Tag: ಪ್ರಾಥಮಿಕ ಶಿಕ್ಷಣ ಸಚಿವ

  • ಟಿಬೇಟಿಯನ್ ಶಾಲೆಗಳಿಗೆ ಕನ್ನಡ ಪಠ್ಯ ವಿನಾಯ್ತಿ- ಸುರೇಶ್ ಕುಮಾರ್ ವಿವಾದ

    ಟಿಬೇಟಿಯನ್ ಶಾಲೆಗಳಿಗೆ ಕನ್ನಡ ಪಠ್ಯ ವಿನಾಯ್ತಿ- ಸುರೇಶ್ ಕುಮಾರ್ ವಿವಾದ

    ಬೆಂಗಳೂರು: ಸದಾ ಕ್ರೀಯಾಶೀಲವಾಗಿ ಕೆಲಸ ಮಾಡುವ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಟಿಬೇಟಿಯನ್ ಶಾಲೆಗಳಿಗೆ ಕನ್ನಡ ಪಠ್ಯ ವಿನಾಯ್ತಿ ನೀಡಲು ನಿರ್ಧಾರ ಮಾಡಿದ್ದು, ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಸಚಿವ ಸುರೇಶ್ ಕುಮಾರ್ ನಿರ್ಧಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ವಿರೋಧ ಮಾಡಿದೆ.

    ಕನ್ನಡ ಭಾಷಾ ಕಲಿಕಾ ಅಧಿನಿಯಮ 2015ರ ಅನ್ವಯ ಕರ್ನಾಟಕದ ಎಲ್ಲಾ ಶಾಲೆಗಳು ಕಡ್ಡಾಯವಾಗಿ ಕನ್ನಡ ಭಾಷೆಯನ್ನ ಮೊದಲ ಭಾಷೆ ಅಥವಾ ಎರಡನೇ ಭಾಷೆಯಾಗಿ ಕಲಿಸಲೇಬೇಕು. ಒಂದು ವೇಳೆ ಕಲಿಸದೇ ಹೋಗದ ಶಾಲೆಗಳ ಮೇಲೆ ಕ್ರಮ ತೆಗೆದುಕೊಳ್ಳುವ ನಿಯಮ ಇದೆ. ಆದರೆ ಟಿಬೇಟಿಯನ್ ಶಾಲೆಗಳಲ್ಲಿ ಕನ್ನಡ ಕಲಿಸುವುದಕ್ಕೆ ನಿರಾಕರಣೆ ಮಾಡಿದ್ದಾರೆ.

    ಸಚಿವ ಸುರೇಶ್ ಕುಮಾರ್ ಅವರನ್ನ ಟಿಬೇಟಿಯನ್ ಶಿಕ್ಷಣ ಮಂತ್ರಿಗಳ ನಿಯೋಗವು ಇತ್ತೀಚೆಗೆ ಭೇಟಿಯಾಗಿತ್ತು. ಈ ವೇಳೆ ಕನ್ನಡ ಕಡ್ಡಾಯ ಕಲಿಕೆ ನಿಯಮದಿಂದ ನಮ್ಮ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಕಡ್ಡಾಯ ಕನ್ನಡ ಕಲಿಕಾ ನಿಯಮದಿಂದ ವಿನಾಯ್ತಿ ನೀಡಬೇಕು ಎಂದು ಮನವಿ ಮಾಡಿದ್ದರು. ನಿಯೋಗದ ಮನವಿಗೆ ಸ್ಪಂಧಿಸಿರುವ ಸಚಿವರು, ರಾಜ್ಯದ ಟಿಬೇಟಿಯನ್ ಶಾಲೆಗಳಿಗೆ ಕನ್ನಡ ಕಲಿಕೆ ವಿನಾಯ್ತಿ ನೀಡುವಂತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸಚಿವ ಈ ನಿರ್ಧಾರದಿಂದ ರಾಜ್ಯದಲ್ಲಿ ಇರುವ 12 ಟಿಬೇಟಿಯನ್ ಶಾಲೆಗಳಲ್ಲಿ ಕನ್ನಡ ಪಠ್ಯ ಕೈ ಬಿಡುವ ಸಾಧ್ಯತೆ ಇದೆ.

