ಬೆಂಗಳೂರು: ದೇಶವೇ ಲಾಕ್ ಡೌನ್ ಆಗಿರುವುದರಿಂದ ಜನರು ಹೊರಗೆ ಬರುವುದು ವಿರಳವಾಗಿದ್ದು, ಹೀಗಾಗಿ ಪ್ರಾಣಿ ಪಕ್ಷಿಗಳು ಅನ್ನ, ನೀರು ಇಲ್ಲದೆ ಪರದಾಡುತ್ತಿವೆ. ಹಲವು ನಟ, ನಟಿಯರು ಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ಹಾಗೂ ಬಡವರಿಗೆ ಸಹಾಯ ಮಾಡುವ ಮೂಲಕ ಸ್ಪಂದಿಸುತ್ತಿದ್ದಾರೆ. ಆದರೆ ಪ್ರಾಣಿಗಳು ಮಾತ್ರ ನರಳುತ್ತಿವೆ. ಹೀಗಾಗಿ ನಟಿ ಸಂಯುಕ್ತಾ ಹೊರನಾಡು ಪ್ರಾಣಿಗಳತ್ತ ಲಕ್ಷ್ಯ ಹರಿಸಿದ್ದಾರೆ.
ಹೋಮ್ ಕ್ವಾರೆಂಟೈನ್‍ನಿಂದಾಗಿ ಹಲವು ನಟ, ನಟಿಯರು ಮನೆಯಲ್ಲೇ ಉಳಿದುಕೊಂಡಿದ್ದು, ಕುಟುಂಬದೊಂದಿಗೆ ಹಾಗೂ ತಮ್ಮ ಮುಂದಿನ ಸಿನಿಮಾ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಆದರೆ ಸಂಯುಕ್ತಾ ಹೊರನಾಡು ಅವರು ಇನ್ನೂ ಒಂದು ಹೆಜ್ಜೆ ಮುಂದೆ ಬೀದಿ ನಾಯಗಳಿಗೆ ಆಹಾರ ನೀಡುವುದರಲ್ಲಿ ನಿರತರಾಗಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಪ್ರಾಣಿಗಳು ಅದರಲ್ಲೂ ನಾಯಿ ಎಂದರೆ ಸಂಯುಕ್ತ ಅವರಿಗೆ ಪಂಚ ಪ್ರಾಣ, ಅವರೂ ಒಂದು ನಾಯಿಯನ್ನು ದತ್ತು ಪಡೆದಿದ್ದಾರೆ. ಅದಕ್ಕೆ ಗುಂಡ ಎಂದು ನಾಮಕರಣ ಮಾಡಿದ್ದು, ಅದರ ಜೊತೆಗೆ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಇದರ ಜೊತೆಗೆ ಇದೀಗ ಬೀದಿ ನಾಯಿಗಳನ್ನು ಕಾಪಾಡಲು ಮುಂದಾಗಿದ್ದಾರೆ.

ಕೊರೊನಾ ಭೀತಿಯಿಂದಾಗಿ ದೇಶವೇ ಲಾಕ್‍ಡೌನ್ ಅಗಿದ್ದು, ಬಹುತೇಕರು ಸ್ವಯಂ ದಿಗ್ಬಂಧನ ವಿಧಿಸಿಕೊಂಡು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಪ್ರಾಣಿ, ಪಕ್ಷಿಗಳು ಆಹಾರ ನೀರು ಇಲ್ಲದೆ ಪರಿತಪಿಸುತ್ತಿವೆ. ಇದನ್ನು ಕಂಡ ನಟಿ ಸಂಯುಕ್ತಾ ಹೊರನಾಡು, ಬೀದಿ ನಾಯಿಗಳಿಗೆ ಬಿಸ್ಕೆಟ್ ಹಾಗೂ ತಿಂಡಿಯನ್ನು ಹಾಕಿ ಮಾನವೀಯತೆ ಮೆರೆದಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಕಾಲ ಕಳೆಯುತ್ತಿರುವ ಸಂಯುಕ್ತಾ ಹೊರನಾಡು ಶುಕ್ರವಾರ ಹೊರಗಡೆ ಬಂದಿದ್ದಾರೆ. ಈ ವೇಳೆ ಬೀದಿ ನಾಯಿಗಳು ಆಹಾರವಿಲ್ಲದೆ ಪರದಾಡುವುದನ್ನು ನೋಡಿದ್ದಾರೆ. ತಕ್ಷಣವೇ ಬಿಸ್ಕೆಟ್ ತಿನ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದೊಂದು ವಾರದಿಂದ ನಾಯಿಗಳು ಆಹಾರವಿಲ್ಲದೆ ಪರದಾಡುತ್ತಿರುವುದನ್ನು ಕಂಡು ಹೃದಯಕ್ಕೆ ತುಂಬಾ ಘಾಸಿಯುಂಟಾಗಿತ್ತು. ಹೀಗಾಗಿ ಕೆಲವು ನಾಯಿಗಳಿಗೆ ನಾನು ಆಹಾರ ತಿನ್ನಿಸಿದೆ. ಅಲ್ಲದೆ ಟಾಸ್ಕ್ ಫೋರ್ಸ್‍ನಲ್ಲಿ ಭಾಗವಾಗಿಸಿದ್ದಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದಗಳು. ಈ ನಿಟ್ಟಿನಲ್ಲಿ ನಮ್ಮ ತಂಡ ಫುಲ್ ಆ್ಯಕ್ಟಿವ್ ಆಗಿದ್ದು, ತುಂಬಾ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಸಂಯುಕ್ತಾ ಹೊರನಾಡು ಲೈಫು ಇಷ್ಟೇನೆ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಗುರುತಿಸಿಕೊಂಡಿದ್ದು, ನಂತರ ಬರ್ಫಿ, ಒಗ್ಗರಣೆ, ನೀನೆ ಬರಿ ನೀನೆ, ಜಿಗರ್‍ಥಂಡ, ಸರ್ಕಾರಿ ಕೆಲಸ ದೇವರ ಕೆಲಸ, ದಯವಿಟ್ಟು ಗಮನಿಸಿ, ದಿ ವಿಲನ್ ಹಾಗೂ ಇತ್ತೀಚೆಗೆ ನಾನು ಮತ್ತು ಗುಂಡ ಸಿನಿಮಾದಲ್ಲಿ ನಟಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಕೆಲ ತಮಿಳು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ.