಇಟಾನಗರಕ್ಕೆ ಮದುವೆಗೆಂದು ಕಳುಹಿಸಿದ್ದ. ಏ.21ರಂದು ರಾತ್ರಿ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ, ಸಂತ್ರಸ್ತೆಗೆ ಹಾಗೂ ಆಕೆಯ ಸಹೋದರಿಗೆ ನೀಡಿದ್ದರು. ಬಳಿಕ ಇಬ್ಬರು ಬೇರೆ ಬೇರೆ ಕೋಣೆಯಲ್ಲಿ ಮಲಗಿದ್ದರು.

    ಕೊಲೆ ಮಾಡುವ ಉದ್ದೇಶದಿಂದ ಮಾವ ಕೋಣೆಗೆ ತೆರಳಿದ್ದಾಗ ಸೊಸೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಳು. ಇದನ್ನು ಕಂಡು ಮೊದಲು ಆಕೆಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಿದ್ದಾನೆ. ನಂತರ ತನ್ನ ಮಗನನ್ನು ಕೋಣೆಗೆ ಕರೆದಿದ್ದಾನೆ. ಆದರೆ ಅತ್ಯಾಚಾರದ ವಿಷಯವನ್ನು ತಿಳಿಸಿರಲಿಲ್ಲ. ಶವವನ್ನ ಬಟ್ಟೆಯೊಂದರಲ್ಲಿ ಸುತ್ತಿ ಇಬ್ಬರು ಸೇರಿ ಎತ್ತಿಕೊಂಡು ಮನೆಯ ಹೊರಗೆ ಬಂದಿದ್ದಾರೆ. ಕೊಲೆಗೂ ಮುನ್ನವೇ ನೆರೆಹೊರೆಯವರನ್ನು ನಂಬಿಸಲು ಒಳಚರಂಡಿ ಕೆಲಸಕ್ಕಾಗಿ ಎಂದು ತಿಳಿಸಿ 10 ಅಡಿ ಆಳದ ಗುಂಡಿ ತೋಡಿಸಿದ್ದರು. ಅದೇ ಗುಂಡಿಗೆ ಹೆಣವನ್ನು ಬಿಸಾಕಿ ಬಳಿಕ ಅದರ ಮೇಲೆ ಇಟ್ಟಿಗೆ ಇರಿಸಿ, ಮಣ್ಣಿನಿಂದ ಮುಚ್ಚಿದ್ದರು. ಕೆಲವು ದಿನಗಳ ಬಳಿಕ ಅದರ ಮೇಲೆ ಕಾಂಕ್ರೀಟ್ ಹಾಕಿ ಮುಚ್ಚಲಾಗಿತ್ತು. ಇದೆಲ್ಲ ಆದ ಬಳಿಕ ಏ.25 ರಂದು ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದರು.

    ಈ ಘಟನೆಯಾದ ಸುಮಾರು 2 ತಿಂಗಳ ಬಳಿಕ ಜೂ.21ರಂದು ಮನೆಯ ಹೊರಗೆ 10 ಅಡಿ ಆಳದ ಗುಂಡಿಯಲ್ಲಿ ಶವ ಪತ್ತೆಯಾಗಿತ್ತು. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಈ ಕುರಿತು ಸಂತ್ರಸ್ತೆಯ ಸಹೋದರಿ ಮಾತನಾಡಿ, ಮದುವೆಯಾದಾಗಿನಿಂದ ನನ್ನ ಸಹೋದರಿ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗಿದ್ದಾರೆ. ಈ ನೋವಿನಿಂದಾಗಿ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಆಕೆ ತವರು ಮನೆಗೆ ಬಂದಿದ್ದಳು. ಅದಾದ ಒಂದು ವರ್ಷದ ಬಳಿಕ ಮತ್ತೆ ಆಕೆ ಅತ್ತೆ ಮನೆಗೆ ಬಂದಿದ್ದಳು. ಆಕೆಗೆ ನೀಡಿರುವ ವರದಕ್ಷಿಣೆ ಅತ್ತೆ ಮಾವನಿಗೆ ಸಾಕಾಗಿರಲಿಲ್ಲ. ಇನ್ನೂ ಹೆಚ್ಚಿನ ಹಣ, ಒಡವೆ ತರಲು ಯಾವಾಗಲೂ ಒತ್ತಡ ಹಾಕುತ್ತಿದ್ದರು ಎಂದು ತಿಳಿಸಿದ್ದಾರೆ.

    ಈ ಆಧಾರದ ಮೇಲೆ ಮನೆಯವರನ್ನು ವಿಚಾರಣೆಗೆ ಒಳಪಡಿಸಿದಾಗ ಸಂತ್ರಸ್ತೆಯ ಮಾವ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಸಂತ್ರಸ್ತೆಯ ಮಾವ, ಅತ್ತೆ, ಪತಿ ಮತ್ತು ಅತ್ತಿಗೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಬೆಂಗಾವಲು ಪಡೆಯ 19 ವಾಹನಗಳಿಗೆ ನೀರು ಮಿಶ್ರಿತ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ!

  • ರಾಮ ಮಂದಿರದ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿಗೆ ಸಂಚು – ಶಂಕಿತ ಭಯೋತ್ಪಾದಕ ಅರೆಸ್ಟ್

    ರಾಮ ಮಂದಿರದ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿಗೆ ಸಂಚು – ಶಂಕಿತ ಭಯೋತ್ಪಾದಕ ಅರೆಸ್ಟ್

    ಫರಿದಾಬಾದ್: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರದ (Ram Mandir) ಮೇಲೆ ಹ್ಯಾಂಡ್ ಗ್ರೆನೇಡ್ (Hand Grenade) ದಾಳಿ ನಡೆಸಲು ಸಂಚು ರೂಪಿಸಿದ್ದ ಶಂಕಿತ ಭಯೋತ್ಪಾದಕನನ್ನು ಪೊಲೀಸರು ಬಂಧಿಸಿದ್ದಾರೆ.

    ಹರಿಯಾಣದ (Haryana) ಫರಿದಾಬಾದ್‌ನಲ್ಲಿ ಅಬ್ದುಲ್ ರೆಹಮಾನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಫೈಜಾಬಾದ್ ಮೂಲದ ಅಬ್ದುಲ್ ರೆಹಮಾನ್, ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಕಾರಣ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರಾಮ ಮಂದಿರದ ಮೇಲೆ ದಾಳಿ ನಡೆಸುವ ಸಂಚು ಬಹಿರಂಗವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಇರೋವರೆಗೂ ಅವರ ಸ್ಥಾನ ಕಿತ್ತುಕೊಳ್ಳುವುದು ಕಷ್ಟ: ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ

    ರಾಮಮಂದಿರದ ಮೇಲೆ ಹ್ಯಾಂಡ್ ಗ್ರೆನೇಡ್ ಬಳಸಿ ದಾಳಿ ಮಾಡಿ ಭಾರಿ ವಿನಾಶವನ್ನುಂಟುಮಾಡುವುದು ಅಬ್ದುಲ್ ರೆಹಮಾನ್ ಸಂಚಾಗಿತ್ತು. ಪಿತೂರಿಯ ಭಾಗವಾಗಿ, ಅಬ್ದುಲ್ ಹಲವು ಬಾರಿ ರಾಮ ಮಂದಿರದ ಪರಿಶೀಲನೆ ನಡೆಸಿದ್ದ ಮತ್ತು ಎಲ್ಲಾ ಮಾಹಿತಿಯನ್ನು ಪಾಕಿಸ್ತಾನದ ಐಎಸ್‌ಐ ಜೊತೆ ಹಂಚಿಕೊಂಡಿದ್ದ. ಇದನ್ನೂ ಓದಿ: ಸಾಧ್ಯವಾದಷ್ಟು ಬೇಗ ಮಕ್ಕಳನ್ನ ಮಾಡಿಕೊಳ್ಳಿ – ಜನಸಂಖ್ಯೆ ಹೆಚ್ಚಿಸಲು ಎಂ.ಕೆ ಸ್ಟಾಲಿನ್ ಮನವಿ

    ಅಬ್ದುಲ್ ಫೈಜಾಬಾದ್‌ನಿಂದ ರೈಲಿನಲ್ಲಿ ಫರಿದಾಬಾದ್ ತಲುಪಿದ್ದ. ಅಲ್ಲಿ ವ್ಯಕ್ತಿಯೊಬ್ಬ ಹ್ಯಾಂಡ್ ಗ್ರೆನೇಡ್‌ಗಳನ್ನು ನೀಡಿದ್ದ. ಅದನ್ನು ತೆಗೆದುಕೊಂಡು ರೈಲಿನಲ್ಲಿ ಅಯೋಧ್ಯೆಗೆ ತೆರಳಿ ದಾಳಿ ಮಾಡುವ ಉದ್ದೇಶ ಹೊಂದಲಾಗಿತ್ತು. ಆದರೆ ಕೇಂದ್ರ ಸಂಸ್ಥೆಗಳ ಮಾಹಿತಿಯ ಆಧಾರದ ಮೇಲೆ ಯೋಜನೆ ಯಶಸ್ವಿಯಾಗುವ ಮೊದಲು, ಗುಜರಾತ್ ಎಟಿಎಸ್ ಮತ್ತು ಫರಿದಾಬಾದ್ ಎಸ್‌ಟಿಎಫ್ ಶಂಕಿತ ಭಯೋತ್ಪಾದಕನನ್ನು ಬಂಧಿಸಿದೆ. ಇದನ್ನೂ ಓದಿ: ಹೆಚ್‌ಡಿಕೆ ಕೇಂದ್ರ ಮಂತ್ರಿಯಾಗಿ ರಾಜ್ಯಕ್ಕೆ ಯಾವುದೇ ಅನುದಾನ ತಂದಿಲ್ಲ: ಹೆಚ್‌ಸಿ ಬಾಲಕೃಷ್ಣ

  • ಹರಿಯಾಣ: 1 ಗಂಟೆ ಅವಧಿಯಲ್ಲಿ ಎರಡು ಬಾರಿ ಕಂಪಿಸಿದ ಭೂಮಿ

    ಹರಿಯಾಣ: 1 ಗಂಟೆ ಅವಧಿಯಲ್ಲಿ ಎರಡು ಬಾರಿ ಕಂಪಿಸಿದ ಭೂಮಿ

    ಹರಿಯಾಣ: ಹರಿಯಾಣದ (Haryana) ಫರೀದಾಬಾದ್ (Faridabad) ಜಿಲ್ಲೆಯಲ್ಲಿ ಒಂದರ ಹಿಂದೊಂದರಂತೆ ಭೂಕಂಪನಗಳು ಸಂಭವಿಸಿದೆ. ದೆಹಲಿ-ಎನ್‌ಸಿಆರ್‌ನಾದ್ಯಂತ ಕಂಪನದ ಅನುಭವವಾಗಿದೆ.

    ಫರಿದಾಬಾದ್ ಜಿಲ್ಲೆಯಲ್ಲಿ ಗುರುವಾರ ಎರಡು ಬಾರಿ ಭೂಮಿ ಕಂಪಿಸಿದೆ. ರಾಷ್ಟ್ರೀಯ ಭೂಕಂಪನಶಾಸ್ತ್ರದ ಕೇಂದ್ರದ ಮಾಹಿತಿಯ ಪ್ರಕಾರ, ಮೊದಲ ಕಂಪನವು ಬೆಳಗ್ಗೆ 10.54ಕ್ಕೆ ಸಂಭವಿಸಿದೆ, ಇದಾಗಿ ಗಂಟೆಯೊಳಗೆ ಎರಡನೆಯ ಬಾರಿಗೆ 11.43ಕ್ಕೆ ಭೂಮಿ ಕಂಪಿಸಿದೆ. ಇದನ್ನೂ ಓದಿ: ಜೈಲಿಂದ ಹೊರಬಂದ ಬಳಿಕ ಹೆಚ್‌ಡಿಕೆ ಭೇಟಿಯಾದ ದೇವರಾಜೇಗೌಡ – ಪೆನ್‌ಡ್ರೈವ್‌ ಕೇಸ್ ಬಗ್ಗೆ ಮಾತುಕತೆ

