Tag: ಪ್ರಹ್ಲಾದ್ ಜೋಷಿ

  • ಕೋವ್ಯಾಕ್ಸಿನ್ ಬಗ್ಗೆ ವಿರೋಧ ಮಾಡಿದವರಿಗೆಲ್ಲ ಈಗ ಸತ್ಯದ ಅರಿವಾಗಿದೆ: ಜೋಶಿ

    ಕೋವ್ಯಾಕ್ಸಿನ್ ಬಗ್ಗೆ ವಿರೋಧ ಮಾಡಿದವರಿಗೆಲ್ಲ ಈಗ ಸತ್ಯದ ಅರಿವಾಗಿದೆ: ಜೋಶಿ

    ಧಾರವಾಡ: ಕೋವ್ಯಾಕ್ಸಿನ್ ಬಗ್ಗೆ ವಿರೋಧ ಮಾಡಿದವರಿಗೆಲ್ಲ ಈಗ ಸತ್ಯದ ಅರಿವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಂಭದಲ್ಲೇ ಕೋವಿಡ್ ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಮಾಡಿದ್ದರು, ಅಡೆ ತಡೆ ಹಾಕಿ ಭಯ ಹುಟ್ಟಿಸದಿದ್ದರೆ ಲಸಿಕೆ ಇನ್ನೂ ಜಾಸ್ತಿ ಆಗುತ್ತಿತ್ತು. ಕೋವ್ಯಾಕ್ಸಿನ್ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿದ್ದರು. ಆದರೆ ಈಗ ಕೋವ್ಯಾಕ್ಸಿನ್ ಸೇಫ್ ಎಂದು ಗೊತ್ತಾಗಿದೆ. ಅತೀ ಕೆಟ್ಟದಾದ ಪ್ರತಿಕ್ರಿಯೆಗಳನ್ನು ನಾವು ಎದುರಿಸಬೇಕಾಯಿತು. ಕೋವಿಶೀಲ್ಡ್ ತಯಾರಿಗೆ ಕಚ್ಚಾ ವಸ್ತುಗಳು ವಿದೇಶದಿಂದ ಬರಬೇಕು, ಅದು ಸಹ ಬರುತ್ತೆ. ಕೋವ್ಯಾಕ್ಸಿನ್ ಉತ್ಪಾದನೆ ಆಗುತ್ತಿದೆ ಎಂದರು.

    ಸಚಿವ ಉಮೇಶ ಕತ್ತಿ ಅಕ್ಕಿ ಕೊಡುವ ವಿಚಾರವಾಗಿ ಹೇಳಿಕೆ ನೀಡಿದ್ದರ ಕುರಿತು ಮಾತನಾಡಿದ ಅವರು, ಕೇಂದ್ರದಿಂದ ಒಟ್ಟು 5 ಕೆ.ಜಿ. ಅಕ್ಕಿ ಕೊಡಲಾಗುತ್ತಿದೆ. ಇತ್ತೀಚೆಗೆ ಸಚಿವ ಉಮೇಶ ಕತ್ತಿ ನನಗೆ ಅಧಿವೇಶನ ನಡೆದಾಗ ಭೇಟಿಯಾಗಿದ್ದರು. ಸ್ಥಳೀಯವಾಗಿ ಜೋಳ, ರಾಗಿ ಕೊಡಲು ಅನುಮತಿ ಕೇಳಿದ್ದರು, ಹೀಗಾಗಿ ಐದು ಕೆ.ಜಿ.ಯಲ್ಲಿ ಇನ್ನು 3 ಕೆ.ಜಿ ಜೋಳ ಅಥವಾ ರಾಗಿ ಕೊಡುತ್ತಾರೆ ಎಂದು ಹೇಳಿದರು ಎಂದರು.

    ಕೇಂದ್ರ ಆರೋಗ್ಯ ಸಚಿವರು ಕೋವಿಡ್ ಬಗ್ಗೆ ಮಾತನಾಡದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೇಂದ್ರದಲ್ಲಿ ಒಂದು ಸಿಸ್ಟಮ್ ಇದೆ, ಸೆಕ್ರೆಟರ್ ಮತ್ತು ಒಬ್ಬ ವಕ್ತಾರರನ್ನು ಫಿಕ್ಸ್ ಮಾಡಿರುತ್ತೇವೆ. ರಾಜ್ಯ ಮಂತ್ರಿಗಳು ಬೇರೆ ಸ್ಟೆಟ್‍ಮೆಂಟ್ ಕೊಡುತ್ತಾರೆ. ಆ ರೀತಿ ಭಾರತ ಸರ್ಕಾರದಲ್ಲಿ ವ್ಯವಸ್ಥೆ ಇಲ್ಲ. ಇಂಥ ಸಮಯದಲ್ಲಿ ವಕ್ತಾರರನ್ನು ನೇಮಕ ಮಾಡಿರುತ್ತೇವೆ. ಕೇಂದ್ರ ಸಚಿವವರು ರಾಜ್ಯಗಳ ಆರೋಗ್ಯ ಸಚಿವರ ಜೊತೆ ಮಾತನಾಡುತಿದ್ದಾರೆ, ಮುಖ್ಯಮಂತ್ರಿಗಳ ಜೊತೆ ಕೂಡಾ ಮಾತನಾಡುತಿದ್ದಾರೆ. ಕೇಂದ್ರದ ಆರೋಗ್ಯ ಮಂತ್ರಿ ಸಮರ್ಥ ಮಂತ್ರಿಗಳಾಗಿದ್ದಾರೆ ಎಂದರು.

  • ಕುವೆಂಪು ಹುಟ್ಟಿದ ಜಿಲ್ಲೆಯಲ್ಲೇ ಕನ್ನಡಕ್ಕೆ ಅವಮಾನ – ನಿಖಿಲ್‌ ಕಿಡಿ

    ಕುವೆಂಪು ಹುಟ್ಟಿದ ಜಿಲ್ಲೆಯಲ್ಲೇ ಕನ್ನಡಕ್ಕೆ ಅವಮಾನ – ನಿಖಿಲ್‌ ಕಿಡಿ

    ಬೆಂಗಳೂರು : ಉಕ್ಕಿನ ನಗರಿ ಭದ್ರಾವತಿಯ ಆರ್‌ಎಎಫ್‌ ಘಟಕದ ಶಂಕು ಸ್ಥಾಪನೆ ವೇಳೆ ಕನ್ನಡ ಕಡೆಗಣನೆ ಬಗ್ಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಬಿಎಸ್ ವೈ ಮತ್ತು ಅಮಿತ್ ಶಾ ವಿರುದ್ಧ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರುತ್ತಿದ್ದಾರೆ.

    ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಕನ್ನಡ ಕಡೆಗಣನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ಅಮಿತ್ ಶಾ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

    ʼಇಂಗ್ಲೀಷ್ ಮರದ ದೊಣ್ಣೆಯಾದರೆ ಹಿಂದಿ ಕಬ್ಬಿಣದ ಸಲಾಕೆ’ ಎಂದು ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ರಾಷ್ಟ್ರಕವಿ ಕುವೆಂಪು ಅವರು ಹುಟ್ಟಿದ ಜಿಲ್ಲೆಯಲ್ಲೇ ಕನ್ನಡಕ್ಕೆ ನೆಲೆ ಸಿಗದಂತಾದರೂ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಇದನ್ನು ಕಂಡು ಕಾಣದಂತೆ ಮೌನವಹಿಸಿರುವುದು ನಿಜಕ್ಕೂ ಬೇಸರದ ವಿಚಾರ ಅಂತಿದ್ದಾರೆ.

    ಶಿವಮೊಗ್ಗದ ಅರ್.ಎ.ಎಫ್ ಘಟಕದ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ವೀಕ್ಷಿಸುವಾಗ ಈ ಕಾರ್ಯಕ್ರಮ ಭದ್ರಾವತಿಯ ಬದಲು ದೆಹಲಿಯಲ್ಲಿ ನಡೆದಂತಿತ್ತು. ಒಂದು ಅಕ್ಷರವೂ ಕನ್ನಡ ಪದ ಬಳಕೆ ಮಾಡದೇ ಮಾನ್ಯ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಶಂಕುಸ್ಥಾಪನೆ ನೆರವೇರಿಸಿರುವುದು ಕೇಂದ್ರ ಸರ್ಕಾರದ ಕನ್ನಡ ವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

    ಬೇಸರ ವ್ಯಕ್ತಪಡಿಸಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿರುವ ಅವರು ರಾಜ್ಯ ಸರಕಾರ ಇನ್ನಾದರೂ ತ್ರಿಭಾಷಾ ಸೂತ್ರದಂತೆ ಕನ್ನಡ ಫಲಕವನ್ನು ಅಳವಡಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತೇನೆ ಅಂತಾ ಟ್ವಿಟ್ಟರ್ ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

  • ಸಿಡಿ ಇದ್ರೆ ಕೊಡಿ, ಸುಮ್ನೆ ಹೆದರಿಸುವುದು ಏಕೆ: ಪ್ರಹ್ಲಾದ್ ಜೋಶಿ ಪ್ರಶ್ನೆ

    ಸಿಡಿ ಇದ್ರೆ ಕೊಡಿ, ಸುಮ್ನೆ ಹೆದರಿಸುವುದು ಏಕೆ: ಪ್ರಹ್ಲಾದ್ ಜೋಶಿ ಪ್ರಶ್ನೆ

    ಹುಬ್ಬಳ್ಳಿ: ರಾಜಕಾರಣದಲ್ಲಿ ಆಸೆ ಇರುವುದು ತಪ್ಪಲ್ಲ. ಆದರೆ ಬಹಿರಂಗ ಹೇಳಿಕೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

    ನಗರದಲ್ಲಿಂದು ಚೆನ್ನಮ್ಮ ವೃತ್ತದ ಸುತ್ತ ಪ್ಲೈ ಓವರ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಶಾಸಕರ ಅಸಮಾಧಾನವನ್ನು ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ. ಆದರೆ ಸಿಡಿ ಇದೆ ಎಂದು ಹೆದರಿಸುವುದು ಸರಿಯಲ್ಲ. ಸಿಡಿ ಇದ್ದರೆ ಕೊಡಿ ಎಂದು ಸ್ವತಃ ಸಿಎಂ ಅವರೇ ಹೇಳಿದ್ದಾರೆ ಎಂದು ತಿಳಿಸಿದರು.

    ಅವರ ಬಳಿ ಸಿಡಿ ಇಲ್ಲ, ಏನೂ ಇಲ್ಲ ಸುಮ್ಮನೆ ಹೆದರಿಸುತ್ತಿದ್ದಾರೆ. ಇದ್ದರೆ ಬಿಡುಗಡೆ ಮಾಡಲಿ, ಇದು ಕೇವಲ ಹೆದರಿಸುವ ತಂತ್ರ. ನನ್ನ ಬಳಿ ಸಿಡಿ ಬಂದಿಲ್ಲ. ಬಂದರೆ ನಾನು ಮೊದಲು ನಿಮಗೇ ಕೊಡುತ್ತೇನೆ ಎಂದು ನಗೆಚಟಾಕಿ ಹಾರಿಸಿದರು.

