Tag: ಪ್ರಹ್ಲಾದ್ ಜೋಶಿ

  • ಆರ್.ಅಶೋಕ್ ಪುತ್ರನ ಕಾರ್ ಅಪಘಾತ ಪ್ರಕರಣ, ತನಿಖೆ ಮುಚ್ಚಿ ಹಾಕುವ ಪ್ರಶ್ನೆ ಇಲ್ಲ: ಪ್ರಹ್ಲಾದ್ ಜೋಶಿ

    ಆರ್.ಅಶೋಕ್ ಪುತ್ರನ ಕಾರ್ ಅಪಘಾತ ಪ್ರಕರಣ, ತನಿಖೆ ಮುಚ್ಚಿ ಹಾಕುವ ಪ್ರಶ್ನೆ ಇಲ್ಲ: ಪ್ರಹ್ಲಾದ್ ಜೋಶಿ

    ಧಾರವಾಡ: ಬಳ್ಳಾರಿಯಲ್ಲಿ ಸಚಿವ ಆರ್.ಅಶೋಕ್ ಪುತ್ರ ಕಾರ್ ಅಘಘಾತ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, ತನಿಖೆಯನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಪಘಾತದ ಸುತ್ತ ಅನುಮಾನ: ಅಶೋಕ್ ಮಗ ಕೃತ್ಯ ಎಸಗಿ ಪರಾರಿ?ಪೊಲೀಸರಿಂದಲೇ ಬಚಾವ್?

    ನಗರದಲ್ಲಿ ಮಾಧ್ಯಮಗಳ ಮಾತನಾಡಿದ ಅವರು, ನಾನು ನೇರವಾಗಿ ವಿಮಾನ ನಿಲ್ದಾಣದಿಂದ ಈಗಷ್ಟೇ ದೆಹಲಿಯಿಂದ ಮುಂಬೈಗೆ ಹೋಗಿ ಇಲ್ಲಿಗೆ ಬಂದಿರುವೆ. ತನಿಖೆಯನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ. ಯಾವ ತನಿಖೆ ಮಾಡುತ್ತಾರೋ ಅದನ್ನು ಸಿಎಂ ಮಾಡಲಿ. ಕಾರಿನಲ್ಲಿ ಅವರಿದ್ದರು ಇವರಿದ್ದರೂ ಅಂತ ಉಹಾಪೋಹದ ಮೇಲೆ ಹೇಗೆ ಹೇಳೋಕೆ ಆಗುತ್ತೆ. ಅಪಘಾತ ಅಪಘಾತವೇ, ಅವರೆಂತಹ ಪ್ರಭಾವಿ ಇದ್ದರೂ ಪ್ರಕರಣ ಮುಚ್ಚಿ ಹಾಕುವ ಪ್ರಶ್ನೆ ಇಲ್ಲ ಎಂದರು.

    ಎಫ್‌ಐಆರ್‌ನಲ್ಲಿ ಹೆಸರು ತೆಗೆದು ಹಾಕಿದ್ದರೆ ಆ ಬಗ್ಗೆಯೂ ತನಿಖೆಯಾಗಲಿ ಎಂದರು. ಕೆಜಿಎಫ್‍ನಲ್ಲಿ ಗಣಿಗಾರಿಕೆ ಪುನರ್ ಆರಂಭ ಮಾಡಲು ಅಧಿಕಾರಿಗಳಿಂದ ಸರ್ವೆ ನಡೆದಿದೆ. ಕೆಲವೊಂದು ಚಿನ್ನದ ನಿಕ್ಷೇಪ ಸೇರಿದಂತೆ ಖನಿಜಾಂಶ ಇರುವುದು ಪತ್ತೆಯಾಗಿದೆ. ಸರ್ವೆ ಸಾಧಕ ಬಾಧಕ ನೋಡಿಕೊಂಡು ತಿರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಹ್ಲಾದ್ ಜೋಶಿ ಹೇಳಿದರು.

  • ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಇನ್ವೆಸ್ಟ್ ಕರ್ನಾಟಕ

    ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಇನ್ವೆಸ್ಟ್ ಕರ್ನಾಟಕ

    ಧಾರವಾಡ/ಹುಬ್ಬಳ್ಳಿ: ಬೆಂಗಳೂರು ಹೊರತುಪಡಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಫೆಬ್ರವರಿ 14 ರಂದು “ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ-2020” ಆಯೋಜಿಸಲಾಗಿದೆ. ಇನ್‍ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದ ಪೂರ್ವಭಾವಿ ಸಿದ್ಧತೆಗಳ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿವರಣೆ ನೀಡಿದ್ರು.

    ಹುಬ್ಬಳ್ಳಿ ನಗರದ ಡೆನಿಸ್ಸನ್ ಹೋಟೆಲ್‍ನಲ್ಲಿ ಆಯೋಜಿಸಿರುವ ಈ ಸಮಾವೇಶಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಚಾಲನೆ ನೀಡಲಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಡಿ.ವಿ.ಸದಾನಂದಗೌಡ ಹಾಗೂ ರೈಲ್ವೇ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    ಬಹುತೇಕರಿಗೆ ಕರ್ನಾಟಕವೆಂದರೆ ಬೆಂಗಳೂರು ಮಾತ್ರ ಎಂಬ ಕಲ್ಪನೆ ಇದೆ. ಕೈಗಾರಿಕಾ ಬೆಳವಣಿಗೆ ಕೇವಲ ಬೆಂಗಳೂರಿನಲ್ಲಿ ಆಗುತ್ತಿದ್ದು, 2 ಟಯರ್ ಮತ್ತು 3 ಟಯರ್ ಸಿಟಿಗಳಲ್ಲಿಯೂ ಕೈಗಾರಿಕೊದ್ಯಮದ ಬೆಳವಣಿಗೆ ಆಗಬೇಕೆಂಬ ಉದ್ದೇಶದಿಂದ ಈ ಭಾಗದಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ ಆಯೋಜಿಸಿದ್ದೇವೆ. ಈ ಸಮಾವೇಶದಿಂದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹಾವೇರಿ, ವಿಜಯಪುರ, ಕಲುಬುರಗಿ, ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೊದ್ಯಮ ಚಿಗುರೊಡೆಯಲಿದೆ.

    ಈ ಸಮಾವೇಶಕ್ಕೆ 1000ಕ್ಕೂ ಹೆಚ್ಚು ಉದ್ಯಮಿಗಳ ಆಗಮನ ನಿರೀಕ್ಷಿಸಿದ್ದೇವೆ. ಹೈದರಾಬಾದ್, ಮುಂಬೈ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆಗೆ ಇರುವ ವಿಫುಲ ಅವಕಾಶಗಳ ಬಗ್ಗೆ ಉದ್ಯಮಿಗಳಿಗೆ ತಿಳಿಸಿದಾಗ ಅವರು ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಹಿಂದೂಜಾ ಹಾಗೂ ಟಾಟಾ ಗ್ರೂಪ್‍ನ ಮುಖ್ಯಸ್ಥರು ಈ ಸಮಾವೇಶಕ್ಕೆ ತಮ್ಮ ತಂಡ ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ತಂಡಗಳು ಆಗಮಿಸಿ ಯಾವ ವಲಯದಲ್ಲಿ ಹೂಡಿಕೆ ಮಾಡಬಹುದು ಎಂಬುದರ ಬಗ್ಗೆ ಅಧ್ಯಯನ ನಡೆಸಲಿವೆ. ಜೊತೆಗೆ, ಚೀನಾ ಮೂಲದ ಕಂಪನಿಯ ಬೆಂಗಳೂರು ಪ್ರತಿನಿಧಿಗಳು ಸಹ ಈ ಸಮಾವೇಶಕ್ಕೆ ಆಗಮಿಸಿ, ವಿದ್ಯುತ್ಚಾಲಿತ ವಾಹನ ನಿರ್ಮಾಣದ ಕುರಿತು ಸಾಧಕ ಬಾಧಕದ ಬಗ್ಗೆಯೂ ವಿವರ ಕಲೆಹಾಕಲಿದ್ದಾರೆ ಎಂದರು.

    ಹುಬ್ಬಳ್ಳಿ- ಧಾರವಾಡ ನಗರ ಹೂಡಿಕೆಗೆ ಸೂಕ್ತ ವಾತಾವರಣವನ್ನು ಹೊಂದಿದೆ. ಹುಬ್ಬಳ್ಳಿಯಲ್ಲಿ ಎಫ್‍ಎಂಸಿಜಿ ಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಗುವಾಹಟಿಗೆ ಭೇಟಿ ನೀಡಿ, ಗುವಾಹಟಿ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್ (ಜಿಎಂಎ) ಮತ್ತು ಗ್ರಾಹಕ ಸರಕುಗಳ ಉತ್ಪಾದನಾ ಉದ್ಯಮಗಳಾದ (ಜ್ಯೋತಿ ಲ್ಯಾಬ್ಸ್, ಗೋದ್ರೇಜ್ ಮತ್ತು ಕ್ರಿಯೇಟಿವ್ ಪಾಲಿಪ್ಯಾಕ್) ಕರ್ನಾಟಕದಲ್ಲಿ ಹೂಡಿಕೆ ಮಾಡಲು ಸೆಳೆದಿದ್ದೇವೆ ಎಂದು ಹೇಳಿದರು.

    ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ 2500 ಎಕರೆ ಲ್ಯಾಂಡ್ ಬ್ಯಾಂಕ್ ಲಭ್ಯತೆ ಇದೆ. ಆ ಭಾಗದಲ್ಲಿ ಕೈಗಾರಿಕೆ ತೆರೆಯುವ ಆಸಕ್ತಿಯೂ ಕೆಲ ಕಂಪನಿಗಳಿಂದ ವ್ಯಕ್ತವಾಗಿವೆ. ಕೆಐಎಡಿಬಿಯು ಭೂ ಲಭ್ಯತೆ ಹೊಂದಿದ್ದು, ಕೆಲವೆಡೆ ಭೂ ಸ್ವಾಧೀನವನ್ನೂ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಆಸಕ್ತರನ್ನು ಸ್ಥಳ ಪರಿಶೀಲನೆಗೂ ಕರೆದೊಯ್ಯಲಾಗುತ್ತಿದೆ. ಮತ್ತೊಂದೆಡೆ ಮೂಲಸೌಕರ್ಯವಾದ ನೀರು ಹಾಗೂ ರಸ್ತೆ ಅಗಲೀಕರಣದಂತಹ ಕೆಲಸವೂ ಸಾಗಿವೆ ಎಂದು ವಿವರಣೆ ನೀಡಿದರು.

    ಉತ್ತರ ಕರ್ನಾಟಕ ಭಾಗದಲ್ಲಿ ಟೆಕ್ಸ್ ಟೈಲ್ಸ್, ವಾಲ್ಸ್, ಸೋಲಾರ್ ಪವರ್, ಫುಡ್‍ಫಾರ್ಕ್ ಸೇರಿದಂತೆ ಬಹುತೇಕ ವಲಯಗಳಲ್ಲಿ ಆಸಕ್ತಿ ವ್ಯಕ್ತವಾಗಿವೆ. ಇತ್ತೀಚೆಗೆ ಪತಂಜಲಿ ಸಂಸ್ಥಾಪಕ ಬಾಬಾ ರಾಮ್ ದೇವ್ ಅವರೊಂದಿಗೂ ಫುಡ್‍ಪಾರ್ಕ್ ತೆರೆಯುವ ಸಂಬಂಧ ಚರ್ಚಿಸಿದ್ದೇವೆ. ಅವರ ತಂಡ ಹುಬ್ಬಳ್ಳಿಗೆ ಆಗಮಿಸಿ ಇಲ್ಲಿನ ಆಹಾರ ಪದಾರ್ಥಗಳ ಲಭ್ಯತೆ ಆಧಾರದ ಮೇಲೆ ಅಧ್ಯಯನ ನಡೆಸುವುದಾಗಿ ಹೇಳಿದೆ ಎಂದರು.

    ಫೆಬ್ರವರಿ 14ರಂದು ಬೆಳಗ್ಗೆ 10 ರಿಂದ 12ರವರೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಯಾವ ರೀತಿಯ ಹೂಡಿಕೆಗೆ ಅವಕಾಶಗಳು ಇವೆ ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ನಂತರ ಮುಖ್ಯಮಂತ್ರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3 ರಿಂದ ವಿವಿಧ ಉದ್ಯಮಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮವಿರಲಿದೆ ಎಂದು ವಿವರಣೆ ನೀಡಿದರು.

    ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಸಹ ಈ ಸಮಾವೇಶಕ್ಕೆ ಕೈ ಜೋಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದಲೂ ಸಾಕಷ್ಟು ಸಹಕಾರ ವ್ಯಕ್ತವಾಗಿದೆ. ಈ ಸಮಾವೇಶ ನೆರವೇರಿಕೆಗೆ ಇಲಾಖೆಯ ಎಲ್ಲಾ ಅಧಿಕಾರಿಗಳು ಸಹ ಒಟ್ಟಿಗೆ ನಿಂತು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಹುಬ್ಬಳ್ಳಿ – ಧಾರವಾಡ ನಗರ ಪೊಲೀಸ್ ಆಯುಕ್ತ ಆರ್. ದಿಲೀಪ್, ಡಿಸಿ ದೀಪಾ ಚೋಳನ್, ಶಾಸಕ ಅರವಿಂದ ಬೆಲ್ಲದ್ ಉಪಸ್ಥಿತರಿದ್ದರು.

  • ನಮ್ಮ ಯುವಕರಿಗೆ ಕೆಲಸ ಕೊಡಡಿದ್ರೆ ನಿಮ್ಗೆ ನೀರು ಬಿಡಲ್ಲ: ಶಾಸಕ ಅಮೃತ ದೇಸಾಯಿ

    ನಮ್ಮ ಯುವಕರಿಗೆ ಕೆಲಸ ಕೊಡಡಿದ್ರೆ ನಿಮ್ಗೆ ನೀರು ಬಿಡಲ್ಲ: ಶಾಸಕ ಅಮೃತ ದೇಸಾಯಿ

    -ಇಬ್ಬರು ಸಚಿವರ ಎದುರಲ್ಲೇ ಖಡಕ್ ಮಾತು

    ಧಾರವಾಡ: ಸರ್ಕಾರದ ಜಲಶುದ್ಧೀಕರಣ ಘಟಕದಲ್ಲಿ ಸ್ಥಳೀಯ ಯುವಕರಿಗೆ ನೌಕರಿ ಕೊಟ್ಟರೇ ಮಾತ್ರ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನೀರು ಬಿಡೋದಾಗಿ ತಮ್ಮದೇ ಪಕ್ಷದ ಕೇಂದ್ರ ಮತ್ತು ರಾಜ್ಯ ಸಚಿವರಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಎಚ್ಚರಿಕೆ ಕೊಟ್ಟಿದ್ದಾರೆ.

    ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಳಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನೀರು ಪೂರೈಸುವ 40 ದಶಲಕ್ಷ ಲೀಟರ್ ಸಾಮರ್ಥ್ಯದ ಜಲಶುದ್ಧೀಕರಣ ಘಟಕ ನಿರ್ಮಿಸಲಾಗಿದ್ದು, ಶನಿವಾರ ಉದ್ಘಾಟನೆ ಸಮಾರಂಭವಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಈ ಘಟಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ, ಈ ಘಟಕ ಇರೋದು ಅಮ್ಮಿನಬಾವಿ ಮತ್ತು ಮರೇವಾಡ ಗ್ರಾಮದ ವ್ಯಾಪ್ತಿಯಲ್ಲಿ, ಹೀಗಾಗಿ ಇಲ್ಲಿ ಸ್ಥಳೀಯ ಯುವಕರನ್ನೇ ನೌಕರಿಗೆ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಇಲ್ಲಿಂದ ನೀರು ಹೋಗೋದಕ್ಕೆ ನಾವು ಬಿಡುವುದೇ ಇಲ್ಲ ಎನ್ನುವ ಖಡಕ್ ಮಾತುಗಳನ್ನಾಡಿದರು.

    ಈ ಮೊದಲು ಹೇಳಿದಾಗ ಅಧಿಕಾರಿಗಳು ಸರಿ ಸರ್, ಎನ್ನುತ್ತಲೇ ಹೊರಗಿನವರನ್ನು ತೆಗೆದುಕೊಂಡಿದ್ದಾರೆ ಎಂದಿರುವ ಅಮೃತ ದೇಸಾಯಿ, ಹೊರಗಿನವರನ್ನು ತೆಗೆದು ಒಗೆಯಿರಿ. ನಮ್ಮ ಸ್ಥಳೀಯರಿಗೆ ನೌಕರಿ ಕೊಡಿ ಎನ್ನುತ್ತ ಶೆಟ್ಟರ್ ಮತ್ತು ಜೋಶಿಯವರನ್ನ ನೋಡಿದ ಶಾಸಕ, ನೀವು ನಮ್ಮ ಹಿರಿಯ ಮಾರ್ಗದರ್ಶಕರು ಇದ್ದೀರಿ. ನಾವು ನೊಂದು ಈ ಮಾತು ಹೇಳುತ್ತಿದ್ದೇವೆ. ದಯಮಾಡಿ ನಮ್ಮ ಯುವಕರಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು.

  • ಹುಬ್ಬಳ್ಳಿಗೆ ಆಗಮಿಸಿದ ಉಪರಾಷ್ಟ್ರಪತಿಗಳು

    ಹುಬ್ಬಳ್ಳಿಗೆ ಆಗಮಿಸಿದ ಉಪರಾಷ್ಟ್ರಪತಿಗಳು

    ಹುಬ್ಬಳ್ಳಿ: ನಗರದಲ್ಲಿ ನಡೆಯಲಿರುವ ದೇಶಪಾಂಡೆ ಫೌಂಡೇಶನ್ ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ಬಿ.ಆರ್.ಟಿ.ಎಸ್ ಸಾರಿಗೆ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಪರಾಷ್ಟ್ರಪತಿಗಳಾದ ಎಂ.ವೆಂಕಯ್ಯ ನಾಯ್ಡು ಭಾರತೀಯ ವಾಯು ಸೇನೆಯ ವಿಶೇಷ ವಿಮಾನದ ಮೂಲಕ ಇಂದು ಸಂಜೆ ಹುಬ್ಬಳ್ಳಿಗೆ ಆಗಮಿಸಿದ್ದಾರೆ.

    ಹುಬ್ಬಳ್ಳಿಗೆ ಆಗಮಿಸಿದ ಉಪರಾಷ್ಟ್ರಪತಿಗಳನ್ನು ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಹಾಗೂ ಗಣಿ ಸಚಿವರಾದ ಪ್ರಹ್ಲಾದ್ ಜೋಶಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಪುಸ್ತಕಗಳು, ಶಾಲು ಮತ್ತು ಹೂ ಮಾಲೆ ನೀಡಿ ಬರಮಾಡಿಕೊಂಡಿದ್ದಾರೆ.

    ಈ ವೇಳೆ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ, ಶಾಸಕ ಅರವಿಂದ ಬೆಲ್ಲದ, ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಆಮ್ಲನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್ ದಿಲೀಪ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

  • ಬೆಂಗ್ಳೂರಿಗೆ ಸಬ್ ಅರ್ಬನ್ ಯೋಜನೆ ನೀಡಿದಕ್ಕೆ ಸೀತಾರಾಮನ್‍ಗೆ ಧನ್ಯವಾದ: ಜ್ಯೋಶಿ

    ಬೆಂಗ್ಳೂರಿಗೆ ಸಬ್ ಅರ್ಬನ್ ಯೋಜನೆ ನೀಡಿದಕ್ಕೆ ಸೀತಾರಾಮನ್‍ಗೆ ಧನ್ಯವಾದ: ಜ್ಯೋಶಿ

    – ಕೇಂದ್ರ ಬಜೆಟ್ ಮಂಡನೆ: ಬಿಜೆಪಿ ಸಂಸದರು ಹೇಳಿದ್ದೇನು?

    ನವದೆಹಲಿ: ಎರಡನೇ ಬಾರಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಸಿದ ಬಜೆಟ್ ಸುಧಾರಣೆಗೆ ಹೆಚ್ಚು ಒತ್ತು ನೀಡಿದೆ. ಎಲ್ಲಾ ವರ್ಗಕ್ಕೂ ಉತ್ತೇಜನ ನೀಡುವಂಥ ಬಜೆಟ್ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು, ಕೃಷಿಗೆ ಪೂರಕವಾದ ಕಿಸಾನ್ ರೈಲ್ ಪರಿಚಯಿಸಲಾಗುತ್ತಿದೆ. ಐಟಿ ಕ್ಷೇತ್ರದ ಬದಲಾವಣೆ ಮಧ್ಯಮ ವರ್ಗದ ಪ್ರಗತಿಗೆ ಪೂರಕವಾಗಿದ್ದು, ಮುನ್ನೊಟ ಹೊಂದಿರುವಂಥ ಬಜೆಟ್ ಇದಾಗಿದೆ ಎಂದರು. ಇದನ್ನೂ ಓದಿ: ಆದಾಯ ತೆರಿಗೆಯಲ್ಲಿ ಭಾರೀ ಕಡಿತ

    ಮೂಲಸೌಕರ್ಯ ಕ್ಷೇತ್ರಕ್ಕೆ 100 ಲಕ್ಷ ಕೋಟಿ ರೂ. ಹೂಡಲಾಗುತ್ತದೆ. ಉದ್ಯೋಗ ಸೃಷ್ಟಿ ಬಗ್ಗೆ ವಾಕ್ಯ ಬರೆದಿಲ್ಲ. ಅಷ್ಟೇ ಪೂರಕವಾದ ಯೋಜನೆಗಳನ್ನು ರೂಪಿಸಲಾಗಿದೆ. ಎಲ್‍ಐಸಿ ಪೂರ್ಣ ಪ್ರಮಾಣದಲ್ಲಿ ಖಾಸಗೀಕರಣ ಮಾಡಲ್ಲ. ಬೆಂಗಳೂರಿಗೆ ವಿಶೇಷವಾಗಿ ಸಬ್ ಅರ್ಬನ್ ರೈಲು ಯೋಜನೆ ನೀಡಿದಕ್ಕೆ ನಿರ್ಮಲ ಸೀತರಾಮನ್ ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಉದ್ಯೋಗ ಸೃಷ್ಟಿಸುವ ಪ್ರಮುಖ ನಾಲ್ಕು ಕ್ಷೇತ್ರಗಳಿಗೆ ಬಜೆಟ್‍ನಲ್ಲಿ ಹೆಚ್ಚಿನ ಒತ್ತು: ಮೋದಿ

    ಎಲ್ಲ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿರುವ ಈ ಬಜೆಟ್ ಭಾರತಕ್ಕೆ ಹೊಸ ದಿಕ್ಕನ್ನು ಕೊಟ್ಟಂತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದಾರೆ.

    2020ರ ಬಜೆಟ್ ಮೂಲಸೌಕರ್ಯಗಳಿಗೆ ಹೆಚ್ಚು ಒತ್ತು ಕೊಟ್ಟಿದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಆದ್ಯತೆ ನೀಡಿದೆ. ರಾಜ್ಯವಾರು ಆದ್ಯತೆ ವಲಯಗಳನ್ನು ಗುರುತಿಸಿ ಅಭಿವೃದ್ಧಿಗೆ ಮುಂದಾಗಿದೆ. ಶಿಕ್ಷಣಕ್ಕೆ ಹೆಚ್ಚು ಅನುದಾನ ನೀಡಿದೆ. ಸಮಾನತೆ ಹಾದಿಯಲ್ಲಿ ಎಸ್‍ಸಿ, ಎಸ್‍ಟಿ ಮತ್ತು ಮಹಿಳೆಯರಿಗೆ ಹೆಚ್ಚು ಅನುದಾನ ನೀಡಿದೆ ಎಂದರು.

    ಜಮ್ಮು ಕಾಶ್ಮೀರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ನಾನು ರೈಲು ಸಚಿವ ಆಗಿದ್ದಾಗ ವಿಶೇಷ ಕಾಳಜಿ ತೋರಿಸಿದ್ದ ಕರ್ನಾಟಕದಲ್ಲಿ ಸಬ್ ಅರ್ಬನ್ ರೈಲ್ವೆ ಯೋಜನೆ ಅನುದಾನ ನೀಡಿದೆ ಚೆನೈ ಬೆಂಗಳೂರು ಕಾರಿಡಾರ್ ಕಾಮಗಾರಿಗೆ ವೇಗ ಸಿಕ್ಕಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದೆ ಮೀನುಗಾರರಿಗೆ ಆದ್ಯತೆ ನೀಡಿದ್ದು, ದೇಶದ ಸಮಗ್ರ ಅಭಿವೃದ್ಧಿ ಪೂಕರ ಬಜೆಟ್ ಇದು ಶ್ಲಾಘಿಸಿದರು ಎಂದು ಹೇಳಿದರು.

    ಹಿಂದೆದೂ ಕಾಣದ ಬಜೆಟ್ ಅನ್ನು ಈ ಬಾರಿ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ ಎಂದು ಸಂಸದ ಜಿ.ಎಸ್ ಬಸವರಾಜ್ ಹೇಳಿದ್ದಾರೆ. ರೈತರಿಗೆ ಅತ್ಯುತ್ತಮ ಬಜೆಟ್ ನೀಡಿದ್ದು ಮೋದಿಯವರ ಬದ್ಧತೆ ಬಜೆಟ್ ಮೂಲಕ ಕಾಣುತ್ತಿದೆ ಉತ್ತಮ ಬಜೆಟ್ ಗಾಗಿ ಪ್ರಧಾನಿ ಮೋದಿ, ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಸರ್ವ ವ್ಯಾಪಿ, ಸರ್ವ ಶ್ರೇಷ್ಠ ಬಜೆಟ್ ಇದು ಸಬ್ ಅರ್ಬನ್ ರೈಲು ಯೋಜನೆಗೆ ವಿಶೇಷ ಕೊಡುಗೆ ಸಿಕ್ಕಿದೆ. ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ ಕ್ಷೇತ್ರಕ್ಕೆ ಕೊಟ್ಟಿರುವ ಆದ್ಯತೆಯಲ್ಲಿ ಬೆಂಗಳೂರಿಗೆ ಹೆಚ್ಚು ಫಲಿತಾಂಶ ಸಿಗಲಿದೆ. ಹೊಸ ಶಿಕ್ಷಣ ವ್ಯವಸ್ಥೆ ಜಾರಿ, ವೈಯಕ್ತಿಕ ಆದಾಯ ತೆರಿಗೆಯಲ್ಲಿ ವಿನಾಯತಿ ಉತ್ತಮವಾಗಿದೆ ಎಂದು ಮುಚ್ಚುಗೆ ವ್ಯಕ್ತಪಡಿಸಿದರು.

  • ರಾಜ್ಯದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಹೈದರಾಬಾದ್‍ನಲ್ಲಿ ಕೈಗಾರಿಕೋದ್ಯಮಿಗಳ ಜೊತೆ ಸರಣಿ ಸಭೆ, ರೋಡ್ ಶೋ

    ರಾಜ್ಯದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಹೈದರಾಬಾದ್‍ನಲ್ಲಿ ಕೈಗಾರಿಕೋದ್ಯಮಿಗಳ ಜೊತೆ ಸರಣಿ ಸಭೆ, ರೋಡ್ ಶೋ

    – ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ನೇತೃತ್ವ
    – 15ಕ್ಕೂ ಹೆಚ್ಚು ಕಂಪನಿಗಳ ಜೊತೆ ಮಾತುಕತೆ

    ಹೈದರಾಬಾದ್: ಉತ್ತರ ಕರ್ನಾಟಕ ಹಾಗೂ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಇಂದು ಕೇಂದ್ರ ಸಂಸದೀಯ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಹೈದರಾಬಾದ್‍ನಲ್ಲಿ ರೋಡ್ ಶೋ ಹಾಗೂ ಪ್ರಮುಖ ಕೈಗಾರಿಕೋದ್ಯಮಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಲಾಯಿತು.

    ಇದೇ ಫೆಬ್ರವರಿ 14 ರಂದು ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ-2020 ನಡೆಯಲಿದ್ದು, ಈ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆಯೂ ಸಹ ಇದೇ ವೇಳೆ ಆಹ್ವಾನಿಸಲಾಯಿತು.

    ಇಂದು ಬೆಳಿಗ್ಗೆ ಡಾ ರೆಡ್ಡಿ ಲ್ಯಾಬ್ ಗೆ ಭೇಟಿ ನೀಡಿದ ಸಚಿವರು, ಕಂಪನಿಯ ಉಪಾಧ್ಯಕ್ಷರಾದ ಜಿ ವಿ ಪ್ರಸಾದ್ ಅವರೊಂದಿಗೆ ಉತ್ತರ ಕರ್ನಾಟಕದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಚರ್ಚೆ ನಡೆಸಿದರು. ನಂತರ ಆಲ್ಫಾ ಪ್ಯಾಕೇಜಿಂಗ್ ಗೆ ಭೇಟಿ ನೀಡಿದ ಸಚಿವರನ್ನೊಳಗೊಂಡ ನಿಯೋಗ ಕಂಪನಿಯ ಭಾರತ ದೇಶದ ವ್ಯವಹಾರಗಳ ಮುಖ್ಯಸ್ಥರಾದ ವಾಗೀಶ್ ದೀಕ್ಷಿತ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ಭೇಟಿಯ ವೇಳೆ ಕೆಲವು ಬೇರೆ ಬೇರೆ ಕಂಪನಿಗಳ ಪ್ರತಿನಿಧಿಗಳು ಕೂಡಾ ಉಪಸ್ಥಿತರಿದ್ದರು.

    15 ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಸಭೆ:
    ಪ್ರಮುಖವಾಗಿ ಜಿವಿಕೆ ಗ್ರೂಪ್, ಆರ್‍ಎ ಇನ್‍ಫ್ರಾಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್‍ನ ಮುಖಂಡರನ್ನು ಭೇಟಿ ಮಾಡಿದರು. ಕೆ.ಎನ್. ಗ್ರೂಪ್ ಆಫ್ ಕಂಪನಿ, ಕೋಮಲ್ ಆಗ್ರೋಟೆಕ್ ಪ್ರೈವೆಟ್ ಲಿಮಿಟೆಡ್, ಭಾರತ್ ಬಯೋಟೆಕ್ ಸೇರಿದಂತೆ 15 ಕ್ಕೂ ಹೆಚ್ಚು ಕಂಪನಿ ಮುಖ್ಯಸ್ಥರನ್ನು ಸಚಿವರು ಭೇಟಿ ಮಾಡಿ ಚರ್ಚೆ ನಡೆಸಿದರು.

    ರೋಡ್ ಶೋ:
    ರೋಡ್ ಶೋ ಉದ್ದೇಶಿಸಿ ಮಾತನಾಡಿದ ಪ್ರಹ್ಲಾದ ಜೋಶಿ, ಹುಬ್ಬಳ್ಳಿ ಸಮಾವೇಶದ ಭಾಗವಾಗಿ ಇಂದು ಹೈದರಾಬಾದ್‍ನಲ್ಲಿ ಎರಡನೇ ರೋಡ್ ಶೋ ನಡೆಸುವ ಮೂಲಕ ಸಾಕಷ್ಟು ಕೈಗಾರಿಕೋದ್ಯಮಿಗಳು ಆಸಕ್ತಿ ವ್ಯಕ್ತಪಡಿಸಿರುವುದು ಸಂತೋಷ ತಂದಿದೆ ಎಂದರು. ದಿನವಿಡೀ ಹಲವು ಉದ್ದಿಮೆದಾರರನ್ನು ಭೇಟಿ ಮಾಡಿ ಸಭೆ ನಡೆಸಿದೆವು. ಬಹುತೇಕ ಉದ್ಯಮಿದಾರರು ಧನಾತ್ಮಕವಾದ ಒಲವು ತೋರಿಸಿದ್ದಾರೆ ಎಂದು ತಿಳಿಸಿದರು.

    ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕದ ಪಾಲು ಹೆಚ್ಚಿದೆ. ಕರ್ನಾಟಕವು ಬೆಳವಣಿಗೆ ಮತ್ತು ಅಭಿವೃದ್ಧಿಯ ಶಕ್ತಿಶಾಲಿಯಾಗಿದೆ. 2020 ರ ನವೆಂಬರ್ 3 ರಿಂದ 5 ರವರೆಗೆ ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರವು ‘ಇನ್ವೆಸ್ಟ್ ಕರ್ನಾಟಕ 2020’ ಜಾಗತಿಕ ಹೂಡಿಕೆದಾರರ ಸಭೆಯನ್ನು ಆಯೋಜಿಸುತ್ತಿದ್ದು, ವಿಚಾರ ಹಂಚಿಕೊಳ್ಳಲು ಸಂತೋಷವೆನಿಸುತ್ತದೆ. ಈ ರೋಡ್ ಶೋನಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರಮುಖ ಕೈಗಾರಿಕೋದ್ಯಮಿಗಳು / ಸಿಇಒಗಳೊಂದಿಗ ಸಭೆ ನಡೆಸಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಇರುವ ಅವಕಾಶಗಳನ್ನು ಆಲಿಸಿರುವ ಅವರು ಹುಬ್ಬಳ್ಳಿ ಸಮಾವೇಶಕ್ಕೆ ಆಗಮಿಸುವ ಭರವಸೆ ನೀಡಿದ್ದಾರೆ ಎಂದರು.

    ಕರ್ನಾಟಕದ 2- ಟಯರ್ ಹಾಗೂ 3- ಟಯರ್ ನಗರಗಳಲ್ಲಿ ಹೂಡಿಕೆಗೆ ಆಕರ್ಷಿಸುವ ಉದ್ದೇಶದಿಂದ ಹುಬ್ಬಳ್ಳಿ ಸಮಾವೇಶಕ್ಕೆ ಎಲ್ಲರನ್ನೂ ಆಹ್ವಾನಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಉದ್ಯೋಗಾವಕಾಶ ಸುಧಾರಿಸುವ ನಿರೀಕ್ಷೆ ಹೊಂದಲಾಗಿದೆ. ಹುಬ್ಬಳ್ಳಿ- ಧಾರವಾಡ ಪ್ರದೇಶವು ಕರ್ನಾಟಕದ ಉನ್ನತ ಕೈಗಾರಿಕಾ ತಾಣವಾಗಲು ಸೂಕ್ತ ವಾತಾವರಣ ಹೊಂದಿದೆ. ಈ ಭಾಗದಲ್ಲಿ ಕೆಐಎಡಿಬಿ ಮತ್ತು ಕೈಗಾರಿಕಾ ಎಸ್ಟೇಟ್‍ಗಳು ಅಭಿವೃದ್ಧಿಪಡಿಸಿದ 9 ಕೈಗಾರಿಕಾ ಪ್ರದೇಶಗಳನ್ನು ಹೊಂದಿದೆ . ಜೊತೆಗೆ ಉತ್ತಮ ರೈಲು, ರಸ್ತೆ ಮತ್ತು ವಾಯು ಸಂಪರ್ಕ, ಲಾಜಿಸ್ಟಿಕ್ ಬೆಂಬಲ, ಮೂಲಸೌಕರ್ಯ, ಅತ್ಯುತ್ತಮ ಟೆಲಿ-ಸಂವಹನ ಜಾಲ ಮತ್ತು ಶಾಂತಿಯುತ ಕಾರ್ಮಿಕ ಶಕ್ತಿಯನ್ನು ಒಳಗೊಂಡಿದ್ದು, ಹುಬ್ಬಳ್ಳಿ ಧಾರವಾಡ ಪ್ರದೇಶವು ಹೂಡಿಕೆಗಳಿಗೆ ಆದ್ಯತೆಯ ತಾಣವಾಗಿದೆ ಎಂದರು.

    ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ರಾಜಧಾನಿ ಬೆಂಗಳೂರಿನ ನಂತರ ಕರ್ನಾಟಕ ರಾಜ್ಯದಲ್ಲಿ ಅತಿದೊಡ್ಡ ಮಹಾನಗರವಾಗಿದೆ. ಅಲ್ಲದೆ, ಹುಬ್ಬಳ್ಳಿ ಧಾರವಾಡ ಮುನ್ಸಿಪಲ್ರ್ ಕಾರ್ಪೊರೇಷನ್ (ಎಚ್‍ಡಿಎಂಸಿ) ಯನ್ನು ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ಒಂದಾಗಿ ಆಯ್ಕೆ ಮಾಡಲಾಗಿದೆ. ಎಚ್‍ಡಿಎಂಸಿ ಈಗಾಗಲೇ ಅನೇಕ ಮಟ್ಟದ ಸಾರ್ವಜನಿಕ ಪಾರ್ಕಿಂಗ್ ನಿರ್ವಹಣಾ ವ್ಯವಸ್ಥೆ, ಇ-ಆಡಳಿತ ಮತ್ತು ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಮ್ಯಾನೇಜ್‍ಮೆಂಟ್ ಸಿಸ್ಟಮ್‍ನಂತಹ ಅನೇಕ ಸ್ಮಾರ್ಟ್ ವ್ಯವಸ್ಥೆಗಳನ್ನು ಹುಬ್ಬಳ್ಳಿ-ಧಾರವಾಡಿನ ಅವಳಿ ನಗರಗಳಲ್ಲಿ ಜಾರಿಗೆ ತಂದಿದೆ. ಇತ್ತೀಚೆಗೆ, ಗೌರವಾನ್ವಿತ ಮುಖ್ಯಮಂತ್ರಿ ಉತ್ತರ ಕರ್ನಾಟಕದ ಮೊದಲ ಟೆಂಡರ್ ಸ್ಯೂರ್ ರಸ್ತೆಯನ್ನು ಹುಬ್ಬಳ್ಳಿಯಲ್ಲಿ ಉದ್ಘಾಟಿಸಿದರು ಎಂದು ತಿಳಿಸಿದರು.

    ಜಗದೀಶ್ ಶೆಟ್ಟರ್ ಮಾತನಾಡಿ, ಕರ್ನಾಟಕ ಹುಬ್ಬಳ್ಳಿ ಸಮ್ಮೇಳನದ ಭಾಗವಾಗಿ ಇಂದು ಹೈದರಾಬಾದ್‍ನಲ್ಲಿ ಬೃಹತ್ ರೋಡ್ ಶೋ ನಡೆಸು ಮೂಲಕ ನಮ್ಮ ರಾಜ್ಯದಲ್ಲಿ ಹೂಡಿಕೆಗೆ ಇರುವ ವಿಫುಲ ಅವಕಾಶಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದೇವೆ. ಪ್ರತಿಷ್ಠಿತ ಕಂಪನಿ ನಾಯಕರು, ಹೂಡಿಕೆದಾರರೊಂದಿಗೆ ಸರಣಿ ಸಭೆ ನಡೆಸಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕರ್ನಾಟಕ ಉದ್ಯಮ ಮತ್ತು ಹೂಡಿಕೆದಾರರ ಸ್ನೇಹಿ ರಾಜ್ಯವಾಗಿದೆ. ಕೈಗಾರಿಕೆ ತೆರೆಯಲು ಬೇಕಾದ ಮೂಲಸೌಕರ್ಯ, ನೀತಿಗಳನ್ನು ನಮ್ಮ ಸರಕಾರ ಒದಗಿಸಿದೆ ಎಂದರು.

    ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರ ನೇತೃತ್ವದಲ್ಲಿ ದಾವೋಸ್‍ಗೆ ತೆರಳಿ ಇನ್ವೆಸ್ಟ್ ಕರ್ನಾಟಕ, ಜಾಗತಿಕ ಹೂಡಿಕೆದಾರರ ಸಮಾವೇಶದ ಕರ್ಟನ್ ರೈಸರ್ ಕಾರ್ಯಕ್ರಮ ನೆರವೇರಿಸಿ, ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸಿದೆವು. ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ಸಮಾವೇಶದಲ್ಲಿ ಕರ್ನಾಟಕಕ್ಕೆ ಉತ್ತಮ ಸ್ಪಂದನೆ ಸಿಕ್ಕಿತು ಎಂದು ವಿವರಿಸಿದರು.

    ಕರ್ನಾಟಕದ 2 ಟಯರ್ ಹಾಗೂ 3 ಟಯರ್ ನಗರಗಳಲ್ಲಿ ಹೂಡಿಕೆಗೆ ಆಕರ್ಷಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಕೈಗಾರಿಕಾ ಅಭಿವೃದ್ಧಿಗೆ ಅನುಕೂಲಕರ ವಾತಾವರಣ ಈ ಭಾಗದಲ್ಲಿದೆ. ಉತ್ತರ ಕರ್ನಾಟಕದಲ್ಲಿ ಸುಮಾರು 5400 ಎಕರೆ ವಿಸ್ತೀರ್ಣದ ‘ಲ್ಯಾಂಡ್ ಬ್ಯಾಂಕ್’ ರಚಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸುಮಾರು 3000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಸಾಗಿದೆ. ಜೊತೆಗೆ 5 ವಿಮಾನ ನಿಲ್ದಾಣಗಳನ್ನು ಹೊಂದುವ ಮೂಲಕ ದೇಶದ 20ಕ್ಕೂ ಹೆಚ್ಚು ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ಹೊಂದಲಾಗಿದೆ ಎಂದರು.

    ಉತ್ತರ ಕರ್ನಾಟಕ ಭಾಗದಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್, ಆಟೋ ಮತ್ತು ವಿದ್ಯುತ್ ವಾಹನಗಳು, ಐಟಿ, ಕೃಷಿ-ವ್ಯವಹಾರ ಹೀಗೆ ಹಲವು ಉದ್ಯಮ ತೆರೆಯಲು ಉತ್ತಮ ಅವಕಾಶವಿದೆ. ಈ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ ಎಂದು ವಿವರಣೆ ನೀಡಿದರು.

    ರೋಡ್ ಶೋ ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಸಚಿವರಾದ ಪ್ರಭು ಚೌಹಾಣ್, ಸಂಸದರಾದ ಉಮೇಶ್ ಜಾಧವ್, ಭಗವಂತ್ ಖುಬಾ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಇನ್‍ವೆಸ್ಟ್ ಕರ್ನಾಟಕ ಫೋರಂನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸ್ವರೂಪ ಟಿ.ಕೆ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ರೇವಣ್ಣಗೌಡ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು.

  • ಹುಬ್ಬಳ್ಳಿ-ಮುಂಬಯಿ ನಡುವೆ ಹೊಸ ವಿಮಾನ ಸಂಚಾರ: ಜೋಶಿ

    ಹುಬ್ಬಳ್ಳಿ-ಮುಂಬಯಿ ನಡುವೆ ಹೊಸ ವಿಮಾನ ಸಂಚಾರ: ಜೋಶಿ

    ಹುಬ್ಬಳ್ಳಿ: ಹುಬ್ಬಳ್ಳಿ- ಮುಂಬಯಿ ನಡುವೆ ಮಾರ್ಚ್ 29ರಿಂದ ನಿತ್ಯದ ಹೊಸ ವಿಮಾನ ಸಂಚಾರ ಆರಂಭವಾಗಲಿದೆ.

    ಇಂಡಿಗೋ ಏರಲೈನ್ಸ್ ದಿಂದ 180 ಆಸನಗಳ ಏರಬಸ್ ಇಂಡಿಗೋ ಪ್ರತಿದಿನ ಹುಬ್ಬಳ್ಳಿಯಿಂದ ಬೆಳಗ್ಗೆ 11:25ಕ್ಕೆ ಹೊರಟು 12:50ಕ್ಕೆ ಮುಂಬಯಿ ತಲುಪುವುದು. ಬಳಿಕ ಮಧ್ಯಾಹ್ನ 1.20ಕ್ಕೆ ಮುಂಬಯಿಯಿಂದ ಹೊರಟು 2:55ಕ್ಕೆ ಹುಬ್ಬಳ್ಳಿ ತಲುಪಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

    ಈಗಾಗಲೇ ಇಂಡಿಗೋ ಸಂಸ್ಥೆ ಪ್ರಯಾಣಿಕರ ಬುಕ್ಕಿಂಗ್ ಆರಂಭಿಸಿದೆ. ಇದರೊಂದಿಗೆ ಈಗಾಗಲೇ ಏರ್ ಇಂಡಿಯಾ ಸಂಸ್ಥೆಯು ಬೆಂಗಳೂರು-ಹುಬ್ಬಳ್ಳಿ-ಮುಂಬಯಿ ನಿತ್ಯದ ವಿಮಾನ ಸೌಲಭ್ಯ ಸೇರಿ ಹುಬ್ಬಳ್ಳಿ, ಧಾರವಾಡ ಜನರಿಗೆ ಮುಂಬಯಿಗೆ ಮತ್ತೊಂದು ವಿಮಾನ ದೊರೆತಿರುವುದು ಸಂತಸದ ಸಂಗತಿ ಎಂದು ಸಂಸದರು ಹರ್ಷ ವ್ಯಕ್ತಪಡಿಸಿದ್ದಾರೆ.

  • ನರಭಕ್ಷಕರಿಂದ ನಾವು ದೇಶದ ಏಕತೆ ಬಗ್ಗೆ ಕಲಿಯಬೇಕಿಲ್ಲ – ಜೋಶಿ ವಿರುದ್ಧ ಎಚ್‍ಡಿಕೆ ಕಿಡಿ

    ನರಭಕ್ಷಕರಿಂದ ನಾವು ದೇಶದ ಏಕತೆ ಬಗ್ಗೆ ಕಲಿಯಬೇಕಿಲ್ಲ – ಜೋಶಿ ವಿರುದ್ಧ ಎಚ್‍ಡಿಕೆ ಕಿಡಿ

    ಕಲಬುರಗಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನಮ್ಮನ್ನು ದೇಶದ್ರೋಹಿಗಳು ಅಂತಾರೆ ಗೋಧ್ರಾ ಹತ್ಯಾಕಾಂಡ ಸೇರಿದಂತೆ ಹಲವು ಅಮಾಯಕರ ಪ್ರಾಣ ತೆಗೆದ ನರಭಕ್ಷಕರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಜೋಶಿ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

    ಕಲಬುರಗಿ ನಗರದ ಪೀರ್ ಬಂಗಲಾದಲ್ಲಿ ಆಯೋಜಿಸಿದ ಸಿಎಎ ವಿರೋಧಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ಚಾಮರಾಜನಗರದಲ್ಲಿ ಜಿಹಾದಿಗಳ ಬಂಧನ ಎಂದು ಹೇಳುತ್ತಾರೆ. ಇನ್ನೊಂದು ಕಡೆ ಬಾಂಬ್ ಪ್ರಕರಣ ಎನ್ನುತ್ತಾರೆ. ಇದು ಬಿಜೆಪಿ ಸರ್ಕಾರದ ಪ್ಲ್ಯಾನ್ ಅಲ್ಲ, ಮಂಗಳೂರಿನ ಪ್ರಭಾಕರ ಭಟ್ ಅವರ ಪ್ಲ್ಯಾನ್ ಆಗಿದೆ ಎಂದು ಆರೋಪಿಸಿದರು.

    ಇತ್ತೀಚೆಗೆ ಹುಬ್ಬಳ್ಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿದ್ದಾಗ ನೆಹರು ಮಾಡಿದ ತಪ್ಪುಗಳನ್ನು ಸರಿ ಮಾಡುತ್ತಿರುವುದ್ದಾಗಿ ಅವರಿಗೆ ಅವಮಾನ ಮಾಡಿದ್ದಾರೆ. ಸ್ವಾತಂತ್ರ್ಯಕ್ಕೆ ಎಲ್ಲಾ ಜನಾಂಗದವರು ಅವರ ಜೊತೆ ಹೋರಾಟ ಮಾಡಿದ್ದಾರೆ. ಗಾಂಧಿ, ನೆಹರು ಅವರು ಇರುವಾಗ ನೀವು ಹುಟ್ಟಿರಲಿಲ್ಲ. ಇನ್ನು ಆರ್ಟಿಕಲ್ 370 ರದ್ದು ಮಾಡಿ ಅಲ್ಲಿ ತುರ್ತು ಪರಿಸ್ಥಿತಿ ನಿರ್ಮಿಸಿದ್ದು, ಅಲ್ಲಿ ಈಗ 40 ಸಾವಿರ ಸೈನಿಕರನ್ನು ನಿಯೋಜನೆ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಜನಪರ ಸರ್ಕಾರ ಅಲ್ಲ ಅದು 155 ಸರ್ಕಾರವಾಗಿದೆ. ಬ್ರಿಟಿಷ್ ಆಡಳಿತಕ್ಕಿಂತ ಹೆಚ್ಚಿನ ಆಡಳಿತವನ್ನು ಈ ಹಕ್ಕಬುಕ್ಕರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಮುಸ್ಲಿಂ ಸಮುದಾಯದವರ ವಿರುದ್ಧ ಆರೋಪ ಮಾಡುವ ಈ ಸರ್ಕಾರ ಮುಂದಿನ ದಿನಗಳಲ್ಲಿ ತೆರಬೇಕಾಗುತ್ತದೆ. ಸೋಮವಾರದ ಮಂಗಳೂರಿನ ಘಟನೆ ಮುಸ್ಲಿಂ ಸಮುದಾಯದವರನ್ನು ಹಿಂದು ಸಮುದಾಯದವರು ಕೆಟ್ಟದಾಗಿ ನೋಡುವಂತೆ ಆರ್‍ಎಸ್‍ಎಸ್ ಹಾಗೂ ವಿಶ್ವಹಿಂದೂ ಪರಿಷತ್ ಮಾಡುತ್ತಿದೆ. ಆದರೆ ಇದರಿಂದ ಯಾವ ಮುಸ್ಲಿಂ ಬಾಂಧವರು ಉದ್ರೆಕಕ್ಕೆ ಒಳಗಾಗಿ ಯಾವ ಹೇಳಿಕೆಯನ್ನು ನೀಡಬೇಡಿ ಎಂದು ಎಚ್‍ಡಿಕೆ ಬಹಿರಂಗ ಸಭೆಯಲ್ಲಿ ಹೇಳಿದರು.

  • ರಾಯಚೂರಿನಲ್ಲಿ ಸಿಎಎ ಅಭಿನಂದನಾ ಸಭೆ- ಸಾವಿರಾರು ಜನರಿಂದ ಬೃಹತ್ ರ‍್ಯಾಲಿ

    ರಾಯಚೂರಿನಲ್ಲಿ ಸಿಎಎ ಅಭಿನಂದನಾ ಸಭೆ- ಸಾವಿರಾರು ಜನರಿಂದ ಬೃಹತ್ ರ‍್ಯಾಲಿ

    ರಾಯಚೂರು: ಸಿಎಎ ವಿರುದ್ಧ ಹೋರಾಟ ನಡೆಸಿರುವ ಕಾಂಗ್ರೆಸ್ ಬೌದ್ಧಿಕವಾಗಿ ದಿವಾಳಿಯಾಗಿದೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಯಚೂರು ನಗರದ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಜೋಶಿ, ದೇಶದಲ್ಲಿ ಮುಸ್ಲಿಮರಿಗೆ ತೊಂದರೆ ನೀಡಿಲ್ಲ. ದೇಶಾಭಿಮಾನಿಗಳನ್ನ ಬಿಜೆಪಿ ಗೌರವಿಸುತ್ತದೆ ಎಂದರು

    ಪಾಕಿಸ್ತಾನದ ಪರ ಇದ್ರೆ ಅಂತಹವರನ್ನ ಬಿಜೆಪಿ ಎಂದಿಗೂ ಸಹಿಸುವುದಿಲ್ಲ. ಮುಸ್ಲಿಮರು ಬಡವರಾಗಿ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ರಾಹುಲ್ ಗಾಂಧಿಗೆ ಏನು ತಿಳಿಯುದಿಲ್ಲ, ಎನ್ ಆರ್ ಸಿ ಟ್ಯಾಕ್ಸ್ ಎಂದು ಹೇಳುತ್ತಾರೆ. ಬರೆದುಕೊಡುವವರನ್ನು ಕೂಡ ಅವರು ಸರಿಯಾಗಿ ಇಟ್ಟುಕೊಂಡಿಲ್ಲ ಎಂದರು. ಜೆಎನ್‍ಯು ದಲ್ಲಿ ಕಾಶ್ಮೀರ ಫ್ರೀ ಮಾಡಬೇಕು ಎಂದು ಹೇಳುತ್ತಾರೆ. ಕಾಂಗ್ರೆಸ್ ಭಾರತದ ಪರವೋ? ಪಾಕಿಸ್ತಾನದ ಪರವೂ ಸ್ಪಷ್ಟ ಪಡಿಸಬೇಕಿದೆ. ಪಾಕಿಸ್ತಾನಕ್ಕೆ ಜಗತ್ತಿನ ಮುಂದೆ ಭಿಕ್ಷಾ ಪಾತ್ರೆ ಹಿಡಿಯುವಂತೆ ಮಾಡಲಾಗಿದೆ ಅಂತ ಪ್ರಹ್ಲಾದ್ ಜೋಶಿ ಹೇಳಿದರು.

    ಇದಕ್ಕೂ ಮೊದಲು ನಗರದ ಕರ್ನಾಟಕ ಸಂಘದಿಂದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದವರೆಗೂ ಬೃಹತ್ ರ‍್ಯಾಲಿ ನಡೆಸಲಾಯಿತು. ರ‍್ಯಾಲಿ ಹಾಗೂ ಬಹಿರಂಗ ಸಭೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ರಾಯಚೂರು ಸಂಸದ ಅಮರೇಶ್ವರ ನಾಯಕ್, ಶಾಸಕರಾದ ಡಾ.ಶಿವರಾಜ್ ಪಾಟೀಲ್, ಶಿವನಗೌಡ ನಾಯಕ್ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಭಾಗಿಯಾಗಿದ್ದರು. ರ‍್ಯಾಲಿಯಲ್ಲಿ ನೂರಾರು ಅಡಿ ಉದ್ದದ ರಾಷ್ಟ್ರ ಧ್ವಜ ಮೆರವಣಿಗೆ ಮಾಡಲಾಯಿತು.

    ರ‍್ಯಾಲಿ ಆರಂಭಕ್ಕೂ ಮುನ್ನ ಎಸ್‍ಡಿಪಿಐ ಸಂಘಟನೆ ಕಾರ್ಯಕರ್ತರು ರ್ಯಾಲಿ ವಿರೋಧಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಅಭಿನಂದನಾ ರ‍್ಯಾಲಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದ 20 ಕ್ಕೂ ಹೆಚ್ಚು ಕಾರ್ಯಕರ್ತರನ್ನ ಪೊಲೀಸರು ಬಂಧಿಸಿ ಕರೆದೊಯ್ದರು.

  • ಯಾರನ್ನೂ ಓಲೈಸುವ ಅಗತ್ಯವಿಲ್ಲ, ಹಲ್ಲೆ ಮಾಡಿದವ್ರ ಮೇಲೆ ಕಠಿಣ ಕ್ರಮ: ಜೋಶಿ

    ಯಾರನ್ನೂ ಓಲೈಸುವ ಅಗತ್ಯವಿಲ್ಲ, ಹಲ್ಲೆ ಮಾಡಿದವ್ರ ಮೇಲೆ ಕಠಿಣ ಕ್ರಮ: ಜೋಶಿ

    ಕೊಪ್ಪಳ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಕರಪತ್ರ ಹಂಚಲು ಮುಂದಾದ ಬಿಜೆಪಿ ನಾಯಕರ ಮೇಲೆ ಯುವಕರ ಗುಂಪು ಹಲ್ಲೆಗೆ ಯತ್ನಿಸಿದ ಘಟನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಯುವಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

    ರಾಯಚೂರಿಗೆ ತೆರಳುವ ಮಾರ್ಗ ಮಧ್ಯೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸಂಸತ್ತಿನಲ್ಲಿ ನಿರ್ಣಯ ಅಂಗೀಕಾರವಾಗಿ ಅನುಷ್ಠಾನಕ್ಕೆ ಬಂದಿದೆ. ಈ ಬಗ್ಗೆ ಬಿಜೆಪಿ ಅಧಿಕೃತ ಕರಪತ್ರ ಹಂಚುವ ಕೆಲಸ ಮಾಡುತ್ತಿದೆ. ಇದಕ್ಕೆ ಯಾರೇ ವಿರೋಧ ವ್ಯಕ್ತಪಡಿಸುವ ಅಥವಾ ತಡೆಯಲು ಮುಂದಾದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೊಲೀಸರು ಯಾರನ್ನೂ ಓಲೈಸುವ ಅಗತ್ಯವಿಲ್ಲ ಎಂದು ಹೇಳಿದರು.

    ಗಂಗಾವತಿ ನಗರದ ಕಿಲ್ಲಾ ಪ್ರದೇಶದ ಐದನೇ ವಾರ್ಡ್ ಈದ್ಗಾ ಕಾಲೋನಿ ಸಮೀಪದ ಸಮುದಾಯ ಭವನದ ಬಳಿ ಬಿಜೆಪಿ ಮುಖಂಡ ಪಾಂಡು ಅವರು ಸ್ಥಳಿಯರ ವಿರೋಧದ ನಡುವೆಯೂ ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದರು. ಈ ವೇಳೆ ಕೆಲ ಮುಸ್ಲಿಂ ಯುವಕರು ಬಿಜೆಪಿ ಮುಂಖಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

    ಇದರಿಂದಾಗಿ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಕೆಲ ಬಿಜೆಪಿ ಮುಖಂಡರು ಸ್ಥಳಕ್ಕೆ ಆಗಮಿಸಿದರು. ಇದರಿಂದ ಕೆರಳಿದ ನೂರಾರು ಯುವಕರು ಬಿಜೆಪಿ ಮುಖಂಡರಿದ್ದ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ, ಬಿಜೆಪಿ ಮುಖಂಡರನ್ನು ಸುರಕ್ಷಿತವಾಗಿ ಸ್ಥಳದಿಂದ ಕಳುಹಿಸಿದ್ದರು.