Tag: ಫನಿ ಚಂಡಮಾರುತ

  • ‘ಫನಿ’ ಎಫೆಕ್ಟ್: ಬೆಂಗ್ಳೂರು, ಮೈಸೂರಿನಿಂದ ಹೊರಡಬೇಕಿದ್ದ ರೈಲು ಸಂಚಾರ ರದ್ದು

    ‘ಫನಿ’ ಎಫೆಕ್ಟ್: ಬೆಂಗ್ಳೂರು, ಮೈಸೂರಿನಿಂದ ಹೊರಡಬೇಕಿದ್ದ ರೈಲು ಸಂಚಾರ ರದ್ದು

    ಬೆಂಗಳೂರು: ದಕ್ಷಿಣ ಭಾರತ ಸೇರಿದಂತೆ ಪಶ್ಚಿಮ ಬಂಗಾಳ, ಒರಿಸ್ಸಾ, ಅಸ್ಸಾಂ ಭಾಗದಲ್ಲಿ ‘ಫನಿ’ ಚಂಡಮಾರುತದ ಪ್ರಭಾವ ಹೆಚ್ಚಾಗಿರುವ ಪರಿಣಾಮ ಬೆಂಗಳೂರು ಸೇರಿದಂತೆ ಮೈಸೂರಿನಿಂದ ಹೊರಡಬೇಕಿದ್ದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ.

    ಒರಿಸ್ಸಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಮಿಗೆ ಹೊರಡುವ ವಿವಿಧ ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೇ ವಲಯ ರದ್ದು ಮಾಡಿದ್ದು, ಗುರುವಾರ ರಾತ್ರಿ 10 ರೈಲುಗಳ ಸಂಚಾರ ರದ್ದಾಗಿದೆ. ಚಂಡಮಾರುತದ ಪ್ರಭಾವದಿಂದ ಉಂಟಾಗಬಹುದಾದ ಅಪಾಯದ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

    ಬೆಂಗಳೂರಿನಿಂದ ಹೊರಟು ಮೈಸೂರು, ಪುರಿ, ಭುವನೇಶ್ವರ ಮಾರ್ಗವಾಗಿ ಒರಿಸ್ಸಾಗೆ ಪ್ರಯಾಣ ಬೆಳೆಸಬೇಕಾಗಿದ್ದ ರೈಲುಗಳ ಸಂಚಾರ ರದ್ದಾಗಿದೆ. ಅಲ್ಲದೆ ಪುರಿ ಮತ್ತು ಭುವನೇಶ್ವರ, ಪಶ್ಚಿಮ ಬಂಗಾಳದ ಹೌರಾ ಮತ್ತು ಅಸ್ಸಾಮಿನ ಗುವಾಹಟಿ ಕಡೆಗೆ ಹೊರಡುವ ರೈಲುಗಳ ಸಂಚಾರ ಸ್ಥಗಿತವಾಗಿದೆ. ಪ್ರಮುಖವಾಗಿ ಯಶವಂತಪುರ – ಹೌರಾ ಮಾರ್ಗದ 12246, 2888, 12864 ರೈಲು, ಸಂಗೊಳ್ಳಿ ರಾಯಣ್ಣ ನಿಲ್ದಾಣ – ಭುವನೇಶ್ವರ ಮಾರ್ಗದ 18464 ರೈಲು, ಗೋವಾ – ಹೌರಾ ಮಾರ್ಗದ 18048 ಹಾಗೂ ಹೌರ – ಭುವನೇಶ್ವರ – ಬೆಂಗಳೂರು – ಮೈಸೂರು – ಗೋವಾ ಮಾರ್ಗದ ರೈಲು ಸಂಚಾರ ರದ್ದಾಗಿದೆ.

    ಫನಿ ಚಂಡಮಾರುತದಿಂದ ಉಂಟಾಗಬಹುದಾದ ಪರಿಣಾಮಗಳನ್ನು ನೋಡಿಕೊಂಡು ಮತ್ತೆ ಸಂಚಾರ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ಒಂದೊಮ್ಮೆ ಫನಿ ಚಂಡಮಾರುತ ಪ್ರಭಾವದಿಂದ ಹೆಚ್ಚಿನ ಹಾನಿ ಸಂಭವಿಸಿದರೆ ಸಂಚಾರ ಆರಂಭವಾಗುವುದು ಮತ್ತಷ್ಟು ವಿಳಂಬ ಆಗಲಿದೆ.

    ಸದ್ಯದ ಮಾಹಿತಿಯ ಅನ್ವಯ ತಾತ್ಕಾಲಿಕವಾಗಿ ಮೇ 06ರ ವರೆಗೂ ರಾಜ್ಯದಿಂದ ಹೊರಡುವ ರೈಲುಗಳ ಸಂಚಾರ ರದ್ದಾಗಿದ್ದು, ಈ ಅವಧಿಯವರೆಗೂ ಒಡಿಸ್ಸಾ ಮಾರ್ಗವಾಗಿ ರೈಲು ಸಂಚಾರ ಲಭ್ಯವಿರುವುದಿಲ್ಲ ಎಂಬ ಮಾಹಿತಿ ಲಭಿಸಿದೆ.

  • ಗಂಟೆಗೆ 200 ಕಿ.ಮೀ ವೇಗದಲ್ಲಿ ಫನಿ ಚಂಡಮಾರುತ – ಒಡಿಶಾದಲ್ಲಿ ಕಟ್ಟೆಚ್ಚರ, ಕರ್ನಾಟಕದಲ್ಲೂ ಮಳೆ

    ಗಂಟೆಗೆ 200 ಕಿ.ಮೀ ವೇಗದಲ್ಲಿ ಫನಿ ಚಂಡಮಾರುತ – ಒಡಿಶಾದಲ್ಲಿ ಕಟ್ಟೆಚ್ಚರ, ಕರ್ನಾಟಕದಲ್ಲೂ ಮಳೆ

    ಬೆಂಗಳೂರು: ಕೆಲವೇ ನಿಮಿಷಗಳಲ್ಲಿ 20 ವರ್ಷಗಳಲ್ಲೇ ಅತ್ಯಂತ ಭೀಕರ ಎನ್ನಲಾದ ಫನಿ ಚಂಡಮಾರುತ ಒಡಿಶಾ ಕರಾವಳಿ ಮೂಲಕ ಹಾದುಹೋಗಲಿದೆ. ಒಡಿಶಾದ ಕರಾವಳಿ ಜಿಲ್ಲೆಗಳಾದ ಗೋಪಾಲಪುರ, ಪುರಿ, ಚಾಂದ್‍ಬಾಲಿ ಮೂಲಕ ಸೆಕ್ಲೋನ್ ಅಪ್ಪಳಿಸಲಿದೆ.

    ಗುರುವಾರದಿಂದಲೇ ಒಡಿಶಾದಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಗಂಟೆಗೆ 170ರಿಂದ 180 ಕಿಲೋ ಮೀಟರ್ ಗರಿಷ್ಠ 200 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿಯೊಂದಿಗೆ ಮಳೆ ಬೀಳುತ್ತಿದೆ. ಒಡಿಶಾ ದಾಟಿ ಫನಿ ಪಶ್ಚಿಮ ಬಂಗಾಳ ಪ್ರವೇಶಿಸಲಿದ್ದು ಅಲ್ಲಿಯೂ ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ಭೀಕರ ಗಾಳಿ ಬೀಸಲಿದೆ. ಫನಿ ಚಂಡಮಾರುತದ ಎಫೆಕ್ಟ್ ನಿಂದ ಕರ್ನಾಟಕದ ಹಲವು ಕಡೆಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

    ಸೈಕ್ಲೋನ್ ಹಿನ್ನೆಲೆಯಲ್ಲಿ ರೈಲುಗಳ ಓಡಾಟ ಮತ್ತು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. 8 ಲಕ್ಷ ಅಧಿಕ ಮಂದಿಯನ್ನ ಒಡಿಶಾದಲ್ಲಿ ಸ್ಥಳಾಂತರ ಮಾಡಲಾಗಿದ್ದು, ನೌಕಾದಳ, ವಾಯುಸೇನೆ, ಕರಾವಳಿ ಭದ್ರತಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

    ಫನಿಯಿಂದಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಶೀತ ಗಾಳಿ ಬೀಸಲಿದ್ದು ವಾತಾವರಣದ ಉಷ್ಣಾಂಶ ತಗ್ಗಲಿದೆ. ಹೈದಾರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಿದೆ. ಆದರೆ ಚಂಡಮಾರುತದ ಪಥ ತೀವ್ರತೆ ಕ್ಷಣ ಕ್ಷಣಕ್ಕೂ ಬದಲಾಗೋದ್ರಿಂದ ಯಾವ ರೀತಿ ವಾತಾವರಣ ದಲ್ಲಿ ಏರುಪೇರಾಗಲಿದೆ ಅನ್ನೋದನ್ನು ಹೇಳಲು ಸಾಧ್ಯವಿಲ್ಲ ಎಂದು ಪ್ರಾಕೃತಿಕ ವಿಕೋಪ ನಿರ್ವಹಣಾ ಇಲಾಖೆ ತಿಳಿಸಿದೆ.

  • ‘ಫನಿ’ ಚಂಡಮಾರುತ ಏಫೆಕ್ಟ್ – ದಕ್ಷಿಣ ಕರ್ನಾಟಕಕ್ಕಿಲ್ಲ ಆತಂಕ, ಉತ್ತರದಲ್ಲಿ ವಹಿಸಿ ಎಚ್ಚರ

    ‘ಫನಿ’ ಚಂಡಮಾರುತ ಏಫೆಕ್ಟ್ – ದಕ್ಷಿಣ ಕರ್ನಾಟಕಕ್ಕಿಲ್ಲ ಆತಂಕ, ಉತ್ತರದಲ್ಲಿ ವಹಿಸಿ ಎಚ್ಚರ

    ಬೆಂಗಳೂರು: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಈಗ ಫನಿ ಚಂಡಮಾರುತ ಪ್ರಭಾವ ಹೆಚ್ಚಾಗಿದ್ದು, ಪುದುಚೇರಿ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ತೀರ ಪ್ರದೇಶಗಳಲ್ಲಿ ಭಾರೀ ಮಳೆಯ ಆತಂಕ ಸೃಷ್ಟಿಸಿದೆ. ಹಿಂದೂ ಮಹಾಸಾಗರ-ಬಂಗಾಳಕೊಲ್ಲಿಯ ಸಮನಾಂತರ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಫನಿ ಚಂಡಮಾರುತ ಈಗ ಶ್ರೀಲಂಕಾದ ಟ್ರಿಂಕೋಮಲಿಯಿಂದ 550 ಕಿ.ಮೀ. ದೂರಕ್ಕೂ ಚೆನ್ನೈನ ಆಗ್ನೇಯ ದಿಕ್ಕಿನಿಂದ 820 ಕಿ.ಮೀ. ದೂರದಲ್ಲಿ ಬರುತ್ತಿದೆ.

    ಫನಿ ಚಂಡಮಾರುತ ಆರಂಭವಾದಾಗ ಅಂದರೆ ಏಪ್ರಿಲ್ 25ರ ಆಸುಪಾಸಿನಲ್ಲಿ ಶ್ರೀಲಂಕಾದ ಅರ್ಧ ಉತ್ತರಭಾಗವನ್ನು ಆಕ್ರಮಿಸಿ, ಅಲ್ಲಿಂದ ಪುದುಚೇರಿ, ತಮಿಳುನಾಡಿನ ದಕ್ಷಿಣಭಾಗ ಸೇರಿ ಚೆನ್ನೈ ಆಂಧ್ರ ಪ್ರದೇಶದ ಮಚಿಲಿಪಟ್ಟಣದ ಮಧ್ಯೆ ಭರ್ಜರಿಯಾಗಿ ಅಪ್ಪಳಿಸುತ್ತದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಇದರಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಭಾಗ, ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆಯಾಗುತ್ತೆ ಎಂದು ಅಂದಾಜಿಸಲಾಗಿತ್ತು. ಆದರೆ ಏಪ್ರಿಲ್ 27ರ ಮಧ್ಯಭಾಗದಿಂದ ಚಂಡಮಾರುತ ದಿಕ್ಕು ಬದಲಿಸುತ್ತಿದ್ದು, ತಿರುವು ಪಡೆದು ದಕ್ಷಿಣದ ಚೆನ್ನೈನಿಂದ ಉತ್ತರದ ಕಡೆ ಅಂದರೆ ಆಂಧ್ರ ಪ್ರದೇಶದ ಮಚಲಿಪಟ್ಟಣ, ಉತ್ತರ ಕರಾವಳಿ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕಡೆ ಮುನ್ನುಗ್ತಿದೆ.

    ಸದ್ಯದ ಮಾಹಿತಿ ಅನ್ವಯ ಆಂಧ್ರ-ಒಡಿಶಾದ ಮಧ್ಯ ಕರಾವಳಿ ಭಾಗದಲ್ಲಿ ಚಂಡಮಾರುತದ ಪ್ರಭಾವ ಬೀರುವ ಅವಕಾಶ ಹೆಚ್ಚಾಗಿದ್ದು, ಚಂಡಮಾರುತ ವೇಗ ಮತ್ತಷ್ಟು ಹೆಚ್ಚಾದರೆ ಖಂಡಿತಾ ಒಡಿಶಾದಲ್ಲಿ ಹೆಚ್ಚಿನ ಅವಘದ ಸಂಭವಿಸಲಿದೆ. ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕೆ ಇಳಿದಂತೆ ಎಚ್ಚರಿಕೆ ನೀಡಲಾಗಿದೆ. ಎನ್‍ಡಿಆರ್‍ಎಫ್, ಕೋಸ್ಟ್‍ಗಾರ್ಡ್‍ಗೆ ಹೈ ಅಲರ್ಟ್‍ನಲ್ಲಿರುವಂತೆ ಸೂಚಿಸಲಾಗಿದೆ. ಒಡಿಶಾದ 28 ಜಿಲ್ಲೆಗಳ ಡಿಸಿಗಳಿಗೆ ಕಟ್ಟಪ್ಪಣೆ ಹೊರಡಿಸಲಾಗಿದೆ. ಆಂಧ್ರ-ಒಡಿಶಾದ ಕರಾವಳಿ ಜನರನ್ನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗುತ್ತಿದ್ದು, ಕೇಂದ್ರ ಗೃಹ ಸಚಿವಾಲಯ ಹೆಚ್ಚಿನ ನಿಗಾ ವಹಿಸಿದೆ.

    ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೆ ಕಡಿಮೆ ಪ್ರಮಾಣದಲ್ಲಿ ಆಗಲಿದ್ದು, ಇದಕ್ಕೆ ಪ್ರಮುಖ ಕಾರಣ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಫನಿ ಚಂಡಮಾರುತ ತನ್ನ ದಿಕ್ಕು ಬದಲಿಸಿದೆ. ಚೆನ್ನೈ ಮೇಲೆ ಮೋಡಗಳು ಆವರಿಸಿದರೆ ಬೆಂಗಳೂರು, ಮೈಸೂರು ಭಾಗದಲ್ಲಿ ತುಂತುರು ಮಳೆ ಆಗುವ ಸಾಧ್ಯತೆ ಇದೆ. ಕೇರಳದಲ್ಲೂ ಮಳೆ ಆಗುವ ಸಾಧ್ಯತೆ ಕಡಿಮೆ ಇದೆ. ಆದರೆ ಆಂಧ್ರದ ಉತ್ತರ ಭಾಗಕ್ಕೆ ಚಂಡಮಾರುತದ ಪ್ರಭಾವ ಶಿಫ್ಟ್ ಆಗುತ್ತಿರುವುವರಿಂದ ಉತ್ತರ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.