ಬಿಗ್‍ಬಾಸ್ ಮನೆಯಿಂದ ಈ ವಾರ ಪ್ರಿಯಾಂಕಾ ತಿಮ್ಮೇಶ್ ಅವರು ಹೊರ ನಡೆಯಲಿದ್ದಾರೆ.
ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ಪ್ರಿಯಾಂಕಾ ತಿಮ್ಮೇಶ್ ಅವರು ಕನ್ನಡ, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ದೊಡ್ಮನೆಯಲ್ಲಿ ಎಲ್ಲರೊಂದಿಗೂ ಬೆರೆತು, ತುಂಬಾ ಸೈಲೆಂಟಾಗಿದ್ದ ಪ್ರಿಯಾಂಕಾ, ಯಾರು ಏನೇ ಹೇಳಿದರೂ ತಾಳ್ಮೆ ಕಳೆದುಕೊಳ್ಳದೆ, ಎಲ್ಲವನ್ನೂ ನಿಭಾಯಿಸುತ್ತಿದ್ದರು. ಟಾಸ್ಕ್ ವೇಳೆ ಸಹ ತಮ್ಮದೇ ಛಾಪು ಮೂಡಿಸಿದ್ದರು.
ತುಂಬಾ ಸೈಲೆಂಟ್ ಆಗಿದ್ದ ಪ್ರಿಯಾಂಕಾ, ಚಕ್ರವರ್ತಿ ಚಂದ್ರಚೂಡ್ ಅವರೊಂದಿಗೆ ಆಗಾಗ ಕಿರಿಕ್ ಮಾಡಿಕೊಳ್ಳುತ್ತಿದ್ದರು. ಕೆಲವು ಬಾರಿ ಚಕ್ರವರ್ತಿ ಅವರ ಜೊತೆ ಏರು ಧ್ವನಿಯಲ್ಲಿ ಜಗಳವನ್ನೂ ಮಾಡಿದ್ದಾರೆ. ಇತ್ತೀಚೆಗಷ್ಟೇ ಚಕ್ರವರ್ತಿ ಅವರ ಜೊತೆ ನಡೆದ ಜಗಳದಲ್ಲಿ ತಮ್ಮ ಉಗ್ರಾವತಾರವನ್ನು ತೋರಿಸಿದ್ದರು. ಸಿಟ್ಟಿನಿಂದ ಇಡೀ ಮನೆಯನ್ನೇ ಬೆಚ್ಚಿಬೀಳಿಸಿದ್ದರು.
ಟಾಸ್ಕ್ ವಿಚಾರವಾಗಿ ಅನ್ಯಾಯ ನಡೆದಾಗಲೆಲ್ಲ ಪ್ರಿಯಾಂಕಾ ಅವರು ಧ್ವನಿ ಎತ್ತಿದ್ದಾರೆ. ಕ್ಯಾಪ್ಟನ್ ಕಂಟೆಸ್ಟೆಂಟ್ ಟಾಸ್ಕ್ ವೇಳೆ ಅರವಿಂದ್ ವಿರುದ್ಧ ಕಿಡಿಕಾರಿದ್ದರು. ಹೀಗೆ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ತುಂಬಾ ಆ್ಯಕ್ಟಿವ್ ಆಗಿ ಟಾಸ್ಕ್ ಗಳಲ್ಲಿ ಭಾಗವಹಿಸುತ್ತಿದ್ದ ಪ್ರಿಯಾಂಕಾ ಇದೀಗ ಎಲಿಮಿನೇಟ್ ಆಗುತ್ತಿದ್ದಾರೆ.
ಈ ಹಿಂದೆಯೇ ಪ್ರಿಯಾಂಕಾ ಅವರು ಮನೆಯಿಂದ ಹೊರನಡೆಯುವ ಸಂಭವವಿತ್ತು. ಆದರೆ ನಿಧಿ ಸಿಬ್ಬಯ್ಯ ಅವರು ಪ್ರಿಯಾಂಕಾ ಅವರನ್ನು ಸೇವ್ ಮಾಡಿದ್ದರು. ಹೀಗಾಗಿ ಮತ್ತುಷ್ಟು ದಿನಗಳ ಕಾಲ ಬಿಗ್‍ಬಾಸ್ ಮನೆಯಲ್ಲಿ ಮುಂದುವರಿದಿದ್ದರು. ಆದರೆ ಈ ವಾರ ಅವರು ಮನೆಯಿಂದ ಹೊರ ನಡೆಯುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ಪ್ರಿಯಾಂಕಾ ಹಾಗೂ ಶಮಂತ್ ಜೋಡಿ ಕುರಿತು ಸಖತ್ ಚರ್ಚೆಯಾಗುತ್ತಿದ್ದು, ಚಕ್ರವರ್ತಿ ಇವರಿಬ್ಬರನ್ನು ಸೇರಿಸಲು ಹರಸಾಹಸಪಡುತ್ತಿದ್ದಾರೆ. ಆದರೆ ಪ್ರಿಯಾಂಕಾ ಮಾತ್ರ ನಾಚುತ್ತಲೇ ತಿರಸ್ಕರಿಸುತ್ತಿದ್ದಾರೆ. ಇಬ್ಬರೂ ಪರೋಕ್ಷವಾಗಿ ಮಾತನಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಈ ಮಧ್ಯೆ ಕನ್ವಿನ್ಸ್ ಮಾಡಲು ಬಂದ ಚಕ್ರವರ್ತಿ ಅವರಿಗೆ ನಗುತ್ತಲೇ ತಕ್ಕ ಉತ್ತರ ನೀಡಿದ್ದಾರೆ.
ನಿನ್ನೆ ನಾನು ಹೇಳಿದ್ದಕ್ಕೆ ಶಮಂತ್ ತುಂಬಾ ಡಿಸ್ಟರ್ಬ್ ಆಗಿಬಿಟ್ಟಿದ್ದಾನೆ, ಹಾಗೆ ಹೇಳಬೇಡಿ ಸರ್ ಎಂದು ಜಗಳ ಮಾಡಿದ. ನನಗೆ ಇಂಟರೆಸ್ಟ್ ಇಲ್ಲ, ಹೋಗಿ ನೇರವಾಗಿ ಹೇಳುತ್ತೇನೆ ಅವರಿಗೆ ಎಂದು ರೇಗಾಡಿದ ಎಂದು ಚಕ್ರವರ್ತಿ ಪ್ರಿಯಾಂಕಾಗೆ ಹೇಳಿದ್ದಾರೆ. ಇದಕ್ಕೆ ಕೋಪದಿಂದಲೇ ಉತ್ತರಿಸಿದ ಪ್ರಿಯಾಂಕಾ, ನೀವು ನಿನ್ನೆ ತುಂಬಾ ಅತಿಯಾಗಿ ಮಾತನಾಡಿದಿರಿ ಎಂದು ಹೇಳಿದ್ದಾರೆ. ಇದಕ್ಕೆ ಚಕ್ರವರ್ತಿ ಉತ್ತರಿಸಿ ನನಗೇನು ಗೊತ್ತು, ನೀನು ಲವ್ ಸಿಂಬಲ್ ಮಾಡಿದ್ದಕ್ಕೆ ಆ ರೀತಿ ಅಫೆಕ್ಷನ್ ಇರಬಹುದು ಎಂದುಕೊಂಡೆ ಎಂದಿದ್ದಾರೆ. ತಕ್ಷಣವೇ ಉತ್ತರಿಸಿದ ಪ್ರಿಯಾಂಕಾ, ನನಗೆ ಹೊರಗಡೆ ತುಂಬಾ ಜನ ಬೇಕಾದವರಿದ್ದಾರೆ, ಈ ಮನೆಗೆ ಅದಕ್ಕೋಸ್ಕರ ಬಂದಿಲ್ಲ. ಆ ರೀತಿ ಯೋಚನೆಗಳೂ ಬರಲ್ಲ ಎಂದು ಖಾರವಾಗಿ ಪ್ರತಿಕ್ರಿಸಿದ್ದಾರೆ.
ಇದಕ್ಕಾಗಿಯೇ ಬರಲ್ಲ, ಆ ರೀತಿ ಸಂಭವಿಸಬಹುದು ಎಂದು ಚಕ್ರವರ್ತಿ ಸಮರ್ಥಿಸಿಕೊಳ್ಳಲು ಹೋಗಿದ್ದಾರೆ. ನಿಮಗೆ ನೀವೇ ಹೇಗೆ ಯೋಚನೆ ಮಾಡುತ್ತೀರಿ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ. ಹಾಗೆ ಅನ್ನಿಸಿದ್ದಕ್ಕೆ ಬಂದು ನಿನ್ನನ್ನು ಕೇಳಿದೆ, ಹಾಗೆ ಅನ್ನಿಸಿಲ್ಲ ಎಂದು ಗೊತ್ತಾದ ಮೇಲೆ ಬಿಟ್ಟಾಕಿದೆ ಎಂದು ಚಕ್ರವರ್ತಿ ಹೇಳಿದ್ದಾರೆ. ನೀವು ಅಷ್ಟು ಬುದ್ಧಿವಂತರಾಗಿ ಹೀಗೆ ಮಾಡಿದರೆ ಹೇಗೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಈ ಬಗ್ಗೆ ಶಮಂತ್ ಸಹ ಬೇಡ ಸರ್ ನಂಗೆ ಇಂಟರೆಸ್ಟ್ ಇಲ್ಲ ಅಂದ, ಸರಿ ಫ್ರೆಂಡ್ ಆಗಿರಿ ಎಂದು ಹೇಳಿದೆ ಎಂದು ಚಕ್ರವರ್ತಿ ಹೇಳುತ್ತಾರೆ.
ಹಾಗಾದರೆ ನಮಗೆ ಇಂಟರೆಸ್ಟ್ ಇದೆ ಅಂತಾನಾ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ. ಆಗ ನನಗೆ ಮೂರ್ನಾಲ್ಕು ದಿನದಿಂದ ಹಾಗೆ ಅನ್ನಿಸುತ್ತಿತ್ತು, ನಿಮ್ಮಿಬ್ಬರ ನಡುವೆ ಅಫೆಕ್ಷನ್ ಇದೆ ಎಂದು ಭಾಸವಾಗಿತ್ತು ಎಂದು ಚಕ್ರವರ್ತಿ ಹೇಳಿದ್ದಾರೆ. ಅಲ್ಲದೆ ನೀನು ಬಿಗ್ ಬಾಸ್‍ನಲ್ಲಿ ಅಥವಾ ಎಲ್ಲಿ ಪರಿಚಯವಾಗಿದ್ದಿಯಾ ಗೊತ್ತಿಲ್ಲ, ಒಟ್ನಲ್ಲಿ ನೀನು ಚೆನ್ನಾಗಿರಬೇಕು ಅಷ್ಟೇ. ಇದಕ್ಕಾಗಿ ನಮ್ಮ ಕೈಲಾಗಿದ್ದನ್ನು ನಾವು ಮಾಡುತ್ತೇವೆ, ನಮಗೆ ದೇವರು ಶಕ್ತಿ, ಅಸ್ಥಿತ್ವ ಕೊಟ್ಟಿದ್ದಾನೆ ಎಂದು ಚಕ್ರವರ್ತಿ ಹೇಳುತ್ತಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ಅದನ್ನು ಇಂತಹ ಕೆಲಸಗಳಿಗೆ ಉಪಯೋಗಿಸಬೇಡಿ, ಬೇರೆ ಕೆಲಸಗಳಿವೆ ಅವುಗಳನ್ನು ಮಾಡಿ, ನಾವು ಯಾರನ್ನು ಮದುವೆ ಆಗಬೇಕು ಎಂಬುದು ನಮಗೆ ಗೊತ್ತಿದೆ ಎಂದು ತಕ್ಕ ಉತ್ತರ ನೀಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಬರೀ ಜೋಡಿಯದ್ದೇ ಮಾತು. ಅರವಿಂದ್ ಹಾಗೂ ದಿವ್ಯಾ ಉರುಡುಗ ಒಂದು ಕಡೆಯಾದರೆ, ಮಂಜು ಹಾಗೂ ದಿವ್ಯಾ ಸುರೇಶ್ ಅವರದ್ದೇ ಮತ್ತೊಂದು ಜೋಡಿ. ಇದನ್ನು ಕಂಡು ಶಮಂತ್‍ಗೆ ಮಾತ್ರ ಸಖತ್ ಹೊಟ್ಟೆ ಉರಿ. ನನಗೂ ಯಾರೂ ಜೋಡಿ ಆಗುತ್ತಿಲ್ಲವಲ್ಲ ಎಂಬ ಕೊರಗು. ಇದನ್ನು ಹಲವು ಬಾರಿ ದಿವ್ಯಾ ಉರುಡುಗ ಬಳಿ ಹೇಳಿಕೊಂಡಿದ್ದಾರೆ ಸಹ. ಆದರೆ ಇದೀಗ ಜೋಡಿಯಾಗುವ ಸೂಚನೆಯನ್ನು ನೀಡಿದ್ದಾರೆ, ಇದಕ್ಕೆ ಸ್ವತಃ ಚಕ್ರವರ್ತಿ ಅವರು ಆರಂಭ ಹಾಡಿದ್ದಾರೆ.
ಹೌದು ಶಮಂತ್ ಹಾಗೂ ಪ್ರಿಯಾಂಕಾ ವಿಚಾರದಲ್ಲಿ ಚಕ್ರವರ್ತಿ ಮಾತನಾಡಿದ್ದು, ಇಬ್ಬರ ನಡುವಿನ ಕುರಿತು ವಿರಸದ ಬಗ್ಗೆ ಮಾತನಾಡುವಾಗ ಲವ್ ವಿಷಯವನ್ನೂ ತಿಳಿಸಿದ್ದಾರೆ. ಆಟವಾಡಿಕೊಂಡು, ತಿನ್ಕೊಂಡು ಇದ್ರೆ ಬಿಗ್ ಬಾಸ್ ಬೇಗ ಮನೆಯಿಂದ ಆಚೆ ಕಳುಹಿಸುತ್ತಾರೆ ಎಂದೆ ಅದ್ಕೆ ಪ್ರಿಯಾಂಕಾ ಬೇಜಾರಾಗಿದ್ದಾರೆ ಎಂದು ಶಮಂತ್ ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ಚಕ್ರವರ್ತಿ ಅವರು, ನೀನು ಆಟವಾಡಿಕೊಂಡು, ತಿನ್ಕೊಂದು ಇರೋದು ನೀನು, ಆ ಹಡುಗಿಗೆ ಯಾಕೆ ಹೇಳ್ತಿಯಾ ಎಂದು ಕೇಳಿದ್ದಾರೆ.
