Tag: ಪ್ರೇಮ ಪತ್ರ

  • Valentines Day; ಮೊದಲ ಪ್ರೇಮ ಪತ್ರ ಬರೆದವರು ಯಾರು ಗೊತ್ತಾ?

    Valentines Day; ಮೊದಲ ಪ್ರೇಮ ಪತ್ರ ಬರೆದವರು ಯಾರು ಗೊತ್ತಾ?

    ಫೆಬ್ರವರಿ ಅಂದ್ರೆ ಮೊದಲು ನೆನಪಾಗುವುದೇ ಪ್ರೇಮಿಗಳ ದಿನ. ಫೆ. 7ರಿಂದ 14ರವರೆಗೆ ಪ್ರೇಮಿಗಳ ದಿನಾಚರಣೆ ಆಚರಿಸಲಾಗುತ್ತದೆ. ರೋಸ್ ಡೇ ಇಂದ ಪ್ರಾರಂಭವಾಗುವ ಪ್ರೇಮಿಗಳ ದಿನಾಚರಣೆ ವ್ಯಾಲೆಂಟೈನ್ಸ್ ಡೇಯಲ್ಲಿ ಕೊನೆಗೊಳ್ಳುತ್ತದೆ. ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಗಳು ತಮ್ಮ ಪ್ರೇಯಸಿಗೆ ಅಥವಾ ಪ್ರಿಯಕರನಿಗೆ ವಿಭಿನ್ನವಾದ ರೀತಿಯಲ್ಲಿ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ.

    ಪ್ರೀತಿ ಒಂದು ಮಧುರವಾದ ಭಾವನೆ, ಪ್ರೀತಿ ಇಲ್ಲದೆ ಬಹುಶಃ ಜಗತ್ತಿನಲ್ಲಿ ಯಾರೂ ಬದುಕಲು ಸಾಧ್ಯವೇ ಇಲ್ಲ. ನಿಮ್ಮಲ್ಲಿ ಇರುವ ಪ್ರೀತಿಯ ಭಾವನೆ ನಿಮ್ಮ ಸಂಗಾತಿಯಲ್ಲಿ ಕೂಡ ಇರಬೇಕು, ಆಗಲೇ ಅದು ಪರಿಶುದ್ಧ ಪ್ರೀತಿ ಎನಿಸಿಕೊಳ್ಳುತ್ತದೆ. ಈಗಿನ ಪೀಳಿಗೆಯ ಯುವಕರು ಅಥವಾ ಯುವತಿಯರು ಸೋಶಿಯಲ್ ಮೀಡಿಯಾದಲ್ಲೇ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ. ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಾಪ್ ನಲ್ಲಿ ಮೆಸೇಜ್ ಮೂಲಕ ಪ್ರಪೋಸ್ ಮಾಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

    ಹಿಂದಿನ ಕಾಲದಲ್ಲಿ ಈಗಿನ ತರ ಆಂಡ್ರಾಯ್ಡ್ ಮೊಬೈಲ್ ಅಥವಾ ಸಾಮಾಜಿಕ ಜಾಲತಾಣಗಳು ಇರ್ಲಿಲ್ಲ. ಆಗಿನ ಕಾಲದಲ್ಲಿ ಪ್ರೇಮ ಪತ್ರ ಬರೆಯುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಹಾಗಿದ್ದರೆ ಮೊದಲ ಪ್ರೇಮ ಪತ್ರ ಬರೆದವರು ಯಾರು ಎಂಬುದು ನಿಮಗೆ ಗೊತ್ತಾ? ಇಲ್ಲಾಂದ್ರೆ ಇಂದು ನಾವು ತಿಳಿಸಿಕೊಡುತ್ತೇವೆ.

    ಮೊದಲ ಪ್ರೇಮ ಪತ್ರಗಳ ಬಗ್ಗೆ ಮಾತನಾಡಿದಾಗ, ಅವುಗಳು ಭಾರತೀಯ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಎನ್ನುವುದು ತಿಳಿದುಬರುತ್ತದೆ. ಹೌದು, ಮೊದಲ ಪ್ರೇಮ ಪತ್ರವನ್ನು ಸುಮಾರು 2,000 ವರ್ಷಗಳ ಹಿಂದೆ ಬರೆಯಲಾಗಿದೆ ಎಂದು ಉಲ್ಲೇಖಗಳು ತಿಳಿಸಿವೆ.

    ವಿದರ್ಭ ರಾಜಕುಮಾರಿ ರುಕ್ಮಿಣಿಯು ಶ್ರೀಕೃಷ್ಣನಿಗೆ ಮೊದಲ ಪ್ರೇಮ ಪತ್ರ ಬರೆದಳು ಎನ್ನಲಾಗಿದೆ. ಮಹರ್ಷಿ ವೇದವ್ಯಾಸರು 7 ಸುಂದರ ಶ್ಲೋಕಗಳೊಂದಿಗೆ ಬರೆದ ಶ್ರೀಮದ್ ಭಗವದ್ಗೀತೆಯ ಸರ್ಗದ 10 ನೇ ಅಧ್ಯಾಯದ, 52ರ ಭಾಗದಲ್ಲಿ ಇದು ಉಲ್ಲೇಖವಾಗಿದೆ. ಅದರಂತೆ ರುಕ್ಮಿಣಿಯು ತನ್ನ ಸ್ನೇಹಿತೆ ಸುನಂದಾ ಮೂಲಕ ಈ ಪ್ರೇಮ ಪತ್ರವನ್ನು ಶ್ರೀಕೃಷ್ಣನಿಗೆ ಕಳುಹಿಸಿದಳು.

    ಪುರಾಣದ ಕಥೆಯ ಪ್ರಕಾರ, ರುಕ್ಮಿಣಿ ಶ್ರೀ ಕೃಷ್ಣನ ಗುಣಗಳು ಮತ್ತು ಧೈರ್ಯದ ಬಗ್ಗೆ ತಿಳಿದುಕೊಂಡು ಅವನನ್ನು ಪ್ರೀತಿಸಲು ಪ್ರಾರಂಭಿಸಿದಳು. ಕೃಷ್ಣನನ್ನೇ ಮದುವೆಯಾಗಬೇಕೆಂದು ಕೂಡ ಬಯಸಿದ್ದಳು. ಆದರೆ, ರುಕ್ಮಿಣಿಯ ಸಹೋದರ ಅವಳನ್ನು ತನ್ನ ಸ್ನೇಹಿತ ಶಿಶುಪಾಲನಿಗೆ ಕೊಟ್ಟು ಮದುವೆ ಮಾಡಲು ಬಯಸಿದನು. ಇದು ರುಕ್ಮಿಣಿಗೆ ಇಷ್ಟವಿರಲಿಲ್ಲ. ಅದಕ್ಕಾಗಿಯೇ ರುಕ್ಮಿಣಿ ಶ್ರೀಕೃಷ್ಣನಿಗೆ ಪ್ರೇಮ ಪತ್ರವನ್ನು ಕಳುಹಿಸಿದ್ದಳು. ರುಕ್ಮಿಣಿಯ ಪ್ರೇಮ ಪತ್ರವನ್ನು ಓದಿದ ಕೃಷ್ಣ ವಿದರ್ಭಕ್ಕೆ ತೆರಳಿ ರುಕ್ಮಿಣಿಯನ್ನು ಅಲ್ಲಿಂದ ಅಪಹರಿಸಿ ಕರೆದುಕೊಂಡು ಹೋದನು.

    ಹಿಂದೆಲ್ಲಾ ಪ್ರೇಮ ನಿವೇದನೆಗೆ ಇದಿದ್ದು ಒಂದೇ ಮಾರ್ಗ, ಅದು ಲವ್‌ ಲೆಟರ್‌. ಕಾಲ, ತಂತ್ರಜ್ಞಾನ ಬದಲಾದಂತೆ ಪ್ರೇಮದ ಪರಿಭಾಷೆಯು ಬದಲಾಗಿದೆ. ಲವ್‌ಲೆಟರ್‌ಗಳು ಬರೆಯುವುದಿರಲಿ ಮೆಸೇಜ್‌ ಕೂಡ ಟೈಪ್‌ ಮಾಡುವ ಕಾಲ ಈಗಿಲ್ಲ. ಈಗೆಲ್ಲಾ ಮೀಮ್ಸ್‌, ಇಮೋಜಿ, ಜಿಫ್‌ಗಳ ಕಾಲ. ಎಲ್ಲ ಭಾವನೆಗಳು ಅದರಲ್ಲಿಯೇ ವಿನಿಮಯವಾಗುತ್ತದೆ.

    ಪ್ರೇಮಪತ್ರ ಬರೆಯುವುದು ಒಂದು ಕಲೆ. ಇದನ್ನು ಎಲ್ಲರಿಂದಲೂ ಬರೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಮನದ ಮಾತನ್ನು ಅಕ್ಷರ ರೂಪಕ್ಕೆ ಇಳಿಸಲು ಯಾವ ಕಲೆಯೂ ಬೇಡ ಅಲ್ಲವೇ?

  • ಸುಟ್ಟಿದ್ದು ಪ್ರೇಮ ಪತ್ರ – ಅಪಾರ್ಟ್‌ಮೆಂಟ್‌ಗೆ ಬಿತ್ತು ಬೆಂಕಿ

    ಸುಟ್ಟಿದ್ದು ಪ್ರೇಮ ಪತ್ರ – ಅಪಾರ್ಟ್‌ಮೆಂಟ್‌ಗೆ ಬಿತ್ತು ಬೆಂಕಿ

    ವಾಷಿಂಗ್ಟನ್: ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಪ್ರೇಮ ಪತ್ರ ಸುಡುತ್ತಿದ್ದಾಗ ಆಕೆಯ ನಿರ್ಲಕ್ಷ್ಯದಿಂದ ಅಪಾರ್ಟ್‌ಮೆಂಟ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ಅಮೆರಿಕದ ನೆಬ್ರಾಸಿಕದಲ್ಲಿ ನಡೆದಿದೆ.

    ಅರಿಯುನಾ ಶನೆಲ್ ಲಿಲ್ಲಾರ್ಡ್(19) ಬ್ಯುಟೇನ್ ಟಾರ್ಚ್ ಸಹಾಯದಿಂದ ತನ್ನ ಮಾಜಿ ಪ್ರಿಯಕರ ನೀಡಿದ್ದ ಪ್ರೇಮ ಪತ್ರವನ್ನು ಸುಡುತ್ತಿದ್ದಳು. ಮೊದಲು ಪತ್ರಗಳಿಗೆ ಸರಿಯಾಗಿ ಬೆಂಕಿ ಹೊತ್ತಿಕೊಳ್ಳಲಿಲ್ಲ. ಇದರಿಂದ ಮನನೊಂದ ಅರಿಯುನಾ ಆ ಪ್ರೇಮ ಪತ್ರಗಳನ್ನು ನೆಲದ ಮೇಲೆ ಬಿಸಾಕಿ ಮತ್ತೊಂದು ರೂಮಿನಲ್ಲಿ ಮಲಗಲು ಹೋಗಿದ್ದಳು.

    ಸ್ವಲ್ಪ ಸಮಯದ ನಂತರ ನಿದ್ದೆಯಿಂದ ಎದ್ದಾಗ ಅರಿಯುನಾ ಕಾರ್ಪೆಟ್‍ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ್ದಾಳೆ. ತಕ್ಷಣ ಆಕೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

    ಯುವತಿ ಮಾಡಿದ ಎಟವಟ್ಟಿನಿಂದ ಸುಮಾರು 4,000 ಡಾಲರ್ ಅಂದರೆ 2,85,270 ರೂ. ನಷ್ಟವಾಗಿದೆ. ಈ ಘಟನೆಯಿಂದ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

  • 10ರ ಪೋರಿಗೆ ಪ್ರೇಮ ಪತ್ರ ಬರೆದ 13ರ ಪೋರ

    10ರ ಪೋರಿಗೆ ಪ್ರೇಮ ಪತ್ರ ಬರೆದ 13ರ ಪೋರ

    -ನಮ್ಮ ಹುಡ್ಗ ಒಳ್ಳೆಯವನು ಎಂದ ಪೋಷಕರು

    ಗಾಂಧಿನಗರ: 13 ವರ್ಷದ ಬಾಲಕನೊಬ್ಬ 10 ವರ್ಷದ ಬಾಲಕಿಗೆ ಪ್ರೇಮ ಪತ್ರ ಬರೆದಿದ್ದು, ಬಳಿಕ ಇಬ್ಬರ ಕುಟುಂಬದವರು ಪರಸ್ಪರ ಹೊಡೆದಾಡಿಕೊಂಡ ಘಟನೆ ಗುಜರಾತ್‍ನ ಸುರೇಂದ್ರನಗರ ಜಿಲ್ಲೆಯಲ್ಲಿ ನಡೆದಿದೆ.

    ಸುರೇಂದ್ರನಗರದ ಗೋಲಿಡಾ ಗ್ರಾಮದ ಆನಂದ್‍ಪುರದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ 10 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಾಲಕ ಹಾಗೂ ಬಾಲಕಿಯ ಕುಟುಂಬಸ್ಥರು ಪರಸ್ಪರ ಆರೋಪ ಮಾಡುತ್ತಿದ್ದಾರೆ.

    ಮಾಹಿತಿಗಳ ಪ್ರಕಾರ ಬಾಲಕ ‘ಐ ಲವ್ ಯೂ’ ಎಂದು ಹೇಳುತ್ತಾ ಬಾಲಕಿಗೆ ಹಿಂಸೆ ನೀಡುತ್ತಿದ್ದನು. ಅಲ್ಲದೇ ಬಾಲಕ ಶಾಲೆಯಲ್ಲಿ ಬಾಲಕಿಗೆ ಲವ್ ಲೆಟರ್ ಕೂಡ ನೀಡುತ್ತಿದ್ದನು. ಗುರುವಾರ ಈ ಘಟನೆ ಬಗ್ಗೆ ಇಬ್ಬರ ಕುಟುಂಬದವರು ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬಾಲಕ ತನಗೆ ಹಿಂಸೆ ನೀಡುತ್ತಿರುವುದನ್ನು ಬಾಲಕಿ ತನ್ನ ಪೋಷಕರ ಬಳಿ ಹೇಳಿದ್ದಾಳೆ. ಈ ವೇಳೆ ಬಾಲಕಿಯ ಪೋಷಕರು ಬಾಲಕನ ಜೊತೆ ಶಾಂತಿಯುತವಾಗಿ ಮಾತನಾಡುತ್ತಿದ್ದರು. ಆದರೆ ಬಾಲಕನ ಕುಟುಂಬದವರಿಗೆ ಅವರು ಮಾಡುತ್ತಿದ್ದ ಆರೋಪಗಳು ಇಷ್ಟವಾಗಲಿಲ್ಲ. ಇದರಿಂದ ಬೇಸರಗೊಂಡು ಬಾಲಕಿಯ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ಹಲ್ಲೆ ಮಾಡುವಾಗ ಬಾಲಕನ ಕುಟುಂಬದವರು ಬಾಲಕಿಯ ಪೋಷಕರ ಮೇಲೆ ಖಾರದ ಪುಡಿ ಎರಚಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಹಲ್ಲೆಯಲ್ಲಿ ಬಾಲಕಿಯ ಕಡೆಯವರಾದ 6 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯಲ್ಲಿದ್ದ ಅಧಿಕಾರಿ ಹೇಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಬಾಲಕನ ಕುಟುಂಬದವರು ಬಾಲಕಿಯ ಪೋಷಕರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಹಲ್ಲೆಯಿಂದ ನಮ್ಮ ಕಡೆಯವರು 4 ಜನ ಗಾಯಗೊಂಡಿದ್ದಾರೆ. ಅಲ್ಲದೇ ಬಾಲಕಿಯ ಕುಟುಂಬದವರು ಸುಳ್ಳು ಹೇಳುತ್ತಿದ್ದಾರೆ. ನಮ್ಮ ಹುಡುಗ ಯಾರಿಗೂ ಪ್ರೇಮ ಪತ್ರ ಬರೆದಿಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv