Tag: ಪ್ರಾಥಮಿಕ ಶಿಕ್ಷಣ ಸಚಿವರು

  • ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಪಾಳು ಬಿದ್ದ ಶಿಕ್ಷಕರ ವಸತಿ ಗೃಹ

    ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಪಾಳು ಬಿದ್ದ ಶಿಕ್ಷಕರ ವಸತಿ ಗೃಹ

    – ಶಿಕ್ಷಕರ ವಸತಿ ಗೃಹದಲ್ಲಿ ಅನೈತಿಕ ಚಟುವಟಿಕೆ

    ಚಾಮರಾಜನಗರ: ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಶಿಕ್ಷಕರಿಗಾಗಿ ಗ್ರಾಮಗಳಲ್ಲಿ ವಸತಿ ಗೃಹ ನಿರ್ಮಿಸಲಾಗಿರುತ್ತದೆ. ಆದರೆ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಉಸ್ತುವಾರಿ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶಿಕ್ಷಕರ ವಸತಿ ಗೃಹಗಳು ಪಾಳು ಬಿದ್ದಿದೆ. ಅಷ್ಟೇ ಅಲ್ಲದೆ ವಸತಿ ಗೃಹಗಳು ಅನೈತಿಕ ಚಟುವಟಿಗಳ ಕೇಂದ್ರವಾಗಿ ಮಾರ್ಪಟ್ಟಿವೆ.

    ಚಾಮರಾಜನಗರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಂಗಳ ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರಿಗಾಗಿ 2015ರಲ್ಲಿ ವಸತಿ ಗೃಹಗಳನ್ನ ನಿರ್ಮಿಸಲಾಗಿದೆ. ಅಂದಿನ ಸ್ಥಳೀಯ ಶಾಸಕ, ಸಚಿವರಾಗಿದ್ದ ದಿವಂಗತ ಮಹದೇವ ಪ್ರಸಾದ್ ಅವರು, ಸುಮಾರು 8 ಕುಟುಂಬ ವಾಸಿಸುವ ಸುಸಜ್ಜಿತ ಶಿಕ್ಷಕರ ವಸತಿ ಗೃಹವನ್ನು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿಕೊಟ್ಟಿದ್ದರು. ಉದ್ಘಾಟನೆಯಾದ 4 ವರ್ಷಗಳಲ್ಲಿ ಕಟ್ಟಡ ಪಾಳು ಬಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ಶಿಕ್ಷಕರು ಯಾರೂ ವಾಸಮಾಡಲು ಮುಂದೆ ಬಾರದ ಕಾರಣ ಅದು ಹಾಗೆ ಪಾಳು ಬಿದ್ದು ಕುಡುಕರ, ಜೂಜುಕೋರರ ಕೇಂದ್ರವಾಗಿ ಸುತ್ತ ಮುತ್ತಲಿನ ಜನರಿಗೆ ಕಿರಿಕಿರಿ ಉಂಟು ಮಾಡಿದೆ. ಇದರಿಂದಾಗಿ ಸ್ಥಳೀಯರು ಶಿಕ್ಷಣ ಇಲಾಖೆಯ ನಿರ್ಲಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.

    ಒಂದು ಕೋಟಿ ರೂಪಾಯಿ ವೆಚ್ದದಲ್ಲಿ ಕಟ್ಟಿದ ವಸತಿ ಗೃಹದಲ್ಲಿ ಯಾರು ವಾಸವಿಲ್ಲದೆ ಇರುವುದರಿಂದ ಪಾಳು ಬಿದ್ದು ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ. ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಅದನ್ನ ಸರಿಪಡಿಸಬೇಕಿದೆ. ಪಾಳು ಬಿದ್ದು ಅನೈತಿಕ ಚಟುವಟಿಕೆ ಕೇಂದ್ರವಾಗಿರುವ ವಿಚಾರ ಗಮನಕ್ಕೆ ಬಂದಿದ್ದು, ಪರಿಶೀಲನೆ ನಡೆಸಿದ್ದೇನೆ. ಕಟ್ಟಡ ಈಗ ದುರಸ್ತಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಮೇಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ಕಟ್ಟಡ ದರುಸ್ತಿಯ ಬಳಿಕ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಗುಂಡ್ಲುಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