ಇಷ್ಟೆಲ್ಲಾ ಆದ್ರೂ ನಗ್ತಿದಾರೆ ಅಂದ್ರೆ ಪ್ರಿಯಾಂಕಾಗೆ ನಿನ್ನ ಮೇಲೆ ಲವ್ ಇದೆ ಎಂದು ಚಕ್ರವರ್ತಿ ಹೇಳಿದ್ದು, ಇದಕ್ಕೆ ಪ್ರಶಾಂತ್ ಸಂಬರಗಿ ಸಹ ಸಾಥ್ ನೀಡಿ, ಪ್ರೀತಿ ಇದೆ ಇಬ್ಬರೂ ಹಂಚಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ. ಪ್ರಿಯಾಂಕಾಗೆ ಶಮಂತ್ ಬಗ್ಗೆ ಅಫೆಕ್ಷನ್ ಇದೆ, ಅವರ ಬಾಡಿ ಲಾಂಗ್ವೇಜ್, ನಗೆ, ಮಾತನಾಡುವುದು, ಕಾಮಿಡಿ ಮಾಡುವುದು ಎಲ್ಲವನ್ನೂ ನೋಡಿದರೆ ಇವರಿಬ್ಬರ ಮಧ್ಯೆ ಲವ್ ಇದೆ ಅನ್ನಿಸುತ್ತಿದೆ ಎಂದು ಮಾತನಾಡಿಕೊಂಡಿದ್ದಾರೆ.
ಅಲ್ಲದೆ ನಿನಗೆ ಅವನ ಬಗ್ಗೆ ಅಫೆಕ್ಷನ್ ಇಲ್ವೇನಮ್ಮ ನಿಜ ಹೇಳು ಎಂದು ಚಕ್ರವರ್ತಿ ನೇರವಾಗಿ ಪ್ರಿಯಾಂಕಾಗೆ ಕೇಳುತ್ತಾರೆ. ನಾನು ಮನೋಶಾಸ್ತ್ರಜ್ಞ, ಬಾಡಿ ಲಾಂಗ್ವೇಜ್, ಕಣ್ಣುಗಳನ್ನು ನೋಡಿದರೆ ಗೊತ್ತಾಗಿ ಬಿಡುತ್ತೆ. ಒಂದೇ ಟೀಮ್‍ನಲ್ಲಿದ್ದು ನಮ್ಮನ್ನು ಯಾಕೆ ಹೀಗೆ ಸಾಯಿಸುತ್ತೀರಿ, ನಿರ್ಧಾರ ಮಾಡಿ ಎಂದಿದ್ದಾರೆ. ಅಲ್ಲದೆ ಪ್ರಿಯಾಂಕಾ ಹಾರ್ಟ್ ಸಿಂಬಾಲ್ ಮಾಡಿದ್ದಕ್ಕೆ ಅದು ನಿನಗೇ ಮಾಡಿದ್ದು ಎಂದು ಚಕ್ರವರ್ತಿ ಶಮಂತ್‍ಗೆ ಹೇಳುತ್ತಾರೆ.
ಅದೇನು ಸಮಾಧಾನ ಮಾಡಿಕೊಂಡು ಮನವೊಲಿಸಿಕೊಳ್ಳಿ ಎನ್ನುತ್ತಾರೆ, ಆಗ ಶಮಂತ್ ಬೈಯಿಸಿಕೊಂಡು ನಾನೇ ಸಮಾಧಾನ ಮಾಡಲೇ ಎಂದು ಪ್ರಶ್ನಿಸುತ್ತಾರೆ. ಒಂದು ಹುಡುಗಿ ನಿನಗಾಗಿ ಲವ್ ಸಿಂಬಲ್ ಮಾಡಿದೆ ಎಂದರೆ ಇದಕ್ಕಿಂತ ಹಿಂಟ್ ಕೊಡಲು ಸಾಧ್ಯವಿಲ್ಲ. ನಾನು, ಪ್ರಶಾಂತ್ ಸೇರಿ ಮದುವೆ ಮಾಡಿಸುತ್ತೇವೆ ತಲೆ ಕೆಡಿಸಿಕೊಳ್ಳಬೇಡಿ. ನಿನ್ನ ಮೇಲೆ ಆ ಹುಡುಗಿಗೆ ಲವ್ ಇದೆ ಕಣೋ ಎಂದು ಶಮಂತ್‍ಗೆ ಚಕ್ರವರ್ತಿ ಹೇಳುತ್ತಾರೆ.
ಇಷ್ಟಕ್ಕೆ ಸುಮ್ಮನಾಗದ ಚಕ್ರವರ್ತಿ ಅವರು, ಪ್ರಿಯಾಂಕಾಗೆ ಕಂಗ್ರಾಟ್ಸ್ ಹೇಳುತ್ತಾರೆ, ಆಗ ಪ್ರಿಯಾಂಕಾ ಯಾವ ಖುಷಿಗೆ ಎನ್ನುತ್ತಾರೆ. ತೀರ್ಮಾನ ಮಾಡಿದೆಯಲ್ಲ ಅದ್ಕೆ ಎಂದು ಚಕ್ರವರ್ತಿ ಹೇಳುತ್ತಾರೆ. ಆಗ ನಾಚಿದ ಪ್ರಿಯಾಂಕ ತಗ್ದು ಬಿಟ್ಟಾ ಅಂದ್ರೆ, ಹುಚ್ಚಾ ನಿಮಗೆ, ಕಾಮನ್ ಸೆನ್ಸ್ ಇಲ್ವಾ ಎಂದು ಕಾರವಾಗಿ ಪ್ರತಿಕ್ರಿಯಿಸಿದ್ದಾರೆ. ಶಮಂತ್ ಒಳ್ಳೆ ಹುಡುಗ ಕಣಮ್ಮ ಎಂದು ಪ್ರಿಯಾಂಕಾಗೆ ಹೇಳುತ್ತಾರೆ ಚಕ್ರವರ್ತಿ, ನಾನು ಅವನಿಗೆ ಕನ್ವೆನ್ಸ್ ಮಾಡುತ್ತೇನೆ ನೀನು ಮುಂದುವರಿ ಎಂದು ಮತ್ತೆ ಪ್ರಿಯಾಂಕಾಗೆ ಹೇಳುತ್ತಾರೆ.