    ದೇಶದ ರಾಜಧಾನಿ ದೆಹಲಿ-ಎನ್‌ಸಿಆರ್‌ನ ಹಲವಾರು ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ದೇಶದ ಅತಿ ದೊಡ್ಡ ಆಸ್ಪತ್ರೆ ಉದ್ಘಾಟಿಸಿದ ಮೋದಿ

    ದೇಶದ ಅತಿ ದೊಡ್ಡ ಆಸ್ಪತ್ರೆ ಉದ್ಘಾಟಿಸಿದ ಮೋದಿ

    ಚಂಡೀಗಢ: ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ, ಕೇಂದ್ರೀಕೃತ ಸಂಪೂರ್ಣ ಸ್ವಯಂಚಾಲಿತ ಪ್ರಯೋಗಾಲಯ ಸೇರಿದಂತೆ 2,600 ಹಾಸಿಗೆಯುಳ್ಳ ನೂತನ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು. ಹರಿಯಾಣದ ಫರಿದಾಬಾದ್‌ನಲ್ಲಿರುವ ಹೊಸ ‘ಅಮೃತ’ ಆಸ್ಪತ್ರೆ ದೇಶದ ಅತಿ ದೊಡ್ಡ ಖಾಸಗಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಇಂದು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹರಿಯಾಣದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಹಾಗೂ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಉಪಸ್ಥಿತರಿದ್ದರು.

    ಈ ವೇಳೆ ಮಾತನಾಡಿದ ಮೋದಿ, ಭಾರತ ಆರೋಗ್ಯ ಹಾಗೂ ಆಧ್ಯಾತ್ಮಿಕತೆಯ ನಿಕಟ ಸಂಬಂಧ ಹೊಂದಿರುವ ದೇಶವಾಗಿದೆ. ಈ ಸಂಬಂಧಕ್ಕೆ ಕೋವಿಡ್-19 ಒಂದು ಅತ್ಯುತ್ತಮ ಉದಾಹರಣೆ. ಇದು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನವನ್ನು ಕಾರ್ಯಗತಗೊಳಿಸಲು ಸಹಾಯ ಮಾಡಿದೆ ಎಂದರು.

    ತಂತ್ರಜ್ಞಾನ ಮತ್ತು ಆಧುನೀಕರಣದ ಸಂಯೋಜನೆ ದೇಶದ ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿಗೆ ಕಾರಣವಾಗಿದೆ. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಗೆ ಜನರನ್ನು ಮುಂದೆ ತರಲು ಭಾರತ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: 10 ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್ ಮೀಸಲಾತಿ ಪ್ರಕಟ – ನಿಮ್ಮ ನಗರಕ್ಕೆ ಯಾರು?

    ಆಸ್ಪತ್ರೆ ವಿಶೇಷತೆಯೇನು?
    ಸುಮಾರು 130 ಎಕರೆಯ ವಿಶಾಲವಾದ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಅಮೃತ ಆಸ್ಪತ್ರೆ, 7 ಅಂತಸ್ತಿನ ಸಂಶೋಧನಾ ಬ್ಲಾಕ್ ಅನ್ನು ಹೊಂದಿದೆ. ಮಾತಾ ಅಮೃತಾನಂದಮಯಿ ಟ್ರಸ್ಟ್ ವತಿಯಿಂದ 6 ವರ್ಷಗಳ ಅವಧಿಯಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.

    ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 500 ಹಾಸಿಗೆಗಳನ್ನು ಈಗಾಗಲೇ ಬಳಕೆಗೆ ತೆರೆಯಲಾಗಿದೆ. ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಒಮ್ಮೆ ಸಂಪೂರ್ಣವಾಗಿ ಈ ಆಸ್ಪತ್ರೆ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರೆ, ದೇಶದ ಅತಿ ದೊಡ್ಡ ಖಾಸಗಿ ಆಸ್ಪತ್ರೆಯಾಗಲಿದೆ. ಇದನ್ನೂ ಓದಿ: ನಿವೃತ್ತಿ ಹೊಂದಿರುವ, ನಿವೃತ್ತಿ ಹೊಂದಲಿರುವ ವ್ಯಕ್ತಿಗೆ ಭಾರತದಲ್ಲಿ ಯಾವುದೇ ಮೌಲ್ಯವಿಲ್ಲ: ಸಿಜೆಐ ರಮಣ

    ಆಸ್ಪತ್ರೆಯ ಕಟ್ಟಡಗಳನ್ನು 36 ಲಕ್ಷ ಚದರ ಅಡಿ ಪ್ರದೇಶದಲ್ಲಿ ನಿರ್ಮಿಸಲಾಗಿದೆ. 14 ಮಹಡಿಗಳುಳ್ಳ ಕಟ್ಟಡದಲ್ಲಿ ಪ್ರಮುಖ ವೈದ್ಯಕೀಯ ಸೌಲಭ್ಯಗಳು ಇವೆ. ಮೇಲ್ಛಾವಣಿಯಲ್ಲಿ ಹೆಲಿಪ್ಯಾಡ್ ಕೂಡ ಇದೆ.

    ದೆಹಲಿ-ಮಥುರಾ ರಸ್ತೆಯ ಬಳಿ ಫರಿದಾಬಾದ್‌ನ ಸೆಕ್ಟರ್ 88ರಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಇದರ ಕ್ಯಾಂಪಸ್‌ನಲ್ಲಿ ವೈದ್ಯಕೀಯ ಕಾಲೇಜು ಕೂಡಾ ಇದೆ. ಕಟ್ಟಡದ 7 ಅಂತಸ್ತಿನಲ್ಲಿ ಸಂಶೋಧನಾ ವಿಭಾಗ, ಗ್ಯಾಸ್ಟ್ರೋ ವಿಜ್ಞಾನ, ಮೂತ್ರಪಿಂಡ ವಿಜ್ಞಾನ, ಮೂಳೆ ರೋಗಗಳು, ಅಪಘಾತ, ಕಸಿ ಮತ್ತು ತಾಯಿ-ಮಗುವಿನ ಆರೈಕೆ ಸೇರಿದಂತೆ 8 ವಿವಿಧ ಕೇಂದ್ರಗಳು ಕ್ಯಾಂಪಸ್‌ನಲ್ಲಿವೆ.