    ಸರ್ಕಾರ ಯಾವುದೇ ಇಲಾಖೆಯ ಸಿಬ್ಬಂದಿ ತಾವು ಕೆಲಸ ಮಾಡುವ ಸ್ಥಳದಲ್ಲೇ ಇದ್ದು ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಲಿ ಎನ್ನುವ ಸಲುವಾಗಿ ವಸತಿ ಗೃಹಗಳನ್ನ ನಿರ್ಮಾಣ ಮಾಡಲಾಗುತ್ತದೆ. ಆದರೆ ನಗರ ಪ್ರದೇಶಗಳ ವ್ಯಾಮೋಹಕ್ಕೆ ಒಳಗಾಗುವ ಸರ್ಕಾರಿ ನೌಕರರು ಬಾಡಿಗೆ ತೆತ್ತಾದರೂ ಪಟ್ಟಣ ಪ್ರದೇಶಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಇನ್ನಾದರೂ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟುವ ವಸತಿ ಗೃಹಗಳಲ್ಲೇ ಆಯಾ ಇಲಾಖೆಯ ನೌಕರರು ಕಡ್ಡಾಯವಾಗಿ ವಾಸ ಮಾಡುವಂತೆ ಕಟ್ಟಿನಿಟ್ಟಿನ ಕ್ರಮವಹಿಸಬೇಕು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ವಸತಿ ಶಾಲೆಗೆ ಸೇರಿಸಿದ ಪ್ರಾಥಮಿಕ ಸಚಿವರಿಗೆ ಧನ್ಯವಾದ ತಿಳಿಸಿದ ಬಾಲಕಿ

    ವಸತಿ ಶಾಲೆಗೆ ಸೇರಿಸಿದ ಪ್ರಾಥಮಿಕ ಸಚಿವರಿಗೆ ಧನ್ಯವಾದ ತಿಳಿಸಿದ ಬಾಲಕಿ

    ರಾಮನಗರ: ವಸತಿ ಶಾಲೆಗೆ ಸೇರಿಸಿದ ಪ್ರಾಥಮಿಕ ಸಚಿವ ಸುರೇಶ್ ಕುಮಾರ್ ಅವರಿಗೆ ಹೂವು ಮಾರುತ್ತಿದ್ದ ಬಾಲಕಿ ಧನ್ಯವಾದ ತಿಳಿಸಿದ್ದಾಳೆ. ಶಾಲೆ ಮುಗಿದ ಬಳಿಕ ತಾಯಿ ಕಟ್ಟಿಕೊಡುತ್ತಿದ್ದ ಹೂವು ಮಾರುತ್ತಿದ್ದ ಬಾಲಕಿಯನ್ನು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ವಸತಿ ಶಾಲೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