ಯಾಕೆ ನಾವು ಹೊರಗಡೆ ಹೋಗೋಕೆ ಆಸೆನಾ ನಿಮಗೆ, ನಾವಿಬ್ರೂ ಹೊಡೆದಾಡಿಕೊಂಡು ರಕ್ತ ಬರಿಸಿಕೊಂಡ್ರೆ ಹೊರಗಡೆ ಕಳುಹಿಸುತ್ತಾರೆ ಎಂದು ಪ್ರಿಯಾಂಕಾ ಸಿಟ್ಟಾಗುತ್ತಾರೆ. ಸೆನ್ಸ್ ಇಲ್ವಾ ನಿಮಗೆ, ಏನ್ ತಮಾಷೆ ನಿಮಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಚೆನ್ನಾಗಿ ಆಟ ಆಡ್ತಿಲ್ಲ, 500 ರೂ. ಕಳೆದುಕೊಂಡಿದ್ದೀರಿ ಎಂದು ಚಕ್ರವರ್ತಿ ವಿರುದ್ಧ ಪ್ರಿಯಾಂಕಾ ರೇಗಾಡುತ್ತಾರೆ. ಆದರೂ ನಿನ್ ಜೀವನ ಅಲ್ವೇನಮ್ಮ ಎಂದು ಚಕ್ರವರ್ತಿ ಹೇಳುತ್ತಾರೆ, ನನ್ನ ಜೀವನ ಹಾಳಾಗಿ ಹೋಗಲಿ, ನೀವ್ಯಾರು ನನಗೆ ಕೇರ್ ಮಾಡೋಕೆ, ನನಗೆ ನಮ್ಮ ಮನೆಯಲ್ಲಿ ಇದ್ದಾರೆ. ಈ ತರ ಕೇರ್ ಮಾಡೋಕೆ ನೀವ್ಯಾರು, ಎಷ್ಟು ತಾಕತ್ ನಿಮಗೆ? ಎಂದು ರೇಗಾಡುತ್ತಾರೆ. ಇಲ್ವಾ, ತಮಾಷೆ ಮಾಡಿದ್ದಾ? ನಾನು ಸೀರಿಯಸ್ಸಾಗಿ ತಿಳಿದುಕೊಂಡೆ ಎಂದು ಚಕ್ರವರ್ತಿ ಹೇಳುತ್ತಾರೆ. ಇದನ್ನೇ ಶುಭ ಪೂಂಜಾ ಅಣಗಿಸಿ, ರಂಜಿಸಿದ್ದಾರೆ.
ಬಳಿಕ ಶಮಂತ್ ಬಳಿ ಬಂದು, ನಾನ್ ಮಾತಾಡಿದಿನಿ ಬಾ ಮಗ ಫುಲ್ ಸೆಟ್ಲ್ ಮೆಂಟ್ ಮಾಡಿದಿನಿ. ಎಲ್ಲಾ ಸರಿ ಮಾಡಿದೆ, ಒಕೆ ಅಂತೆ ಬಾ, 735 ಮದುವೆ ಮಾಡಿಸಿದ್ದೇನೆ ಇದು 736ನೇಯದ್ದು. ಲವ್ ಮ್ಯಾರೇಜ್, ಓಡೋಗಿರೋ ಮ್ಯಾರೇಜ್ 735 ಮಾಡ್ಸಿದಿನಿ, ಇವನದ್ದು 736ನೇಯದ್ದು. ವಧುವಿನ ಕಡೆಯಿಂದ ಒಕೆ ಆಗಿದೆ, ವರನದ್ದೇ ಸಮಸ್ಯೆ ಎಂದು ಹೇಳುತ್ತಾರೆ. ಬೆಳಗ್ಗೆ ನಾನು ರಿಸಲ್ಟ್ ಹೇಳಬೇಕು ಬಾರಪ್ಪ ಸಪರೇಟ್ ಆಗಿ ಮಾತನಾಡೋಣ, ನೀನು ನನ್ನ ಪುಟ್ಟ ತಮ್ಮ ಬಾರೋ ಎಂದು ಶಮಂತ್‍ಗೆ ಚಕ್ರವರ್ತಿ ಕರೆದಿದ್ದಾರೆ. ನಾನು ಈ ರೂಟಲ್ಲಿ ಹೋಗಬೇಕಾ ಬೇಡವೇ ಎಂಬ ಕನ್ಫ್ಯೂಶನ್‍ನಲ್ಲೇ ಇದ್ದೇ, ಈಗ ರೂಟ್ ಕ್ಲಿಯರ್ ಆಯ್ತು ಎಂದು ಕೊನೆಯದಾಗಿ ಮನೆ ಮಂದಿಗೆ ಚಕ್ರವರ್ತಿ ಹೇಳಿದ್ದಾರೆ.
ಬೆಂಗಳೂರು: ಬಿಗ್‍ಬಾಸ್ ರಿಯಾಲಿಟಿ ಶೋ ಫಿನಾಲೆಗೆ ಒಂದೇ ವಾರ ಉಳಿದಿದೆ. ಈ ವಾರ ಪ್ರಿಯಾಂಕಾ ಬಿಗ್‍ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಪ್ರಿಯಾಂಕಾ ಬಿಗ್‍ಬಾಸ್ ಮನೆಗೆ ಎಂಟ್ರಿ ಪಡೆದ ದಿನ ಮತ್ತು ಹೊರ ಬಂದ ದಿನಕ್ಕಿರುವ ಸಾಮ್ಯತೆಯನ್ನು ಹೇಳಿ ಅವರ ತಾಯಿ ಕಣ್ಣೀರು ಹಾಕಿದ್ದಾರೆ.
ಪ್ರಿಯಾಂಕಾ ಮನೆಯಿಂದ ಹೊರ ಬಂದು ನಟ ಸುದೀಪ್ ಅವರ ಜೊತೆ ವೇದಿಕೆ ಹಂಚಿಕೊಂಡರು. ಮಗಳು ವೇದಿಕೆಯತ್ತ ಬರುತ್ತಿದ್ದಂತೆ ಪ್ರಿಯಾಂಕಾರ ತಾಯಿ ಕಣ್ಣೀರು ಹಾಕಲಾರಂಭಿಸಿದರು. ಈ ವೇಳೆ ಸುದೀಪ್, ಮಗಳು ಮನೆಯಿಂದ ಹೊರ ಬಂದಿದ್ದಕ್ಕೆ ನೋವಾಯ್ತಾ ಅಥವಾ ಬಹಳ ದಿನಗಳ ನಂತರ ನೋಡಿ ಖುಷಿಗೆ ಕಣ್ಣೀರು ಹಾಕುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಸುದೀಪ್ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ ತಾಯಿ, ಬಿಗ್‍ಬಾಸ್ ಮನಗೆ ಹೋದ ದಿನವೇ ಅವರ ತಂದೆಯ ಪೂಜೆ ಇತ್ತು. ಇಂದು ಸಹ ತಂದೆಯ ಪೂಜೆಯ ದಿನವೇ ಹೊರ ಬಂದಿದ್ದಾಳೆ ಎಂದು ಹೇಳಿ ಭಾವುಕರಾದರು. ಅಮ್ಮನ ಮಾತು ಕೇಳಿದ ಕೂಡಲೇ ಭಾವುಕರಾದ ಪ್ರಿಯಾಂಕಾ ತಾಯಿ ಬಳಿ ತೆರಳಿ ಸಮಾಧಾನಪಡಿಸಿದರು.
ಈ ಹಿಂದೆಯೂ ಪ್ರಿಯಾಂಕಾ ಹಲವು ಬಾರಿ ತಮ್ಮ ತಂದೆಯನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದರು. ಬಿಗ್‍ಬಾಸ್ ಮನೆಗೂ ಹೋಗುವ ಮೊದಲು ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸುವ ವೇಳೆಯೂ ಪ್ರಿಯಾಂಕಾ ತಮ್ಮ ತಂದೆಯನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದರು.