    Live Tv 
    [brid partner=56869869 player=32851 video=960834 autoplay=true]

  • ಆನ್‍ನೈಲ್‍ನಲ್ಲಿ 100ಕ್ಕೂ ಹೆಚ್ಚು ಜನರಿಗೆ ವಂಚನೆ – 4 ಮಂದಿ ಅರೆಸ್ಟ್

    ಆನ್‍ನೈಲ್‍ನಲ್ಲಿ 100ಕ್ಕೂ ಹೆಚ್ಚು ಜನರಿಗೆ ವಂಚನೆ – 4 ಮಂದಿ ಅರೆಸ್ಟ್

    ಫರಿದಾಬಾದ್: ಆನ್‍ಲೈನ್‍ನಲ್ಲಿ 100ಕ್ಕೂ ಹೆಚ್ಚು ಜನರಿಗೆ ವಂಚಿಸಿದ ಆರೋಪದ ಮೇಲೆ ಫರಿದಾಬಾದ್ ಪೊಲೀಸರು ಶುಕ್ರವಾರ ನಾಲ್ವರನ್ನು ಬಂಧಿಸಿದ್ದಾರೆ.

    ವರದಿಯ ಪ್ರಕಾರ, ಆರೋಪಿಗಳ ಗ್ಯಾಂಗ್ ಲಾಟರಿ ಮತ್ತು ಕ್ರೆಡಿಟ್ ಕಾರ್ಡ್ ಆಕ್ಟಿವ್ ಮಾಡುವ ನೆಪದಲ್ಲಿ ಗ್ರಾಹಕರಿಗೆ ಬಹುಮಾನಗಳನ್ನು ನೀಡುತ್ತೇವೆ ಎಂದು ಆಸೆಯನ್ನು ಹುಟ್ಟಿಸುತ್ತಾರೆ. ಈ ಹಿನ್ನೆಲೆ ಗ್ರಾಹಕರು ಸಹ ಅವರು ಹೇಳಿದಕ್ಕೆ ಮರುಳಾಗಿ ಆರೋಪಿಗಳು ಕೇಳಿದ ಎಲ್ಲ ಮಾಹಿತಿಗಳನ್ನು ಕೊಡುತ್ತಾರೆ. ಅಲ್ಲದೆ ನಿಮಗೆ ಬಹುಮಾನ ಸಿಗಬೇಕಾದರೆ ಜಿಎಸ್‍ಟಿ ಹಣ ಕಟ್ಟಬೇಕು ಎಂದು ಕೇಳುತ್ತಾರೆ. ಅದರಂತೆ ಗ್ರಾಹಕರು ಸಹ ಹಣವನ್ನು ಕಟ್ಟುತ್ತಿದ್ದಂತೆ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿಕೊಳ್ಳುತ್ತಾರೆ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ:  ಕಾಲಿನ ಮಂಡಿಯಲ್ಲಿ ಒಂದೂವರೆ ಕೆಜಿ ಚಿನ್ನ ಸಾಗಿಸುತ್ತಿದ್ದವ ಅರೆಸ್ಟ್!

    ಬಂಧಿತ ಆರೋಪಿಗಳನ್ನು ಫರಿದಾಬಾದ್‍ನ ದೀಪಕ್ ಝಾ, ದೆಹಲಿಯ ದೀಕ್ಷಾ, ಉತ್ತರ ಪ್ರದೇಶದ ಸುಹೇಲ್ ಮತ್ತು ದೆಹಲಿಯ ದೀಪಕ್ ಸಿಂಗ್ ಎಂದು ನಗರ ಪೊಲೀಸರು ಗುರುತಿಸಿದ್ದಾರೆ.

    ಮೋಸ ಹೋದ ಗ್ರಾಹಕರು ಪೊಲೀಸರಿಗೆ ದೂರು ನೀಡಿದ್ದು, ಅವರ ಜಾಲವನ್ನು ಪೊಲೀಸರು ಹುಡುಕಲು ಪ್ರಾರಂಭಿಸಿದ್ದಾರೆ. ತನಿಖೆ ವೇಳೆ ಪೊಲೀಸರಿಗೆ, ಆರೋಪಿಗಳು ತಮ್ಮನ್ನು ಬಚಾವ್ ಮಾಡಿಕೊಳ್ಳಲು ಸ್ಕಾರ್ಪಿಯೋ ಕಾರನ್ನು ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಈ ಗ್ಯಾಂಗ್ ಕಾರನ್ನು ‘ವರ್ಚುವಲ್ ಕಾಲ್ ಸೆಂಟರ್’ ಆಗಿ ಬಳಸುತ್ತಿದ್ದು, ಅದರ ನೋಂದಣಿ ಸಂಖ್ಯೆಯನ್ನು ಬದಲಾಯಿಸುತ್ತಲೇ ಇರುತ್ತಾರೆ ಎಂದು ತಿಳಿದುಕೊಂಡಿದ್ದಾರೆ.

    ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದು, ವಂಚನೆಗೆ ಸಂಬಂಧಿಸಿದಂತೆ ಸೆಕ್ಟರ್ 31 ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜನರನ್ನು ವಂಚಿಸುವ ಸಲುವಾಗಿ, ಆರೋಪಿಗಳ ಗ್ಯಾಂಗ್ ಜನರಿಗೆ ಕರೆ ಮಾಡಿ ಅವರು ಸ್ಮಾರ್ಟ್ ವಾಚ್, ಕಾರು ಅಥವಾ ಮೋಟಾರ್‍ಸೈಕಲ್ ಗೆದ್ದಿದ್ದೇವೆ ಎಂದು ತಿಳಿಸುತ್ತಿದ್ದರು. 18% ಜಿಎಸ್‍ಟಿ ಪಾವತಿಸಿದ ನಂತರ ಬಹುಮಾನದ ಹಣವನ್ನು ಕ್ಲೈಮ್ ಮಾಡಬಹುದು ಎಂದು ಹೇಳುವ ಮೂಲಕ ಗ್ರಾಹಕರ ಬಳಿ ಹಣವನ್ನು ವಂಚಿಸುತ್ತಿದ್ರು ಎಂದು ವಿವರಿಸಿದರು. ಇದನ್ನೂ ಓದಿ:  ಫೋನ್‌ನಲ್ಲಿ ಮಾತನಾಡುವಾಗ ಬಾಂಬ್ ಹಾಕುತ್ತಿದ್ದಾರೆ ಎಂದು ಬಂಕರ್‌ಗೆ ಓಡಿ ಹೋದ: ಪೋಷಕರ ಅಳಲು

    ವಿಚಾರಣೆಯ ವೇಳೆ ಆರೋಪಿಗಳು ಹಲವಾರು ರಾಜ್ಯಗಳಲ್ಲಿ 100 ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ದಾಳಿ ವೇಳೆ ಆರೋಪಿಗಳ ನಕಲಿ ಸಿಮ್ ಕಾರ್ಡ್, ಸಂಪರ್ಕಗಳ ಪಟ್ಟಿಯನ್ನು ಹೊಂದಿರುವ ಪೆನ್ ಡ್ರೈವ್ ಮತ್ತು ನಾಲ್ಕು ಸೆಲ್ ಫೋನ್‍ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

  • ಯುವತಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್- ಮತಾಂತರಕ್ಕೆ ಒಪ್ಪದ್ದಕ್ಕೆ ಕೊಲೆ, ಲವ್ ಜಿಹಾದ್ ಎಂದ ಪೋಷಕರು

    ಯುವತಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್- ಮತಾಂತರಕ್ಕೆ ಒಪ್ಪದ್ದಕ್ಕೆ ಕೊಲೆ, ಲವ್ ಜಿಹಾದ್ ಎಂದ ಪೋಷಕರು

    – ವಿವಾಹವಾಗಿ, ಮತಾಂತರವಾಗುವಂತೆ ಒತ್ತಡ
    – ಯುವತಿ ಒಪ್ಪದ್ದಕ್ಕೆ ಅಪಹರಣಕ್ಕೆ ಯತ್ನ, ತಪ್ಪಿಸಿಕೊಂಡಿದ್ದಕ್ಕೆ ಗುಂಡೇಟು

    ಚಂಡೀಗಢ: 21 ವರ್ಷದ ಯುವತಿ ಪರೀಕ್ಷೆ ಬರೆದು ಹೊರಗೆ ಬರುತ್ತಿದ್ದಂತೆ ಏಕಾಏಕಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಪ್ರಕರಣ ಇದೀಗ ದೇಶಾದ್ಯಂತ ತಲ್ಲಣ ಸೃಷ್ಟಿಸಿದ್ದು, ಇದು ಲವ್ ಜಿಹಾದ್ ಎಂದು ಯುವತಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

    ಹರಿಯಾಣದ ಫರಿದಾಬಾದ್ ನಲ್ಲಿ ಘಟನೆ ನಡೆದಿದ್ದು, ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಪರೀಕ್ಷೆ ಮುಗಿಸಿ ಕಾಲೇಜಿನಿಂದ ಹೊರಗೆ ಬರುತ್ತಿದ್ದಂತೆ ದುರುಳರು ಆಕೆಯ ಮೇಲೆ ದಾಳಿ ನಡೆಸಿದ್ದಾರೆ. ಆರಂಭದಲ್ಲಿ ಅಪಹರಿಸಲು ಮುಂದಾಗಿದ್ದು, ಈ ವೇಳೆ ಯುವತಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಗ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಇದೀಗ ಟ್ವಿಸ್ಟ್ ಪಡೆದುಕೊಂಡಿದೆ. ಮತಾಂತರಗೊಂಡು ವಿವಾಹವಾಗುವಂತೆ ಆರೋಪಿ ಬಲವಂತ ಮಾಡಿ, ಬೆದರಿಕೆ ಹಾಕಿದ್ದ. ಇದು ಲವ್ ಜಿಹಾದ್ ಎಂದು ಯುವತಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಪರೀಕ್ಷೆ ಮುಗಿಸಿ ಹೊರಬರುತ್ತಿದ್ದಂತೆಯೇ ಗುಂಡಿಕ್ಕಿ ಯುವತಿಯ ಕೊಲೆ

    ಸೋಮವಾರ ಮಧ್ಯಾಹ್ನ ಘಟನೆ ನಡೆದಿದ್ದು, ಯುವತಿ ನಿಖಿತಾ ತೋಮರ್ ಬಿ.ಕಾಂ ಅಂತಿಮ ವರ್ಷದ ಪರೀಕ್ಷೆ ಬರೆದು ಕಾಲೇಜಿನಿಂದ ಹೊರಗೆ ಬರುತ್ತಿದ್ದಂತೆ ಆರೋಪಿಗಳು ದಾಳಿ ಮಾಡಿದ್ದಾರೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಘಟನೆ ನಡೆಯುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಗಾಯಗಳಾಗಿದ್ದರಿಂದ ಸಾವನ್ನಪ್ಪಿದ್ದಾಳೆ ಎಂದು ಬಲ್ಲಬ್‍ಘರ್ ಎಸಿಪಿ ಜೈವೀರ್ ಸಿಂಗ್ ರಥಿ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ತೌಸಿಫ್ ಹಾಗೂ ಆತನ ಸಹಚರನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

    ಘಟನೆ ಕುರಿತು ಯುವತಿಯ ಕುಟುಂಬಸ್ಥರು ಮೌನ ಮುರಿದಿದ್ದು, ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು, ತನ್ನ ಧರ್ಮಕ್ಕೆ ಮತಾಂತರವಾಗುವಂತೆ ಮೂರು ವರ್ಷದಿಂದ ಯುವತಿಗೆ ಬಲವಂತ ಮಾಡಿ, ಒತ್ತಡ ಹೇರಿದ್ದ. ಯುವತಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವುದನ್ನು ನಿರಾಕರಿಸಿದ್ದಕ್ಕೆ ಆರೋಪಿ ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ತಪ್ಪಿಸಿಕೊಂಡಿದ್ದು, ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಆರೋಪಿಗಳು ಕಾರಿನಲ್ಲಿ ಆಗಮಿಸಿದ್ದು, ಯುವತಿಯನ್ನು ಸಹ ಕಾರಿನಲ್ಲಿ ಕೂರುವಂತೆ ಬಲವಂತ ಮಾಡಿದ್ದಾರೆ. ಆದರೆ ಆಕೆ ನಿರಾಕರಿಸಿದ್ದಾಳೆ. ಈ ವೇಳೆ ಗುಂಡು ಹಾರಿಸಿದ್ದಾರೆ. ಅಲ್ಲದೆ ನಾನು ಈ ಕುರಿತು 2018 ರಲ್ಲೇ ಆರೋಪಿ ತೌಸಿಫ್ ವಿರುದ್ಧ ಕಿರುಕುಳದ ದೂರು ನೀಡಿದ್ದೆ ಎಂದು ಯುವತಿಯ ತಂದೆ ಹೇಳಿದ್ದಾರೆ.

    ಈ ಕುರಿತು ಸ್ವತಃ ನಿಖಿತಾ ತಂದೆ ಬಳಿ ಹೇಳಿದ್ದು, ಆರೋಪಿ ನನ್ನನ್ನು ಅಪಹರಿಸಲು ಬಂದಿದ್ದ ಎಂದು ತಿಳಿಸಿರುವುದಾಗಿ ಅವರ ತಂದೆ ಹೇಳಿದ್ದಾರೆ. ನಾನು ದೂರು ನೀಡಿದ್ದಕ್ಕೆ ತೌಸಿಫ್ ನನ್ನ ಮಗಳ ಮೇಲೆ ಒತ್ತಡ ಹೇರಿದ್ದ. ಅಲ್ಲದೆ ದೂರನ್ನು ವಾಪಸ್ ಪಡೆಯುವಂತೆ ಕುಟುಂಬದ ಮೇಲೆ ತುಂಬಾ ಒತ್ತಡ ಹೇರಿದ್ದ, ಹೀಗಾಗಿ ದೂರು ವಾಪಸ್ ಪಡೆಯಲಾಗಿತ್ತು ಎಂದು ತಿಳಿಸಿದ್ದಾರೆ.

    ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ನಿಖಿತಾ ಆರೋಪಿಯ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಹಾಗೂ ಕರೆಗಳನ್ನು ಸ್ವೀಕರಿಸದ್ದಕ್ಕೆ ತೌಸಿಫ್ ತುಂಬಾ ಸಿಟ್ಟಿಗೆದ್ದಿದ್ದ. ಬಳಿಕ ನಿಖಿತಾ ಪರೀಕ್ಷೆ ಬರೆಯಲು ಕಾಲೇಜಿಗೆ ಆಗಮಿಸುತ್ತಾಳೆ ಎಂಬುದನ್ನು ಅರಿತಿದ್ದ ತೌಸಿಫ್, ಕಾರ್ ತೆಗೆದುಕೊಂಡು ಬಂದು ಸ್ನೇಹಿತರೊಂದಿಗೆ ಕಾಲೇಜ್ ಹೊರಗೆ ನಿಂತಿದ್ದ. ಬಳಿಕ ದಾಳಿ ಮಾಡಿದ್ದಾನೆ.

    ಪ್ರಕರಣವನ್ನು ಪೊಲೀಸರು ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಪ್ರಕರಣವನ್ನು ಬಿಜೆಪಿ ವಕ್ತಾರ ರಮಣ್ ಮಲಿಕ್ ಖಂಡಿಸಿದ್ದು, ಇದು ಜಿಹಾದಿ ರೀತಿಯ ಚಟುವಟಿಕೆಯಾಗಿದೆ. ಪೊಲೀಸರು ಎಲ್ಲ ಸಂದರ್ಭದಲ್ಲೂ, ಎಲ್ಲ ಕಡೆಯೂ ಇರಲು ಸಾಧ್ಯವಿಲ್ಲ ಎಂದಿದ್ದಾರೆ. ಅಗರ್ವಾಲ್ ಕಾಲೇಜು ಬಳಿ, ಪ್ರಕರಣ ನಡೆದ ಸ್ಥಳದಲ್ಲಿ ನಿಖಿತಾ ಸ್ನೇಹಿತರು ಹಾಗೂ ಇತರರು ಪ್ರತಿಭಟನೆ ನಡೆಸುತ್ತಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದರಿಂದಾಗಿ ಹೈವೇ ಸಂಪೂರ್ಣ ಬಂದ್ ಆಗಿದ್ದು, ಪಲ್ಲಾಭ್‍ಘರ್-ಸಿಹ್ನಾ ರಸ್ತೆ ಬಂದ್ ಆಗಿದೆ. ಸಾಕಷ್ಟು ಟ್ರಾಫಿಕ್ ಜಾಮ್ ಸಂಭವಿಸಿದೆ.

