Tag: ಪ್ರೀತಿಂಗೌಡ

  • ಮೊದ್ಲು ರಾಜೀನಾಮೆ ಕೊಡಲಿ, ನಂತ್ರ ಮಾತಾಡ್ಲಿ: ಪ್ರೀತಂಗೌಡ

    ಮೊದ್ಲು ರಾಜೀನಾಮೆ ಕೊಡಲಿ, ನಂತ್ರ ಮಾತಾಡ್ಲಿ: ಪ್ರೀತಂಗೌಡ

    ಬೆಂಗಳೂರು: ಮೊದಲು ರಾಜೀನಾಮೆ ಕೊಟ್ಟು ಬಳಿಕ ಮಾಧ್ಯಮದವರ ಮುಂದೆ ಬಂದು ಮಾತನಾಡಲಿ ಎಂದು ಬಿಜೆಪಿ ಶಾಸಕ ಪ್ರೀತಂಗೌಡ ರಾಜೀನಾಮೆ ನೀಡುತ್ತೇನೆ ಎಂದಿದ್ದ ನೂತನ ಸಂಸದ ಪ್ರಜ್ವಲ್‍ಗೆ ಸವಾಲೆಸೆದಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿಜೆಪಿ ಶಾಸಕ ಪ್ರೀತಂಗೌಡ ಅವರು, ಹಾಸನದ ಜನರು ದೇವೇಗೌಡರು ತಮ್ಮ ಪಕ್ಷದಿಂದ ನಿಲ್ಲಬೇಕು ಎಂದು ಇಚ್ಛೆ ವ್ಯಕ್ತಪಡಿದ್ದರು. ಆದರೆ ಅದನ್ನು ಮೀರಿ ಕುಟುಂಬದ ವ್ಯವಸ್ಥೆಗೋಸ್ಕರ ದೇವೇಗೌಡರನ್ನು ಹಾಸನದಿಂದ ಬೇರೆಡೆಗೆ ವಲಸೆ ಹೋಗುವಂತೆ ರೇವಣ್ಣ, ಭವಾನಿ ಮತ್ತು ಪ್ರಜ್ವಲ್ ರೇವಣ್ಣ ಮಾಡಿದ್ದಾರೆ. ಈ ಕಾರಣಕ್ಕೆ ಮಾಡಿದ ತಪ್ಪನ್ನು ತಿದ್ದಿಕೊಳ್ಳಲು  ಪ್ರಯತ್ನ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ರಾಜೀನಾಮೆಗೆ ನಿರ್ಧಾರ!

    ಕುಟುಂಬ ರಾಜಕಾರಣವನ್ನು ಜಿಲ್ಲೆಯ ಜನರು ಕ್ಷಮಿಸಲ್ಲ. ಯಾಕೆಂದರೆ ಅವರ ಸ್ವಾರ್ಥಕ್ಕಾಗಿ ಈ ವಯಸ್ಸಿನಲ್ಲಿ ದೇವೇಗೌಡರಿಗೆ ಸೋಲನ್ನು ಅನುಭವಿಸುವ ಪರಿಸ್ಥಿತಿಯನ್ನು ತಂದಿದ್ದಾರೆ. ಈಗ ಅದನ್ನು ತಿದ್ದಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ಮೂರು ತಿಂಗಳ ನಂತರ ಅಫಿಡವಿಟ್ ಸಮಸ್ಯೆ ಇರುವುದರಿಂದ ತಮ್ಮ ಸ್ಥಾನ ಕಳೆದುಕೊಳ್ಳುವ ಮುಂಚೆಯೇ ಆ ಸ್ಥಾನವನ್ನು ತಾತನಿಗೆ ಬಿಟ್ಟುಕೊಡಲು, ತಾನೇ ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳೋಣ ಎಂದು ಈ ರೀತಿ ಮಾಡಿದ್ದಾರೆ ಎಂದರು.

    ದೇವೇಗೌಡರ ಕರ್ಮಭೂಮಿ ಹಾಸನ. ಅಲ್ಲಿಯೇ ಸ್ಪರ್ಧೆ ಮಾಡಲು ಅವರಿಗೆ ಅವಕಾಶ ಕೊಡಲಿಲ್ಲ. ದೇವೇಗೌಡರಿಗೆ ಹಾಸನ ಬಿಟ್ಟು ಹೋಗಲು ಇಷ್ಟವಿರಲಿಲ್ಲ. ಅವರ ಮನಸ್ಸನ್ನು ನೋಯಿಸಿ ಕಳುಹಿಸಿದ್ದರು. ಮುಂದಿನ ಚುನಾವಣೆಯಲ್ಲಿ ಅವರಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಈಗ ರಾಜೀನಾಮೆ ಕೊಡುವ ಮಾತನಾಡುತ್ತಿದ್ದಾರೆ ಎಂದು ಪ್ರೀತಂಗೌಡ ಹೇಳಿದ್ದಾರೆ.

    ಇದೆಲ್ಲವನ್ನು ಹೇಳುವುಕ್ಕಿಂತ ಮೊದಲು ರಾಜೀನಾಮೆ ಕೊಡಬೇಕು. ದೇವೇಗೌಡರನ್ನು ವಲಸೆಗೆ ಕಳುಹಿಸಿರುವುದು ಅಪರಾಧವಾಗಿದೆ. ಇದರಿಂದ ಹಾಸನ ಜನತೆಗೂ ಬೇಸರವಾಗಿದೆ. ಹೀಗಾಗಿ ರೇವಣ್ಣ ಕುಟುಂಬದವರು ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳಬೇಕು. ಮೊದಲು ರಾಜೀನಾಮೆ ಕೊಡಲಿ. ಆಮೇಲೆ ಎಲ್ಲಿ ಬೇಕಾದರೂ ಹೋಗಲಿ. ಪ್ರಜ್ವಲ್ ರೇವಣ್ಣ ಅವರಿಗಿಂತ ಮಾಜಿ ಪ್ರಧಾನಿ ದೇವೇಗೌಡರು ಕರ್ನಾಟಕದ ರಾಜಕೀಯಕ್ಕೆ ಅವಶ್ಯಕತೆ ಇದೆ ಎಂದು ಪ್ರೀತಂ ಗೌಡ ತಿಳಿಸಿದರು.