ಸದ್ಯ ಮನೆಯಲ್ಲಿ ದೀಪಿಕಾ ದಾಸ್, ಭೂಮಿ ಶೆಟ್ಟಿ, ಶೈನ್ ಶೆಟ್ಟಿ, ಹರೀಶ್ ರಾಜ್, ಕುರಿ ಪ್ರತಾಪ್ ಮತ್ತು ವಾಸುಕಿ ವೈಭವ್ ಉಳಿದುಕೊಂಡಿದ್ದರು. ಈ ವಾರದ ಮಧ್ಯೆದಲ್ಲಿ ಒಬ್ಬ ಸ್ಪರ್ಧಿ ಮನೆಯಿಂದ ಹೊರ ಬರಲಿದ್ದಾರೆ ಎಂಬುದನ್ನು ಸುದೀಪ್ ಶನಿವಾರದ ಸಂಚಿಕೆಯಲ್ಲಿ ಖಚಿತಪಡಿಸಿದ್ದಾರೆ. ಇತ್ತ ಪ್ರಿಯಾಂಕಾ ಮನೆಯಿಂದ ಹೊರ ಹೋಗುತ್ತಿದ್ದಂತೆ ಎಲ್ಲ ಸದಸ್ಯರು ಭಾವುಕರಾದರು.
ಬೆಂಗಳೂರು: ಬಿಗ್‍ಬಾಸ್ ಸ್ಪರ್ಧಿ ಪ್ರಿಯಾಂಕಾಗೆ ಟಾಸ್ಕ್ ಮಾಡುವಾಗ ಉಸಿರುಗಟ್ಟಿದೆ. ತಕ್ಷಣ ಅವರಿಗೆ ಬಿಗ್‍ಬಾಸ್ ಮನೆಯಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ.
ಬುಧವಾರ ಪ್ರಸಾರವಾದ ಸಂಚಿಕೆಯಲ್ಲಿ ಸ್ಪರ್ಧಿಗಳು ಎದ್ದೇಳಿದ ತಕ್ಷಣ ಬಿಗ್‍ಬಾಸ್ ಒಂದು ಟಾಸ್ಕ್ ನೀಡಿದ್ದರು. ಅದೇನೆಂದರೆ ಬಿಗ್‍ಬಾಸ್ ನೀಡಿದ್ದ ಗೊಂಬೆಯನ್ನು ಕೋಲಿನ ಒಂದು ತುದಿಯಲ್ಲಿ ಇಟ್ಟುಕೊಂಡು, ಬ್ಯಾಲೆನ್ಸ್ ಮಾಡಿಕೊಂಡು ಸ್ಪರ್ಧಿಗಳು ತಮ್ಮ ತಲೆ ಮೇಲೆ ಇಟ್ಟುಕೊಳ್ಳಬೇಕಿತ್ತು. ನಂತರ ಬಿಗ್‍ಬಾಸ್ ಸ್ಪರ್ಧಿಗಳಿಗೆ ನೀಡಲಾಗಿದ್ದ ಪ್ಲ್ಯಾಟ್ ಫಾರ್ಮ್ ಮೇಲೆ ನಿಂತುಕೊಂಡು ಮುಂದಿನ ಹಂತಕ್ಕೆ ತಲುಪಬೇಕಿತ್ತು.
ಬಿಗ್‍ಬಾಸ್ ನೀಡಿದ್ದ ಟಾಸ್ಕ್ ನಂತೆ ಎಲ್ಲಾ ಸ್ಪರ್ಧಿಗಳು ಗೊಂಬೆಯನ್ನು ಕೋಲಿನ ಮೇಲೆ ಇಟ್ಟುಕೊಂಡು ಬ್ಯಾಲೆನ್ಸ್ ಮಾಡುತ್ತಿದ್ದರು. ಮೊದಲಿಗೆ ವಾಸುಕಿ ತಮ್ಮ ಗೊಂಬೆ ಬೀಳಿಸಿಕೊಂಡು ಔಟಾದರು. ನಂತರ ದೀಪಿಕಾ, ಹರೀಶ್ ರಾಜ್, ಕುರಿ ಪ್ರತಾಪ್ ಮತ್ತು ಶೈನ್ ಶೆಟ್ಟಿ ಔಟಾದರು. ಕೊನೆಗೆ ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಗೊಂಬೆ ಬ್ಯಾಲೆನ್ಸ್ ಮಾಡುತ್ತಾ ನಿಂತುಕೊಂಡಿದ್ದರು.
ಪ್ರಿಯಾಂಕಾ ಕೊನೆಯ ಹಂತದವರೆಗೂ ತಲುಪಿದ್ದರು. ಆದರೆ ಇನ್ನೇನು ಗೆಲುವಿಗೆ ಒಂದೇ ಹೆಜ್ಜೆ ಬಾಕಿ ಇದೆ ಎನ್ನುವಾಗ ಗೊಂಬೆ ಕೆಳಗೆ ಬಿದ್ದಿದೆ. ಹಾಗಾಗಿ ಈ ಟಾಸ್ಕ್ ನಲ್ಲಿ ಭೂಮಿ ಶೆಟ್ಟಿ ಗೆದ್ದರು. ಆದರೆ ಟಾಸ್ಕ್ ನಿಂದ ಸುಸ್ತಾಗಿ ಪ್ರಿಯಾಂಕಾ ಕುಸಿದು ಬಿದ್ದಿದ್ದಾರೆ. ಆಗ ಅವರಿಗೆ ಉಸಿರಾಟದ ತೊಂದರೆ ಉಂಟಾಗಿದೆ. ತಕ್ಷಣ ಬಿಗ್‍ಬಾಸ್ ಪ್ರಿಯಾಂಕಾರನ್ನು ಕನ್ಫೆಷನ್ ರೂಮಿಗೆ ಕರೆದುಕೊಂಡು ಬನ್ನಿ ಎಂದು ಹೇಳಿದರು.
ಆಗ ಶೈನ್ ಪ್ರಿಯಾಂಕಾರನ್ನು ಎತ್ತಿಕೊಂಡು ಕನ್ಫೆಷನ್ ರೂಮಿಗೆ ಕರೆದುಕೊಂಡು ಹೋಗಿದ್ದಾರೆ. ಅವರ ಪರಿಸ್ಥಿತಿ ಏನಾಯಿತೋ ಏನೋ ಎಂದು ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು. ತುಂಬಾ ಹೊತ್ತಿನ ಬಳಿಕ ಪ್ರಿಯಾಂಕಾ ವಾಪಸ್ ಬಂದರು. ಈ ವೇಳೆ ಎಲ್ಲರೂ ಏನಾಯಿತು ಎಂದಾಗ, ಉಸಿರು ಕಟ್ಟಿದಂತಾಯಿತು, ಮಾಸ್ಕ್ ಮೂಲಕ ಆಕ್ಸಿಜನ್ ನೀಡಿದ್ದಾಗಿ ಹೇಳಿದ್ದಾರೆ.
ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ರ ಸ್ಪರ್ಧಿ ಪ್ರಿಯಾಂಕಾ ತಮ್ಮ ತಾಯಿಯ ಆಸೆಯನ್ನು ನೆರವೇರಿಸಿದ್ದಾರೆ. ಅಲ್ಲದೇ ಪ್ರಿಯಾಂಕಾರ ಡಬಲ್ ಸಂಭ್ರಮಕ್ಕೆ ಕಿಚ್ಚನಿಂದ ಒಂದು ಸ್ಪೆಷಲ್ ಗಿಫ್ಟ್ ಕೂಡ ಸಿಕ್ಕಿದೆ.
