Tag: ಪ್ರಿನ್ಸಿಪಲ್

  • ಕಾಲೇಜು ಆವರಣದಲ್ಲಿ ಸ್ಯಾನಿಟರಿ ಪ್ಯಾಡ್ ಪತ್ತೆ- 68 ವಿದ್ಯಾರ್ಥಿನಿಯರ ಒಳವಸ್ತ್ರ ಬಿಚ್ಚಿಸಿ ತಪಾಸಣೆ

    ಕಾಲೇಜು ಆವರಣದಲ್ಲಿ ಸ್ಯಾನಿಟರಿ ಪ್ಯಾಡ್ ಪತ್ತೆ- 68 ವಿದ್ಯಾರ್ಥಿನಿಯರ ಒಳವಸ್ತ್ರ ಬಿಚ್ಚಿಸಿ ತಪಾಸಣೆ

    – ವಿಚಿತ್ರ ನಿಯಮ ಖಂಡಿಸಿದ್ದಕ್ಕೆ ಹೊರಹಾಕೋ ಬೆದರಿಕೆ

    ಗಾಂಧಿನಗರ: ಋತುಸ್ರಾವ ಆಗಿದೆಯೇ ಇಲ್ಲವೇ ಎಂದು ತಿಳಿಯಲು ಬಲವಂತವಾಗಿ 68 ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ತೆಗೆಸಿ ಪರೀಕ್ಷೆ ನಡೆಸಿರುವ ಘಟನೆ ಗುಜರಾತ್‍ನ ಕಛ್ ಜಿಲ್ಲೆಯ ಭುಜ್‍ನ ಶ್ರೀ ಸಹಜಾನಂದ್ ಗರ್ಲ್ಸ್ ಇನ್‍ಸ್ಟಿಟ್ಯೂಟ್‍ನಲ್ಲಿ ನಡೆದಿದೆ.

    ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸ್ಯಾನಿಟರ್ ಪ್ಯಾಡ್ ಕಂಡು ಬಂದ ಕಾರಣ ವಿದ್ಯಾರ್ಥಿನಿಯರನ್ನು ಈ ರೀತಿ ಪರೀಕ್ಷೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಮ್ಮನ್ನ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಪ್ರಿನ್ಸಿಪಾಲ್ ಸೇರಿದಂತೆ ನಾಲ್ವರು ಶಿಕ್ಷಕಿಯರು ಬಲವಂತವಾಗಿ ನಮ್ಮ ಒಳಉಡುಪುಗಳನ್ನು ಬಿಚ್ಚಿಸಿದ್ದಾರೆ. ಪ್ರತಿಭಟನೆ ನಡೆಸಿದರೆ ಹಾಸ್ಟಲ್‍ನಿಂದ ಹೊರ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿನಿಯರು ಅಳಲು ತೊಡಿಕೊಂಡಿದ್ದಾರೆ.

    ಮುಟ್ಟಿನ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‍ನ ಅಡುಗೆ ಕೋಣೆ, ಆವರಣದ ದೇವಸ್ಥಾನಕ್ಕೆ ಪ್ರವೇಶವಿಲ್ಲ ಮತ್ತು ಇತರ ವಿದ್ಯಾರ್ಥಿಗಳ ಜೊತೆಗೆ ಬೆರೆಯುವಂತಿಲ್ಲ ಎಂಬ ನಿಯಮಗಳು ಕಾಲೇಜಿನಲ್ಲಿವೆ ಎಂದು ತಿಳಿದು ಬಂದಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಋತುಸ್ರಾವದ ವಿಷಯವನ್ನು ಮುಚ್ಚಿಡುತ್ತಾರೆ. ಈ ಕಾರಣದಿಂದಾಗಿ ಅವರನ್ನು ಬಟ್ಟೆ ಬಿಚ್ಚಿಸಿ ಪರಿಶೀಲನೆ ನಡೆಸಲಾಯಿತು.