    ಮಂಡ್ಯ ಜಿಲ್ಲೆಯ ಹೊಳಲು ಗ್ರಾಮದ ನಿವಾಸಿ ಶ್ರೀನಿವಾಸ್ ನಾಯ್ಕ್ ಹಾಗೂ ಲಕ್ಷ್ಮಿಬಾಯಿ ದಂಪತಿಯ ಪುತ್ರಿ ಸಂಗೀತಾ ಕೆಲಸವನ್ನು ಬಿಡಿಸಿ ಶಾಲೆಗೆ ಸೇರಿದ ಬಾಲಕಿ. ಇತ್ತೀಚೆಗೆ ಬೆಂಗಳೂರಿನ ಕೆಂಗೇರಿ ಬಳಿ ಹೂವು ಮಾರಾಟ ಮಾಡುತ್ತಿದ್ದ ಬಾಲಕಿ ಸಂಗೀತಾಳನ್ನು ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್‍ರವರು ನೋಡಿದ್ದರು. ಅಲ್ಲದೇ ಬಾಲಕಿ ಬಗ್ಗೆ ಸಚಿವರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳ ನಿರ್ದೆಶನದಂತೆ ಸಂಬಂಧಿಸಿದ ಅಧಿಕಾರಿಗಳು ಬಾಲಕಿಯ ಪೂರ್ವಾಪರವನ್ನು ಸಂಗ್ರಹಿಸಿ ಮಾಹಿತಿ ನೀಡಿದ್ದರು. ಬಳಿಕ ಬಾಲಕಿ ಹಾಗೂ ಆಕೆಯ ತಾಯಿಯನ್ನ ವಿಚಾರಣೆ ನಡೆಸಿ ಬಾಲಕಿಯ ಇಚ್ಛೆ ಮೇರೆಗೆ ರಾಮನಗರದ ಕೈಲಾಂಚದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ 7ನೇ ತರಗತಿಗೆ ಸೇರಿಸಿದ್ದಾರೆ.  

    ಸಂಗೀತಾಳ ತಂದೆ ಶ್ರೀನಿವಾಸ್ ನಾಯ್ಕ್ ಮನೆಯ ಜವಾಬ್ದಾರಿಯನ್ನ ತೆಗೆದುಕೊಳ್ಳದೇ ಪತ್ನಿ, ಮಗಳನ್ನು ತೊರೆದಿದ್ದಾನೆ. ಮಗಳ ಹೊಣೆ ಹೊತ್ತಿರುವ ಲಕ್ಷ್ಮಿಬಾಯಿ ಅವರು ಕೆಂಗೇರಿಯಲ್ಲಿನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, ಅಲ್ಲಿಯೇ ಮಗಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದರು. ಸ್ವಗ್ರಾಮ ಹೊಳಲಿನಲ್ಲಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿರುವ ಲಕ್ಷ್ಮಿಬಾಯಿ ದಿನನಿತ್ಯ ಕೆಂಗೇರಿಯಿಂದ ಹೊಳಲು ರೈಲಿನಲ್ಲಿ ಗ್ರಾಮಕ್ಕೆ ಓಡಾಡುತ್ತಿದ್ದಾರೆ. ಇದರ ನಡುವೆ ಹೂವು ಕಟ್ಟಿಕೊಟ್ಟು ತನ್ನ ಮಗಳಿಗೆ ಅಕ್ಕಪಕ್ಕದ ಮನೆಗಳಿಗೆ ಕೊಡುವುದು, ಅಲ್ಲದೇ ಮಾರಾಟ ಮಾಡುವುದಕ್ಕೆ ತಿಳಿಸಿದ್ದರು. ತನ್ನ ತಾಯಿಗೆ ನೆರವಾಗಲು ಸಂಗೀತಾ ಹೂವು ಮಾರಾಟ ಮಾಡುವ ಕೆಲಸವನ್ನ ಮಾಡುತ್ತಿದ್ದಳು. ಇದೀಗ ವಸತಿ ಶಾಲೆಗೆ ಸೇರಿರುವ ಸಂಗೀತಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಧನ್ಯವಾದ ತಿಳಿಸಿದ್ದಾಳೆ. ಇದನ್ನೂ ಓದಿ: ಗಾಡಿಗೆ ಬೀಗ ಹಾಕಿದ್ದಾರೆ: ಸಚಿವರ ಮುಂದೆ ಬೀಗಿದ ಪುಟಾಣಿಗಳು

