Tag: ಪ್ರೊ.ಕೆ.ಎಸ್.ರಂಗಪ್ಪ

  • ಸಿದ್ದು ಮತ್ತೆ ಯಾಕೆ ಸಿಎಂ ಆಗಬಾರದು – ಹೆಚ್‍ಡಿಡಿ ಸಂಬಂಧಿ ರಂಗಪ್ಪ ಪ್ರಶ್ನೆ

    ಸಿದ್ದು ಮತ್ತೆ ಯಾಕೆ ಸಿಎಂ ಆಗಬಾರದು – ಹೆಚ್‍ಡಿಡಿ ಸಂಬಂಧಿ ರಂಗಪ್ಪ ಪ್ರಶ್ನೆ

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ, ಒಳ್ಳೆ ಕೆಲಸ ಮಾಡುವ ವ್ಯಕ್ತಿ ಮತ್ತೆ ಸಿಎಂ ಯಾಕೆ ಆಗಬಾರದು ಎಂದು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ ಅವರ ಸಂಬಂಧಿ ಪ್ರೊ.ಕೆ.ಎಸ್. ರಂಗಪ್ಪ ಪ್ರಶ್ನೆ ಮಾಡಿದ್ದಾರೆ.

    ಇಂದು ಸಿದ್ದರಾಮಯ್ಯ ಅವರು ರಂಗಪ್ಪ ಅವರ ಮನೆಗೆ ಭೇಟಿ ನೀಡಿದ ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಮತ್ತು ಸಿದ್ದರಾಮಯ್ಯ ಬಹಳ ವರ್ಷದ ಸ್ನೇಹಿತರು, ಮನೆಗೆ ತಿಂಡಿಗೆ ಆಹ್ವಾನ ಮಾಡಿದ್ದೆ ಬಂದಿದ್ದರು. ಅವರಿಗೆ ಅಪಾರ ಜ್ಞಾನ ಮತ್ತು ಆಡಳಿತ ಚತರುತೆ ಇದೆ. ಅವರು ಮತ್ತೆ ಸಿಎಂ ಆಗಬೇಕು ಎಂದು ಹೇಳಿದರು.

    ಇದೇ ವೇಳೆ ಜಿಡಿಎಸ್ ಪಕ್ಷದ ಬಗ್ಗೆ ಮಾತನಾಡಿದ ರಂಗಪ್ಪ, ನಾನು ಸೋತ ಮೇಲೆ ಜೆಡಿಎಸ್‍ಗೆ ನನ್ನ ಅವಶ್ಯಕತೆ ಇಲ್ಲ. ನನ್ನ ಅವಶ್ಯಕತೆ ಇಲ್ಲದ ಮೇಲೆ ಅಲ್ಲಿಗೆ ಹೋಗಿ ಏನೂ ಮಾಡಲಿ? ನನ್ನನ್ನು ಯಾವುದೇ ಸಭೆಗೂ ಅವರು ಕರೆದಿಲ್ಲ. ಕರೆಯದಿದ್ದ ಮೇಲೆ ಹೋಗುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

    ಈ ವೇಳೆ ಈ ವಿಚಾರದ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, ನಾನು ರಂಗಪ್ಪ ಒಳ್ಳೆಯ ಸ್ನೇಹಿತರು, ಅವರು ತಿಂಡಿಗೆ ಬಾ ಎಂದು ಕರೆದಿದ್ದರು. ಅದಕ್ಕೆ ಬಂದಿದ್ದೆ. ಈ ಭೇಟಿಯಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದ್ದರು.

  • ಸಿಎಂ ಎಚ್‍ಡಿಕೆ ಸಂಬಂಧಿ, ಮೈಸೂರು ವಿವಿ ಕುಲಪತಿಗೆ ಸಂಕಷ್ಟ!

    ಸಿಎಂ ಎಚ್‍ಡಿಕೆ ಸಂಬಂಧಿ, ಮೈಸೂರು ವಿವಿ ಕುಲಪತಿಗೆ ಸಂಕಷ್ಟ!

    ಮೈಸೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸಂಬಂಧಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಸಲಹೆಗಾರನಾಗಲು ಸಿದ್ಧರಾಗಿರುವ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ರಂಗಪ್ಪ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದ ವೇಳೆ 2016 ರಲ್ಲಿ ನಡೆದ 124 ಬೋಧಕೇತರ ವರ್ಗದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಅದರಲ್ಲಿ ಪ್ರೊ.ಕೆ.ಎಸ್. ರಂಗಪ್ಪ ಎಲ್ಲಾ ನಿಯಾಮಾವಳಿಗಳನ್ನು ಗಾಳಿಗೆ ತೂರಿದ್ದಾರೆ. ಅವರ ಮೇಲೆ ಕ್ರಮ ಕೈಗೊಂಡು ಶಿಕ್ಷಿಸಿ ಎಂದು ಡಾ.ಎಂ.ಆರ್. ನಿಂಬಾಳ್ಕಾರ್ ನೇತೃತ್ವದ ತನಿಖಾ ಸಮಿತಿಯೂ ರಾಜ್ಯಪಾಲರಿಗೆ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

    ಈ ವರದಿಯಲ್ಲಿ ತಕ್ಷಣವೇ ಅಕ್ರಮವಾಗಿ ನೇಮಕಗೊಂಡಿರುವ 124 ಬೋಧಕೇತರ ಹುದ್ದೆ ರದ್ದು ಮಾಡಬೇಕು ಹಾಗೂ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಾಜಣ್ಣ ಕೂಡ ತಪ್ಪು ಮಾಡಿದ್ದು, ಅವರನ್ನು ಶಿಕ್ಷಿಸಿ ಎಂದು ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸಿನ ಅನುಸಾರ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ವಿ.ಆರ್. ರಮೇಶ್ ಜೂನ್ 18 ರಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ತನಿಖಾ ವರದಿ ಆಧರಿಸಿ ಇನ್ನೂ 30 ದಿನದ ಒಳಗೆ ಕ್ರಮ ಜರುಗಿಸಿ 45 ದಿನದ ಒಳಗೆ ವರದಿ ಕಳುಹಿಸಿ ಎಂದು ಸೂಚಿಸಿದ್ದಾರೆ.

    ಈ ಪತ್ರ ಆಧರಿಸಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೈಸೂರು ವಿವಿಗೆ ಪತ್ರ ಬರೆದು ತನಿಖಾ ವರದಿ ಆಧರಿಸಿ ಭ್ರಷ್ಟಾಚಾರದಲ್ಲಿ ಭಾಗವಹಿಸಿರುವ ಎಲ್ಲರನ್ನು ಗುರುತಿಸಿ ಒಂದು ತಿಂಗಳ ಒಳಗೆ ಎಲ್ಲರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಜೊತೆಗೆ ಅಕ್ರಮ ನೇಮಕಾತಿಗಳನ್ನು ರದ್ದು ಗೊಳಿಸಬೇಕು. ಈ ಎಲ್ಲಾ ಕ್ರಮ ಕೈಗೊಂಡು ಒಂದು ತಿಂಗಳ ಒಳಗೆ ಸರ್ಕಾರಕ್ಕೆ ವರದಿ ನೀಡಬೇಕೆಂದು ಸೂಚಿಸಿದ್ದಾರೆ. ಆದ್ದರಿಂದ ಪ್ರೊ. ರಂಗಪ್ಪಗೆ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ತನಿಖಾ ವರದಿಯಲ್ಲಿ ಪ್ರೊ. ರಂಗಪ್ಪ ತಪ್ಪು ಮಾಡಿರುವುದು ಸ್ಪಷ್ಟವಾಗಿ ನಮೂದಾಗಿರುವ ಕಾರಣ ರಂಗಪ್ಪ ಈ ಅಕ್ರಮದ ಸುಳಿಯಿಂದ ಬಚಾವಾಗುವುದು ಕಷ್ಟವಾಗಿದೆ.

  • ನಾನು ದೇವೇಗೌಡರ ಸಂಬಂಧಿ ಅಂತಾ ಉನ್ನತ ಹುದ್ದೆ ಸಿಗುತ್ತಿಲ್ಲ: ಪ್ರೊ. ರಂಗಪ್ಪ

    ನಾನು ದೇವೇಗೌಡರ ಸಂಬಂಧಿ ಅಂತಾ ಉನ್ನತ ಹುದ್ದೆ ಸಿಗುತ್ತಿಲ್ಲ: ಪ್ರೊ. ರಂಗಪ್ಪ

    ಮೈಸೂರು: ದೇವೇಗೌಡರ ಸಂಬಂಧಿಯೊಬ್ಬರಿಗೆ ಈಗಾಗಲೇ ಸಚಿವ ಸ್ಥಾನ ನೀಡಿದ ವಿಚಾರ ಭಾರೀ ಚರ್ಚೆಯಾಗಿತ್ತು. ಇದರ ಬೆನ್ನಲ್ಲೇ ಸದ್ಯ ಮತ್ತೊಬ್ಬರಿಗೆ ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆ ಸಿಗುವ ಸಾಧ್ಯತೆಯಿದೆ.

    ಹೌದು. ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಅವರನ್ನು ಉನ್ನತ ಶಿಕ್ಷಣ ಇಲಾಖೆಯ ಸಲಹೆಗಾರರನ್ನಾಗಿ ನೇಮಕ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ ಎನ್ನುವ ವಿಚಾರ ಈಗ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಕೆ.ಎಸ್.ರಂಗಪ್ಪ, ನನಗೆ ಉನ್ನತ ಶಿಕ್ಷಣ ಇಲಾಖೆ ಸಲಹೆಗಾರ ಹುದ್ದೆ ಸಿಕ್ಕಿದೆ ಎಂಬುದು ಗೊತ್ತಿಲ್ಲ. ಒಂದು ವೇಳೆ ಸಿಎಂ ಆ ಹುದ್ದೆ ನೀಡಿದರೆ ನಾನು ಸಂತೋಷವಾಗಿ ಒಪ್ಪಿಕೊಳ್ಳುತ್ತೇನೆ. ದೇವೇಗೌಡರ ಸಂಬಂಧಿ ಎನ್ನುವ ಕಾರಣಕ್ಕೆ ನನಗೆ ಉನ್ನತ ಶಿಕ್ಷಣ ಇಲಾಖೆಯ ಸಲಹೆಗಾರ ಹುದ್ದೆ ಸಿಗುತ್ತಿಲ್ಲ. ನನ್ನ ಶೈಕ್ಷಣಿಕ ಸಾಧನೆ ನೋಡಿ ಹುದ್ದೆ ಸಿಗಬಹುದು ಎಂದರು.

    ನಾನು ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಹಾಗಂತ ನಾನೇನೂ ಪ್ರಧಾನ ಮಂತ್ರಿಗಳ ಸಂಬಂಧಿಯಲ್ಲ. ನಾನು ದೇವೇಗೌಡರ ಸಂಬಂಧಿ ಆಗಿರುವುದು ನಮ್ಮ ವೈಯಕ್ತಿಕ ಜೀವನದ ವಿಚಾರ. ಕೇವಲ ಸಂಬಂಧಿ ಎನ್ನುವ ಕಾರಣಕ್ಕೆ ಇಂತಹ ದೊಡ್ಡ ಹುದ್ದೆ ಯಾರಾದರೂ ಕೊಡೋಕೆ ಸಾಧ್ಯವೇ ಎಂದು ಪ್ರಶ್ನಿಸಿದರು.

    ನಾನು ಉನ್ನತ ಶಿಕ್ಷಣ ಇಲಾಖೆ ಸಲಹೆಗಾರನಾಗಿ ನೇಮಕ ಆಗುತ್ತೇನೆ ಅಂತಾ ಸಚಿವ ಜಿ.ಟಿ.ದೇವೇಗೌಡರು ಇಲಾಖೆ ಸ್ವೀಕರಿಸಲಿಲ್ಲ ಎನ್ನುವುದಕ್ಕೆ ಸತ್ಯಕ್ಕೆ ದೂರವಾದ ವಿಚಾರ. ನನಗೆ ಹುದ್ದೆ ಸಿಕ್ಕರೆ ಹೇಗೆ ಕಾರ್ಯ ನಿರ್ವಹಿಸುತ್ತೇನೆ ನೋಡಿ ಎಂದು ರಂಗಪ್ಪ ಹೇಳಿದರು.