    ಪ್ರಿನ್ಸಿಪಲ್ ರೀತಾ ಬೇನ್ ರಾಣಿಗಾ, ಅಡ್ಮಿನಿಸ್ಟ್ರೇಟರ್ ಅನೀತಾ ಬೇನ್, ಶಿಕ್ಷಕಿ ರಮಿಲಾ ಬೇನ್ ಹಾಗೂ ನಯನಾ ಬೇನ್ ವಿದ್ಯಾರ್ಥಿನಿಯರನ್ನು ಶೌಚಾಲಯಲಕ್ಕೆ ಕರೆಸಿ ಅವರ ಬಟ್ಟೆ ಬಿಚ್ಚಿಸಿ ಪರಿಶೀಲನೆ ಮಾಡಿದ್ದಾರೆ. ಪ್ರಿನ್ಸಿಪಲ್ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಲಾಗಿದ್ದು, ಮಂಗಳವಾರ ಬೆಳಗ್ಗೆ 11ರಿಂದ 12 ಗಂಟೆ ನಡುವೆ ಎಲ್ಲಾ ವಿದ್ಯಾರ್ಥಿನಿಯರನ್ನು ಕರೆಯಲಾಯಿತು. ಬಳಿಕ ಒಬ್ಬೊಬ್ಬ ವಿದ್ಯಾರ್ಥಿಯನ್ನು ಪ್ರಿನ್ಸಿಪಾಲ್ ಕೊಠಡಿಗೆ ಕರೆದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಈ ಘಟನೆ ಕುರಿತು ತನಿಖೆ ನಡೆಸುವಂತೆ ಗುಜರಾತ್ ರಾಜ್ಯ ಮಹಿಳಾ ಆಯೋಗ ಸಮಿತಿ ರಚಿಸಿದ್ದು, ಸಮಿತಿ ಸದಸ್ಯರು ವಿದ್ಯಾರ್ಥಿನಿಯರನ್ನು ಭೇಟಿಯಾಗಿ ಮಾತುಕತೆ ನಡೆಸಿ ವಿಷಯವನ್ನು ಸಂಗ್ರಹಿಸಲಿದ್ದಾರೆ. ಜೊತೆಗೆ ಘಟನೆ ಕುರಿತು ವಿವರಣೆ ನೀಡುವಂತೆ ಕಾಲೇಜಿಗೆ ನೋಟೀಸ್ ನೀಡಲಾಗಿದೆ ಎಂದು ಗುಜರಾತ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಲೀಲಾ ಅಂಕೋಲಿಯಾ ತಿಳಿಸಿದ್ದಾರೆ.

  • ಪ್ರಿನ್ಸಿಪಾಲ್ ಕಿರುಕುಳದಿಂದ 7ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

    ಪ್ರಿನ್ಸಿಪಾಲ್ ಕಿರುಕುಳದಿಂದ 7ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

    ಬೆಂಗಳೂರು: ಪ್ರಾಂಶುಪಾಲರ ಕಿರುಕುಳ ಸಹಿಸಿಕೊಳ್ಳಲು ಆಗದೇ ವಿದ್ಯಾರ್ಥಿಯೊಬ್ಬ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಸವನಹಳ್ಳಿ ಬಳಿಯಿರುವ ಖಾಸಗಿ ಕಾಲೇಜಿನಲ್ಲಿ ನಡೆದಿದೆ.

    ಶ್ರೀಹರ್ಷ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಮೂಲತಃ ಆಂಧ್ರ ಪ್ರದೇಶದವನಾಗಿದ್ದು, ಎಂಜಿನಿಯರಿಂಗ್ ಓದುತ್ತಿದ್ದನು. ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಟಾರ್ಚರ್ ಸಹಿಸಿಕೊಳ್ಳಲು ಆಗದೇ ಹರ್ಷ ಇಂದು ಬೆಳಗ್ಗೆ ಕಾಲೇಜಿನ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಹಿಂದೆ ಹರ್ಷ ಹಾಸ್ಟೆಲಿನಲ್ಲಿ ಊಟ, ತಿಂಡಿ ಸರಿ ಇಲ್ಲ ಎಂದು ಪ್ರತಿಭಟಿಸಿದ್ದನು. ಹೀಗಾಗಿ ಪ್ರಾಂಶುಪಾಲರು ಹರ್ಷ ಸೇರಿ 20 ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಿದ್ದರು. ಅಲ್ಲದೆ ಕಳೆದ ಒಂದು ತಿಂಗಳಿಂದ ಹರ್ಷ ಕಾಲೇಜಿನಿಂದ ಸಸ್ಪೆಂಡ್ ಆಗಿದ್ದನು.