ಬಿಗ್‍ಬಾಸ್ ಮನೆಗೆ ಪ್ರಿಯಾಂಕಾ ತಾಯಿ ಬಂದಾಗ, ಚೆನ್ನಾಗಿ ಆಟವಾಡು, ನೀನು ಗೆಲ್ಲದಿದ್ದರೂ ಪರವಾಗಿಲ್ಲ ಸುದೀಪ್ ಸರ್ ಚಪ್ಪಾಳೆ ತೆಗೆದುಕೊಳ್ಳಬೇಕು. ಅದೇ ಗೆದ್ದಂತೆ ಎಂದು ಹೇಳಿದ್ದರು. ಅದೇ ವಾರ ಸುದೀಪ್ ಕೂಡ ಇನ್ನಾದರೂ ನೀವು ಆಟವಾಡಿ ಪ್ರಿಯಾಂಕಾ ಎಂದು ಬುದ್ಧಿ ಮಾತು ಹೇಳಿದ್ದರು. ಅದರಂತೆಯೇ ಪ್ರಿಯಾಂಕಾ ಈ ವಾರ ತುಂಬಾ ಚೆನ್ನಾಗಿ ಆಟವಾಡಿದ್ದರು. ಹೀಗಾಗಿ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಕಿಚ್ಚನ ಚಪ್ಪಾಳೆ ಪ್ರಿಯಾಂಕಾಗೆ ಸಿಕ್ಕಿದೆ. ಈ ಮೂಲಕ ಪ್ರಿಯಾಂಕಾ ತಮ್ಮ ತಾಯಿಯ ಆಸೆಯನ್ನು ನೆರವೇರಿಸಿದ್ದಾರೆ.
ನಾನು ಹೇಳಿದ ಮಾತನ್ನು ಸೀರಿಯಸ್ ಆಗಿ ತೆಗೆದುಕೊಂಡು, ತಮ್ಮನ್ನು ತಾವೂ ಬದಲಾಯಿಸಿಕೊಂಡು ಈ ವಾರ ತುಂಬಾ ಚೆನ್ನಾಗಿ ಆಟವಾಡಿದ್ದೀರಿ. ಹೀಗಾಗಿ ಈ ವಾರ ನಿಮಗೆ ಕಿಚ್ಚನ ಚಪ್ಪಾಳೆ ನಿಮಗೆ ಎಂದು ಸುದೀಪ್ ಚಪ್ಪಾಳೆ ತಟ್ಟಿದ್ದಾರೆ. ಆಗ ಪ್ರಿಯಾಂಕಾ, ನಮ್ಮ ತಾಯಿ ಬಂದಾಗ ನೀನು ಗೆಲ್ಲು ಅಂತಾ ಹೇಳಲಿಲ್ಲ. ಕಿಚ್ಚನ ಚಪ್ಪಾಳೆ ತಗೋ, ಅದೇ ಗೆದ್ದಂತೆ ಅಂದಿದ್ದರು. ಅದರಂತೆ ನಮ್ಮ ತಾಯಿಯ ಆಸೆ ನೆರವೇರಿದೆ ಸಾರ್ ಎಂದು ಸುದೀಪ್ ಅವರಿಗೆ ಧನ್ಯವಾದ ತಿಳಿಸಿದರು.
ಕಿಚ್ಚನ ಚಪ್ಪಾಳೆ ಸಿಕ್ಕ ಸಂಭ್ರಮ ಒಂದು ಕಡೆಯಾದರೆ ಮತ್ತೊಂದು ಕಡೆ ಈ ವಾರ ಮನೆಯ ಕ್ಯಾಪ್ಟನ್ ಬಿಟ್ಟು ಎಲ್ಲರೂ ನಾಮಿನೇಟ್ ಆಗಿದ್ದರು. ಕೊನೆಗೆ ಪ್ರಿಯಾಂಕಾ ಈ ವಾರ ಸೇಫ್ ಆಗಿದ್ದಾರೆ. ಹೀಗಾಗಿ ಪ್ರಿಯಾಂಕಾ ಡಬಲ್ ಸಂಭ್ರಮ ಪಟ್ಟಿದ್ದಾರೆ. ಈ ಡಬಲ್ ಸಂಭ್ರಮಕ್ಕೆ ಸುದೀಪ್ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಅದೇನೆಂದರೆ ಸುದೀಪ್ ತಮ್ಮ ಜಾಕೆಟ್ ಅನ್ನು ಪ್ರಿಯಾಂಕಾಗೆ ನೀಡಿದ್ದಾರೆ.
ಕಳೆದ ವಾರ ಸುದೀಪ್ ಒಂದು ಜಾಕೆಟ್ ಹಾಕಿಕೊಂಡಿದ್ದರು. ಆಗ ಪ್ರಿಯಾಂಕಾ, ಜಾಕೆಟ್ ತುಂಬಾ ಚೆನ್ನಾಗಿದೆ. ನನಗೆ ಕೊಡಿ ಸಾರ್ ಎಂದು ಕೇಳಿದ್ದರು. ಈ ವಾರ ಸುದೀಪ್ ಚಪ್ಪಾಳೆ ತೆಗೆದುಕೊಳ್ಳುವವರಿಗೆ ಆ ಜಾಕೆಟ್ ಕೊಡುತ್ತೇನೆ ಎಂದು ಹೇಳಿದ್ದರು. ಅದೇ ರೀತಿ ಚಪ್ಪಾಳೆ ತೆಗೆದುಕೊಂಡ ಪ್ರಿಯಾಂಕಾಗೆ ಕಿಚ್ಚ ತಮ್ಮ ಜಾಕೆಟ್‍ನ್ನು ಉಡುಗೊರೆಯಾಗಿ ನೀಡಿದ್ದಾರೆ. ಜಾಕೆಟ್ ಕೊಟ್ಟ ತಕ್ಷಣ ಅದನ್ನು ಧರಿಸಿಕೊಂಡು ಪ್ರಿಯಾಂಕಾ ಸಂಭ್ರಮಿಸಿದ್ದಾರೆ.
ಕನ್ನಡದ ಬಿಗ್‍ಬಾಸ್ ರಿಯಾಲಿಟಿ ಶೋ ಅಂತಿಮ ಹಂತ ತಲುಪಿದೆ. 93ನೇ ದಿನ ಮಧ್ಯರಾತ್ರಿ ಸ್ಪರ್ಧಿ ಪ್ರಿಯಾಂಕಾ ತಾಯಿ ಬಿಗ್‍ಬಾಸ್ ಮನೆಗೆ ಆಗಮಿಸಿದ್ದರು. ಪ್ರಿಯಾಂಕ ತಾಯಿ ಸುಕನ್ಯ ಅವರು ತಂದ ಕೊಬ್ಬರಿ ಮಿಠಾಯಿ ತಿಂದ ವಾಸುಕಿ ಸೇರಿದಂತೆ ಇತರ ಮನೆಯ ಸದಸ್ಯರು ಪುಷ್ಮಾ ಮಿಸ್ ಗೆ ಧನ್ಯವಾದ ಹೇಳಿದ್ದಾರೆ.
ಬಿಗ್‍ಬಾಸ್ ಸ್ಪರ್ಧಿಗಳು ಕುಟುಂಬಸ್ಥರನ್ನು ಬಿಟ್ಟು 93 ದಿನಗಳನ್ನು ಕಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ವಾರದಿಂದಲೂ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಸೋಮವಾರ ಕುರಿ ಪ್ರತಾಪ್ ಅವರ ಪತ್ನಿ ಮತ್ತು ಮಕ್ಕಳು ಆಗಮಿಸಿದ್ದರು. 93ನೇ ದಿನ ರಾತ್ರಿ 12.40ಕ್ಕೆ ಪ್ರಿಯಾಂಕಾ ತಾಯಿ ಸುಕನ್ಯ ಬಿಗ್‍ಬಾಸ್ ಮನೆಗೆ ಆಗಮಿಸಿ ಎಲ್ಲರಿಗೂ ಶಾಕ್ ನೀಡಿದರು.
ಮೊದಲಿಗೆ ಸುಕನ್ಯರನ್ನ ನೋಡಿದ ವಾಸುಕಿ, ಒಂದು ಕ್ಷಣ ಆಶ್ಚರ್ಯಗೊಂಡ ಜೋರಾಗಿ ಕೂಗಿದರು. ವಾಸುಕಿ ಕಿರುಚುತ್ತಿದ್ದಂತೆ ಮನೆಯ ಲೈಟ್ ಆನ್ ಆಯ್ತು. ನಿದ್ದೆಗಣ್ಣಿನಲ್ಲಿ ತಾಯಿಯನ್ನು ನೋಡಿದ ಪ್ರಿಯಾಂಕ ಒಂದು ಕ್ಷಣ ಭಾವುಕರಾಗಿ ಅಮ್ಮನನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು. ಪ್ರಿಯಾಂಕ ತಾಯಿ ಬರುವಾಗ ಕೊಬ್ಬರಿ ಮಿಠಾಯಿ ತಂದಿದ್ದರು. ಪ್ರಿಯಾಂಕ ಮತ್ತ ಸುಕನ್ಯರನ್ನು ಬೆಡ್‍ರೂಮಿನಲ್ಲಿ ಸ್ವೀಟ್ ಬೌಲ್ ನೊಂದಿಗೆ ಎಲ್ಲ ಸದಸ್ಯರು ಕಿಚನ್ ಬಳಿ ತೆರಳಿದರು. ಪ್ರಿಯಾಂಕ ಬರೋದಕ್ಕೂ ಮುನ್ನವೇ ಚಂದನ್ ಆಚಾರ್ಯ ಮಿಠಾಯಿ ತಿನ್ನಲು ಆರಂಭಿಸಿದರು.
ತಾಯಿ ಮನೆಯಿಂದ ಹೊರಹೋದ ಬಳಿಕ ಕಿಚನ್ ಬಳಿ ಬಂದ ಪ್ರಿಯಾಂಕಾ, ಕೊಬ್ಬರಿ ಮಿಠಾಯಿ ನಮ್ಮ ಆಂಟಿ ಮಾಡಿದ್ದು ಅಂತಾ ಅಮ್ಮ ಹೇಳಿದರು. ನಮ್ಮ ಆಂಟಿ ಪುಷ್ಪಾ ಶಿಕ್ಷಕಿ ಆಗಿದ್ದಾರೆ ಎಂದ ಕೂಡಲೇ ಮಿಠಾಯಿ ತಿನ್ನುತ್ತಿದ್ದ ವಾಸುಕಿ ವೈಭವ್ ಥ್ಯಾಂಕ್ಯೂ ಪುಷ್ಮಾ ಮಿಸ್ ಅಂತಾ ಧನ್ಯವಾದ ತಿಳಿಸಿದರು. ಹಾಗೆಯೇ ಉಳಿದ ಎಲ್ಲ ಸದಸ್ಯರು ರುಚಿ ರುಚಿಯಾದ ಕೊಬ್ಬರಿ ಮಿಠಾಯಿ ಮಾಡಿ ಕಳುಹಿಸಿದ ಪುಷ್ಪಾರಿಗೆ ಧನ್ಯವಾದ ತಿಳಿಸಿದರು.
ಬೆಂಗಳೂರು: ಬಿಗ್ ಬಾಸ್ ಮನೆಗೆ ಪ್ರಿಯಾಂಕಾ ಅವರ ತಾಯಿ ಎಂಟ್ರಿ ಕೊಟ್ಟಿದ್ದು, ಈ ವೇಳೆ ತಮ್ಮ ಮಗಳಿಗೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಕುರಿ ಪ್ರತಾಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಮಂಗಳವಾರ ಮಧ್ಯರಾತ್ರಿ ಪ್ರಿಯಾಂಕಾ ಅವರ ತಾಯಿ ಸುಕನ್ಯ ಬಿಗ್ ಬಾಸ್ ಮನೆಗೆ ಆಗಮಿಸಿದ್ದರು. ಈ ವೇಳೆ ಪ್ರಿಯಾಂಕಾ ಜೊತೆ ಮಾತನಾಡಿದ ಅವರು ಮಗಳಿಗೆ ಭೂಮಿ ಜೊತೆ ಪದೇ ಪದೇ ಜಗಳ ಮಾಡ್ಕೋಬೇಡ ಎಂದು ಸಲಹೆ ನೀಡಿದರು. ಪ್ರಿಯಾಂಕಾ ಹಾಗೂ ಭೂಮಿ ಮೊದಲ ವಾರದಿಂದ ಆತ್ಮೀಯ ಸ್ನೇಹಿತರಾಗಿದ್ದು, ಬಳಿಕ ಇಬ್ಬರ ನಡುವೆ ಅಂತರ ಶುರುವಾಯಿತು. ಇದನ್ನು ಗಮನಿಸಿದ ಸುಕನ್ಯ ಅವರು ನನ್ನ ಮಗಳಿಗೆ ಜಗಳವಾಡಬೇಡ, ಕೋಪ ಕಂಟ್ರೋಲ್ ಮಾಡ್ಕೋ ಎಂದು ಹೇಳಿದ್ದಾರೆ.
ಭೂಮಿ ಜೊತೆ ಮಾತನಾಡಿದ ಬಳಿಕ ಸುಕನ್ಯ ಅವರು ಕುರಿ ಪ್ರತಾಪ್ ಅವರನ್ನು ಹೊಗಳಿದ್ದಾರೆ. ಪ್ರಿಯಾಂಕಾ ಅವರ ತಂದೆ ನಿಧನರಾಗಿ ನಾಲ್ಕು ತಿಂಗಳಾಗಿದೆ. ಈ ಕಾರಣಕ್ಕಾಗಿ ಸುಕನ್ಯ ಅವರು ಪ್ರತಾಪ್ ಅವರ ಬಳಿ ಬಂದು ನಿಮ್ಮಿಂದ ನನ್ನ ಮಗಳು ತನ್ನ ತಂದೆಯನ್ನು ಕಳೆದುಕೊಂಡ ನೋವನ್ನು ಮರೆಯುತ್ತಿದ್ದಾಳೆ ಎಂದು ಅವರಿಗೆ ಧನ್ಯವಾದ ತಿಳಿಸಿದರು. ಸುಕನ್ಯ ಅವರ ಈ ನಡುವಳಿಕೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬೆಂಗಳೂರು: ಮಧ್ಯರಾತ್ರಿ ಮನೆಗೆ ಬಂದ ಅತಿಥಿಯನ್ನು ನೋಡಿ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ.
ಸೋಮವಾರ ಬಿಗ್ ಬಾಸ್ ಮನೆಗೆ ಕುರಿ ಪ್ರತಾಪ್ ಅವರ ಕುಟುಂಬಸ್ಥರು ಬಂದು ಹೋದ ಬೆನ್ನಲ್ಲೇ ಮಧ್ಯರಾತ್ರಿ ಪ್ರಿಯಾಂಕಾ ಅವರ ತಾಯಿ ಸುಕನ್ಯ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮಧ್ಯರಾತ್ರಿ ಸುಮಾರು 12.30ಕ್ಕೆ ಪ್ರಿಯಾಂಕಾ ತಾಯಿ ಸುಕನ್ಯ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಈ ವೇಳೆ ಸದಸ್ಯರೆಲ್ಲಾ ನಿದ್ದೆ ಮಾಡುತ್ತಿದ್ದರು. ಸುಕನ್ಯ ಅವರು ಮನೆಯೊಳಗೆ ಬರುತ್ತಿದ್ದಂತೆ ನಿದ್ದೆಯಲ್ಲಿದ್ದ ವಾಸುಕಿ ಕಣ್ಣು ತೆರೆದು ಜೋರಾಗಿ ಕಿರುಚಿಕೊಂಡಿದ್ದಾರೆ. ವಾಸುಕಿ ಕಿರುಚಿಕೊಳ್ಳುತ್ತಿದ್ದಂತೆ ಮನೆಯ ಇತರ ಸ್ಪರ್ಧಿಗಳು ಜೋರಾಗಿ ಕಿರುಚಾಡಲು ಶುರು ಮಾಡಿದ್ದಾರೆ.
ಸುಕನ್ಯ ಅವರು ರೂಮಿನೊಳಗೆ ಬರುತ್ತಿದ್ದಂತೆ ಪ್ರಿಯಾಂಕಾ ಅವರನ್ನು ಮಾತನಾಡಿಸಿದ್ದಾರೆ. ಇದೇ ವೇಳೆ ಸುಕನ್ಯ ಅವರು ಕೊಬ್ಬರಿ ಮಿಠಾಯಿ ತಂದಿದ್ದು, ಮನೆಯ ಸದಸ್ಯರು ಪರಸ್ಪರ ಕಿತ್ತಾಡಿಕೊಂಡು ಅದನ್ನು ತಿಂದಿದ್ದಾರೆ. ಸುಕನ್ಯ ಮನೆಯ ಸದಸ್ಯರ ಜೊತೆ ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಇಷ್ಟು ದಿನ ಪ್ರಿಯಾಂಕಾ ತನ್ನ ತಾಯಿಗಾಗಿ ಕಾಯುತ್ತಿದ್ದರು. ಇದೀಗ ಅವರ ತಾಯಿ ಮಧ್ಯರಾತ್ರಿ ಎಂಟ್ರಿ ಕೊಟ್ಟಿದ್ದು, ಇದರಿಂದ ಪ್ರಿಯಾಂಕಾ ಖುಷಿಯಾಗಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಮನೆಗೆ ಕುರಿ ಪ್ರತಾಪ್ ಅವರ ಪತ್ನಿ ಹಾಗೂ ಮಕ್ಕಳು ಭೇಟಿ ನೀಡಿದರು. ಈ ವೇಳೆ ಪ್ರತಾಪ್ ಅವರ ಪತ್ನಿ ಸರಿತಾ ಸ್ಪರ್ಧಿ ಪ್ರಿಯಾಂಕಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಸೋಮವಾರ ಬಿಗ್ ಬಾಸ್ ಮನೆಗೆ ಕುರಿ ಪ್ರತಾಪ್ ಅವರ ಪತ್ನಿ ಸರಿತಾ ಆಗಮಿಸಿದ್ದರು. ಈ ವೇಳೆ ಸರಿತಾ ಅವರು ಮನೆ ಮಂದಿ ಜೊತೆ ಆತ್ಮೀಯವಾಗಿ ಮಾತನಾಡಿಸಿ ತಾವು ತಂದಿದ್ದ ತಿಂಡಿಯನ್ನು ಪ್ರತಾಪ್ ಅವರಿಗೆ ನೀಡದೇ ವಾಸುಕಿ ಅವರಿಗೆ ಕೊಟ್ಟಿದ್ದಾರೆ. ಸರಿತಾ, ಪ್ರತಾಪ್ ಜೊತೆ ಮಾತನಾಡಿದ ಬಳಿಕ ಪ್ರಿಯಾಂಕಾ ಅವರ ಬಳಿ ಹೋಗಿ ಧನ್ಯವಾದ ತಿಳಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಹಾಗೂ ಪ್ರಿಯಾಂಕಾ ಆತ್ಮೀಯ ಸ್ನೇಹಿತರು. ಪ್ರಿಯಾಂಕಾ ಯಾವಾಗಲೂ ಪ್ರತಾಪ್ ಅವರನ್ನು ಕೇರ್ ಮಾಡುತ್ತಿರುತ್ತಾರೆ. ಅಲ್ಲದೆ ಆ ಬಟ್ಟೆ ಹಾಕಿ ನೀವು ಚೆನ್ನಾಗಿ ಕಾಣುತ್ತೀರಾ, ಚೆನ್ನಾಗಿ ಊಟ ಮಾಡಿ ಎಂದು ಟಿಪ್ಸ್ ಕೂಡ ನೀಡುತ್ತಿರುತ್ತಾರೆ. ಇದನ್ನೆಲ್ಲಾ ಗಮನಿಸಿದ ಸರಿತಾ ಅವರು ಬಿಗ್ ಬಾಸ್ ಮನೆಗೆ ಬಂದಾಗ ಪ್ರಿಯಾಂಕಾ ಅವರ ಬಳಿ ಹೋಗಿ ನೀವು ಪ್ರತಾಪ್ ಅವರನ್ನು ತುಂಬಾ ಕೇರ್ ಮಾಡುತ್ತಿದ್ದೀರಾ, ಧನ್ಯವಾದಗಳು ಎಂದು ಹೇಳಿದ್ದಾರೆ.
ಪ್ರತಾಪ್ ಅವರ ಪತ್ನಿ ಜೊತೆ ಇಬ್ಬರು ಮಕ್ಕಳು ಕೂಡ ಆಗಮಿಸಿದ್ದು, ತಮ್ಮ ತಂದೆಗಾಗಿ ಉಡುಗೊರೆಯನ್ನು ನೀಡಿದ್ದರು. ಸರಿತಾ ಹಾಗೂ ಮಕ್ಕಳು ಮನೆಯಿಂದ ಹೊರಟು ಹೋದ ಮೇಲೆ ಪ್ರತಾಪ್ ರೂಮಿನಲ್ಲಿ ಕುಳಿತು ತಮ್ಮ ಮಕ್ಕಳು ನೀಡಿದ ಗಿಫ್ಟ್ ಅನ್ನು ನೋಡಿ ಭಾವುಕರಾದರು. ಈ ವೇಳೆ ಪ್ರಿಯಾಂಕಾ ಅಲ್ಲಿಗೆ ಬಂದು ಕುರಿ ಪ್ರತಾಪ್ ಅವರನ್ನು ಸಮಾಧಾನ ಮಾಡಿದ್ದಾರೆ.