    ಟಿಬೇಟಿಯನ್ ಶಾಲೆಗಳಲ್ಲಿ ಈಗಾಗಲೇ ಪ್ರಥಮ ಭಾಷೆಯಾಗಿ ಟಿಬೇಟಿಯನ್, ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಕಲಿಸಲಾಗುತ್ತಿದೆ. ಆದರೆ ನಿಯಮದ ಪ್ರಕಾರ ಕನ್ನಡ ಭಾಷೆ ಕಲಿಸಬೇಕು. ಈಗ ಅದನ್ನು ಕಲಿಸಲಾಗದೆ ಸಚಿವರಿಗೆ ಮನವಿ ಮಾಡಿ ವಿನಾಯ್ತಿ ಪಡೆಯಲು ಟಿಬೇಟಿಯನ್ ಶಾಲೆಗಳು ಮುಂದಾಗಿವೆ. ಸಚಿವ ಸುರೇಶ್ ಕುಮಾರ್ ನಿರ್ಧಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.

    ಕನ್ನಡ ಕಲಿಕೆ ನಿಯಮ ಪಾಲನೆ ಆಗಬೇಕು. ಎಲ್ಲಾ ಶಾಲೆಗಳು ನಿಯಮ ಪಾಲನೆ ಮಾಡಬೇಕು. ಟಿಬೇಟಿಯನ್ ಶಾಲೆಗಳು ಕನ್ನಡ ಒಂದು ಭಾಷೆಯಾಗಿ ಕಲಿಯಬೇಕು. ಒಂದು ವೇಳೆ ಇವರಿಗೆ ವಿನಾಯ್ತಿ ಕೊಟ್ಟರೆ ನಾವೇ ಮಾಡಿದ ನಿಯಮ ಉಲ್ಲಂಘನೆ ಆಗುತ್ತೆ. ಮುಂದೆ ಬೇರೆ ಶಾಲೆಗಳು ಇದೇ ಮಾರ್ಗ ಹಿಡಿಯುತ್ತವೆ ಎಂದು ಅಸಮಾಧಾನ ಹೊರ ಹಾಕಿದೆ.

    ಸಚಿವರ ನಿರ್ಧಾರ ವಿವಾದವಾದ ಕೂಡಲೇ ಸಚಿವ ಸುರೇಶ್ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಿದ್ದಾರೆ. ನಾನು ಆ ರೀತಿ ಯಾವುದೇ ಚಿಂತನೆ ನಡೆಸಿಲ್ಲ. ಟಿಬೇಟಿಯನ್ ವಲಸೆ ಸರ್ಕಾರದ ಶಿಕ್ಷಣ ಸಚಿವೆ ನನ್ನನ್ನು ಭೇಟಿ ಮಾಡಿ ವಿನಾಯಿತಿ ಕೋರಿ ಒಂದು ಪತ್ರ ನೀಡಿದ್ದರು. ಆಗಲೇ ಅವರಿಗೆ ಸ್ಪಷ್ಟವಾಗಿ ಕರ್ನಾಟಕದಲ್ಲಿರುವ ಎಲ್ಲಾ ಶಾಲೆಗಳಲ್ಲಿಯೂ ಕನ್ನಡ ಭಾಷೆ ಕಲಿಸಬೇಕೆಂಬುದು ಈ ನೆಲದ ಕಾನೂನು” ಎಂದು ತಿಳಿಸಿದ್ದೇನೆ. ಅವರ ಪತ್ರಕ್ಕೆ ಲಿಖಿತವಾಗಿಯೂ ಸೂಕ್ತ ಉತ್ತರ ನೀಡಲಾಗುವುದು ಎಂದು ಫೇಸ್‍ಬುಕ್‍ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

  • ‘ಪಕ್ಕೆಲುಬು’ ಉಚ್ಚಾರಣೆ ತಪ್ಪಿದ ವಿದ್ಯಾರ್ಥಿ ವಿಡಿಯೋ ವೈರಲ್: ಶಿಕ್ಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

    ‘ಪಕ್ಕೆಲುಬು’ ಉಚ್ಚಾರಣೆ ತಪ್ಪಿದ ವಿದ್ಯಾರ್ಥಿ ವಿಡಿಯೋ ವೈರಲ್: ಶಿಕ್ಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

    – ವಿದ್ಯಾರ್ಥಿಗಳ ಕಲಿಕೆ ಬಗ್ಗೆ ವ್ಯಂಗ್ಯ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಕ್ಷಣ ಸಚಿವರ ಸೂಚನೆ

    ರಾಯಚೂರು: ರಾಜ್ಯದ ಶಾಲೆಯೊಂದರಲ್ಲಿ ಮಗುವೊಂದು ಶಿಕ್ಷಕರೊಬ್ಬರು ಹೇಳಿಕೊಡುತ್ತಿರುವ ‘ಪಕ್ಕೆಲುಬು’ ಪದವನ್ನು ಸರಿಯಾಗಿ ಉಚ್ಚರಿಸಲು ಬಾರದೇ ಪದೇ ಪದೇ ತಪ್ಪು ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ದಿನಗಳಿಂದ ವೈರಲ್ ಆಗಿದೆ. ಆದರೆ ಈ ವಿಡಿಯೋವನ್ನು ಪ್ರಾಥಮಿಕ ಹಾಗೂ ಪೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗಂಭೀರವಾಗಿ ತೆಗೆದುಕೊಂಡಿದ್ದಾರೆ.

    ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಸಚಿವರು, ಘಟನೆ ನಡೆದಿರುವ ಶಾಲೆಯನ್ನು ಪತ್ತೆ ಹಚ್ಚಬೇಕು. ಯಾವ ಶಿಕ್ಷಕರು ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಯ ಬಿಟ್ಟಿದ್ದಾರೆ ಎನ್ನುವುದನ್ನು ಪತ್ತೆ ಮಾಡಲು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ. ಜೊತೆಗೆ ಆ ಶಿಕ್ಷಕರ ಹಾಗೂ ಶಾಲಾ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಕೆಲಸಕ್ಕೆ ಮುಂದಾಗುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದೆಂಬ ಸೂತ್ತೋಲೆ ಹೊರಡಿಸಬೇಕು ಎಂದು ಸೂಚಿಸಿದ್ದಾರೆ.

    ಮಕ್ಕಳು ತಪ್ಪು ಉಚ್ಚಾರ ಮಾಡುವುದು ಸಹಜ. ನಿರಂತರ ಕಲಿಕೆಯ ನಂತರ ಆ ಪದದ ಕುರಿತು ಮಗುವಿಗೆ ಸ್ಪಷ್ಟತೆ ದೊರೆತಾಗ ಸರಿಯಾದ ಉಚ್ಚಾರ ಸಾಧ್ಯವಾಗುತ್ತದೆ. ಆದರೆ ಮಗುವೊಂದು ಕಲಿಕಾ ಹಂತದಲ್ಲಿ ತಪ್ಪು ಉಚ್ಚಾರ ಮಾಡುವುದನ್ನು ವಿಡಿಯೋದಲ್ಲಿ ಪ್ರಸಾರ ಮಾಡುತ್ತಿದ್ದರೆ ಮಗುವಿಗೆ ಗೊತ್ತಾದಾಗ ಆತನ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತದೆ. ಜೊತೆಗೆ ಆ ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದುಳಿಯುತ್ತಾನೆ ಎಂದು ಸಚಿವರು ಕಾಳಜಿ ವ್ಯಕ್ತಪಡಿಸಿದ್ದಾರೆ.

    ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಉಚ್ಚಾರ ಮಾಡುವುದನ್ನು ಕಲಿಸಬೇಕೇ ಹೊರತು ಅದನ್ನೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಬಾರದು. ಇಂತಹ ಕೆಲಸ ನಿಜಕ್ಕೂ ಅಪರಾಧ. ತಕ್ಷಣವೇ ವಿಡಿಯೋ ವೈರಲ್ ಮಾಡಿದ ಶಾಲೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸುರೇಶ್ ಕುಮಾರ್ ಆದೇಶಿಸಿದ್ದಾರೆ.

  • ಸಮಸ್ಯೆ ಇದ್ರೆ ತಿಳಿಸಿ, ಶಾಲೆಯಲ್ಲಿ ನಿಮಗೆ ಎಲ್ಲ ಸೌಲಭ್ಯ ಒದಗಿಸಿಕೊಡ್ತೇವೆ: ಸುರೇಶ್ ಕುಮಾರ್

    ಸಮಸ್ಯೆ ಇದ್ರೆ ತಿಳಿಸಿ, ಶಾಲೆಯಲ್ಲಿ ನಿಮಗೆ ಎಲ್ಲ ಸೌಲಭ್ಯ ಒದಗಿಸಿಕೊಡ್ತೇವೆ: ಸುರೇಶ್ ಕುಮಾರ್

    ಹಾವೇರಿ: ಜಿಲ್ಲೆಯ ಹಾವೇರಿ ತಾಲೂಕಿನ ನೆಲೋಗಲ್ಲ ಸರ್ಕಾರಿ ಪ್ರೌಢ ಶಾಲೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭೇಟಿ ನೀಡಿದರು.

    ಶಾಲೆಗೆ ನೀಡಿದ ವೇಳೆ 10ನೇ ತರಗತಿ ಕೊಠಡಿಗೆ ಹೋದ ಸುರೇಶ್ ಕುಮಾರ್ ಅವರು, ಮಕ್ಕಳ ಆಸನದಲ್ಲಿ ಕುಳಿತು ಮಕ್ಕಳಿಂದ ಗಣಿತ ಪಾಠ ಆಲಿಸಿದರು. ನಂತರ ಮಕ್ಕಳೊಂದಿಗೆ ಕೆಲ ಹೊತ್ತು ಚರ್ಚೆ, ಸಂವಾದ ನಡೆಸಿದ ಅವರು, ನಿಮ್ಮ ಮನೆಯಲ್ಲಿ ವಿದ್ಯುತ್ ಸಮಸ್ಯೆ ಇದೇಯಾ, ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯ ಕಷ್ಟವಾಗಿದೇಯಾ, ಸಮಸ್ಯೆ ಇದ್ದರೆ ತಿಳಿಸಿ ನಿಮಗೆ ಶಾಲೆಯಲ್ಲಿ ಎಲ್ಲ ಸೌಲಭ್ಯ ಒದಗಿಸಿಕೊಡುತ್ತೇವೆ ಎಂದರು. ಇದನ್ನೂ ಓದಿ: ಜಮೀನಿನಲ್ಲಿ ಕೆಲಸ ಮಾಡ್ತಿದ್ದ ರೈತನಿಗೆ ಸುರೇಶ್ ಕುಮಾರ್ ಸನ್ಮಾನ

    ಅಲ್ಲದೆ ಮಕ್ಕಳು ಪರೀಕ್ಷೆಗೆ ಹೆದರದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ, ಮಕ್ಕಳ ಶಿಕ್ಷಣದ ಕುರಿತು ಶಿಕ್ಷಕರು ಕೈಗೊಂಡ ಕ್ರಮಗಳ ಕುರಿತು ಶಿಕ್ಷಕರಿಂದ ಮಾಹಿತಿ ಸಂಗ್ರಹಿಸಿದರು. ಇದೇ ವೇಳೆ ಶಾಲಾ ಮಕ್ಕಳಿಗೆ ನೈಜ್ಯ ಕತೆ ಹೇಳುವ ಮೂಲಕ ಮಕ್ಕಳಿಗೆ ಶಿಕ್ಷಣದ ಕುರಿತು ಪ್ರೇರಣೆ, ಉತ್ಸಾಹ, ಆಸಕ್ತಿ ತುಂಬಿದರು. ಇಲ್ಲಿನ ಹುಡಗಿ- ಹುಡಗ ಐಎಎಸ್, ಐಪಿಎಸ್ ಅಧಿಕಾಯಾಗಲಿ ಎಂದರು.

  • ಗಾಡಿಗೆ ಬೀಗ ಹಾಕಿದ್ದಾರೆ: ಸಚಿವರ ಮುಂದೆ ಬೀಗಿದ ಪುಟಾಣಿಗಳು

    ಗಾಡಿಗೆ ಬೀಗ ಹಾಕಿದ್ದಾರೆ: ಸಚಿವರ ಮುಂದೆ ಬೀಗಿದ ಪುಟಾಣಿಗಳು

    ಬೆಂಗಳೂರು: ಗಾಡಿಗೆ ಬೀಗ ಹಾಕಿದ್ದಾರೆ ಎಂದು ಪುಟಾಣಿಗಳು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಮುಂದೆ ಬೀಗಿದ್ದಾರೆ.