    ಹರ್ಷ ಒಂದು ತಿಂಗಳಿಂದ ಕಾಲೇಜಿನಲ್ಲಿ ಕಿರುಕುಳ ಅನುಭವಿಸುತ್ತಿದ್ದನು. ಈ ನಡುವೆ ಹರ್ಷ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಆಯ್ಕೆಯಾಗಿದ್ದನು. ಹರ್ಷ ಸಸ್ಪೆಂಡ್ ಆಗಿದ್ದ ಎಂದು ಕಾಲೇಜು ಆಡಳಿತ ಮಂಡಳಿ ಆಫರ್ ಲೆಟರ್ ಅನ್ನು ಹರಿದು ಹಾಕಿತ್ತು. ಇದರಿಂದ ಬೇಸರಗೊಂಡ ಹರ್ಷ ಇಂದು ಬೆಳಗ್ಗೆ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ವಸತಿ ಶಾಲೆಯಲ್ಲಿ ತಿನ್ನಲು ಅನ್ನ ಸಿಗದೆ ವಿದ್ಯಾರ್ಥಿಗಳ ಕಣ್ಣೀರು

    ವಸತಿ ಶಾಲೆಯಲ್ಲಿ ತಿನ್ನಲು ಅನ್ನ ಸಿಗದೆ ವಿದ್ಯಾರ್ಥಿಗಳ ಕಣ್ಣೀರು

    ಬೀದರ್: ವಸತಿ ಶಾಲೆಯ ಮಕ್ಕಳು ತಿನ್ನಲು ಅನ್ನ ಸಿಗದೆ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದ್ದು, ಪ್ರಾಂಶುಪಾಲರು ಹಾಗೂ ಡಿ ಗ್ರೂಪ್ ನೌಕರರು ವಿದ್ಯಾರ್ಥಿಗಳಿಗೆ ಊಟ ಹಾಕದೆ ದರ್ಬಾರ್ ನಡೆಸುತ್ತಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪಳ್ಳಿ ಗ್ರಾಮದಲ್ಲಿರುವ ವಸತಿ ಶಾಲೆಯಲ್ಲಿ ನಡೆದಿದೆ.

    ವನಮಾರಪಳ್ಳಿ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯ 450ಕ್ಕೂ ಹೆಚ್ಚು ಮಕ್ಕಳಿಗೆ ತಿನ್ನಲು ಅನ್ನ ಸಿಗದೆ ಪ್ರತಿದಿನ ನರಕಯಾತನೆ ಪಡುತ್ತಿದ್ದಾರೆ. ಸರ್ಕಾರದಿಂದ ಲಕ್ಷಾಂತರ ರೂ. ಅನುದಾನ ಬಂದರೂ ಮಕ್ಕಳಿಗೆ ಮಾತ್ರ ಊಟ, ಆಸನಗಳು ಸೇರಿದಂತೆ ಮೂಲಭೂತ ಸೌಕರ್ಯ ನೀಡದೆ ಮಹಾ ದೋಖಾ ಮಾಡುತ್ತಿದ್ದಾರೆ. ಅನ್ನ ನೀಡಿದರೂ ಅದರಲ್ಲಿ ಹುಳಗಳು ಇಲ್ಲಾ ಕೆಟ್ಟು ಹೋಗಿರುವ ಅನ್ನ ನೀಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪ ಮಾಡುತ್ತಿದ್ದಾರೆ. ಜೊತೆಗೆ ಮಕ್ಕಳಿಗೆ ಆಸನದ ವ್ಯವಸ್ಥೆ ಕೂಡ ಇಲ್ಲದೆ ನೆಲದ ಮೇಲೆ ನಿದ್ದೆ ಮಾಡಬೇಕಾಗಿದೆ.

