Tag: ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್

  • ಶಿಕ್ಷಕರ ಕಳ್ಳಾಟ – ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ ಗ್ರಾಮಸ್ಥರು

    ಶಿಕ್ಷಕರ ಕಳ್ಳಾಟ – ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ ಗ್ರಾಮಸ್ಥರು

    ಚಾಮರಾಜನಗರ: ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಶಿಕ್ಷಕರ ಕಳ್ಳಾಟ ಹೆಚ್ಚಾಗಿದ್ದು, ಶಿಕ್ಷಕರು ಪದೆ ಪದೇ ಶಾಲೆಗೆ ಚಕ್ಕರ್ ಹಾಕುವ ಮೂಲಕ ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

    ಚಾಮರಾಜನಗರ ತಾಲೂಕು ಹೊಮ್ಮ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕರು ಶಾಲೆಗೆ ಸರಿಯಾಗಿ ಬರದಿದ್ದಕ್ಕೆ ಗ್ರಾಮಸ್ಥರು ಹಾಗೂ ಪೋಷಕರು ಬೇಸತ್ತು, ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ ಮೂವರು ಶಿಕ್ಷಕರಿದ್ದು, ಇರುವ ಶಿಕ್ಷಕರೂ ಸಹ ಸರಿಯಾಗಿ ಶಾಲೆಗೆ ಬಾರದ್ದನ್ನು ಕಂಡು ಹಾಗೂ ಮಕ್ಕಳಿಗೆ ಏನೂ ಕಲಿಸದ್ದನ್ನು ಕಂಡು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕರು ಶಾಲೆಗೆ ಬರುವುದಿಲ್ಲ ಹೀಗಿರುವಾಗ ಶಾಲೆ ಯಾಕೆ ತೆರಯಬೇಕು ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಮೂವರು ಶಿಕ್ಷಕರೂ ಸಹ ಪದೆ ಪದೇ ರಜೆ ಹಾಕುತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

    ಶಾಲೆಯಲ್ಲಿ 1ರಿಂದ 7 ತರಗತಿ ವರೆಗೆ ಕೇವಲ 14 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಶಿಕ್ಷಕರ ವರ್ತನೆಯೇ ಕಾರಣ. ಶಿಕ್ಷಕರು ಮಕ್ಕಳಿಗೆ ಏನೂ ಹೇಳಿಕೊಡುವುದಿಲ್ಲ. ಹೆಚ್ಚು ರಜೆ ಹಾಕುತ್ತಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

    ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ಇಲ್ಲದೆ ಶಿಕ್ಷಕರು 5 ದಿನ ನಿರಂತರವಾಗಿ ರಜೆ ಪಡೆದಿದ್ದಾರೆ. ಅಲ್ಲದೆ ಇತರ ಶಿಕ್ಷಕರಿಗೆ ಬುದ್ಧಿ ಹೇಳಬೇಕಿದ್ದ ಮುಖ್ಯ ಶಿಕ್ಷಕರು ಸಹ ಪತ್ನಿಗೆ ಹುಷಾರಿಲ್ಲ ಎಂದು ರಜೆ ಹಾಕುವುದು ಇಲ್ಲವೆ ಬೆಳಗ್ಗೆ ಶಾಲೆಗೆ ಆಗಮಿಸಿ ಮಧ್ಯಾಹ್ನವೇ ಮನೆಗೆ ತೆರಳುವುದನ್ನು ಮಾಡಿದ್ದಾರೆ. ಹಲವು ದಿನಗಳಿಂದ ಮೂವರು ಶಿಕ್ಷಕರು ಸಹ ಇದೇ ರೀತಿ ಮಾಡಿದ್ದು, ಇದರಿಂದ ಗ್ರಾಮಸ್ಥರು ಬೇಸತ್ತಿದ್ದಾರೆ. ಶಿಕ್ಷಕರು ಬಾರದೇ ಪಾಠ ಪ್ರವಚನ ಸರಿಯಾಗಿ ನಡೆಯುತ್ತಿಲ್ಲ. ಶಿಕ್ಷಕರ ಗೈರಿನಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಮೂವರು ಶಿಕ್ಷಕರು ಸಹ ಮಾತನಾಡಿಕೊಂಡು, ಪ್ರತಿ ದಿನ ಒಬ್ಬರೇ ಶಾಲೆಗೆ ಆಗಮಿಸುತ್ತಿದ್ದರು. ಉಳಿದ ಇಬ್ಬರು ಒಬ್ಬರು ರಜೆ ತೆಗೆದುಕೊಳ್ಳುತ್ತಿದ್ದರು. ಗುರುವಾರ ಇಬ್ಬರು ಶಿಕ್ಷಕರು ಬಂದಿರಲಿಲ್ಲ. ಬಂದಿದ್ದ ಒಬ್ಬ ಶಿಕ್ಷಕರು ಸಹ ಮಧ್ಯಾಹ್ನವೇ ಶಾಲೆಯ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿ, ಶಾಲೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಇನ್ನು ಕೆಲವು ದಿನ ಮೂವರು ಶಿಕ್ಷಕರು ಸಹ ಒಟ್ಟಿಗೆ ರಜೆ ಹಾಕುತ್ತಿದ್ದರು ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

    ಶಿಕ್ಷಕರ ಧೋರಣೆ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು ಕಡೆಗೆ ಚಾಮರಾಜನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಿಪತಿ ಅವರು ಶಾಲೆಗೆ ಆಗಮಿಸಿ ಸಮಸ್ಯೆ ಆಲಿಸಿದ್ದಾರೆ. ಈ ವೇಳೆ ಚಕ್ಕರ್ ಹಾಕುವ ಶಿಕ್ಷಕರನ್ನು ಕೆಲಸದಿಂದ ವಜಾಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಲಕ್ಷ್ಮಿಪತಿ ಭರವಸೆ ನೀಡಿದ್ದಾರೆ.