Tag: ಫಫ್‌ ಡುಪ್ಲೆಸಿ

  • ಚೆನ್ನೈ ಪ್ಲೇ-ಆಫ್‌ ಎಂಟ್ರಿಗೆ ಬೇಕು 201 ರನ್‌

    ಚೆನ್ನೈ ಪ್ಲೇ-ಆಫ್‌ ಎಂಟ್ರಿಗೆ ಬೇಕು 201 ರನ್‌

    – ಕೊಹ್ಲಿ 700 ರನ್‌; ಡುಪ್ಲೆಸಿ ಅರ್ಧಶತಕ – ಸಿಎಸ್‌ಕೆಗೆ 219 ರನ್‌ ಗುರಿ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್‌ ಕಿಂಗ್‌ ವಿರುದ್ಧದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಬ್ಯಾಟರ್‌ಗಳು ಅಬ್ಬರಿಸಿದರು. ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ಬೆಂಗಳೂರು ತಂಡ ಚೆನ್ನೈಗೆ 219 ರನ್‌ಗಳ ಗುರಿ ನೀಡಿದೆ. ಚೆನ್ನೈ ಪ್ಲೇ-ಆಫ್‌ ಪ್ರವೇಶಿಸಲು 201 ರನ್‌ ಅಷ್ಟೇ ಬೇಕಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗೆ 5 ವಿಕೆಟ್‌ ನಷ್ಟಕ್ಕೆ 218 ರನ್‌ ಗಳಿಸಿತು. ಉತ್ತಮ ಶುಭಾರಂಭ ನೀಡಿದ ಆರ್‌ಸಿಬಿ ಬ್ಯಾಟರ್‌ಗಳು ಚೆನ್ನೈ ಬೌಲರ್‌ಗಳನ್ನು ದಂಡಿಸಿದರು.

    3 ಓವರ್‌ಗೆ 31 ರನ್‌ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಕೆಲಹೊತ್ತಿನಲ್ಲಿ ಮತ್ತೆ ಪಂದ್ಯ ಪುನಾರಂಭವಾಯಿತು. 6.4 ಓವರ್‌ನಲ್ಲಿ ಕೊಹ್ಲಿ ಮತ್ತು ಡು ಪ್ಲೆಸಿಸ್‌ 50 ರನ್‌ಗಳ ಜೊತೆಯಾಟವಾಡಿದರು. ಹೊಡಿಬಡಿ ಆಟವಾಡುತ್ತಿದ್ದ ಕೊಹ್ಲಿ ಅರ್ಧಶತಕ ವಂಚಿತರಾಗಿ (47 ರನ್‌, 29 ಬಾಲ್‌, 3 ಫೋರ್‌, 4 ಸಿಕ್ಸರ್‌) ಔಟಾದರು.

    ಇತ್ತ ಜವಾಬ್ದಾರಿಯುತ ಆಟವಾಡಿದ ಡು ಪ್ಲೆಸಿಸ್‌ ಅರ್ಧಶತಕ (54 ರನ್‌, 39 ಬಾಲ್‌, 3 ಫೋರ್‌, 3 ಸಿಕ್ಸರ್‌) ಬಾರಿಸಿದರು. ಆದರೆ ವಿವಾದಾತ್ಮಕ ರನೌಟ್‌ ತೀರ್ಪಿಗೆ ಔಟ್‌ ಆಗಿ ಪೆವಿಲಿಯನ್‌ ಸೇರಿದರು.

    ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್‌ ಮಾಡಿದ ರಜತ್‌ ಪಾಟೀದಾರ್‌ 41 ರನ್‌ ಸಿಡಿಸಿ (23 ಬಾಲ್‌, 2 ಫೋರ್‌, 4 ಸಿಕ್ಸರ್‌) ಸವಾಲಿನ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು. ಕ್ರೀಸ್‌ಗೆ ಬಂದ ಯಾವೊಬ್ಬ ಬ್ಯಾಟರ್‌ ಕೂಡ ನಿರಾಸೆ ಮೂಡಿಸಲಿಲ್ಲ. ಕ್ಯಾಮರೂನ್‌ ಗ್ರೀನ್‌ (38), ದಿನೇಶ್‌ ಕಾರ್ತಿಕ್‌ (14) ರನ್‌ ಗಳಿಸಿದರು.

