ಪಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದಿರುವ ವಿಶ್ವಾಸಘಾತುಕ ಕೃತ್ಯ ಮತ್ತು ಅಮಾನವೀಯ ಹಿಂಸಾಚಾರದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ಪದಗಳು ಸಾಲದು ಎಂದು ಶಾರುಖ್ ಖಾನ್ ಖಂಡಿಸಿದ್ದಾರೆ. ಉಗ್ರರ ಅಟ್ಟಹಾಸದ ಕುರಿತು ಶಾರುಖ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ಪದಗಳಿಲ್ಲ. ದುಃಖದಲ್ಲಿರುವ ಕುಟುಂಬಗಳಿಗೆ ದೇವರಲ್ಲಿ ಪ್ರಾರ್ಥಿಸೋಣ. ಈ ಹೇಯ ಕೃತ್ಯದ ವಿರುದ್ಧ ನಾವು ಒಗ್ಗಟ್ಟಾಗಿ, ಬಲವಾಗಿ ನಿಂತು ಈ ಕೃತ್ಯ ಮಾಡಿದವರಿಗೆ ತಕ್ಕ ಶಾಸ್ತಿಯಾಗಲಿ ಎಂದು ಹಾರೈಸೋಣ ಎಂದು ಶಾರುಖ್ ಖಾನ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಭೂಮಿಯ ಮೇಲಿನ ಸ್ವರ್ಗವಾದ ಕಾಶ್ಮೀರ ನರಕವಾಗಿ ಬದಲಾಗುತ್ತಿದೆ. ಅಮಾಯಕ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ. ನನ್ನ ಹೃದಯ ಅವರ ಕುಟುಂಬಗಳಿಗಾಗಿ ಮಿಡಿಯುತ್ತದೆ. ಒಬ್ಬ ಅಮಾಯಕ ವ್ಯಕ್ತಿಯನ್ನು ಕೊಲ್ಲುವುದು ಇಡೀ ರಾಷ್ಟ್ರವನ್ನೇ ಕೊಂದಂತೆ ಎಂದು ಸಲ್ಮಾನ್ ಖಾನ್ (Salman Khan) ಬರೆದಿದ್ದಾರೆ.

ಕಂಗನಾ ರಣಾವತ್ (Kangana Ranaut) ಹಂಚಿಕೊಂಡಿರುವ ಸ್ಟೋರಿಯಲ್ಲಿ, ಆ ದುರುಳರು ಅಮಾಯಕರ ಮೇಲೆ ದಾಳಿ ಮಾಡಿದ್ದಾರೆ. ಅಮಾಯಕರ ಮೇಲೆ ದಾಳಿ ಮಾಡಿ ನಪುಂಸಕತನ ಮೆರೆದಿದ್ದಾರೆ. ಇತಿಹಾಸದಲ್ಲಿ ಪ್ರತಿ ಯುದ್ಧವೂ ಸಹ ಯುದ್ಧಭೂಮಿಯಲ್ಲೇ ನಡೆದಿದೆ. ಆದರೆ ಈ ನಪುಂಸಕರು ಅಮಾಯಕರ ಮೇಲೆ ನಿರಸ್ತ್ರರಾಗಿರುವವರ ಮೇಲೆ ದಾಳಿ ಮಾಡಿದ್ದಾರೆ. ಯುದ್ಧಭೂಮಿಯ ಹೊರಗೆ ಕಾದಾಟ ಮಾಡುತ್ತಿರುವ ಈ ನಪುಂಸಕರ ಮೇಲೆ ಯುದ್ಧವಾದರೂ ಮಾಡುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಭಯೋತ್ಪಾದಕರಿಗೆ ಧರ್ಮ ಇದೆ, ಸಂತ್ರಸ್ತರಿಗೂ ಧರ್ಮ ಇದೆ ಎಂದಿದ್ದಾರೆ. ಭಯೋತ್ಪಾದಕರ ಧರ್ಮದ ಬಗ್ಗೆ ಬಹಿರಂಗವಾಗಿ ಹೇಳದೆ, ಮುಸ್ಲಿಂ ಭಯೋತ್ಪಾದಕರಿಂದ ಹಿಂದುಗಳು ದಶಕಗಳಿಂದಲೂ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಪ್ರಿಯಾಂಕಾ ಚೋಪ್ರಾ (Priyanka Chopra) ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಪಹಲ್ಗಾಮ್ ದಾಳಿಯ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಇದೊಂದು ಅತ್ಯಂತ ಹೇಯ ಕೃತ್ಯ ಎಂದು ಬರೆದುಕೊಂಡಿದ್ದಾರೆ. ಭಯೋತ್ಪಾದನೆಯ ಈ ಅಮಾನವೀಯ ಕೃತ್ಯವನ್ನು ಅವರು ಖಂಡಿಸಿದ್ದಾರೆ. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರ ಕುಟುಂಬದೊಂದಿಗೆ ಇವೆ. ಗಾಯಗೊಂಡಿರುವ ದಂಪತಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಅನುಪಮ್ ಖೇರ್ (Anupam Kher) ಮಾತನಾಡಿ, ಇಂದು ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಆಗಿದೆ. 27 ಹಿಂದೂಗಳನ್ನು ಹುಡುಕಿ ಹುಡುಕಿ ಕೊಲ್ಲಲಾಗಿದೆ. ದುಃಖದ ಜೊತೆ ಕ್ರೋಧ, ಸಿಟ್ಟು ಬರುತ್ತದೆ. ನಾನು ಇದನ್ನು ಜೀವನದಲ್ಲಿ ಬಹಳಷ್ಟು ನೋಡಿದ್ದೇನೆ. ಕಾಶ್ಮೀರದಲ್ಲಿ ಹಿಂದೂಗಳ ಜನರೊಂದಿಗೆ ಜೊತೆ ಹೀಗೆ ಆಗ್ತಾನೇ ಇದೆ. ‘ಕಾಶ್ಮೀರ್ ಫೈಲ್ಸ್’ ಅವರ ಕಥೆಯಾಗಿದ್ದು, ಇದನ್ನು ಸಿನಿಮಾ ಮಾಡಿದಾಗ ಪ್ರೊಪಗಾಂಡ ಎಂದು ಕರೆದ್ರಿ. ದೇಶದ ವಿವಿಧ ಭಾಗಗಳಿಂದ ಜನರು ತಮ್ಮ ರಜಾದಿನಗಳನ್ನು ಕಳೆಯಲು ಕುಟುಂಬದ ಜೊತೆ ಕಾಶ್ಮೀರಕ್ಕೆ ಬಂದರು. ಈ ವೇಳೆ, ಅವರ ಧರ್ಮವನ್ನು ತಿಳಿದು ಕೊಲ್ಲಲಾಗಿದೆ ಎಂದು ಕೃತ್ಯವನ್ನು ಖಂಡಿಸಿದ್ದಾರೆ.

ಇದರ ಬಗ್ಗೆ ಮಾತನಾಡೋಕೆ ಶಬ್ದವೇ ಸಿಗೋದಿಲ್ಲ. ಪತಿಯ ಮೃತ ದೇಹದ ಜೊತೆಗಿದ್ದ ಮಹಿಳೆಯನ್ನು ನಾನು ಮರೆಯಲು ಸಾಧ್ಯವಿಲ್ಲ. ನಾನು ಪಲ್ಲವಿ ಜಿ ಅವರ ಸಂದರ್ಶನ ನೋಡಿದೆ. ಪತಿಯನ್ನ ಕಣ್ಣೆದುರೇ ಸಾಯಿಸಿದಾಗ ನನ್ನನ್ನು ನನ್ನ ಮಗನನ್ನು ಸಾಯಿಸಿ ಅಂದಾಗ, ನಿಮ್ಮನ್ನು ಸಾಯಿಸಲ್ಲ ಮೋದಿಗೆ ಹೋಗಿ ಹೇಳಿ ಅಂದ್ರಲ್ಲ. ಬಹುಶಃ ಅವನು ಒಂದು ಸಂದೇಶವನ್ನು ನೀಡಲು ಬಯಸಿದ್ದಿರಬಹುದು ಎಂದಿದ್ದಾರೆ. ಮೋದಿಯವರು ಹಾಗೂ ಅಮಿತ್ ಶಾ ಅವರ ಬಳಿ ನಾನು ಕೇಳಿಕೊಳ್ಳುವುದೇನಂದರೆ ಉಗ್ರರಿಗೆ ನಾವು ಎಂಥಹ ಪಾಠ ಕಲಿಸಬೇಕು ಅಂದರೆ ಇನ್ನೂ ಏಳು ಜನ್ಮ ಎತ್ತಿ ಬಂದ್ರೂ ಇಂಥಹ ದುಷ್ಟ ಕೆಲಸ ಮಾಡುವ ಯೋಚನೆನೇ ಅವರಿಗೆ ಬರಬಾರದು ಎಂದಿದ್ದಾರೆ.