    ಓದುವ ವಯಸ್ಸಿನಲ್ಲಿ ಮಕ್ಕಳು ದುಡಿಯುವ ಕೆಲಸಕ್ಕೆ ಹೋಗುತ್ತಿರುವುದು ದುರದೃಷ್ಟಕರವಾಗಿದೆ. ಬಾಲ್ಯದಲ್ಲೇ ತಮ್ಮ ಜೀವನವನ್ನ ದುಡಿಮೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ವಿದ್ಯಾಭ್ಯಾಸಕ್ಕೂ ಎಳ್ಳುನೀರು ಬಿಡುವಂತಾಗುತ್ತಿದೆ. ಬೆಂಗಳೂರು ಸೇರಿದಂತೆ ಹಲವಾರು ಮಕ್ಕಳು ಪೆನ್, ಮೊಬೈಲ್ ವಸ್ತುಗಳು, ಹೂವು, ಸಣ್ಣಪುಟ್ಟ ವಸ್ತುಗಳನ್ನ ಹೆದ್ದಾರಿ ಸಿಗ್ನಲ್‍ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಮಾರಾಟ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಅಂತಹ ಮಕ್ಕಳನ್ನು ವಿದ್ಯಾಭ್ಯಾಸದ ಕಡೆಗೆ ಮುಖ ಮಾಡಬೇಕಿದೆ.

  • ಮತ್ತೆ ಓಜಿಕುಪ್ಪಂ ಗ್ಯಾಂಗ್ ಹಾವಳಿ- ಹಾಡಹಗಲೇ ಗಮನಬೇರೆಡೆ ಸೆಳೆದು ದರೋಡೆ

    ಮತ್ತೆ ಓಜಿಕುಪ್ಪಂ ಗ್ಯಾಂಗ್ ಹಾವಳಿ- ಹಾಡಹಗಲೇ ಗಮನಬೇರೆಡೆ ಸೆಳೆದು ದರೋಡೆ

    ನೆಲಮಂಗಲ: ಟೈರ್ ಪಂಚರ್ ಮಾಡಿ ವ್ಯಕ್ತಿಯ ಗಮನ ಬೇರೆಡೆ ಸೆಳೆದು, ಕಾರಿನಲ್ಲಿದ್ದ 1.45 ಲಕ್ಷ ರೂ. ನಗದು ದೋಚಿ, ದರೋಡೆಕೋರರು ಪರಾರಿಯಾದ ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ಘಟನೆ ನಡೆದಿದೆ.

    ನೆಲಮಂಗಲ ಪಟ್ಟಣದ ಇಂಡಿಯನ್ ಓವರ್ಸೀಸ್ ಬ್ಯಾಂಕ್‍ನಿಂದ 1.45 ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ಹೋಗುತ್ತಿದ್ದ ಪಾಂಡುರಂಗ ಅವರಿಗೆ ನಿಮ್ಮ ಕಾರ್ ಪಂಚರ್ ಆಗಿದೆ ಎಂದು ದರೋಡೆಕೋರರು ಹೇಳಿದ್ದರು. ಅವರ ಮಾತನ್ನು ನಂಬಿದ ಪಾಡುರಂಗ ಅವರು ಕಾರಿನಿಂದ ಕೆಳಗಿಳಿದಾಗ ದರೋಡೆಕೋರರು ಕ್ಷಣಾರ್ಧದಲ್ಲಿ ಕಾರಿನ ಗ್ಲಾಸ್ ಒಡೆದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.

    ಈ ಗ್ಯಾಂಗ್ ಓಜಿಕುಪ್ಪಂನ ಗ್ಯಾಂಗ್ ಎಂದು ಶಂಕಿಸಲಾಗಿದ್ದು, ಎರಡು ಬೈಕ್‍ಗಳಲ್ಲಿ ಬಂದ ನಾಲ್ಕು ಜನರ ತಂಡವು ಕೃತ್ಯ ಎಸೆಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕರು ಈ ಗ್ಯಾಂಗ್ ಬಗ್ಗೆ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ. ಜೊತೆಗೆ ಗಮನ ಬೇರೆಡೆಗೆ ಸೆಳೆಯುವ ಯುವಕರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

  • ಪ್ರಾಥಮಿಕ ಶಿಕ್ಷಣ ಸಚಿವರಿಂದ ಡಿ.16ರಂದು ಫೋನ್ ಇನ್ ಕಾರ್ಯಕ್ರಮ

    ಪ್ರಾಥಮಿಕ ಶಿಕ್ಷಣ ಸಚಿವರಿಂದ ಡಿ.16ರಂದು ಫೋನ್ ಇನ್ ಕಾರ್ಯಕ್ರಮ

    – ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ

    ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳಲ್ಲಿ ಒಂದಿಲ್ಲೊಂದು ಸಮಸ್ಯೆ ಇದ್ದೆ ಇರುತ್ತದೆ. ಇಂತಹ ಸಮಸ್ಯೆಗಳನ್ನು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಹಂಚಿಕೊಳ್ಳಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವೇದಿಕೆ ಕಲ್ಪಿಸಿದೆ.

    ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಲ್ಲಿ ‘ಸಂವೇದನೆ’ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಡಿಸೆಂಬರ್ 16ರಂದು ಸಂಜೆ 5 ರಿಂದ 6.30 ಗಂಟೆವರೆಗೂ ಶಿಕ್ಷಣ ಸಚಿವರು ವಿವಿಧ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಕರೆ ಮಾಡಿ ಅಹವಾಲು, ಸಲಹೆ ಮತ್ತು ಸೂಚನೆಗಳನ್ನು ಪಡೆಯಬಹುದಾಗಿದೆ.

    ಸುರೇಶ್ ಕುಮಾರ್ ಅವರು ನವೆಂಬರ್ 2 ರಂದು ಮೊದಲ ಬಾರಿಗೆ ಫೋನ್ ಇನ್ ಕಾರ್ಯಕ್ರಮ ನಡೆಸಿದ್ದರು. ಈ ಮೂಲಕ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರ ಸಲಹೆ, ಸಮಸ್ಯೆಗಳನ್ನು ಆಲಿಸಿದ್ದರು. ಡಿಸೆಂಬರ್ 16ರಂದು ಸಚಿವರು ಎರಡನೇ ಫೋನ್ ಇನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಬಾರಿಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಸುರೇಶ್ ಕುಮಾರ್ ಅವರು, ಮಕ್ಕಳಲ್ಲಿ ಪರೀಕ್ಷೆ ಬಗ್ಗೆ ಭಯ ಹೋಗಲಾಡಿಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ಪ್ರತಿ ತಿಂಗಳಲ್ಲಿ 2 ಬಾರಿ `ಸಂವೇದನೆ’ ಎನ್ನುವ ಫೋನ್ ಇನ್ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದ್ದರು.

    ಸುರೇಶ್ ಕುಮಾರ್ ಅವರಿಗೆ ಸಮಸ್ಯೆ, ಅವಹವಾಲು ಹಾಗೂ ಸಲಹೆ ನೀಡಿಲು ಬಯಸುವವರು ದೂರವಾಣಿ ಸಂಖ್ಯೆ 080- 26725654 ಅಥವಾ 080-26725655ಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ರಾಯಚೂರು ಶಿಕ್ಷಕಿಯ ಕಡ್ಡಾಯ ವರ್ಗಾವಣೆ ರದ್ದು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ರಾಯಚೂರು ಶಿಕ್ಷಕಿಯ ಕಡ್ಡಾಯ ವರ್ಗಾವಣೆ ರದ್ದು

    – ಕೊಟ್ಟ ಮಾತು ಉಳಿಸಿಕೊಂಡ ಶಿಕ್ಷಣ ಸಚಿವರು
    – ತಪ್ಪನ್ನ ತಿದ್ದಿಕೊಂಡ ಶಿಕ್ಷಣ ಇಲಾಖೆ

    ರಾಯಚೂರು: ಬುದ್ಧಿಮಾಂದ್ಯ ಮಗಳ ಆರೈಕೆಗಾಗಿ ವರ್ಗಾವಣೆ ರದ್ದು ಕೋರಿ ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದ ರಾಯಚೂರಿನ ಶಿಕ್ಷಕಿ ಶಾಂತಲಕ್ಷ್ಮಿ ಅವರ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಮೂಲಕ ಅವರ ಕಷ್ಟಕ್ಕೆ ಕೊನೆಗೂ ಪರಿಹಾರ ಸಿಕ್ಕಿದೆ.

    ನಗರದ ಜಹಿರಾಬಾದ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಶಾಂತಲಕ್ಷ್ಮಿ ಅವರಿಗೆ ಶಿಕ್ಷಣ ಸಚಿವರ ಭರವಸೆಯಂತೆ ಕಡ್ಡಾಯ ವರ್ಗಾವಣೆ ರದ್ದಾಗಿದ್ದು, ಹಾಲಿ ಸ್ಥಳದಲ್ಲೇ ಮುಂದುವರಿಯುವ ಅವಕಾಶ ಸಿಕ್ಕಿದೆ. ಬುದ್ಧಿಮಾಂದ್ಯ ಮಗಳನ್ನು ಕರೆದುಕೊಂಡು ಅಧಿಕಾರಿಗಳ ಬಳಿ ತನ್ನ ಕಷ್ಟ ಹೇಳಿಕೊಂಡು ಸಾಕಾಗಿದ್ದ ಶಾಂತಲಕ್ಷ್ಮಿ ಕುರಿತು ಪಬ್ಲಿಕ್ ಟಿವಿ ವರದಿಯನ್ನ ಪ್ರಸಾರ ಮಾಡಿತ್ತು. ವರದಿಗೆ ಎಚ್ಚೆತ್ತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ವತಃ ಶಿಕ್ಷಕಿಯ ಜೊತೆ ದೂರವಾಣಿಯಲ್ಲಿ ಮಾತನಾಡಿ ಅವರ ಕಷ್ಟವನ್ನ ಆಲಿಸಿ, ವರ್ಗಾವಣೆ ರದ್ದುಗೊಳಿಸುವ ಬಗ್ಗೆ ಭರವಸೆಯನ್ನ ನೀಡಿದ್ದರು. ಇದನ್ನೂ ಓದಿ: ಬುದ್ಧಿಮಾಂದ್ಯ ಮಗಳ ಆರೈಕೆಗಾಗಿ ಶಿಕ್ಷಕಿ ಪರದಾಟ – ವರ್ಗಾವಣೆ ರದ್ದು ಮಾಡದೆ ಸತಾಯಿಸ್ತಿರುವ ಶಿಕ್ಷಣ ಇಲಾಖೆ

    ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರ್ಗಿ ಅಪರ ಆಯುಕ್ತ ನಳಿನ್ ಅತುಲ್ ಕೂಡಲೇ ವರ್ಗಾವಣೆ ರದ್ದುಗೊಳಿಸಿ ಹಿಂದಿನ ಸ್ಥಳದಲ್ಲೇ ಶಿಕ್ಷಕಿ ಶಾಂತಲಕ್ಷ್ಮಿ ಅವರನ್ನು ಮುಂದುವರಿಸುವಂತೆ ಆದೇಶಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ರಾಯಚೂರು ಉಪನಿರ್ದೇಶಕರಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಈ ಮೂಲಕ ನಿಯಮಬಾಹಿರವಾಗಿ ವರ್ಗಾವಣೆಯ ಶಿಕ್ಷೆಗೆ ಗುರಿಯಾಗಿದ್ದ ಶಿಕ್ಷಕಿ ಶಾಂತಲಕ್ಷ್ಮಿ ಅವರಿಗೆ ನ್ಯಾಯ ದೊರಕಿದೆ. ಇದನ್ನೂ ಓದಿ: ಶಿಕ್ಷಕಿಗೆ ಕರೆ ಮಾಡಿ ಕಷ್ಟ ಆಲಿಸಿದ ಸುರೇಶ್

    ಬುದ್ಧಿಮಾಂದ್ಯ ಮಗಳ ಆರೈಕೆ ಹಾಗೂ ವಿಧವೆಯಾಗಿರುವ ಕಾರಣ ನಿಯಮಾನುಸಾರ ಕಡ್ಡಾಯ ವರ್ಗಾವಣೆಯಲ್ಲಿ ಶಿಕ್ಷಕಿ ಹೆಸರು ನಮೂದಿಸಬಾದರಿತ್ತು. ಶಿಕ್ಷಕಿಗೆ ಆದ ಅನಾನೂಕೂಲ ಪರಿಗಣೆನೆಗೆ ತೆಗೆದುಕೊಂಡು ಮೂಲ ಶಾಲೆಯಲ್ಲಿ ಮುಂದುವರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರು ಆದೇಶಿಸಿದ್ದಾರೆ. ತೆರವಾದ ಸ್ಥಳಕ್ಕೆ ಹಾಜರಾದ ಶಿಕ್ಷಕಿ ಶ್ರೀದೇವಿ ಅವರನ್ನ ನಿಮ್ಮ ಹಂತದಲ್ಲೇ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಿ ಅಂತ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ನಳೀನ್ ಅತುಲ್ ಸೂಚಿಸಿದ್ದಾರೆ.

    ಏನಿದು ವರ್ಗಾವಣೆ ಪ್ರಕರಣ.?
    ಶಿಕ್ಷಕಿ ಶಾಂತಾಲಕ್ಷ್ಮಿ ಅವರನ್ನ ರಾಯಚೂರಿನಿಂದ ಸುಮಾರು 25 ಕಿ.ಮೀ ದೂರದ ಮಟಮಾರಿ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಪತಿಯನ್ನು ಕಳೆದುಕೊಂಡ ಶಿಕ್ಷಕಿ ವೃತ್ತಿ ಮಾಡುತ್ತಲೇ ಮಾನಸಿಕ ಅಸ್ವಸ್ಥ ಮಗಳನ್ನು ಸಾಕುತ್ತಿದ್ದಾರೆ. ಈಗ ಏಕಾಏಕಿ ವರ್ಗಾವಣೆಯನ್ನ ವಿರೋಧಿಸಿ, ವರ್ಗಾವಣೆ ರದ್ದುಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.

    ಅಲ್ಲದೆ ಕಡ್ಡಾಯ ವರ್ಗಾವಣೆ ಮಾಡಬೇಕಾದರೂ ಒಂದೇ ಜಾಗದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ಆದ್ರೆ ಶಾಂತಲಕ್ಷ್ಮಿ 8 ವರ್ಷಗಳಿಂದ ಸೇವೆ ಮಾಡುತ್ತಿದ್ದು, ಎರಡು ವರ್ಷ ಬಾಕಿಯಿರುವಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ವರ್ಗಾವಣೆ ಮಾಡಿರುವುದು ಸರಿಯಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು.

    ನಗರ ಪ್ರದೇಶದಿಂದ ನಿಯಮ ಉಲ್ಲಂಘಿಸಿ ಗ್ರಾಮೀಣ ಭಾಗಕ್ಕೆ ವರ್ಗಾವಣೆ ಮಾಡಿದ್ದರ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಇದನ್ನ ಗಮನಿಸಿದ ಶಿಕ್ಷಣ ಸಚಿವ ಕೂಡಲೇ ಸ್ಪಂದಿಸಿ ವರ್ಗಾವಣೆ ರದ್ದುಗೊಳಿಸುವ ಭರವಸೆ ನೀಡಿದ್ದರು.