    ಫಾರ್ಮ್‌ ಕಳೆದುಕೊಂಡು ನಿರಾಸೆ ಮೂಡಿಸಿದ್ದ ಮ್ಯಾಕ್ಸ್‌ವೆಲ್‌ ಇಂದಿನ ಪಂದ್ಯದಲ್ಲಿ ಸ್ವಲ್ಪ ಹೊತ್ತು ಆಡಿದರೂ ಗಮನ ಸೆಳೆದರು. ಕೇವಲ 5 ಬಾಲ್‌ಗಳಿಗೆ 2 ಫೋರ್‌ ಮತ್ತು 1 ಸಿಕ್ಸ್‌ನೊಂದಿಗೆ 16 ರನ್‌ ಸಿಡಿಸಿದರು. ದೊಡ್ಡ ಹೊಡೆತಕ್ಕೆ ಮುಂದಾಗಿ ಧೋನಿಗೆ ಕ್ಯಾಚ್‌ ನೀಡಿದರು. ನೋಬಾಲ್‌ ಮತ್ತು ವೈಡ್‌ ಸೇರಿ ಆರ್‌ಸಿಬಿಗೆ 8 ರನ್‌ ಹೆಚ್ಚುವರಿಯಾಗಿ ಬಂತು.

    ಚೆನ್ನೈ ಪರ ಶಾರ್ದೂಲ್ ಠಾಕೂರ್ 2 ಹಾಗೂ ತುಷಾರ್ ದೇಶಪಾಂಡೆ, ಮಿಚೆಲ್ ಸ್ಯಾಂಟ್ನರ್ ತಲಾ 1 ವಿಕೆಟ್‌ ಕಿತ್ತರು.

  • IPL 2022: ಡುಪ್ಲೆಸಿ ಕೆಚ್ಚೆದೆ ಆಟಕ್ಕೆ ಮಣಿದ ಲಕ್ನೋ ಸೂಪರ್‌ ಜೈಂಟ್ಸ್‌

    IPL 2022: ಡುಪ್ಲೆಸಿ ಕೆಚ್ಚೆದೆ ಆಟಕ್ಕೆ ಮಣಿದ ಲಕ್ನೋ ಸೂಪರ್‌ ಜೈಂಟ್ಸ್‌

    ಮುಂಬೈ: ಇಲ್ಲಿನ ಡಿವೈ ಪಾಟೀಲ್‌ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಇಂದಿನ (ಮಂಗಳವಾರ) ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 18 ರನ್‌ಗಳಿಂದ ಜಯ ಸಾಧಿಸಿದೆ.

    ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಡುಪ್ಲೆಸಿ ಬಳಗಕ್ಕೆ ಆರಂಭದಲ್ಲಿ ಆಘಾತ ಎದುರಾಗಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ಗಳು ಹೀನಾಯ ಪ್ರದರ್ಶನ ತೋರಿ ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್‌ ಒಪ್ಪಿಸಿ ಹೊರನಡೆದರು. ವಿರಾಟ್‌ ಕೊಹ್ಲಿ ಶೂನ್ಯಕ್ಕೆ ಔಟ್‌ ಆಗುವ ಮೂಲಕ ನಿರಾಸೆ ಮೂಡಿಸಿದರು.

    ಇತ್ತ ವಿಕೆಟ್‌ಗಳು ಉರುಳಿದರೂ ಕೆಚ್ಚೆದೆಯ ಆಟವಾಡಿದ ನಾಯಕ ಡುಪ್ಲೆಸಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಆಸರೆಯಾದರು. ಇತ್ತ ವಿಕೆಟ್‌ಗಳು ಉರುಳುತ್ತಾ ಸಾಗಿದರೂ ಕೆಚ್ಚೆದೆಯ ಆಟವಾಡಿದ ನಾಯಕ ಫಫ್‌ ಡುಪ್ಲೆಸಿ 96 ( 64 ಬಾಲ್‌, 11 ಫೋರ್‌, 2 ಸಿಕ್ಸ್‌) ರನ್‌ ಗಳಿಸಿ ಕೇವಲ 4 ರನ್‌ ಅಂತರದಿಂದ ಶತಕ ವಂಚಿತರಾದರು. ಪಂದ್ಯವನ್ನು ಗೆಲುವಿನತ್ತ ಸಾಗಿಸಲು ಡುಪ್ಲೆಸಿಗೆ ಶಹಬಾಜ್‌ ಅಹ್ಮದ್‌ ಜೊತೆಯಾಗಿ ನಿಂತರು. ಶಹಬಾಜ್‌ ಅಹ್ಮದ್‌ (26), ಗ್ಲೆನ್‌ ಮ್ಯಾಕ್ಸ್‌ವೆಲ್‌ (23), ದಿನೇಶ್‌ ಕಾರ್ತಿಕ್‌ (13), ಸುಯಾಶ್‌ ಪ್ರಭುದೇಸಾಯಿ (10), ಅನುಜ್‌ ರಾವತ್‌ (4) ರನ್‌ ಗಳಿಸಿದರು.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಇದರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್‌ಗೆ 182 ರನ್‌ಗಳ ಗೆಲುವಿನ ಗುರಿ ನೀಡಿತು.

    ಆರ್‌ಸಿಬಿ ಗುರಿ ಬೆನ್ನಟ್ಟಿದ ಲಕ್ನೋ ತಂಡ ಆರಂಭದಲ್ಲೇ ಎಡವಿತು. ತಂಡದ ಮೊತ್ತ 17 ಇರುವಾಗಲೇ ಜೋಶ್ ಹ್ಯಾಜಲ್ ವುಡ್ ಬೌಲಿಂಗ್‌ನಲ್ಲಿ ಕ್ವಿಂಟನ್ ಡಿಕಾಕ್ ಕೇವಲ 3 ರನ್‌ ಗಳಿಸಿ ಮ್ಯಾಕ್ಸ್‌ವೆಲ್‌ಗೆ ಕ್ಯಾಚ್‌ ಒಪ್ಪಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಹ್ಯಾಜಲ್‌ ವುಡ್‌ ಬೌಲಿಂಗಲ್ಲೇ ಮನಿಶ್‌ ಪಾಂಡೆ ಕೇವಲ 6 ರನ್‌ ಗಳಿಸಿ ಪಟೇಲ್‌ಗೆ ಕ್ಯಾಚ್‌ ನೀಡಿ ಪೆವಿಲಿಯನ್‌ನತ್ತ ಸಾಗಿದರು.

    ಆರಂಭದಲ್ಲಿ ಭರವಸೆಯಿಂದ ಆಟವಾಡಿದ ನಾಯಕ ಕೆ.ಎಲ್.ರಾಹುಲ್‌ 30 ರನ್‌ ಗಳಿಸಿ ಹರ್ಷಲ್‌ ಪಟೇಲ್‌ ಬೌಲಿಂಗ್‌ನಲ್ಲಿ ದಿನೇಶ್‌ ಕಾರ್ತಿಕ್‌ ಕೈಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಇದರ ಮಧ್ಯೆಯೂ ಧೃತಿಗೆಡದೇ ಉತ್ತಮ ಆಟವಾಡಿದ ಕೃಣಾಲ್‌ ಪಾಂಡ್ಯ ಅರ್ಧ ಶತಕ ವಂಚಿತರಾಗಿ ಔಟ್‌ ಆದರು. 28 ಎಸೆತಕ್ಕೆ 42 ರನ್‌ ಸಿಡಿಸಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಬೌಲಿಂಗ್‌ನಲ್ಲಿ ಶಹಬಾಜ್‌ ಅಹ್ಮದ್‌ ಅವರಿಗೆ ಕ್ಯಾಚ್‌ ಒಪ್ಪಿಸಿ ನಡೆದರು. ಮಾರ್ಕಸ್‌ ಸ್ಟೋಯಿನಿಸ್‌ 24 ರನ್‌ ಸಿಡಿಸಿ ಔಟ್‌ ಆದರು. ದೀಪಕ್‌ ಹೂಡಾ (13) ಗಳಿಸಿದರು. ಆ ಮೂಲಕ ಲಕ್ನೋ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 163 ರನ್‌ ಗಳಿಸಲಷ್ಟೇ ಶಕ್ತವಾಯಿತು.

    ಆರ್‌ಸಿಬಿ ವೇಗಿ ಜೋಶ್‌ ಹ್ಯಾಜಲ್‌ವುಡ್‌ ತಮ್ಮ ಮಿಂಚಿನ ಬೌಲಿಂಗ್‌ ಮೂಲಕ ಲಕ್ನೋ ತಂಡವನ್ನು ಕಟ್ಟಿಹಾಕಿದರು. ಪಂದ್ಯದಲ್ಲಿ ಕೇವಲ 25 ನೀಡಿ ಮೂಲಕ 4 ವಿಕೆಟ್‌ಗಳನ್ನು ಗಳಿಸುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಡುಪ್ಲೆಸಿಯಷ್ಟೇ ಪ್ರಮುಖ ಪಾತ್ರ ವಹಿಸಿದರು. ಹರ್ಷಲ್‌ ಪಟೇಲ್‌ 2 ವಿಕೆಟ್‌ ಕಬಳಿಸಿದರೆ, ಮ್ಯಾಕ್ಸ್‌ವೆಲ್‌ 1 ವಿಕೆಟ್‌ ಪಡೆದರು.