Tag: ಪ್ಲೇ ಆಫ್

  • 7 ರನ್‌ಗಳಿಗೆ 4 ವಿಕೆಟ್‌ ಪತನ – ಭರ್ಜರಿ ಜಯದೊಂದಿಗೆ ಪ್ಲೇ ಆಫ್‌ ಪ್ರವೇಶಿಸಿದ ಮುಂಬೈ

    7 ರನ್‌ಗಳಿಗೆ 4 ವಿಕೆಟ್‌ ಪತನ – ಭರ್ಜರಿ ಜಯದೊಂದಿಗೆ ಪ್ಲೇ ಆಫ್‌ ಪ್ರವೇಶಿಸಿದ ಮುಂಬೈ

    – ಪಡಿಕಲ್‌ ಅರ್ಧಶತಕ ವ್ಯರ್ಥ
    – ಬುಮ್ರಾ ಬೌಲಿಂಗ್‌ಗೆ ತತ್ತರಿಸಿದ ಆರ್‌ಸಿಬಿ

    ಅಬುಧಾಬಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ 16 ಅಂಕ ಪಡೆದ ಮುಂಬೈ ಇಂಡಿಯನ್ಸ್‌ ಪ್ಲೇ ಆಫ್‌ ಪ್ರವೇಶಿಸಿದೆ. ಈ ಮೂಲಕ ಡ್ರಿಮ್ಸ್‌ ಇಲೆವನ್‌ ಐಪಿಎಲ್‌ನಲ್ಲಿ 48 ಪಂದ್ಯದ ಬಳಿಕ ಮೊದಲ ತಂಡ ಪ್ಲೇ ಆಫ್‌ ಪ್ರವೇಶಿಸಿದಂತಾಯಿತು.

    ಗೆಲ್ಲಲು 165 ರನ್‌ಗಳ ಸವಾಲನ್ನು ಪಡೆದ ಮುಂಬೈ 19.1 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 166 ರನ್‌ ಹೊಡೆಯಿತು. ಆರಂಭಿಕ ಆಟಗಾರ ಕ್ವಿಂಟನ್‌ ಡಿ ಕಾಕ್‌ 18 ರನ್‌(19 ಎಸೆತ, 1 ಸಿಕ್ಸರ್‌) ಇಶಾನ್‌ ಕಿಶನ್‌ 25 ರನ್‌(19 ಎಸೆತ, 3 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರು. ನಂತರ ಬಂದ ಸೂರ್ಯಕುಮಾರ್‌ ಯಾದವ್‌ ಸ್ಫೋಟಕ ಬ್ಯಾಟಿಂಗ್‌ ಮಾಡಿ ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಸೂರ್ಯಕುಮಾರ್‌ ಯಾದವ್‌ ಅಜೇಯ 79 ರನ್‌ (43 ಎಸೆತ, 10 ಬೌಂಡರಿ, 3 ಸಿಕ್ಸರ್‌), ಹಾರ್ದಿಕ್‌ ಪಾಂಡ್ಯ 17 ರನ್‌ ಹೊಡೆದು ಔಟಾದರು. ಡೇಲ್‌ ಸ್ಟೇನ್‌ 43 ರನ್‌ ನೀಡಿದರೆ ಮೋರಿಸ್‌ 36 ರನ್‌ ನೀಡಿದರು.

    ದಿಢೀರ್‌ ಕುಸಿತ : ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಆರ್‌ಸಿಬಿಯ ಆರಂಭ ಉತ್ತಮವಾಗಿತ್ತು. ಫಿಲಿಪ್‌ ಮತ್ತು ಪಡಿಕಲ್‌ ಮೊದಲ ವಿಕೆಟಿಗೆ 7.5 ಓವರ್‌ಗಳಲ್ಲಿ 71 ರನ್‌ ಹೊಡೆದರು. ಫಿಲಿಪ್‌ 33 ರನ್‌(24 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದು ಸ್ಟಂಪ್‌ ಔಟಾದರು. 16.5 ಓವರ್‌ ಗಳ ಕಾಲ ಕ್ರೀಸಿನಲ್ಲಿದ್ದ ಪಡಿಕಲ್‌ 74 ರನ್‌( 45 ಎಸೆತ, 12 ಬೌಂಡರಿ, 1 ಸಿಕ್ಸರ್)‌ ಹೊಡೆದು ಔಟಾದರು.

    131 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಆರ್‌ಸಿಬಿ 7 ರನ್‌ ಗಳಿಸುವಷ್ಟರಲ್ಲಿ ಅಮೂಲ್ಯವಾದ 4 ವಿಕೆಟ್‌ ಕಳೆದುಕೊಂಡಿತು.

    ಎಬಿಡಿ, ಶಿವಂ ದುಬೆ, ಪಡಿಕಲ್‌ ಅವರನ್ನು ಬುಮ್ರಾ ಔಟ್‌ ಮಾಡಿದರೆ ಮೋರಿಸ್‌ ಅವರನ್ನು ಬೌಲ್ಟ್‌ ಪೆವಿಲಿಯನ್‌ಗೆ ಕಳುಹಿಸಿದರು. ಎಬಿಡಿ 15 ರನ್‌, ಗುರುಕೀರತ್‌ ಸಿಂಗ್‌ 10, ವಾಷಿಂಗ್ಟನ್‌ ಸುಂದರ್‌ 10 ರನ್‌ ಹೊಡೆದರು.

    4 ಓವರ್‌ನಲ್ಲಿ 1 ಮೇಡನ್‌ ಮಾಡಿ 3 ವಿಕೆಟ್‌ ಕಿತ್ತು 14 ರನ್‌ ನೀಡಿದ ಬುಮ್ರಾ ಆರ್‌ಸಿಬಿ ರನ್‌ ವೇಗಕ್ಕೆ ಕಡಿವಾಣ ಹಾಕಿದರು.

     

  • ಐಪಿಎಲ್ 2019: ಪ್ಲೇ ಆಫ್ ಪ್ರವೇಶಿಸುವ ಅವಕಾಶ ಆರ್‌ಸಿಬಿಗಿದ್ಯಾ?

    ಐಪಿಎಲ್ 2019: ಪ್ಲೇ ಆಫ್ ಪ್ರವೇಶಿಸುವ ಅವಕಾಶ ಆರ್‌ಸಿಬಿಗಿದ್ಯಾ?

    ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದ ಸೋಲಿನ ಬಳಿಕವೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ಲೇ ಆಫ್ ಪ್ರವೇಶ ಮಾಡುವ ಅವಕಾಶಗಳು ಇದೆ ಎಂದು ಆರ್ ಸಿಬಿ ಬೌಲರ್ ಯಜುವೇಂದ್ರ ಚಹಲ್ ಅಭಿಪ್ರಾಯ ಪಟ್ಟಿದ್ದಾರೆ.

    ಟೂರ್ನಿಯಲ್ಲಿ ಇದುವರೆಗೂ 8 ಪಂದ್ಯಗಳನ್ನು ಆಡಿರುವ ಆರ್ ಸಿಬಿ 1 ಪಂದ್ಯದಲ್ಲಿ ಮಾತ್ರ ಗೆಲುವು ಪಡೆದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಸದ್ಯ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನವನ್ನು ಪಡೆದಿದೆ. ಇನ್ನುಳಿದಂತೆ ಆರ್ ಸಿಬಿ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಲು ಉಳಿದಿರುವ 6 ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆಯನ್ನು ಎದುರಿಸುತ್ತಿದೆ.

    11 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಕೇವಲ 4 ಬಾರಿ 14 ಅಂಕಗಳನ್ನು ಗಳಿಸಿರುವ ತಂಡಗಳು ಪ್ಲೇ ಆಫ್ ಪ್ರವೇಶ ಮಾಡಿದೆ. ರಾಜಸ್ಥಾನ ರಾಯಲ್ಸ್ ತಂಡ 2018 ರಲ್ಲಿ ಗ್ರೂಪ್ ಹಂತದ ಹೋರಾಟದಲ್ಲಿ ಕೇವಲ 7 ಪಂದ್ಯಗಳಲ್ಲಿ ಗೆದ್ದು ಪ್ಲೇ ಆಫ್ ಪ್ರವೇಶ ಮಾಡಿತ್ತು.

    ಟೂರ್ನಿಯಲ್ಲಿ ನೀರಸ ಪ್ರದರ್ಶವನ್ನು ನೀಡಿರುವ ಆರ್ ಸಿಬಿ ಈ ಹಂತದಲ್ಲಿ ಫಿನಿಕ್ಸ್ ಪಕ್ಷಿಯಂತೆ ಎದ್ದು ಬಂದರೆ ಮಾತ್ರ ಈ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಫೀಲ್ಡಿಂಗ್, ಬೌಲಿಂಗ್ ವಿಭಾಗದಲ್ಲಿ ಆರ್ ಸಿಬಿ ಸಾಕಷ್ಟು ಸುಧಾರಣೆ ಮಾಡುವ ಅಗತ್ಯತೆ ಇದ್ದು, ಬ್ಯಾಟಿಂಗ್ ನಲ್ಲಿ ಸ್ಥಿರ ಪ್ರದರ್ಶನದ ಅಗತ್ಯತೆ ಇದೆ.

    ಮುಂಬೈ ಪಂದ್ಯದ ಬಳಿಕ ಮಾತನಾಡಿದ ಚಹಲ್, ನಾವು ಮುಂದಿನ 6 ಪಂದ್ಯಗಳನ್ನು ಗೆದ್ದರೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇದ್ದು, ಕಳೆದ ವರ್ಷ ತಂಡವೊಂದು ಈ ಸಾಧನೆಯನ್ನು ಮಾಡಿದೆ. ಆದ್ದರಿಂದ ನಮಗೆ ಒಂದು ಅವಕಾಶ ಇದ್ದು, ಮುಂದಿನ ಹಂತದಲ್ಲಿ ಏನಾಗಲಿದೆ ಎನ್ನುವುದು ತಿಳಿಯಬೇಕಿದೆ ಎಂದರು.