  • ಕಿಮ್ಸ್‌ಗೆ 5.50 ಕೋಟಿ ರೂಪಾಯಿ ವೈದ್ಯಕೀಯ ಉಪಕರಣಗಳ ಹಸ್ತಾಂತರ

    ಕಿಮ್ಸ್‌ಗೆ 5.50 ಕೋಟಿ ರೂಪಾಯಿ ವೈದ್ಯಕೀಯ ಉಪಕರಣಗಳ ಹಸ್ತಾಂತರ

    – ಲಲಿತಕಲಾ ಅಕಾಡೆಮಿ ಸ್ಥಾಪನೆಗೆ ಕೇಂದ್ರ ಅನುಮೋದನೆ
    – 6 ಪಥದ ಬೈಪಾಸ್‌ ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆ

    ಹುಬ್ಬಳ್ಳಿ: ಭಾರತದಲ್ಲಿ ಒಟ್ಟು ಜನಸಂಖ್ಯೆ ಶೇ.19 ರಷ್ಟು ಜನರು ಖಾಸಗಿ ಆರೋಗ್ಯ ವಿಮೆ ಸೌಲಭ್ಯ ಹೊಂದಿದ್ದಾರೆ. ಭಾರತ ಸರ್ಕಾರ ಆಯುಷ್ಮಾನ್ ಆರೋಗ್ಯ ಭಾರತದಡಿ 55 ಕೋಟಿ ಜನರಿಗೆ ಆರೋಗ್ಯ ವಿಮೆ ಒದಗಿಸಿದೆ. ಸರ್ಕಾರಿ ಆಸ್ಪತ್ರೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

    ಕಿಮ್ಸ್ ಸುವರ್ಣ ಮಹೋತ್ಸವ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಕೋಲ್ ಇಂಡಿಯಾ ಹಾಗೂ ಐಓಸಿಎಲ್ ಸಾರ್ವಜನಿಕ ಹೊಣೆಗಾರಿಕೆ ನಿಧಿಯಡಿ ನೀಡಲಾದ 5.50 ಕೋಟಿ ರೂಪಾಯಿ ವೆಚ್ಚದ ವೈದ್ಯಕೀಯ ಉಪಕರಣಗಳನ್ನು ಕಿಮ್ಸ್ ಗೆ ಹಸ್ತಾಂತರಿಸಿ ಮಾತನಾಡಿದರು.

    ಭಾರತದಲ್ಲಿ ಪ್ರತಿ ಹತ್ತು ಜನರಲ್ಲಿ ಒಬ್ಬರಿಗೆ ಡಯಾಬಿಟಿಸ್ ಇದೆ. 55 ಕೋಟಿ ಜನರಿಗೆ ಹೃದಯ ಸಂಬಂಧಿ ತೊಂದರೆಗಳಿವೆ. ಡೆಂಗ್ಯೂ ಪ್ರಮಾಣ ಹೆಚ್ಚಿದೆ. ಇದನ್ನು ಅರಿತ ಪ್ರಧಾನ ಮಂತ್ರಿಗಳು ಸ್ವಚ್ಛಭಾರತ ಆಂದೋಲನಕ್ಕೆ ಚಾಲನೆ ನೀಡಿದರು ಎಂದರು.

    ಕಿಮ್ಸ್ ಗೆ ಬೇಕಾದ ವೈದ್ಯಕೀಯ ಉಪಕರಣಗಳನ್ನು ಒದಗಿಸಲು ಕೋಲ್ ಇಂಡಿಯಾ ಹಾಗೂ ಐಓಸಿಎಲ್ ಗೆ ಜಿಲ್ಲಾಧಿಕಾರಿ ಹಾಗೂ ಕಿಮ್ಸ್ ನಿರ್ದೇಶಕರು ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸಿದರು. ಇದರ ಪರಿಣಾಮವಾಗಿ ಬೇಗನೆ ಹಣ ಒದಗಿಸಿ ಉಪಕರಣ ಖರೀದಿಸಲು ಸಾಧ್ಯವಾಗಿದೆ. ಕೋವಿಡ್ ಸಂದರ್ಭದಲ್ಲಿ ಕಿಮ್ಸ್ ಉತ್ತಮ ಸೇವೆ ನೀಡಿ ಹೆಸರುವಾಸಿಯಾಗಿದೆ. ಇದನ್ನು ಉಳಿಸಿಕೊಂಡು ಹೋಗಬೇಕು. ಕಿಮ್ಸ್ ಗೆ ದಾಖಲಾದ ರೋಗಿಗಳು ನಗು ಮೊಗದಿಂದ ಹಿಂದಿರುಗಬೇಕು. ಭಾರತದಲ್ಲಿ ಕೋವಿಡ್ ಗುಣಮುಖರ ಸಂಖ್ಯೆ ಹೆಚ್ಚಿದೆ. ಪ್ರತಿದಿನ 11 ಲಕ್ಷ ಜನರಿಗೆ ಕೋವಿಡ್ ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.

    ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವರಾದ ಪ್ರಹ್ಲಾದ್ ಸಿಂಗ್ ಪಟೇಲ್, ಹುಬ್ಬಳ್ಳಿ ಧಾರವಾಡ ನಗರದಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿ ಸ್ಥಾಪಿಸಲು ಅನುಮೋದನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳ ಗುರುತಿಸಿ ಪ್ರಸ್ತಾವನೆ ಸಲ್ಲಿಸಿದರೆ ಶೀಘ್ರವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

    ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಯನ್ನು 6 ಪಥಗಳ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಕೇಂದ್ರ ಲೋಕೋಪಯೋಗಿ ಇಲಾಖೆ ಅನುಮತಿ ನೀಡಿದೆ. ನಂದಿ ಇನ್ ಫ್ರಾಸ್ಟಕ್ಚರ್ ಕಂಪನಿಯೊಂದಿಗೆ ಮಾತುಕತೆ ನಡೆಸಲಾಗಿದ್ದು, 2024 ರ ವರೆಗೆ ಟೋಲ್ ಸಂಗ್ರಹಕ್ಕೆ ಅನುಮತಿ ನೀಡಲಾಗಿದೆ. ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಭೂಮಿ ಪಡೆಯಲು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸುವರು. ಜನವರಿ ಮಾಹೆಯಲ್ಲಿ ಚನ್ನಮ್ಮ ವೃತ್ತದ ಮೇಲು ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು. ಎನ್.ಟಿ.ಪಿ.ಸಿ.ಎಲ್.(ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್‌ ಲಿಮಿಟೆಡ್) ಅವಳಿ ನಗರದ ಕಲ್ಲಿದ್ದಲು ಆಧಾರಿತ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಮುಂದೆ ಬಂದಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘಟಕ ಸ್ಥಾಪಿಸಲಾಗುವುದು. ಸುಸ್ಥಿರ ಅಭಿವೃದ್ಧಿ ಹೊಂದಿರುವ ಮಹಾರಾಷ್ಟ್ರದ ನಾಗಪುರ ನಗರಕ್ಕೆ ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳ ಭೇಟಿ ನೀಡಿ ಅಧ್ಯಯನ ನಡೆಸಿ, ಅವಳಿ ನಗರದಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.

    ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಚಂದ್ರಕಾಂತ ಬೆಲ್ಲದ, ಪ್ರದೀಪ್ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರಟಾನಿ, ಪ್ರಾಂಶುಪಾಲ ಡಾ.ಎಂ.ಸಿ.ಚಂದ್ರ, ಕಿಮ್ಸ್ ಆಡಳಿತ ಮಂಡಳಿ ಸದಸ್ಯರಾದ ಜಿ.ಬಿ.ಸತ್ತೂರ, ಕೋಲ್ ಇಂಡಿಯಾ ಹಾಗೂ ಐಓಸಿಯಲ್ ಪ್ರತಿನಿಧಿಗಳಾದ ರಾಮೇಶ ಬಾಬು, ಗೌಸ ಭಾಷಾ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯದ ಐಓಸಿಯಲ್ ಮುಖ್ಯಸ್ಥ ಡಿ.ಎಲ್.ಪ್ರಮೋದ್ ವಿಡಿಯೋ ಸಂವಾದ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • ಈ ಬಾರಿಯ ಚಳಿಗಾಲದ ಅಧಿವೇಶನ ನಡೆಯಲ್ಲ: ಪ್ರಹ್ಲಾದ್ ಜೋಶಿ

    ಈ ಬಾರಿಯ ಚಳಿಗಾಲದ ಅಧಿವೇಶನ ನಡೆಯಲ್ಲ: ಪ್ರಹ್ಲಾದ್ ಜೋಶಿ

    ನವದೆಹಲಿ: ಕೊರೊನಾ ಎರಡನೇ ಅಲೆ ಹಿನ್ನೆಲೆ ಈ ಬಾರಿಯ ಚಳಿಗಾಲದ ಅಧಿವೇಶನವನ್ನು ನಡೆಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಇದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

    ಈ ಕುರಿತು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಸೋಮವಾರ ಪತ್ರದ ಮೂಲಕ ಸ್ಪಷ್ಟಪಡಿಸಿದ್ದು, ಕೊರೊನಾ ಹರಡುವ ಭೀತಿಯಿಂದ ಚಳಿಗಾಲದ ಅಧಿವೇಶನವನ್ನು ನಡೆಸಲಾಗುತ್ತಿಲ್ಲ. ಅಲ್ಲದೆ ಒಮ್ಮೆಲೆ ಜನವರಿಯಲ್ಲಿ ಬಜೆಟ್ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಕಾಂಗ್ರೆಸ್ ಲೋಕಸಭಾ ನಾಯಕ ಅಧೀರ್ ರಂಜನ್ ಚೌಧರಿ ಅವರು ಚಳಿಗಾಲದ ಅಧಿವೇಶನ ನಡೆಸಬೇಕು. ಅಲ್ಲದೆ ರೈತರ ಕಾನೂನುಗಳ ಬಗ್ಗೆ ಚರ್ಚೆ ನಡೆಸಬೇಕು. ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಕೊರೊನಾ ಹಿನ್ನೆಲೆ ಚಳಿಗಾಲದ ಅಧಿವೇಶನ ನಡೆಸುತ್ತಿಲ್ಲ ಎಂದು ತಿಳಿಸಿದ್ದಾರೆ.

    ಈ ಕುರಿತು ಎಲ್ಲ ಪಕ್ಷಗಳ ಮುಖಂಡರೊಂದಿಗೆ ಚರ್ಚೆ ನಡೆಸಲಾಗಿದೆ. ಕೊರೊನಾ ಹಿನ್ನೆಲೆ ಅಧೀವೇಶನ ನಡೆಸದಿರಲು ಒಮ್ಮತವಿದೆ. ಸೆಪ್ಟೆಂಬರ್ ನಲ್ಲಿ ನಡೆದ ಮಾನ್ಸೂನ್ ಅಧಿವೇಶದ ಸಂದರ್ಭದಲ್ಲಿ ಹಲವರಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು ಎಂದು ಜೋಷಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ. 10 ನಿರಂತರ ಸಭೆಯಲ್ಲಿ 27 ಮಸೂದೆಗಳನ್ನು ಸರ್ಕಾರ ಪಾಸ್ ಮಾಡಿದೆ. ಇವುಗಳ ಪೈಕಿ ಮೂರು ರೈತರ ಬಗೆಗಿನ ಕಾನೂನುಗಳು ಆಕ್ರೋಶಕ್ಕೆ ಕಾರಣವಾಗಿದ್ದು, ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

    ಕೊರೊನಾ ವೈರಸ್ ನಿಯಂತ್ರಣಕ್ಕೆ ಚಳಿಗಾಲದ ತಿಂಗಳುಗಳು ನಿರ್ಣಾಯಕವಾಗಿದ್ದು, ಈ ಅವಧಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ವಿಶೇಷವಾಗಿ ದೆಹಲಿಯಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಜೋಷಿ ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

  • ದೇಶದ್ರೋಹಿ ಚಟುವಟಿಕೆಗಳ ಹಿಂದೆ ಗುಪ್ಕಾರ್ ಗ್ಯಾಂಗ್ ಕುಮ್ಮಕ್ಕಿದೆ: ಪ್ರಹ್ಲಾದ್ ಜೋಶಿ

    ದೇಶದ್ರೋಹಿ ಚಟುವಟಿಕೆಗಳ ಹಿಂದೆ ಗುಪ್ಕಾರ್ ಗ್ಯಾಂಗ್ ಕುಮ್ಮಕ್ಕಿದೆ: ಪ್ರಹ್ಲಾದ್ ಜೋಶಿ

    ಧಾರವಾಡ: ಕಾಶ್ಮೀರದಲ್ಲಿ ಉಗ್ರರ ಪಡೆಯನ್ನು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ಇಂತಹ ದೇಶದ್ರೋಹಿ ಉಗ್ರ ಚಟುವಟಿಕೆಗಳ ಹಿಂದೆ ಗುಪ್ಕಾರ್ ಗ್ಯಾಂಗ್ ಕುಮ್ಮಕ್ಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಗ್ಯಾಂಗ್ ಜೊತೆಗಿರುವ ಪಕ್ಷಗಳ ಜೊತೆ ಕಾಂಗ್ರೆಸ್ ಕೈ ಜೋಡಿಸಿದೆ. ಗುಪ್ಕಾರ್ ಜೊತೆಗಿನ ಸಂಬಂಧದ ಬಗ್ಗೆ ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಏ ರಿಸ್ತಾ ಕ್ಯಾ ಕೆಹತಾ ಹೈ ಎಂದು ಕಾಂಗ್ರೆಸ್ ಹೇಳಬೇಕು. ತಾಯಿಗೆ ಹುಷಾರಿಲ್ಲ ಎಂದು ರಾಹುಲ್ ಗಾಂಧಿ ಗೋವಾದಲ್ಲಿ ಕುಳಿತಿದ್ದಾರೆ. ಅಲ್ಲಿಂದಲೇ ರಾಹುಲ್ ನಿಲುವು ಸ್ಪಷ್ಟಪಡಿಸಬೇಕು. ಅಸಹಿಷ್ಣುತೆ ಬಗ್ಗೆ ಮಾತನಾಡಿದವರು ಗುಪ್ಕಾರ್ ಬಗ್ಗೆ ಮಾತನಾಡುತ್ತಿಲ್ಲ. ಅವಾರ್ಡ್ ವಾಪಸಿ ಗ್ಯಾಂಗ್ ಈ ಬಗ್ಗೆ ಮಾತನಾಡಲಿ. ಆತ್ಮಸಾಕ್ಷಿ ಇದ್ದರೆ ಗುಪ್ಕಾರ್ ಗ್ಯಾಂಗ್ ಖಂಡಿಸಿ ಎಂದು ಕಿಡಿಕಾರಿದರು.

    ಇದೇ ವೇಳೆ ದೆಹಲಿಯಲ್ಲಿ ರಮೇಶ್ ಜಾರಕಿಹೊಳಿ ಓಡಾಟ ವಿಚಾರವಾಗಿ ಮಾತನಾಡಿದ ಜೋಶಿ, ಜಾರಕಿಹೊಳಿ ನನ್ನ ಬಳಿಯೂ ಬಂದಿದ್ದರು. ಆದರೆ ಕೇವಲ 3-4 ನೀರಾವರಿ ಯೋಜನೆ ಬಗ್ಗೆ ಮಾತನಾಡಿದರು. ಅಷ್ಟನ್ನೇ ನಾವು ಮಾಡಿದ್ದೇವೆ, ಉಳಿದಿದ್ದು ಗೊತ್ತಿಲ್ಲ ಎಂದು ತಿಳಿಸಿದರು.

    ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವರು, ಸಿಪಿಐಎಂ ರೀತಿಯಲ್ಲೇ ತೃಣಮೂಲ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಮಮತಾ ಬ್ಯಾನರ್ಜಿಯವರನ್ನು ಬರುವ ಚುನಾವಣೆಯಲ್ಲಿ ರಾಜಕೀಯವಾಗಿಯೇ ಮುಗಿಸುತ್ತೇವೆ ಎಂದರು.

  • ವಿನಯ್ ಕುಲಕರ್ಣಿ ಬಂಧನಕ್ಕೆ ಪ್ರಹ್ಲಾದ್ ಜೋಶಿ ಒತ್ತಡವೇ ಕಾರಣ: ಸಿದ್ದು ಆರೋಪ

    ವಿನಯ್ ಕುಲಕರ್ಣಿ ಬಂಧನಕ್ಕೆ ಪ್ರಹ್ಲಾದ್ ಜೋಶಿ ಒತ್ತಡವೇ ಕಾರಣ: ಸಿದ್ದು ಆರೋಪ

    ಶಿವಮೊಗ್ಗ: ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ಒತ್ತಡವೇ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ. ಅವರ ಬಂಧನದ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಡವಿದೆ. ವಿನಯ್ ಕುಲಕರ್ಣಿ ಪ್ರಹ್ಲಾದ್ ಜೋಶಿ ವಿರುದ್ಧ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ ಬಂಧನಕ್ಕೆ ಕಾರಣ ಎಂದು ಆರೋಪಿಸಿದರು.

    ಸರ್ಕಾರ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹಿಂದೆ ಪೊಲೀಸರು ಚಾರ್ಜ್ ಶೀಟ್ ಹಾಕಿದ್ದ ವೇಳೆ ವಿನಯ್ ಕುಲಕರ್ಣಿ ಹೆಸರಿರಲಿಲ್ಲ. ಆದರೆ ಸಿಬಿಐನವರು ತನಿಖೆ ನಡೆಸಿದಾಗ ಕುಲಕರ್ಣಿ ಹೆಸರು ಕೇಳಿ ಬಂದಿದೆ. ಇದೊಂದು ಬೆದರಿಕೆ ತಂತ್ರವಾಗಿದ್ದು, ಇದಕ್ಕೆಲ್ಲಾ ನಾವು ಹೆದರುವುದಿಲ್ಲ ಎಂದರು.

    ಶಿರಾ ಹಾಗೂ ಆರ್ ಆರ್ ಉಪ ಚುನಾವಣೆಯಲ್ಲಿ ಎರಡೂ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ. ಸಿ ವೋಟರ್ ಸಮೀಕ್ಷೆಯಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಹೇಳಿದ್ದಾರೆ. ಅವರು ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ನಾನು ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದೇನೆ. ಈ ವೇಳೆ ಜನರ ಒಲವು ಕಾಂಗ್ರೆಸ್ ಪರ ಇದ್ದಿದ್ದನ್ನು ಗಮನಿಸಿದೆ. ನಾವು ಜನರ ಬಳಿಗೆ ಹೋಗಿ ಪ್ರಚಾರ ನಡೆಸಿದ್ದೇವೆ. ಆದರೆ ಬಿಜೆಪಿಯವರು ಪ್ರಚಾರಕ್ಕಿಂತಲೂ ದುಡ್ಡು ಕೊಟ್ಟು ಚುನಾವಣೆ ನಡೆಸಿದ್ದಾರೆ ಎಂದರು.

    ಬಿಹಾರ ಚುನಾವಣೆ ಎಲ್ಲರೂ ಊಹಿಸಿದ್ದಂತೆಯೇ ಆಗಲಿದೆ. ಬಿಹಾರದ ನಾಗರೀಕರು, ಯುವಕರು ಈ ಬಾರಿ ಮೋದಿ ಸರಕಾರದ ವಿರುದ್ಧ ಇದ್ದಾರೆ. ಬಿಹಾರದ ಜನ ಬದಲಾವಣೆ ಬಯಸಿದ್ದಾರೆ. ಯುವಕರು ಮೋದಿ ಸರಕಾರದ ವಿರುದ್ಧ ಭ್ರಮನಿರಸಗೊಂಡಿದ್ದಾರೆ ಎಂದರು.

  • ಕೊರೊನಾ ನಿಯಂತ್ರಣಕ್ಕೆ ಸಕಲ ಸಿದ್ಧತೆಯಲಿದ್ದು, ಮತ್ತೆ ಲಾಕ್‍ಡೌನ್ ಇಲ್ಲ: ಜೋಶಿ

    ಕೊರೊನಾ ನಿಯಂತ್ರಣಕ್ಕೆ ಸಕಲ ಸಿದ್ಧತೆಯಲಿದ್ದು, ಮತ್ತೆ ಲಾಕ್‍ಡೌನ್ ಇಲ್ಲ: ಜೋಶಿ

    – ಡಿಕೆಶಿ ವಿರುದ್ಧ ವಾಗ್ದಾಳಿ

    ಹುಬ್ಬಳ್ಳಿ: ಈಗಾಗಲೇ ಕೊರೊನಾ ನಿಯಂತ್ರಣಕ್ಕೆ ನಾವು ಸಕಲ ಸಿದ್ಧತೆಯಲ್ಲಿದ್ದೇವೆ. ಹೀಗಾಗಿ ನಮ್ಮ ದೇಶದಲ್ಲಿ ಮತ್ತೆ ಲಾಕ್‍ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಯೂರೋಪ್ ರಾಷ್ಟದಲ್ಲಿ ಮತ್ತೆ ಲಾಕ್‍ಡೌನ್ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಭಾರತ ದೇಶದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಯಾವುದೇ ಪ್ರಸ್ತಾವ ಇಲ್ಲ. ನಾವು ಈಗಾಗಲೇ ಕೊರೊನಾ ನಿಯಂತ್ರಣಕ್ಕೆ ಸಕಲ ಸಿದ್ಧತೆಯಲ್ಲಿದ್ದೇವೆ. ಹೀಗಾಗಿ ನಮ್ಮ ದೇಶದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

    ಶಿರಾ ಮತ್ತು ಆರ್.ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿ, ಭ್ರಷ್ಟಾಚಾರದ ಬಗ್ಗೆ ಡಿಕೆಶಿ ಅವರು ಮಾತನಾಡುವುದು ಹಾಸ್ಯಾಸ್ಪದ. ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಅವರು ಬೇಲ್ ಮೇಲೆ ಹೊರಗಡೆ ಇದ್ದಾರೆ. ಮೊದಲು ಅದನ್ನ ಡಿಕೆಶಿ ಅರಿತುಕೊಳ್ಳಲಿ. ಇದು ಕಾಂಗ್ರೆಸ್ಸಿಗರ ದೊಡ್ಡ ಸಮಸ್ಯೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಭಿನಂದನ್‍ರನ್ನು ಬಿಡುಗಡೆ ಮಾಡದಿದ್ರೆ ಪಾಕ್ ಬ್ರಿಗೇಡ್‍ಗಳು ಧ್ವಂಸ ಆಗ್ತಿತ್ತು – ಧನೋವಾ

    ಪುಲ್ವಾಮಾ ದಾಳಿ ಕುರಿತು ಪಾಕಿಸ್ತಾನ ಪಾರ್ಲಿಮೆಂಟ್ ನಲ್ಲಿ ಸಚಿವರೊಬ್ಬರ ಹೇಳಿಕೆ ವಿಚಾರ ಸಂಬಂಧ ಮಾತನಾಡಿ, ಈ ಕುರಿತು ಅಲ್ಲಿನ ಮಂತ್ರಿಗಳೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಪುಲ್ವಾಮಾ ದಾಳಿ ಕುರಿತು ಇಲ್ಲಿನ ಕಾಂಗ್ರೆಸ್ ಪಕ್ಷದವರು ಸಾಕ್ಷಿ ಕೇಳಿದ್ದರು. ಈ ಬಗ್ಗೆ ಪಾಕಿಸ್ತಾನದವರೇ ಅವರಿಗೆ ಉತ್ತರ ಕೊಟ್ಟಿದ್ದಾರೆ. ಪಾಕಿಸ್ತಾನ ಭಯೋತ್ಪಾದನಾ ಚಟುವಟಿಕೆ ಮಾಡುತ್ತಿದೆ ಅಂತ ಜಾಗತಿಕ ವೇದಿಕೆಯಲ್ಲಿ ನಾವು ಹೇಳುತ್ತಿದ್ದೆವು. ಈಗ ಅವರೇ ಬಹಿರಂಗವಾಗಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡೋದಾಗಿ ಒಪ್ಪಿಕೊಂಡಿದ್ದಾರೆ. ಭಾರತ ದೇಶ ಸಾಕಷ್ಟು ಸದೃಢ ಎಂಬುದು ಪಾಕಿಸ್ತಾನಕ್ಕೆ ತಿಳಿದಿದೆ ಎಂದರು. ಇದನ್ನೂ ಓದಿ: ಸೇನಾ ಮುಖ್ಯಸ್ಥರ ಕಾಲು ನಡುಗುತ್ತಿತ್ತು- ಅಭಿನಂದನ್ ಬಿಡುಗಡೆಯ ಕಾರಣ ಬಿಚ್ಚಿಟ್ಟ ಪಾಕ್ ಸಂಸದ

  • ಕೆಜಿಎಫ್‍ನಲ್ಲಿ 3,200 ಎಕರೆ ಹಸ್ತಾಂತರಕ್ಕೆ ಚಿಂತನೆ

    ಕೆಜಿಎಫ್‍ನಲ್ಲಿ 3,200 ಎಕರೆ ಹಸ್ತಾಂತರಕ್ಕೆ ಚಿಂತನೆ

    ಬೆಂಗಳೂರು: 6 ತಿಂಗಳೊಳಗೆ ಕೆಜಿಎಫ್‍ನಲ್ಲಿ ಸರ್ವೆ ನಡೆಸಿ ಯಾವುದೇ ಗಣಿ ಸಂಪತ್ತು ಪತ್ತೆಯಾಗದಿದ್ದರೆ 3,200 ಎಕರೆ ಜಮೀನನ್ನು ರಾಜ್ಯ ಸರ್ಕಾರಕ್ಕೆ ನೀಡಲು ಕ್ರಮ ವಹಿಸುವುದಾಗಿ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರದಲ್ಲಿ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಬಾಕಿ ಇರುವ ವಿಷಯಗಳ ಕುರಿತಂತೆ ಇಂದು ಸಿಎಂ ಯಡಿಯೂರಪ್ಪ ಜೊತೆ ಕೇಂದ್ರ ಸಚಿವರ ನಿಯೋಗ ಸಭೆ ಮಾಡಿ ಚರ್ಚೆ ನಡೆಸಿತು. ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಷಿ, ರಾಜ್ಯ ಸರ್ಕಾರ ಕೆಜಿಎಫ್ ನಲ್ಲಿನ 3,200 ಎಕರೆ ಭೂಮಿಯನ್ನು ನೀಡುವಂತೆ ಕೋರಿತ್ತು. ಈ ಸಂಬಂಧ ಮೊದಲನೆಯದಾಗಿ 3 ತಿಂಗಳಲ್ಲಿ ಭೌತಿಕ ಸರ್ವೆ ಮಾಡಲು ಸೂಚನೆ ನೀಡಿದ್ದೇವೆ. ನಮ್ಮ ಇಲಾಖೆ ಎಂಇಸಿಎಲ್ ಕಡೆಯಿಂದ 6 ತಿಂಗಳಲ್ಲಿ ಅಲ್ಲಿರುವ 12,000 ಎಕರೆ ಜಮೀನಿನಲ್ಲಿ ಯಾವುದನ್ನು ಎಕ್ಸ್ ಪ್ಲೋರ್ ಮಾಡಿಲ್ಲ, ಅದನ್ನು ಗುರುತಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಅಂದರು.

    ಒಂದು ವೇಳೆ ರಾಜ್ಯ ಸರ್ಕಾರ ಕೇಳಿರುವ 3,200 ಎಕರೆ ಜಮೀನಿನಲ್ಲಿ ಯಾವುದೇ ಗಣಿ ಸಂಪತ್ತು ಇಲ್ಲವಾದರೆ ಅದನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಲು ತೀರ್ಮಾನ ಮಾಡುತ್ತೇವೆ. ಕಲ್ಲಿದ್ದಲು ಸರಬರಾಜು ಬಗ್ಗೆ ವಿಸ್ತೃತ ವಾಗಿ ಚರ್ಚೆ ನಡೆದಿದೆ. ದೋಣಿ ಮಲೈಯಲ್ಲಿ ಸರ್ಕಾರ ಹೆಚ್ಚಿನ ಪ್ರೀಮಿಯಂ ಬರಬೇಕು ಎಂದು ಬೇಡಿಕೆ ಇಟ್ಟಿತ್ತು. ಆದರೆ ಕೇಂದ್ರದ ಕಾನೂನಿನಲ್ಲಿ ತೊಡಕು ಇದೆ. ಈ ಸಂಬಂಧ ಸಮಿತಿ ರಚಿಸಿ, 3 ತಿಂಗಳೊಳಗೆ ಗಣಿ ಗುತ್ತಿಗೆ ಪಡೆದ ಪಿಎಸ್‍ಯುಗಳು ಎಷ್ಟು ಪ್ರೀಮಿಯಂ ಕೊಡಬೇಕು ಎಂದು ತೀರ್ಮಾನ ಮಾಡಲಿದೆ ಎಂದು ತಿಳಿಸಿದರು.

    ಅಲ್ಲಿವರೆಗೆ ಕರ್ನಾಟಕಕ್ಕೆ ಶೇ37.25 ರಾಯಲ್ಟಿ ನೀಡಲು ಸೂಚನೆ ನೀಡಿದ್ದೇನೆ ಅಂತಲೂ ಜೋಷಿ ಹೇಳಿದ್ರು. ರಾಜ್ಯದ ಸುಪರ್ದಿಗೆ ನೀಡಲಾಗಿರುವ ಬಾರಂಜಾ ಕೋಲ್ ಮೈನ್‍ನಲ್ಲಿ ಕಲ್ಲಿದ್ದಲು ಕಳವು ಆಗಿದ್ದು, ತನಿಖೆ ನಡೀತಿದೆ. ಅಲ್ಲಿ ಗಣಿಗಾರಿಕೆ ಪ್ರಾರಂಭಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.

  • ಬಜೆಟ್‍ನಲ್ಲಿ ಮಹದಾಯಿಗೆ ಹಣ ಬಿಡುಗಡೆ: ಬಿಎಸ್‍ವೈ ಭರವಸೆ

    ಬಜೆಟ್‍ನಲ್ಲಿ ಮಹದಾಯಿಗೆ ಹಣ ಬಿಡುಗಡೆ: ಬಿಎಸ್‍ವೈ ಭರವಸೆ

    ಬೆಂಗಳೂರು: ಕೇಂದ್ರ ಸರ್ಕಾರದಿಂದ ಮಹದಾಯಿ ಯೋಜನೆ ಸಂಬಂಧ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಫುಲ್ ಆಕ್ಟೀವ್ ಆಗಿದೆ. ಯೋಜನೆಗೆ ಅಗತ್ಯವಾದ ಪ್ರಕ್ರಿಯೆಗಳನ್ನು ಪ್ರಾರಂಭ ಮಾಡಲು ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಅಲ್ಲದೆ ಯೋಜನೆಗಾಗಿ ಈ ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡೋದಾಗಿ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

    ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಪ್ರಧಾನಿ ಮೋದಿ, ಅಮಿತ್ ಶಾ ಯೋಜನೆಗೆ ಅನುಮತಿ ಕೊಟ್ಟಿದ್ದಾರೆ. ಬಹಳ ವರ್ಷಗಳ ಬೇಡಿಕೆ ಈಡೇರಿಕೆ ಆಗಿದೆ. ಈ ಅಧಿಸೂಚನೆಯಿಂದ ಆ ಭಾಗದ ಜನರಿಗೆ ಕುಡಿಯುವ ನೀರು ಮತ್ತು ನೀರಾವರಿಗೆ ಅನುಕೂಲ ಆಗುತ್ತೆ ಅಂತ ತಿಳಿಸಿದರು. ಅಧಿಸೂಚನೆ ಹೊರಡಿಸಿರೋದರಿಂದ 13.5. ಟಿಎಂಸಿ ನೀರು ನಮಗೆ ಸಿಗುತ್ತೆ. ಈ ನೀರಿನಿಂದ ಆ ಭಾಗದ ಜನರಿಗೆ ಹೆಚ್ಚು ಅನುಕೂಲ ಆಗುತ್ತೆ ಅಂತ ತಿಳಿಸಿದರು.

    ಮಹದಾಯಿಗಾಗಿ ಅನೇಕ ವರ್ಷಗಳು ಹೋರಾಟದ ಆಯ್ತು. ಹೋರಾಟದ ಫಲವಾಗಿ ಈ ಅಧಿಸೂಚನೆ ಆಗಿದೆ. ಮೋದಿ ಮತ್ತು ಅಮಿತ್ ಶಾ ಹೆಚ್ಚಿನ ಆಸಕ್ತಿಯಿಂದ ನೀರಾವರಿ ಸಚಿವರ ಮೇಲೆ ಒತ್ತಡ ತಂದು ಅಧಿಸೂಚನೆ ಹೊರಡಿಸಿದ್ದಾರೆ. ಈ ಬಜೆಟ್ ನಲ್ಲಿ ಹೆಚ್ಚು ಹಣ ನೀಡುತ್ತೇನೆ. ಆದಷ್ಟು ಬೇಗ ಕೆಲಸ ಪ್ರಾರಂಭ ಮಾಡ್ತೀನಿ ಅಂತ ಆ ಭಾಗದ ಜನರಿಗೆ ನಾನು ಭರವಸೆ ಕೊಡ್ತೀನಿ ಅಂತ ತಿಳಿಸಿದರು.

    ಕೇಂದ್ರಕ್ಕೆ ಜೋಷಿ ಅಭಿನಂದನೆ:
    ಮಹದಾಯಿ ವಿಚಾರವಾಗಿ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪರನ್ನ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಜೋಷಿ, ಗುರುವಾರ ರಾತ್ರಿ ಕೇಂದ್ರ ಸರ್ಕಾರ ಮಹದಾಯಿ ಅಧಿಸೂಚನೆ ಹೊರಡಿಸಿದೆ. ಸುಪ್ರೀಂಕೋರ್ಟ್ ತೀರ್ಪು ಬಂದ ಒಂದೇ ವಾರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆ ಹೊರಡಿಸಲು ನಾವು ಕೆಲಸ ಮಾಡಿದ್ವಿ ಅಂತ ತಿಳಿಸಿದ್ರು. ಕರ್ನಾಟಕ ಸರ್ಕಾರ ಕೂಡ ಸುಪ್ರೀಂಕೋರ್ಟಿನಲ್ಲಿ ಉತ್ತಮವಾಗಿ ವಾದ ಮಾಡಿತ್ತು. ಕರ್ನಾಟಕ ಸರ್ಕಾರ ಮತ್ತು ಪ್ರಧಾನಿ ಮೋದಿ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‍ಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಅಂತ ತಿಳಿಸಿದರು.