    ವಸತಿ ಶಾಲೆಯ ಮುಖ್ಯಸ್ಥ ಪ್ರಕಾರ, ಪ್ರತಿದಿನ ಒಂದೊಂದು ವಿವಿಧ ಆಹಾರವನ್ನು ಮಕ್ಕಳಿಗೆ ನೀಡಬೇಕು. ಆದರೆ ಇಲ್ಲಿಯ ಮಕ್ಕಳಿಗೆ ಅನ್ನವನ್ನೇ ಸರಿಯಾಗಿ ನೀಡುತ್ತಿಲ್ಲ. ಪ್ರತಿ ವರ್ಷ ವಸತಿ ಶಾಲೆಗೆ ಲಕ್ಷಾಂತರ ರೂ. ಅನುದಾನ ಬಂದರೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತ್ರ ಭ್ರಷ್ಟಾಚಾರಕ್ಕೆ ಆಹುತಿಯಾಗಿ ಬಿಟ್ಟಿದ್ದಾರೆ.

    ಪ್ರತಿದಿನ ವಸತಿ ಶಾಲೆಯ ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದರೂ ಸ್ವಕ್ಷೇತ್ರದ ಸಚಿವರಾದ ಪ್ರಭು ಚವ್ಹಾಣ್ ಮಾತ್ರ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಸಚಿವರ ಗ್ರಾಮದಿಂದ ಕೂಗಳತೆ ದೂರದಲ್ಲಿರುವ ಈ ವಸತಿ ನಿಲಯದ ಮಕ್ಕಳ ಗೋಳು ಕೇಳದ ಸಚಿವರು ಏಕೆ ಸಚಿವ ಸ್ಥಾನದಲ್ಲಿ ಮುಂದುವರೆಯುತ್ತಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ಪ್ರಾಂಶುಪಾಲರನ್ನು ಪ್ರಶ್ನಿಸಿದರೆ, ಇದೆಲ್ಲಾ ಡಿ ಗ್ರೂಪ್ ನೌಕರರ ಸಮಸ್ಯೆಯಿಂದ ಆಗಿದೆ ನನ್ನ ದರ್ಬಾರ್ ಏನು ಇಲ್ಲಾ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.

  • ವಿದೇಶದಲ್ಲಿ ಕೆಲಸದ ಆಫರ್ – ಲಕ್ಷಾಂತರ ರೂ. ಹಣ ಪಡೆದು ಪ್ರಿನ್ಸಿಪಾಲ್ ಪರಾರಿ

    ವಿದೇಶದಲ್ಲಿ ಕೆಲಸದ ಆಫರ್ – ಲಕ್ಷಾಂತರ ರೂ. ಹಣ ಪಡೆದು ಪ್ರಿನ್ಸಿಪಾಲ್ ಪರಾರಿ

    ಕಾರವಾರ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ಪ್ರಾಂಶುಪಾಲನೋರ್ವ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಪರಾರಿಯಾದ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ.

    ಹೊನ್ನಾವರದಲ್ಲಿ ಕಳೆದ 2016ರಿಂದ ‘ಕಲ್ಪತರು’ ಹೆಸರಿನಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್ ಕಾಲೇಜು ಪ್ರಾರಂಭವಾಗಿತ್ತು. ಹೋಟೆಲ್ ಮ್ಯಾನೇಜ್ ಮೆಂಟ್ ಕೋರ್ಸ್ ಮುಗಿಸಿದರೆ ವಿದೇಶದಲ್ಲಿ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ಕಾಲೇಜಿನ ಪ್ರಾಂಶುಪಾಲ ಚೆನ್ನೈ ಮೂಲದ ಗಂಗಾಧರ ವಿದ್ಯಾರ್ಥಿಗಳನ್ನು ಕೋರ್ಸ್‍ಗೆ ದಾಖಲು ಮಾಡಿಕೊಂಡಿದ್ದ.

    ಕಾಲೇಜು ಶುಲ್ಕ ಎಂದು ಪ್ರತಿಯೊಬ್ಬರಿಂದ 60 ಸಾವಿರ ಹಣವನ್ನು ಸಹ ಪಡೆದಿದ್ದ. ಇನ್ನು ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಹಾಂಕಾಂಗ್‍ನಲ್ಲಿರುವ ‘ಶಾಂಗ್ರಿಲಾ’ ಹೋಟೆಲ್ ನಲ್ಲಿ ಕೆಲಸ ಕೊಡಿಸುವುದಾಗಿ ಪ್ರಾಂಶುಪಾಲ ಗಂಗಾಧರ ಸುಮಾರು 76 ವಿದ್ಯಾರ್ಥಿಗಳಿಂದ 1.10 ಲಕ್ಷ ಹಣವನ್ನ ಪಡೆದಿದ್ದ. ವಿದ್ಯಾರ್ಥಿಗಳಿಗೆ ಪಾಸ್ ಪೋರ್ಟ್ ವೀಸಾ ಮಾಡಿಸಿ ಕೆಲಸಕ್ಕೆ ಕಳುಹಿಸುವುದಾಗಿ ಹೇಳಿ ಮೇ 6ರಂದು ಬೆಂಗಳೂರಿಗೆ ಕರೆಸಿಕೊಂಡಿದ್ದಾನೆ. ಅಲ್ಲಿಂದ ಮೇ 10 ರಂದು ದೆಹಲಿಗೆ ಕರೆದುಕೊಂಡು ಹೋಗಿ ಅಲ್ಲಿ ಹೋಟೆಲ್ ಒಂದರಲ್ಲಿ ತಂಗುವಂತೆ ಹೇಳಿ ಶಾಂಗ್ರಿಲಾ ಹೋಟೆಲ್ ನವರು ಇಲ್ಲಿ ಸಂದರ್ಶನ ತೆಗೆದುಕೊಳ್ಳುತ್ತಾರೆ ಎಂದು ಪ್ರಾಂಶುಪಾಲ ಹೇಳಿದ್ದ.

    ಮೇ 12 ರಂದು ಗಂಗಾಧರ, ನಾನು ಕೆಲಸ ಇರುವ ಕಾರಣ ಮುಂಬೈಗೆ ಹೋಗುತ್ತಿದ್ದೇನೆ. ಒಂದು ವಾರದ ಒಳಗೆ ಬಂದು ನಿಮ್ಮ ಹಣ ವಾಪಸ್ ಕೊಡುತ್ತೇನೆ ಎಂದು ವಾಟ್ಸಪ್ ಮೆಸೇಜ್ ಮಾಡಿದ್ದಾನೆ. ಇದಾದ ನಂತರ ಕಷ್ಟಪಟ್ಟು ಹೋಟೆಲ್ ಬಿಲ್ ಕಟ್ಟಿ ವಾಪಸ್ ಊರಿಗೆ ಬಂದ ವಿದ್ಯಾರ್ಥಿಗಳು ಒಂದು ವಾರ ಪ್ರಾಂಶುಪಾಲನಿಗಾಗಿ ಕಾದರೂ ಪ್ರಾಂಶುಪಾಲ ಮಾತ್ರ ವಾಪಸ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ವಂಚನೆಗೊಳಗಾದ ವಿದ್ಯಾರ್ಥಿಗಳು ನ್ಯಾಯ ಕೊಡಿಸುವಂತೆ ಅಪರ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಕೆಲಸ ಸಿಕ್ಕಿದ ಮೇಲೆ ಕಷ್ಟ ನಿವಾರಣೆ ಆಗುತ್ತದೆ ಎಂದು ಸಾಲ ಮಾಡಿ ಹಣ ಖರ್ಚು ಮಾಡಿದ್ದ ವಿದ್ಯಾರ್ಥಿಗಳು ಇದೀಗ ಕೆಲಸವೂ ಇಲ್ಲದೇ ಕೊಟ್ಟ ಹಣವೂ ವಾಪಸ್ ಸಿಗದೇ ಬೀದಿಗೆ ಬಿದ್ದು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.

    ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಹಣವನ್ನು ಹೇಗಾದರೂ ಮಾಡಿ ವಾಪಸ್ ಕೊಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

  • ವಿದ್ಯಾರ್ಥಿನಿ ತೊಡೆ ಮೇಲೆ ಮಲಗಿದ ಹಾಸನ ಪ್ರಿನ್ಸಿಪಾಲ್: ಫೋಟೋ ವೈರಲ್

    ವಿದ್ಯಾರ್ಥಿನಿ ತೊಡೆ ಮೇಲೆ ಮಲಗಿದ ಹಾಸನ ಪ್ರಿನ್ಸಿಪಾಲ್: ಫೋಟೋ ವೈರಲ್

    ಹಾಸನ: ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಪ್ರಿನ್ಸಿಪಲ್ ತನ್ನ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದ ಘಟನೆ ಹಾಸನದಲ್ಲಿ ನಡೆದಿದೆ.

    ಚನ್ನರಾಯಪಟ್ಟಣ ಪಟ್ಟಣದ ಕ್ರೈಸ್ಟ್ ಪಿಯು ಕಾಲೇಜ್ ಪ್ರಿನ್ಸಿಪಲ್ ಆಂಟೋನಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ.

    ಕ್ರೈಸ್ಟ್ ಕಾಲೇಜಿನಿಂದ ಪ್ರತಿ ವರ್ಷ ವಿದ್ಯಾರ್ಥಿಗಳು ಪ್ರವಾಸ ಹೋಗುತ್ತಾರೆ. ಹಾಗೆಯೇ ಮೂರು ತಿಂಗಳ ಹಿಂದೆ ತನ್ನ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಆಂಟೋನಿ ಗೋವಾ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಆಂಟೋನಿ ವಿದ್ಯಾರ್ಥಿನಿಯರ ಜೊತೆ ಡ್ಯಾನ್ಸ್ ಮಾಡುತ್ತಾ ಅವರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ.

    ಗೋವಾಗೆ ಹೋಗಿ ಹಿಂತಿರುಗುತ್ತಿದ್ದಾಗ ಆಂಟೋನಿ ವಿದ್ಯಾರ್ಥಿನಿಯರ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಬಸ್ಸಿನಲ್ಲಿ ವಿದ್ಯಾರ್ಥಿನಿಯೊಬ್ಬಳ ತೊಡೆ ಮೇಲೆ ಮಲಗಿರುವ ಫೋಟೋ ಹಾಗೂ ವಿಡಿಯೋಗಳು ಮೂರು ತಿಂಗಳ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ವಿಡಿಯೋ ನೋಡಿದ ಜನರು ಮಕ್ಕಳಿಗೆ ಮಾರ್ಗದರ್ಶನ ನೀಡುವ ಶಿಕ್ಷಕರೇ ಈ ರೀತಿ ವರ್ತಿಸುತ್ತಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಗ್ರೂಪಿನಲ್ಲಿ ತನ್ನದೇ ಸೆಕ್ಸ್ ವಿಡಿಯೋ ಹಾಕಿದ ಪ್ರಾಂಶುಪಾಲ ಅಮಾನತು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಗ್ರೂಪಿನಲ್ಲಿ ತನ್ನದೇ ಸೆಕ್ಸ್ ವಿಡಿಯೋ ಹಾಕಿದ ಪ್ರಾಂಶುಪಾಲ ಅಮಾನತು

    ಬೆಂಗಳೂರು: ಶಿಕ್ಷಕರ ದಿನಾಚರಣೆಯಂದೇ ಶಿಕ್ಷಕರು ತಲೆ ತಗ್ಗಿಸು ಕೆಲಸ ಮಾಡಿದ್ದ ಡಯಟ್ ಪ್ರಾಂಶುಪಾಲ ಎಸ್.ಎಂ.ರಮೇಶ್ ನನ್ನ ಸಾರ್ವಜನಿಕ ಶಿಕ್ಷಣ ಇಲಾಖೆ ಅಮಾನತು ಮಾಡಿದೆ.

    ತನ್ನ ಕಾಮಪುರಾಣದ ವಿಡಿಯೋವನ್ನು ಶಿಕ್ಷಕರ ವಾಟ್ಸಾಪ್ ಗ್ರೂಪ್ ಹಾಕಿ ವಿಕೃತಿ ಮೆರೆದಿದ್ದ ಡಯಟ್ ಪ್ರಾಂಶುಪಾಲ ರಮೇಶ್ ಕುರಿತು ನಿಮ್ಮ ಪಬ್ಲಿಕ್ ಟಿವಿ ನಿನ್ನೆ ಸುದ್ದಿ ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರದ ನಂತರ ಎಚ್ಚೆತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ರಮೇಶ್‍ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಆದೇಶದ ಪ್ರತಿಯಲ್ಲಿ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗಿದ್ದನ್ನು ಉಲ್ಲೇಖ ಮಾಡಿದೆ. ಇದನ್ನೂ ಓದಿ: ಬೆಂಗ್ಳೂರು ಪ್ರಾಂಶುಪಾಲನ ಕಾಮ ಪುರಾಣ – ತನ್ನದೇ ಸೆಕ್ಸ್ ವಿಡಿಯೋವನ್ನು ವಾಟ್ಸಪ್ ಗ್ರೂಪಿಗೆ ಹಾಕ್ದ!

    ಏನಿದು ಪ್ರಕರಣ?
     ಬೆಂಗಳೂರು ಉತ್ತರ ವಿಭಾಗದ ಡಯಟ್ ಪ್ರಾಂಶುಪಾಲ ರಮೇಶ್ ಶಿಕ್ಷಕರ ದಿನಾಚರಣೆಯಂದು ತನ್ನದೇ ಸೆಕ್ಸ್ ವಿಡಿಯೋವನ್ನು ವಾಟ್ಸಪ್ ಗ್ರೂಪಿನಲ್ಲಿ ಹಾಕಿದ್ದನು. ಕ್ಯಾಮೆರಾ ಮುಂದೆ ರಮೇಶ್ ಸಂಪೂರ್ಣ ಬೆತ್ತಲಾಗಿ ವಿಡಿಯೋ ಮಾಡಿ ಅದನ್ನು ಗ್ರೂಪಿನಲ್ಲಿ ಹಾಕಿದ್ದನು. ಈ ವಿಡಿಯೋ ನೋಡಿ ಗ್ರೂಪಿನಲ್ಲಿದ್ದ ಮಹಿಳೆಯರು ಎಕ್ಸಿಟ್ ಆಗಿದ್ದರು.

    ಇಲಾಖೆಯಲ್ಲಿ ಯಾವುದೇ ಕೆಲಸ ಆಗಬೇಕಾದರೆ ಮಹಿಳೆಯರು ಇವನ ಜೊತೆ ಮಲಗಬೇಕು. ಅಲ್ಲದೇ ರಮೇಶ್‍ಗೆ ಅಧಿಕಾರಿಗಳ ಬೆಂಬಲವಿದ್ದು, ಶಿಕ್ಷಣ ಇಲಾಖೆಯಲ್ಲಿ ಈತನ ದರ್ಬಾರ್ ನಡೆಯುತ್ತಿತ್ತು. ರಮೇಶ್ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಅಧಿಕಾರಿಗೆ ಟಾರ್ಚರ್ ನೀಡುತ್ತಾನೆ ಎನ್ನುವ ಆರೋಪ ಈಗ ಕೇಳಿ ಬಂದಿತ್ತು. ಅಲ್ಲದೇ ತನ್ನ ಸೆಕ್ಸ್ ವಿಡಿಯೋವನ್ನು ಗ್ರೂಪಿನಲ್ಲಿ ಹಾಕಿದ್ದಕ್ಕೆ ಸದಸ್ಯರು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

    https://www.youtube.com/watch?v=ywnBhZyn8N8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv