Tag: ಪ್ಲೇ ಆಫ್

  • IPL 2025 | ಕೊನೆಯಲ್ಲಿ ʻಸನ್‌ʼ ಸ್ಟ್ರೋಕ್‌ – ಮೊದಲೆರಡು ಸ್ಥಾನ ಕಳೆದುಕೊಂಡರೆ ಆರ್‌ಸಿಬಿಗೆ ಆಗುವ ನಷ್ಟವೇನು?

    IPL 2025 | ಕೊನೆಯಲ್ಲಿ ʻಸನ್‌ʼ ಸ್ಟ್ರೋಕ್‌ – ಮೊದಲೆರಡು ಸ್ಥಾನ ಕಳೆದುಕೊಂಡರೆ ಆರ್‌ಸಿಬಿಗೆ ಆಗುವ ನಷ್ಟವೇನು?

    ಲಕ್ನೋ: 18ನೇ ಆವೃತ್ತಿಯ ಐಪಿಎಲ್‌ (IPL 2025) ಆವೃತ್ತಿ ಇನ್ನೇನು ಮುಕ್ತಾಯ ಘಟಕ್ಕೆ ತಲುಪುತ್ತಿದೆ. ಲೀಗ್‌ ಸುತ್ತಿನಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡಿದ್ದ ಆರ್‌ಸಿಬಿಗೆ (RCB) ಕೊನೆಕೊನೆಯಲ್ಲಿ ಮರ್ಮಾಘಾತ ಆಗಿದೆ.

    ಸನ್‌ ರೈಸರ್ಸ್‌ ಹೈದರಾಬಾದ್‌ (SRH) ವಿರುದ್ಧದ ಸೋಲಿನಿಂದ ಇದೀಗ ಲೀಗ್‌ ಸುತ್ತಿನಲ್ಲಿ 2ನೇ ಸ್ಥಾನವನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಇದರಿಂದ ಟ್ರೋಫಿ ಗೆಲ್ಲುವ ಕನಸು ಕಂಡಿರುವ ಆರ್‌ಸಿಬಿಗೆ ದೊಡ್ಡ ನಷ್ಟ ಉಂಟಾಗುವ ಸಾಧ್ಯತೆ ಇದೆ. ಅದು ಹೇಗೆ ಅನ್ನೋದನ್ನ ತಿಳಿಯಬೇಕಿದ್ದರೆ ಮುಂದೆ ಓದಿ…

    18ನೇ ಆವೃತ್ತಿಯ ಐಪಿಎಲ್‌ ಪ್ಲೇ ಆಫ್‌ಗೆ ಗುಜರಾತ್‌, ಪಂಜಾಬ್‌, ಆರ್‌ಸಿಬಿ, ಮುಂಬೈ ತಂಡಗಳು ಈಗಾಗಲೇ ಲಗ್ಗೆಯಿಟ್ಟಿವೆ. ಈ ನಾಲ್ಕು ತಂಡಗಳಲ್ಲಿ ಈಗ ನಂ.1, ನಂ.2 ಪಟ್ಟಕ್ಕೆ ಹಣಾಹಣಿ ನಡೆಯುತ್ತಿದೆ. ಗುಜರಾತ್‌, ಆರ್‌ಸಿಬಿ, ಮುಂಬೈ ತಲಾ 13 ಪಂದ್ಯಗಳನ್ನಾಡಿದ್ದರೆ, ಪಂಜಾಬ್‌ ಕಿಂಗ್ಸ್‌ಗೆ ಮಾತ್ರ ಇನ್ನೂ 2 ಪಂದ್ಯಗಳು ಬಾಕಿಯಿವೆ.

    ನಂ.2 ಸ್ಥಾನವೂ ಕಳೆದುಕೊಳ್ಳುತ್ತಾ ಆರ್‌ಸಿಬಿ?
    ಸದ್ಯ ಸನ್‌ ರೈಸರ್ಸ್‌ ವಿರುದ್ಧದ ಸೋಲಿನಿಂದ 3ನೇ ಸ್ಥಾನಕ್ಕೆ ಕುಸಿದಿರುವ ಆರ್‌ಸಿಬಿಗೆ ಮತ್ತೆ 1 ಅಥವಾ 2ನೇ ಸ್ಥಾನಕ್ಕೇರುವ ಅವಕಾಶವಿದೆ. ಮುಂದಿನ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೋತು, ಮುಂಬೈ ವಿರುದ್ಧ ಕಡಿಮೆ ರನ್‌ ಅಂತರದಿಂದ ಗೆಲ್ಲಬೇಕು. ಗುಜರಾತ್‌ ಟೈಟಾನ್ಸ್‌ ಸಿಎಸ್‌ಕೆ ವಿರುದ್ಧ ಸೋಲಬೇಕು. ಇದೇ ವೇಳೆ ಮುಂಬೈ ಪಂಜಾಬ್‌ ವಿರುದ್ಧ ಕಡಿಮೆ ರನ್‌ ಅಂತರದಿಂದ ಸೋತು. ಆರ್‌ಸಿಬಿ ಲಕ್ನೋ ವಿರುದ್ಧ ಉತ್ತಮ ರನ್‌ ರೇಟ್‌ನಿಂದ ಗೆದ್ದರೆ, ಆಗ ಆರ್‌ಸಿಬಿ ಮೊದಲ ಅಥವಾ ಅಗ್ರಸ್ಥಾನಕ್ಕೇರುವ ಸಾಧ್ಯತೆಗಳಿವೆ. ಏಕೆಂದರೆ ನೆಟ್ ರನ್‌ರೇಟ್‌ನಲ್ಲಿ ಮುಂಬೈ ಇಂಡಿಯನ್ಸ್‌ ಎಲ್ಲರಿಗಿಂತ ಮುಂದಿದೆ. ಮುಂಬೈ +1.292 ನೆಟ್‌ರನ್‌ ರೇಟ್‌ ಹೊಂದಿದ್ದರೆ, ಗುಜರಾತ್‌ +0.602, ಪಂಜಾಬ್‌ +0.389, ಆರ್‌ಸಿಬಿ +0.255 ನೆಟ್‌ ರನ್‌ರೇಟ್‌ ಹೊಂದಿದೆ.

    ಮೊದಲೆರಡು ಸ್ಥಾನ ಕಸಿದರೆ ಆರ್‌ಸಿಬಿಗೆ ಆಗುವ ನಷ್ಟ ಏನು?
    ಸಾಮಾನ್ಯವಾಗಿ ಐಪಿಎಲ್‌ನಲ್ಲಿ ಮೊದಲ 2 ಸ್ಥಾನಗಳಲ್ಲಿರುವ ತಂಡಗಳಿಗೆ ಹೆಚ್ಚು ಲಾಭ. ಏಕೆಂದರೆ ಮೊದಲ ಕ್ವಾಲಿಫೈಯರ್‌ 1ನಲ್ಲಿ ಸೆಣಸಿದಾಗ ಗೆದ್ದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಿದ್ರೆ, ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಆದ್ರೆ 3 ಮತ್ತು 4ನೇ‌ ಸ್ಥಾನ ಪಡೆಯುವ ತಂಡಗಳಿಗೆ ಒಂದೊಂದೇ ಅವಕಾಶ ಇರುತ್ತದೆ. ಎಲಿಮಿನೇಟರ್‌ 1ನಲ್ಲಿ ಮೂರು ಮತ್ತು 4ನೇ ಸ್ಥಾನ ಪಡೆದ ತಂಡಗಳು ಸೆಣಸಲಿದ್ದು, ಸೋತ ತಂಡ ಮನೆಗೆ ಹೋಗಬೇಕಾಗುತ್ತದೆ. ಗೆದ್ದ ತಂಡ ಕ್ವಾಲಿಫೈಯರ್‌ 1ನಲ್ಲಿ ಸೋತ ತಂಡದ ಜೊತೆಗೆ ಕ್ವಾಲಿಫೈಯರ್‌-2ನಲ್ಲಿ ಸೆಣಸಬೇಕಾಗುತ್ತದೆ. ಕ್ವಾಲಿಫೈಯರ್‌ 2ನಲ್ಲಿ ಗೆದ್ದ ತಂಡ ಫೈನಲ್‌ ಪ್ರವೇಶಿಸಲಿದೆ. ಹೀಗಾಗಿ ಆರ್‌ಸಿಬಿಗೆ ಮೊದಲ 2 ಸ್ಥಾನಗಳಲ್ಲಿ ಕಾಯ್ದುಕೊಳ್ಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

    ಆರ್‌ಸಿಬಿಗೆ ಹೀನಾಯ ಸೋಲು:
    ಇನ್ನೂ ಶುಕ್ರವಾರ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ 42 ರನ್‌ಗಳ ಅಂತರದಿಂದ ಸೋಲು ಕಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ.

    .

  • ಐಪಿಎಲ್‌ ಪ್ಲೇಆಫ್‌ – 4ನೇ ಸ್ಥಾನಕ್ಕೆ 3 ತಂಡಗಳ ಮಧ್ಯೆ ರೇಸ್‌

    ಐಪಿಎಲ್‌ ಪ್ಲೇಆಫ್‌ – 4ನೇ ಸ್ಥಾನಕ್ಕೆ 3 ತಂಡಗಳ ಮಧ್ಯೆ ರೇಸ್‌

    ನವದೆಹಲಿ: ಐಪಿಎಲ್‌ (IPL) ಪ್ಲೇ ಆಫ್‌ನ (Playoffs) 4ನೇ ಸ್ಥಾನಕ್ಕಾಗಿ ಈಗ ಮೂರು ತಂಡಗಳ ಮಧ್ಯೆ ಪೈಪೋಟಿ ಆರಂಭವಾಗಿದೆ.

    ಡೆಲ್ಲಿ (DC) ವಿರುದ್ಧ ಗುಜರಾತ್‌ ಜೈಂಟ್ಸ್‌ ಜಯಗಳಿಸುವುದರೊಂದಿಗೆ ಗುಜರಾತ್‌ ಟೈಟಾನ್ಸ್‌, ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ಪ್ಲೇ ಆಫ್‌ ಪ್ರವೇಶಿಸಿದೆ. ಈಗ ಮುಂಬೈ ಇಂಡಿಯನ್ಸ್‌ (Mumbai Indians), ಲಕ್ನೋ (Lucknow Super Giants) ಮತ್ತು ಡೆಲ್ಲಿ ಮಧ್ಯೆ 4ನೇ ಸ್ಥಾನಕ್ಕಾಗಿ ಸ್ಪರ್ಧೆ ಆರಂಭವಾಗಿದೆ.

    ಲಕ್ನೋ ಮೂರು ಪಂದ್ಯ ಗೆದ್ದರೆ 16 ಅಂಕ ತಲುಪಬಹುದಾಗಿದೆ. ಮುಂಬೈ ಎರಡು ಪಂದ್ಯ ಗೆದ್ದರೆ 18 ಅಂಕ ಸಂಪಾದಿಸಿದರೆ ಡೆಲ್ಲಿ ಎರಡು ಪಂದ್ಯ ಗೆದ್ದರೆ 17 ಅಂಕ ಪಡೆಯಲಿದೆ. ಆದರೆ ಇಲ್ಲಿ ಮುಂಬೈ ಮತ್ತು ಡೆಲ್ಲಿ ಮಧ್ಯೆ ಒಂದು ಪಂದ್ಯ ನಡೆಯಲಿದೆ. ಇದನ್ನೂ ಓದಿ: RCB, ಗುಜರಾತ್‌, ಪಂಜಾಬ್‌ ಪ್ಲೇ-ಆಫ್‌ಗೆ ಎಂಟ್ರಿ – ಡೆಲ್ಲಿ ವಿರುದ್ಧ ನೋ ಲಾಸ್‌ನಲ್ಲಿ ಟೈಟಾನ್ಸ್‌ ಪಾಸ್‌

    ಮುಂಬೈ ವಿರುದ್ಧ ಡೆಲ್ಲಿ ಸೋತರೆ, ಡೆಲ್ಲಿ ಹೊರಬೀಳಲಿದೆ. ಮುಂಬೈ ಸೋತರೆ, ಆಗ ಪಂಜಾಬ್ ವಿರುದ್ಧ ಕೊನೆಯ ಪಂದ್ಯದಲ್ಲಿ ಗೆಲ್ಲಬೇಕು. ಜೊತೆಗೆ ಡೆಲ್ಲಿ ತನ್ನ ಕೊನೆ ಪಂದ್ಯದಲ್ಲಿ ಪಂಜಾಬ್‌ಗೆ ಶರಣಾಗಿ, ಲಕ್ನೋ 3 ರಲ್ಲಿ 1 ಪಂದ್ಯ ಸೋಲಬೇಕು. ಸದ್ಯ 10 ಅಂಕ ಪಡೆದಿರುವ ಲಕ್ನೋ ಮೂರಕ್ಕೆ ಮೂರೂ ಪಂದ್ಯ ಗೆಲ್ಲಬೇಕಾಗುತ್ತದೆ. ಇದನ್ನೂ ಓದಿ: ಪಾಕಿಗೆ ಶಾಕ್‌ – ಏಷ್ಯಾಕಪ್‌ನಿಂದ ಹಿಂದೆ ಸರಿದ ಭಾರತ!

    ಈಗಾಗಲೇ ಪ್ಲೇ-ಆಫ್‌ಗೇರಿರುವ 3 ತಂಡ ಗಳ ನಡುವೆ ಮೊದಲ 2 ಸ್ಥಾನಕ್ಕೆ ಪೈಪೋಟಿ ಇದೆ. ಅಗ್ರ-2ರಲ್ಲಿ ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್-1ನಲ್ಲಿ ಆಡಲಿದ್ದು, ಆ ಪಂದ್ಯ ಗೆಲ್ಲುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಕ್ವಾಲಿಫಯರ್‌ನಲ್ಲಿ ಸೋತ ತಂಡಕ್ಕೂ ಎಲಿಮಿನೇಟರ್‌ ಪಂದ್ಯವಿದೆ.

  • IPL 2023 Playoffs: ಮೇ 23ಕ್ಕೆ CSK vs GT ಹೈವೋಲ್ಟೇಜ್‌ ಕದನ – ಮಹಿ ಮೇಲೆ ಎಲ್ಲರ ಕಣ್ಣು

    IPL 2023 Playoffs: ಮೇ 23ಕ್ಕೆ CSK vs GT ಹೈವೋಲ್ಟೇಜ್‌ ಕದನ – ಮಹಿ ಮೇಲೆ ಎಲ್ಲರ ಕಣ್ಣು

    ಚೆನ್ನೈ: 16ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2023) ಲೀಗ್‌ ಹಂತದ ಎಲ್ಲಾ ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಪ್ಲೇ ಆಫ್‌ ರೋಚಕ ಘಟ್ಟ ತಲುಪಿದೆ. ಮೇ 23 ರಿಂದ ಪ್ಲೇ ಆಫ್‌ (IPL 2023 Playoffs) ಪಂದ್ಯಗಳು ಆರಂಭವಾಗಲಿದೆ.

    10 ತಂಡಗಳ ಪೈಕಿ ಗುಜರಾತ್‌ ಟೈಟಾನ್ಸ್‌ (GT), ಚೆನ್ನೈ ಸೂಪರ್‌ ಕಿಂಗ್ಸ್‌ (CSK), ಲಕ್ನೋ ಸೂಪರ್‌ ಜೈಂಟ್ಸ್‌ (LSG) ಹಾಗೂ ಮುಂಬೈ ಇಂಡಿಯನ್ಸ್‌ (MI) ತಂಡಗಳು ಪ್ಲೇ ಆಫ್‌ನಲ್ಲಿ ಉಳಿದಿವೆ.

    ಮೇ 23ರಂದು ಮೊದಲ ಕ್ವಾಲಿಫೈಯರ್‌ ಪಂದ್ಯ ಗುಜರಾತ್‌ ಟೈಟಾನ್ಸ್‌ ಹಾಗೂ ಸಿಎಸ್‌ಕೆ ಬಲಿಷ್ಠ ತಂಡಗಳ ನಡುವೆ ನಡೆಯಲಿದೆ. ಮೇ 24ರಂದು ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ನಡುವೆ ಮೊದಲ ಎಲಿಮಿನೇಟರ್‌ ಪಂದ್ಯಗಳು ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದನ್ನೂ ಓದಿ: RCB ಔಟ್, ಮುಂಬೈಗೆ ಪ್ಲೇ ಆಫ್ ಗಿಫ್ಟ್ – ಪಂದ್ಯ ಸೋತಿದ್ದಕ್ಕೆ ಕಣ್ಣೀರಿಟ್ಟ ಕೊಹ್ಲಿ

    ಇನ್ನೂ ಕ್ವಾಲಿಫೈಯರ್‌ ಮೊದಲ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಅದಾದ ಬಳಿಕ ಕ್ವಾಲಿಫೈಯರ್‌ ಮೊದಲ ಪಂದ್ಯದಲ್ಲಿ ಸೋತ ತಂಡ ಹಾಗೂ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ತಂಡಗಳ ನಡುವೆ ಮೇ 26ರಂದು 2ನೇ ಎಲಿಮಿನೇಟರ್‌ ಪಂದ್ಯ ನಡೆಯಲಿದೆ. ಜಯಭೇರಿ ಬಾರಿಸಿದ ಎರಡು ತಂಡಗಳು ಅಂತಿಮವಾಗಿ ಮೇ 28ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ ಸೆಣಸಲಿವೆ. ಇದನ್ನೂ ಓದಿ: IPL Playoffs Schedule: ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್‌ ಫೈನಲ್‌

    ಕಳೆದ ವರ್ಷವೂ 2ನೇ ಕ್ವಾಲಿಫೈಯರ್‌ ಹಾಗೂ ಫೈನಲ್‌ ಪಂದ್ಯಗಳು ಅಹಮದಾಬಾದ್‌ನಲ್ಲೇ ನಡೆದಿದ್ದವು. ಮೊದಲ ಕ್ವಾಲಿಫೈಯರ್‌ ಹಾಗೂ ಎಲಿಮಿನೇಟರ್‌ ಪಂದ್ಯಗಳು ಕೋಲ್ಕತಾದಲ್ಲಿ ನಡೆದಿತ್ತು. ಈ ವರ್ಷ ಉದ್ಘಾಟನಾ ಸಮಾರಂಭ ಹಾಗೂ ಫೈನಲ್‌ ಪಂದ್ಯಕ್ಕೂ ಮೋದಿ ಕ್ರೀಡಾಂಗಣವನ್ನೇ ಬಿಸಿಸಿಐ (BCCI) ಆಯ್ಕೆ ಮಾಡಿದೆ.

    ಅಲ್ಲದೇ ಸಿಎಸ್‌ಕೆ ತಂಡದ ನಾಯಕ ಎಂ.ಎಸ್‌ ಧೋನಿ ಈ ಬಾರಿ ಐಪಿಎಲ್‌ನೊಂದಿಗೆ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಲಿದ್ದಾರೆ. ಈ ಹಿನ್ನೆಲೆಯಲ್ಲಿ ತವರು ಅಂಗಳದಲ್ಲಿ ಮಹಿ ಬ್ಯಾಟಿಂಗ್‌ ಅಬ್ಬರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರವಾಗಿದ್ದಾರೆ.

  • ಐಪಿಎಲ್ ಪಂದ್ಯ ರದ್ದು ತಡೆಗೆ `ಸೂಪರ್’ ನಿಯಮ – ಯಾವ ತಂಡದ ಲಕ್ ಹೇಗಿದೆ?

    ಐಪಿಎಲ್ ಪಂದ್ಯ ರದ್ದು ತಡೆಗೆ `ಸೂಪರ್’ ನಿಯಮ – ಯಾವ ತಂಡದ ಲಕ್ ಹೇಗಿದೆ?

    ನವದೆಹಲಿ: 15ನೇ ಆವೃತ್ತಿಯ ಐಪಿಎಲ್ ಪ್ಲೇ-ಆಫ್ ಹಂತದ ಪಂದ್ಯಗಳಿಗೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದ್ದು, ಬಿಸಿಸಿಐ ಹೊಸ ನಿಯಮ ಪ್ರಕಟಿಸಿದೆ.

    ಈ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಒಂದಿಲ್ಲೊಂದು ಲಕ್ ಒಲಿಯುತ್ತಿದ್ದು, ಬಹುಶಃ ಚಾಂಪಿಯನ್ ಆಗುವ ಅವಕಾಶವಿದ್ದಂತೆಯೇ ಕಾಣುತ್ತಿದೆ. ಪ್ಲೇ ಆಫ್‌ನಿಂದ ಹೊರಬೀಳಬೇಕಿದ್ದ ಆರ್‌ಸಿಬಿ ಮುಂಬೈ ಗೆಲುವಿನ ಕೃಪೆಯಿಂದ ಪ್ಲೇ-ಆಫ್ ಪ್ರವೇಶಿಸಿತು. ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾದರೆ, ರನ್‌ರೇಟ್ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತಿತ್ತು. ಆದರೆ, ಈ ಬಾರಿ ಸೂಪರ್ ಓವರ್ ನಿಯಮವನ್ನು ಅನುಷ್ಠಾನಗೊಳಿಸಿದ್ದು, ಹೆಚ್ಚುವರಿ ಸಮಯವನ್ನೂ ನಿಗದಿ ಮಾಡಲಾಗಿದೆ. ಈ ಬೆಳವಣಿಗೆ ಆರ್‌ಸಿಬಿಗೆ ವರ.

    IPL 2022 RCB VS SRH 5

    ಮಳೆ ಅಡ್ಡಿಯಿಂದ ನಿಗದಿತ ಸಮಯದೊಳಿಗೆ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಕೇವಲ ಸೂಪರ್ ಓವರ್ ವಿಜೇತರನ್ನು ನಿರ್ಧರಿಸಲಿದೆ. ಟಿ20 ಕ್ರಿಕೆಟ್‌ನಲ್ಲಿ ಕೇವಲ ಸೂಪರ್ ಓವರ್‌ನಿಂದಲೇ ಫಲಿತಾಂಶ ನಿರ್ಧರಿಸುವ ನಿಯಮ ಇದೇ ಮೊದಲಿಗೆ ಬಿಸಿಸಿಐ ಮಾಡಿದೆ. ಇದನ್ನೂ ಓದಿ: ಆಫ್ರಿಕಾ ಸರಣಿಗೆ ತಂಡ ಪ್ರಕಟ – ಟಿ20 ತಂಡಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಕ್ಯಾಪ್ಟನ್, ಡಿಕೆ ವಾಪಸ್‌, ಉಮ್ರಾನ್ ಮಲಿಕ್‍ಗೆ ಸ್ಥಾನ

    ಫೈನಲ್ ಸೇರಿ ಪ್ಲೇ-ಆಫ್‌ನ ಒಟ್ಟು 4 ಪಂದ್ಯಗಳಿಗೆ ನಿಗದಿತ 200 ನಿಮಿಷಗಳ ಜೊತೆಗೆ ಹೆಚ್ಚುವರಿ 2 ಗಂಟೆಗಳ ಸಮಯಾವಕಾಶ ನೀಡಲಾಗಿದೆ. ಮೊದಲ 3 ಪಂದ್ಯಗಳು ಮಳೆಯಿಂದಾಗಿ ವಿಳಂಬಗೊಂಡರೆ ಓವರ್ ಕಡಿತಗೊಳಿಸದೆ ರಾತ್ರಿ 9:40ಕ್ಕೆ ಆರಂಭಿಸಲು ಗಡುವು ನೀಡಲಾಗಿದೆ. ಒಂದು ವೇಳೆ ತಲಾ 5 ಓವರ್ ಪಂದ್ಯ ನಡೆಸಲು ಅವಕಾಶ ಸಿಕ್ಕರೆ ಆ ಪಂದ್ಯ ಆರಂಭಿಸಲು ರಾತ್ರಿ 11:56 ರವರೆಗೂ ಸಮಯವಿರಲಿದೆ. 5 ಓವರ್ ಪಂದ್ಯದಲ್ಲಿ ಟೈಮ್‌ಔಟ್ ಇರುವುದಿಲ್ಲ. ಅಲ್ಲದೆ ಮಧ್ಯರಾತ್ರಿ 12:50ರೊಳಗೆ ಪಂದ್ಯ ಮುಗಿಸುವಂತೆ ನಿಯಮ ಮಾಡಿದೆ.

    IPL 2022 GT VS LSG PLAYOFF 1

    5 ಓವರ್ ಪಂದ್ಯವೂ ಸಾಧ್ಯವಾಗದೆ ಇದ್ದಲ್ಲಿ ಸೂಪರ್ ಓವರ್ ನಡೆಯಲಿದೆ. ಇದಕ್ಕೆ ಮಧ್ಯರಾತ್ರಿ 12:50ರ ವರೆಗೂ ಸಮಯವಿರಲಿದೆ. ಮಳೆ ನಿಲ್ಲದೆ ಪಂದ್ಯ ನಡೆಸಲು ಸಾಧ್ಯವಾಗದೆ ಇದ್ದರೆ ಅಂಕಪಟ್ಟಿಯಲ್ಲಿ ಗಳಿಸಿದ ಸ್ಥಾನಗಳ ಮೇಲೆ ವಿಜೇತರ ನಿರ್ಧಾರವಾಗಲಿದೆ.  ಇದನ್ನೂ ಓದಿ: ಪ್ಲೇ ಆಫ್ ಪಂದ್ಯಗಳಿಗೆ ಮಳೆ ಕಾಟ – ಹೀಗೆ ನಿರ್ಧಾರವಾಗಲಿದೆ ಫಲಿತಾಂಶ?

    ಕ್ವಾಲಿಫೈಯರ್-1 ಮಳೆಗೆ ಬಲಿಯಾದರೆ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಗುಜರಾತ್ ನೇರವಾಗಿ ಫೈನಲ್‌ಗೇರಲಿದೆ. ರಾಜಾಸ್ಥಾನ ಕ್ವಾಲಿಫೈಯರ್-2ರಲ್ಲಿ ಆಡಬೇಕಾಗುತ್ತದೆ. ಎಲಿಮಿನೇಟರ್ ಪಂದ್ಯ ಮಳೆಗೆ ಆಹುತಿಯಾದರೆ, ಆರ್‌ಸಿಬಿ ಹೊರಬೀಳಲಿದ್ದು, 2ನೇ ಪ್ಲೇ ಆಫ್ ಪಂದ್ಯಕ್ಕೆ ಲಖನೌ ಪ್ರವೇಶ ಪಡೆಯಲಿದೆ.

    ಫೈನಲ್ ಪಂದ್ಯಕ್ಕೆ ಏನು ನಿಯಮ?: ಮೇ 29ಕ್ಕೆ ನಿಗದಿಯಾಗಿರುವ ಫೈನಲ್ ಪಂದ್ಯ ರಾತ್ರಿ 8ಕ್ಕೆ ಆರಂಭಗೊಳ್ಳುವ ಕಾರಣ ಮಳೆಯಿಂದ ತಡವಾದರೆ ಓವರ್ ಕಡಿತವಿಲ್ಲದೆ ಪಂದ್ಯ ಆರಂಭಿಸಲು ರಾತ್ರಿ 10:10ರ ವರೆಗೂ ಅವಕಾಶವಿರಲಿದೆ. 5 ಓವರ್ ಪಂದ್ಯ ನಡೆಸಲುಮಧ್ಯ ರಾತ್ರಿ 12:26ರ ವರೆಗೂ ಕಾಲಾವಕಾಶ ಇರಲಿದ್ದು, ಮೇ 30 ಅನ್ನು ಮೀಸಲು ದಿನವಾಗಿ ಇಡಲಾಗಿದೆ.

    IPL2022

    ಮೊದಲ ದಿನ ಪಂದ್ಯ ಅರ್ಧ ನಡೆದಿದ್ದರೆ, ಮೀಸಲು ದಿನದಂದು ಪಂದ್ಯ ಮುಂದುವರಿಯಲಿದೆ. ಕೇವಲ ಟಾಸ್ ಅಷ್ಟೇ ಆಗಿ ಪಂದ್ಯ ನಡೆಯದಿದ್ದರೆ, 2ನೇ ದಿನ ಹೊಸದಾಗಿ ಟಾಸ್ ಹಾಕಲಾಗುತ್ತದೆ. ಒಂದು ವೇಳೆ ಮೊದಲ ಇನ್ನಿಂಗ್ಸ್ ಮುಗಿದು, 2ನೇ ಇನ್ನಿಂಗ್ಸ್‌ 5 ಓವರ್ ಪೂರ್ಣಗೊಂಡ ಬಳಿಕ ಮಳೆ ಸುರಿದರೆ, ಡಕ್ವರ್ತ್ ಲೂಯಿಸ್ ನಿಯಮವನ್ನು ಅಳವಡಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಮೀಸಲು ದಿನದಂದು ಕೇವಲ ಸೂಪರ್ ಓವರ್ ನಿಂದಲೂ ಫಲಿತಾಂಶ ನಿರ್ಧರಿಸಬಹುದಾಗಿದೆ.

    ಫೈನಲ್‌ನಲ್ಲಿ ಸೂಪರ್ ಓವರ್ ಆರಂಭಿಸಲು ಮಧ್ಯರಾತ್ರಿ 1.20ರ ವರೆಗೂ ಅವಕಾಶವಿರಲಿದೆ.

  • ಪಂದ್ಯವಾಡದೇ ಆರ್‌ಸಿಬಿ ಮನೆಗೆ ಬರುತ್ತಾ?

    ಪಂದ್ಯವಾಡದೇ ಆರ್‌ಸಿಬಿ ಮನೆಗೆ ಬರುತ್ತಾ?

    ಕೋಲ್ಕತ್ತಾ: ಐಪಿಎಲ್‍ನಲ್ಲಿ ಕಡೆಯ ರೋಚಕ ಪಂದ್ಯಗಳಿಗೆ ಕೋಲ್ಕತ್ತಾ ಸಜ್ಜಾಗುತ್ತಿದೆ. ಈಗಾಗಲೇ 4 ತಂಡಗಳು ಪ್ಲೇ ಆಫ್ ಪಂದ್ಯಗಳನ್ನು ಆಡಲು ತಯಾರಿ ನಡೆಸುತ್ತಿವೆ. ಈ ನಡುವೆ ಪ್ಲೇ ಆಫ್ ಪ್ರವೇಶಿಸಿರುವ ಆರ್‌ಸಿಬಿ ಪಂದ್ಯವಾಡದೇ ಮನೆಗೆ ಬರುತ್ತಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡುತ್ತಿದೆ.

    ಹೌದು ಇದಕ್ಕೆಲ್ಲ ಕಾರಣ ಕೋಲ್ಕತ್ತಾದಲ್ಲಿ ಸುರಿಯುತ್ತಿರುವ ಮಳೆ. ಕೋಲ್ಕತ್ತಾದಲ್ಲಿ ಪ್ಲೇ ಆಫ್ ಪಂದ್ಯಗಳು ನಡೆಯುತ್ತಿದ್ದು, ಕೋಲ್ಕತ್ತಾದಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದೆ. ಇದೀಗ ಪ್ಲೇ ಆಫ್‍ನ ಎರಡು ಪಂದ್ಯಗಳು ಕೋಲ್ಕತ್ತಾದಲ್ಲಿ ನಡೆಯಲಿದೆ. ಕೋಲ್ಕತ್ತಾದಲ್ಲಿ ಇನ್ನೆರಡು ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗಾಗಿ ಪ್ಲೇ ಆಫ್ ಪಂದ್ಯಗಳು ಸರಿಯಾಗಿ ನಡೆಯುವುದು ಅನುಮಾನವಾಗಿದೆ. ಇದನ್ನೂ ಓದಿ: ಪ್ಲೇ ಆಫ್ ಪಂದ್ಯಗಳಿಗೆ ಮಳೆ ಕಾಟ – ಹೀಗೆ ನಿರ್ಧಾರವಾಗಲಿದೆ ಫಲಿತಾಂಶ?

    ಮೊದಲನೇ ಕ್ವಾಲಿಫೈಯರ್ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಮೇ 24 ಮಂಗಳವಾರ ನಡೆಯಲಿದೆ. ಎಲಿಮಿನೇಟರ್ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮೇ 25 ಬುಧವಾರದಂದು ನಡೆಯಲಿದೆ. ಒಂದು ವೇಳೆ ಈ ಪಂದ್ಯಗಳು ಮಳೆಯಿಂದಾಗಿ ಸೂಪರ್ ಓವರ್ ಮೂಲಕವೂ ಫಲಿತಾಂಶ ಕಾಣದೇ ರದ್ದಾದರೆ ನೆಟ್‍ ರನ್‌ರೇಟ್‌ನಲ್ಲಿ ಮುಂದಿರುವ ತಂಡ 2ನೇ ಎಲಿಮಿನೇಟರ್‌ಗೆ ತೇರ್ಗಡೆ ಆಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಎಲಿಮಿನೇಟರ್ ಪಂದ್ಯವಾಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಲಕ್ನೋ ತಂಡಕ್ಕೆ ರನ್‍ರೇಟ್ ವರವಾಗುವ ಸಾಧ್ಯತೆ ಹೆಚ್ಚಿದೆ.

    ಇದೀಗ ಅಂಕಪಟ್ಟಿಯನ್ನು ಗಮನಿಸಿದಾಗ ಮೊದಲ ಸ್ಥಾನದಲ್ಲಿರುವ ಗುಜರಾತ್ ತಂಡ +0.316 ನೆಟ್‌ ರನ್‍ರೇಟ್ ಹೊಂದಿದ್ದರೆ, 2ನೇ ಸ್ಥಾನದಲ್ಲಿರುವ ರಾಜಸ್ಥಾನ +0298, 3ನೇ ಸ್ಥಾನದಲ್ಲಿರುವ ಲಕ್ನೋ +0.251 ಮತ್ತು ಬೆಂಗಳೂರು -0.253 ರನ್‍ರೇಟ್ ಹೊಂದಿದೆ. ಇದನ್ನು ಗಮನಿಸಿದಾಗ ಅದೃಷ್ಟದಾಟದ ಮೂಲಕ ಪ್ಲೇ ಆಫ್ ಪ್ರವೇಶಿಸಿರುವ ಆರ್‌ಸಿಬಿ ತಂಡಕ್ಕೆ ಪ್ಲೇ ಆಫ್‍ನಲ್ಲಿ ರನ್‍ರೇಟ್ ಮುಳ್ಳಾಗುವ ಸಾಧ್ಯತೆ ಕಂಡುಬರುತ್ತಿದೆ. ಇದನ್ನೂ ಓದಿ: ಆಫ್ರಿಕಾ ಸರಣಿಗೆ ತಂಡ ಪ್ರಕಟ – ಟಿ20 ತಂಡಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಕ್ಯಾಪ್ಟನ್, ಡಿಕೆ ವಾಪಸ್‌, ಉಮ್ರಾನ್ ಮಲಿಕ್‍ಗೆ ಸ್ಥಾನ

    ಆರ್‌ಸಿಬಿ ಮತ್ತು ಲಕ್ನೋ ನಡುವಿನ ಪಂದ್ಯಕ್ಕೆ ಮಳೆ ಅಡಚಣೆ ನೀಡಿ ಒಂದೂ ಎಸೆತ ಕಾಣದೇ ಪಂದ್ಯ ರದ್ದಾದರೆ, ನೆಟ್‍  ರನ್‍ರೇಟ್‍ನಲ್ಲಿ ಮುಂದಿರುವ ತಂಡ 2ನೇ ಕ್ವಾಲಿಫೈಯರ್‌ಗೆ ತೇರ್ಗಡೆ ಹೊಂದಲಿದೆ. ಇದೀಗ ನೆಟ್‍  ರನ್‍ರೇಟ್‍ನಲ್ಲಿ ಆರ್‌ಸಿಬಿಗಿಂತ ಲಕ್ನೋ ತಂಡ ಮುಂದಿದೆ. ಇದು ಪಂದ್ಯಕ್ಕೂ ಮುನ್ನ ಲಕ್ನೋ ಮೇಲುಗೈ ಸಾಧಿಸಿರುವಂತೆ ಕಂಡುಬಂದರೆ, ಇತ್ತ ಆರ್‌ಸಿಬಿ ಪಂದ್ಯವಾಡದೇ ಮನೆಗೆ ಹೆಜ್ಜೆ ಇಡುವ ದಾರಿಯಾಗಿದೆ.

    IPL 2022 GUJARATH VS RCB 05

    ಈ ರೀತಿ ಆಗದಿರಲಿ ಪ್ಲೇ ಆಫ್ ಪಂದ್ಯಗಳು ಸರಿಯಾಗಿ ನಡೆದು ಫಲಿತಾಂಶ ಕಾಣುವಂತಾಗಲಿ. ಆರ್‌ಸಿಬಿ ಫೈನಲ್‍ಗೇರಿ ಕಪ್ ಗೆಲ್ಲಲಿ ಎಂದು ಆರ್‌ಸಿಬಿ ಅಭಿಮಾನಿಗಳು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.

  • ಪ್ಲೇ ಆಫ್ ಪಂದ್ಯಗಳಿಗೆ ಮಳೆ ಕಾಟ – ಹೀಗೆ ನಿರ್ಧಾರವಾಗಲಿದೆ ಫಲಿತಾಂಶ?

    ಪ್ಲೇ ಆಫ್ ಪಂದ್ಯಗಳಿಗೆ ಮಳೆ ಕಾಟ – ಹೀಗೆ ನಿರ್ಧಾರವಾಗಲಿದೆ ಫಲಿತಾಂಶ?

    ಕೋಲ್ಕತ್ತಾ: 15ನೇ ಆವೃತ್ತಿ ಐಪಿಎಲ್‍ನ ಪ್ಲೇ ಆಫ್ ಪಂದ್ಯಗಳಿಗೆ ಮಳೆ ಕಾಟ ಕೊಡುವ ಸಾಧ್ಯತೆ ಹೆಚ್ಚಿದೆ.

    ಕೋಲ್ಕತ್ತಾದಲ್ಲಿ ಪ್ಲೇ ಆಫ್ ಪಂದ್ಯಗಳು ನಡೆಯುತ್ತಿದ್ದು, ಕೋಲ್ಕತ್ತಾದಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದೆ. ಇದೀಗ ಪ್ಲೇ ಆಫ್‍ನ ಎರಡು ಪಂದ್ಯಗಳು ಕೋಲ್ಕತ್ತಾದಲ್ಲಿ ನಡೆಯಲಿದೆ. ಕೋಲ್ಕತ್ತಾದಲ್ಲಿ ಇನ್ನೆರಡು ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗಾಗಿ ಪ್ಲೇ ಆಫ್ ಪಂದ್ಯಗಳು ಸರಿಯಾದ ಫಲಿತಾಂಶ ಕಾಣುವ ಸಾಧ್ಯತೆ ಕಡಿಮೆ ಇದೆ. ಇದನ್ನೂ ಓದಿ: ಗೆಲುವಿನೊಂದಿಗೆ ಹೊರನಡೆದ ಪಂಜಾಬ್ – ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದ ಹೈದರಾಬಾದ್

    ಮೊದಲನೇ ಕ್ವಾಲಿಫೈಯರ್ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಮೇ 24 ಮಂಗಳವಾರ ನಡೆಯಲಿದೆ. ಎಲಿಮಿನೇಟರ್ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮೇ 25 ಬುಧವಾರದಂದು ನಡೆಯಲಿದೆ.

    ಆ ಬಳಿಕ ಕ್ವಾಲಿಫೈಯರ್ 2ನೇ ಪಂದ್ಯ ಅಹಮದಾಬಾದ್‍ನಲ್ಲಿ ಮೇ 27 ರಂದು ಮತ್ತು ಫೈನಲ್ ಪಂದ್ಯ 29 ರಂದು ನಡೆಯಲಿದೆ. ಇದನ್ನೂ ಓದಿ: ಆಫ್ರಿಕಾ ಸರಣಿಗೆ ತಂಡ ಪ್ರಕಟ – ಟಿ20 ತಂಡಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಕ್ಯಾಪ್ಟನ್, ಡಿಕೆ ವಾಪಸ್‌, ಉಮ್ರಾನ್ ಮಲಿಕ್‍ಗೆ ಸ್ಥಾನ

    IPL 2022 SCK VS GT 4

    ಸೂಪರ್ ಓವರ್ ರಿಸಲ್ಟ್:
    ಮಳೆ ಬಂದು ನಿಗದಿತ ಸಮಯದಲ್ಲಿ ಪಂದ್ಯ ನಡೆಯದೇ ಇದ್ದರೆ ಈ ವೇಳೆ ಸೂಪರ್ ಓವರ್ ಮೂಲಕ ಪಂದ್ಯದ ಫಲಿತಾಂಶ ನಿರ್ಧರಿಸುವ ಸಾಧ್ಯತೆ ಇದೆ. ಅಲ್ಲದೇ 2 ಗಂಟೆಗಳ ಕಾಲ ಹೆಚ್ಚಿನ ಅವಧಿಯನ್ನು ಈಗಾಗಲೇ ನಿಗದಿಪಡಿಸಲಾಗಿದ್ದು, ಒಂದು ವೇಳೆ ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗದೇ ಇದ್ದರೆ 9:30ಕ್ಕೆ ಪ್ರಾರಂಭಿಸಲು ಐಪಿಎಲ್ ಆಡಳಿತ ಮಂಡಳಿ ಪ್ಲಾನ್ ಮಾಡಿಕೊಂಡಿದೆ. ಜೊತೆಗೆ ಎರಡು ತಂಡಗಳಿಗೂ ತಲಾ 5 ಓವರ್‌ಗಳ ಆಟದ ಮೂಲಕ ಫಲಿತಾಂಶ ಕಾಣುವಂತೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

  • ಕೆಂಪಿದ್ದ ಟ್ವಿಟ್ಟರ್ ಖಾತೆಯ ಪ್ರೊಫೈಲ್ ಚಿತ್ರವನ್ನು ಕಡುನೀಲಿ ಬಣ್ಣಕ್ಕೆ ಬದಲಾಯಿಸಿಕೊಂಡ ಆರ್‌ಸಿಬಿ

    ಕೆಂಪಿದ್ದ ಟ್ವಿಟ್ಟರ್ ಖಾತೆಯ ಪ್ರೊಫೈಲ್ ಚಿತ್ರವನ್ನು ಕಡುನೀಲಿ ಬಣ್ಣಕ್ಕೆ ಬದಲಾಯಿಸಿಕೊಂಡ ಆರ್‌ಸಿಬಿ

    ಮುಂಬೈ: ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೇರುವ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ತಂಡದ ಭವಿಷ್ಯ ಇಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ನಿರ್ಧಾರವಾಗಲಿದೆ.

    ಆರ್‌ಸಿಬಿ ಈಗಾಗಲೇ ತನ್ನ ಚರಣದ 14 ಪಂದ್ಯಗಳನ್ನು ಆಡಿ 8 ಜಯ, 6 ಸೋಲುಗಳನ್ನು ಅನುಭವಿಸಿದ್ದು ಪಾಯಿಂಟ್ಸ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಆದರೆ ತಂಡದ ರನ್-ರೇಟ್ ತೀರಾ ಕಡಿಮೆ ಇದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ರನ್-ರೇಟ್ ಉತ್ತಮವಾಗಿದೆ. ಒಂದು ವೇಳೆ ಇಂದು ನಡೆಯುವ ಡೆಲ್ಲಿ ಮತ್ತು ಮುಂಬೈ ಪಂದ್ಯದಲ್ಲಿ ರೋಹಿತ್ ಬಳಗವು ಸೋತರೆ ಡೆಲ್ಲಿ ತಂಡವು ರನ್ ರೆಟ್ ಆಧಾರದ ಮೇಲೆ ಪ್ಲೇ ಆಫ್‌ಗೇರಲಿದೆ. ಇದನ್ನೂ ಓದಿ: ಡೆಲ್ಲಿ ವಿರುದ್ಧದ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಐಪಿಎಲ್‍ಗೆ ಪದಾರ್ಪಣೆ?

    ಈಗಾಗಲೇ ತಮ್ಮ ತಂಡದ ಭವಿಷ್ಯ ಮುಂಬೈ ಕೈಯಲ್ಲಿರುವ ಹಿನ್ನೆಲೆ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಮುಂಬೈ ಇಂಡಿಯನ್ಸ್ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ಅಲ್ಲದೆ ಆರ್‌ಸಿಬಿಯು ಮುಂಬೈ ತಂಡವನ್ನು ಮತ್ತಷ್ಟು ಬೆಂಬಲಿಸಲು ತಮ್ಮ ಸಾಮಾಜಿಕ ಜಾಲತಾಣದ ಪ್ರೊಫೈಲ್ ಚಿತ್ರವನ್ನು ಮುಂಬೈ ತಂಡದ ಜೆರ್ಸಿಯ ಬಣ್ಣವನ್ನು ಹೋಲುವ ರೀತಿಯ ಬಣ್ಣಕ್ಕೆ ಬದಲಾಯಿಸಿಕೊಂಡಿದೆ. ಇದನ್ನೂ ಓದಿ: ಚೆನ್ನೈಗೆ ಸಿಂಹಸ್ವಪ್ನವಾದ ಅಶ್ವಿನ್ – ಸೋಲಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಹಾಲಿ ಚಾಂಪಿಯನ್

    ಈ ಕುರಿತು ವೀಡಿಯೋವೊಂದರಲ್ಲಿ ಮಾತನಾಡಿದ ಆರ್‌ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ, ನಾವು ಮೇ 21 ರಂದು ನಡೆಯುವ ಮುಂಬೈ ಮತ್ತು ಡೆಲ್ಲಿ ಪಂದ್ಯದಲ್ಲಿ ರೋಹಿತ್ ಬಳಗವನ್ನು ಬೆಂಬಲಿಸುತ್ತೇವೆ. ಕೇವಲ ಇಬ್ಬರಲ್ಲ, ಇನ್ನೂ 25 ಬೆಂಬಲಿಗರು ಸೇರಿ ಚಿಯರ್ ಅಪ್ ಮಾಡುತ್ತೇವೆ ಎಂದರು.

    IPL 2022 RCB VS SRH 5

    ಮುಂಬೈ ಮತ್ತು ಡೆಲ್ಲಿ ನಡುವಿನ ಪಂದ್ಯ ಮುಂಬೈಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದಾದರೆ, ಡೆಲ್ಲಿಗೆ ಪ್ಲೇ ಆಫ್‌ಗೆ ಏರಲು ಕಡೆಯ ಅವಕಾಶವಾಗಿದೆ. ಈ ಪಂದ್ಯದಲ್ಲಿ ಮುಂಬೈ ಗೆದ್ದರೆ, ಆರ್‌ಸಿಬಿ ಪ್ಲೇ ಆಫ್‌ಗೆ ಎಂಟ್ರಿ ಕೊಡಲಿದೆ. ಡೆಲ್ಲಿ ಗೆದ್ದರೆ, ಆರ್‌ಸಿಬಿ ಅದೃಷ್ಟದಾಟದಲ್ಲಿ ಸೋತು ಮನೆ ದಾರಿ ಹಿಡಿಯಬೇಕಾಗಿದೆ. ಹಾಗಾಗಿ ಇಂದಿನ ಪಂದ್ಯ ಮಹತ್ವ ಪಡೆದುಕೊಂಡಿದೆ.

  • ಜೈಸ್ವಾಲ್, ಚಾಹಲ್ ಆಟಕ್ಕೆ ಮಂಕಾದ ಪಂಜಾಬ್ – ಪ್ಲೇ ಆಫ್ ಸನಿಹಕ್ಕೆ ರಾಜಸ್ಥಾನ್ ರಾಯಲ್ಸ್

    ಜೈಸ್ವಾಲ್, ಚಾಹಲ್ ಆಟಕ್ಕೆ ಮಂಕಾದ ಪಂಜಾಬ್ – ಪ್ಲೇ ಆಫ್ ಸನಿಹಕ್ಕೆ ರಾಜಸ್ಥಾನ್ ರಾಯಲ್ಸ್

    ಮುಂಬೈ: ಶನಿವಾರ ನಡೆದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಆರ್ಭಟ ಮತ್ತು ಯಜುವೇಂದ್ರ ಚಾಹಲ್ ಬೌಲಿಂಗ್ ಮೋಡಿಗೆ ರಾಜಸ್ಥಾನ್ ರಾಯಲ್ಸ್ ತಂಡವು ಆರು ವಿಕೆಟ್‍ಗಳ ಅಂತರದಿಂದ ಜಯಭೇರಿ ಸಾಧಿಸಿದೆ.

    ಗೆಲುವಿನ ಹಾದಿಗೆ ಮರಳಿರುವ ರಾಜಸ್ಥಾನ್, ಪ್ಲೇ-ಆಫ್‍ನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಮಯಂಕ್ ಅಗರವಾಲ್ ಪಡೆಯ ಪ್ಲೇ-ಆಫ್ ಹಾದಿ ಇನ್ನಷ್ಟೂ ಕಠಿಣವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಂಜಾಬ್ ತಂಡವು ಜಾನಿ ಬೆಸ್ಟೊನ ಆಕರ್ಷಕ ಅರ್ಧಶತಕದ ನೆರವಿನಿಂದ (56) ತಂಡವು ಐದು ವಿಕೆಟ್ ನಷ್ಟಕ್ಕೆ 189 ರನ್‍ಗಳ ಗುರಿ ನೀಡಿತ್ತು.

    ರಾಜಸ್ಥಾನ್ ಪರ ಚಾಹಲ್ ಸ್ಪಿನ್ ಮೋಡಿ ಮಾಡಿ ಮೂರು ವಿಕೆಟ್ ಕಬಳಿಸುವ ಮೂಲಕ ಪಂಜಾಬ್‍ನ ಬ್ಯಾಟಿಂಗ್ ಕ್ರಮಾಂಕವನ್ನು ಕಟ್ಟಿ ಹಾಕಿದರು. ನಂತರದಲ್ಲಿ ಮಯಂಕ್ ಪಡೆ ನೀಡಿದ್ದ 190 ರನ್‍ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್, ಜೈಸ್ವಾಲ್‍ನ ಅರ್ಧಶತಕದ ನೆರವಿನಿಂದ ಇನ್ನೂ ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ 19.4 ಓವರ್‍ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು.

    ಇದರೊಂದಿಗೆ ರಾಜಸ್ಥಾನ ಆಡಿರುವ 11 ಪಂದ್ಯಗಳಲ್ಲಿ ಏಳನೇ ಗೆಲುವಿನೊಂದಿಗೆ ಒಟ್ಟು 14 ಅಂಕ ಸಂಪಾದಿಸಿರುವ ರಾಜಸ್ಥಾನ್, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ. ಪಂಜಾಬ್ 11 ಪಂದ್ಯಗಳಲ್ಲಿ ಆರನೇ ಸೋಲಿನ ಕಹಿಯುಂಡಿದ್ದು, ಏಳನೇ ಸ್ಥಾನದಲ್ಲಿದೆ.

    ರಾಜಸ್ಥಾನ್‍ನ ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಬಿರುಸಿನ ಆಟವಾಡಿ ನಾಲ್ಕು ಓವರ್‍ಗಳಲ್ಲೇ 46 ರನ್ ಪೇರಿಸಿ ಗೆಲುವಿಗೆ ಬುನಾದಿ ಹಾಕಿಕೊಟ್ಟರು.

    ನಾಲ್ಕನೇ ಓವರ್‍ನಲ್ಲಿ ರಬಾಡ ಬೌಲಿಂಗ್‍ಗೆ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಬಟ್ಲರ್ ಅಬ್ಬರಿಸಿದರು. ಅದೇ ಓವರ್‍ನ ಕೊನೆಯ ಎಸೆತದಲ್ಲಿ ರಬಾಡಾಗೆ ವಿಕೆಟ್ ಒಪ್ಪಿಸಿದರು. ಒಟ್ಟು 16 ಎಸೆತಗಳನ್ನು ಎದುರಿಸಿದ ಬಟ್ಲರ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್‍ನೊಂದಿಗೆ 30 ರನ್ ಗಳಿಸಿದರು. ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್‍ನಲ್ಲಿ 600 ರನ್ ಸಾಧನೆ ಮಾಡಿದರು.

    ಪವರ್ ಪ್ಲೇ ಅಂತ್ಯಕ್ಕೆ ರಾಜಸ್ಥಾನ್ ಒಂದು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತ್ತು. ನಾಯಕ ಸಂಜು ಸ್ಯಾಮ್ಸನ್ 23 ರನ್‍ಗಳ (12 ಎಸೆತ, 4 ಬೌಂಡರಿ) ಕಾಣಿಕೆ ನೀಡಿದರು. ನಂತರದಲ್ಲಿ ಜೊತೆಯಾದ ಯಶಸ್ವಿ ಜೈಸ್ವಾಲ್ ಹಾಗೂ ದೇವದತ್ತ ಪಡಿಕ್ಕಲ್ ಮೂರನೇ ವಿಕೆಟ್‍ಗೆ ಮಹತ್ವದ 50 ರನ್‍ಗಳ ಜೊತೆಯಾಟವನ್ನಾಡಿ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟರು. ಆಕರ್ಷಕ ಬ್ಯಾಟಿಂಗ್ ಮೂಲಕ ಜೈಸ್ವಾಲ್, ಕೇವಲ 33 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. ಈ ಮೂಲಕ ತಮ್ಮ ಸಾಮಥ್ರ್ಯವನ್ನು ಸಾಬೀತು ಮಾಡಿದರು.

    41 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 68 ರನ್ ಗಳಿಸಿದರು. ಅವರ ಈ ಬಿರುಸಿನ ಇನ್ನಿಂಗ್ಸ್‍ನಲ್ಲಿ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದ್ದವು. ಅಂತಿಮ 30 ಎಸೆತಗಳಲ್ಲಿ ರಾಜಸ್ಥಾನ್ ಗೆಲುವಿಗೆ 47 ರನ್ ಬೇಕಾಗಿತ್ತು. ಈ ವೇಳೆ ಬಿರುಸಿನ ಆಟವಾಡಿದ ಶಿಮ್ರಾನ್ ಹೆಟ್ಮೆಯರ್ ಆರ್‍ಆರ್‍ಗೆ ಅರ್ಹ ಗೆಲುವು ಒದಗಿಸಿಕೊಡಲು ನೆರವಾದರು. ಅವರಿಗೆ ದೇವದತ್ತ ಪಡಿಕ್ಕಲ್ ತಕ್ಕ ಸಾಥ್ ಕೊಟ್ಟರು.

    ಅಂತಿಮವಾಗಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಕೇವಲ 16 ಎಸೆತಗಳನ್ನು ಎದುರಿಸಿದ ಹೆಟ್ಮೆಯರ್ 31 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ಪಡಿಕ್ಕಲ್ 32 ಎಸೆತಗಳಲ್ಲಿ 31 ರನ್ ಗಳಿಸಿದರು. ಪಂಜಾಬ್ ಪರ ಅರ್ಶದೀಪ್ ಎರಡು ವಿಕೆಟ್ ಗಳಿಸಿದರು.

    ಈ ಮೊದಲು ಜಾನಿ ಬೆಸ್ಟೊನ ಆಕರ್ಷಕ ಅರ್ಧಶತಕದ ನೆರವಿನಿಂದ (56) ಪಂಜಾಬ್ ಕಿಂಗ್ಸ್ ತಂಡವು ಐದು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಪಂಜಾಬ್ ಉತ್ತಮ ಆರಂಭವನ್ನು ಪಡೆದುಕೊಂಡಿತ್ತು. ಜಾನಿ ಬಿರುಸಿನ ಆಟವಾಡುವ ಮೂಲಕ ಎಲ್ಲರ ಗಮನ ಸೆಳೆದರು. ಅಲ್ಲದೆ ಮೊದಲ ವಿಕೆಟ್‍ಗೆ ಶಿಖರ್ ಧವನ್ ಜೊತೆಗೆ 5.1 ಓವರ್‍ಗಳಲ್ಲಿ 47 ರನ್‍ಗಳ ಜೊತೆಯಾಟದಲ್ಲಿ ಭಾಗಿಯಾದರು. ಧವನ್ 12 ರನ್ ಗಳಿಸಿ ಔಟ್ ಆದರು. ಭಾನುಕ ರಾಜಪಕ್ಸ 27 ರನ್‍ಗಳ (18 ಎಸೆತ, 2 ಬೌಂಡರಿ, 2 ಸಿಕ್ಸರ್) ಹೊಡೆದಿದ್ದು ಯಜುವೇಂದ್ರ ಚಾಹಲ್‍ಗೆ ತಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. 15ನೇ ಓವರ್‍ನಲ್ಲಿ ನಾಯಕ ಮಯಂಕ್ ಅಗರವಾಲ್ (15) ಹಾಗೂ ಬೆಸ್ಟೊ ವಿಕೆಟ್ ಗಳಿಸಿದ ಚಾಹಲ್ ಡಬಲ್ ಆಘಾತ ನೀಡಿದರು. 40 ಎಸೆತಗಳನ್ನು ಎದುರಿಸಿದ ಬೆಸ್ಟೊ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು.

    ಕೊನೆಯ ಹಂತದಲ್ಲಿ ಜಿತೇಶ್ ಶರ್ಮಾ ಹಾಗೂ ಲಿಯಾಮ್ ಲಿವಿಂಗ್‍ಸ್ಟೋನ್ ಅರ್ಧಶತಕದ ಜೊತೆಯಾಟ ಕಟ್ಟುವ ಮೂಲಕ ಪಂಜಾಬ್ ಸವಾಲಿನ ಮೊತ್ತವನ್ನು ಪೇರಿಸಲು ನೆರವಾದರು. ಈ ಮೂಲಕ ಪಂಜಾಬ್ ಐದು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. 18 ಎಸೆತಗಳನ್ನು ಎದುರಿಸಿದ ಜಿತೇಶ್ 38 ರನ್ (18 ಎಸೆತ, 4 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ಮತ್ತೊಂದೆಡೆ ಲಿವಿಂಗ್‍ಸ್ಟೋನ್ 22 ರನ್ (14 ಎಸೆತ, 2 ಸಿಕ್ಸರ್) ಗಳಿಸಿದರು.

  • 13 ವರ್ಷಗಳಾದ್ರೂ ಕಪ್ ಗೆಲ್ಲದ ಆರ್‌ಸಿಬಿ – ಕಾರಣ ಬಿಚ್ಚಿಟ್ಟ ಡರೇನ್ ಸ್ಯಾಮಿ

    13 ವರ್ಷಗಳಾದ್ರೂ ಕಪ್ ಗೆಲ್ಲದ ಆರ್‌ಸಿಬಿ – ಕಾರಣ ಬಿಚ್ಚಿಟ್ಟ ಡರೇನ್ ಸ್ಯಾಮಿ

    ಅಬುಧಾಬಿ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವೈಫಲ್ಯ ಅನುಭವಿಸಿದ್ದು, 2020ರ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲುಂಡು ಟೂರ್ನಿಯಿಂದ ಹೊರ ನಡೆದಿದೆ. ಆರ್‌ಸಿಬಿ ತಂಡ ಐಪಿಎಲ್ ಆರಂಭವಾಗಿ 13 ವರ್ಷಗಳು ಕಳೆದರೂ ಕಪ್ ಗೆಲ್ಲದ ಹಿಂದಿನ ಕಾರಣವನ್ನು ವೆಸ್ಟ್ ಇಂಡೀಸ್ ಆಟಗಾರ ಡರೇನ್ ಸ್ಯಾಮಿ ಬಿಚ್ಚಿಟ್ಟಿದ್ದಾರೆ.

    ಬಹುವರ್ಷಗಳ ಬಳಿಕ ಆರ್‌ಸಿಬಿ ಪ್ಲೇ ಆಫ್‍ಗೆ ಪ್ರವೇಶ ಪಡೆದರೂ ಬೆಂಗಳೂರು ಆಟಗಾರರ ಕಪ್ ಗೆಲ್ಲುವ ಕನಸು ಈಡೇರಲಿಲ್ಲ. ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‍ರೈಸರ್ಸ್ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ನಿರಸ ಪ್ರದರ್ಶನ ತೋರಿದ ಆರ್‌ಸಿಬಿ ಸೋಲುಂಡಿತ್ತು.

    ಐಪಿಎಲ್ ಟೂರ್ನಿಗಳಲ್ಲಿ ಬೆಂಗಳೂರು ತಂಡ ಪ್ರದರ್ಶನವನ್ನು ಗಮನಿಸಿದರೆ ತಂಡದ ಬೌಲಿಂಗ್ ಪಡೆಯೇ ಹೆಚ್ಚು ಸಮಸ್ಯೆಯಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಡರೇನ್ ಸ್ಯಾಮಿ, ಬ್ಯಾಟ್ಸ್ ಮನ್‍ಗಳು ಪಂದ್ಯಗಳನ್ನು ಗೆಲ್ಲಿಸಿ ಕೊಡುತ್ತಾರೆ. ಆದರೆ ಬೌಲಿಂಗ್ ಪಡೆ ಟೂರ್ನಿಯನ್ನೇ ಗೆಲ್ಲಿಸುತ್ತದೆ. ಇದು ಬದಲಾವಣೆಯಾಗದ ಹೊರತು ಕಪ್ ಗೆಲ್ಲಲು ಆಗಲ್ಲ ಎಂದು ಟ್ವೀಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ವರ್ಷದ ಆರ್‌ಸಿಬಿ ಬೌಲಿಂಗ್ ಪ್ರದರ್ಶನವನ್ನು ಗಮನಿಸುವುದಾದರೆ, ಯಜುವೇಂದ್ರ ಚಹಲ್ ಮಾತ್ರ ಸ್ಥಿರ ಪ್ರದರ್ಶನ ನೀಡಿದ್ದಾರೆ. ಪ್ರತಿ ಪಂದ್ಯದಲ್ಲೂ ತಂಡಕ್ಕಾಗಿ ವಿಕೆಟ್ ಪಡೆದ ಚಹಲ್, ಆವೃತ್ತಿಯ ಟಾಪ್ ವಿಕೆಟ್ ಕಿತ್ತ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದಿದ್ದಾರೆ. ಚಹಲ್ 15 ಪಂದ್ಯಗಳಿಂದ 21 ವಿಕೆಟ್ ಉರುಳಿಸಿದ್ದಾರೆ. ಉಳಿದಂತೆ ಬೇರೆ ಯಾವುದೇ ಬೌಲರ್ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಯುವ ವೇಗಿ ನವದೀಪ್ ಸೈನಿ ಕೂಡ ನಿರಾಸೆ ಮೂಡಿಸಿದ್ದಾರೆ.

    ಸತತ ನಾಲ್ಕು ಪಂದ್ಯ ಸೋತರೂ ಪ್ಲೇ ಆಫ್ ಪ್ರವೇಶಿಸಿದ್ದ ಆರ್‌ಸಿಬಿ ನಿರ್ಣಾಯಕ ಪಂದ್ಯದಲ್ಲಿಯೂ ಸೋತು ಟೂರ್ನಿಯಿಂದ ಹೊರ ನಡೆದಿದೆ. ನಿನ್ನೆಯ ಪಂದ್ಯದಲ್ಲಿ ಟಾಸ್ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತ್ತು. ಸುಲಭದ ಗುರಿ ಬೆನ್ನತ್ತಿದ್ದ ಸನ್‍ರೈಸರ್ಸ್ ಕೇನ್ ವಿಲಿಯಮ್ಸನ್‍ರ ಅರ್ಧ ಶತಕ ನೆರವಿನಿಂದ ಇನ್ನಿಂಗ್ಸ್ ನ ಅಂತಿಮ ಓವರಿನಲ್ಲಿ ಗೆಲುವು ಪಡೆಯಿತು. ಆ ಮೂಲಕ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆಯಿತು. ಭಾನುವಾರ 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಡೆಲ್ಲಿ ಮತ್ತು ಸನ್‍ರೈಸರ್ಸ್ ನಡುವೆ ಹಣಾಹಣಿ ನಡೆಯಲಿದೆ.

  • ಪ್ಲೇ ಆಫ್ ನಿಂದ ದೂರ ಸರಿಯುತ್ತಿರುವ ಆರ್‌ಸಿಬಿ – ವಾರ್ನರ್ ಪಡೆಗೆ 5 ವಿಕೆಟ್‍ಗಳ ಜಯ

    ಪ್ಲೇ ಆಫ್ ನಿಂದ ದೂರ ಸರಿಯುತ್ತಿರುವ ಆರ್‌ಸಿಬಿ – ವಾರ್ನರ್ ಪಡೆಗೆ 5 ವಿಕೆಟ್‍ಗಳ ಜಯ

    – ಮುಂದಿನ ಪಂದ್ಯದಲ್ಲಿ ಮಾಡು ಇಲ್ಲವೇ ಮಡಿ ಘಟ್ಟಕ್ಕೆ ತಲುಪಿದ ಕೊಹ್ಲಿ ಬಾಯ್ಸ್
    – ಕೊನೆಯಲ್ಲಿ ಜೇಸನ್ ಹೋಲ್ಡರ್ ಸ್ಫೋಟಕ ಆಟ

    ಶಾರ್ಜ್: ಇಂದು ನಡೆದ ಸಖತ್ ಶನಿವಾರದ ಎರಡನೇ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿದೆ. ಈ ಮೂಲಕ ವಾರ್ನರ್ ಪಡೆ ಪ್ಲೇ ಆಫ್ ಸನಿಹಕ್ಕೆ ಹೋಗಿದ್ದರೆ, ಕೊಹ್ಲಿ ಪಡೆ ಪ್ಲೇ ಆಫ್ ಹಾದಿಯನ್ನು ಕಠಿಣ ಮಾಡಿಕೊಂಡಿದೆ.

    ಇಂದು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಮಂದಗತಿಯ ಬ್ಯಾಟಿಂಗ್‍ಗೆ ಮುಂದಾಯ್ತು. ಪರಿಣಾಮ ಸಂದೀಪ್ ಶರ್ಮಾ ಮತ್ತು ರಶೀದ್ ಖಾನ್ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ ಕೇವಲ 120 ರನ್‍ಗಳನ್ನು ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಆರಂಭದಲ್ಲಿ ನಾಯಕ ವಾರ್ನರ್ ವಿಕೆಟ್ ಕಳೆದುಕೊಂಡರು. ನಂತರ ಭರ್ಜರಿ ಪ್ರದರ್ಶನ ತೋರಿ ಐದು ವಿಕೆಟ್‍ಗಳಿಂದ ಗೆದ್ದು ಬೀಗಿದೆ.

    ಪ್ಲೇ ಆಫ್
    ಸತತವಾಗಿ ಎರಡು ಸೋಲನ್ನು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಾದಿಯನ್ನು ಕಠಿಣ ಮಾಡಿಕೊಂಡಿದೆ. ಈಗ 13 ಪಂದ್ಯಗಳಿಂದ 14 ಅಂಕಗಳಿಸಿರುವ ಬೆಂಗಳೂರು ಮುಂದಿನ ಪಂದ್ಯವನ್ನು ಸೋಮವಾರ ಡೆಲ್ಲಿ ವಿರುದ್ಧ ಆಡಲಿದೆ. ಆದರೆ ಡೆಲ್ಲಿ ಕೂಡ 13 ಪಂದ್ಯಗಳನ್ನು ಆಡಿ 14 ಅಂಕ ಗಳಿಸಿದೆ. ಹೀಗಾಗಿ ಈ ಎರಡು ತಂಡಗಳಿಗೂ ಸೋಮವಾರದ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಈ ಮ್ಯಾಚಿನಲ್ಲಿ ಗೆದ್ದವರು ಸುಲಭವಾಗಿ ಪ್ಲೇ ಆಫ್ ತಲುಪಲಿದ್ದಾರೆ. ಸೋತವರ ಭವಿಷ್ಯ ನೆಟ್ ರನ್‍ರೇಟ್ ಆಧಾರದ ಮೇಲೆ ನಿರ್ಧಾವಾಗಲಿದೆ.

    121 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಲು ಹೊರಟ ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕೆ ಬೆಂಗಳೂರು ತಂಡದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರು ಶಾಕ್ ನೀಡಿದರು. ಎರಡನೇ ಓವರಿನಲ್ಲೇ ನಾಯಕ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡಿದರು. ನಂತರ ಜೊತೆಯಾದ ವೃದ್ಧಿಮಾನ್ ಸಹಾ ಮತ್ತು ಮನೀಶ್ ಪಾಂಡೆ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಹೀಗಾಗಿ ಪವರ್ ಪ್ಲೇ ಮುಕ್ತಾಯಕ್ಕೆ ಹೈದರಾಬಾದ್ ತಂಡ ಒಂದು ವಿಕೆಟ್ ಕಳೆದುಕೊಂಡು 58 ರನ್ ಗಳಿಸಿತು.

    ಆದರೆ ನಂತರ ಬೌಲಿಂಗ್‍ಗೆ ಬಂದ ಯುಜ್ವೇಂದ್ರ ಚಹಲ್ ಅವರು 19 ಬಾಲಿಗೆ 26 ರನ್ ಸಿಡಿಸಿ ಸ್ಫೋಟಕವಾಗಿ ಆಡುತ್ತಿದ್ದ ಕನ್ನಡಿಗ ಮನೀಶ್ ಪಾಂಡೆ ಅವರನ್ನು ಔಟ್ ಮಾಡಿದರು. ನಂತರ 32 ಬಾಲಿಗೆ 39 ರನ್ ಗಳಿಸಿದ್ದ ವೃದ್ಧಿಮಾನ್ ಸಹಾ ಅವರು ಯುಜ್ವೇಂದ್ರ ಚಹಲ್ ಅವರ ಬೌಲಿಂಗ್‍ನಲ್ಲಿ ಎಬಿ ಡಿವಿಲಿಯರ್ಸ್ ಹೊಡೆದ ಅದ್ಭುತ ಸ್ಟಂಪ್‍ಗೆ ಬಲಿಯಾದರು. ಇದಾದ ನಂತರ ಇಸುರು ಉದಾನಾ ಅವರು ಕೇನ್ ವಿಲಿಯಮ್ಸನ್ ಅವರನ್ನು ಔಟ್ ಮಾಡಿದರು.

    ನಂತರ ಕ್ರೀಸಿಗಿಳಿದ ಜೇಸನ್ ಹೋಲ್ಡರ್ ಅವರು ಸಿಕ್ಸ್ ಫೋರುಗಳ ಸುರಿಮಳೆಗೈದರು. ಈ ನಡುವೆ ಅಭಿಷೇಕ್ ಶರ್ಮಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟ್ ಆದರು. ಈ ನಂತರ ಬಂದ ಅಬ್ದುಲ್ ಸಮದ್ ಜೇಸನ್ ಹೋಲ್ಡರ್ ಜೋಡಿ ಹೈದರಾಬಾದ್ ತಂಡವನ್ನು ಗೆಲುವಿನ ದಡ ಸೇರಿಸಿತು. ಇದರಲ್ಲಿ 10 ಬಾಲ್ ಆಡಿದ ಜೇಸನ್ ಹೋಲ್ಡರ್ ಮೂರು ಬೌಂಡರಿ ಮತ್ತು ಒಂದು ಫೋರ್ ಸಮೇತ 26 ರನ್ ಸಿಡಿಸಿ ಮಿಂಚಿದರು.