  • ಪರೀಕ್ಷೆ ಮುಗಿಸಿ ಹೊರಬರುತ್ತಿದ್ದಂತೆಯೇ ಗುಂಡಿಕ್ಕಿ ಯುವತಿಯ ಕೊಲೆ

    ಪರೀಕ್ಷೆ ಮುಗಿಸಿ ಹೊರಬರುತ್ತಿದ್ದಂತೆಯೇ ಗುಂಡಿಕ್ಕಿ ಯುವತಿಯ ಕೊಲೆ

    – ಬಲವಂತವಾಗಿ ಕಾರೊಳಗೆ ದೂಡಿ ಅಪಹರಣಕ್ಕೆ ಯತ್ನ

    ಚಂಡೀಗಢ: ಕಾಲೇಜಿನ ಹೊರಗಡೆಯೇ 21 ವರ್ಷದ ಯುವತಿಯೊಬ್ಬಳನ್ನು ಗುಂಡಿಕ್ಕಿ ಕೊಲೆ ಮಾಡಿದ ಭಯಾನಕ  ಘಟನೆ ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ನಡೆದಿದ್ದು, ಯುವತಿಯನ್ನು ನಿಖಿತಾ ಎಂದು ಗುರುತಿಸಲಾಗಿದೆ. ಪರೀಕ್ಷೆ ಬರೆದು ಕಾಲೇಜಿನಿಂದ ಹೊರಬರುತ್ತಿದ್ದಂತೆಯೇ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಯುವತಿಯ ಕೊಲೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ.

    ಯುವತಿಯ ಕಾಲೇಜಿನ ಹೊರಗಡೆ ವಾಹನದಲ್ಲಿ ಬಂದಿದ್ದ ಆರೋಪಿ ಆಕೆಯನ್ನು ಬಲವಂತಾಗಿ ಕಾರೊಳಗೆ ಹಾಕಿ ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆರೋಪಿಗೆ ಮತ್ತೊಬ್ಬ ಸಾಥ್ ನೀಡಿದ್ದು, ಯುವತಿ ಮೇಲೆ ಗುಂಡು ಹಾರಿಸಿರುವುದಾಗಿ ಬಲ್ಲಬ್ಗರ್ ಎಸಿಪಿ ಜೈವೀರ್ ಸಿಂಗ್ ರಾತಿ ತಿಳಿಸಿದ್ದಾರೆ.

    ಆರೋಪಿಗಳು ಯುವತಿ ಮೇಲೆ ಗುಂಡು ಹಾರಿಸಿ ವಾಹನ ಹತ್ತಿ ಪರಾರಿಯಾಗಿದ್ದಾರೆ. ಇತ್ತ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದರಿಂದ ಯುವತಿ ಮೃತಪಟ್ಟಿದ್ದಾಳೆ ಎಂದು ಎಸಿಪಿ ವಿವರಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಇಂದು ಬಂಧಿಸಲಾಗಿದೆ. ಬಂಧಿತ ಮಿವಾತ್ ಸಿವಾಸಿಯಾಗಿದ್ದಾನೆ. ಯುವತಿ ಹಾಗೂ ಓರ್ವ ಆರೋಪಿ ಪರಿಚಯಸ್ಥರು ಎಂಬುದಾಗಿ ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂಬುದಾಗಿ ಎಸಿಪಿ ಹೇಳಿದ್ದಾರೆ.

  • ಹರ್ಯಾಣದಲ್ಲಿದೆ ಅದೃಷ್ಟದ ಕ್ಷೇತ್ರ – ಈ ಕ್ಷೇತ್ರದಲ್ಲಿ ಗೆದ್ದ ಪಕ್ಷಕ್ಕೆ ಗದ್ದುಗೆ

    ಹರ್ಯಾಣದಲ್ಲಿದೆ ಅದೃಷ್ಟದ ಕ್ಷೇತ್ರ – ಈ ಕ್ಷೇತ್ರದಲ್ಲಿ ಗೆದ್ದ ಪಕ್ಷಕ್ಕೆ ಗದ್ದುಗೆ

    ಲ್ಲ ಕ್ಷೇತ್ರಗಳಲ್ಲಿ ಒಂದು ಅದೃಷ್ಟದ ಕ್ಷೇತ್ರ ಅಂತ ಇರುತ್ತದೆ. ಅದೇ ರೀತಿಯಾಗಿ ಲೋಕಸಭಾ ಚುನಾವಣೆಯಲ್ಲೂ ಒಂದು ಅದೃಷ್ಟದ ಕ್ಷೇತ್ರ ಇದೆ. ಈ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೋ ಆ ಪಕ್ಷವೇ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ವಿಶೇಷ.

    ಹರ್ಯಾಣ ರಾಜ್ಯದಲ್ಲಿ ಕೈಗಾರಿಕೆಗಳು ಹೆಚ್ಚಾಗಿರುವ ಫರಿದಾಬಾದ್ ಕ್ಷೇತ್ರ ತನ್ನ ವಿಶೇಷತೆಯಿಂದಲೇ ಇಡೀ ದೇಶದಲ್ಲಿ ಗುರುತಿಸಿಕೊಂಡಿದೆ. 1951 ರಿಂದ 1976ರವರೆಗೆ ಇದು ಲೋಕಸಭಾ ಕ್ಷೇತ್ರವಾಗಿರಲಿಲ್ಲ. 1977 ರಲ್ಲಿ ಲೋಕಸಭಾ ಕ್ಷೇತ್ರವಾದ ಬಳಿಕ ನಡೆದ 11 ಚುನಾವಣೆಯಲ್ಲಿ ಇಲ್ಲಿ ಗೆದ್ದ ಪಕ್ಷವೇ ಕೇಂದ್ರದಲ್ಲಿ ಅಧಿಕಾರ ಹಿಡಿದು ಅಚ್ಚರಿ ಮೂಡಿಸಿದೆ.

    ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ ನಂತರ ನಡೆದ ಚುನಾವಣೆಯನ್ನು ಜನತಾ ಪಕ್ಷ ಗೆದ್ದುಕೊಂಡಿದೆ. ಆದರೆ 1980 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದ ಜನತೆ ಕಾಂಗ್ರೆಸ್ ಕೈ ಹಿಡಿದಿದ್ದಾರೆ. 1980 ರಿಂದ 1991 ರವರೆಗಿನ ಸಮಯದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. 1980, 1984, 1989, 1991ರ ನಾಲ್ಕು ಚುನಾವಣೆಯಲ್ಲೂ ಕಾಂಗ್ರೆಸ್ ಜಯಗಳಿಸಿತ್ತು.

    1996, 1998, 1999 ರಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರ ರಚಿಸಿತ್ತು. ಈ ಸಂದರ್ಭದಲ್ಲೂ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದರು. 2004 ಮತ್ತು 2009 ರಲ್ಲಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದರೆ 2014 ರಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣ ಪಾಲ್ ಗುರ್ಜರ್ ಜಯಗಳಿಸಿದ್ದರು.

     

  • ಟಾಟಾ ಸ್ಟೀಲ್ಸ್ ಮ್ಯಾನೇಜರ್‌ನನ್ನು ಗುಂಡಿಕ್ಕಿ ಕೊಂದ ಮಾಜಿ ನೌಕರ

    ಟಾಟಾ ಸ್ಟೀಲ್ಸ್ ಮ್ಯಾನೇಜರ್‌ನನ್ನು ಗುಂಡಿಕ್ಕಿ ಕೊಂದ ಮಾಜಿ ನೌಕರ

    ಚಂಡೀಗಡ್: ಟಾಟಾ ಸ್ಟೀಲ್ ಮ್ಯಾನೇಜರ್ ಒಬ್ಬರನ್ನು ಅದೇ ಕಂಪನಿಯ ಮಾಜಿ ನೌಕರ ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹರಿಯಾಣದ ಫರಿದಾಬಾದ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಅರಿಂದಾಲ್ ಪಾಲ್ (40) ಮೃತ ದುರ್ದೈವಿ. ಶುಕ್ರವಾರ ಮಧ್ಯಾಹ್ನ ಫರಿದಾಬಾದಿನ ಹಾರ್ಡ್ ವೇರ್ ರಸ್ತೆಯಲ್ಲಿರುವ ಟಾಟಾ ಸ್ಟೀಲ್ ತಯಾರಿಕಾ ಘಟಕದಲ್ಲಿ, ಎಂದಿನಂತೆ ಮ್ಯಾನೇಜರ್ ಅರಿಂದಾಲ್ ತನ್ನ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಕಚೇರಿಗೆ ನುಗ್ಗಿದ ವ್ಯಕ್ತಿಯೊಬ್ಬ ಏಕಾಏಕಿ ಅವರ ಮೇಲೆ 4-5 ಬಾರಿ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದನು.

    ರಕ್ತದ ಮಡುವಿನಲ್ಲಿ ಬಿದ್ದಿದ್ದ ಪಾಲ್ ರನ್ನು ಕಚೇರಿಯ ಸಿಬ್ಬಂದಿ ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಅವರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದರು. ಆಸ್ಪತ್ರೆಯಿಂದ ಮ್ಯಾನೇಜರ್ ಹತ್ಯೆ ಮಾಡಿರುವ ವಿಷಯ ತಿಳಿಯುತ್ತಿದ್ದಂತೆ, ನಾನು ಆಸ್ಪತ್ರೆಗೆ ಕಡೆ ಹೊರಟೆ, ಆದರೆ ನಾನು ತಲುಪುವಷ್ಟರಲ್ಲಿ ಅರಿಂದಾಲ್ ಪಾಲ್ ಮೃತಪಟ್ಟಿದ್ದರೆಂದು ಮುಜೆಶರ್ ಪೊಲೀಸ್ ಠಾಣಾ ಅಧಿಕಾರಿ ಅಶೋಕ್ ಕುಮಾರ್ ಹೇಳಿದ್ದಾರೆ.

    ಮ್ಯಾನೇಜರ್ ಪಾಲ್‍ಗೆ ಗುಂಡಿನ ದಾಳಿ ನಡೆಸಿದ್ದು, ಅದೇ ಸಂಸ್ಥೆಯ ಮಾಜಿ ನೌಕರ 32 ವರ್ಷದ ವಿಶ್ವಾಸ್ ಪಾಂಡೆಯಾಗಿದ್ದಾನೆ. ಆರೋಪಿ ಪಾಂಡೆ ಟಾಟಾ ಕಂಪನಿಯಲ್ಲಿ ಕಳೆದ 4 ವರ್ಷಗಳಿಂದ (2015-2018) ಕೆಲಸ ನಿರ್ವಹಿಸಿತ್ತಿದ್ದ. ಅಲ್ಲದೇ ಕಳೆದ ಆಗಸ್ಟ್ ತಿಂಗಳಿನಲ್ಲಿ ಆರೋಪಿಯನ್ನು ಕೆಲಸದಿಂದ ಹೊರಹಾಕಲಾಗಿತ್ತು. ಘಟನೆ ಸಂಬಂಧ ಆರೋಪಿ ವಿಶ್ವಾಸ್ ಪಾಂಡೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಪಾಂಡೆಗಾಗಿ ತೀವ್ರ ಶೋಧ ನಡೆಸುತ್ತಿದ್ದೇವೆ. ಸದ್ಯ ಪಾಲ್ ರವರ ಮೃತ ದೇಹವನ್ನ ಫರಿದಾಬಾದ್‍ನ ಬಾದ್‍ಷಾ ಖಾನ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಭಾನುವಾರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಅಶೋಕ್ ತಿಳಿಸಿದ್ದಾರೆ.

    ಮ್ಯಾನೇಜರ್ ಅರಿಂದಾಲ್ ಪಾಲ್ ಹತ್ಯೆಯ ಕುರಿತು ಟಾಟಾ ಸ್ಟೀಲ್ಸ್ ಪ್ರೋಸೆಸಿಂಗ್ ಮತ್ತು ಡಿಸ್ಟ್ರಿಬ್ಯೂಶನ್ ಕಂಪನಿ ಸಂತಾಪ ಸೂಚಿಸಿದೆ. ಪಾಲ್ ಅವರು ಹೆಂಡತಿ, ಮಗಳು ಮತ್ತು ತಂದೆ-ತಾಯಿಯನ್ನ ಅಗಲಿದ್ದಾರೆ. ಮೃತ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರ ನೀಡಲಿದೆ ಎಂದು ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews