Tag: ಪ್ರೇಮಸಿ

  • ಮದ್ವೆ ಆಗಲ್ಲ, ಬೇರೆಯವರನ್ನ ವಿವಾಹವಾಗಲೂ ಬಿಡಲ್ಲ – ಸೈಕೋ ಪ್ರೇಮಿಯ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

    ಮದ್ವೆ ಆಗಲ್ಲ, ಬೇರೆಯವರನ್ನ ವಿವಾಹವಾಗಲೂ ಬಿಡಲ್ಲ – ಸೈಕೋ ಪ್ರೇಮಿಯ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ

    – ನಾನು ಬದುಕಿ ನಿಮಗೆ ನೋವು ಕೊಡುವುದಿಲ್ಲ

    ಹೈದರಾಬಾದ್: ಗೆಳೆಯನ ಕಿರುಕುಳವನ್ನು ಸಹಿಸಲಾಗದೆ ಯುವತಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ತೆಲಂಗಾಣದ ಜಗಿತ್ಯಾಲ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಸಾರಂಗಾಪುರ ವಲಯದ ಪೋಥರಂ ಗ್ರಾಮದ ಉಮಾ (19) ಮೃತ ಯುವತಿ. ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದು, ಕಿರುಕುಳ ನೀಡುತ್ತಿದ್ದನು. ಇದನ್ನು ಸಹಿಸಲಾಗದೆ ಡೆತ್‍ನೋಟ್ ಬರೆದಿಟ್ಟು ಉಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಏನಿದು ಪ್ರಕರಣ?
    ಮೃತ ಉಮಾ ಎರಡು ವರ್ಷಗಳ ಹಿಂದೆ ಸಾರಂಗಾಪುರ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈ ವೇಳೆ ಸಹಪಾಠಿಯಾಗಿದ್ದ ಅದೇ ಗ್ರಾಮ ರಂಜಿತ್ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಕಾಲೇಜು ಮುಗಿದ ನಂತರ ಉಮಾ ಮನೆಯಲ್ಲಿದ್ದಳು. ಈ ವೇಳೆ ಮನೆಯಲ್ಲಿ ಆಕೆಗೆ ಮದುವೆ ಮಾಡಲೆಂದು ಹುಡುಗನನ್ನು ನೋಡುತ್ತಿದ್ದರು.

    ಆಗ ಉಮಾ, ನನಗೆ ಮನೆಯಲ್ಲಿ ಮದುವೆ ಮಾಡಲು ಹುಡುಗನನ್ನು ನೋಡುತ್ತಿದ್ದಾರೆ. ನೀನು ನನ್ನ ಮದುವೆ ಆಗು. ಇಲ್ಲವಾದರೆ ನಮ್ಮ ಪೋಷಕರು ಬೇರೊಬ್ಬನ ಜೊತೆ ಮದುವೆ ಮಾಡಿಸುತ್ತಾರೆ ಎಂದು ರಂಜಿತ್ ಬಳಿ ಮನವಿ ಮಾಡಿಕೊಂಡಿದ್ದಾಳೆ. ಆಗ ಪ್ರಿಯಕರ ರಂಜಿತ್, ನೀನು ಬೇರೆ ಹುಡುಗನನ್ನು ಮದುವೆಯಾಗಲು ಬಿಡುವುದಿಲ್ಲ. ಅಲ್ಲದೇ ನಿನ್ನನ್ನು ಮದುವೆಯಾಗುವ ಉದ್ದೇಶವಿಲ್ಲ ಎಂದು ಹೇಳಿದ್ದಾನೆ. ಇದರಿಂದ ಉಮಾ ನೊಂದಿದ್ದಳು.

    ಕೊನೆಗೆ ಉಮಾ ತನ್ನ ಪ್ರೀತಿ ವಿಚಾರವನ್ನು ಪೋಷಕರಿಗೆ ತಿಳಿಸಿದಳು. ಆಗ ಪೋಷಕರು ಹುಡುಗ ರಂಜಿತ್ ಜೊತೆ ಮಾತನಾಡಿದ್ದು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಇದರಿಂದ ನೊಂದ ಉಮಾ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಗ ಪೋಷಕರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಉಮಾ ಸಾವನ್ನಪ್ಪಿದ್ದಾಳೆ

    ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಉಮಾ ಡೆತ್‍ನೋಟ್ ಬರೆದಿದ್ದು, ಅದರಲ್ಲಿ, “ಅಮ್ಮ, ಅಪ್ಪಾ ನನ್ನನ್ನು ಕ್ಷಮಿಸಿ. ರಂಜಿತ್ ನನ್ನನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ನೀನು ಬೇರೆಯವರನ್ನು ಮದುವೆಯಾಗಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ನಾನು ಅವನನ್ನು ಮದುವೆಯಾದರೆ ಸಂತೋಷದಿಂದ ಇರುವುದಿಲ್ಲ. ನನಗೆ ಬರುವ ಮದುವೆ ಸಂಬಂಧವನ್ನು ಹಾಳು ಮಾಡುತ್ತಿದ್ದಾಳೆ” ಎಂದು ಬರೆದಿದ್ದಾಳೆ.

    ಅಲ್ಲದೇ, “ನಾನು ಬದುಕಿ ನಿಮಗೆ ನೋವು ಕೊಡುವುದಿಲ್ಲ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಪೋಷಕರ ಬಳಿ ಕ್ಷಮೆ ಕೇಳಿದ್ದಾಳೆ.

    ಮೃತ ಉಮಾ ತಾಯಿ ಲಕ್ಷ್ಮಿ ಈ ಕುರಿತು ದೂರು ದಾಖಲಿಸಿದ್ದಾರೆ. ಮೃತ ತಾಯಿ ನೀಡಿದ ದೂರಿನ ಅನ್ವಯ ಪೊಲೀಸರು ರಂಜಿತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.