    ಮೂವರು ಪುಟಾಣಿಗಳ ಜೊತೆಗೆ ಆತ್ಮೀಯ ಸಂಭಾಷಣೆ ನಡೆಸಿದ ಸನ್ನಿವೇಶವನ್ನು ಸಚಿವ ಸುರೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರವಾಗಿ ಸಚಿವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಟ್ವೀಟ್ ಮಾಡಿರುವ ಸಚಿವರು, ಬಿಜೆಪಿ ಸಾರ್ವಜನಿಕ ಸಭೆಯಿಂದ ಮರಳಿ ನಡೆದು ಬರುತ್ತಿದ್ದಾಗ ತಮ್ಮ ಮನೆಯಾಚೆ ತಳ್ಳುವ ಗಾಡಿಯ ಮೇಲೆ ಕುಳಿತು ಖುಷಿಯಾಗಿ ಬರೆಯುತ್ತಿದ್ದ ಶರಣ್ಯಾ, ದಿವ್ಯಾ ಮತ್ತು ಚಿತ್ರಾ ಸಿಕ್ಕಿದ್ದರು. ತಳ್ಳಿಕೊಂಡು ಹೋಗಿ ಬಿಡ್ಲಾ ಎಂದು ಕೇಳಿದ್ದಕ್ಕೆ ‘ನಮ್ಮಪ್ಪ ಗಾಡಿಗೆ ಬೀಗ ಹಾಕಿದ್ದಾರೆ’ ಎಂದು ಬೀಗಿದರು ಅಂತ ಬರೆದುಕೊಂಡಿದ್ದಾರೆ.

    ಜನ ಸ್ನೇಹಿ ಸುರೇಶ್ ಕುಮಾರ್ ಅವರಿಗೆ ಅಭಿನಂದನೆಗಳು. ಶ್ರೀಮಂತಿಕೆ, ಆಡಂಬರ, ಅಧಿಕಾರದ ಹಿಂದೆಯೇ ಬಿದ್ದಿರುವ ರಾಜಕಾರಣಿಗಳ ನಡುವೆ ಸರಳ ಸಜ್ಜನರಾದ ನಿಮಗೆ ಬಿಜೆಪಿ ಸೂಕ್ತವಾದ ಸ್ಥಾನಮಾನ ಕೊಡುವುದರಲ್ಲಿ ಎಡವಿದೆ. ನೀವು ಇರುವುದರಲ್ಲೇ ನಾಜಿರ್ ಸಾಬ್ ಬಹುಕಾಲ ನೆನಪಿನಲ್ಲಿ ಉಳಿಯುವ ಕಾರ್ಯಗಳನ್ನು ಮಾಡಿ ಎಂದು ನೆಟ್ಟಿಗರೊಬ್ಬರು ರಿಟ್ವೀಟ್ ಮಾಡಿದ್ದಾರೆ.

    ಮತ್ತೊಬ್ಬರು ಕಮೆಂಟ್ ಮಾಡಿ, ಸರ್ ರಾಜಕಾರಣಿ ಅಂದ್ರೆ ದುಡ್ಡು, ಧಿಮಾಕು, ದರ್ಪ ನೆನಪಾಗುತ್ತದೆ. ಈ ರೀತಿ ಜನರ ಮಧ್ಯೆ ಬೆರೆತು ಅವರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿ ಪರಿಹಾರ ನೀಡುವ ನಿಮ್ಮಂತ ರಾಜಕಾರಣಿಗಳು ಕೂಡ ಇದ್ದಾರೆ ಅಂದ್ರೆ ತುಂಬಾ ಸಂತೋಷವಾಗುತ್ತದೆ. ಇದೇ ರೀತಿ ರಾಜಕೀಯದಲ್ಲಿ ಮುಂದುವರಿಯಿರಿ ಎಂದು ಹಾರೈಸಿದ್ದಾರೆ.