Tag: ಪ್ಲಾಸ್ಟಿಕ್ ಫ್ಯಾಕ್ಟರಿ

  • ಕೆಲಸ ಮಾಡುವಾಗ ತುಂಡಾಯ್ತು ಕಾರ್ಮಿಕನ ಬೆರಳುಗಳು- ಚಿಕಿತ್ಸೆಗೆ ಹಣ ಕೇಳಿದಕ್ಕೆ ಕೊಲೆ ಬೆದರಿಕೆ

    ಕೆಲಸ ಮಾಡುವಾಗ ತುಂಡಾಯ್ತು ಕಾರ್ಮಿಕನ ಬೆರಳುಗಳು- ಚಿಕಿತ್ಸೆಗೆ ಹಣ ಕೇಳಿದಕ್ಕೆ ಕೊಲೆ ಬೆದರಿಕೆ

    ಬೆಂಗಳೂರು: ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಬರಿಗೈನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬನ ಬೆರಳುಗಳು ಮಷಿನ್‍ಗೆ ಸಿಲುಕಿ ತುಂಡಾದ ಘಟನೆ ಕಾಮಾಕ್ಷಿಪಾಳ್ಯದಲ್ಲಿ ಇಂದು ನಡೆದಿದೆ.

    ಕಾಮಾಕ್ಷಿಪಾಳ್ಯದ ತಿಮ್ಮೇಗೌಡ ಎಂಬ ವ್ಯಕ್ತಿಗೆ ಸೇರಿದ ಪ್ಲ್ಯಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಅನಂತ್ ಬರ್ಮನ್ ಎಂಬ ಯುವಕ ನಾಲ್ಕು ಬೆರಳಗಳನ್ನು ಕಳೆದುಕೊಂಡಿದ್ದಾನೆ. ಈ ಫ್ಯಾಕ್ಟರಿಯಲ್ಲಿ ಕಾರ್ಮಿಕರಿಗೆ ತಿಮ್ಮೇಗೌಡ ಸುರಕ್ಷತಾ ವಸ್ತ್ರ ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಅನಂತ್ ಬರಿಗೈಯಲ್ಲಿ ಪ್ಲಾಸ್ಟಿಕ್ ಅನ್ನು ಮೆಷಿನ್‍ಗೆ ಹಾಕುವ ವೇಳೆ ಆತನ ಬೆರಳುಗಳು ಸಿಲುಕಿ ತುಂಡಾಗಿದೆ. ಕೂಡಲೆ ಗಾಯಗೊಂಡ ಅನಂತ್‍ನನ್ನು ಸ್ಥಳೀಯ ಆಸ್ಪತ್ರೆಗೆ ಸಹೋದರ ಹೇಮಂತ್ ದಾಖಲಿಸಿದ್ದಾನೆ.

    ಈ ಸಂದರ್ಭದಲ್ಲಿ ಸಹೋದರನ ಚಿಕಿತ್ಸಾ ವೆಚ್ಚಕ್ಕಾಗಿ ಹೇಮಂತ್ ಮಾಲೀಕನ ಬಳಿ ಹಣ ಕೇಳಲು ಹೋದಾಗ, ಮಾಲೀಕ ಆತನಿಗೆ ಬಾಯಿಗೆ ಬಂದಂತೆ ಬೈದು, ಚಿಕಿತ್ಸಾ ವೆಚ್ಚ ಭರಿಸಲು ನಿರಾಕರಿಸಿದ್ದಾನೆ. ಬಳಿಕ ಮಾಲೀಕ ಹಾಗೂ ಹೇಮಂತ್ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಚಿಕಿತ್ಸಾ ವೆಚ್ಚ ಭರಿಸದಿದ್ದರೆ ಪೊಲೀಸರಿಗೆ ದೂರು ನೀಡೋದಾಗಿ ಹೇಮಂತ್ ಹೇಳಿದ್ದಾರೆ. ಈ ವೇಳೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಮಾಲೀಕ ಬೆದರಿಕೆ ಹಾಕಿದ್ದಾನೆ ಎಂದು ಹೇಮಂತ್ ಆರೋಪಿಸಿದ್ದಾರೆ.

    ಇದ್ಯಾವುದಕ್ಕು ಹೆದರದ ಹೇಮಂತ್ ನ್ಯಾಯ ಕೊಡಿಸುವಂತೆ ಕಾಮಾಕ್ಷಿಪಾಳ್ಯದ ಪೊಲೀಸ್ ಠಾಣೆಯಲ್ಲಿ ತಿಮ್ಮೇಗೌಡ ವಿರುದ್ಧ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ- ಕೋಟ್ಯಂತರ ಮೌಲ್ಯದ ವಸ್ತುಗಳು ಭಸ್ಮ

    ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ- ಕೋಟ್ಯಂತರ ಮೌಲ್ಯದ ವಸ್ತುಗಳು ಭಸ್ಮ

    ಹಾಸನ: ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಬೆಂಕಿ ಹೊತ್ತಿಕೊಂಡು ಕೋಟ್ಯಂತರ ಮೌಲ್ಯದ ವಸ್ತುಗಳು ನಷ್ಟವಾಗಿರುವ ಘಟನೆ ಹಾಸನದ ಕೈಗಾರಿಕಾ ಬಡಾವಣೆಯಲ್ಲಿ ಸಂಭವಿಸಿದೆ.

    ಈ ಪ್ಲಾಸ್ಟಿಕ್ ಫ್ಯಾಕ್ಟರಿ ಹಾಸನ ನಿವಾಸಿ ಪೈರೋಜ್ ಎಂಬವರಿಗೆ ಸೇರಿದೆ. ತಡರಾತ್ರಿ 1 ಗಂಟೆಗೆ ಈ ಅವಘಡ ಸಂಭವಿಸಿದೆ. ಪ್ಲಾಸ್ಟಿಕ್ ಉತ್ಪನ್ನಗಳ ಖಾಸಗಿ ಘಟಕವಾಗಿದ್ದು, ಕಚ್ಚಾ ವಸ್ತುಗಳಾದ ಪೇಪರ್ ಮತ್ತು ಪ್ಲಾಸ್ಟಿಕ್ ವಸ್ತುಗಳು ಭಸ್ಮವಾಗಿವೆ. ಕಾರ್ಖಾನೆ ಒಳಗೆ ನಿಂತಿದ್ದ ಲಾರಿಯಿಂದ ಶಾರ್ಟ್ ರ್ಸಕ್ಯೂಟ್ ಆಗಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

    ಕಾರ್ಖಾನೆ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಸ್ಥಳಕ್ಕೆ 5 ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ತಡರಾತ್ರಿ 1 ಗಂಟೆಯಿಂದ ಮುಂಜಾನೆವರೆಗೂ ಕಾರ್ಯಾಚರಣೆ ನಡೆಸಿದ್ದಾರೆ. ಹಾಸನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv